Select Page

ಭೈರಪ್ಪನವರ “ಆವರಣ”ದ ಬಗ್ಗೆ ಮಾಡಿದ ಭಾಷಣದ ಸಾರ

ನನಗೆ ಈ ಆವರಣವನ್ನು ಕುರಿತು ಒಂದು ಸಭೆ ಮಾಡುವುದೇ ಇಷ್ಟವಿರಲಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣ ಸಾಹಿತ್ಯ ಚರ್ಚೆಗೆ ಯೋಗ್ಯವಾದ ಒಳ್ಳೆಯ ಪುಸ್ತಕ ಇದು ಅಲ್ಲ ಎಂಬುದು. ಒಂದು ಕಾಲದಲ್ಲಿ ಭೈರಪ್ಪ ಮತ್ತು ನಾನು ಆಗೀಗ ಭೇಟಿಯಾಗುತ್ತಿದ್ದೆವು. ಚದುರಂಗರೂ ಇರುತ್ತಿದ್ದರು. ಆಗ ಅವರ ಪುಸ್ತಕಗಳನ್ನು ನಾನು ಓದುತ್ತಿದ್ದೆ. ಓದಿ ಚೆನ್ನಾಗಿಲ್ಲ ಅನ್ನಿಸಿದರೆ ಅದನ್ನು ಅವರಿಗೂ ಹೇಳುತ್ತಿದ್ದೆ. ಇಂಥ ಸಂದರ್ಭಗಳಲ್ಲಿ ಭೈರಪ್ಪನವರೂ `ನನಗೂ ಅಷ್ಟೊಂದು ಚೆನ್ನಾಗಿಲ್ಲ ಅನ್ನಿಸುತ್ತೆ' ಎನ್ನುತ್ತಿದ್ದ ಸ್ನೇಹದ ಕಾಲ ಒಂದಿತ್ತು. ನನಗೆ `ಗೃಹಭಂಗ' ಒಂದೇ ಅವರ ಒಳ್ಳೆಯ ಕೃತಿ. (ಯಾಕೆಂದರೆ ಭೈರಪ್ಪನವರ ವಕೀಲಿಪ್ರಜ್ಞೆ ಇಲ್ಲ ಕೆಲಸ ಮಾಡಿಲ್ಲ) ಅದೆಷ್ಟು ಒಳ್ಳೆಯ ಕೃತಿ ಅನ್ನಿಸಿತ್ತು ಅಂದರೆ ನಾನು ನ್ಯಾಷನಲ್ ಬುಕ್ ಟ್ರಸ್ಟ್‌ನ ಸದಸ್ಯನಾದಾಗ-ಗೋಕಾಕ್ ಮತ್ತು ಹರಿದಾಸಭಟ್ಟರೂ ಸದಸ್ಯರಾಗಿದ್ದರು-ಕೆಲವು ಕೃತಿಗಳನ್ನು ಭಾರತದ ಎಲ್ಲಾ ಹದಿನಾಲ್ಕು ಭಾಷೆಗಳಿಗೂ ಅನುವಾದಿಸಬೇಕೆಂದು ತೀರ್ಮಾನಿಸಿದಾಗ ಹರಿದಾಸಭಟ್ಟರು ನನ್ನ ಪುಸ್ತಕದ ಹೆಸರು ಹೇಳಿದರು. ನಾವೇ ಸದಸ್ಯರಾಗಿದ್ದು ನಮ್ಮ ನಮ್ಮ ಪುಸ್ತಕಗಳನ್ನು ನಾವು ನ್ಯಾಷನಲ್ ಬುಕ್ ಟ್ರಸ್ಟ್‌ಗೆ ಕೊಡಬಾರದು. ಬೇರೆ ಪುಸ್ತಕಗಳನ್ನು ಕೊಡಬೇಕು ಎಂದು ಕೊಂಡು ಭೈರಪ್ಪನವರ `ಗೃಹಭಂಗ'ವನ್ನು ನಾನು ಸೂಚಿಸಿದೆ. ಹಾಗೆಯೇ ಮೊಕಾಶಿಯವರ `ಗಂಗವ್ವ ಗಂಗಾಮಾಯಿ'ಯನ್ನೂ ಶಾಂತಿನಾಥರ ಮುಕ್ತಿಯನ್ನೂ ಆರಿಸಿದೆವು. ಆಮೇಲೆ ಅವರ `ಪರ್ವ' ಬಂತು. ಅದನ್ನು ಓದಿದಾಗ ನನಗೆ ಏನನ್ನಿಸಿತು ಅಂದರೆ-`ನೋಡಿ ವೇದವ್ಯಾಸರ ಭಾರತವನ್ನು ಅವರು ರಿಯಲಿಸ್ಟಿಕ್ ಮಾಡಿ ಬರೆದಿದ್ದಾರೆ. ಈ ಭೈರಪ್ಪನವರ ಭಾರತ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದೆ ನಡೆದಿರಬಹುದೋ ಏನೋ.. ಆದರೆ ವೇದವ್ಯಾಸರ ಭಾರತ ಇವತ್ತೂ ನಡಿಯುತ್ತಿದೆ' ಎಂದೆ. ಯಾಕೆಂದರೆ ಯಾವುದು ಪುರಾಣವಾಗಿ ಹೇಳಿದೆಯೋ ಅದು ಇವತ್ತೂ ನಡೆಯುತ್ತಿದೆ. ಯಾವುದನ್ನು ವಾಸ್ತವವೆಂಬಂತೆ ಬರೆದಿದ್ದಾರೋ ಅದು ಚಾರಿತ್ರಿಕವಾದ ಯಾವೊತ್ತೋ ಒಂದು ಕಾಲಮಾತ್ರದ ಕೃತಿಯಾಗಿದೆ. ಇದರಿಂದ ನನ್ನ ಸ್ನೇಹಿತರೂ ಆದ ಅವರ ಕೆಲ ಪ್ರಜ್ಞಾವಂತ ಅಭಿಮಾನಿಗಳಿಗೆ ನನ್ನ ಮೇಲೆ ಸಿಟ್ಟೂ ಬಂದಿತ್ತು.

ನಾನು ಕೆಲವು ವೈಯಕ್ತಿಕ ವಿಷಯಗಳನ್ನು ಇಲ್ಲಿ ಹೇಳಲೇಬೇಕು; ಇಲ್ಲದಿದ್ದರೆ ಬೇರೆಯವರು ಇದನ್ನು ಎಳೆದು ತಂದೇ ತರುತ್ತಾರೆ. ನಾನು ಸಾಹಿತ್ಯ ಅಕಾಡೆಮಿಯ ಚುನಾವಣೆಗೆ ನಿಂತೆ. ಆಗ ಭೈರಪ್ಪ ದಿಟ್ಟವಾಗಿಯೇ ವಿಮಾನದಲ್ಲಿ ಸಂಚರಿಸಿ ನನ್ನ ವಿರುದ್ಧ ಪ್ರಚಾರ ಮಾಡಿದರು. ಹೀಗೆ ಮಾಡುವುದಕ್ಕೆ ಅವರಿಗೆ ಎಲ್ಲಾ ಹಕ್ಕೂ ಇತ್ತು. ಕನ್ನಡದವರು ನನ್ನ ವಿರುದ್ಧ ಓಟು ಹಾಕಿದರು. ಮರಾಠಿ ಲೇಖಕರೊಬ್ಬರು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಮರಾಠಿ ಲೇಖಕರು ನನಗೆ ಓಟು ಹಾಕಿದರು. . ಇದರಿಂದ ನನ್ನಲ್ಲಿ ಯಾವ ಕಹಿಯೂ ಉಂಟಾಗಲಿಲ್ಲ. ಇದು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದ ಕ್ರಮ ಎಂದೇ ನಾನು ಈಗಲೂ ತಿಳಿದಿದ್ದೇನೆ.

ನಾನು ಕೇಳಿದಂತೆ ಅವರ ಆತ್ಮ ಚರಿತ್ರೆಯಲ್ಲಿ ಏನೋ ಹೇಳಿಕೊಂಡಿದ್ದಾರಂತೆ:. ಅವರು ದಾಟು ಬರೆದಾಗ ದಲಿತರು ಅವರ ಮನೆ ಮೇಲೆ ಕಲ್ಲುಹೊಡೆದರಂತೆ. ಅದರ ಹಿಂದೆ ನನ್ನ ಮಾತನ್ನು ಕೇಳುತ್ತಿದ್ದ ಆಲನಹಳ್ಳಿ ಕೃಷ್ಣ ಮತ್ತು ನನ್ನ ಕೈವಾಡ ಇತ್ತುಎಂದು ಗುಮಾನಿಯಾಗುವಂತೆ ಅವರು ಬರೆದಿದ್ದಾರೆ ಎಂದು ಕೇಳಿದ್ದೇನೆ. ಇದನ್ನವರು ಬರೆಯಬಾರದಿತ್ತು. ಏಕೆಂದರೆ ಇದು ಸುಳ್ಳು. ಎಷ್ಟು ಸುಳ್ಳು ಎಂದರೆ ಇದು ಅಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದರೆ, ಇರಬಹುದೇನೋ ಎಂಬ ಅನುಮಾನ ಶುರುವಾಗಿಬಿಡುತ್ತೆ. ಆದ್ದರಿಂದ ಈ ವರೆಗೆ ಈ ಬಗ್ಗೆ ನಾನು ಏನೂ ಹೇಳಿಲ್ಲ.

ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ. ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ, ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ, ಕುವೆಂಪು ಅಲ್ಲ, ಬೇಂದ್ರೆ ಅಲ್ಲ, ನಾವ್ಯಾರೂ ಅಲ್ಲ.

ಎಷ್ಟು ಪ್ರಸಿದ್ಧರು ಹೇಳುವೆ: ಮೊನ್ನೆ ನಾನು ಕೊಲ್ಕತ್ತಾಕ್ಕೆ ಹೋಗುತ್ತಿದ್ದೆ. ನನ್ನ ಪಕ್ಕ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಕೆಲಸ ಮಾಡುವ ಕನ್ನಡ ಬರುವ ಒಬ್ಬರಿದ್ದರು. ನನ್ನ ಹತ್ತಿರ ಮಾತನಾಡುತ್ತಾ ಅವರು ಬಹು ಮೆಚ್ಚುಗೆಯಲ್ಲಿ ಹೀಗೆ ಹೇಳಿದರು: `ನಾನು ಮತ್ತು ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರು ಒಟ್ಟಿಗೇ ನ್ಯೂಯಾರ್ಕ್‌ಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ `ಆವರಣ' ಓದಲಿಕ್ಕೆ ಶುರಮಾಡಿದ ನಾರಾಯಣ ಮೂರ್ತಿಯವರು ನ್ಯೂಯಾರ್ಕ್‌ನಲ್ಲಿ ಅದನ್ನು ಮುಗಿಸಿದರು'. ನಾರಾಯಣ ಮೂರ್ತಿಗಳಿಗೆ ಭೈರಪ್ಪನವರ `ಆವರಣ' ಇಷ್ಟ ಆಗಿದ್ದೂ ಕೂಡಾ ನನಗೊಂದು ಮೆಟಫರ್. ಅಂದರೆ ಯಾವ ಶಕ್ತಿಯ ವಿರುದ್ಧ ನಾವು ಇವತ್ತು ನಿಲ್ಲಬೇಕೋ ಆ ಶಕ್ತಿಗಳು ಹೀಗೆ ಸಂಘಟಿತಗೊಂಡು ಮೆಟಫರ್‌ಗಳಾಗಿ ನನಗೆ ಕಾಣುತ್ತವೆ. ಕರ್ನಾಟಕ ಗುಜರಾತಿನಂತೆ ಆಗಬೇಕೆಂಬುದು ಆವರಣದ ಹಿಂದಿರುವ ಸಂಸ್ಕೃತಿ ರಾಜಕೀಯ. ಗುಜರಾತು ಈಗ ಬಂಡವಾಳಹೂಡಿ ಬೆಳೆಸುವವರ ಸ್ವರ್ಗ; ಬಡ ಮುಸ್ಲಿಮರ ನರಕ.

ಗ್ಲೋಬಲೈಸ್ ಮಾಡುವ ಮೂಲಕ ದೇಶೀಯವಾದ ಭಾರತೀಯ ಸಂಸ್ಕೃತಿ ಅಂತ ನಾವೇನನ್ನು ಗುರುತಿಸುತ್ತೇವೋ ಅದನ್ನು ಸರ್ವನಾಶ ಮಾಡುವುದು ಇದರ ಹಿಂದಿರುವ ಹುನ್ನಾರ. ಹಾಗೆ ಸರ್ವನಾಶ ಮಾಡುತ್ತಿರುವವರ ಮುಸ್ಲಿಮರ ವಿರೋಧ ಯಾವ ಸಾಂಸ್ಕೃತಿಕ ಕಾರಣಕ್ಕಾಗಿ ಎಂಬುದು ನನಗೆ ಅರ್ಥವೇ ಆಗುವುದಿಲ್ಲ. ಆವರಣದ ಹಿಂದಿರುವ ಪ್ರೇರಣೆಗಳನ್ನು ಮೆಚ್ಚುವ ಉದ್ಯಮಿಗಳ ಹಿಂದುತ್ವರಾಜಕೀಯ ಕೂಡ ಇಸ್ಲಾಂ ವಿರುದ್ಧ ಕ್ರೂಸೇಡ್ ಸಾರಿದ ಬುಷ್ ಜೊತೆಗಿನ ಒಳ ಒಪ್ಪಂದವಿದ್ದೀತು ಎನ್ನಬಹುದೆ? ಟಾಟಾ ಮತ್ತು ನಾರಾಯಣ ಮೂರ್ತಿಗಳು ಗುಜರಾತಿನ ಮೋದಿಗೆ ಎಷ್ಟು ಪ್ರಿಯರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಟೆಲಿವಿಷನ್ ಛಾನೆಲ್ ಗಳು ತೋರಿಸಿವೆ.

ಭೈರಪ್ಪನವರ ಬಗ್ಗೆ ನಿಷ್ಠರವಾದ ಮಾತಿನ ವಿಮರ್ಶೆಗೆ ತೊಡಗಿರುವ ನನಗೆ ಮತ್ತೊಂದು ವಿಷಯ ನೆನಪಾಗುತ್ತಿದೆ. ಭೈರಪ್ಪನವರೂ ನಾನು ಒಡನಾಡುತ್ತ ಇದ್ದ ಮೈಸೂರಿನ ದಿನಗಳಲ್ಲಿ ಕುಮಾರ ಗಂಧರ್ವರ ಸಂಗೀತವನ್ನು ನನಗೆ ಪರಿಚಯ ಮಾಡಿಕೊಟ್ಟ ಮೊದಲಿಗರು ಭೈರಪ್ಪನವರು. ನಾನು ಬೆನ್ನು ನೋವಿನಿಂದ ಹಾಸಿಗೆ ಹಿಡಿದಿದ್ದಾಗ ಅದನ್ನು ಬಲ್ಲವರಾದ ಭೈರಪ್ಪನವರು ಅದಕ್ಕೇನು ಚಿಕಿತ್ಸೆ ಮಾಡಬೇಕು ಎಂದು ಮನೆಗೇ ಬಂದು ಹೇಳುತ್ತಿದ್ದರು. ನನ್ನ ಹಳ್ಳಿಗೆ ಹೋದರೆ ಅಲ್ಲಿ ಪುಟ್ಟಣ್ಣಯ್ಯ ಅಂತ ಇದ್ದರು. ಅವರ ಜೊತೆ ನಮ್ಮ ತಾಯಿಯನ್ನು ಭೇಟಿ ಮಾಡಿ ಕಾಫಿ ಕುಡಿದು ಬರುತ್ತಿದ್ದರು. ನಾನು ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡುತ್ತೇನೆ. ಯಾಕೆಂದರೆ ನನಗೆ ಗೋವಿಂದಯ್ಯನ ತರಹ ಭೈರಪ್ಪನವರ ಬಗ್ಗೆ ಕೇವಲ ಕೋಪದಲ್ಲಿ ಮಾತನಾಡಲಿಕ್ಕೆ ಆಗುವುದಿಲ್ಲ.

ಭೈರಪ್ಪ ನನ್ನ ಜತೆಯ ಬರೆಹಗಾರ. ಆದರೆ ನನಗೆ ಸಾಹಿತ್ಯ ಲೋಕದಲ್ಲಿ ಮುಖ್ಯ ಅನ್ನಿಸಿದವರು ಅವರಲ್ಲ. ಅವರೆಷ್ಟೇ ಜನಪ್ರಿಯ ಆಗಿರಲಿ, ಅವರೊಬ್ಬರು ಡಿಬೇಟರ್. ಜನರ ಮೆಚ್ಚುಗೆಗೆ ಬರುವ ಹಾಗೆಯೇ ಅವರು ಕಾದಂಬರಿಗಳನ್ನು ಬರೆಯುವುದು. ಒಬ್ಬ ಒಳ್ಳೆಯ ಲೇಖಕ ಬರೀತಾ ಇದ್ದಾಗ ತನ್ನ ಅಭಿಪ್ರಾಯಗಳಿಗೆ ವಿರೋಧವಾಗಿ ಹೋಗುವ ಮುಕ್ತಮನಸ್ಸು ಅವನಿಗಿದ್ದರೆ ಮಾತ್ರ ಅವನು ನನ್ನ ಪಾಲಿಗೆ ಸೃಜನಶೀಲ ಲೇಖಕ. ಒಬ್ಬ ಸಾಮಾನ್ಯ ಲೇಖಕ ಜನಪ್ರಿಯವಾಗಲೆಂದು ಅವನೇನು ನಂಬಿದ್ದಾನೋ ಅದನ್ನು ಜನರೂ ಒಪ್ಪುವ ಹಾಗೆ-ಆಕ್ರಮಣ ಮಾಡುವ ಹಾಗೆ- ಬರೆಯುತ್ತಾನೆ.

ಭೈರಪ್ಪನವರು ಹಿಂದೂ ಸಂಸ್ಕೃತಿಯನ್ನು ಪ್ರಶ್ನೆ ಮಾಡುವಂಥ ಪುಸ್ತಕಗಳನ್ನೂ ಬರೆದಿದ್ದಾರೆ. ನಿಜ. ಅವರದ್ದೊಂದು ಕೃತಿ ಇದೆಯಲ್ಲಾ `ವಂಶವೃಕ್ಷ' ಅಂತಹ ಬರವಣಿಗೆಗೆ ಒಳ್ಳೆಯ ಉದಾಹರಣೆ. ಅವರು ಇಂತಹವನ್ನು ಬರೆಯುವಾಗ ಹೇಗೆ ಬರೆಯುತ್ತಾರೆಂದರೆ ಪ್ರಶ್ನೆಗಳನ್ನು ಎತ್ತಬೇಕು; ಆದರೆ ಅವರ ಮನಸ್ಸಿನಲ್ಲಿ ಅವರಿಗೇ ಇಷ್ಟವಿರುವ ಉತ್ತರ ಸಿಗುವ ಹಾಗೆ ಅದಕ್ಕೊಂದು ಬೆಳವಣಿಗೆಯನ್ನು ಕಟ್ಟಬೇಕು- ಹಾಗೆ. ಡಿಬೇಟರ್ ಕಟ್ಟುವ ಹಾಗೆ. ತನ್ನ ವಿರೋಧಿಯ ವಾದವನ್ನು ಡಿಬೇಟರ್ ಸ್ವೀಕರಿಸಿದಂತೆ ತೋರುವಹಾಗೆ. ಪ್ರಶ್ನೆಗಳನ್ನು ಎತ್ತಿದಹಾಗೆ ಕಾಣಬೇಕು; ಆದರೆ ನಮಗೆ ನೆಮ್ಮದಿಯಾಗುವ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಉತ್ತರ ಸಿಗಬೇಕು. ಮಾಂಸದ ರುಚಿಯೂ ಬೇಕು; ಮಡಿಯೂ ಉಳಿಯಬೇಕು ಎನ್ನುವವರು ವೆಜಿಟಬಲ್ ಬಿರಿಯಾನಿ ತಿನ್ನುವ ಹಾಗೆ. ? ಮಾತುಗಳಿಗೆಲ್ಲ ವಿನಾಯಿತಿಯೆಂದರೆ ಓದುಗರಿಗೆ ಮುಖಮಾಡದೆ ಸಾಗುವ ಅವರ ಗೃಹಭಂಗ ಮಾತ್ರ.

ಜನಪ್ರಿಯರಾದ ಭೈರಪ್ಪ ತನ್ನನ್ನು ತಾನೇ ಮೀರಬಲ್ಲ ಲೇಖಕ ಅಲ್ಲ ಎಂದು ನಾನು ತಿಳಿದಿರುವುದಕ್ಕೆ ಕಾರಣ ಹೇಳುತ್ತೇನೆ. ಅವರಲ್ಲಿ ಕಾವ್ಯ ಅನ್ನೋದು ಏನೂ ಇಲ್ಲ. ಈ ಮಹಾದೇವನದ್ದು ಬರೇ ಪೊಯೆಟ್ರಿ. ನನಗೆ ಇಷ್ಟವಾದ ಲೇಖಕರನ್ನು(ಇವರಲ್ಲಿ ಕೆಲವರು ನನ್ನನ್ನು ಟೀಕಿಸುತ್ತ ಇದ್ದವರು) ನೆನಪಿಸಿಕೊಳ್ಳುತ್ತೇನೆ. ಉದಾಹರಣೆಗೆ ಲಂಕೇಶರು. ಅವರು ತಮ್ಮ್ನ ಎಲ್ಲಾ ಅಭಿಪ್ರಾಯಗಳನ್ನು ಇಟ್ಟುಕೊಂಡು ಕೆಲವು ಕಥೆಗಳಲ್ಲಿ ತಮ್ಮ್ನ ಅಭಿಪ್ರಾಯಗಳನ್ನೇ ತಾವೇ ಮೀರಿ ತಮ್ಮ ಸಂದಿಗ್ಧಗಳಿಗೆ ಉತ್ತರವೇ ಇಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ತೇಜಸ್ವಿ, ಕಂಬಾರ, ಮಹದೇವ, ಯಶವಂತ ಚಿತ್ತಾಲ, ಆಲನಹಳ್ಳಿ, ರಾವ್ ಬಹದ್ದೂರ್, ಚದುರಂಗ, ನನ್ನ ಹತ್ತಿರ ಸತತವಾಗಿ ಜಗಳವಾಡಿದ ಶಂಕರ ಮೊಕಾಶಿ ಪುಣೇಕರ- ಎಲ್ಲರೂ. ಮೊಕಾಶಿ ಟ್ರೆಡಿಷನಲಿಸ್ಟ್ ಸನಾತನಿ ಅಂತಾನೆ ನಮ್ಮ ಜಗಳ. ಆದರೆ ನನಗೆ ನನ್ನ ಬಗ್ಗೆ ಅನುಮಾನ ಹುಟ್ಟಿಸುತ್ತಿದ್ದವರು ಅವರು. ಕಾರಂತ, ಮಾಸ್ತಿ, ಕುವೆಂಪು, ಗೊರೂರು- ಇವರೆಲ್ಲಾ ಬಿಡಿ, ಬಹಳ ದೊಡ್ಡ ಲೇಖಕರು. ಅವರೆಲ್ಲರಲ್ಲೂ ಕಾವ್ಯ ಇದೆ. ಕನ್ನಡದ ಚಂಪೂ ಸಂಪ್ರದಾಯ ಹೊಸ ಬಗೆಯಲ್ಲಿ ಮುಂದುವರಿದಂತೆ ಕಾಣುತ್ತದೆ. ಆದರೆ ಭೈರಪ್ಪನವರಲ್ಲಿ ಅದಿಲ್ಲ.

ಕೆಲವು ಕಾದಂಬರಿಗಳು ಕಂಡದ್ದನ್ನು ಎದುರಾಗುವ ಯಾತ್ರೆ; ಹಲವು ಜನಪ್ರಿಯ ಕಾದಂಬರಿಗಳು ಪೂರ್ವ ನಿಶ್ಚಿತವಾದ ಪ್ರೀಪೈಡ್ ಟೂರ್. ಗೃಹಭಂಗ ಹೊರತಾಗಿ ಭೈರಪ್ಪನವರ ಇತರ ಕೃತಿಗಳು ಎರಡನೇ ಬಗೆಯ ಬರವಣಿಗೆಗಳು.

***

ಭೈರಪ್ಪನವರಿಗಿಂತ ಆಡ್ವಾಣಿಯವರೇಹೆಚ್ಚು ಮುಕ್ತ ಮನಸ್ಸಿನವರೇನೊ? ಅವರು ನಿತ್ಯ ಜನಸಂಪರ್ಕದ ರಾಜಕಾರಣಿಯಾದ್ದರಿಂದ ಭೈರಪ್ಪನವರಿಗೆ ಸಾಧ್ಯವಿಲ್ಲದೇ ಇರುವುದು ಅವರಿಗೆ ಸಾಧ್ಯವಿದೆ. ಇದೊಂದು ಆಶ್ಚರ್ಯ. ಆಡ್ವಾಣಿಯವರು ಜಿನ್ನಾ ಬಗ್ಗೆ ಪಾಕಿಸ್ಥಾನದಲ್ಲಿ ಮಾತನಾಡಿದ್ದರು. ಪಾಕಿಸ್ಥಾನ ಆದ ಮೇಲೆ `ಇನ್ನು ಮುಂದೆ ಹಿಂದೂ ಮುಸ್ಲಿಂ ಅಂತೆಲ್ಲಾ ಮಾಡುವುದು ಬೇಡ ಇಲ್ಲಿ ಯಾರೂ ಮುಸ್ಲಿಮರಿಲ್ಲ, ಹಿಂದೂಗಳಿಲ್ಲ. ಇದು ಪಾಕಿಸ್ಥಾನ' ಅಂತ ಜಿನ್ನಾ ಭಾಷಣ ಮಾಡಿದ್ದು ನಿಜ. ಇದನ್ನು ಹೇಳಬೇಕೆಂದು ಆಡ್ವಾಣಿಯವರಿಗೆ ಅನ್ನಿಸಿತು. ಅದನ್ನು ಹೇಳಿ ಅವರು ಬಹಳ ಟೀಕೆಗಳಿಗೆ ಗುರಿಯಾಗಿಬಿಟ್ಟರು. ಆಡ್ವಾಣಿಯವರಿಗೆ ತಮ್ಮ ರಾಜಕಾರಣದಲ್ಲೂ ತೆರೆಯಬಹುದಾದ ಒಂದು ಒಳನೋಟ ನಮ್ಮ ಭೈರಪ್ಪನವರಿಗೆ ಸಾಧ್ಯವಿಲ್ಲವಲ್ಲ– ಇದು ಬಹಳ ದೊಡ್ಡ ದುರಂತ ಅಂತ ನನ್ನಗನ್ನಿಸುತ್ತೆ. ಕೆಟ್ಟ ರಾಜಕಾರಣ ಮಾಡುವವನೂ ಜನರ ಜತೆಯೇ ರಾಜಕಾರಣ ಮಾಡಬೇಕಾಗಿರುವುದರಿಂದ ಎಲ್ಲೋ ಒಂದು ಕಡೆ ತೆರೆದುಕೊಳ್ಳುತ್ತಾನೆ.

ಪಾಕಿಸ್ಥಾನೀ ಬರೆಹಗಾರರು ಅನೇಕ ಕಥೆಗಳನ್ನು ಹೇಳುತ್ತಾರೆ. ಇವು ಅವರ ಮೌಖಿಕ ಜಾನಪದ. ಅಲ್ಲಾನ ಬಗ್ಗೆಯೇ ಒಂದು ಕತೆ ಇದೆ. ನಮಗೊಂದು ಮುಸ್ಲಿಂ ದೇಶ ಬೇಕು ಎಂದು ಭಾರತ ತೊರೆದು ಹೋದವರು ಅಲ್ಲಿ ಎರಡನೇ ದರ್ಜೆಯ ನಾಗರಿಕರಾದರು. ಅಲ್ಲೇ ಇದ್ದ ಪಂಜಾಬಿಗಳದೇ ಮೇಲುಗೈ ಆಯಿತು. ಉರ್ದು ಮಾತಾಡುವವರ ಕೊಲೆಗಳೂ ನಡೆಯ ತೊಡಗಿದವು. ಹೀಗೆ ಕೊಲೆಯಾದ ಒಬ್ಬ ಅಲ್ಲಾನ ಹತ್ತಿರ ಹೋಗುತ್ತಾನೆ. ಅಲ್ಲಿ ಅವನು ದೇವರನ್ನುದ್ದೇಶಿಸಿ ಉರ್ದುವಿನಲ್ಲಿ `ನಾನು ನಿನ್ನನ್ನು ನಂಬಿ ನಮಗೊಂದು ಪಾಕಿಸ್ಥಾನ ಬೇಕು ಎಂದು ಬಂದವನು. ಆದರೆ ನನ್ನನ್ನೇ ಕೊಂದುಬಿಟ್ಟರು ನಿನ್ನ ಜನ' ಎಂದು ದೂರುತ್ತಾನೆ. ಆಗ ಅಲ್ಲಾ ಗೇಬ್ರಿಯಲ್‌ನನ್ನು ಕರೆದು `ಅವನೇನು ಹೇಳುತ್ತಿದ್ದಾನೆ?' ಎಂದು ಪಂಜಾಬಿಯಲ್ಲಿ ಕೇಳಿದನಂತೆ!ಇದು ಪಾಕಿಸ್ತಾನಿಗಳೇ ಹೇಳುವ ಕತೆ. ಇದರರ್ಥ ಎಲ್ಲರಿಗೂ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ ಒಳ ನೋಟ ಇರುತ್ತದೆ ಎಂದು. ಆದ್ದರಿಂದ ನನ್ನ ಬಹಳ ದೊಡ್ಡ ಆಸೆ ಏನಂದರೆ ನಾವು ಏನಾದರೂ ಮಾಡಿ ಪಾಕಿಸ್ಥಾನದ ಜತೆ ಸ್ನೇಹದಿಂದ ಇದ್ದು ಈ ಹಿಂದೂ ಮುಸ್ಲಿಂ ದ್ವೇಷವನ್ನು ಕೊನೆಗೊಳಿಸಬೇಕು.ನನಗೆ ಪಾಕಿಸ್ತಾನೀ ಲೇಖಕ ಸ್ನೇಹಿತರಿದ್ದಾರೆ. ಅವರೂ ನಮ್ಮ ಹಾಗಿನ ಮನುಷ್ಯರೇ. ಮನುಷ್ಯನನ್ನು ಒಟ್ಟಾರೆಯಾಗಿ ನೋಡಿ ಈ ಮನುಷ್ಯ ಇಷ್ಟೇ ಹೀಗೇ ಎಂದು ಹೇಳುವುದು, ಒಂದು ಧರ್ಮ ಇಷ್ಟೇ ಹೀಗೇ ಎಂದು ಹೇಳುವುದು, ಆ ಧರ್ಮ ಕಾಲಾನುಕ್ರಮದಲ್ಲಿ ಪಡೆಯುವ ರೂಪವನ್ನು ಗಮನಿಸದೇ ಇರುವುದು ದಡ್ಡತನ.ಇಸ್ಲಾಂ ಬೇರೆ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ವರ್ಣರಂಜಿತವಾಗಿಲ್ಲ. ಇಲ್ಲಿ ದೇಶೀ ಸಂಸ್ಕೃತಿಗಳ ಜತೆಗೆ ಒಡನಾಡಿ ಅದು ಪಡೆದುಕೊಂಡಿರುವ ಸ್ವರೂಪ ಭಿನ್ನವಾದುದು. ಒಬ್ಬ ಕಬೀರ್ ಹುಟ್ಟಿಗೂ ಇಸ್ಲಾಂ ಮತ್ತು ಅದ್ವೈತದ ನಡುವಿನ ಸಂವಾದ ಕಾರಣವಾಯಿತು. ಇಂಥ ಯಾವುದಕ್ಕೂ ಅವಕಾಶವಿಲ್ಲದಂತೆ ಇದೊಂದು ರೀತಿಯ ಶಾಪ ಎಂಬಂತೆ ಔರಂಗಜೇಬನನ್ನು ಎತ್ತಿಕೊಂಡು ಮಾತಾಡುವುದು, ಎರಡು ಮತಗಳಲ್ಲೂ ಹುಟ್ಟಿದ ಭಕ್ತಿಪಂಥವನ್ನು ಕಡೆಗಣಿಸುವುದು ಕರ್ನಾಟಕವನ್ನು ಗುಜರಾತ್ ಗೊಳಿಸುವ ದ್ವೇಷದ ರಾಜಕಾರಣ. ಯಾರಾದರೂ ಚರಿತ್ರಕಾರರು ಈ ಕುರಿತು ಪ್ರತಿಕ್ರಿಯಿಸಬೇಕು. ಭೈರಪ್ಪನವರು ಔರಂಗಜೇಬ್‌ನನ್ನು ಬೈದರು ಅಂತ ನಾನು ಔರಂಗಜೇಬ್‌ನನ್ನು ಹೊಗಳುವುದಕ್ಕೆ ಆರಂಭಿಸಿದರೆ ನಾನೂ ಒಬ್ಬ ಡಿಬೇಟರ್ ಆಗಿಬಿಡುತ್ತೇನೆ ಅಷ್ಟೇ. ಅಕ್ಬರನ ಆಸ್ಥಾನದಲ್ಲಿ ಇದ್ದ ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆಯ ಹಿಂದೂಗಳು ಔರಂಗಜೇಬನ ಆಸ್ಥಾನದಲ್ಲಿದ್ದರು ಎಂದು ಹೇಳುವವರಿದ್ದಾರೆ. ಅವನು ಅಷ್ಟು ದೇವಸ್ಥಾನಗಳನ್ನು ಕೆಡವಿದ ಅಂದರೆ ಇನ್ನಾರೋ ಮತ್ತಷ್ಟು ದಾಖಲೆಗಳನ್ನು ತಂದು ಅವನು ಇಷ್ಟು ದೇವಸ್ಥಾನಗಳನ್ನು ಕಟ್ಟಿಸಿದ ಎನ್ನಲು ಸಾಧ್ಯವಿದೆ. ನನಗೇ ಗೊತ್ತಿರುವ ಹಾಗೆ ನಮ್ಮ ತೀರ್ಥಹಳ್ಳಿಯ ದೇವಸ್ಥಾನಗಳೆಲ್ಲವನ್ನೂ ಮತ್ತೆ ಕಟ್ಟಿಸಿದವರು ಮೀರ್ಜಾ ಇಸ್ಮಾಯಿಲ್ ಸಾಹೇಬರು.ಬ್ರಿಟಿಷರು ಇಲ್ಲಿ ಬಂದರು; ನಮ್ಮನ್ನು ಆಳಿದರು; ಇದು ನಮ್ಮ ದೇಶ ಅಲ್ಲ ಅಂತ ಬಿಟ್ಟು ಹೋದರು. ಆದರೆ ಈಗ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಮರು ಬಂದರು, ಆಳಿದರು ಇಲ್ಲೇ ಬದುಕಿದರು. ಇದು ನಮ್ಮ ದೇಶವೇ ಅಂದು ಕೊಂಡರು. ನಮ್ಮ ಸಂಸ್ಕೃತಿ ಜತೆಗೆ ಬೆರೆತರು. ಗಾಂಧೀಜಿಯನ್ನು ಒಬ್ಬ ಅಮೆರಿಕನ್ ಬಂದು ನಿನ್ನ ಅಜೆಂಡಾ ಏನು ಎಂದು ಕೇಳಿದಾಗ ಅವರು ಮೂರು ವಿಷಯಗಳನ್ನು ಹೇಳಿದರು. ಆ ಅಮೇರಿಕನ್ ಬ್ರಿಟಿಷರನ್ನು ಓಡಿಸುವುದು ನನ್ನ ಅಜೆಂಡಾ ಎಂದು ಗಾಂಧಿ ಹೇಳುತ್ತಾರೆಂದು ಭಾವಿಸಿದ್ದ. ಆದರೆ ಗಾಂಧೀ ಹೇಳಿದ್ದು ಒಂದು: ಅಸ್ಪೃಶ್ಯತೆಯ ನಿವಾರಣೆ, ಎರಡು: ಹಿಂದೂ ಮುಸ್ಲಿಂ ಸ್ನೇಹ, ಮೂರನೆಯ ಅಜೆಂಡಾ ಖಾದಿ. ಇದರಲ್ಲಿ ಎಷ್ಟು ಸ್ವಾರಸ್ಯ ಇದೆ ಎಂದರೆ ಈ ಮೂರು ಅಜೆಂಡಾ ಕಾರ್ಯರೂಪಕ್ಕೆ ಬಂದರೆ ಬ್ರಿಟಿಷರು ಹೋಗಬೇಕು ಅಂತ ಹೇಳಲೇ ಬೇಕಾಗಿರಲಿಲ್ಲ. ಅವರಿಗಿಲ್ಲಿ ಇರುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ.ರಾಜರನ್ನು ಅವರ ಅಧಿಕಾರ ದಾಹವನ್ನೂ ಕುರಿತು ಬರೆಯುವುದರ ಬಗ್ಗೆ ಒಂದು ಮಾತು. ಅಂತಾ ಕೊಲೆಗಡುಕನಾದ ಮ್ಯಾಕ್‌ಬೆತ್‌ನನ್ನು ಷೇಕ್ಸ್‌ಪಿಯರ್ ಒಬ್ಬ ಮನುಷ್ಯನನ್ನಾಗಿ ನೋಡುತ್ತಾನೆ. ಟಾಲ್‌ಸ್ಟಾಯ್ ನೆಪೋಲಿಯನ್ ಮೇಲೆ ಬರೀತಾ ಅಂತಾ ದೊಡ್ಡ ನೆಪೋಲಿಯನ್‌ಗೆ-ಇಡೀ ಯೂರೋಪನ್ನು ನಡುಗಿಸಿದ ನೆಪೋಲಿಯನ್‌ಗೆ- ಒಂದು ದಿನ ತನಗೆ ಪ್ರಿಯವಾದ ನಶ್ಯ ಸಿಗದೆ ಯುದ್ಧವೇ ಕೆಟ್ಟು ಹೋಗುವ ಸ್ಥಿತಿಯನ್ನು ವರ್ಣಿಸುತ್ತಾನೆ. ನೆಪೋಲಿಯನ್ ನಂತಹವನನ್ನೂ ಕೇವಲ ಮನುಷ್ಯನನ್ನಾಗಿ ನೋಡಲು ಟಾಲ್‌ಸ್ಟಾಯ್‌ಗೆ ಸಾಧ್ಯವಾಯಿತು.ಔರಂಗಜೇಬ್ ಸಾಯುವಾಗ ಬಹಳ ಪಾಪ ಭಾವದಿಂದ ಇದ್ದನಂತೆ. ಅವನು ತಮ್ಮಂದಿರನ್ನು ಕೊಂದ; ಏನೇನೋ ಮಾಡಿದ. ಇದೆಲ್ಲಾ ಅವನನ್ನು ಇಳಿವಯಸ್ಸಿನಲ್ಲಿ ಕಾಡಿರಬಹುದೇನೋ.ಭೈರಪ್ಪನವರಿಗೆ ಅರ್ಥವಾಗದೇ ಇರುವ ಒಂದು ವಿಷಯವಿದೆ. ಈ ದೇಶದಲ್ಲಿ ಜನಗಳು ಒಂದು ಬಲವಾದ ಯಾವ ಸರಕಾರವಿದ್ದರೂ ಒಪ್ಪಿಕೊಂಡೇ ಬಂದಿದ್ದಾರೆ. ನಾನು ಹಿಂದೆ ಈ ಬಗ್ಗೆ ಬರೆದಿದ್ದೇನೆ `ರಾಜ ಭೀತಿ, ರಾಜನಿಲ್ಲದ ಭೀತಿ' ಎನ್ನು ನನ್ನ ಒಂದು ಪ್ರಬಂಧದಲ್ಲಿ. ದೆಹಲಿಯಲ್ಲಿ ಯಾರೋ ಒಬ್ಬ ಅಧಿಕಾರದ ಜಾಗದಲ್ಲಿ ಬಂದು ಕೂತ ಅಂದರೆ ಜನ ನಿಟ್ಟುಸಿರುಡುತ್ತಾರೆ-ಒಬ್ಬ ಇದಾನಲ್ಲ ಅಲ್ಲಿ, ಬೀದಿ ಪುಂಡರ ಕಾಟವಾದರೂ ತಪ್ಪಬಹುದಲ್ಲ ಎಂದು. ಮೊಗಲರು ಇಂಥಾ ಕಾಲದಲ್ಲಿ ರಾಜತ್ವವನ್ನು ನಡೆಸಿದರು. ನಡೆಸಿದಾಗ ತಪ್ಪು ಮಾಡಿದರು, ದುಷ್ಟತನ ಮಾಡಿದರು, ಒಳ್ಳೆಯದು ಮಾಡಿದರು,. ನಮ್ಮ ದೇವೇಗೌಡರು, ನಮ್ಮ ಇಂದಿರಾಗಾಂಧಿ ಎಲ್ಲರಿದ್ದ ಹಾಗೇನೇ ಅವರು. ಜನಸಾಮಾನ್ಯರಿಗೆ ಸ್ಕೂಲಿಗೆ ಹೋದ ಹುಡುಗ ಹಿಂದಕ್ಕೆ ಬಂದರೆ ಸಾಕು. ಬಸ್ ಓಡಾಡಿದರೆ ಸಾಕು, ರೈಲು ಚಲಿಸಿದರೆ ಸಾಕು. ಹಾಗೆಯೇ ಜನರು ಮೊಗಲರನ್ನೂ ಒಪ್ಪಿಕೊಂಡಿದ್ದರು. ಇದರ ಬಗ್ಗೆ ಬರೆಯುವುದಕ್ಕೆ ಎಂಥಾ ವಿಷನ್ ಇರಬೇಕು! ಯಾಕೆ ಒಂದು ವ್ಯವಸ್ಥೆಯನ್ನು ಜನ ಒಪ್ಪಿಕೊಳ್ಳುತ್ತಾರೆ? ಔರಂಗಜೇಬನಂಥವನು ಬಹಳ ನಿಷ್ಠುರವಾಗಿ ಒಂದು ವ್ಯವಸ್ಥೆಯನ್ನು ತರುವುದಕ್ಕೆ ನೋಡಿದಾಗಲೂ ಅದನ್ನು ಯಾಕೆ ಬಹುಮಂದಿ ಹಿಂದೂಗಳೂ ಒಪ್ಪಿಕೊಂಡಿರಬಹುದು? ಎಲ್ಲ ಪ್ರಭುತ್ವದ ಹಿಂದಿರುವ ದುರಂತ ಸತ್ಯ ಇದು. ಮರಾಠರೇನು ಕಡಿಮೆ ದುಷ್ಟರೆ? ದೇವಸ್ಥಾನಗಳನ್ನು ಕೆಡಹುವುದು ಅಂದರೆ… ನನಗೆ ಯಾರೋ ಹೇಳಿದ್ದರು– ಉಡುಪಿಯಲ್ಲಿ ನಮ್ಮ ಮಠದ ಎದುರುಗಡೆ ಇರುವ ದೇವಸ್ಥಾನ ಜೈನರದ್ದಾಗಿದ್ದಂತೆ. ಇದನ್ನೆಲ್ಲಾ ಸಿಟ್ಟಿನಲ್ಲಿ ನೋಡಬಾರದು. ನಮ್ಮ ಕಾಲದಲ್ಲೇ ನೋಡಿ. ಒಂದು ಆನೆ ಗಣಪತಿಯಾಗಿಬಿಟ್ಟಿತು. ಉತ್ತರ ಪ್ರದೇಶದಲ್ಲಿ ಆನೆ ಗಣಪತಿಯಾಯಿತು. ಯಾಕೆಂದರೆ ಅದು ಆನೆಯ ಒಳಗೇ ಇರುವ ಶಕ್ತಿ-ಗಣಪತಿಯಾಗುವ ಶಕ್ತಿ.ನಾನು ಗಣಹೋಮ ಮಾಡುವುದನ್ನು ನೋಡಿದ್ದೀನಿ. ಗಣಹೋಮ ಮಾಡುವಾಗ ಅವನಿಗೆ ಕಬ್ಬಿನ ಜಲ್ಲೆಯನ್ನೇ ಕೊಡಬೇಕಂತೆ. ಯಾಕೆಂದರೆ ಅವನು ಗಣಪತಿಯೂ ಹೌದು. ಆನೆಯೂ ಹೌದು. ಆನೆಯಾಗಿದ್ದೇ ಗಣಪತಿ. ಹಾಗೆಯೇ ಅಡುಗೆ ಮನೆಯ ಬೆಂಕಿಯಾಗಿದ್ದೇ ಅವನು ಅಗ್ನಿ.ಭೈರಪ್ಪನವರಿಗೆ ಹಿಂದೂ ಧರ್ಮದ ಈ ಒಳಗೊಳ್ಳುವ ಗುಣ ಗೊತ್ತಿರುವಂತೆ ಕಾಣುವುದಿಲ್ಲ. ಅವರಿಗೆ ಕಾದಂಬರಿಯಲ್ಲಿ 'ಅದೃಷ್ಟ'ವಾದದ್ದಕ್ಕೆ, ಅಯೋಜಿತವಾದದಕ್ಕೆ ಎದುರಾಗೋದು ಗೊತ್ತಿಲ್ಲ. ಅಥವಾ ಬೇಕಿಲ್ಲ. ಸುಮ್ಮನೇ ಕಟ್ಟುತ್ತಾ ಕಟ್ಟುತ್ತಾ ಹೋಗುತ್ತಾರೆ. ನಮ್ಮಲ್ಲಿ ಒಂದು ಮಾತಿದೆ `ಬೆರಳು ತೋರಿಸಿ ಅಂಗೈ ನುಂಗು' ಅಂತ. ಒಳ್ಳೆಯ ಅರ್ಥದಲ್ಲಿ ಈ ಮಾತನ್ನು ಗ್ರಹಿಸುವುದಾದರೆ, ಮರಳಿನ ಕಣದಲ್ಲಿ ಇಡೀ ವಿಶ್ವವನ್ನು ಕಾಣುವ ಕಾವ್ಯದ ಧ್ವನಿ ಶಕ್ತಿ ಇದುನನಗೊಂದು ಭರವಸೆ ಇದೆ. ಆವರಣದ ಪ್ರಚಾರಕ್ಕೆಂದು ನಮ್ಮ ಕೆಲವು ಮಾಧ್ಯಮಗಳು ಸಂಘಟಣೆಗಳು ಏನೇ ಮಾಡಲಿ. ಉತ್ತರ ಪ್ರದೇಶದಲ್ಲಿ ಹೇಗೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೋ ಹಾಗೆ ಇಲ್ಲಿಯೂ ಕೈಬಿಟ್ಟರೆ….ಅದು ಭರವಸೆ.ನಾನು ಯಾರೋ ಕೇಳಿದಾಗ ಹೇಳಿದೆ. `ಈ ಪೇಟೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೆ ನನಗೆ ಅದೇನು ಆಶ್ಚರ್ಯ ಹುಟ್ಟಿಸುವುದಿಲ್ಲ. ಅದು ಅನುಕೂಲದ ರಾಜಕೀಯ. ಆದರೆ ಹಳ್ಳಿ ಬ್ರಾಹ್ಮಣರು ಜಾತಿ ಗರ್ವವನ್ನು ಕಳೆದುಕೊಂಡು ಒಬ್ಬ ದಲಿತ ಮಹಿಳೆಯನ್ನು ತಮ್ಮ ನಾಯಕಿ ಎಂದು ಭಾವಿಸಿಕೊಂಡರೆ ಆಗ ಹಿಂದೂ ಧರ್ಮ ಚೈತನ್ಯ ಶಾಲಿಯಾಯಿತು ಎಂದೇ ತಿಳಿಯುತ್ತೇನೆ..ಪಾಕಿಸ್ತಾನದಲ್ಲಿ ಇನ್ನೊಂದು ಜಾನಪದ ಕಥೆಯಿದೆ. ಆ ಕತೆ ಹೀಗಿದೆ: ಜಿನ್ನಾ ನೆಹರೂಗೆ ಒಂದು ಕಾಗದ ಬರೆದನಂತೆ. ಬೊಂಬಾಯಿಯಲ್ಲಿ ನನ್ನದೊಂದು ಮನೆ ಇದೆ. ಅದನ್ನು ಯಾರಿಗೋ ಕೊಟ್ಟುಬಿಡುತ್ತೀರಿ ಅಂತ ಕೇಳಿದೆ. ಕೆಡವುತ್ತೀರಿ ಅಂತ ಕೇಳಿದೆ. ಡಿಯರ್ ಜವಹರ್ ಡೋಂಟ್ ಡು ಇಟ್. ಬಿಕಾಸ್ ವೆನ್ ಐ ರಿಟೈರ್ ಐ ವಾಂಟ್ ಟು ಕಮ್ ಅಂಡ್ ಸ್ಟೇ ದೇರ್. (ಪ್ರ್ರಿಯ ಜವಾಹರ್ ನನ್ನ ಮುಂಬಯಿ ಮನೆ ಮಾರಬೇಡ; ನಿವೃತ್ತನಾದಮೇಲೆ ನಾನು ಆ ಮನೆಯಲ್ಲಿ ವಾಸ ಮಾಡಬೇಕೆಂದಿದ್ದೇನೆ.)ಅದು ನನ್ನ ಒಂದು ರೂಪಕ. ಪಾಕಿಸ್ತಾನಿ ಜಿನ್ನಾಗಳು ದಣಿದು ನಿವೃತ್ತವಾಗಿ ಮುಂಬೈಯಲ್ಲಿ ಬಂದು ಉಳಿದ ಕಾಲವನ್ನು ಕಳೆಯುವುದು. ಅದರ ಮೂಲಕ ನಾವೆಲ್ಲಾ ಒಂದು ನಾಗರೀಕತೆಯಾಗುವುದು. ಎಂದೆಂದಿಗೂ ಆಗಿದ್ದಂತೆ; ಈಗಲೂ ಆಗಬಹುದಾಗುವಂತೆ.. ಆದರೆ ಬೈರಪ್ಪನವರ ರೀತಿಯೇ ಯೋಚಿಸುವವರು ಮಸ್ಲಿಮರಲ್ಲೂ ಹಿಂದೂಗಳಲ್ಲೂ ಹೆಚ್ಚಾದರೆ ಈ ಬಗೆಯ ಕನಸು ಕಾಣುವುದೂ ಸಾಧ್ಯವಿಲ್ಲ. ಆ ರೀತಿ ಯೋಚನೆ ಮಾಡುವವರು ಜನಪ್ರಿಯ ಆದಾಗ ಸ್ವಲ್ಪ ಭಯವಾಗುತ್ತೆ. ಕನಸುಗಳೇ ಇಲ್ಲದ ಸಮಾಜ ಒಂದು ನರಕವೇ ಸರಿ.ಆವರಣದ ರಚನೆಯ ಹಿಂದಿರುವ ಒಂದು ತಮಾಷೆ ಏನೆಂದರೆ ಭೈರಪ್ಪನವರು ಬಳಸುವ ಡಿಬೇಟರ್ ತಂತ್ರ. ಇದನ್ನೆಲ್ಲಾ ಹೇಳುವುದಕ್ಕೆ ಒಬ್ಬ ಒಕ್ಕಲಿಗರ ಹುಡುಗಿಯೇ ಆಗಬೇಕು. ಇಲ್ಲಿರುವ ರಾಜಕಾರಣದ ಭರವಸೆ ಏನಪ್ಪಾ ಅಂದರೆ ಒಕ್ಕಲಿಗರು, ಲಿಂಗಾಯತರು. ಬ್ರಾಹ್ಮಣರು ಎಲ್ಲಾ ಒಟ್ಟಾಗುತ್ತಾರೆ ಅಂತ. ಅದು ಬಜೆಪಿ ವರ್ಸೆಸ್ ಸೆಕ್ಯುಲರ್ ಜೆಡಿ ಹೋಪ್; ಅಥವಾ ಬಿಜೆಪಿ ಪ್ಲಸ್ ಸೆಕ್ಯುಲರ್ ಜೆಡಿ ಹೋಪ್.ನನಗೆ ಬಹಳ ತಮಾಷೆ ಅನ್ನಿಸಿದ್ದನ್ನು ಹೇಳುತ್ತೇನೆ. ಗಂಡ-ಹೆಂಡತಿ ಬಹಳ ದಿವಸದ ನಂತರ ಆವರಣದಲ್ಲಿ ಅಕ್ಕ-ಪಕ್ಕ ಮಲಗಿದಾಗ ಮಾತಾಡ್ತಾರೆ. ಒಕ್ಕಲಿಗ ಹೆಂಡತಿ ಮುಸ್ಲಿಂ ಗಂಡನಿಗೆ ಎಷ್ಟು ದೇವಸ್ಥಾನಗಳನ್ನು ಮುಸ್ಲಿಮರು ಒಡೆಸಿದರು ಅಂತ ಸುಮಾರು ೩೦ ಹೆಸರುಗಳನ್ನು ಇರಬಹುದು- ನನ್ನ ಎಣಿಕೆಯಲ್ಲಿ ತಪ್ಪಿದ್ದರೆ ಕ್ಷಮಿಸಿ- ಹೇಳುತ್ತಾಳೆ. ಗಂಡನ ಪಕ್ಕದಲ್ಲಿ ಮಲಗಿಕೊಂಡು ಅವಳು ಮಾತಾಡುವುದು ಇದು. ಟಿಪ್ಪಣಿ ಸಹಿತ. ಇದು ಭೈರಪ್ಪನವರ ಕಾದಂಬರಿಯಲ್ಲಿ ಮಾತ್ರ ಸಾಧ್ಯ. ಯಾವ ಹಾಸಿಗೆಯ ಮೇಲೂ ಇದು ನಡೆಯಲ್ಲ ಅಂತ ಹೇಳಿ ನನ್ನ ಮಾತು ಮುಗಿಸುತ್ತೇನೆ.

-ಯು.ಆರ್.ಅನಂತಮೂರ್ತಿ

TEJASVI, a Profound Writer in a Comic Mode

Beerendranath Bhattacharya, a well-known Assamese writer met when he was President of the Sahitya Akademi, Gopalakrishna Adiga and asked him to name for an outsider like him the greatest creations of Kuvempu. Adiga was at that time known as a critic of Kuvempu’s grand style in poetry and from that criticism the ‘Navya’ literary movement had drawn ideas for a new language and idiom in Kannada poetry. I was also a strong defender of Adiga’s literary position, although, now looking back, I am aware of its creative strength and, at the same time, its intellectual and aesthetic short-comings.

Adiga was an outspoken writer and critic and his response to Bhattacharya adds a new meaning and a metaphorical dimension to what I just now have written. Adiga named the two great novels of Kuvempu, Kanooru Heggdathi and Malegalalli Madumagalu and was silent for a while making Bhattacharya guess what would be the third wok. Kuvempu’s Ramayana Darshana? No. Adiga replied: ‘the third great creation is his son, Purna Chandra Tejasvi.’

The young Tejasvi was closer at that point of time to the writers in the ‘Navya’ tradition than to followers of his great father, the best of whom wrote in an expansive, spiritually oriented style. This was true of most of the writers of pre-independent India. The best of them have come out of these influences and found their own paths. Tejasvi himself whom I knew from his student days outgrew the ‘Navya’ influence as well and found his own path. He is unique among the bunch of writers who emerged in the ‘Navya’literary movement.for he is present in his works only as an eye- a wondering compassionate eye. The narrative mode he chose is not consciously plotted to uphold any ideology. Yet one can say that Tejasvi would not have written what he wrote had he not come under the influence of Lohia, and the movement for decentralization and empowerment of the backward masses of India. He shared his concerns with people of great courage like the Raitha Sangha leader Nanjundaswamy, rationalist Ramdas and iconoclast Lankesh. Tejasvi was philosophically an anarchist (such an element is there in both Gandhi and Lohia too) and he could not wholly identify himself with any movement.

Tejasvi felt that the navya writers were getting too self-absorbed and in creative reaction he opened a new world in his fiction. From my knowledge of Indian writing in the bhashas I would say that Tejasvi is one of the great writers in whom the moffusil India got expressed. In the other writers there is the rural India and the city but not the bizarre world of the moffusil India.

His story ‘the post office in abachur’ is comic in tone but it has a sub text too. The post master there is a self deluded person for he imagines that being a post master he represents the central government. There is another story ‘tabarana kathe’ which became a famous film. It is a Kafkaesque story of bureaucracy. There is another called ‘Avanathi’ which describes life in a village with extraordinary characters but they don’t know what they are. The most beautiful woman in that village is valued only for her breast milk which can cure eye sores. A person who could have been a great artist becomes a degenerate carpenter and a handy man for the villagers.

Tejasvi wrote novels which again are unique. None of us, his contemporaries could have written any of them for although we came from villages we were urbanized and knew our villages only nostalgically. Tejasvi after his masters did not become a professor like any of us although he was the son of a great poet and vice-chancellor. He wrote about a world in which he lived — a world which is shaping the new India and its democracy.

Tejasvi’s style in his fiction is not high-mimetic but low-mimetic, as it is in another important dalit writer, Devanuru Mahadeva. The comic element not only makes him eminently readable but gives him a compassionate view. He has all sorts of characters- cheats, liars, goondas, rabble rousers but they seem to be gifted people who degenerate because they have no possibility of growing to their full ability in a restricted and restricting society.

One of his greatest creations is Mandanna of the novel Karvallo. If much of our writing in Kannada can be read as allegories of decolonization, the novel Karvallo which reads like science fiction has a great metaphor for this process in the relationship between Mandanna, almost a village idiot and the man of scientific curiosity Karvallo. Mandanna looks idiotic but he has an abundant source of indigenous knowledge. He does not know the value of what he knows. He has seen a mysterious flying lizard which can illumine a biologist’s world of knowledge. The novel moves at a leisurely phase and the reader can’t even suspect that there are great hidden meanings in the narration. Tejasvi broke away from the ‘navya’ style of writing because he wanted an unselfconscious style; he broke away from the seekers of spiritual meanings because they also deliberately plotted their meanings. Tejasvi’s narration is like aalaap in music. He seems to follow where the story leads him by its own inner logic.

It may look like a paradox. He frees his narration from discursiveness, but produces a philosophical narrative. He frees himself from the so called Indian preoccupation with ‘the spiritual’ but produces a sense of vismaya- wonder which is at the root of all spiritual experiences.

I would say that Tejasvi combined in himself the best of the two great writers Kuvempu and Karanth. He is adventurous like Karant- he was a gifted photographer, learnt sitar and wrote on scientific subjects in a friendly style for the young. He delighted in fishing. and wandered in forests opening himself to the mystery of nature with a scientific curiosity. Kuvempu’s novels are also unstructured , vast canvasses of people and nature where nothing is big and nothing is low and the quotidian is the eternal unending music of life.. Tejasvi gets this from his father but the element of curiosity in his dealings with nature is reminiscent of Karant’s writing. Tejasvi is also an unselfconscious artist; more unselfconscious than Kuvempu, I would say. The pervasive comic sense makes this possible and the comic sense is subtle enough to allow many sub-texts in the narration.

Among my contemporaries, I have seen the fiery Lankesh in a suit, Adiga in a tie less suit but never Tejasvi. He wore loose shirts and loose jeans. He could never participate in ritualistic formal functions. (He once jeered at my weakness for formal functions)He loved to be at ease, as he expressed this in his loose informal clothes and in his prose style as well. . He lived intensely and died in the same manner he lived. He ate a good meal with Rajeswari whom he had loved and married without rituals, his lovely children and grand children washed his hands and died. But he was engaged until the last minute of his life. His wife told me that in the morning he had a meeting with people of his village and was concerned with the health of some village tanks. He always spoke his mind with politicians and officers directly and unceremoniously when it concerned the common interests of the people around him. He is one of the great writers of our times in India and if I say he died prematurely it is literally true for he was creative until he died.

We had some arguments when he was alive. I would have asked him ‘are you not dangerously becoming a charming writer? You seem so self-contained in your rural estate, while globalization is destroying agriculture and our languages?’ He had once told me that he would be happy if globalization and modernization destroyed our caste system. He often said what came most immediately to his mind but he made great literature out of the conflict of ideas in him as all good writers do. He had rejected caste and communal politics and was disgusted with the corruption that has become an organic component of our democratic politics. I just heard from one of his friends that he was shocked by a hate novel in Kannada which has seen many editions in a month. I wonder whether Tejasvi, like all great writers, would have found the necessity to make new experiments in his mode of writing to counter such cheap but dangerously propagandist popular writing in the creatively controversial democratic Kannada literary world.

We have lost some great creative minds in Kannada one after another—Lankesh, D R Nagaraj, Ramachandra Sharma and now Tejasvi.

ವಿಸ್ಮಯ ದರ್ಶನದ ತೇಜಸ್ಸು

ತೇಜಸ್ವಿ ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ. ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು. ವಯಸ್ಸು ಇಪ್ಪತ್ತಮೂರೋ ಇಪ್ಪತ್ತನಾಲ್ಕೋ ಇರಬೇಕು. ಕಾಟನ್‌ ಸೂಟ್‌ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ ಹೋಗ್ತಿದ್ದೆ. ಮೈಸೂರಿನ ಶಿಕ್ಷಣ ಒಗ್ಗದೆ (ಅಥವಾ ಅದಕ್ಕೆ ಬಗ್ಗದೆ) ಶಿವಮೊಗ್ಗ ಕಾಲೇಜು ಸೇರಿದ ತೇಜಸ್ವಿಗೆ ಹದಿನೇಳೋ ಹದಿನೆಂಟೋ ವರ್ಷ ವಯಸ್ಸು. ಒಂದು ಸಲ ತೇಜಸ್ವಿ ನನ್ನನ್ನು ಹೊರಗಡೆ ಕರೆದು, ಒಂದು ಮೂಲೆಯಲ್ಲಿ ನಿಲ್ಲಿಸಿ, `ಸಾರ್‌, ಒಂದು ಪ್ರಶ್ನೆ ಕೇಳ್ಬೇಕು’ ಅಂದರು. ಏನು ಅಂತ ಕೇಳಿದ್ದಕ್ಕೆ `ನೀವು ಹೇರ್‌ಕಟ್‌ ಮಾಡ್ಸೋದಕ್ಕೆ ಪ್ರತೀ ತಿಂಗಳು ಬೆಂಗಳೂರಿಗೆ ಹೋಗ್ತೀರಂತೆ, ನಿಜವಾ?’ ಅಂತ ಹುಸಿ ಕೋಪದಲ್ಲೂ ಹಾಸ್ಯದಲ್ಲೂ ಕೇಳಿದ್ದರು. ನಾನು ಖುಷಿಪಟ್ಟು ನಕ್ಕಿದ್ದೆ.

ನನ್ನನ್ನು ಇಷ್ಟಪಟ್ಟಿದ್ದ ತೇಜಸ್ವಿಗೆ ನಾನೊಬ್ಬ ಖಯಾಲಿ ಮನುಷ್ಯ ಎಂದು ಯಾರೋ ತುಂಟರು ಹೇಳಿದ್ದು ಕೇಳಿ ಸಿಟ್ಟು ಬಂದಿತ್ತು; ಅನುಮಾನವೂ ಹುಟ್ಟಿತ್ತು. ಆವತ್ತಿನಿಂದಲೇ ತೇಜಸ್ವಿ ನನ್ನ ಮನಸ್ಸಿನ ಜಗತ್ತಿಗೆ ಹತ್ತಿರವಾಗಿದ್ದು. ಕ್ರಮೇಣ ನಾನು ಯಾವುದೋ ಪುಸ್ತಕ ಓದಿ ಎಂದು ಅಂತ ತೇಜಸ್ವಿಗೆ ಹೇಳಿದರೆ, ಅವರದನ್ನ ಓದಿ `ಸಾರ್‌, ಮಹಾ ಬೋರ್‌!’ ಅಂತ ಹೇಳುತ್ತ ಇದ್ದರು- ಮುಜುಗರವಿಲ್ಲದೆ.

ತಮ್ಮ ಭಾವನಾಲೋಕದಲ್ಲಿ ತೇಜಸ್ವಿ ಯಾವತ್ತೂ ಕೃತಕರಾಗಲಿಲ್ಲ. ಒಬ್ಬ ಲೇಖಕನಾದವನು ಆಕರ್ಷಕವಾಗಲೆಂದೋ, ಉದಾತ್ತವಾಗಿ ತೆರಲೆಂದೋ ತನ್ನ ಭಾವನೆಗಳಲ್ಲಿ ಸುಳ್ಳನಾಗಬಾರದು. ಹಾಗಾದಾಗ ಆತನ ಬರವಣಿಗೆಯ ಶೈಲಿಯೂ ಕೃತಕ ಅನಿಸುತ್ತೆ. ತೇಜಸ್ವಿ ತಮ್ಮ ಭಾವನೆಗಳನ್ನು ತನ್ನೊಳಗೇ ತಿಳಿಯುವುದರಲ್ಲೂ ವ್ಯಕ್ತಪಡಿಸುವುದರಲ್ಲೂ ಅಪ್ಪಟನಾಗಿದ್ದ ಮನುಷ್ಯ. ಅವರ ವಿದ್ಯಾರ್ಥಿ ದಿನಗಳಿಂದ ಅವರು ಸಾಯುವ ತನಕವೂ.

ಅವರ ಜೊತೆಗೆ ಯಾವಾಗಲೂ ಒಂದಿಬ್ಬರು ಸ್ನೇಹಿತರು ಇರುತ್ತ ಇದ್ದರು. ಒಬ್ಬರು ಕಡಿದಾಳ್‌ ಶಾಮಣ್ಣ, ಇನ್ನೊಬ್ಬರು ಶ್ಯಾಂಸುಂದರ್‌ ಅಂತ. ಸಂಗೀತವೆಂದರೆ ಹುಚ್ಚರಾಗುವ ಕಡಿದಾಳ್‌ ಶ್ಯಾಮಣ್ಣ ತಮ್ಮ ಹಲ್ಲುಗಳನ್ನೇ ದಂತವಾದ್ಯ ಮಾಡಿ ನಮ್ಮನ್ನು ನಗಿಸಿದರೆ, ಶ್ಯಾಂಸುಂದರ್‌ ಅಂತೂ ಬಾಯಾರಿದಾಗ ಒಂದು ಕೊಡ ನೀರು ಕುಡಿಯೋ ಮನುಷ್ಯ. ತೇಜಸ್ವಿ ಎಷ್ಟು ವಿಚಿತ್ರ ವ್ಯಕ್ತಿಯೋ ಅವರ ಒಡನಾಡಿಗಳೂ ಅಷ್ಟೇ ವಿಚಿತ್ರ ವ್ಯಕ್ತಿಗಳು. ತಮ್ಮ ಸ್ನೇಹಿತರನ್ನು ಕಂಡು ನಗುವಂತೆಯೇ ತಮ್ಮ ಪಾತ್ರಗಳನ್ನು ಕಂಡೂ ನಗುವ ಮನುಷ್ಯ ತೇಜಸ್ವಿ.

***

ಮೈಸೂರಿಗೆ ಬಂದ ನಂತರ- ನಾನಾಗ ಕ್ರಿಶ್ಚಿಯನ್‌ ಹುಡುಗಿಯನ್ನು ಮದುವೆಯಾಗಿದ್ದೆ- ನನಗೊಂದು ಬಾಡಿಗೆ ಮನೆ ಬೇಕಾಗಿತ್ತು. ಅದೂ ಕಡಿಮೆ ಬೆಲೆಗೆ, ಮಡಿವಂತರು ಇಲ್ಲದ ಜಾಗದಲ್ಲಿ. ತೇಜಸ್ವಿ ತಮ್ಮ ಸಂಬಂಧಿಕರ ಔಟ್‌ಹೌಸ್‌ ಒಂದರಲ್ಲಿ ಮನೆ ಮಾಡಿಸಿಕೊಟ್ಟರು. ಅಲ್ಲಿಗೆ ಕೆಲವೊಮ್ಮೆ ತೇಜಸ್ವಿ ಬೆಳಿಗ್ಗೆ ಬಂದರೆ ಸಾಯಂಕಾಲದ ತನಕ ಹರಟುತ್ತಿದ್ದೆವು. ಹಾಗೇ ಬೈಸಿಕಲ್‌ ಮೇಲೆ ಡಬಲ್‌ ರೈಡ್‌ ಮಾಡಿಕೊಂಡು ಕಾಫಿ ಹೌಸ್‌ಗೆ ಹೋಗುತ್ತಿದ್ದೆವು. ಈ ಬೈಸಿಕಲ್‌ ಪ್ರಯಾಣದಲ್ಲೇ ಒಮ್ಮೆ ಅವರು ಸಾವನ್ನು ಎದುರಿಸಿ ಬಂದಿದ್ದರು. ರಾತ್ರಿ ಹೊತ್ತು. ಎದುರಿನಿಂದ ಒಂದೇ ಕಣ್ಣು ಮಾಡಿ ಕೊಂಡು ಒಂದು ಲಾರಿ ಬರುತ್ತ ಇತ್ತು. ಒಂದೇ ಲೈಟ್‌ ಇರೋದ್ರಿಂದ ತೇಜಸ್ವಿ ಅದು ಬೈಕ್‌ ಇರಬಹುದು ಅಂದುಕೊಂಡು ಹೋಗುತ್ತಿ ದ್ದರು. ಹತ್ತಿರ ಬಂದಾಗ ನೋಡಿದರೆ ಲಾರಿ. ಥಟ್ಟನೆ ಅದು ಹೇಗೋ ಬೈಸಿಕಲ್‌ ತಿರುಗಿಸಿ ಪಾರಾಗಿ ಬಂದು ಬದುಕುಳಿದ ವಿಸ್ಮಯವನ್ನು ನಮ್ಮೊಡನೆ ಹಂಚಿಕೊಂಡಿದ್ದರು. ಅವರು ಸತ್ತುಹೋದರು ಅಂತ ತಿಳಿದಾಗ ನನಗೆ ಮೊದಲು ನೆನಪಿಗೆ ಬಂದಿದ್ದು ಈ ಘಟನೆ.

ತೇಜಸ್ವಿ ಎಲ್ಲದಕ್ಕೂ ಸ್ಪಂದಿಸುತ್ತಿದ್ದರು, ನನಗೆ ಲೋಹಿಯಾ ಓದುವ ಹುಚ್ಚು ಹಿಡಿಯಿತು, ಅವರಿಗೂ ಹಿಡಿಯಿತು. ಹಾಗೆಯೇ ಪರಮಹಂಸರ ದಿನಚರಿಗಳನ್ನು ಕಥಿಸುವ ಪುಸ್ತಕ. ನನಗೆ ಕುವೆಂಪು ಕಾದಂಬರಿಗಳೆಂದರೆ ಇಷ್ಟ. ಅವರ ಕಾವ್ಯದ ತಾತ್ವಿಕತೆಯಲ್ಲಿ ನನ್ನಂಥ ವರಿಗೆ ಆಗ ಅಷ್ಟು ಶ್ರದ್ಧೆ ಇರಲಿಲ್ಲ. ತೇಜಸ್ವಿ ನವ್ಯರೆಂದು ಗುರುತಿಸಿ ಕೊಂಡವರ ಜೊತೆ ಬೆಳೆದರು. ಅವರು ತಂದೆಯ ಸುತ್ತ ಇದ್ದ ಆಧ್ಯಾತ್ಮಿಕರ ಪ್ರಪಂಚದಿಂದ ತೀರಾ ಪ್ರಭಾವಿತರಾಗಿರಲಿಲ್ಲ. ತಂದೆ ಯನ್ನು ಹತ್ತಿರದಿಂದ ಬಲ್ಲವರಾದ್ದರಿಂದ ಅವರ ತಂದೆಯ ನಿಜವಾದ ಪ್ರತಿಭೆ ಅವರಿಗೆ ಗೊತ್ತಿತ್ತು. ಅವರ ಅಣ್ಣನ ನೆನಪಿನಲ್ಲಿ ಇದನ್ನು ನಾವು ಗಮನಿಸಬಹುದು.

ತೇಜಸ್ವಿ ಅವರ `ಲಿಂಗ ಬಂದ’ ಕಥೆ ಪ್ರಕಟವಾದಾಗ ಅಡಿಗರು ನನ್ನನ್ನು ಕರೆದು `ಅನಂತಮೂರ್ತಿ, ನೋಡಿದ್ರಾ? ತೇಜಸ್ವಿ ಇದ್ದಾನಲ್ಲ, ಅದ್ಭುತ ಕಥೆ ಬರೆದಿದ್ದಾನೆ. ಆತ ಸಾಹಿತ್ಯ ಪ್ರಪಂಚಕ್ಕೆ ಹೊಸ ಲೋಕವನ್ನೇ ತರ್ತಾನೆ ನೋಡು’ ಅಂದಿದ್ದರು.

ಕುವೆಂಪು ಅವರು ವಿಶ್ವವಿದ್ಯಾಲಯದ ಕುಲಪತಿ ಆದಾಗ ತೇಜಸ್ವಿ ವಿದ್ಯಾರ್ಥಿಯಾಗಿದ್ದರು. ಆದರೆ ಅಧಿಕಾರದಲ್ಲಿ ಇದ್ದ ಅಪ್ಪ ನಿಗೂ ತನಗೂ ಏನೂ ಸಂಬಂಧವಿಲ್ಲ ಎನ್ನುವ ಹಾಗೆ ಸ್ವತಂತ್ರವಾಗಿ ಇದ್ದರು. ವೈಸ್‌ ಚಾನ್ಸಲರ್‌ಗೆ ಅಂತ ಮೈಸೂರಿನಲ್ಲಿ ಕೊಟ್ಟಿದ್ದ ಮನೆ ಯಲ್ಲಿ ಕುವೆಂಪು ಇರುತ್ತಲೇ ಇರಲಿಲ್ಲ. ತಮ್ಮ ಸ್ವಂತದ ಮನೆಯಲ್ಲೇ ಇರುತ್ತಿದ್ದರು. ಹಾಗಾಗಿ ಸದಾ ದೊಗಲೆ ಪೈಜಾಮ, ಶರ್ಟು ಹಾಕಿಕೊಳ್ಳುತ್ತಿದ್ದ ತೇಜಸ್ವಿ ಮತ್ತು ಅವರ ಸ್ನೇಹಿತರು ಆ ಮನೆಯಲ್ಲಿ ಬಟ್ಟೆಗಿಟ್ಟೆ ಒಣಗಿ ಹಾಕಿ, ಮಲಗಿ, ಓದಿಕೊಂಡು, ಹರಟೆ ಹೊಡೆಯುತ್ತಾ ಇರುತ್ತಿದ್ದರು.

***

ಒಳ್ಳೆಯ ಲೇಖಕನಾಗಲು ಇರಬೇಕಾದ ಗುಣಗಳೆಂದರೆ ಜಾತಿ ಮೋಹದಿಂದ , ವರ್ಗ ಮೋಹದಿಂದ, ಅಧಿಕಾರ ಮೋಹದಿಂದ ಮುಕ್ತವಾಗಿರುವುದು. ತೇಜಸ್ವಿ ಇವೆಲ್ಲವುಗಳಿಂದಲೂ ಮುಕ್ತರಾಗಿ ದ್ದರು. ತೇಜಸ್ವಿ ಆಗಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. ಅವರು ಏನು ಬರೆದರೂ ನಾವು ಓದುತ್ತ ಇದ್ದೆವು. ಅವರೂ ನಾವು ಬರೆದಿದ್ದನ್ನು ಓದುತ್ತಿದ್ದರು. ನಾನು `ಕಾರ್ತಿಕ’ ಕತೆ ಬರೆದಾಗ ಕತೆ ಅಂದರೆ ಹೇಗಿರುತ್ತೆ ಅನ್ನೋ ದೃಷ್ಟಿಯನ್ನೇ ಇದು ಬದಲು ಮಾಡುತ್ತೆ ಅಂತ ಅವರು ನನಗೆ ಹೇಳಿದ್ದರು. ನನಗಿಂತ ಕಿರಿಯರು ಅವರು. ಕೆಲವೊಮ್ಮೆ ನಮ್ಮನ್ನು ಬೆಳೆಸಿದವರಲ್ಲಿ ನಮಗಿಂತ ಕಿರಿಯರೂ ಇರುತ್ತಾರೆ. ಹಾಗಿರುವುದಕ್ಕೆ ಸಾಧ್ಯವಿದ್ದ ಕಾಲ ನಮ್ಮದು. ನನಗೂ ತೇಜಸ್ವಿಗೂ ನಡುವಿನ ಭಿನ್ನಾಭಿಪ್ರಾಯಗಳು, ವಾಗ್ವಾದಗಳು ಅನೇಕ. ಇವೆಲ್ಲವೂ ಕಲಿಯುವ ಕಲಿಸುವ ಸಂಗತಿಗಳಾದುವೇ ಹೊರತು ನಮ್ಮಲ್ಲಿ ಕಹಿ ಹುಟ್ಟಿಸಲಿಲ್ಲ.

ಆಮೇಲೆ ಅವರ ಕಥಾ ಸಂಕಲನ ಹೊರಬಂತು. ನನ್ನ ಪ್ರಕಾರ, ನವ್ಯದ ಅತಿರೇಕದಿಂದ ಕನ್ನಡ ಸಾಹಿತ್ಯವನ್ನು ಬಿಡುಗಡೆ ಮಾಡಿದವರು ತೇಜಸ್ವಿ. ನವ್ಯದ ಸಾಂಕೇತಿಕತೆ ಮತ್ತು ಒಳಮನಸ್ಸಿನ ಪದರುಗಳನ್ನು ಅದು ಬಿಚ್ಚುವ ಕ್ರಮ- ಕ್ರಮೇಣ ಸ್ವಾನುರಕ್ತಿಯ ದಿಕ್ಕಿಗೆ ಹೋಗುತ್ತ ಇರಬಹುದು ಅನ್ನುವ ಅವರ ಆಗಿನ ಭಾವನೆ ಆರೋಗ್ಯಕರ ಭಾವನೆ ಅಂತ ಈಗ ನನಗೆ ಅನ್ನಿಸುತ್ತಿದೆ.
ಆ ಕಾಲದ ಬರವಣಿಗೆಗೆ ಒಂದು ಹೊಸ ದಿಕ್ಕನ್ನು ನಮ್ಮ ನಡುವೆ ಕೊಟ್ಟವರು ತೇಜಸ್ವಿ. ಆ ದಿನಗಳಲ್ಲಿ ನನಗೆ ಮುಖ್ಯವಾದ ಬರಹ ಗಾರರು ಅಂತ ಅನಿಸುತ್ತಿದ್ದದ್ದು ಲಂಕೇಶ್‌ ಮತ್ತು ತೇಜಸ್ವಿ. ತೇಜಸ್ವಿ ಒಂದು ನಾಟಕವನ್ನೂ ಬರೆದರು. `ವ್ಯಕ್ತಿ ವಿಶಿಷ್ಟ ಸಿದ್ಧಾಂತ’ ಅಂತ ಒಂದು ಪುಸ್ತಕವನ್ನೂ ಬರೆದರು. ಒಟ್ಟಿನಲ್ಲಿ ಅವರು ಹಿಂದೂ ಮತೀಯತೆಯನ್ನು ತಿರಸ್ಕರಿಸಿದರು. ನವೋದಯದ ಕೆಲವರ ಅಪಕ್ವ ಆಧ್ಯಾತ್ಮಿಕತೆಯಿಂದ ದೂರವಾದರು.

ಪರಮಹಂಸರಿಂದ ಪ್ರಭಾವಿತರಾದವರಲ್ಲಿ ನನಗೆ ಕಂಡಂತೆ ಹೆಚ್ಚಿನವರು ಮತೀಯತೆಯಿಂದ ಮುಕ್ತರಾಗಿರುತ್ತಾರೆ. ಕುವೆಂಪು ಮತೀಯತೆಯಿಂದ ಮುಕ್ತರಾಗಿದ್ದರು. ತೇಜಸ್ವಿ ಅದರಿಂದ ಮುಕ್ತರಾದದ್ದು ಮಾತ್ರವಲ್ಲದೆ ಸತತ ಆತ್ಮಾವಲೋಕನದ ನವ್ಯದ ಗೀಳನ್ನು ಬಿಟ್ಟರು. ಬಿಡುವುದಕ್ಕಿಂತ ಮುಂಚೆ ಅದೇ ರೀತಿಯ ಒಂದು ಕಥೆಯನ್ನೂ ಬರೆದಿದ್ದರು. ನವ್ಯದ ಹೊಟ್ಟೆಯೊಳಗಿಂದಲೇ ಬಂದಿರು ವಂಥ ವಿರೋಧ ಅದು. ಅದರ ಒಳಗಿನಿಂದ ಬಂದಿರೋದಿಂದಲೇ ಅದು ಸತ್ವಯುತವಾಗಿತ್ತು. ತೇಜಸ್ವಿ ಬರೆದಿದ್ದರಲ್ಲಿ ಹೊರಗಿನ ದಟ್ಟವಾದ ಪ್ರಪಂಚಕ್ಕೆ ಲೇಖಕನ ಹಂಗಿಲ್ಲದ ಅಭಿವ್ಯಕ್ತಿ ಸಿಕ್ಕಿತು. ಸೂಕ್ಷ್ಮವಿವರಗಳಲ್ಲಿ ಆ ಪ್ರಪಂಚವನ್ನು ಅಡಗಿ ಕಾಣುವಷ್ಟಕ್ಕೇ ಅಲ್ಲಿ ಲೇಖಕ ಇರುವುದು. ಅದು ಏಕಕಾಲಕ್ಕೆ ವಾಸ್ತವಿಕವೂ ಗ್ರಹಿಕೆಯ ವಿಶಿಷ್ಟತೆಯಿಂದಾಗಿ ಸಾಂಕೇತಿಕವೂ ಆಗಿರುತ್ತಿತ್ತು. ಇನ್ನೊಂದು ಮಹತ್ವದ ವಿಚಾರವೆಂದರೆ ಅವರು ಬರವಣಿಗೆಯನ್ನು ಸಡಿಲಗೊಳಿ ಸಿದ್ದು. ಹಾಗೆ ಸಡಿಲಗೊಳಿಸಿದ್ದರಿಂದ ಅದು ಹೆಚ್ಚು ವಿಷಯಗಳನ್ನು ಒಳಗೊಳ್ಳುವ ಸಾಧ್ಯತೆ ಹೆಚ್ಚಿತು. ಇದನ್ನು ಒಂದು ರೀತಿಯಲ್ಲಿ ಆರಾಮಾಗಿ ಬರೆಯುವುದು ಎನ್ನಬಹುದು. ಆರಾಮ ಶೈಲಿಯಲ್ಲಿ ಬರೆದಿದ್ದರಿಂದ ಅದಕ್ಕೆ ಓದಿಸಿಕೊಂಡು ಹೋಗುವ ಗುಣವೂ ಇತ್ತು ಮತ್ತು ಅದು ಹೊರ ಪ್ರಪಂಚವನ್ನು ವಿಸ್ಮಯದಿಂದ, ಹಲವೊಮ್ಮೆ ವಿನೋದದಿಂದ ನೋಡುವ ಶಕ್ತಿಯನ್ನೂ ಪಡೆದುಕೊಂಡಿತು.

ತೇಜಸ್ವಿ ಅವರು ಸಣ್ಣ ಕತೆಯನ್ನು ನಿರಾಳಗೊಳಿಸಿದರು. ಆದ್ದರಿಂದ ಅದು ಕೇವಲ ವಿಲಕ್ಷಣವಾದ್ದನ್ನು ವಿಲಕ್ಷಣವಾಗಿ ಮಾತ್ರ ಹೇಳದೆ ನಮ್ಮ ಕಾಲದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಕಾಣುವಂತೆ ಮಾಡಿತು. `ಅಬಚೂರಿನ ಪೋಸ್ಟಾಫೀಸು’ ಕತೆ ಅಂತಹ ಹಲವಾರು ಕತೆಗಳಿಗೆ ಒಂದು ಮಾದರಿ. ಹಳ್ಳಿಯಲ್ಲಿ ಪೋಸ್ಟಾಫೀಸು ಬರೋದು ಸೆಂಟ್ರಲ್‌ ಗವರ್ನಮೆಂಟ್‌ ಹಳ್ಳಿಯಲ್ಲಿ ಇದ್ದಹಾಗೆ. ಅವರ ಕತೆಗಳಲ್ಲೇ ನನಗೆ ಅತ್ಯಂತ ಪ್ರಿಯವಾದ್ದು `ಅವನತಿ’. ಆ ಕತೆಯಲ್ಲಿ ಒಬ್ಬಳು ಪರಮ ಸುಂದರಿ ಬರುತ್ತಾಳೆ. ಆದರೆ ಆ ಹಳ್ಳಿಗರ ಕಣ್ಣಿಗೆ ಅವಳ ಮೊಲೆಗಳು ಕಣ್ಣಿನ ರೋಗವನ್ನು ಗುಣ ಮಾಡುವಂಥ ಹಾಲನ್ನು ಹೊಂದಿರುವ ಮೊಲೆಗಳು ಮಾತ್ರ! ಇಲ್ಲೊಬ್ಬ ಕಲಾವಿದ ಬರುತ್ತಾನೆ. ಅವನು ಸಣ್ಣಪುಟ್ಟ ರಿಪೇರಿ ಕೆಲಸ ಮಾಡುವ ಬಡಗಿಯಾಗಿರುತ್ತಾನೆ. ನನ್ನ ಪ್ರಕಾರ, ಈ ಕತೆಗೆ ಅಖಿಲ ಭಾರತೀಯ ಮಹತ್ವವಿದೆ. ಆಲ್‌ ಇಂಡಿಯಾ ಅಂಥಾಲಜಿಯಲ್ಲಿ `ಅವನತಿ’ ನಮ್ಮ ಕಾಲದ ಮುಖ್ಯವಾದ ಕತೆ ಆಗಬಹುದು.

ತೇಜಸ್ವಿ ಅವರ ಕಾದಂಬರಿಗಳು ಕೂಡ ಹೀಗೇ ಸುಲಭವಾಗಿ ಓದುವಂತಿರುತ್ತವೆ. ಆದರೆ ಅವರು ಹೇಳಿದ್ದರಲ್ಲಿ ಗಾಢವಾದ, ಗುಪ್ತವಾದ ಒಳಪಠ್ಯಗಳಿರುತ್ತವೆ. ನೇರ ಸಾಗುವಂತೆ ಕಾಣುವ ಕಥನದಲ್ಲಿ ಹೀಗೆ ಇಣುಕುವ ಹಲವು ಒಳಪಠ್ಯಗಳು ಇರುವುದರಿಂದಲೇ ಅವರ ಬರವಣಿಗೆಗೆ ಒಂದು ರೀತಿಯ ಗಾಢತೆ, ಗೌಪ್ಯತೆ ಎರಡೂ ಒದಗುತ್ತವೆ.

ಅವರ ಜೊತೆಗೆ ನನ್ನದೊಂದು ತಕರಾರಿತ್ತು. ಅವರ `ಕರ್ವಾಲೋ’ ಕಾದಂಬರಿಯಲ್ಲಿ ಒಂದು ಹಾರುವ ಓತಿ ಬರುತ್ತದೆ. ಇದು ಸೃಷ್ಟಿಯ ವಿಕಾಸ ಪಥದಲ್ಲಿ ಇರುವ ಒಂದು ಅದ್ಭುತ ಜೀವಿ. ಅದರ ಜ್ಞಾನ ಇರುವುದು ಆ ಜ್ಞಾನದ ಬೆಲೆ ಏನೆಂದು ಏನೂ ತಿಳಿಯದ ಒಬ್ಬ ಹಳ್ಳಿಗನಲ್ಲಿ. ಆದರೆ ಅದನ್ನು ಬಳಸಿಕೊಳ್ಳುವವನು ಒಬ್ಬ ಸೈಂಟಿಸ್ಟ್‌. ತೇಜಸ್ವಿಗೆ ಸೈನ್ಸ್‌ ಬಗ್ಗೆ ಎಂಥಾ ನಂಬಿಕೆ ಅಂದರೆ ಅದು ಜನಸಾಮಾನ್ಯರಲ್ಲಿರುವ ಎಲ್ಲಾ ಜ್ಞಾನವನ್ನು ದೋಚುತ್ತೆ ಎಂಬ ಅಪಾಯದ ಕಡೆ ಅವರ ಅರಿವಿಲ್ಲ. ಅಮೆರಿಕಾದವರು ಎಲ್ಲವನ್ನೂ ಗ್ಲೋಬಲೈಸ್‌ ಮಾಡಿ ದೋಚಿಕೊಂಡು ಹೋದ ಹಾಗೆ ಇದು ಎಂದು ಕಥೆಯನ್ನು ಮೆಚ್ಚಿದ ನನ್ನ ತಕರಾರು. ನನ್ನ ತಕರಾರು ತೇಜಸ್ವಿಗೆ ಗೊತ್ತಿತ್ತು. ಆದರೆ ಬರೆದು ಮುಗಿಸಿಯಾದ ಮೇಲೆ ತಮ್ಮ ಕೃತಿಗಳನ್ನು ತೇಜಸ್ವಿ ಸಮರ್ಥಿಸಿಕೊಳ್ಳುವವರಲ್ಲ.
ತೇಜಸ್ವಿ ಆನೆಯ ಹಾಗೆ ತಮ್ಮ ದಾರಿಯಲ್ಲಿ ತಮಗೆ ಬೇಕಾದ ಹಾಗೆ ನಡೆದುಕೊಂಡು ಹೋಗುವವರಾಗಿ ಇದ್ದರು. ಅದೇ ಅವರ ವಿಶೇಷ. ವಿಮರ್ಶೆ, ಹೊಗಳಿಕೆ, ತೆಗಳಿಕೆ ಯಾವುದಕ್ಕೂ ಒಳಗಾಗದೆ ತಮ್ಮದೇ ಆದ ವಲಯದಲ್ಲಿ ಇದ್ದವರು ಅವರು. ಸಾಹಿತಿಗಳು ಸಾಹಿತಿಗಳ ಜೊತೆ ಮಾತ್ರ ಇರೋದು ಬಹಳ ಅಪಾಯಕಾರಿ ಎಂಬುದನ್ನು ತೇಜಸ್ವಿ ಚೆನ್ನಾಗಿ ಬಲ್ಲರು. ಇದರಲ್ಲವರು ಪ್ರಾಯಶಃ ತಮ್ಮ ತಂದೆಯಿಂದ ಏನನ್ನು ಕಲಿತರೋ, ಕಾರಂತರಿಂದಲೂ ಕಲಿತರು. ಕಾರಂತರಿಗೂ ಅವರ ಮೇಲೆ ಪ್ರೀತಿಯಿತ್ತು. ಕಾರಂತರು ಅವರ ಮನೆಗೂ ಬಂದು ಹೋಗಿದ್ದರು. ನಮ್ಮ ಲೇಖಕರ ಮಧ್ಯೆ ತೇಜಸ್ವಿ ವಿಶಿಷ್ಟವಾಗಿ ಕಾಣಿಸೋದು ಅವರ `ಅಡ್ವೆಂಚರ್‌’ ಪ್ರವೃತ್ತಿಯಿಂದ. ಅವರು ಸಿತಾರ್‌ ನುಡಿಸಲು ಕಲಿಯತೊಡಗಿದರು, ಫೋಟೋಗ್ರಫಿ, ಚಿತ್ರಕಲೆಯಲ್ಲಿ ಅವರಿಗೆ ಆಸಕ್ತಿಯಿತ್ತು. ಹಕ್ಕಿಯ ಚಿತ್ರವನ್ನು ಸರಿಯಾದ ಆ್ಯಂಗಲ್‌ನಲ್ಲಿ ತೆಗೆಯಲಿಕ್ಕಾಗಿ ಅವರು ದಿನಗಟ್ಟಲೆ ಧ್ಯಾನಸ್ಥರಾಗಿರುತ್ತಿದ್ದರು. ಹಾಗೆ ಚಿತ್ರ ತೆಗೆದ ನಂತರ ಅವುಗಳಿಗೆ ಹೆಸರನ್ನೂ ಹುಡುಕುತ್ತಿದ್ದರು.

ಇವತ್ತು ಎಲ್ಲ ವಯಸ್ಸಿನವರೂ ಓದಬಲ್ಲ ಪುಸ್ತಕ ಬರೆದ ನನ್ನ ಸಮಕಾಲೀನರು ತೇಜಸ್ವಿ. ಲಂಕೇಶರ ಬರವಣಿಗೆಯಲ್ಲಿ ಲಂಕೇಶರೂ ಇರುತ್ತಾರೆ. ಆದರೆ ತೇಜಸ್ವಿ ಬರವಣಿಗೆಯಲ್ಲಿ ತೇಜಸ್ವಿ ಕೇವಲ ವಿಸ್ಮಯದ ಕಣ್ಣಾಗಿರುತ್ತಾರೆ; ಪಾತ್ರವಾಗಿರೋದಿಲ್ಲ. ಬಹುಶಃ ಅವರಿಗೆ ಈ ಗುಣ ಬಂದಿರುವುದು ಅವರ ಫೋಟೋಗ್ರಫಿಯಿಂದ ಅಂತ ನನ್ನ ಅನಿಸಿಕೆ. ದಾರಿಗಳಿಲ್ಲದ ಕಾಡಿನಲ್ಲಿ ಓಡಾಡಿದ ಅವರು ಯಾವ ದಾರಿಗಳನ್ನೂ ನಿರೀಕ್ಷಿಸದೆ ಸಾಹಿತ್ಯದ ಒಳಗೆ ಓಡಾಡಿದರು; ತಾವು ನಡೆದದ್ದನ್ನೇ ದಾರಿ ಮಾಡಿದರು. ಹಾಗಾಗಿಯೇ ಅಕಸ್ಮಾತ್‌ ಆಗಿ ಕಾಣಬಲ್ಲದ್ದನ್ನೆಲ್ಲ ಅವರು ಕಂಡರು. ಉದ್ದೇಶಪೂರ್ವಕವಾಗಿ ಏನನ್ನೋ ಹೇಳಲೇಬೇಕೆಂದು ಬರೆಯುವ ಸಾಹಿತ್ಯ ದೊಡ್ಡ ಕೃತಿ ಆಗುವುದಿಲ್ಲ. ಆದರೆ ಬರವಣಿಗೆಯ ಪ್ರಕ್ರಿಯೆಯಲ್ಲೇ ತನ್ನ ಉದ್ದೇಶವನ್ನು ಹುಟ್ಟಿಸಿಕೊಳ್ಳುತ್ತಾ ಹೋಗುವ ಬರವಣಿಗೆ ತೇಜಸ್ವಿಯವರದ್ದು. ಅವರ `ಕಿರಿಗೂರಿನ ಗಯ್ಯಾಳಿ’ಯಂಥ ಕತೆಗಳಲ್ಲಂತೂ ಇಷ್ಟರವರೆಗೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಬರದೇ ಇರುವ ಪಾತ್ರಗಳೆಲ್ಲ ಇವೆ. ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ದೇವನೂರು ಮಹಾದೇವರಂಥವರ ಕತೆಗಳಲ್ಲಿ ಹಳ್ಳಿಗಳಿವೆ, ಪಟ್ಟಣಗಳೂ ಇವೆ. ಆದರೆ ತೇಜಸ್ವಿಯವರ ಕತೆಗಳಲ್ಲಿ ಯಾರಲ್ಲೂ ಇಲ್ಲದ `ಮೊಪ್ಯೂಸಿಲ್‌’ ಪ್ರದೇಶಗಳಿವೆ. ಅದು ಅವರ ಸಾಹಿತ್ಯದ ವಿಶಿಷ್ಟತೆಗೆ ಬಹಳ ಮುಖ್ಯ ಕಾರಣವಾಯಿತು.

ಏಕೆಂದರೆ ಈ ಮೊಪ್ಯೂಸಿಲ್‌ ಲೋಕದ ಜನ ಅನೇಕ ಸಾರಿ ವಿಶೇಷ ಪ್ರತಿಭೆ ಉಳ್ಳವರಾಗಿರುತ್ತಾರೆ. ಆದರೆ ಅವಕಾಶ ವಂಚಿತರಾಗಿರುತ್ತಾರೆ. ಆದ್ದರಿಂದ ಇವರ ಪ್ರತಿಭೆ ಅನೇಕ ರೀತಿಯ ಉಪದ್ವ್ಯಾಪಗಳಲ್ಲೇ ವ್ಯಕ್ತವಾಗುತ್ತವೆ. ಕಳ್ಳತನ, ಕಿಡಿಗೇಡಿತನ, ತುಂಟತನ- ಇವೆಲ್ಲವನ್ನೂ ಅವರು ಹಾಸ್ಯಪ್ರಜ್ಞೆಯಿಂದ ನೋಡುವುದರಿಂದಲೇ ಅವರು ಯಾರನ್ನೂ ಜಡ್ಜ್‌ ಮಾಡೊಲ್ಲ. ಅದಕ್ಕೇ ಹೇಳಿದ್ದು- ಅವರು ಅವರ ಕಾದಂಬರಿಗಳಲ್ಲಿ ಪಾತ್ರವಾಗಿ ಬರೊಲ್ಲ, ವಿಸ್ಮಯದ ಕಣ್ಣಾಗಿ ಬರುತ್ತಾರೆ ಅಂತ.

ಒಂದು ಸಾರಿ ನಾನು ಅವರ ಮೂಡಿಗೆರೆಯ ಮನೆಗೆ ಹೋದಾಗ, ಮನೆಯ ಹೊರಗೆ, ಮರದ ಕೆಳಗೆ ನಿಂತು ತನ್ನ ತೋಟದಲ್ಲಿ ಹರಿಯುವ ಝರಿ ಎಲ್ಲಿ ಹುಟ್ಟಿ, ಎಲ್ಲೆಲ್ಲಿ ಹೇಗೆ ಹರಿದು ಯಾವ್ಯಾವ ರೂಪಗಳನ್ನ ತಾಳುತ್ತೆ ಅನ್ನುವುದನ್ನು ನನಗೆ ವಿವರಿಸುವುದೇ ಅವರಿಗೆ ಇಡೀ ಪ್ರಪಂಚದ ವಿಸ್ಮಯವನ್ನು ಹೇಳುವ ಒಂದು ಸಂಗತಿಯಾಗಿತ್ತು.

`ದೇವರೊಬ್ಬ ಇದ್ದಾನೆ ಅಂತ ತಿಳಿದು ಈ ಪ್ರಪಂಚವನ್ನು ನೋಡುವುದು ಎಂಥ ದೊಡ್ಡ ಅನುಭವವೋ ಅದೇ ಅನುಭವ ಈ ಪ್ರಪಂಚದ ವಿಸ್ಮಯವನ್ನು ಸುಮ್ಮನೆ ಕಾಣುವುದರಲ್ಲಿದೆ’ ಅಂತ ಅವರೊಮ್ಮೆ ಹೇಳಿದ ನೆನಪು ಅಥವಾ ಅವರು ಹೇಳಿದ್ದು ಹೀಗೆ- `ವಿಸ್ಮಯದ ಅನುಭವದಲ್ಲಿ ದೇವರು ಇದ್ದ್ದಾನೆ ಎಂಬುದೂ ಇಲ್ಲ ಎಂಬುದೂ ಅಪ್ರಕೃತವೆನ್ನಿಸಿ ಬಿಡುತ್ತದೆ.’ ಸದ್ಯದ ಮತಧರ್ಮಗಳ ವಿವರಣೆಯಲ್ಲಿ ಸಿಕ್ಕುವ ಜಗತ್ತಿನ ಸ್ವರೂಪಕ್ಕೆ ಬದಲಾಗಿ ಯಾವ ವಿವರಣೆಯನ್ನೂ ಆಶ್ರಯಿಸದೆ ಸುಮ್ಮನೆ ಈ ಪ್ರಪಂಚದ ವಿಸ್ಮಯಕ್ಕೆ ಮನಸ್ಸನ್ನು ತೆರೆದುಕೊಳ್ಳಬೇಕೆಂಬ ಅಪೇಕ್ಷೆ ತೇಜಸ್ವಿಯವರಲ್ಲಿ ಬಲವಾಗಿ ಇತ್ತು. ಈ ಗಾಢ ಪ್ರಜ್ಞೆಯಿಂದಾಗಿ ಅವರಿಗೆ ಜಾತಿಮತಗಳು, ಅದರ ಗಲಭೆಗಳು, ಅದರ ಹಿಂದಿನ ರಾಜಕೀಯ- ಇವೆಲ್ಲ ವನ್ನೂ ತಾತ್ಸಾರದಿಂದ ಕಾಣುವುದಕ್ಕೆ ಸಾಧ್ಯವಾಯಿತು. ಎಲ್ಲರ ಜೊತೆಗಿದ್ದು, ವಿನೋದಿಯಾಗಿದ್ದು ಅವರು ಏಕಾಂಗಿಯಾಗಿಯೂ ಇದ್ದರು.
ನಮ್ಮಲ್ಲಿ ವಿಸ್ಮಯವನ್ನು ಹುಟ್ಟಿಸುವಂತೆ ಬದುಕಿ ಬರೆದ ಬರಹಗಾರರೊಬ್ಬರು ಈಗ ಬದುಕಿನ ಕ್ಷಣಿಕತೆಯನ್ನು ವಿಸ್ಮಯಗೊಳಿಸುವಂತೆ ತೋರಿ ಕಾಲವಾಗಿದ್ದಾರೆ.
(ನಿರೂಪಣೆ: ಸುರೇಶ್‌ ಕೆ.)