Select Page

ಕೃಷಿಯೋ ಗಣಿಗಾರಿಕೆಯೋ?

ಲೇಖನದ ಒಟ್ಟು ಉದ್ದೇಶವಾದ ನೀತಿಯೊಂದನ್ನು ಮೊದಲೇ ಸರಳವಾಗಿ ಮಂಡಿಸಿಬಿಡುತ್ತೇನೆ: ಅದಿರನ್ನು ಪರದೇಶಗಳಿಗೆ ಮಾರುವ ಗಣಿಗಾರಿಕೆಯನ್ನು ನಮ್ಮ ಸರ್ಕಾರ ಕೂಡಲೇ ನಿಷೇಧಿಸಬೇಕು; ನಮಗೆ ಅಗತ್ಯವಾದ ಲೋಹವನ್ನು ತಯಾರಿಸಿಕೊಳ್ಳಲು ಮಾತ್ರ ಗಣಿಗಾರಿಕೆಯನ್ನು ಮಾಡಬೇಕು. ಒಳ್ಳೆಯ ಬೆಲೆಗೆ ಪರದೇಶಗಳಿಗೆ ಮಾರಲು ವಿವೇಕಯುತವಾಗಿ ನಮ್ಮ ಅಗತ್ಯಕ್ಕಿಂತ ಹೆಚ್ಚಿನ ಲೋಹವನ್ನು ಮಾಡಬಹುದು; ಆದರೆ ಗಣಿಗಾರಿಕೆಯಿಂದಲೂ ಉಕ್ಕಿನ ಉತ್ಪಾದನೆಯಿಂದಲೂ ಪರಿಸರದ ನಾಶವಾಗದಂತೆ ಎಚ್ಚರ ವಹಿಸಿರಬೇಕು. ಇದಿಷ್ಟು ಗಣಿಗಾರಿಕೆಯ ಬಾಲಬೋದೆ.

ಇದನ್ನು ಬರೆಯುವಾಗ ಪಾಜಕದಲ್ಲಿ ಬಂಡೆಗಳನ್ನು ಒಡೆಯುವುದನ್ನು ನಿಲ್ಲಿಸಲು ಮುರಾರಿ ಬಲ್ಲಾಳರ ಜೊತೆ ಕೂಡಿ ನಾವು ಕೆಲವರು ನಡೆಸಿದ ಚಳುವಳಿ, ಮತ್ತು ಉಲ್ಲಾಸ ಕಾರಂತರ ಜೊತೆ ನಾವು ಹಲವರು ಕುದುರೆಮುಖ ಗಣಿಗಾರಿಕೆಯ ವಿರೋಧವಾಗಿ ನಡೆಸಿದ ಚಳುವಳಿ ನನ್ನ ಹಿನ್ನೆಲೆಗಿದೆ.

***

ಮೇಲಿನ ಮಾತುಗಳಿಗೆ ಒಂದು ತಾತ್ವಿಕವಾದ ಧ್ಯಾನದ ಚೌಕಟ್ಟು ಒದಗಿಸಲು ಎರಡು ಪದ್ಯಗಳನ್ನು ವಿಶ್ಲೇಷಿಸಲಿದ್ದೇನೆ. ಓದುಗರು ಇದನ್ನು ತಾಳಿಕೊಂಡಾರೆಂದು ತಿಳಿಯುವೆ. ಮೈಕಜ್ಜಿ ತುರಿಕೆಯ ಸುಖದ ಭ್ರಷ್ಟಾಚಾರದ ಬೀದಿ ಜಗಳವನ್ನು ಕಾಣಬಾರದ ಕಡೆಗಳಲ್ಲಿ ಕಂಡು ರೋಸಿಹೋದಾಗ ನನ್ನ ಪುಣ್ಯಕ್ಕೆ ಈ ಪದ್ಯಗಳು ನೆನಪಾದವು; ಸಿಟ್ಟು ತೀರಿಸಿಕೊಳ್ಳುವಂತೆ ಮಾತಾಡಬೇಕೆಂಬ ಆಸೆಗೆ, ತೀಟೆಗೆ ತಡೆ ಹಾಕಿದುವು ಅಥವಾ ಷಂಡವಾಗದ ಭಂಡವಾಗದ ಆತಂಕದ ಅಭಿವ್ಯಕ್ತಿಗೆ ನೆರವಾದವು. ನನ್ನ ಲಹರಿಗೀಗ ಓದುಗರಾದ ನೀವು ಅನುವಾಗಬೇಕು.

***

`ಅಗೆದಾಗ ನಕ್ಕದ್ದು ನುಣುಪು ಕುಂಕುಮ ಭೂಮಿ.' ನರಸಿಂಹಸ್ವಾಮಿಗಳ ಹೀಗೊಂದು ಪದ್ಯ ಶುರುವಾಗುತ್ತದೆ. ಎರೆಹುಳಗಳ ತೇವ ಕಾಯಕದ ಫಲ ವಾಗಿ ಜೀವಪೋಷಕಾಂಶಗಳು ನೆಲದ ಮೇಲ್ಪದರದಲ್ಲಿ ಮಾತ್ರ ಇರುತ್ತವೆ. ಇನ್ನು ರೈತ ಹೆಚ್ಚು ಅಗೆಯಬಾರದು. ಆದ್ದರಿಂದ ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ. ಮುಂದೆ ಪ್ರಕೃತಿಯ ಸಹಯೋಗದಲ್ಲಿ ನಡೆಯುವ ಆತುರ ಪಡದ ಕಾಯಕ ಈ ನೇಗಿಲ ಯೋಗಿಯದು. ಅವನ ಪುಣ್ಯಕ್ಕೆ ಪಂಚಾಂಗ ಹೇಳುವಂತೆ ಮಳೆಯೂ ಬಿತ್ತು ಹತ್ತು ಹನಿ. ಇದಕ್ಕಿಂತ ಹೆಚ್ಚು ಮಳೆಯೂ ಆಗಬಾರದು- ಬೀಜ ಮೊಳೆಯಲು! ಈ ಅವಸರವಿಲ್ಲದ ಜೀವೋತ್ಪತ್ತಿಯ ಪ್ರಕ್ರಿಯೆಯ ಫಲವಾಗಿ ನಮ್ಮ ನಾಗರಿಕತೆ, ನಮ್ಮ ಸಂಸ್ಕೃತಿಗಳು ಬೆಳೆಯುತ್ತವೆ. ಸರದಿ ಬದಲಾಯಿಸುವ ಕುದುರೆ, ಅರಮನೆ, ದೇವಸ್ಥಾನ ಇತ್ಯಾದಿಗಳು ಪದ್ಯದಲ್ಲಿ ಮುಂದೆ ಬರುತ್ತವೆ. ಎಲ್ಲವಕ್ಕೂ ಮೂಲ ಅಗೆದಾಗ ನಕ್ಕ ನುಣುಪು ಕುಂಕುಮ ಭೂಮಿ.

ದುಡಿಮೆ, ಉದ್ಯಮ, ಇದರಿಂದ ಹುಟ್ಟುವ ಸಂಬಂಧಗಳು, ವ್ಯವಸ್ಥೆಗಳು, ತನ್ಮೂಲಕ ಚಿಗುರೊಡೆದು ಹೊಮ್ಮುವ ಮಾನವ ಪ್ರಜ್ಞೆ ಇತ್ಯಾದಿಗಳ ಬಗ್ಗೆ ಮಾರ್ಕ್ಸ್‌ ಹೇಳುವುದೆಲ್ಲವೂ ಪದ್ಯದಲ್ಲಿ ಸಂಕೇತಗೊಳ್ಳುತ್ತವೆ. ಆದರೆ ಮಾರ್ಕ್ಸ್‌ ಕೃಷಿ ಮಾತ್ರದಲ್ಲಿ ಉನ್ನತ ನಾಗರಿಕ ಪ್ರಜ್ಞೆಯನ್ನು ಸೃಷ್ಟಿಸಬಲ್ಲ ಸಂಕೀರ್ಣತೆಯನ್ನು ಕಾಣುವುದಿಲ್ಲ. ವಿಲೇಜ್‌ ಈಡಿಯಸಿ- ಗಾಂಪತನ- ಎನ್ನುವುದು ಹಳ್ಳಿಗರ ತೃಪ್ತ ಜೀವನವನ್ನು ಅರಿಯಲು, ಟೀಕಿಸಲು ಅವನು ಬಳಸುವ ಪದ. ಅವನಿಗೆ ತೊಡಕುಗಳನ್ನು ಹುಟ್ಟಿಸುವ ನಗರಗಳು ಬೇಕು; ಈ ತೊಡಕುಗಳನ್ನು ಒಂದು ಕುದಿಗೆ ತಂದು ನಿವಾರಿಸುವ ತಿಕ್ಕಾಟಗಳು ಬೇಕು. ಉತ್ಪಾದನೆಯಲ್ಲಿ ಉಳಿತಾಯಮಾಡಲು ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವ ಕಾರ್ಮಿಕರು ಬೇಕು. ಈ ಕಾರ್ಮಿಕರು ಅಸಂತೃಪ್ತರಾಗಿ ಒಗ್ಗಟ್ಟಾಗಿ ಹೋರಾಡಬೇಕು. ಆಸೆ ಅಸೂಯೆಗಳು ಬೇಕು. ಪ್ರಾಯಶಃ ಈ `ಬೇಕು' ಎನ್ನುವ ಶಬ್ದ ಉಚಿತವಲ್ಲ; ಹೀಗೆಲ್ಲ ಆಗುವುದು ಬದುಕಿನ ಚಲನೆಯಲ್ಲ್ಲೇ ಅನಿವಾರ್ಯ ಎಂದು ವಿಜ್ಞಾನಿಯಂತೆ ಮಾರ್ಕ್ಸ್‌ ಗಮನಿಸು ತ್ತಾನೆ-ಅಷ್ಟೆ. ಈ ಸಂಕೀರ್ಣತೆ ಸಂಭ್ರಮ ಗಳು, ಅದರಿಂದ ಹುಟ್ಟುವ ತಾಂತ್ರಿಕ ಪ್ರಗತಿ ಇತ್ಯಾದಿಗಳು ನರಸಿಂಹಸ್ವಾಮಿಗಳಿಗೆ ಬೇಕಾಗಿಲ್ಲ.

ನನ್ನ ಯುವ ಮಿತ್ರನೊಬ್ಬ ಹೇಳುತ್ತಾನೆ: ಕೃಷಿಮೂಲ ಸಂಸ್ಕೃತಿಯ ಭಾವುಕ ಆದರ್ಶವಾದೀ ಕಲ್ಪನೆಯಿದು; ಈಗ ಕೃಷಿಯೆಂದರೆ ರಾಸಾಯನಿಕ ಗೊಬ್ಬರ, ಕೀಟನಾಶಕ, ಬ್ಯಾಂಕಿನ ಸಾಲ, ಕೈಗೆ ಬಾರದ ಫಸಲು, ಅಥವಾ ಅನಿರೀಕ್ಷಿತ ಬೆಲೆಯ ಕುಸಿತ, ರೈತನ ಆತ್ಮಹತ್ಯೆ ಇತ್ಯಾದಿ. ಆಧುನಿಕ ನಾಗರೀಕತೆಯ ಹೊಟ್ಟೆಬಾಕತನ ಮತ್ತು ಆತಂಕಗಳು ಕೃಷಿಯನ್ನೂ ಬಿಟ್ಟಿಲ್ಲ. ಪರಾವಲಂಬನೆಯ ಅಗತ್ಯವಿಲ್ಲದ ಸ್ವದೇಶಿ ಸ್ಥಿತಿ ಈಗ ಎಲ್ಲಿಯೂ ಇಲ್ಲ.

ಆದರೆ ಈ ಬಗೆಯಲ್ಲಿ ಒಂದು ಪದ್ಯದ ಧ್ವನ್ಯರ್ಥವನ್ನು ಕಡೆಗಾಣಿಸಿ ಅದರ ವಾಚ್ಯಾರ್ಥವನ್ನು ಜಗ್ಗಾಡಿ ಚರ್ಚಿಸುವುದು ಸರಿಯೆ?
ಇದಕ್ಕೆ ನನ್ನ ಯುವ ಮಿತ್ರನ ಉತ್ತರವೂ ಮಾರ್ಮಿಕವಾದ್ದು. ಅಲಂಕಾರಿಕ ಭಾಷೆಗೆ ಮುದಗೊಂಡು, ನಮ್ಮ ಪ್ರಸ್ತುತ ಸಂಕಟಗಳಿಗೆ ಕಾರಣವಾದ ಪದ್ಯದಲ್ಲಿರುವ ವಾಚ್ಯವನ್ನು ಮರೆಯುವುದೂ ಸಾಧ್ಯವೆ?

ವಾಲ್ಟರ್‌ ಬೆಂಜಮಿನ್‌ ತಾಜ್‌ಮಹಲ್‌ ನೋಡಿದ್ದರೆ ಹೇಳುತ್ತಿದ್ದ: `ಈ ಕಟ್ಟಡವನ್ನು ಕಟ್ಟಿದ ಗುಲಾಮೀ ಕಾರ್ಮಿಕರ ನಿತ್ಯದ ಬವಣೆಯನ್ನು ನೆನೆದರೆ ತಾಜ್‌ ಮಹಲ್‌ ಸೌಂದರ್ಯ ಹೇಯವಾದ್ದು ಎನ್ನಿಸುತ್ತದೆ. ಅದರ ಮಾಯೆಗೆ ಒಳಗಾಗಿ ಏನಾದರೂ ಅದು ಸುಂದರವೆನ್ನಿಬಿಟ್ಟರೆ ನನ್ನೊಳಗೆ ಪಾಪಪ್ರಜ್ಞೆಯನ್ನು ಅದು ಮೂಡಿಸುತ್ತದೆ.' `ಯಹೂದ್ಯರನ್ನು ಜೀವಂತ ಬೇಯಿಸಿ ಕೊಂದಾದ ನಂತರ ಕಾವ್ಯ ಸಾಧ್ಯವೆ?' ಎಂದು ಕೇಳಿದ ಕವಿಯೊಬ್ಬನೂ ನೆನಪಾಗುತ್ತಾನೆ. `ಕುಂಕುಮಭೂಮಿ' ಇಷ್ಟೆಲ್ಲ ಅಧಿಕಪ್ರಸಂಗಕ್ಕೆ ಕಾರಣವಾಗಬೇಕೆ?

ಹಿಂದೊಮ್ಮೆ ಗೆಳೆಯ ಕಿ.ರಂ. ನಾಗರಾಜರ ಜೊತೆ ಈ ಪದ್ಯವನ್ನು ಚರ್ಚಿಸುತ್ತ ಇದ್ದಾಗ ಥಟ್ಟನೇ ಹೊಳೆದದ್ದು ಅಡಿಗರ `ಭೂತ' ಕವಿತೆಗೆ ಇದು ಸಂವಾದಿಯೆಂದು. ಆಶ್ಚರ್ಯವೆಂದರೆ ಇದು ನಮಗೆ ಮಿದುಳಿನಲ್ಲಿ ಹುಟ್ಟಿದ ತಾರ್ಕಿಕ ಅರಿವು ಅಲ್ಲ. ಕಿವಿಯ ಮೂಲಕ ಹೊಳೆದದ್ದು. ಅಡಿಗರ ಕವನದ `ಅಗೆವಾಗ್ಗೆ' ಎನ್ನುವ ಒತ್ತಿನ ಶಬ್ದ ನರಸಿಂಹಸ್ವಾಮಿಗಳಲ್ಲಿ ಒತ್ತನ್ನೂ ಒತ್ತಾಯವನ್ನೂ ಕಳೆದುಕೊಂಡು, `ಅಗೆದಾಗ' ಎನ್ನುವ, ಅಗೆಯುವ ಕ್ರಿಯೆ ಮುಗಿದ ನಂತರದ ಶಬ್ದವಾಗುತ್ತದೆ.

ಅಡಿಗರದು ಕೃಷಿಯಲ್ಲ; ಗಣಿಗಾರಿಕೆ. ಮೇಲ್ಪದರದ ಫಲವಂತಿಕೆಗೇ ಸಮಾಧಾನ ಪಟ್ಟು ನರಸಿಂಹಸ್ವಾಮಿಗಳ ಪದ್ಯದಲ್ಲಿ ಗುದ್ದಲಿಯ ಕೆಲಸ ನಿಲ್ಲುತ್ತದೆ. ಆದರೆ ಅಡಿಗರ ಪದ್ಯದಲ್ಲಿ ಗುದ್ದಲಿಯ ಕೆಲಸ ನಿಲ್ಲುವುದಿಲ್ಲ. ಅಡಿಗರ ಒತ್ತುಗಳಲ್ಲಿ ಅನುರಣನಗೊಳ್ಳವಂತೆ ಸಂಕಲ್ಪ ಬಲದಲ್ಲಿ ನಡೆಯುವ ಶೋಧದ ಮಾತುಗಳ ಲಯವನ್ನು ಗಮನಿಸಿ: `ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು. ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆ ಮಿರಿವ ಚಿನ್ನದದಿರು'. ಅಲ್ಲಿಗೇ ಕೆಲಸ ನಿಲ್ಲುವುದಿಲ್ಲ. ಅದಿರನ್ನು ಶುದ್ಧ ಮಾಡಬೇಕು. ಅಪರಂಜಿ ವಿದ್ಯೆ ಗೊತ್ತಿರಬೇಕು. ಚಿನ್ನ ಸಿಕ್ಕರೆ ಸಾಲದು. ಈ ಹೊನ್ನನ್ನು ಕಾಯಿಸಿ, ಹಿಡಿದು, ಬಡಿದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು ಗೊತ್ತಿರಬೇಕು.

ಪ್ರೇತವಾಗಿರುವ ನಮ್ಮ ಭೂತಕಾಲವನ್ನು ಕಲ್ಯಾಣದಾಯಕ ಪಿತೃವಾಗಿ ಮಾಡಿಕೊಳ್ಳುವ ಈ ಶೋಧದ ಗಣಿಗಾರಿಕೆಯ ಪ್ರತಿಮೆ ಅಡಿಗರಲ್ಲಿ ಕೃಷಿಯನ್ನು ಒಳಗೊಂಡಿದ್ದೂ ಅದನ್ನು ಮೀರಿ ಮಿಕ್ಕುವ ಸಂಕೀರ್ಣತೆ ಪಡೆದಿದೆ. `ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ' ಅಂದರೆ ಆಕಾಶ ಭೂಮಿಗಳ ಅನುರಕ್ತಿಯ ರತಿ ನಡೆಯಬೇಕು (ಬೇಸಾಯವೂ ಸಂಭೋಗದ ರೂಪಕದಲ್ಲಿ ಧ್ವನಿಸುವುದನ್ನು ಗಮನಿಸಿ). ತತ್ಪರಿಣಾಮವಾಗಿ, ಗರ್ಭವತಿಯಾದ ಭೂಮಿ ಭತ್ತ ಗೋಧುವೆ ಹಣ್ಣು ಬಿಟ್ಟ ವೃಂದಾವನವಾಗ ಬೇಕು. ಕೊನೆಯಲ್ಲಿ ಇಡೀ ಸಮುದಾಯದ ಸಮೃದ್ಧಿಯನ್ನು ಮತ್ತು ಆಧ್ಯಾತ್ಮಿಕ ಆಶಯವನ್ನು ಸೂಚಿಸುವ ಗುಡಿ ಗೋಪುರಗಳ ಬಂಗಾರ ಶಿಖರ ಮೇಲಕ್ಕೆ ಎತ್ತಿದ ಕಣ್ಣಿಗೆ ಕಾಣಬೇಕು. `ಅಲ್ಲಿಯೂ ಸಲ್ಲುವ ಇಲ್ಲಿಯೂ ಸಲ್ಲುವ' ಲೌಕಿಕ-ಅಲೌಕಿಕ ಬೆಸೆತ ವರ್ತಮಾನ ಭೂತಗಳ ಅನ್ಯೋನ್ಯ, ಅಡಿಗರ ನಾಗರಿಕತೆಯ ಕಲ್ಪನೆಯಿಲ್ಲಿದೆ. ಇಡೀ ಸಮುದಾಯಕ್ಕೆ ಸಲ್ಲುವ ಊರಿನ ಮಧ್ಯದ ಚಿನ್ನದ ಗೋಪುರವೂ ಇಲ್ಲಿ ಇದೆ; ವ್ಯಕ್ತಿ ಸಫಲತೆಯ ಮನೆಯೊಳಗಿನ ಚಿನ್ನದ `ಇಷ್ಟದೇವತೆಯೂ' ಇಲ್ಲಿ ಇದೆ. ಎರಡೂ ಗಣಿ ರೂಪಕದಲ್ಲಿ ನಡೆಯುವ ಶೋಧದ ಫಲ. ಈ ಶೋಧದ ಸಫಲತೆಗೆ ಅದಿರಿನಿಂದ ಕೂಡಿದ ಮಣ್ಣನ್ನು ಶುದ್ಧ ಮಾಡಬಲ್ಲ, ಸೋಸಬಲ್ಲ -ಅಪರಂಜಿ ವಿದ್ಯೆ- ತಂತ್ರಜ್ಞಾನವೂ ಗೊತ್ತಿರಬೇಕು.

ಈ ಪದ್ಯದ ವಾಚ್ಯವನ್ನೂ ಕೊಂಚ ಅಧಿಕ ಪ್ರಸಂಗದಲ್ಲಿ ಉತ್ಪ್ರೇಕ್ಷಿಸಲೆ? ಈ ಕವನದೊಳಗೆ ವಾಚ್ಯವಾಗಿ ಇರುವುದೂ ಎಷ್ಟು ವಿಕೃತವಾಗಬಲ್ಲದು ನೋಡಿ. ಅದಿರನ್ನು ಕಬ್ಬಿಣ ಮಾಡುವ ವಿದ್ಯೆ ನಮ್ಮಲ್ಲಿದೆ. ಆದರೆ ಸುಲಭ ಲಾಭ ಗಳಿಕೆಯ ಲೋಭಿಗಳು ಬಳ್ಳಾರಿಯಲ್ಲಿ ಮಾಡುತ್ತಿರುವಂತೆ ಮಣ್ಣನ್ನು ಅವಸರದಲ್ಲಿ ಕೆರೆದು, ಚೀಲದಲ್ಲಿ ತುಂಬಿ, ಪರದೇಶಕ್ಕೆ ಚೀಪಾಗಿ ಮಾರಿ, ಊರನ್ನೂ ಹಾಳುಗೆಡವಿ, ಭ್ರಷ್ಟರಾಗಿ, ತಾವೂ ಹಾಳಾಗುವುದು ಸಾಧ್ಯವಾಗಿಬಿಟ್ಟಿದೆ; ಪರಸ್ಪರ ಭ್ರಷ್ಟಾಚಾರದ ಆರೋಪದ ಮೈಕಜ್ಜಿ ತುರಿಕೆಯ ಸುಖದಲ್ಲಿ ಗುಡಿಗೋಪುರಗಳ ಬಂಗಾರ ಶಿಖರಗಳನ್ನು ಪಡೆದ ಊರುಗಳಿಗೆ ತೀರ್ಥಯಾತ್ರೆ ಮಾಡುವುದು ಶುರುವಾಗಿದೆ. `ಅರೆರೆರೆ ಗಣಿರಾಮ' ಎನ್ನುವ ಕಾವ್ಯಗುಣ ಪಡೆದ ಶೀರ್ಷಿಕೆಯನ್ನು ಪತ್ರಿಕೆಗಳಲ್ಲಿ ಪಡೆಯುವ, ದಿನಕ್ಕೊಂದು ಹೇಳಿಕೆ ಕೊಡುವ ಭಾಗ್ಯವಂತನೊಬ್ಬನನ್ನೂ ಈ ಗಣಿಗಾರಿಕೆ ಸೃಷ್ಟಿಸಿದೆ.

ಈ ಪದ್ಯಗಳ ಬಗ್ಗೆ ಡಿ. ಆರ್‌. ನಾಗರಾಜರು ಸುಮಾರು ಮೂರು ದಶಕಗಳ ಹಿಂದೆ ನನಗೆ ಹೇಳಿದ್ದು ನೆನಪಾಗುತ್ತದೆ. ಆ ದಿನಗಳಲ್ಲಿ ಅವರು ಅಡಿಗರ ಕಾವ್ಯವನ್ನು ಮೆಚ್ಚಿಕೊಂಡೇ ಅದು `ಜೀವ ವಿರೋಧಿ' ಎಂದು ವಾದಿಸುತ್ತ ಇದ್ದವರು. ಕಾವ್ಯ ಖಡ್ಗವಾಗಬೇಕೆಂದವರು. ಆಗ ರಾಜಕಾರಣಿಗಳು ಈಗಿನಷ್ಟು ಭ್ರಷ್ಟರಾಗಿರಲಿಲ್ಲ ವಾದ್ದರಿಂದ ಇಂತಹ ಮುಗ್ಧ ಕ್ರಾಂತಿಕಾರಕ ಮಾತುಗಳು, ಕಾವ್ಯದ ರಾಜಕೀಯ ಶಕ್ತಿಯ ಬಗ್ಗೆ ಭ್ರಮೆಗಳು ಸಾಧ್ಯವಾಗಿದ್ದವು. ನಾವು ಗಮನಿಸಿದ ಎರಡು ಪದ್ಯಗಳ ಸಂವಾದದಿಂದ ಅವರು ಇನ್ನಷ್ಟು ಹುರುಪುಗೊಂಡು, `ಅದೇ ನನಗೆ ಅನ್ನಿಸುವುದು. ನರಸಿಂಹಸ್ವಾಮಿ ಕೃಷಿ ಕಾಯಕದಲ್ಲಿ ನಂಬಿದ ಕವಿ; ಅಡಿಗರು ಲೌಕಿಕವನ್ನು ಮೀರುವ ಆಧ್ಯಾತ್ಮವನ್ನು ಹುಡುಕುವ ವೈದಿಕ ಕವಿ. ಮನುಷ್ಯನ ಶ್ರಮದಲ್ಲೆ ಎಲ್ಲ ಮೌಲ್ಯವನ್ನು ಕಾಣುವ ಕುಂಕುಮ ಭೂಮಿ ಮಾರ್ಕ್ಸ್‌ವಾದಕ್ಕೆ ಹತ್ತಿರವಾದ್ದು' ಎಂದರು. `ಗುಡಿಗೋಪುರಗಳ ಬಂಗಾರ ಶಿಖರ'ದಲ್ಲಿ ನಾಗರಾಜರು ಅವುಗಳನ್ನು ಕಟ್ಟಬೇಕೆಂಬ ಹಿಂದುತ್ವವಾದಿಗಳ ಅಥವಾ ಕೆಡವಬೇಕೆಂಬ ಇಸ್ಲಾಮಿಕ್‌ ಟೆರರಿಸ್ಟರ ಹುನ್ನಾರಗಳನ್ನು ಕಂಡಿರಲಿಲ್ಲ. ಆ ದಿನಗಳಲ್ಲಿ ಕಾವ್ಯದ ಸಾಂಕೇತಿಕ ಅರ್ಥಗಳನ್ನು ಪೂರ್ಣ ಗೌಣಗೊಳಿಸಿ ಅದರ ವಾಚ್ಯವನ್ನು ಮಾತ್ರ ಹಿಡಿದು ಮಾತಾಡುವ ಅತಿರೇಕಕ್ಕೆ ಹೋದವರು ನನ್ನ ಇನ್ನೊಬ್ಬ ಗೆಳೆಯ ಪೋಲಂಕಿ ರಾಮಮೂರ್ತಿ ಮಾತ್ರ. ಅಡಿಗರು `ಏನಾದರೂ ಮಾಡುತಿರು ತಮ್ಮ' ಎನ್ನುವ ತಮ್ಮ ಪದ್ಯದಲ್ಲಿ ಶತಾಯಗತಾಯ ಪರಿಸರ ನಾಶವನ್ನು ಮಾಡಬೇಕೆಂದೇ ಹೇಳುತ್ತಿದ್ದಾರೆ ಎನ್ನುವ ಅತಿಗೆ ಅವರ ವಾದಕ್ರಮ ಬೆಳೆದು ನಮ್ಮನ್ನು ದಿಗ್ಬ್ರಾಂತಗೊಳಿಸಿತ್ತು.

ಎಲ್ಲ ಒಳ್ಳೆಯ ಪದ್ಯಗಳಲ್ಲೂ ಹೊಳೆಯುವ ಧ್ವನ್ಯರ್ಥದ ಜೊತೆಗೆ ಅದಕ್ಕೊಂದು ಬೆವರಬಲ್ಲ ಮೈಯ ವಾಚ್ಯಾರ್ಥದ ಶರೀರವೂ ಇರುತ್ತದೆ (ಈಚೆಗೆ ಡಾ. ಆಶಾದೇವಿ ಮತ್ತು ಡಾ.ದಾಮೋದರ ರಾಯರು ಕಾವ್ಯದ ಈ ಮೈಯನ್ನೂ ಬಹು ಸೂಕ್ಷ್ಮವಾಗಿ ಗಮನಿಸುವಂತೆ ಕಾಣುತ್ತದೆ).

ಕೃಷಿಗೆ ಆದ್ಯತೆಯನ್ನು ಕೊಡುವುದು ನರಸಿಂಹಸ್ವಾಮಿಗಳು. ಆದರೆ ಜ್ಞಾನ, ತಪಸ್ಸು, ಉದ್ಯಮಶೀಲತೆಗೆ ಆದ್ಯತೆ ಕೊಡುವುದು ಅಡಿಗರು. ಹೀಗೆನ್ನಿಸುವುದು ಮೇಲ್ನೋಟಕ್ಕೆ ಮಾತ್ರ. ಮುಷ್ಠಿಯಾಗಬಲ್ಲ, ಏನನ್ನಾದರೂ ಹಿಡಿಯಬಲ್ಲ, ಹೆಬ್ಬೆರಳಿಗೆ ಎದುರಾಗಬಲ್ಲ ನಾಲ್ಕು ಬೆರಳುಗಳನ್ನು ಪಡೆದ ಮಾನವ ಜೀವಿ ಅನಾದಿಕಾಲದಿಂದಲೂ ತಂತ್ರಜ್ಞಾನಿಯೇ. ರಾಮಚಂದ್ರದೇವ ತಮ್ಮೊಂದು ನಾಟಕದಲ್ಲಿ ಚಿತ್ರಿಸಿರುವಂತೆ ಪುರಾಣಗಳ ಕಾಲದಿಂದಲೂ ತಮ್ಮ ವೈರಿಗಳನ್ನು ಕೊಲ್ಲಬಲ್ಲ ಶಸ್ತ್ರಾಸ್ತ್ರಗಳ ಹುಡುಕಾಟದಲ್ಲಿ ಮಾನವರೆಲ್ಲರೂ ಮಗ್ನರೇ. ವಜ್ರಾಯುಧ, ಆಗ್ನೇಯಾಸ್ತ್ರ, ಬ್ರಹ್ಮಾಸ್ತ್ರ- ಒಂದೇ? ಎರಡೇ? ಸಮಾಧಾನದಲ್ಲಿ, ತೃಪ್ತಿಯಲ್ಲಿ ಬದುಕಬೇಕೆಂಬುದು ಕೂಡ ಮಾನವನ ಸತತವಾದ ಹುಡುಕಾಟವೇ. ಹುಟ್ಟದವನು ಸಾಯಲೇಬೇಕಲ್ಲ!

***

ಪದ್ಯಗಳ ನೆರವಿನಿಂದ ಕೊಂಚ ನಾವು ಬಳ್ಳಾರಿಯ ಗೊಂದಲವನ್ನು ಗಮನಿಸೋಣವೆ? ನನ್ನ ಕಾರನ್ನು ಓಡಿಸುವ ಶಿವಕುಮಾರ್‌ ಜೊತೆ ನಾನು ರಾಜಕೀಯ ಚರ್ಚಿಸುತ್ತಿರುತ್ತೇನೆ. ನಿನ್ನೆ ಅವನು ನಮ್ಮ ಕಾರನ್ನು ರೋಡುಗಳು ಸಂಧಿಸುವ ಟ್ರಾಫಿಕ್‌ ಜಾಮಿನಲ್ಲಿ ಹೀಗೇ ನುಸುಳುವ ಬೇರೆ ಕಾರುಗಳಿಗೆ ತಾಕದಂತೆ ತುಸುತುಸುವೇ ಜಾಣತನದಲ್ಲಿ ನುಸುಳಿಸುತ್ತ ಹೇಳಿದ: `ಸಾರ್‌, ನನಗೆ ಭಾರೀ ಆಶ್ಚರ್ಯವಾಗ್ತ ಇದೆ . ನಾನೇನಾದರೂ ನೂರು ರೂಪಾಯಿ ಕದ್ದರೆ ಪೊಲೀಸರು ಬಂದು ನನ್ನ ಅರೆಸ್ಟ್‌ ಮಾಡ್ತಾರೆ. ಸುಮಾರು ಇನ್ನೂರು ಕೋಟೀನ ನಮ್ಮನ್ನ ಆಳೋವರೇ ತಗೊಂಡಿದಾರೆ ಅಂತ ಎಷ್ಟೇ ಹೇಳಿದರೂ ಯಾರೂ ಏನೂ ಮಾಡ್ತಾ ಇಲ್ಲ ಯಾಕೆ? ಪೊಲೀಸರು ಬಿಡಿ ಈ ನಮ್ಮ ಜನಾನೇ ಸುಮ್ಮನೆ ಇದಾರಲ್ಲ. ಯಾರೂ ತಲೆ ಕೆಡಸಿಕೊಂಡಿಲ್ವಲ್ಲ?'
ಇದಕ್ಕೆ ನಾನೇನು ಉತ್ತರ ಹೇಳಲು ಸಾಧ್ಯ? ಒಂದಷ್ಟು ದೊಡ್ಡ ಮಾತುಗಳನ್ನು ಹೇಳಲೇ ಬೇಕಲ್ಲವೆ? ಮುಂದಿನವನ ಕಾರನ್ನೂ ಎಡಬಲದ ಕಾರುಗಳನ್ನೂ ಮಧ್ಯೆ ನುಗ್ಗುವ ಸ್ಕೂಟರುಗಳನ್ನೂ ಆಟೋರಿಕ್ಷಾಗಳನ್ನೂ ಗಮನಿಸುತ್ತಲೇ ನನ್ನ ಮಾತುಗಳನ್ನು ಶಿವ ಕೇಳಿಸಿಕೊಂಡ.

`ನೋಡು ಶಿವಾ. ಈ ನಮ್ಮ ನೆಲವನ್ನು ನಮಗೋಸ್ಕರ ಮಾತ್ರ ದೋಚು ವುದು ಸರಿಯಲ್ಲ; ನಮ್ಮ ಮೊಮ್ಮಕ್ಕಳು ಮರಿಮಕ್ಕಳ ಕಾಲಕ್ಕೂ ಈ ನೆಲದ ಭೂಗರ್ಭ ತನ್ನ ಸಮೃದ್ಧಿಯನ್ನು ಕಳೆದುಕೊಂಡಿರಬಾರದು ಎನ್ನುವ ಸಂಸಾರಿಯೊಬ್ಬನ ವಿವೇಕ ನಮಗಿರಬೇಕು. ತನ್ನಲ್ಲಿರುವ ಪೆಟ್ರೋಲನ್ನು ಅಮೆರಿಕಾ ಮುಚ್ಚಿಟ್ಟುಕೊಂಡೇ ಅರಬ್ಬರಿಂದ ಪೆಟ್ರೋಲು ಪಡೆಯುತ್ತದೆ ಅಲ್ಲವೆ? ಅರಬ್ಬರ ಪೆಟ್ರೋಲು ಇಂಗಿದ ಮೇಲೆ ತನ್ನ ಪೆಟ್ರೋಲಿನಿಂದ ಜಗತ್ತನ್ನಾಳುವ ಉಪಾಯ ಅಮೆರಿಕಾದ್ದು.'

ಈ ಮಾತುಗಳನ್ನು ಶಿವ ಗೌರವದಿಂದ ಕೇಳಿಸಿಕೊಂಡ. ಆದರೆ ಮುಂದಿನ ನನ್ನ ವಿಚಾರಗಳು ಅವನಿಗೆ ಸಮ್ಮತವಾದವು ಎಂದು ನನಗೆ ಅನ್ನಿಸಿತು: `ಸಂಸಾರಿಯ ಜುಗ್ಗುತನದಲ್ಲೂ ಈ ವಿವೇಕ ಅಡಗಿದೆ- ಅಲ್ಲವೆ ಶಿವ? ನೋಡು, ಮುಚ್ಚಿಡುವುದು, ಬಚ್ಚಿಡುವುದು, ಅಗತ್ಯಬಿದ್ದಾಗ ಗೊಣಗುತ್ತಲೇ ಸಂಸಾರದ ಮರ್ಯಾದೆ ಕಾಯಲು ಬಚ್ಚಿಟ್ಟದ್ದನ್ನು ಬಿಚ್ಚುವುದು, ನಮ್ಮ ಅಮ್ಮಂದಿರಲ್ಲೂ ಅಜ್ಜಿಯರಲ್ಲೂ ಕಾಣುತ್ತ ಇದ್ದ ಗುಣ. ಈಗ ತಮ್ಮ ಹಲ್ಲುಗುರುಗಳನ್ನೂ ಬಳಸಿ ಕೆರಚುವ ಕೆಲವು ಪ್ರಾಣಿಗಳಂತಿರುವ ನಮ್ಮ ಗಣಿ ಮಾಲೀಕರ ದುರಾಸೆ ಯಾವ ಮಟ್ಟದ್ದೆಂದರೆ…' ನನ್ನ ಬಾಯಲ್ಲಿ ಆ ಮಾತುಗಳು ಬರಲಾರದೆ ಉಳಿದವು.
ನಾನು ಹೇಳಲಾರದೆ ಹೇಸಿದ್ದನ್ನು ಸಾತ್ವಿಕವಾಗಿ ಅನುವಾದಿಸಿಕೊಂಡವನಂತೆ ಧರ್ಮಸ್ಥಳದ ಪರಮಭಕ್ತನಾದ ಶಿವ ಹೇಳಿದ: `ಯಾರು ಯಾರಿಗೆ ಲಂಚಕೊಟ್ಟರು, ಯಾವತ್ತಿನಿಂದ ಕೊಡುತ್ತ ಬಂದಿದ್ದಾರೆ ನಮ್ಮಂತಹ ಬಡವರಿಗೆ ಬೇಕಾಗಿಲ್ಲ. ಲಂಚದಿಂದ ಪಡೆದಿದ್ದನ್ನು ಒದ್ದು ಕಕ್ಕಿಸಬೇಕು; ಅವರು ಯಾರೇ ಆಗಿರಲಿ. ಮುಲಾಜಿಲ್ಲದೆ ಕಕ್ಕಿಸಬೇಕು. ಈ ದರಿದ್ರ ಗಣಿಗಾರಿಕೇನ ನಿಲ್ಲಿಸ್ತೀನಿ ಅಂತ ಕುಮಾರಸ್ವಾಮಿಗಳು ಹೇಳ್ತಿದಾರೆ. ಅವರ ಅಪ್ಪ ನಂಬುವ ದೇವರಿಗೆ ಹೆದರಿಕೊಂಡಾದರೂ ಅವರಿದನ್ನ ಮಾಡಿಯಾರು ಅಲ್ಲವ?'

***

ನಾನು ಉತ್ತರಿಸಲಿಲ್ಲ. ನುಸುಳುವ ಕಾರುಗಳ ಮಧ್ಯೆ ನುಸುಳುವ ಶಿವನ ಉಪಾಯಗಳನ್ನು ಮೆಚ್ಚುತ್ತ ಬಳ್ಳಾರಿಯ ಗಣಿಕಾರರು ಕೊಂಡ ಲಕ್ಸುರಿ ಕಾರುಗಳನ್ನು ನೆನೆದೆ. ಹೆಣಭಾರದ ಅದಿರಿನ ಲಾರಿಗಳಿಂದ ಬಳ್ಳಾರಿಯ ರೋಡುಗಳು ಎಷ್ಟು ಕೆಟ್ಟಿವೆಯೆಂದರೆ ಈಗ ರಸ್ತೆಗಳನ್ನು ಹಾಳುಗೈದವರು ಹೆಲಿಕಾಪ್ಟರ್‌ಗಳಲ್ಲಿ ಓಡಾಡುವುದಂತೆ! ಈಗ ಬೆಂಗಳೂರಲ್ಲಿ ಅಂಥವರ ಕಾರುಗಳ ನಡುವೆ ಶಿವನ ಸಾಹಸ ಗಮನಿಸುತ್ತ ನನ್ನ ಕನಸಿಗೆ ಹಿಂದಿರುಗಿದೆ. ಅಂತಹ ಒಂದು ಕಾರನ್ನು ನಡೆಸಬೇಕೆಂಬ ಕನಸು ಶಿವನದು.

***

ಮನುಷ್ಯ ಉದ್ಯಮಶೀಲನೂ, ಪ್ರಕೃತಿಗೆ ಕೃತಜ್ಞನೂ, ಉಂಡು ತಿಂದು ನಿದ್ರೆ ಮಾಡುವುದರಲ್ಲಿ ಸುಖಿಯೂ, ಮಕ್ಕಳನ್ನು ಪ್ರೀತಿಸುವವನೂ ಆಗಬೇಕು. ಆಗ ಅವನ ಕೃಷಿಗೆ ನುಣುಪು ಕುಂಕುಮಭೂಮಿ ನಗುತ್ತದೆ. ಕಾರ್ಮುಗಿಲ ಖಾಲಿಕೋಣೆಯಲ್ಲಿನ ಅಗೋಚರ ಬಿಂದು ಅವಸರದ ಹೆರಿಗೆಯಾಗದಂತೆ ನವಮಾಸವೂ ಕಾವ ಭ್ರೂಣರೂಪಿಯಾಗಿರುತ್ತದೆ. ಅಂತರಪಿಶಾಚಿಯಾದ ಗುಡುಗಾಟ ಸಿಡಿಲಿನ ಕಾಟ ಇದ್ದೇ ಇರುತ್ತದೆ. ಆದರೆ ಆಗಾಗ ಕಾಡುವ ಭೂತಕ್ಕೆ ಮಳೆ ವರ್ತಮಾನವಾಗುತ್ತದೆ.

***

ತಮಾಷೆಯೆಂದರೆ ನನಗೆ ಒಂದು ಮಾತನ್ನು ಯಾವಾಗಲೂ ಹೇಳಬೇಕೆನ್ನಿಸು ತ್ತದೆ. ನನ್ನ ಅಜ್ಜ ಅಜ್ಜಿ ಹೇಳುತ್ತ ಇದ್ದ ಮಾತಿದು. ಅದೊಂದು ದೈವ ನಿಯಮಿತವಾದ ಸತತವಾದ ಸತ್ಯವೆಂಬಂತೆ. ಯಾರೋ ಒಳ್ಳೆಯವರು ಇನ್ನೂ ಇದಾರೆ ಈ ಪ್ರಪಂಚ ದಲ್ಲಿ. ಅದಕ್ಕೇ ಒಂದಿಷ್ಟು ಮಳೆ ಬೆಳೆ ಈಗಲೂ ಆಗ್ತದೆ ಎನ್ನುವ ಅಲೌಕಿಕ ನಂಬಿಕೆಯ ಮಾತಿದು. ಆದರೆ ಈ ಮಾತನ್ನು ಹೇಳಿ ಸಮಾಧಾನ ಕೊಡುವುದಾಗಲೀ ಪಡೆಯುವುದಾಗಲೀ ನನಗೆ ನನ್ನ ತಾರ್ಕಿಕತೆಯಿಂದಾಗಿ ಹುಟ್ಟಿಕೊಂಡಿರುವ ಮುಜುಗರದಿಂದ ಸಾಧ್ಯವಿಲ್ಲ. ಆದರೆ ಅಂತಹ ಮಾತನ್ನೂ ಹೇಳಬಲ್ಲ ಒಂದು ಪದ್ಯಕ್ಕಾಗಿ, ವಾಚ್ಯದ ಮುಜುಗರಗಳನ್ನೂ, ತಾರ್ಕಿಕ ನಿಯತಿಗಳನ್ನೂ ಎಂಥ ಜಾಣರೂ ಮೀರಬಲ್ಲ ಬೆರಗಿನ ಅರಿವಿನ ಅದರ ಧ್ವನ್ಯರ್ಥಕ್ಕಾಗಿ ನಾನು ಕಾದಿರಬಹುದೇನೊ!

ವಾಸ್ತವದ ಋಜುತ್ವ ಕಾಣುವ ಒಂದು ರೂಪಕ

ಈ ಲೇಖನದಲ್ಲಿ ಫಣಿರಾಜ್ ಅವರು ದಕ್ಷಿಣ ಏಷ್ಯಾದ ಸಂಬಂಧಗಳನ್ನು ಕೇಂದ್ರವಾಗಿಟ್ಟು ಅನಂತಮೂರ್ತಿಯವರು ಬರೆದ ಲೇಖನಗಳಿಗೆ ಪ್ರತಿಕ್ರಿಯಿಸಿದ್ದಾರೆ

ಳೆದ ನಾಲ್ಕು ವಾರಗಳ `ಋಜುವಾತು' ಅಂಕಣದಲ್ಲಿ ಅನಂತಮೂರ್ತಿ ಯವರು ಕಥನಾಶೈಲಿಯಲ್ಲಿ ತಮ್ಮ ವಿಚಾರಗಳನ್ನು ನಿರೂಪಿಸುತ್ತಿದ್ದಾರೆ. ಕಥನಾಶೈಲಿಯ ನಿರೂಪಣೆ ಆಪ್ತವಾಗಿರುತ್ತದೆ, ಕತೆಗಾಗಿಯೇ ಓದುವ ಕುತೂಹಲವನ್ನು ಓದುವವರಲ್ಲಿ (ಕೇಳುವವರಲ್ಲಿ) ಮೂಡಿಸುತ್ತದೆ. ಅನಂತಮೂರ್ತಿಯವರ ಬರಹದಲ್ಲಿ ಈ ಗುಣಗಳಂತೂ ಇದ್ದೇ ಇವೆ- ಅನಂತಮೂರ್ತಿ ನಮ್ಮ ಅಗ್ರಪಂಕ್ತಿಯ ಕತೆಗಾರರಾಗಿರುವುದರಿಂದ ಇದು ವಿಶೇಷವಲ್ಲ. ಆದರೆ ವೈಚಾರಿಕ ನಿಲುವುಗಳನ್ನು ಕಥನಾಶೈಲಿಯಲ್ಲಿ ನಿರೂಪಿಸುವಾಗ, ಅದರಲ್ಲೂ ಸ್ವಾನುಭವದ ಕಥನವಾಗಿ ನಿರೂಪಿಸುವಾಗ, ಕೆಲವು ಅಪಾಯಗಳು ಇರುತ್ತವೆ.

ಸಿದ್ಧವಾದ ಸೈದ್ಧಾಂತಿಕ ದೃಷ್ಟಿಕೋನದಿಂದ ವಿಚಾರಗಳನ್ನು ಪ್ರಕಟಿಸುವಾಗ ಕಣ್ಣೋಟ ಕಿರಿದಾಗುವ ಹಾಗೆಯೇ ಉದ್ದೇಶಿತ ನಿಲುವನ್ನು ಕಥಾಮಾರ್ಗದಲ್ಲಿ ನಿರೂಪಿಸುವಾಗಲೂ ಆಗುತ್ತದೆ. ಇಲ್ಲಿ, ನಿರೂಪಕನ ವಿಚಾರಗಳ ಸಾಚಾತನವನ್ನು ಸಾಬೀತು ಮಾಡುವುದು ಮಾತ್ರ ಕತೆಯ ಕೆಲಸ. ಇದು ಒಂದು ಬಗೆಯ ಅಪಾಯ. ಮತ್ತೊಂದು ಇದಕ್ಕೆ ತದ್ವಿರುದ್ಧವಾದದ್ದು: ನಿರೂಪಕ, ತನ್ನ ಕತೆಯ ಮೋಹದಲ್ಲಿ ತಾನೇ ಸಿಲುಕಿ, ಕತೆ ಹೇಳುವುದೇ ಒಂದು ವಿಲಾಸವಾಗಿ, ಕೊನೆಗೆ ತಾನು ಹೇಳಹೊರಟ ವಿಚಾರದ ಸ್ಪಷ್ಟತೆಯನ್ನೇ ಕಳೆದುಕೊಂಡುಬಿಡುವುದು. ಹಾಗಿದ್ದರೆ ಯಾವ ಸುಖಕ್ಕಾಗಿ ಕಥನಾ ಮಾರ್ಗ ಹಿಡಿಯಬೇಕು?

ವೈಚಾರಿಕ ನಿಲುವುಗಳನ್ನು ಕಥನವಾಗಿಸುವುದರಲ್ಲಿ ಎರಡು ಉದ್ದೇಶವಿರಬೇಕು: 1.ನನ್ನ ಅಭಿಪ್ರಾಯಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ಆದರೆ ಅದೇ ಪೂರ್ಣ ನಿಜವಿರಲಿಕ್ಕಿಲ್ಲ. 2. ನಿರ್ದಿಷ್ಟ ಘಟನಾವಳಿಯಲ್ಲಿ ನನ್ನ ಅಭಿಪ್ರಾಯಗಳ ಸಹಿತ ನಾನು ಒಂದು ಪಾತ್ರವಾಗಿ ಲೀನವಾಗಿ ಪುರುಷ ಪರೀಕ್ಷೆಗೆ ಒಡ್ಡಿಕೊಳ್ಳುವುದು. ಘಟನಾವಳಿಗೆ ಸಿಕ್ಕಿದ್ದ ನನ್ನ ಅಭಿಪ್ರಾಯಗಳ ಗತಿ ಎಂತಾದರೂ, ಒಟ್ಟೂ ನಿರೂಪಣೆಯಿಂದ ವಾಸ್ತವದ ಋಜುತ್ವವನ್ನು ಕಾಣುವ ಒಂದು ರೂಪಕ ಕಟ್ಟಿಕೊಂಡೀತು ಎಂಬ ಹಂಬಲ. ಈ ಉದ್ದೇಶಗಳು ಈಡೇರದಿದ್ದರೆ ಕಥನಗಳು ಪಂಡಿತರ ಅಹಂನ ಕಾಲಕ್ಷೇಪವೋ, ಮುದ ನೀಡುವ ವಿಲಾಸವೋ ಆಗಿ ಉಳಿಯುತ್ತವೆ. ಕಳೆದ ನಾಲ್ಕು ವಾರಗಳ ಅಂಕಣಗಳು ಪರಿಶೋಧನೆಯಿಂದ ಹುಟ್ಟಿಕೊಂಡ ರೂಪಕಗಳಾಗಿರುವು ದರಿಂದಲೇ ಅಪರೂಪದ ಕಥನಗಳಾಗಿವೆ.

ದಕ್ಷಿಣ ಏಷ್ಯಾದ ಹಿಂದು-ಮುಸ್ಲಿಮರ ಸಂಬಂಧಗಳನ್ನು ಕುರಿತ ಮೂರು ಅಂಕಣಗಳು ಒಂದರ ಹಿಂದೊಂದು ಪ್ರಕಟವಾದವು. ಈ ವಿಷಯದ ಬಗ್ಗೆ ಈಗಾಗಲೇ ಸ್ಥಾಪಿತವಾಗಿರುವ ಕೆಲವು ನಿಲುವುಗಳಿವೆ. ಒಂದನೆಯದು: ಮುಸ್ಲಿಮರದ್ದು ಧಾರ್ಮಿಕ ಮೂಲಭೂತವಾದವನ್ನು ನೆಚ್ಚಿಕೊಂಡಿರುವ ಸಮುದಾಯ. ಹಿಂದೂ ಸಮುದಾಯವನ್ನು ಪೂರ್ಣ ನಿರ್ನಾಮ ಮಾಡುವುದೇ ಅವರ ಗುರಿ. ಈ ಗುರಿ ಸಾಧಿಸಲು ಅವರು ಯಾವುದಕ್ಕೂ ಹೇಸರು. ಹೀಗಾಗಿ, ಮುಸ್ಲಿಮರು, ಅವರು ಲಾಗಾಯ್ತಿನಿಂದ ನಿಮ್ಮ ಜೊತೆ ಬದುಕಿಕೊಂಡಿರುವ ನಿಮ್ಮ ಊರಿನವರಾದರೂ ಸರಿ, ನಂಬಿಕೆಗೆ ಯೋಗ್ಯರಲ್ಲದ ಶತ್ರುಗಳು ಎಂದು ತಿಳಿದು, ಅವರನ್ನು ಅಂಕೆಯಲ್ಲಿ ಇಡಲಿಕ್ಕೆ ಎಂಥಾ ದುಷ್ಟ ಮಾರ್ಗಗಳಾನ್ನಾದರೂ ಅನುಸರಿಸುವುದು ತಪ್ಪಲ್ಲ. ಇದು ಭಾರತದಲ್ಲಿ ವ್ಯಾಪಕವಾಗಿ ತಳ ಊರುತ್ತಿರುವ `ಹಿಂದುತ್ವವಾದಿ' ನಿಲುವು.

ಎರಡನೆಯದು: ನಮ್ಮ ಊರಿನ ಮುಸಲ್ಮಾನರು ನಮ್ಮ ಜೊತೆ ಚೆನ್ನಾಗಿದ್ದಾರೆ, ಆದರೆ ಇತ್ತೀಚಿಗಿನ ಪೀಳಿಗೆಯಲ್ಲಿ ಬಹುಸಂಖ್ಯಾತ ಹಿಂದೂಗಳ ಜೊತೆ ಹೊಂದಿಕೊಂಡು ಹೋಗುವ ಗುಣ ಕಾಣುತ್ತಿಲ್ಲ. ಬಹುಸಂಖ್ಯಾತರ ನಂಬಿಕೆಗಳಿಗೆ ಗೌರವ ಕೊಟ್ಟುಕೊಂಡು ಬದುಕಿದರೆ ಯಾವ ತಕರಾರಿಲ್ಲ, ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಇದು ಅತ್ತ ಇತ್ತ ಹೊಯ್ದಾಡುತ್ತಿರುವ ಸಾಮಾನ್ಯ ಜನರ ನಿಲುವು.
ಮೂರನೆಯದ್ದು ಕೊಡು ಕೊಳ್ಳುವಿಕೆಯ ಕೆಲವು ಪ್ರಸಂಗಗಳು, ಎರಡು ಧರ್ಮಗಳ ನಂಬಿಕೆಯಲ್ಲಿರುವ ಸಮಾನ ಗುಣಗಳನ್ನು ತಾಳೆ ಹಾಕಿಕೊಂಡು ಕಟ್ಟಿಕೊಂಡಿರುವ `ಹಿಂದು-ಮುಸ್ಲಿಂ ಭಾಯಿ ಭಾಯಿ' ಎಂಬ ರಮ್ಯ ನಿಲುವು.

ನಾಲ್ಕನೆಯದು: ಭಾರತದ ಪ್ರಜಾಪ್ರಭುತ್ವದ ಸಾಂವಿಧಾನಿಕ ನಿಲುವು; ಹಿಂದುಗಳು-ಮುಸಲ್ಮಾನರು ಭಾರತದ ಸಮಾನ ಪ್ರಜೆಗಳು. ಸಂವಿಧಾನ ಬದ್ಧ ಹಕ್ಕು, ಸ್ವಾತಂತ್ರ್ಯಗಳು, ಕಾನೂನು ನಡಾವಳಿಗಳೂ ಇಬ್ಬರಿಗೂ ಸಮ ಸಮ. ಈ ಸಾಂವಿಧಾನಿಕ ಚೌಕಟ್ಟಿನಲ್ಲಿ ಬದುಕುವುದು ಎಲ್ಲರ ಕರ್ತವ್ಯ.

ಅನಂತಮೂರ್ತಿಯವರು ಹಿಂದುತ್ವವಾದಕ್ಕೆ ಸ್ಪಷ್ಟವಾದ ವಿರೋಧ ತೋರು ತ್ತಿರುವವರು; ಉಳಿದ ಮೂರು ನಿಲುವುಗಳಲ್ಲಿ ಯಾವುದಾದರೂ ಒಂದನ್ನು ನೆಚ್ಚಿಕೊಂಡವರಲ್ಲ; ಆದರೆ ಸಭ್ಯ ಸಾಮಾಜಿಕ ಜೀವನಕ್ಕೆ ಯಾವುದು ಮುಖ್ಯವೋ, ಅಂತಹ ಅಂಶಗಳನ್ನು ಈ ಮೂರು ನೆಲೆಗಳಿಂದ ಸ್ವೀಕರಿಸಲು ತಯಾರಿರುವವರು. ಹಾಗೆಂದು, ಈ ಮೂರು ನೆಲೆಗಳಿಂದ ಬೇಕಾದ್ದನ್ನು ಆಯ್ದು `ಹಿಂದು-ಮುಸ್ಲಿಮ್‌ ಸಂಬಂಧ'ದ ಒಂದು ಆಕೃತಿಯನ್ನು ಸುಲಭದಲ್ಲಿ ಸಂಶ್ಲೇಷಣೆ ಮಾಡಿಕೊಳ್ಳಬಹುದು ಎನ್ನುವ ಬೋಳೆಯಾದ ನಿಲುವನ್ನು ಅವರು ಒಪ್ಪುವುದಿಲ್ಲ. ಈ ಕಾರಣದಿಂದ ಅನಂತಮೂರ್ತಿ ತಮ್ಮ ಎಲ್ಲ ವೈಚಾರಿಕ ನಂಬಿಕೆಗಳನ್ನು ಪರೀಕ್ಷೆಗೆ ಒಳಪಡಿಸುವ ಕಥನಗಳನ್ನು ಹೇಳುತ್ತಿದ್ದಾರೆ. ಈ ಕಥನಗಳು ಮೂರು ಮುಖ್ಯ ಸಂಗತಿಗಳನ್ನು ಹೇಳುತ್ತವೆ:

  1. ಒಂದು ಸಮಾಜದಲ್ಲಿ ಬದುಕುವ ಸಮುದಾಯಗಳ ನಡುವಿನ ನಂಟು ರಮ್ಯವಾದುದ್ದಲ್ಲ; ನಂಬಿಕೆ, ಜೀವನಕ್ರಮಗಳ ಭಿನ್ನತೆಯಿಂದ ಸಮುದಾಯಗಳ ನಡುವೆ ಬಿರುಕು ಗಳಿರುವುದು ಸಹಜ. ಈ ಬಿರುಕುಗಳು- ಅವುಗಳ ಉದ್ಭವಕ್ಕೆ ಕಾರಣಗಳು ಏನೇ ಇದ್ದರೂ ಇಂದು ಅವು ನಮ್ಮ ಜೊತೆ ಇವೆ, ಮುಂದೆಯೂ ಇರಬಹುದು ಎನ್ನುವುದನ್ನು ನಮ್ಮ ಸಾಮಾಜಿಕ ಅಸ್ತಿತ್ವದ ಭಾಗವಾಗಿ ನಾವು ಒಪ್ಪಿಕೊಳ್ಳಬೇಕು.
  2. ಸಮುದಾಯಗಳ ನಡುವಿನ ಬಿರುಕನ್ನು ರಾವುಗನ್ನಡಿ ಇಟ್ಟು ಉತ್ಪ್ರೇಕ್ಷಿಸಿ, ಅಧಿಕಾರ ಲಾಭಕ್ಕಾಗಿ ಹಲವು ಬಗೆಯ ಹಿಂಸೆಗಳನ್ನು ಉದ್ರೇಕಿಸುತ್ತಿರುವ ಆಧುನಿಕ ರಾಜಕೀಯದ ವರಸೆಗಳನ್ನು ನೇರವಾಗಿ ಮುಖಾಮುಖಿಯಾಗಬೇಕು.
  3. ಹಿಂದುಗಳ ಹಾಗೆ ಮುಸ್ಲಿಮರೂ, ಸುಖ-ಸಂಕಷ್ಟಗಳಿಗೆ ತುತ್ತಾಗುವ ದೇಹ, ನೆಮ್ಮದಿ-ನಿರಾಶೆಗಳನ್ನು ಉದ್ದೀಪಿಸುವ ಉದ್ಯೋಗ, ಕಷ್ಟ-ಕಾರ್ಪಣ್ಯಗಳಿಗೆ ತುತ್ತಾಗುವ ಸಾಂಸಾರಿಕ ಬದುಕುಗಳನ್ನೆಲ್ಲಾ ಹೊಂದಿರುವ ನಿತ್ಯಜೀವಿಗಳು. ಇದು ನಮಗೆ ಅರ್ಥವಾದರೆ, ನಮ್ಮ ನಡುವಿನ ಬಿರುಕುಗಳನ್ನು ಅರ್ಥೈಸಿಕೊಳ್ಳಲಿಕ್ಕೂ ಅವುಗಳನ್ನು ಮೀರಿ ಬದುಕುವ ದಾರಿಗಳನ್ನು ಕಂಡುಕೊಳ್ಳಲಿಕ್ಕೂ ನಮ್ಮ ನಿತ್ಯದ ಬದುಕನ್ನು ಒರೆಗಲ್ಲು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇದು ನಾವು ಅಗತ್ಯವಾಗಿ ಮನಗಂಡು, ಹಂಬಲಿಸಿ, ರೂಢಿಸಿಕೊಳ್ಳಲು ಉತ್ಸುಕವಾಗಬೇಕಾದ ರಾಜಕೀಯ.

ಮತೀಯ ಹಿಂಸೆ ಹಾಗು ಅದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳಬಹುದಾದ ಹಲವು ಬಗೆಯ ಪ್ರತಿಹಿಂಸೆಗಳಿಂದ ಆತಂಕಿತರಾಗಿರುವ ನನ್ನಂಥವರಿಗಂತೂ ಈ ಕಥನಗಳು ಅಪೂರ್ವವಾದವು. ಇದಕ್ಕಿಂತಲೂ ಹೆಚ್ಚಾಗಿ, ಹಿಂದುತ್ವದ ರಾಜಕೀಯವನ್ನು ಬೆಂಬಲಿಸುವವರನ್ನೂ ಒಂದಿಷ್ಟು ಯೋಚಿಸುವಂತೆ, ತಮ್ಮ ಒಳಗೆ ನೋಡಿಕೊಳ್ಳುವಂತೆ ಪ್ರೇರೇಪಿಸುವ ಶಕ್ತಿಯೂ ಈ ಕಥನಗಳಿಗೆ ಇದೆ.

ಇಷ್ಟು ಹೇಳಿದ ಮೇಲೆ, ಅನಂತಮೂರ್ತಿಯವರ ಕಥನದಲ್ಲಿ ಸಹಜವಾಗಿ ಪ್ರಕಟಿಸಿರುವ ಒಂದು ವಿಸಂಗತಿಯ ಬಗ್ಗೆ ಹೇಳಬೇಕು. `ಭಾರತ-ಪಾಕಿಸ್ತಾನ: ಚರಿತ್ರೆಯನ್ನು ಮೀರುವ ಕನಸು' ಲೇಖದಲ್ಲಿ ಬರುವ ಬುಖಾರಿ, `ದೇಶ ವಿಭಜನೆ: ಇನ್ನೊಂದು ಕಾರಣದ ಕಥನ' ದ ಭುಟ್ಟೊ, `ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆ'ಯ ಪಾಕಿಸ್ತಾನಿ ಲೇಖಕ ಇಂತಿಜಾರ್‌ ಹುಸೇನ್‌ ಮತ್ತು ಒಬ್ಬ ಲೇಖಕಿ- ಇವರೆಲ್ಲ ಕಥಾನಕದಲ್ಲಿ, ಒಂದು ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಕೂತ ಸಪಾಟು ಚಿತ್ರಗಳ ಹಾಗೆ ಕಾಣುತ್ತಾರೆ. ಆಧುನಿಕ ವಿದ್ಯಾವಂತರು, ಸೂಕ್ಷ್ಮಜ್ಞರೂ ಆದ ಈ ಜನ ತಮ್ಮ ಪ್ರಭುತ್ವದ ಬಗ್ಗೆ ನಿರಾಶೆಭರಿತ ಗೊಂದಲದಲ್ಲೂ ಭಾರತದ ಲಿಬರಲ್‌ ವಾತವರಣದ ಬಗ್ಗೆ ಆಕರ್ಷಣೆಯಲ್ಲೂ ಭಾರತದ ನಾಯಕರು ಒಂದಿಷ್ಟು ರಾಜಕೀಯ ಸಂಕಲ್ಪ ತೋರಿದ್ದರೆ ತಮ್ಮ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂಬ ತೋರಿಸಿಕೊಳ್ಳಲಾಗದ ಈರ್ಷ್ಯೆಯಲ್ಲೂ ಬದುಕುತ್ತಿರುವ ಕನಿಕರಕ್ಕೆ ಅರ್ಹರಾದ ಮನುಷ್ಯರ ಹಾಗೆ ತೋರುತ್ತಾರೆ.

ಭಾರತದ ಉನ್ನತಮಟ್ಟದ ಅಧಿಕಾರಿಗಳು ತಮ್ಮ ನೆನಪಿನ ಚಿತ್ರಗಳಲ್ಲಿ ನಿರೂಪಿಸುವ ಪಾಕಿಸ್ತಾನಿ ಅಧಿಕಾರಿಗಳ ಚಿತ್ರವೂ, ಭಾರತದ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ಪಾಕಿಸ್ತಾನದ ಶಿಕ್ಷಕರು- ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬಂದ ಜನರು ನೀಡುವ ವಿವರವೂ ಹೆಚ್ಚುಕಮ್ಮಿ ಇದೇ ರೂಹುಗಳನ್ನು ತೋರಿಸುತ್ತದೆ. ಅಂದರೆ ಪಾಕಿಸ್ತಾನದ ವಿದ್ಯಾವಂತರ ಬಗ್ಗೆ ನಾವು ನಮಗೆ ಮುದ ನೀಡುವಂತಹ ಒಂದು ಸಿದ್ಧ ಮಾದರಿಯೊಂದನ್ನು ರೂಢಿಸಿಕೊಂಡು ಬಿಟ್ಟಿದ್ದೇವೆಯೇ? ಈ ಚೌಕಟ್ಟಿನಾಚೆಗೆ ಅವರಿಗೆ ಒಂದು ಅಸ್ತಿತ್ವವಿದೆ ಎನ್ನುವುದನ್ನು ನಾವು ಕಾಣಲು ಇಚ್ಛಿಸುತ್ತಿಲ್ಲ. ಇದರ ಅರ್ಥ ಪಾಕಿಸ್ತಾನದ ಸಮ್ಮುಖ ನಾವು patranizing civilan world ಎಂದು ತೋರಿಸಿಕೊಳ್ಳುತ್ತಿದ್ದೇವೆಯೋ?

ಅನಂತಮೂರ್ತಿಯವರ ಕಥನದ ಉದ್ದೇಶವೇ ಸಹಜವೂ, ಕಲ್ಪಿತವೂ ಆದ ಬಿರುಕುಗಳನ್ನು ಕಂಡುಕೊಳ್ಳುವ ಪ್ರಯತ್ನವಾದ್ದರಿಂದ, ಈ ವಿಸಂಗತಿಯೂ ಕಥನ ಪ್ರಕಟಿಸುವ ರೂಪಕದಲ್ಲಿ ಒಟ್ಟಂದದಲ್ಲಿ ಸೇರಿಬಿಡುತ್ತದೆ. ಒಂದು ಒಳ್ಳೆಯ ಕಥನ ವಿಸಂಗತಿಗಳನ್ನು ನಿರೀಕ್ಷಿಸದೆಯೂ ಪ್ರಕಟಿಸುತ್ತದೆ. ಇಲ್ಲಿಯೇ ಸಾಂದರ್ಭಿಕವಾಗಿ, ಪಾಕಿಸ್ತಾನದ ಜನರ ಬಗ್ಗೆ ನಾವು ರೂಢಿಸಿಕೊಂಡಿರುವ ಸಿದ್ಧ ಮಾದರಿಯನ್ನು ಭಂಜಿಸಿದ ಒಂದು ಕಥನದ ಬಗ್ಗೆ ಹೇಳಬೇಕು.

ಜಾವೇದ್‌ ಮಿಯಾಂದಾದ್‌ ಒಬ್ಬ ಅದ್ಭುತ ಕ್ರಿಕೆಟ್‌ ಆಟಗಾರ ಮಾತ್ರವಲ್ಲದೆ, ಆಟದಂಗಳದಲ್ಲಿ ರೋಚಕ ಜಗಳಗಂಟನೂ ಆಗಿದ್ದವನು. ಆತ ತನ್ನ ಕೊನೆಯ ಕ್ರಿಕೆಟ್‌ ಪಂದ್ಯವನ್ನು ಆಡಿದ್ದು ಬೆಂಗಳೂರಿನಲ್ಲಿ. ಆ ಆಟಗಾರನ ಬಗ್ಗೆ ಮರುದಿನ ನಮ್ಮ ಪತ್ರಿಕೆಗಳು ವಿಶೇಷವಾಗಿ ಏನನ್ನೂ ಬರೆಯದಿದ್ದ ಹೊತ್ತಿನಲ್ಲಿ, ಮಿಯಾಂದಾದ್‌ನ ಪ್ರತಿಭೆ ಹಾಗು ವ್ಯಕ್ತಿತ್ವದ ಬಗ್ಗೆ ಭಾರತದ ಖ್ಯಾತ ಆಟಗಾರ ಕಪಿಲ್‌ ದೇವ್‌ ಒಂದು ಲೇಖನ ಬರೆದ. ಅದು ಎಂಥಾ ಅದ್ಭುತ ಬರಹವೆಂದರೆ, ಆಟಗಾರರನ್ನೂ ಸೇರಿದ ಹಾಗೆಯೇ ಪಾಕಿಸ್ತಾನದ ಜನರ ಬಗ್ಗೆ ನಾವು ಇಟ್ಟುಕೊಂಡಿರುವ ಪೂರ್ವಗ್ರಹಗಳನ್ನು ಬುಡಮೇಲು ಮಾಡಿಬಿಡುವಂತಹುದು. ನಮ್ಮ ಇಂಗ್ಲಿಷ್‌ ಪತ್ರಿಕೆಗಳು ಕಟ್ಟಿಕೊಟ್ಟ ಒರಟ, ಜಗಳಗಂಟ ಮಿಯಾಂದಾದ್‌ನ ಸಪಾಟು ಚಿತ್ರವನ್ನು ಛಿದ್ರಮಾಡಿ, ಜೀವಂತ ಮಿಯಾಂದಾದ್‌ನನ್ನು ನಿರೂಪಿಸಿದ ಕಪಿಲ್‌ ಬರೆದ ಕಥಾನಕ ಇವತ್ತಿಗೂ ಅಪರೂಪ.

-ಕೆ. ಫಣಿರಾಜ್‌
ಈ ಪ್ರತಿಕ್ರಿಯೆಗೆ ಕಾರಣವಾದ ಮೂಲ ಲೇಖನಗಳು
I, a Brahmin

I, a Brahmin

As a Brahmin, I have not enjoyed the distress and even anger that my stories have caused to other Brahmins. I remember once a mild-mannered, hospitable woman who had served me lunch, beckoned to me as I was preparing to leave.

Nobody likes us any more. Why do you U R Ananthamurtypoke fun at us? If you had ridiculed members of other castes could you survive? Because we endure it even when people sneer at us, everybody chooses to ridicule us. Is that the right thing to do?’

was astounded. ‘What I have written are works of literature, they are symbols,’ I babbled, trying to cover up my embarrassment. She understood my difficulty and felt sorry that she had subjected me, her guest, to such a predicament. I couldn’t gather the courage to say that what I wrote was a necessary truth that Brahmins had to face.

It has become extremely difficult to perceive issues of caste with any kind of transparency. Old timers were better at it. They would unabashedly ask: ‘What caste do you belong to?’, while we gather information in a roundabout fashion by asking: ‘Who is your grandfather?’, ‘Which is your native place?’.

The smarter among us begin by abusing our own caste before we move on to hurl profanities at another caste. We become subtle casteists ourselves. The world of a naïve believer in caste is limited; their intentions are obvious; their cruelty towards the lower castes is clear. But there is greater danger from those who declare that casteism is bad, but view people of all other castes except their own with enormous suspicion. The caste that resides in their own mind poisons their entire being. The more they try to cover it up, the more they seethe from within. It is a state of mind that is incapable of any love. You can fight with a naïve casteist, but not with urban Brahmins who may have abandoned all religious practices but are strong believers in caste at heart.

It is difficult to understand people who believe in the practice of untouchability. They don’t seem like a cruel lot when it comes to other issues

Naïve casteists
There was a time, at least in a village environment, when naïve casteists believed that one belonged to a particular caste not just for one’s self, but for the entire community. The relationship between caste and profession upheld social accord and stability, but led to stagnation in society. In the villages, people had no qualms about subjugating Dalits.

In cities, this relationship between caste and profession is being erased. However, what seems acceptable to the material world is not necessarily acceptable to the mind. That is where trouble begins.

It was the Brahmins who first gave up their caste-related profession. The follower of the vedic (relating to Hindu holy scriptures) way of life became a secular person. And those Brahmins who stuck to their original profession as Hindu priests did not move forward. Such people no longer wanted their children to follow in their footsteps. While Christians take pride in their children entering the priesthood, for the Brahmins it is neither a matter of pride nor a lucrative profession. In the past, it was important for the Hindu priest to earn the faith of the community. The mantras (religious chants) that he recited were not tangible. His value came largely from the faith that people vested in him. When this faith vanished, the priest became redundant.

A fertile imaginative rationalism was born only when the supremacy of Brahminism was questioned. Vivekananda[1], Gandhi and Ambedkar were the first to set this trend. They were responsible for this country getting a fresh lease of life. Earlier, others had failed to eradicate the caste system. But they were able to instil a sense of pride in what were then known as the ‘backward classes’ while they planted the seeds of suspicion in the values of the so-called ‘forward classes’.

Traditional Brahmins believe that by means of great self-discipline, they have imbued themselves with the values essential for the common good. So they think they are supreme – role-models for others. But after Gandhi, the values that this country upheld underwent such a sea change that conservative Brahmins began to appear comical. Today it is not the priestly Brahmins who are angry, but their secular counterparts. Though they no longer observe a religious way of life, they internally still cherish their notions of superiority. Brahmins who do not change this outlook cannot be creative, politically or culturally.

‘A diplomat from the Indian mission in Geneva accused the Indian National Campaign on Dalit Human Rights of shaming India, washing our dirty linen in public. The problem is, it’s difficult to shame anyone in India. We can’t use shame, because at home, in most of rural India, untouchability and atrocities are the norm rather than the exception. So the linen does not seem dirty. Or dirty is normal for us.’ Martin Macwan GUJARATI DALIT LEADER When Mahatma Gandhi died, I was barely 15 years old. My grandfather was a priest; my father was part-priest, part-secular. Most Brahmins believed that Gandhi was Kali incarnate (Kali Yug is the Era of Evil); that Gandhi had integrated the castes and was a corrupting influence. They also detested his taking the Harijans (his new name for ‘Untouchables’) into temples. But my father used to read Harijan, Gandhi’s newspaper. Though he never took part in the Freedom Movement (for Indian Independence), he had friends who did. I grew up listening to debates between my English-educated father and the village old guard.

When we heard the news of Gandhi’s assassination, we headed back home. Weeping, I declared that Gandhiji was no more. The otherwise good-natured, guileless elders of the village were full of glee for what they called the ‘annihilation of Kali’. As an act of rebellion, I sat on an island in the river and fasted.

Flawed tradition
It is at these junctures we realize our tradition is flawed. Ambedkar rejected the Hindu tradition precisely for this reason. Gandhi strove to iron out this evil practice and cleanse it.

It is difficult to understand people who believe in the practice of untouchability. They don’t seem like a cruel lot when it comes to other issues. If it were possible to call them barbarians it would be simpler. To this day, I am convinced that untouchability will be eradicated only when Dalits can walk in and out of any temple with ease. When this happens, it will also be possible to drink water from the same well and to eat together.

There are always chasms that divide truths about any faith from its worldly practices. Didn’t slavery exist in America in spite of Christianity? Economic structures and social norms have always imposed limitations on people. Gandhi, on a mission to transform Hindus, strove to make them feel ashamed of their own actions by exposing them to both the eternal truths of the religion and its failings. In the process of changing people, you must also retain the love and respect you have for them. This path is absolved of all arrogance; arrogance being the autocratic feeling of being the only one who has perceived truth. Like Gandhi, we have to devise methodologies that encompass both love and anger. An anger that is born out of love emits light even as it burns.

This is the reason that Gandhi became the greatest critical insider in Hinduism. He behaved in a manner that struck the Brahmin faith at its very roots. He placed a greater emphasis on physical rather than intellectual work. He cleaned his own bathroom (something traditionally only a Dalit sweeper is supposed to do), he made extensive use of tolerant non-violence. He thus stripped bare the values attached to the two major forces of Hindu society, the Brahmin (priest) and the Kshatriya (warrior), and upheld as models, the woman and the Sudra (labourer).

It is necessary to understand what is stagnant and what is dynamic in the present-day religious system. The people who do understand are those who participate in movements against ‘untouchability’; in struggles for equality and equal respect to all human beings; who desire equality between countries; who believe that animals, birds and plants have as much right to live in this world as we do; and who believe that all these struggles are interconnected.

This is an excerpt from an essay originally published in Suddhi Sangaati, a weekly dedicated to the anti-caste movement; and later collected in Pragne mattu parisara or Consciousness and Environment. Translated for the New Internationalist by Deepa Ganesh from the original Kannada.


[1] – Swami Vivekananda, an Indian sage who lived from 1863 -1902.

ಸುಬ್ಬಣ್ಣ, ನೀನಾಸಂ ಮತ್ತು ಕನ್ನಡದಲ್ಲಿ ಷೇಕ್ಸ್ ಪಿಯರ್

ನೀನಾಸಂ ಸೃಷ್ಟಿಸಿದ ನನ್ನ ಗೆಳೆಯ ಕೆ ವಿ ಸುಬ್ಬಣ್ಣ ತೀರಿಕೊಂಡಿದ್ದು ಹೋದ ವರ್ಷ ಜುಲೈ ಹದಿನಾರನೇ ತಾರೀಕು. ಈ ಹದಿನಾರಕ್ಕೆ ಹೆಗ್ಗೋಡಿನಲ್ಲಿ ಅವರನ್ನು ನೆನೆಯುವ ಒಂದು ಸಮಾರಂಭ ನಡೆಯಿತು. ಸುಬ್ಬಣ್ಣನವರ ಮಗ ಅಕ್ಷರ ಆ ದಿನ ತಾವೇ ಭಾಷಾಂತರಿಸಿದ ಷೇಕ್ಸ್‌ಪಿಯರ್‌ನ `ಮೆಷರ್‌ ಫಾರ್‌ ಮೆಷರ್‌'ನ್ನು ಆಡಿಸಿದರು. `ಕ್ರಮ ವಿಕ್ರಮ' ಅಕ್ಷರ ಕೊಟ್ಟ ಶೀರ್ಷಿಕೆ. ವಿಶೇಷವೆಂದರೆ ಈ ನಾಟಕದಲ್ಲಿ ಭಾಗವಹಿಸಿದವರು ಊರಿನವರು; ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರು. ನೀನಾಸಂನ ರಂಗ ಶಾಲೆಯಲ್ಲಿ ಕಲಿತವರಲ್ಲ-ಹಲವು ವರ್ಷಗಳ ಹಿಂದೆ ನೀನಾಸಂ ಹುಟ್ಟಿಕೊಂಡಿದ್ದೂ ಹೆಗ್ಗೋಡಿನ ಸುತ್ತಮುತ್ತಲ ಹಳ್ಳಿಯವರೇ ಆಗೀಗ ನಾಟಕಗಳು ಆಡಲೆಂದು-ಈ ಹಳ್ಳಿಯ ಜನ ಷೇಕ್ಸ್‌ ಪಿಯರನ ನಾಟಕವನ್ನು ಆಡುವುದೇ ವಿಶೇಷ. ಹೊರಗಿನ ವಿಶಾಲ ಪ್ರಪಂಚ ಹೆಗ್ಗೋಡಿನಲ್ಲಿ ತಾವು ಇರುವ ತಾಣದಲ್ಲೇ ಒದಗ ಬೇಕೆಂಬ ಸುಬ್ಬಣ್ಣನ ಆಶಯ ಹೀಗೆ ಮತ್ತೆ ಸಾರ್ಥಕವಾಯಿತು.

ಷೇಕ್ಸ್‌ಪಿಯರನ ನಾಟಕ ಕ್ರೈಸ್ತ ಧಾರ್ಮಿಕ ಜಗತ್ತಿನಲ್ಲಿ ನಡೆಯುವಂಥದು. ಆದರೆ ಇದರ ಉದ್ದೇಶ ಒಂದು ಧರ್ಮದ ಪ್ರತಿಪಾದನೆಯೂ ಅಲ್ಲ, ಖಂಡನೆಯೂ ಅಲ್ಲ, ಬದಲಾಗಿ ಕ್ರೈಸ್ತ ಧರ್ಮ ತನ್ನ ಆಳದಲ್ಲಿ ನೆಚ್ಚಿಕೊಂಡ ಮೌಲ್ಯಗಳನ್ನು ಸಮಸ್ಯಾತ್ಮಕ ಗೊಳಿಸಿ ಶೋಧಿಸುವುದು. ಅಂದರೆ ಮನುಷ್ಯನ ಸ್ವಭಾವ, ವರ್ತನೆ, ಹಾಗೂ ದೈವ ಸಮ್ಮತ ಎಂದು ಅವನು ತಿಳಿದ ನೀತಿ ಸಂಹಿತೆಯನ್ನು ಅವುಗಳ ಸದ್ಯದ ಸತ್ಯದ ಅಸ್ತಿತ್ವದ ಸ್ಥಿತಿಯಲ್ಲಿ ಪರಿಶೀಲಿಸುವುದು.

ಸಂತ ಮಾಥ್ಯೂನ ಗಾಸ್ಪೆಲ್‌(ಮತ್ತಾಯನ ಸುವಾರ್ತೆ)ನಲ್ಲಿ ಈ ಶಬ್ದ `ಮೆಷರ್‌' ಬರುತ್ತದೆ. ನೀನು ಮಾಡುವ ಅಳತೆಯಿಂ ದಲೇ ನಿನ್ನನ್ನೂ ಅಳೆಯಲಾಗುತ್ತದೆ ಎಂಬುದು ಇದರ ತಾತ್ಪರ್ಯ. ಇಡೀ ಕ್ರೈಸ್ತ ಧರ್ಮದ ಆಧಾರವಿರುವುದು ಕ್ರಿಸ್ತನ `ಸರ್ಮನ್‌ ಆನ್‌ ದ ಮೌಂಟ್‌'ನಲ್ಲಿ. ಕ್ರಿಸ್ತನು ನಮ್ಮ ನಡತೆಯ ಒಳ ಹೊರಗುಗಳನ್ನು, ಅಂದರೆ ಹೊರಗೆ ಕೃತಿಯಾಗಿ ತೋರುವುದನ್ನು ಮತ್ತು ನಿಜವಾಗಿ ಮನಸ್ಸಿನಲ್ಲಿ ಅನ್ನಿಸುವುದನ್ನು ಪ್ರತ್ಯೇಕವಲ್ಲ ಎಂಬಂತೆ ನೋಡುತ್ತಾನೆ. ಹಾದರ ಮಾಡುವುದು ಮಾತ್ರ ತಪ್ಪಲ್ಲ; ಒಂದು ಹೆಣ್ಣನ್ನು ಹಾಗೆ ನೋಡಿ ಆಶಿಸುವುದೂ ಅಷ್ಟೇ ತಪ್ಪು.

ನಾವು ಯಾವುದನ್ನು ಕಾನೂನು ಎಂದು ತಿಳಿಯುತ್ತೇವೆಯೋ ಅದನ್ನು ಒಂದು ರಾಜ್ಯವ್ಯವಸ್ಥೆಗೆ ಜಾರಿಯಲ್ಲಿ ತರಲು ಸಾಧ್ಯವಾಗು ವುದು ಮಾನವನ ಸಾಮಾಜಿಕವಾದ ಬಾಹ್ಯ ವರ್ತನೆಗೆ ಸಂಬಂ ಧಿಸಿದಂತೆ ಮಾತ್ರ. ಆದರೆ ಕ್ರೈಸ್ತ ಧರ್ಮದಲ್ಲಿ ಇದು ಮನುಷ್ಯನ ಅಂತರಂಗಕ್ಕೂ ಅನ್ವಯವಾಗಬೇಕಾಗುತ್ತದೆ. ಆಳುವ ವ್ಯವಸ್ಥೆಗೆ ಅಂತರಂಗದ ನಿಯಂತ್ರಣ ಸಾಧ್ಯವೆ? ಸಾಧುವೆ? ಈ ಒಳ ಹೊರಗು ಗಳನ್ನು ಪ್ರತ್ಯೇಕವೆಂದು ನೋಡಬಾರದೆಂದು ಆಶಿಸುವ/ ಭಾವಿಸುವ, ಆದ್ದರಿಂದ ಒಳಜೀವನದ ಆತ್ಮವಿಮರ್ಶೆಯಲ್ಲಿ ನರಳುವ ಸೋಗಿನ/ಅಥವಾ ನಿಜವಾಗಿ ಬಾಧಿತವಾದ ಮಾನವ ಜೀವಿಯ ಸಮಸ್ಯೆಯಿದು. ಬೆತ್ತಲಾದ ಅಂತರಂಗದ ದರ್ಶನದಲ್ಲಿ ಇಡೀ ನಾಟಕದ ಸಮಸ್ಯೆ ಹಾಡಿ ಕುಣಿದು ಪಿಸುಗುಟ್ಟಿ ಪುಸಲಾಯಿಸಿ ಅದು ತರುವ ಉನ್ಮತ್ತ ಡಯೋನಿಯಸ್‌ ಎನರ್ಜಿಯಲ್ಲಿ ನಮ್ಮನ್ನು ಕಾಡುತ್ತದೆ. ಈ ನಾಟಕದ ಒಟ್ಟು ರುಚಿ ಕೊಂಚ ಕಹಿಯಾದ ಕಷಾಯದ್ದು.

ಈ ನಾಟಕದಲ್ಲಿ ಇಬ್ಬರು ಪ್ರಮುಖ ಪಾತ್ರಗಳು. ವಿಯೆನ್ನಾ ನಗರವನ್ನು ಆಳುವ ವಿನ್ಸೆಂಟೋ ಒಬ್ಬನಾದರೆ ಇನ್ನೊಬ್ಬ ಆಂಜೆಲೋ. ನಾಟಕ ಶುರುವಾಗುವುದೇ ವಿನ್ಸೆಂಟೋ ಆಂಜೆಲೋಗೆ ತನ್ನ ರಾಜ್ಯಾಧಿಕಾರವನ್ನು ಕೆಲಕಾಲದವರೆಗೆ ವರ್ಗಾಯಿಸುವ ನಿಶ್ಚಯ ಮಾಡುವುದರಿಂದ. ವಿನ್ಸೆಂಟೋ ಕೊಡುವ ಕಾರಣ ಇದು; ರಾಜ್ಯ ವ್ಯವಸ್ಥೆಯ ಬುನಾದಿಯಾಗಿರುವ ನೀತಿ ಸಂಹಿತೆ ನಿದ್ದೆ ಹೋಗಿದೆ. ತನ್ನ ಆಡಳಿತದ ಔದಾರ್ಯದಿಂ ದಾಗಿ ಜನ ನೀತಿಯ ಭಯವಿಲ್ಲದೆ ಅವರಿಗೆ ಬೇಕಾದಂತೆ ವರ್ತಿ ಸುತ್ತಿದ್ದಾರೆ. ಆದ್ದರಿಂದ ನಿಯಮನಿಷ್ಠನಾದ ಆಂಜೆಲೋ ಕೆಲಕಾಲ ರಾಜ್ಯವಾಳಿ ಜನರನ್ನು ನಿಯಮಬದ್ಧರಾಗಿ ಬಾಳುವಂತೆ ಮಾಡಬೇಕು. ಆದರೆ ಪದವಿ ತ್ಯಾಗದ ಈ ವ್ಯಾಖ್ಯೆ ಕಾಣುವಷ್ಟು ಸರಳವಲ್ಲ.

ವಿನ್ಸೆಂಟೋನ ಉದ್ದೇಶ ಕಾಣುವುದಕ್ಕೆ ಘನವಾಗಿದೆ. ಆದರೆ ಇವನು ಘೋಷಿಸಿದಂತೆ ಕಣ್ಮರೆಯಾಗುವುದಿಲ್ಲ. ಅಡಗಿ ಕೂತು ನೋಡುತ್ತಾನೆ. ಆದ್ದರಿಂದ ಅವನ ಘನೋದ್ದೇಶವನ್ನು ನಾವು ಪ್ರಶ್ನಿಸುವಂತೆ ನಾಟಕವಿದೆ. ಅಂದರೆ ಆಂಜೆಲೋನನ್ನು ಅವನು ಪಣವೊಡ್ಡಿ ಪರೀಕ್ಷಿಸಿ ಅಳತೆ ಮಾಡುವ, ಸ್ವಹಿತಸಾಧನೆಯ ಹುನ್ನಾರವೂ ಈ ವಿನ್ಸೆಂಟೋಗೆ ಇದೆ ಎಂಬ ಅನುಮಾನ ನಮಗೆ ಹುಟ್ಟುತ್ತದೆ.

ಆಂಜೆಲೋ ತಾನೊಬ್ಬ ನಿಷ್ಠುರ ನೀತಿವಂತನೆಂದೇ ತಿಳಿದಿದ್ದಾನೆ. ಆದರೆ ಬಹುಬೇಗನೆ ನಮಗೆ ಗೊತ್ತಾಗುವುದು ಎರಡು ವಿಷಯ; ಷೇಕ್ಸ್‌ಪಿಯರ್‌ನ ಕಾಲದ ನಂತರ ಅಧಿಕಾರಕ್ಕೆ ಬಂದ ಪ್ಯೂರಿಟನ್‌ ಕ್ರಾಂವೆಲ್‌ನ ರೂಪು ರೇಷೆಗಳನ್ನು ಇವನಲ್ಲಿಯೂ ಷೇಕ್ಸ್‌ಪಿಯರ್‌ನ ಅಸಾಧಾರಣ ಮುನ್ನೋಟದ ಪ್ರತಿಭೆಯಿಂ ದಾಗಿ ನಾವು ಕಾಣುತ್ತೇವೆ. ತಾನೊಬ್ಬ ನೀತಿವಂತನೆಂಬ ಭಾವನೆ ಅಹಂಕಾರಕ್ಕೆ ತಿರುಗುತ್ತದೆ. ಪರಿಣಾಮವಾಗಿ ಅವನ ಆಡಳಿತ ಕ್ರೂರವಾಗುತ್ತದೆ. ಆದರೆ ಇಷ್ಟು ನೀತಿವಂತನಾದ ಮನುಷ್ಯ ಒಂದು ಹೆಣ್ಣನ್ನು ಎದುರಾದದ್ದೇ ಚಂಚಲವಾಗುತ್ತಾನೆ. ತನ್ನಲ್ಲಿ ಇಂತಹ ಒಂದು ಪ್ರಲೋಭನೆ ಇರುವುದು ಸಾಧ್ಯವಲ್ಲವೆ ಎಂದು ಧರ್ಮ ಸಂಕಟಕ್ಕೆ ಒಳಗಾಗುತ್ತಾನೆ. ನಾವು ಅವನು ಸಂಕಟ ಪಡುವುದನ್ನು ಕಾಣುತ್ತೇವೆ. ಇದು ತೋರಿಕೆಯ ಸಂಕಟವಲ್ಲವಾ ದರೂ ಪ್ರಯೋಜನಕ್ಕೆ ಬರುವ ಸಂಕಟವಲ್ಲ. ಅವನ ಕಾಮು ಕತೆಯೇ ಅವನ ಮುಂದಿನ ಎಲ್ಲ ವರ್ತನೆಗಳನ್ನು ನಿಯಂತ್ರಿಸುತ್ತದೆ.

ಇವೆಲ್ಲವನ್ನೂ ವಿನ್ಸೆಂಟೋ ಗಮನಿಸುತ್ತಲೇ ಇದ್ದಾನೆ. ತಾನು ಮಾಡಲಾರದ್ದನ್ನು ಆಂಜೆಲೋ ಮಾಡಬೇಕು. ಮಾಡಿ ಕಷ್ಟಕ್ಕೊಳ ಗಾಗಬೇಕು ಎಂದು ಅವನು ಒಳಗಿನಿಂದ ಭಾವಿಸಿರಬಹುದೆಂಬ ಗುಮಾನಿ ನಮ್ಮಲ್ಲಿ ಬೆಳೆಯುತ್ತದೆ.

ಇಡೀ ಸಮಸ್ಯೆ ತಲೆದೋರುವುದು ಕ್ಲಾಡಿಯೋಎಂಬ ಉನ್ನತ ವರ್ಗದ ಯುವಕನೊಬ್ಬ ಮದುವೆಯಾಗದೆ ಜೂಲಿಯಟ್‌ ಎನ್ನುವವಳ ಜತೆ ಸಂಬಂಧ ಬೆಳಸಿ ಅವಳು ಬಸುರಾಗುವಂತೆ ಮಾಡಿದ್ದ ಎಂಬುದರಿಂದ. ಇದಕ್ಕೆ ಆಂಜೆಲೋ ವಿಧಿಸುವುದು ಮರಣ ದಂಡನೆ. ಈ ಶಿಕ್ಷೆಯನ್ನು ನಾಟಕದಲ್ಲಿ ಬರುವ ಯಾವ ಪಾತ್ರವೂ ಒಪ್ಪುವುದಿಲ್ಲ. ದೇಶದ ದಂಡನಾಯಕ ಕೂಡಾ ಇದು ಅತಿಯಾಯಿತೆಂದು ಭಾವಿಸುತ್ತಾನೆ. ಮನುಷ್ಯನ ಸ್ವೇಚ್ಛಾಚಾರಕ್ಕೆ ಅನುವು ಮಾಡಿಕೊಟ್ಟಿದ್ದ ವಿನ್ಸೆಂಟೋ ದೊರೆಯ ತಪ್ಪುಗಳನ್ನು ತಿದ್ದಲು ಆಂಜೆಲೋಗೆ ಇರುವ ಒಂದೇ ದಾರಿ, ಅವನು ತಿಳಿದಂತೆ, ನಿಷ್ಠುರ ಕಠಿಣತೆಯಿಂದ ಇರುವ ಕಾನೂನನ್ನು ಜಾರಿ ಮಾಡುವುದು. ಅವನ ವಾದ ಇದು: `ಕಾನೂನು ಕಟ್ಟಳೆಗಳು' ಮುಖ್ಯ. ಎಷ್ಟು ಮುಖ್ಯವೆಂದರೆ, ಎಷ್ಟು ಜರೂರಿ ನದೆಂದರೆ ಈ ಕಾನೂನನ್ನು ಜಾರಿಗೊಳಿಸುವವರಲ್ಲಿ ಕೆಲವರು ತಾವೇ ಸ್ವತಃ ಅಪರಾಧಿಗಳಾಗಿದ್ದರೂ ಅದರಿಂದಾಗಿ ಕಾನೂನಿಗೆ ಇರುವ ಸತ್ಯ ಕಡಿಮೆಯಾಗಲಾರದು. ಮುಖ ಮೋರೆ ನೋಡಿ ಜರುಗಿಸುವುದು ಕಾನೂನಲ್ಲ. ಅದೊಂದು ಆತ್ಯಂತಿಕವಾದ ಸತ್ಯ. ಮುಂದೆ ತಾನೇ ಹಾದರಮಾಡಿದಾಗಲೂ ಕ್ಲಾಡಿಯೋಗೆ ಕೊಡುವ ಶಿಕ್ಷೆಯನ್ನು ಕೊಟ್ಟುಬಿಡುತ್ತಾನೆ.

ಪ್ರಭುತ್ವದ ದರ್ಪಕ್ಕೆ ಮಾನವನ, ಹಾಗೇ ತನ್ನದೇ ಆದ ದೌರ್ಬಲ್ಯಗಳ ಹಂಗಿಲ್ಲ. ಎಂಟನೇ ಹೆನ್ರಿ ಮತ್ತು ತನ್ನ ರಾಣಿಯೇ ಆಗಿದ್ದ ಎಲಿಜಬೆತ್‌ರ ಆಡಳಿತವನ್ನೂ ಟವರ್‌ ಆಫ್‌ ಲಂಡನ್ನಿನಲ್ಲಿ ಕಾನೂನುಸಮ್ಮತವಾಗಿ ನಡೆಯುತ್ತಿದ್ದ ಕಗ್ಗೊಲೆಗಳನ್ನೂ ನೋಡಿದ್ದ ನಮ್ಮ ಮಹಾ ನಾಟಕಕಾರನಿಗೆ ರಾಜ್ಯವ್ಯವಸ್ಥೆಯಲ್ಲಿ ಅಡಗಿದ ಕ್ರೌರ್ಯದ ಖುದ್ದು ಅನುಭವ ಇದ್ದಿರಬೇಕು. ಕ್ರಿಶ್ಚಿಯನ್‌ ರಾಷ್ಟ್ರವಾದ ಬ್ರಿಟನ್ನಿನಲ್ಲಿ ಆಗ ನಡೆಯುತ್ತ ಇದ್ದ ಪ್ರಾಟಿಸ್ಟೆಂಟ್‌ ಕ್ಯಾಥೋಲಿಕ್ಕರ ನಡುವಿನ ಹಿಂಸಾಚಾರಕ್ಕೆ ಕಾರಣರಾದ ಹುಂಬ ಮಠಾಧಿಪತಿಗಳು, ಗಂಡುಮಗುವನ್ನು ಹೆರಲಿಲ್ಲವೆಂದು ರಾಣಿಯನ್ನೇ ಕೊಲ್ಲುವ ರಾಜರು, ಕ್ರಿಸ್ತನಿಗೆ ಒಲಿದು ತೊರೆದೆಬಿಟ್ಟೆವು ಎಂದು ತಿಳಿದಿದ್ದ ವರು ಯಾವುದೋ ಆದಿಮ ಕ್ಷುದ್ರದೇವತೆಯ ಪೂಜಾರಿಗಳಂತೆ ನಿಜದಲ್ಲಿ ವರ್ತಿಸುತ್ತ ಇದ್ದರು. ಸಮಸ್ಯೆಯೆಂದರೆ ಇವರೇ ತಾವು ಕ್ರೈಸ್ತರೆಂದೂ ಅಂದುಕೊಂಡಿದ್ದರು. ಇವೆಲ್ಲವೂ ಷೇಕ್ಸ್‌ಪಿಯರಿನ ಮಾನವ ನಿಜದ ಶೋಧನೆಯ ವಿಷಯಗಳೇ.

ಈ ನಾಟಕದಲ್ಲಿ ಮನುಷ್ಯನ ಸ್ವೇಚ್ಛಾಚಾರವನ್ನು ಸಹಜವೆಂದು ತಿಳಿಯುವ ಅಧಿಕಪ್ರಸಂಗಿಯಾದ ಶ್ರೀಮಂತ ಲೂಸಿಯೋ ಎಂಬುವವನೂ ಇದ್ದಾನೆ. ಮರಣ ದಂಡನೆಗೆ ಒಳಗಾದ ಕ್ಲಾಡಿಯೋನಿಗೆ ಒಬ್ಬ ಅಕ್ಕ ಇದ್ದಾಳೆ. ಅವಳ ಹೆಸರು ಇಸಬೆಲ್ಲಾ. ಇಸಬೆಲ್ಲಾ ತನ್ನ ಕನ್ಯತ್ವವನ್ನು ದೇವರಿಗೆ ಅರ್ಪಣೆ ಮಾಡಿ ಸನ್ಯಾಸಿನಿ ಯಾಗಲು ತಯಾರಾಗುತ್ತಿದ್ದಾಳೆ. ಲೂಸಿಯೋ ಈ ಸನ್ಯಾಸಿನಿ ಯನ್ನು ಸಂಪರ್ಕಿಸುತ್ತಾನೆ; ಆಂಜೆಲೋನ ಮನಃ ಪರಿವರ್ತನೆ ಯಾಗುವಂತೆ ಮಾಡಲು ಈ ಸನ್ಯಾಸಿ ಸುಂದರಿಯೇ ತಕ್ಕವಳೆಂದು ಈ ಖದೀಮ ತಿಳಿದಿದ್ದಾನೆ. ಮನುಷ್ಯನ ನಿಜವನ್ನು ಮೂಸಿ ಅರಿಯಬಲ್ಲ ಜಾಣರೆಲ್ಲರೂ ಖದೀಮರೇ.

ಸನ್ಯಾಸಿನಿಯಾಗಲು ಹೊರಟ ಇಸಬೆಲ್ಲಾಳೂ ಸರಳವಾದ ಆದರ್ಶವಾದೀ ಪಾತ್ರವೇನೂ ಅಲ್ಲ. ತಾನೆಷ್ಟು ಗಟ್ಟಿಯಿರಬಹುದು ಎನ್ನುವ ಗುಮಾನಿ ಅವಳಿಗೇ ಇದ್ದೀತು. ಆತ್ಮದಂಡನೆಯ ಇನ್ನಷ್ಟು ಕಠಿಣವಾದ ವ್ರತಗಳನ್ನು ಅವಳು ತೋರಿಕೊಳ್ಳುವಂತೆಯೂ ಬಯಸುತ್ತಾಳೆ. ಲೂಸಿಯೋಗೆ ಸಹಜವಾದ ಸ್ವೇಚ್ಛಾಚಾರ ಮತ್ತು ಇಸಬೆಲ್ಲಾಳ ಉಗ್ರ ವ್ರತಾಚರಣೆಯ ಘೋಷಿತ ಸಂಕಲ್ಪ- ಎರಡೂ ಸಂಬಂಧಿಗಳೇ.
ತನ್ನ ಸೋದರನೇ ಮರಣ ದಂಡನೆಗೆ ಒಳಗಾಗಿದ್ದಾನೆಂದು ವೈಯ್ಯಾರದ ಮಾತುಗಾರಿಕೆಯ ಲೂಸಿಯೋನಿಂದ ಗೊತ್ತಾಗಿದ್ದೇ ಅವಳು ಮತನಿಷ್ಠ ಕಟುಕನಾದ ಆಂಜೆಲೋನನ್ನು ಭೇಟಿಯಾಗಿ, ತನ್ನ ತಮ್ಮನ ಜೀವವನ್ನು ಉಳಿಸಬೇಕೆಂದು ಪ್ರಾರ್ಥಿಸುತ್ತಾಳೆ. ಅವಳ ಪಾಪಭೀರು ಧಾರ್ಮಿಕ ಮಾತಿನ ಮಾರ್ಮಿಕತೆಯೇ ಆಂಜೆಲೋನಲ್ಲಿ ಅವಳ ಬಗ್ಗೆ ಮೋಹ ಅಂಕುರಿಸುವಂತೆ ಮಾಡುತ್ತದೆ. ಅವನಿಗೆ ಆಕರ್ಷಿತಳಾಗಿ ಕಾಣುವುದು ವೇಶ್ಯೆಯಲ್ಲ. ಒಬ್ಬಳು ಸನ್ಯಾಸಿನಿ! ಇದನ್ನು ಲೂಸಿಯೋನ ಘಾಟಿತನ ಮೊದಲೇ ಊಹಿಸಿದೆ.

ಇತರರ ದೌರ್ಬಲ್ಯಗಳ ಪ್ರೇಕ್ಷಕರೆಂದು ಆರಾಮಿ ನಲ್ಲಿ ನಗುತ್ತ ಕೂತ ನಮ್ಮನ್ನು ಗುಮಾನಿಯಿಂದ ನಾವೇ ಪರೀಕ್ಷಿಸಿ ಕೊಳ್ಳಬೇಕಾಗುವಂತೆ ಈ ಖದೀಮರು ಪುಸಲಾಯಿಸುತ್ತಾರೆ. ಆಸ್ತಿಗೆ ಸಂಬಂಧಿಸಿದಂತೆ ಎಲ್ಲರೂ ಪಾಪಿಗಳೇ ಎಂಬುದು ಈ ನಾಟಕದಲ್ಲಿ ಮುಖ್ಯವಾದ್ದು. ಅಷ್ಟು ನೀತಿ ಶ್ರದ್ಧೆಯ ಆಂಜೆಲೋ ತಾನು ಮದುವೆಯಾಗಬೇಕಾಗಿದ್ದ ಮರಿಯಾಳನ್ನು ಮದುವೆ ಯಾಗಿರುವುದಿಲ್ಲ. ಅದಕ್ಕೆ ಕಾರಣ ಅವಳ ಕುಟುಂಬದಿಂದ ತನಗೆ ಸಿಗಬೇಕಾಗಿದ್ದ ವರದಕ್ಷಿಣೆ ಸಿಗಲಿಲ್ಲ ಎಂಬುದು. ಹಾಗೆಯೇ ಕ್ಲಾಡಿಯೋ ಜ್ಯೂಲಿಯೆಟ್‌ಳನ್ನು ಮದುವೆಯಾಗದೆ ಬಸುರು ಮಾಡಿ ಅಪರಾಧಿಯಾಗಿದ್ದಾನೆ. ಆದರೆ ಮದುವೆಯಾಗದೇ ಇರುವುದಕ್ಕೆ ಕಾರಣ ಅವಳಿಂದ ದೊರೆಯಬಹುದಾದ ವರದಕ್ಷಿಣೆ ಸಿಗುವುದು ತಡವಾದ್ದರಿಂದ. ಅಂದರೆ ರತ್ಯಾತುರದಿಂದ ಆದ ವ್ಯಭಿಚಾರ ಇದು.

ಇಂಥ ಒಂದು ಲೋಕ ಲೂಸಿಯೋನಂಥ ಸಿನಿಕ ಸ್ವೇಚ್ಛಾ ಚಾರಿಯನ್ನು ಸೃಷ್ಟಿಸಿದಂತೆಯೇ ಪಾಂಪೆ ಎನ್ನುವ ಒಬ್ಬ ನಾಚಿಕೆಗೆಟ್ಟ ತಲೆ ಹಿಡುಕನನ್ನೂ, ನಾಚಿಸುವಂತೆ ತಲೆಹರಟೆ ಮಾಡುವ ಎಲ್ಬೋನನ್ನೂ ಸೃಷ್ಟಿಸಿದೆ. ಆಂಜೆಲೋನ ಕಠಿಣ ಕ್ರೂರ ನಿಯತ್ತಿನ ರಾಜ್ಯಭಾರದಲ್ಲಿ ಎಲ್ಲ ಪುರುಷರೂ ಬೀಜಹೀನ ಷಂಡರಾಗು ತ್ತಾರೆ ಎಂದು ಯಾವ ಭಂಡ ಮಾತಿಗೂ ಅಂಜದೆ ವಾದಿಸುವ ಈ ಪಾಂಪೆ, ಲೂಸಿಯಾ, ಸೂಳೆ ಸವಕಲಿಯ ಲೋಕವನ್ನು ಷೇಕ್ಸ್‌ ಪಿಯರ್‌ ನಮ್ಮಲ್ಲಿ ಉಮೇದು ಉಕ್ಕುವಂತೆ ಸೃಷ್ಟಿಸುತ್ತಾನೆ ಎನ್ನುವುದು ಕ್ರೈಸ್ತನೀತಿ ಸಂಹಿತೆಯನ್ನು ಅಳುಬುರುಕುತನವೆಂದೂ ಅಪ್ರಾಮಾಣಿಕವೆಂದೂ ತಿಳಿದಿದ್ದ ಫಿಲಾಸಫರ್‌ ನೀಶೆ ಮೆಚ್ಚುವ ಡಯೋನೀಸಿಯನ್‌ ಕಲೆಗಾರಿಕೆ.

ಎಲ್ಲವನ್ನೂ ಕದ್ದು ನೋಡುವ `ಮೂಲಕ ಮಹಾಶಯ'ನಾದ ವಿನ್ಸೆಂಟೋ ಆಂಜೆಲೋನನ್ನು ಹಿಡಿದು ಕೆಡವಲು ಒಂದು ಉಪಾಯ ಹೂಡುತ್ತಾನೆ. ತನ್ನ ಪಾವಿತ್ರ್ಯಕ್ಕಾಗಿ (ತೋರು ವಂತೆಯೂ?) ವಾದಿಸುವ ಇಸಬೆಲ್ಲಾಳನ್ನು ವೇಷಾಂತರಿಯಾದ ವಿನ್ಸೆಂಟೋ ಒಂದು ಕುಟಿಲೋಪಾಯಕ್ಕೆ ಅದೆಷ್ಟು ಸುಲಭದಲ್ಲಿ ಒಪ್ಪಿಸುತ್ತಾನೆ ಎಂಬುದೊಂದು ಆಶ್ಚರ್ಯದ ವಿಷಯ. ಇಂಥ ಕುಟಿಲೋಪಾಯಗಳು ಷೇಕ್ಸ್‌ಪಿಯರ್‌ನ ಕಾಲದ ನಾಟಕೀ ಯತೆಯ ಸರಕುಗಳೂ ಆಗಿದ್ದವೆಂಬುದು ನಿಜ; ಆದರೆ ಸನ್ಯಾಸಿನಿ ಯಾಗ ಹೊರಟ ಇಸಬೆಲ್ಲಾ ಇದನ್ನು ಬೇಷರತ್‌ ಒಪ್ಪುವುದು, ಸನ್ಯಾಸಿ ವೇಷದ ವಿನ್ಸೆಂಟೋ ಅದನ್ನು ಸೂಚಿಸುವುದು ಕೇವಲ ನಾಟಕೀಯ ಉಪಾಯ ಮಾತ್ರವೆಂದು ನಮಗೆ ಅನ್ನಿಸುವುದಿಲ್ಲ. (ಮುಂದೆ ಇಸಬೆಲ್ಲಾ ದೊರೆ ವಿನ್ಸೆಂಟೋನನ್ನು ಮದುವೆಯಾಗಲು ಒಪ್ಪುತ್ತಾಳೆ ಎಂದು ನಾಟಕ ಕೊನೆ ಮಾಡುವ ಕೆಲವು ನಿರ್ದೇಶಕರು ಈ ಸಂದರ್ಭದಲ್ಲಿ ಸನ್ಯಾಸಿಯಾಗ ಹೊರಟ ಸುಂದರಿ ಸನ್ಯಾಸಿ ವೇಷದ ದೊರೆಯನ್ನು ಅಪ್ಪಿ ಮೆಚ್ಚುವಂತೆ ದೃಶ್ಯ ಸಂಯೊಜನೆ ಮಾಡುತ್ತಾರೆಂದು ನಾನು ಓದಿದ್ದೇನೆ.)

ಉಪಾಯ ಇದು: ಇಸಬೆಲ್ಲಾ ಆಂಜೆಲೋ ಜತೆ ಮಲಗಲು ಒಪ್ಪಬೇಕು. ಬದಲಾಗಿ, ಅವಳ ತಮ್ಮನ ಮರಣ ದಂಡನೆಯನ್ನು ಶಿಕ್ಷೆಯನ್ನು ಕೈಬಿಡುವಂತೆ ವಚನ ಪಡೆಯಬೇಕು. ಆದರೆ ಆ ಕಾಳ ರಾತ್ರಿ ಅವರು ಕೂಡಬೇಕಾದ ಗುಪ್ತ ಜಾಗಕ್ಕೆ ಇಸಬೆಲ್ಲಾಳ ಬದಲು ಆಂಜೆಲೋನಿಂದ ವಂಚಿತೆಯಾದ ಮಾರಿಯಾನ ಹೋಗಬೇಕು.

ಆ ಕಾಳ ರಾತ್ರಿ ಆಂಜೆಲೋ ತನ್ನ ಮೋಹದ ಇಸಬೆಲ್ಲಾ ಎಂದೇ ಭ್ರಮಿಸಿ ತಾನು ಮದುವೆಯಾಗದೆ ವಂಚಿಸಿದ ಮಾರಿಯಾನಳನ್ನು ಸಂಭೋಗಿಸುತ್ತಾನೆ. ಆದರೆ ಕ್ಲಾಡಿಯೋಗೆ ಕೊಟ್ಟ ಮರಣ ದಂಡನೆ ಶಿಕ್ಷೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಕಾನೂನು ಕಟ್ಟಳೆಗಳು ದರ್ಪದ ದೊರೆಗಳಿಗೆ `ಇಂಪರ್ಸನಲ್‌' ತಾನೆ!
ಪೋಲಿ ಫಟಿಂಗರ ಈ ನಾಟಕದಲ್ಲಿ ಯಾರೂ ಸಾಯುವುದಿಲ್ಲ. ವಿನ್ಸೆಂಟೋ ತಾನು ಹಿಂದಿರುಗುವುದಾಗಿ ಘೋಷಿಸಿ ಪ್ರತ್ಯಕ್ಷನಾಗು ತ್ತಾನೆ. ಎಲ್ಲರೂ ನೆರೆದಿದ್ದಾರೆ. ಸಿನಿಕನಾದ ಲೂಸಿಯೋ ದೊರೆ ವಿನ್ಸೆಂಟೋನನ್ನು ಕೆಲವು ನಿಜವೆನ್ನಿಸುವ ಮಾತುಗಳಿಂದಲೇ ಹೀನಾ ಮಾನ ಹಂಗಿಸಿರುತ್ತಾನೆ- ಅವನು ಪಾದ್ರಿ ವೇಷಧಾರಿಯಾಗಿದ್ದಾಗ. ನಾಟಕದಲ್ಲಿ ಯಾರೂ ಮಾನ ಉಳಿಸಿಕೊಳ್ಳುವುದಿಲ್ಲ: ಸಂಪೂರ್ಣ ಮಾನ ಕಳೆದುಕೊಳ್ಳುವುದೂ ಇಲ್ಲ.

ಷೇಕ್ಸ್‌ಪಿಯರ್‌ ನಾಟಕದ ವರ್ಗೀಕರಣದಲ್ಲಿ ಹಿಂದೆ ಈ ನಾಟಕವನ್ನು ಕಾಮಿಡಿಯೆಂದು ಕರೆಯುವ ವಾಡಿಕೆ ಇತ್ತು. ಕಾಮಿಡಿ ಯಾವಾಗಲೂ ಕೊನೆಯಾಗುವುದು ಮದುವೆಯಲ್ಲಿ ತಾನೆ? ಈ ಕಾಮಿಡಿಯಲ್ಲೂ ಮದುವೆಗಳಾಗುತ್ತವೆ. ಕ್ಲಾಡಿಯೋಗೆ ಜ್ಯೂಲಿಯಟ್‌ ಜತೆ, ಆಂಜೆಲೋಗೆ ಅವನಿಗೆ ಇಷ್ಟವಿಲ್ಲದ ಮಾರಿಯಾನ ಜತೆ, ಲೂಸಿಯೋಗೆ ಅವನು ಕೆಡಿಸಿದ ಹೆಣ್ಣಿನ ಜತೆ. ಇಷ್ಟು ಸಾಲದೆಂಬಂತೆ ಕೊನೆಯಲ್ಲಿ ತಾನೊಬ್ಬ ಬಹು ಉದಾರಿ ಎಂಬ ದೊಡ್ಡಸ್ತಿಕೆಯಲ್ಲಿ ವಿನ್ಸೆಂಟೋ ದೊರೆ ಸನ್ಯಾಸಿನಿ ಯಾಗಲು ಹೊರಟಿದ್ದ ಇಸಬೆಲ್ಲಾಳನ್ನು ತಾನು ಮದುವೆಯಾಗುವು ದಾಗಿ ಘೋಷಿಸುತ್ತಾನೆ. ಅವನ ಮಾತಿನ ಧೋರಣೆಯಲ್ಲಿ ಅದು ತಾನು ಅವಳಿಗೆ ಮಾಡುವ ಉಪಕಾರವೆಂಬಂತೆ ತೋರುತ್ತದೆ.

ಒಟ್ಟಿನಲ್ಲಿ ಈ ನಾಟಕ ನೀತಿ ನಿಯತ್ತುಗಳನ್ನೂ, ಅಧಿಕಾರದ ದರ್ಪ, ಔದಾರ್ಯದ ತೋರುಗಾಣಿಕೆಗಳನ್ನ್ನೂ ಸಮಸ್ಯಾತ್ಮಕ ವಾಗಿ ಮಂಡಿಸುವ ಕೃತಿಯಾಗಿದೆ. ಸುಲಭವಾದ ವರ್ಗೀಕರಣಕ್ಕೆ ಸಿಗದಿರುವ ಈ ನಾಟಕವನ್ನು ಪ್ರಾಬ್ಲಂ ಪ್ಲೇ ಎನ್ನುತ್ತಾರೆ. ಇದನ್ನು ಭಾಷಾಂತರಿಸುವುದು ಬಹಳ ಕಷ್ಟ. ನಾಟಕದ ತುಂಬಾ ಮನುಷ್ಯನ ಅದಮ್ಯವಾದ ಪ್ರಾಣಿ ಸಹಜ ಕಾಮದ ಚಿತ್ರಣವಿದೆ. ಪ್ರಪಂಚ ದಲ್ಲಿ ಷೇಕ್ಸ್‌ಪಿಯರ್‌ನಷ್ಟು ದಿಟ್ಟನಾದ ಭಂಡ ಲೇಖಕ ಇನ್ನೊಬ್ಬ ನಿಲ್ಲ. ಮಹಾ ಭಂಡನಾದ ಪಾಲ್ಸ್‌ಸ್ಟಾಫ್‌ ನನ್ನು ಸೃಷ್ಟಿಸಿದವನು ಷೇಕ್ಸ್‌ಪಿಯರ್‌. ಎಷ್ಟು ಭಂಡವಾದದ್ದು ಷೇಕ್ಸ್‌ಪಿಯರ್‌ನಲ್ಲಿ ಇದೆಯೋ ಅಷ್ಟೇ ದಿವ್ಯವಾದದ್ದೂ ಅವನಲ್ಲಿ ಇದೆ.

ಷೇಕ್ಸ್‌ಪಿಯರ್‌ನ ರೆನೈಸಾನ್ಸ್‌ ನಂತರದ ಆಂಜೆಲೋ ಸೂಚಿ ಸುವ ಕ್ರಾಂವೆಲ್‌ ಕಾಲದಲ್ಲಿ ನಾಟಕಗಳೇ ಬಹಿಷ್ಕೃತವಾದುವು. ನೀತಿಯ ಒಂದು ಅತಿಗೂ, ಭ್ರಷ್ಟತೆಯ ಇನ್ನೊಂದು ಅತಿಗೂ ತುಯ್ಯುವುದೇ ಕ್ರಿಶ್ಚಿಯನ್‌ ಪ್ರಭುತ್ವಗಳ ಲಕ್ಷಣ ಎಂಬುದನ್ನು ನಾವು ಆ ಕಾಲದಲ್ಲಿ ಯೂರೋಪಿನಲ್ಲೆಲ್ಲಾ ನೋಡುತ್ತೇವೆ. ಷೇಕ್ಸ್‌ಪಿಯರ್‌ ಒಬ್ಬ ದಾರ್ಶನಿಕ ಲೇಖಕ ಏಕೆಂದರೆ ಅವನು ಈ ಅತಿಗಳ ಸ್ವರೂಪವನ್ನು ತಿಳಿದಿದ್ದ. ಲಂಪಟವಾಗುವ ಸ್ವೇಚ್ಛಾ ಚಾರದ ಅರ್ಥಹೀನತೆ ಮತ್ತು ಅದರಿಂದ ಕವಿಯುವ ಮಂಕು ಅವನಿಗೆ ಗೊತ್ತಿತ್ತು. ಜೊತೆಗೇ ನೀತಿವಂತಿಕೆಯ ಅಹಂಕಾರದಲ್ಲಿ ಕ್ರೂರವಾಗುವ ರಾಜ್ಯವ್ಯವಸ್ಥೆ ಹೇಗೆ ಸಂಸಾರಿಯ ಸಹಿಷ್ಣುತೆ ಯನ್ನೂ, ಉದಾಸೀನವಾದ ಲಯದಲ್ಲಿ ನಿತ್ಯಸಂಚಾರಿಯಾದ ದೈನಿಕದ ಸಾಮತೇಜಸ್ಸನ್ನೂ, ಒಡನಾಟದ ಆಪ್ತತೆಯನ್ನೂ ಪತ್ತೆಯಾಗದಂತೆ ನಾಶ ಮಾಡಬಲ್ಲುದೆಂಬುದು ಅವನಿಗೆ ಗೊತ್ತಿತ್ತು. ಅವನ ಅಲೌಕಿಕದ ಹುಡುಕಾಟ ನಿತ್ಯದ ಲೌಕಿಕತೆಯಲ್ಲೇ ಅಂತರ್ಗಾಮಿಯಾದ್ದು.

ಈ ಘನವಾದ ಶೋಧದಲ್ಲಿ ಎಲ್ಲೂ ಷೇಕ್ಸ್‌ಪಿಯರ್‌ ಹಲವು ಲೇಖಕರಂತೆ ಸಂದೇಶಗಳನ್ನು ಕೊಡುವ ಗುರುವಾಗುವುದಿಲ್ಲ. ಷೇಕ್ಸ್‌ಪಿಯರ್‌ನ ಭಾಷೆಯಲ್ಲಿ ಉಕ್ಕುವ ಎನರ್ಜಿಯನ್ನು ನಾವು ಬೇರೆ ಯಾರಲ್ಲೂ ಅಷ್ಟು ಸತತವಾಗಿ ಕಾಣಲಾರೆವು. ಭಾರತೀಯ ನಾದ ನನಗೆ ಹೊಳೆಯುವ ವಿನಾಯಿತಿ ಎಂದರೆ ವೇದವ್ಯಾಸರು ಸೃಷ್ಟಿಸುವ ಮಹಾಭಾರತದ ಲೋಕ.

ಇಂಗ್ಲಿಷ್‌ ಬಲ್ಲವರಿಗೇ ಅತಿ ತೊಡಕಾದ ನಾಟಕವನ್ನು ಅಕ್ಷರ ಬಹಳ ಸಮರ್ಥವಾಗಿ ಭಾಷಾಂತರಿಸಿದ್ದಾರೆ. ಷೇಕ್ಸ್‌ಪಿಯರ್‌ನ ಲೋಕವನ್ನು ಈಗಿನ ವಾಸ್ತವವಾದೀ ಯೂರೋಪು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಸಮರ್ಪಕವಾಗಿ ಅಕ್ಷರ ಅರ್ಥ ಮಾಡಿಕೊಂಡಂತೆ ತೋರುತ್ತದೆ. ಈ ನಾಟಕದಲ್ಲಿ ಒಬ್ಬ ವೇಶ್ಯೆ ಬರುತ್ತಾಳೆ. ಅವಳನ್ನು ಷೇಕ್ಸ್‌ಪಿಯರ್‌ ಮಿಸ್ಟ್ರೆಸ್‌ ಓವರ್‌ಡನ್‌ ಎಂದು ಕರೆಯುತ್ತಾನೆ. ಇವಳು ಅಕ್ಷರನಲ್ಲಿ ಸವಕಲಿಯಮ್ಮ ಆಗು ತ್ತಾಳೆ. ಇವಳನ್ನು ನಿರ್ದೇಶಕನಾಗಿ ಅಕ್ಷರ ಒಬ್ಬ ಉಕ್ಕುವ ಶಕ್ತಿಯ ಪುರಾಣದ ಕ್ಷುದ್ರ ದೇವತೆಯಂತೆ ನಿರೂಪಿಸಿದ್ದಾರೆ.

ಯಕ್ಷಗಾನ ಬಯಲಾಟಗಳ ಪರಿಚಯ ಇರುವ ನೀನಾಸಂ ನಟರು ಎಂತಹಾ ಭಂಡ ಮಾತನ್ನಾದರೂ ನಿರಂಬಳವಾಗಿ ಆಡುತ್ತಾರೆ. ಹಿಂದೂ ಪುರಾಣಗಳ ಲೋಕದೊಳಕ್ಕೆ ಸಹಜವೆಂಬಂತೆ ಬರುವ ಷೇಕ್ಸ್‌ ಪಿಯರ್‌ನ ಸುಂದರಿ ಸನ್ಯಾಸಿನಿಯ ಪಾತ್ರವನ್ನೂ ಅಕ್ಷರ ಒಬ್ಬ ಕನ್ನಡಿಗನಾಗಿ ಗ್ರಹಿಸಿದ್ದಾರೆ. ಹಲವು ನಿರ್ದೇಶಕರಿಗೆ ಕೊನೆಯಲ್ಲಿ ಇಸಬೆಲ್ಲಾ ವಿನ್ಸೆಂಟೋನ ಕೈ ಹಿಡಿಯುತ್ತಾಳೋ ಇಲ್ಲವೋ ಎನ್ನುವುದೊಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ಅಕ್ಷರನಲ್ಲಿ ಇಸಬೆಲ್ಲಾಳದೇ ಕೊನೆಯ ಮಾತು. ಅವಳು ಆಡಿ ಕೊಳ್ಳುವುದು ಈ ಲೋಕದ ಯಾವ ಗಂಡನಿಗೂ ಒಲಿಯದ ಶಿವನಿಗೆ ಮಾತ್ರ ಒಲಿದ ಅಕ್ಕಮಹಾದೇವಿಯ ವಚನವನ್ನು.

***

ಸುಬ್ಬಣ್ಣ ಕಣ್ಮರೆಯಾಗಿದ್ದಾನೆ. ಆದರೆ ಅವನು ಹುಟ್ಟು ಹಾಕಿದ ಕನ್ನಡದ ಸಾಂಸ್ಕೃತಿಕ ಪ್ರಪಂಚ ಷೇಕ್ಸ್‌ಪಿಯರ್‌ನನ್ನು ಒಳಗೊಳ್ಳಬಲ್ಲಂತೆ ಜೀವಂತವಾಗಿದೆ ಎಂಬ ನನ್ನ ಸಂತೋಷ ವನ್ನೂ ಇಲ್ಲಿ ನಾನು ಹಂಚಿಕೊಂಡಿದ್ದೇನೆ.

ರಾಜಕೀಯದ ಪತನ

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ.

ಹೆಚ್ಚು ಕಮ್ಮಿ ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟವಾಗಿವೆ,; ಚುನಾವಣೆಗಳನ್ನು ಸಾರಾಯಿ ಕುಡಿಸಿಯೇ ಗೆಲ್ಲಬೇಕಾಗುತ್ತದೆ,; ವಿದೇಶಗಳಲ್ಲೋ, ಜಾತಿಯ ಮಠಗಳಲ್ಲೋ ಕಪ್ಪು ಹಣ ಬಚ್ಚಿಟ್ಟು ಅಗತ್ಯವಾದಾಗ ಬಳಸಬೇಕಾಗುತ್ತದೆ; ಮಿಲಿಟರಿಗೆ ಬೇಕಾದ ಗನ್ನುಗಳಿಂದ, ಶವದ ಪೆಟ್ಟಗೆಗಳಿಂದ ಲಂಚ ಪಡೆಯಬೇಕಾಗುತ್ತದೆ; ಹೆಂಡದ ದೊರೆಗಳ ನೆರವಿಲ್ಲದೆ ರಾಜಕೀಯ ಮಾಡುವಂತೆಯೇ ಇಲ್ಲ; ನಮ್ಮ ವಿರೋಧಿ ಪಕ್ಷ ಮಾಡುವುದಾದರೂ ಏನು?- ಹೀಗೆ ವಿವರಿಸಿಕೊಳ್ಳುವುದರಲ್ಲಿ ರಾಜಕಾರಣಿಗಳು ಸಮಾಧಾನ ತಂದುಕೊಳ್ಳುತ್ತಾರೆ.

ಎಲ್ಲ ಪ್ರಜಾತಂತ್ರದಲ್ಲೂ ಇದು ನೆಸಸರಿ ಈವಿಲ್ ಎಂದು ಉದಾಹರಣೆಗೆ ಅಮೇರಿಕಾ ನೋಡಿ, ಇಂಗ್ಲೆಂಡ್ ನೋಡಿ ಎಂದು ಕೊಂಚ ನಾಚಿಕೆ ಉಳ್ಳವರು ಸಮರ್ಥಿಸಿಕೊಳ್ಳುತ್ತಾರೆ. ಈ ಬಗೆಯ ಅವ್ಯವಹಾರವನ್ನು ಟೀಕಿಸುವ ನಾವು ನಮ್ಮ ಕರ್ತವ್ಯವನ್ನು ಮಾಡಿಯಾಯಿತೆಂದು ಸಮಾಧಾನ ಪಡುತ್ತೇವೆ; ನಮ್ಮ ಟೀಕೆ ಉಗ್ರವಾಗುತ್ತ ಹೋದಂತೆ ಮಾತುಗಾರಿಕೆಯಲ್ಲಿರುವ ಖುಷಿಯೂ ನಮಗೆ ಸಿಗಲು ಶುರುವಾಗುತ್ತದೆ. ಹಿಂದೆ ರಾಜರಿಗೆ ಅವರನ್ನು ತರಹೇವಾರಿ ಜರಿಯಬಲ್ಲ ಆಸ್ಥಾನ ವಿದೂಷಕರು ಇರುತ್ತಿದ್ದರು- ನಾವೂ ನಮಗೇ ತಿಳಿಯದಂತೆ ಹಾಗಾಗಿರುತ್ತೀವಿ.

ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸರಕುಗಳನ್ನು ಜಾಹೀರು ಮಾಡುವುದಕ್ಕಾಗಿ ಹುಟ್ಟಿಕೊಂಡ ಟೆಲಿವಿಷನ್ ಚಾನಲ್ಲುಗಳಿಗೆ ಖಾಲಿ ಜಾಗಗಳನ್ನು ತುಂಬಬಲ್ಲ 'ಜಾಣ ಕುಳ' ಗಳಾಗುವ ಸೌಭಾಗ್ಯವೂ ನಮಗೆ ದೊರೆಯುತ್ತದೆ. ಪ್ರಮೋದ್ ಮಹಾಜನ್‌ನ ಭೀಕರ ಕೊಲೆ, ಅವನ ಶವ ಸಂಸ್ಕಾರ, ಅದಕ್ಕೆ ಬಂದು ಹೋದವರು, ಆನಂತರ ಮಗನ ಹೆರೋಯಿನ್ ಸೇವನೆ, ಮಹಾಜನ್ ಆಪ್ತನ ಸಾವು- ಎಲ್ಲವೂ ಜಾಹಿರಾತಿನ ರೆವಿನ್ಯೂ ಹೆಚ್ಚಿಸುವಂತೆ ಕುತೂಹಲ ಕೆರಳಿಸುವ ವಿದ್ಯಮಾನಗಳಾಗುತ್ತವೆ. ಇಂತಹ ವಿಶೇಷಗಳಿಗಾಗಿಯೇ ಹೊಂಚುವ ಛಾನಲ್‌ಗಳು ಆಕಾಶದಿಂದ ಎರಗುವ ಹದ್ದುಗಳ ಹಾಗೆ. ಯಾವುದು ಮೊದಲು ಎರಗುತ್ತದೆ ಎನ್ನುವುದೇ ಇಂದಿನ ಸತ್ಯಾನ್ವೇಷಣೆಯ ಜರೂರು. ಈ ಜರೂರನ್ನು ಪೂರೈಸುವವರೇ ನಮ್ಮ ಹೀರೋಗಳು.

ಇನ್ನು ನಮ್ಮ ಟಾಬ್ಲಾಯಿಡ್‌ಗಳೋ? ಛಾನಲ್‌ಗಳಷ್ಟು ಪುಣ್ಯಪಡೆದ ಮಾಧ್ಯಮಗಳಲ್ಲ. ಆದರೂ ಭ್ರಷ್ಟಾಚಾರದ ಬಗ್ಗೆ ರಂಜಕವಾಗಿ ಮಾತನ್ನು ಆಡಿ ಆಡಿ, ಓದುಗರು ಅದೇ ಅದೇ ವಿಶೇಷಣಗಳಿಂದ ದಣಿಯದಂತೆ ಹೊಸ ಹೊಸ ಮಾತುಗಳಲ್ಲಿ ಬೈಯುತ್ತಾ ಭ್ರಷ್ಟಾಚಾರದ ಪ್ರಮಾಣಕ್ಕೆ ಅನುಗುಣವಾಗಿ ಅದರ ಸಂಪಾದಕರಿಗೆ ಲಾಭ ತರುವ ಪತ್ರಿಕೆಗಳಾಗುತ್ತವೆ. ಅತಿಶಯಗಳ ಅಬ್ಬರ ಹೆಚ್ಚಾದಂತೆ ಇನ್ನೂ ಹೆಚ್ಚಿನ ಅಬ್ಬರಕ್ಕಾಗಿ ನಾವು ಹಸಿಯುತ್ತ ನರಸತ್ತವರಾಗುತ್ತೇವೆ. ಹೀಗೆಲ್ಲ ಮಾತುಗಳನ್ನು ಆಡಬಲ್ಲ ನಮ್ಮಂಥವರ ಬದುಕನ್ನೇ ನೋಡೋಣ. ದಟ್ಟ ದಾರಿದ್ರ್ಯವೂ ದೈನ್ಯವೂ ಎಲ್ಲಡೆ ನಮಗೆ ಎದುರಾದಾಗ ನಾವು ಪಡೆದಿರುವ ಸೌಲಭ್ಯಗಳೆಲ್ಲವೂ ಪಾಪಪೂರಿತವೆನ್ನಿಸಬೇಕು; ಆದರೆ ಹಾಗೆನ್ನಿಸದಂತೆ ಬದುಕಬಲ್ಲ ನೆಮ್ಮದಿಕೊಡುವ ಉಪಾಯಗಳನ್ನು ನಾವು ಹುಡುಕಿಕೊಳ್ಳುತ್ತೇವೆ.

ನಾನಿರುವ ಮನೆಯ ನಿವೇಶನ ನನ್ನ ಹಕ್ಕಿನದು ನಿಜ. ಆದರೆ ಮಾರುಕಟ್ಟೆಯ ಬೆಲೆಗಿಂತ ತುಂಬ ತುಂಬ ಕಮ್ಮಿಯ ಬೆಲೆಯಲ್ಲಿ ಈ ನಿವೇಶನವನ್ನು ನಾನು ಪಡೆದಿರುತ್ತೇನೆ. ಒಂದೆರಡು ವರ್ಷಗಳಲ್ಲಿ ನಾನು ಖರ್ಚು ಮಾಡಿದ್ದಕ್ಕಿಂತ ಎರಡು ಪಟ್ಟಾದರೂ ಹೆಚ್ಚು ಬೆಲೆಯ ಮನೆಯ ಮಾಲೀಕ ನಾನಾಗಿರುತ್ತೇನೆ. ನಮ್ಮ ಮನೆಗೆಲಸದವಳಿಗೆ ಹಿಂದಿನದಕ್ಕಿಂತ ಎರಡರಷ್ಟು ಸಂಬಳ ಸಿಗುವುದಿಲ್ಲ. ಅಕ್ಕಿ ರಾಗಿ ಬೆಳೆಯುವವನಿಗೆ ವರ್ಷ ವರ್ಷ ಹೆಚ್ಚು ಉತ್ಪತ್ತಿಯಾಗುವ ಖಾತ್ರಿಯಿಲ್ಲ. ಸರ್ಕಾರಗಳ ಉದಾರ ನೀತಿಯಿಂದಾಗಿ ನಾವು ಪಡೆಯುವ ನಮಗೇ ಲಾಭದಾಯಕವಾದ ನಿವೇಶನ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಲಂಚ ಕೊಡಬೇಕಾಗಿ ಬಂದರೂ ನಮ್ಮ ಲಾಭ ಕೊಂಚ ಕಡಿಮೆಯಾಯಿತೆಂದು ನಾವು ಗೊಣಗಿಕೊಂಡಾಗ ತನ್ನ ಶೇರನ್ನು ಪಡೆದ ಭ್ರಷ್ಟ ಅಧಿಕಾರಿ ಪಾಪ ಪ್ರಜ್ಞೆಯಿಂದ ನರಳುವುದಿಲ್ಲ. ನೂರಾರು ಜನರನ್ನು ಕಡೆಗಣಿಸಿ ನನಗೆ ಏನೋ ದೊರೆಯುವಂತೆ ಮಾಡುವಾಗ ನಾನೂ ಕೊಂಚ ಕಕ್ಕಲಿ ಎಂದು ಅವನು ತನ್ನ ಹಕ್ಕೆಂಬಂತೆ ತನ್ನ ಕೈ ಬಿಸಿಯಾಗುವುದನ್ನು ನಿರೀಕ್ಷಿಸುತ್ತಾನೆ.

ಹತ್ತೊಂಬತ್ತನೇ ಶತಮಾನದಲ್ಲಿ ಶುರುವಾದ ಆಧುನಿಕ ಯುಗಕ್ಕೆ ನಾವು ತಯಾರಾಗಲು, ಅಂದರೆ ಬ್ರಿಟಿಷರ ಎಕಾನಮಿಗೆ ಅಗತ್ಯವಾದ ಬಾಬುಗಳಾಗಲು, ನಾವು ಕಲಿಯತೊಡಗಿದ ಆಂಗ್ಲವಿದ್ಯಾಭ್ಯಾಸ ಪಡೆದ ಯುವಕರು ಎದುರಾದಾಗ ರಾಮಕೃಷ್ಣ ಪರಮಹಂಸರು ಉಪಯೋಗಿಸುತ್ತಿದ್ದ ಶಬ್ದವೊಂದು ನೆನಪಾಗುತ್ತದೆ. ಈ ಶಬ್ದ ಪರಮಹಂಸರಪಾಲಿಗೆ ಹೊಸಯುಗದ ಸಂಕೇತವೇ ಆಗಿಬಿಟ್ಟಿತು. ಇಂಗ್ಲಿಷ್ ಕಲಿತ ಯುವಕರ ಪರಮಾರ್ಥವೇನು? ಅವರು ಪಡುವ ಆತಂಕ ತವಕ ತಲ್ಲಣಗಳು ಯಾವುದರ ಬಗ್ಗೆ? ಪರಮಹಂಸರು ಉಪಯೋಗಿಸುತ್ತಿದ್ದ ಶಬ್ದ 'ನೌಕರಿ'. ಅದು ಇಲ್ಲದೆ ಇನ್ನೇನೂ ಇಲ್ಲ; ಅದು ಬಿಟ್ಟು ಈ ಯುವಕರ ಪಾಲಿಗೆ ಇನ್ನೇನೂ ಇಲ್ಲ. ನೌಕರಿ ಜೊತೆ ನಾವೀಗ ಇನ್ನೆರಡು ತವಕ ತಲ್ಲಣಗಳನ್ನು ಅನುಭವಿಸುತ್ತೀವಿ. ನಮ್ಮ ಹಾಗೆ ಭಾಗ್ಯವಂತರಾದವರ ಬಗ್ಗೆ ನಾನಿದನ್ನು ಹೇಳುತ್ತಿದ್ದೀನಿ. ಈ ಎರಡು ಯಾವುವು ಎಂದರೆ: ಸೀಟು ಮತ್ತು ಸೈಟು. ಆಧುನಿಕ ಜಾಗತಿಕ ರಾಜಕಾರಣದ ಪರಮ ಪುರುಷಾರ್ಥವಿರುವುದು ಬಯಸಿದ್ದನ್ನು ಕೊಡಬಲ್ಲ ಕಲ್ಪವೃಕ್ಷವಾದ ಮಾರುಕಟ್ಟೆಯ ನಿರ್ಮಾಣದಲ್ಲಿ.

ಈ ಮಾರುಕಟ್ಟೆಯಲ್ಲಿ ಸಲ್ಲಲು ಅಗತ್ಯವಾದ್ದು ಮ್ಯಾನೇಜ್ ಮೆಂಟ್ ಇನ್ಸ್‌ಟಿಟ್ಯೂಟ್‌ನಲ್ಲಿ ಒಂದು ಸೀಟು; ಸೌಂದರ್‍ಯ ವರ್ಧಕ ಅಥವಾ ಕಾಮವರ್ಧಕ ವಸ್ತುಗಳನ್ನು ತಯ್ಯಾರು ಮಾಡುವ ಮಲ್ಟಿನ್ಯಾಷನಲ್ ಸಂಸ್ಥೆಯಲ್ಲೊಂದು ವೈಸ್ ಪ್ರೆಸಿಡೆಂಟ್ ಜಬರದಸ್ತಿನ ನೌಕರಿ, ಭಾರತದ ದೊಡ್ಡ ಕಾಸ್ಮೊಪೊಲೈಟ್ ನಗರದಲ್ಲಿ ಒಂದು ಸೈಟು. ಅಭಿವೃದ್ಧಿ ರಾಜಕಾರಣದಲ್ಲಿ ನಿರತ ರಾಷ್ಟ್ರಗಳಾದ ಚೀನಾ ಭಾರತಗಳ ರಾಜಕಾರಣದ ಭ್ರಷ್ಟಾಚಾರದ ಮೂಲ ಸೆಲೆಯಿರುವುದು ಇದನ್ನು ಗಳಿಸಿ ಅಮೆರಿಕಾಕ್ಕೆ ಸಲ್ಲುವಂತೆ ಬದುಕಬೇಕೆಂಬುದರಲ್ಲಿ. ಈ ನಡುವೆ ಒಂದು ದುಸ್ವಪ್ನದಂತೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ಪರೀಕ್ಷೆಯಲ್ಲಿ ಅಂಕಗಳಿಸಲಾರದೆ ನೇಣುಹಾಕಿಕೊಳ್ಳುವ ಬಾಲ ಬಾಲೆಯರು, ನಾರುವ ಸ್ಲಮ್ ಗಳಲ್ಲಿ ಬಾಳುವ ನರಜೀವಿಗಳು ಆಗೀಗ ಕಾಡುವುದುಂಟು.

ದೇಶಕ್ಕೆ ಆದಾಯ ತರುವ ನೆವದಲ್ಲಿ ಐಟಿ ಬಿಟಿಗಳಂತೂ ರಾಜಾರೋಷವಾಗಿ ತಮ್ಮ ಹಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಪಡೆಯುತ್ತವೆ. ಅಮೇರಿಕಾಕ್ಕೆ ಸೇರೆಗಾರಿಕೆ ಮಾಡುವ ಅವರ ಉದ್ಯಮ ನಷ್ಟಕ್ಕೊಳಗಾದರೂ ಅವರು ಸೋಲುವುದಿಲ್ಲ. ನಾವು ಕೂಲಿ ಮಾಡುವ ರಾತ್ರೆ ಅಮೆರಿಕಾದ ಹಗಲಾದ್ದರಿಂದ ಈ ಸೇರೇಗಾರರು ಅಷ್ಟು ಬೇಗ ಸೋಲುವುದಿಲ್ಲ. ಅಲ್ಲದೆ ಅವರಿಗೆ ಅಪಾರವಾದ ಲ್ಯಾಂಡ್ ಬ್ಯಾಂಕ್ ಇರುತ್ತದೆ. ಇವನ್ನೆಲ್ಲ ಆಗು ಮಾಡುವ ರಾಜಕಾರಣಿಗಳಿಗೆ ಆಶ್ರಯ ಸಿಕ್ಕಂತಾಗುತ್ತದೆ. ಅವರ ಚುನಾವಣೆಗಳಿಗೆ, ಚುನಾವಣೆಗಳಿಗಿಂತ ಮುಂಚೆ ಆಕಾಶ ಕಾಣದಂತೆ ರಸ್ತೆಯ ಎರಡು ಬದಿಗಳಲ್ಲೂ ಕಣ್ಣು ಕುಕ್ಕುವ ಅವರ ಪ್ಲಸ್ ಅವರ ಬೆಂಬಲಿಗರ ಕಟೌಟ್‌ಗಳಿಗೆ ಇನ್ನೆಲ್ಲಿಂದ ಹಣ ಬರಬೇಕು.? ದೇಶದ ಅಭಿವೃದ್ಧಿಯಾಗದೆ ಅವರು ಉಳಿಯುವುದು ಹೇಗೆ? ನಾನು ಹೀಗೆ ಬರೆಯಬೇಕಾಗಿ ಬಂದುದರ ಬಗ್ಗೆ ಹೇಸುತ್ತಲೇ ಮೇಲಿನದನ್ನೆಲ್ಲ ಬರೆದು ಬಿಟ್ಟಿದ್ದೇನೆ. ಮೇಧಾ ಪಾಟ್ಕರ್ ಮತ್ತು ಅವರ ಜೊತೆ ಹೋರಾಡುತ್ತಿರುವವರು ಮಾತ್ರ ಹೇಸಬೇಕಾಗಿಲ್ಲ; ಈಗಿರುವ ಸ್ಟೇಟ್ ಪವರನ್ನು ಮೀರಿಸಿದ ಪವರ್ ಪಡೆಯಲು ಹೊರಟ ನಕ್ಸಲೀಯರಿಗೂ ತಮ್ಮ ಗುರುಗಳಾದ ಸ್ಟಾಲಿನ್ ಮತ್ತು ಮಾವೋ ಮಾಡಿದ್ದನ್ನು ಕಂಡು ಹೇಸಿಗೆಯಾಗಬೇಕು.

ಪ್ರಜಾತಂತ್ರದ ಪತನದಿಂದ ಕೊಳೆತದ್ದರಲ್ಲಿ ಬೆಳೆಯುವ ಅಣಬೆಯಂತೆ ಅವರು. ಹಣವಂತರ ರಾಜಕೀಯವನ್ನು ವಿರೋಧಿಸಬೇಕೆಂದು ಈಚೆಗೆ ರಾಜ್ಯಸಭಾ ಚುನಾವಣೆಗೆ ನಾನು ನಿಂತೆ. ಗೆಲ್ಲುವುದು ಸಾಧ್ಯವಿಲ್ಲವೆಂದು ಗೊತ್ತಿದ್ದೂ ನಾನು ನಿಂತೆ. ಬರವಣಿಗೆಯ ನನ್ನ ಲೋಕಕ್ಕೆ ಸೇರಿದ ನಾಲ್ಕು ಜನ ನನಗೆ ಓಟುಮಾಡಬಾರದೆಂದು ಹೇಳಿಕೆಯಿತ್ತರು. ನನ್ನಂತೆಯೇ ನಿಂತ ನಾಲ್ಕನೇ ಅಭ್ಯರ್ಥಿಯೊಬ್ಬರನ್ನು (ಸಾಹುಕಾರರೊಬ್ಬರನ್ನು ) ಬೆಂಬಲಿಸುವುದು ಅವರ ಹಕ್ಕೆಂಬುದು ನಿಜ, ಅವರಲ್ಲಿ ನಾನು ಗೌರವಿಸುವ ಇಬ್ಬರು ಯಾಕೆ ಇದ್ದರೆಂದು ನಾನು ಅಚ್ಚರಿಪಟ್ಟೆ. ಅದಕ್ಕೆ ವಿವರಣೆಯನ್ನು ಕೊಟ್ಟ ನನ್ನ ಕೆಲವು ಹಿತೈಷಿಗಳ ಮಾತನ್ನು ಒಪ್ಪುವುದೂ ನನಗೆ ಅಸಹ್ಯವೆನ್ನಿಸಿತು. ಅಪರೂಪಕ್ಕೆ ಪತ್ರಿಕಾ ಹೇಳಿಕೆ ಕೊಡುವ ಇವರಲ್ಲಿ ಇಬ್ಬರನ್ನು ಬಿಡಿ. ಎಮರ್ಜನ್ಸಿಯಲ್ಲಿ ನನ್ನ ಹೀರೋ ಆಗಿದ್ದ ಒಬ್ಬರು ನಾನು ಎಷ್ಟುಬಾರಿ ಕರೆದರೂ ಫೋನ್ ಎತ್ತಲಿಲ್ಲ. ಅವರು ಹೇಳಿದ್ದರೆ ನನಗೆ ಸಿಗಬಹುದಾಗಿದ್ದ ಐದು ಓಟುಗಳು ನನಗೆ ಸಿಗಲಿಲ್ಲ. ಅವು ಸಿಕ್ಕಿದ್ದರೂ ನಾನು ಸೋಲುತ್ತಿದ್ದೆ. ಆದರೆ ಅದೆಷ್ಟೋ ವರ್ಷಗಳ ಕಾಲ ನಾನು ಪ್ರೀತಿಸುತ್ತಿದ್ದ ಒಬ್ಬ ರಾಜಕಾರಣಿಯ ಬಗ್ಗೆ ನನ್ನ ಗೌರವ ಉಳಿದಿರುತ್ತಿತ್ತು. ಹಿಂದೆ ಯಾವ ತ್ಯಾಗಕ್ಕಾದರೂ ಸಿದ್ಧನಿದ್ದ ಈ ಧೀರನ ಬಗ್ಗೆ ನನಗೆ ಕನಿಕರವೆನ್ನಿಸಿತು.

ರಾಜಕಾರಣದ ಪತನವೆಂದರೆ ಇದು. ಒಳ್ಳ್ಳೆಯವರು ಅನಾಥರಾಗಿ ಕೋಮುವಾದಿಗಳ ದಾಸರಾಗುವುದು. ಹಿಂದೆ ಜಾತಿ ರಾಜಕಾರಣವಿತ್ತು. ಅದನ್ನು ನಾವೆಲ್ಲರೂ ನಿಂದಿಸುತ್ತದ್ದೆವು. ಜಾತಿಯ ವ್ಯಾಮೋಹದಲ್ಲಿ ಸರಿ ತಪ್ಪಿನ ಪ್ರಜ್ಞೆ ಮಾಯವಾಗುತ್ತದೆ ಎಂದು. ಆದರೆ ಈ ಜಾತಿ ರಾಜಕಾರಣದಲ್ಲಿ ವಿಸ್ತೃತವಾದೊಂದು ಕೌಟುಂಬಿಕ ಪ್ರಜ್ಞೆ ಕೆಲಸ ಮಾಡುತ್ತಿತ್ತು. ಹಿಂದುಳಿದ ಜಾತಿಗಳಿಂದ ಹಲವು ನಾಯಕರು ಹುಟ್ಟಿಕೊಂಡು ನಮ್ಮ ಪ್ರಜಾತಂತ್ರದ ವಿಸ್ತಾರಕ್ಕೆ ಕಾರಣವಾಯಿತು. ಆದರೆ ಜಾತಿಯನ್ನು ಮೀರಬೇಕು, ಮೀರಬಹುದು ಎನ್ನಿಸುವಷ್ಟರಲ್ಲೇ ಈಗ ಧನಬಲದ ರಾಜಕೀಯ ಪ್ರಾರಂಭವಾಗಿದೆ. ಜಾತಿ ರಾಜಕಾರಣದಲ್ಲಿ ಕೆಲಸಮಾಡಿದಂತೆ ಈ ಹಣದ ವ್ಯಾಮೋಹದ ರಾಜಕಾರಣದಲ್ಲಿ ಯಾವ ಬಗೆಯ ಜನ ಪ್ರೀತಿಯೂ ಕೆಲಸ ಮಾಡುವದಿಲ್ಲ. ಇದು ಸೈತಾನ ರಾಜಕಾರಣ; ಇಲ್ಲಿ ನರಮನುಷ್ಯರಿಗೆ ಸಹಜವಾದ ವ್ಯಾಮೋಹಗಳಿಗೂ ಜಾಗವಿಲ್ಲ. ಹೊಸ ಜಾಗತಿಕ ಸ್ವರೂಪದ ಈ ಧನಮೂಲ ರಾಜಕಾರಣದಲ್ಲಿ ಜನರನ್ನು ವಂಚಿಸಲು ಜಾತಿಗಳನ್ನೂ ವೋಟ್ ಬ್ಯಾಂಕ್ ಗಳಾಗಿ ಬಳಸುತ್ತಾರೆ. ಇದು ಅಪಾಯ. ಈ ಕಾಲದ ನಾಚಿಕೆಗೆಟ್ಟ ರಾಜಕೀಯದಿಂದ ಹೇಸಬೇಕು. ಆದರೆ ಸುಮ್ಮನಿರಬಾರದು. ಈಸ ಬೇಕು; ಇದ್ದು ಜೈಸಬೇಕು.

ಯು.ಆರ್.ಅನಂತಮೂರ್ತಿ

ಈ ಲೇಖನ ದೇಶ-ಕಾಲದ ಈ ಸಂಚಿಕೆಯಲ್ಲಿ ಪ್ರಕಟವಾಗಿದ