Select Page
ಕಾವೇರಿಗೆ ಬೇಕೆ ಅಗಸ್ತ್ಯ ನ್ಯಾಯ

ಕಾವೇರಿಗೆ ಬೇಕೆ ಅಗಸ್ತ್ಯ ನ್ಯಾಯ

ಕೊಡವರ ಸಾಂಸ್ಕೃತಿಕ ನಿಧಿಯಾದ `ಪಟ್ಟೋಲೆ ಪಳಮೆ' ಈಗ ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ. ಇದನ್ನು ಮೊದಲು ಸಂಗ್ರಹಿಸಿ ದವರು ನಾಡಿಕೇರಿಯಂಡ ಚಿಣ್ಣಪ್ಪ (1924). ಭಾಷಾಂತರಿಸಿದವರು, ಅವರ ಮೊಮ್ಮಕ್ಕಳಾದ ಬೋವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ. ಭಾಷಾಂತರಕ್ಕೆ ಬರೆದ ಮುನ್ನುಡಿಯಲ್ಲಿ ಇವರು ಈ ಕಾಲದ ಕೊಡವ ಯುವಕರಿಗೆ ಕನ್ನಡ ಲಿಪಿಯೇ ಗೊತ್ತಿಲ್ಲದೇ ಇರಬಹುದು, ಅವರಿಗಾಗಿ ಈ ಅನುವಾದವನ್ನು ತಾವು ಮಾಡಿದ್ದೇವೆ ಎಂದಿದ್ದಾರೆ. ಈ ಗ್ರಂಥದಲ್ಲಿ ನಮಗೆ ಕಾವೇರಿ ಪುರಾಣ ಸಿಗುತ್ತದೆ. ಈ ಪುರಾಣದಲ್ಲಿ ನನಗೆ ಅತ್ಯಂತ ಆಕರ್ಷಕ ಎನಿಸಿದ ಕಥೆ ಇದು:

ಕವೇರ ಎಂಬ ಬ್ರಾಹ್ಮಣನಿರುತ್ತಾನೆ. ಋಷಿ ಎಂದು ಪ್ರಖ್ಯಾತನಾದ ಈತ ಕೊಡಗಿಗೆ ಬರುತ್ತಾನೆ. ತನಗೆ ಮಕ್ಕಳಿಲ್ಲವೆಂದು ಬ್ರಹ್ಮನನ್ನು ಪ್ರಾರ್ಥಿಸುತ್ತ ತಪಸ್ಸು ಮಾಡುತ್ತಾನೆ. ಅವನ ಉಗ್ರಘೋರ ತಪಸ್ಸೇ ಅಗ್ನಿಯಾಗಿ ಸಕಲ ಚರಾಚರ ಜಗತ್ತನ್ನು ಬೇಯಿಸತೊಡಗುತ್ತದೆ. ಎಲ್ಲ ಕಥೆಗಳಂತೆ ಇಲ್ಲಿಯೂ ಬ್ರಹ್ಮ ವರ ಕೊಡಲು ಬರಲೇಬೇಕಾಗುತ್ತದೆ. ಕವೇರ ಬ್ರಹ್ಮನನ್ನು ಒಂದು ಮಗುವಿಗಾಗಿ ಪ್ರಾರ್ಥಿಸುತ್ತಾನೆ. ಆಗ ಬ್ರಹ್ಮ ಹಿಂದೆ ಶಾಪಗ್ರಸ್ತನಾಗಿದ್ದ ಕವೇರನಲ್ಲಿ ಕರುಣೆಯನ್ನಿಟ್ಟು ತನ್ನ ಪ್ರೀತಿಯ ಸಾಕು ಮಗಳಾಗಿದ್ದಪಟ್ಟೋಲೆ ಪಳಮೆ ಲೋಪಾಮುದ್ರಾದೇವಿಯನ್ನೇ ಕವೇರನಿಗೆ ಸಲಹಿಕೊಳ್ಳಲು ಕೊಡುತ್ತಾನೆ. ಲೋಪಾಮುದ್ರೆಯು ತನ್ನ ಇನ್ನೊಬ್ಬ ಸಾಕುತಂದೆಯಾಗಿಬಿಟ್ಟವನನ್ನ್ನು ಪ್ರೀತಿಯಿಂದ ಕಂಡು ಕಾವೇರಿಯಮ್ಮ ಎನ್ನುವ ಹೆಸರಿನಿಂದ ಅವನ ಮಗಳಾಗುತ್ತಾಳೆ. ಮರ್ತ್ಯರಾದ ಮನುಷ್ಯರು ಮಾಡುವ ಪಾಪಗಳನ್ನು ತೊಳೆಯಲು ತಾನು ಒಂದು ದಿನ ನದಿಯಾಗುವುದಾಗಿ ಸಾಕು ತಂದೆಗೆ ಮಾತು ಕೊಡುತ್ತಾಳೆ.

ತಾಯಿ-ತಂದೆ ಸತ್ತ ಮೇಲೆ ಬ್ರಹ್ಮಾದ್ರಿ ಬೆಟ್ಟದ ಮೇಲೆ ಕಾವೇರಿಯಮ್ಮ ದೇವಿ ಶಾಂತಿಯಿಂದ ಬದುಕುತ್ತಿರುತ್ತಾಳೆ. ಒಂದಾನೊಂದು ದಿನ ಶಿವನನ್ನು ಕಾಣಲೆಂದು ಸಹ್ಯಾದ್ರಿ ಬೆಟ್ಟವನ್ನೇರಿದ ಅಗಸ್ತ್ಯ ಮಹರ್ಷಿಯ ಕಣ್ಣಿಗೆ ಕುಮಾರಿಯಾದ ಈ ಸುಂದರಿ ಕಾವೇರಿ ಬೀಳುತ್ತಾಳೆ. ಅವನಲ್ಲಿ ಕೂಡಲೇ ಆಕೆಯ ಮೇಲೆ ಪ್ರೀತಿ ಹುಟ್ಟುತ್ತದೆ. `ಹೆಂಡತಿಯಿಲ್ಲದೆ ಬದುಕುವುದು ಬಹಳ ಕಷ್ಟ. ಆದ್ದರಿಂದ ನೀನು ನನ್ನ ಹೆಂಡತಿಯಾಗಬೇಕು' ಎಂದು ಅಗಸ್ತ್ಯ ಅವಳನ್ನು ಕೇಳಿಕೊಳ್ಳುತ್ತಾನೆ. ಇವನು ತನಗೆ ತಕ್ಕವನಾದ ಪತಿಯೆಂದುಕೊಂಡು ಕಾವೇರಿ ಒಪ್ಪಿಕೊಳ್ಳುತ್ತಾಳೆ. ಕೊಡವ ಸಂಪ್ರದಾಯದಂತೆ ಒಬ್ಬರಿಗೊಬ್ಬರು ಹಾರ ಹಾಕಿಕೊಂಡು ಅವರು ಮದುವೆಯಾಗುತ್ತಾರೆ. ಆದರೆ ಮದುವೆಗೆ ಒಪ್ಪಿಗೆ ಕೊಡುವಾಗ ಕಾವೇರಿ ತನ್ನಲ್ಲಿ ಅನುರಕ್ತನಾದ ಅಗಸ್ತ್ಯ ಋಷಿಗೆ `ತನ್ನನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಹೋದದ್ದೇ ಆದರೆ, ತಾನು ನದಿಯಾಗಿ ಹರಿದು ಹೋಗಿಬಿಡುತ್ತೇನೆ' ಎಂಬ ಷರತ್ತನ್ನು ಹಾಕುತ್ತಾಳೆ.

ಒಮ್ಮೆ ಅಗಸ್ತ್ಯ ಋಷಿ ತನಕೆ ಎಂಬ ನದಿಗೆ ಸ್ನಾನ ಮಾಡಲು ಹೋಗಲೇಬೇಕಾಗುತ್ತದೆ. ಕಾವೇರಿಯನ್ನು ಒಂದು ಬಂಗಾರದ ಗಿಂಡಿಯಲ್ಲಿ ಅವಿಸಿಟ್ಟು ಇವಳನ್ನು ಜೋಪಾನ ಮಾಡಿ ಎಂದು ತನ್ನ ಶಿಷ್ಯರ ಕೈಯಲ್ಲಿ ಕೊಟ್ಟು ಹೋಗುತ್ತಾನೆ. `ನೋಡಿದೆಯಾ, ಒಂದು ಬಂಗಾರದ ಗಿಂಡಿಯಲ್ಲಿ ನನ್ನನ್ನು ಬಂಧಿಸಿಟ್ಟನಲ್ಲಾ ಈ ಮಹರ್ಷಿ, ಈ ನನ್ನ ವಚನಭ್ರಷ್ಟ ಗಂಡ' ಎಂದು ಕಾವೇರಿ ಕುಪಿತಳಾಗುತ್ತಾಳೆ. ಬಂಗಾರದ ಗಿಂಡಿಯನ್ನು ಜೋಪಾನವಾಗಿ ಎತ್ತಿಕೊಂಡು ಹೋಗುತ್ತಿದ್ದ ಬ್ರಾಹ್ಮಣರ ಹುಡುಗ, ಋಷಿವರ್ಯನ ಶಿಷ್ಯ, ಕಾವೇರಿಯ ತಪಸ್ಸಿನ ಫಲದಿಂದಾಗಿ ಎಡವಿ ಬೀಳುತ್ತಾನೆ. ಗಿಂಡಿ ಬಂಗಾರದದ್ದಾರೇನು? ಅದು ಕೆಳಗೆ ಬಿದ್ದದ್ದೇ, ಕಾವೇರಿ ತನ್ನ ಹೆಣ್ಣಿನ ಸ್ವರೂಪವನ್ನು ತೊರೆದು ನದಿಯಾಗಿ ಹರಿದು ಬಿಡುತ್ತಾಳೆ.

ಅಗಸ್ತ್ಯನಿಗೆ ಇದು ತಿಳಿದದ್ದೇ ಅವನು ಗಾಬರಿಯಾಗಿ ಹರಿಯುತ್ತಿದ್ದ ಕಾವೇರಿಯ ಮಧ್ಯೆ ಬಂದು ಅವಳನ್ನು ತಡೆಯಲೆಂದು ನಿಲ್ಲುತ್ತಾನೆ. ಆಗ ಕಾವೇರಿ ಬಲಕ್ಕೆ ತಿರುಗಿ ಬಿಡುತ್ತಾಳೆ. ಅದರಿಂದ ಬಲಮುರಿ ಯಾಗುತ್ತದೆ. ಕೊಡವ ಹೆಂಗಸರು ಈ ಕಾರಣದಿಂದಾಗಿ ಸೀರೆ ಉಡುವುದು ಸೊಂಟದಲ್ಲಿ ಬಲಕ್ಕೆ ಸೆರಗನ್ನು ಸಿಕ್ಕಿಸಿ.

***

ನಂಜಮ್ಮ ಮತ್ತು  ಬೋವೇರಿಯಂಡ ಚಿಣ್ಣಪ್ಪ ಕಾವೇರಿ ಈಗ ಸುದ್ದಿಯಲ್ಲಿದ್ದಾಳೆ. ಅವಳು ಹೀಗೆ ಯಜಮಾನಿಕೆ ಮಾಡುವ ಗಂಡನ ಹಂಗು ತೊರೆದು ಹರಿಯುತ್ತಿರುವ ತನಕ ನಾವು ಅವಳನ್ನು ನಮಗೆ ಬೇಕಾದಷ್ಟು ಮಾತ್ರ ಹಿಡಿದಿಟ್ಟುಕೊಳ್ಳಬಹುದು. ನಮಗೂ ಮಿಕ್ಕು ಅವಳು ಹರಿಯುತ್ತಾಳಾದ್ದರಿಂದ ತಮಿಳುನಾಡಿನವರೂ ಅವಳನ್ನು ಬಳಸಬಹುದು. ಹೀಗೆ ಸಿಗುವುದು, ಮಿಕ್ಕುವುದು, ದಕ್ಕುವುದು, ಉಕ್ಕುವುದು, ತೆವಳುವುದು ಅವಳ ಕೃಪೆಯೇ.

ಈ ನದಿಯ ಕಥೆ ಅದ್ಭುತವಾದ ಒಂದು ಸ್ತ್ರೀ ವಿಮೋಚನೆಯ ಕತೆಯೂ ಆಗಿರುವುದರಿಂದ ನನ್ನ ಮಾತುಗಳಿಗೆ ಕಾವೇರಿಯ ದಯೆಯಿಂದಾಗಿ ಹೆಚ್ಚು ಅರ್ಥಗಳು ಪ್ರಾಪ್ತವಾದೀತೆಂದು ತಿಳಿದಿದ್ದೇನೆ.

***

ಕಾವೇರಿ ಭೂಮಿಯ ಮೇಲೆ ಹರಿಯುವುದು ಮಾತ್ರವಲ್ಲ. ಅಂತರ್ಜಲವೂ ಆಗುತ್ತಾಳೆ. ಮೇಲಿರುವ ನಮ್ಮಲ್ಲಿ ವೇಗವಾಗಿ ಸೀದಾ ಇಳಿಮುಖ ಹರಿಯುವವಳು ಕೆಳಗಿರುವ ತಮಿಳುನಾಡಿನಲ್ಲಿ ಕೊಂಚ ನಿಧಾನವಾಗಿ ಹರಿದು ನಮ್ಮಲ್ಲಿರುವುದಕ್ಕಿಂತ ಹೆಚ್ಚಿನ ಅಂತರ್ಜಲವಾಗಿ ದ್ದಾಳೆ. ಕಷ್ಟಕಾಲದಲ್ಲಿ ತಮಿಳುನಾಡಿನವರು ಮೇಲೆ ಕಾಣದವಳನ್ನು ಅವಳ ದಯೆಯಿಂದ ಭೂಮಿಯ ಒಳಗೂ ಹುಡುಕಿ ಪಡೆಯಬಹುದು.

ಇವನ್ನೆಲ್ಲಾ ಮರೆತು ಕಣ್ಣಿಗೆ ಕಾಣುವ ಕಾವೇರಿಯಲ್ಲಿ ಯಾರಿಗೆ ಎಷ್ಟು ಕಾವೇರಿ ಎಂಬ ತೀರ್ಪು ಹೊರಬಿದ್ದಿದೆ. ಕೇರಳಕ್ಕೆ ಮುಂದೆ ಸಿಗಬೇಕಾದ್ದು ಸದ್ಯ ತಮಿಳುನಾಡಿಗೆ ಸೇರಲಿ ಎಂದೂ ಆದೇಶವಾಗಿದೆ. ಸ್ವತಃ ಕೈಹಿಡಿದ ಗಂಡನೇ ತಡೆಯಹೋದಾಗ ಅದನ್ನು ಧಿಕ್ಕರಿಸಿದ ಕಾವೇರಿ ನಾವು ಮಾಡುವ ನ್ಯಾಯ ತೀರ್ಪಿಗೆ ಖಂಡಿತಾ ಬಂಧಿತಳಾಗುವವಳಲ್ಲ. ಅಗಸ್ತ್ಯನಂತೆ ಬ್ರಿಟಿಷರು ಕಾವೇರಿಯನ್ನು ನಿರ್ಬಂಧಿಸಲು ಹೊಂಚಿದ್ದರು.
ಅವಳು ಈ ತನಕ ನಮ್ಮೆಲ್ಲರನ್ನೂ ಸಾಕಿದ್ದಾಳೆ. ಆದರೆ ನೀರು ಕಡಿಮೆ ಇದ್ದಾಗ ವಿವೇಕಶಾಲಿಗಳಾಗಿ ಇರುವಷ್ಟು ನೀರಿನಲ್ಲಿ ಏನನ್ನು ಬೆಳೆಯಬೇಕೆಂಬ ಜ್ಞಾನ ಇರಬೇಕಾದವರು ಅದನ್ನು ಕಳೆದುಕೊಂಡಂತೆ ಕಾಣುತ್ತದೆ. ಮಂಡ್ಯದಲ್ಲಿ ಬಳಸಬೇಕಾದ್ದಕ್ಕಿಂತ ಹೆಚ್ಚು ನೀರನ್ನು ಬಳಸಿ, ಬೆಳೆದದ್ದನ್ನೇ ಮತ್ತೆ ಮತ್ತೆ ಬೆಳೆದು, ' ನೆಲ ಬಂಜರಾಗುವಷ್ಟು ರಾಸಾಯನಿಕ ಗೊಬ್ಬರ ಬೆರೆಸಿ, ನಾವು ಭೂಮಿಗೂ ಅನ್ಯಾಯ ಮಾಡುತ್ತಿದ್ದೇವೆ, ನೀರಿಗೂ ಅನ್ಯಾಯ ಮಾಡುತ್ತಿದ್ದೇವೆ. ಇನ್ನು ತಮಿಳುನಾಡಿನವರು ಮೂರು ಬೆಳೆಗಳನ್ನು ಬೆಳೆದು, ಅದೂ ಹೆಚ್ಚು ನೀರನ್ನು ಬೇಡುವ ಬೆಳೆಗಳನ್ನು ಬೆಳೆದು, ತಮಗೆ ಸಿಗುವ ಕಾವೇರಿಯ ನೀರು ಏನೇನೂ ಸಾಲದು ಎಂದು ಬೊಬ್ಬೆಯಿಡುತ್ತಾರೆ. ಬೆಂಗಳೂರು `ಗ್ರೇಟರ್‌' ಆಗುತ್ತ ಹೋದಂತೆ ವಲಸೆ ಬರುವ ತಮಿಳರೂ ಸೇರಿದಂತೆ ಇಲ್ಲಿ, ಕರ್ನಾಟಕದ ರಾಜಧಾನಿಯಲ್ಲಿ, ಬಾಯಾರುವವರ ಸಂಖ್ಯೆಯೂ ಏರುತ್ತ ಹೋಗುತ್ತದೆ.
ಕಾವೇರಿಯ ಪ್ರಶ್ನೆ ವಿವೇಕದಿಂದ ಬಗೆಹರಿಸಿಕೊಳ್ಳಬೇಕಾದದ್ದು. ನೀರನ್ನು ಸದ್ಬಳಕೆ ಮಾಡುವುದನ್ನು ತಮಿಳುನಾಡೂ ಕಲಿಯಬೇಕು. ನಾವೂ ಕಲಿಯಬೇಕು. ಪರಂಪರಾನುಗತವಾದ ಈ ವಿವೇಕ ಎಲ್ಲ ರೈತರ ಸ್ಮೃತಿಯಲ್ಲೂ ಇದ್ದೇ ಇರುತ್ತದೆ. ಬೇಕಾದಷ್ಟೇ ನೀರಿನಲ್ಲಿ ಬಗೆಬಗೆಯ ಬೆಳೆಗಳನ್ನು ಆವರ್ತನದಲ್ಲಿ ಬೆಳೆದು ಸಾವಿರಾರು ವರ್ಷಗಳಿಂದ ನಾಗರಿಕವಾಗಿ ಈ ದೇಶ ಉಳಿಯುವಂತೆ ಕಾಪಾಡಿದವರು ನಮ್ಮ ನೇಗಿಲ ಯೋಗಿಗಳು. ಆದರೆ, ಪ್ರಕೃತಿ ಅವಳ ಧಾರಾಳದಲ್ಲಿ ಹೇಗೂ ನಮಗೆ ಒದಗುತ್ತಲೇ ಇರುತ್ತಾಳೆ ಎಂದು ನಾವು ಭ್ರಮಿಸಿಕೊಂಡಾಗ ಮಾತ್ರ ಈ ವಿವೇಕ ಮಾಯವಾಗುತ್ತದೆ. ಆದ್ದರಿಂದ ಕಾವೇರಿಯ ಸುಖ-ಕಷ್ಟ ಎರಡನ್ನೂ ಅನುಭವಿಸುವ ಕರ್ನಾಟಕದ ರೈತರು ಮತ್ತು ತಮಿಳುನಾಡಿನ ರೈತರು ಒಟ್ಟಾಗಿ ಕೂತು ಯಾರಿಗೆ ಎಷ್ಟು ನೀರು, ಮತ್ತು ಎಷ್ಟು ನೀರಿನಲ್ಲಿ ಏನೇನು ಬೆಳೆಯಬಹುದು ಇತ್ಯಾದಿಗಳನ್ನು ಚರ್ಚಿಸಬೇಕು. ಕರ್ನಾಟಕದಲ್ಲಿ ಮಂತ್ರಿಯಾಗಿದ್ದ ಎಚ್‌.ಎನ್‌. ನಂಜೇಗೌಡರಂಥವರಿಗೆ ಈ ಎಲ್ಲ ವಿಷಯ ಚೆನ್ನಾಗಿ ತಿಳಿದಿದೆ. ರೈತ ನಾಯಕರಾದ ಪುಟ್ಟಣ್ಣಯ್ಯನವರಿಗೆ ರೈತ ಜೀವನದ ಕಷ್ಟಗಳು ತಿಳಿದಿವೆ. ಹಿರಿಯರಾದ ಮಾದೇಗೌಡರಿಗೆ ಪ್ರಾಮಾಣಿಕ ಆತಂಕವಿದೆ. ಅಂಥವರು ಈಗ ನಾಯಕತ್ವ ವಹಿಸಬೇಕು. ತಮಿಳು ಸಿನಿಮಾಗಳನ್ನು, ಪತ್ರಿಕೆಗಳನ್ನು ಬಹಿಷ್ಕರಿಸುವುದರಿಂದ ಪ್ರಯೋಜನವಾಗದು. ರಸ್ತೆ ತಡೆ, ರೈಲು ತಡೆ, ್ರತಿಕೃತಿ ದಹನ ಇವುಗಳಿಂದ ಜನ ಬೇಸತ್ತು ಹೋಗುತ್ತಾರೆ. ಸುದ್ದಿಗಾಗಿ ಹದ್ದುಗಳಂತೆ ಹಾರಾಡುವ ಮಾಧ್ಯಮಗಳಿಗೆ ಮಾತ್ರ ಇವುಗಳಿಂದ ಪ್ರಯೋಜನ. ಕರ್ನಾಟಕದಲ್ಲಿದ್ದು ನೀರು ಬಳಸುವ ತಮಿಳರೂ ಕರ್ನಾಟಕಕ್ಕೇ ಇನ್ನೂ ಹೆಚ್ಚು ಕಾವೇರಿ ನೀರು ಬೇಕೆಂದು ಕೇಳುತ್ತಾರೆ- ಸಹಜವಾಗಿ.
ಕಾವೇರಿ ಹುಟ್ಟುವುದು ಪಶ್ಚಿಮ ಘಟ್ಟದಲ್ಲಿ. ಕರ್ನಾಟಕದ ನಾವು ಈಗ ಪಶ್ಚಿಮ ಘಟ್ಟಗಳಲ್ಲಿ ನಡೆಸುತ್ತಿರುವ ದಾಂಧಲೆ ಹೀಗೆಯೇ ಮುಂದುವರಿದರೆ ಕಾವೇರಿಯಮ್ಮ ಕ್ಷೀಣಳಾಗುತ್ತಾ ಬತ್ತಿಹೋಗುವ ಅಪಾಯವಿದೆ. ಆದುದರಿಂದ ಪಶ್ಚಿಮ ಘಟ್ಟಗಳ ಸಮೃದ್ಧಿಯನ್ನು ರಾವಿನಲ್ಲಿ ನೋಡಿ, ಅದರ ತಳದಲ್ಲೇ ಏನನ್ನಾದರೂ ಸ್ವೀಕರಿಸಬಲ್ಲ ಸಮುದ್ರವಿದೆಯೆಂದು ಹಿಗ್ಗಿ ನಾವು ಉಷ್ಣ ಸ್ಥಾವರಗಳಂಥ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಸರ್ವನಾಶದ ಹಾದಿಯನ್ನು ಹಿಡಿದಂತಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಹೋಗುವುದಿಲ್ಲ ಎಂಬ ತ್ಯಾಗ ಬುದ್ಧಿಯನ್ನು ನಾವು ತೋರಬೇಕು. ನೀರಿನ ಸದ್ಬಳಕೆಯಿಂದ ಸಾಧ್ಯವಾಗುವಷ್ಟು ಮಾತ್ರ ಬೆಳೆಗಳನ್ನು ಬೆಳೆಯುತ್ತೇವೆಂಬ ಸಂಯಮವನ್ನು ತಮಿಳುನಾಡು ತೋರಬೇಕು. ಇದರ ಬದಲಾಗಿ ಈಗ ನಡೆಯುತ್ತಿರುವುದು ಏನೆಂದರೆ, ಕಾವೇರಿ ಹರಿಯುವ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಓಟು ಗಳಿಸಲು ತಾವು ಎಷ್ಟು ಅಬ್ಬರದಿಂದ ಕೂಗಾಡಬೇಕೆಂಬ ರಾಜಕೀಯ.
ನ್ಯಾಯಾಧಿಕರಣ ಈ ಮೂಲಭೂತ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಆದುದರಿಂದ ಈ ತೀರ್ಪಿನಿಂದ ನಮಗೂ ಪ್ರಯೋಜನವಿಲ್ಲ; ತಮಿಳುನಾಡಿಗೂ ಪ್ರಯೋಜನವಿಲ್ಲ. ನೀರೇ ಇಲ್ಲದಾಗ ಏನನ್ನು ತಾನೇ ನಾವು ಹಂಚಿಕೊಳ್ಳಬಹುದು? ಆದ್ದರಿಂದ ಕಾವೇರಿ ತೀರ್ಪನ್ನು ನಾವು ಗೌರವದಿಂದ ಕೈಬಿಡಬೇಕು.
ತಮಿಳುನಾಡಿಗೆ ನಾವು ನೀರನ್ನೇ ಬಿಡುವುದಿಲ್ಲ ಎಂಬ ಚಳವಳಿ ಹಿಂದೆ ಶುರುವಾದಾಗ ಮುಖ್ಯಮಂತ್ರಿ ಕೃಷ್ಣ ಅವರು ಪಾದಯಾತ್ರೆ ಮಾಡಿದರು. ನಾನೂ ಅವರ ಜತೆ ಹೋಗಿದ್ದೆ-ಹಲವರಂತೆ. ಟೆಲಿವಿಷನ್‌ ಸಂಸ್ಥೆಯೊಂದು `ನೀವೇಕೆ ಸೇರಿಕೊಂಡಿರಿ?' ಎಂದು ನನ್ನನ್ನು ಕೇಳಿತ್ತು. `ಹೇಗೂ ಹರಿಯುವ ನೀರನ್ನು ಬಿಡಲೇಬೇಕಾದಷ್ಟು ಬಿಡಬೇಕಾದ ಸ್ವಾತಂತ್ರ್ಯ ಈ ದೇಶದ ಮುಖ್ಯಮಂತ್ರಿಯಾದವರಿಗೆ ಇರಬೇಕು. ಅವರಿಗೆ ಈ ಸ್ವಾತಂತ್ರ್ಯವನ್ನು ಕನ್ನಡದ ಜನ ಕೊಡಬೇಕು' ಎಂದು ನಾನು ಹೇಳಿದ್ದೆ. ನಾವು ಒಂದು ಹನಿಯನ್ನೂ ಬಿಡುವುದಿಲ್ಲ ಎಂಬ ಮೂರ್ಖತನದ ಮಾತನ್ನಾಡಿ, ಆ ಮೇಲೆ ಕೋರ್ಟಿನ ಆದೇಶದ ಮೇರೆಗೆ ಬಿಡಲೇಬೇಕಾಗಿ ಬಂದು ಪೆಚ್ಚಾಗಬಾರದು ಅಥವಾ ಜನರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ನೀರು ಬಿಡಬಾರದು.
ನಾವು ಒಂದು ನಾಗರಿಕ ಸಮಾಜ ಎಂಬುದನ್ನು ಸ್ಥಾಪಿಸಿಕೊಳ್ಳುವ ಸವಾಲು ಈಗ ನಮ್ಮ ಮುಂದಿದೆ. ರಾಜಕೀಯದಿಂದ ಏನನ್ನಾದರೂ ಗಿಟ್ಟಸಿಕೊಳ್ಳಬಲ್ಲವೆಂದು ತಿಳಿದಿರುವ ತಮಿಳುನಾಡಿನ ಚಾಣಾಕ್ಷರ ಮುಂದೂ ಈ ಸವಾಲು ಇದೆ. ಜೆ.ಎಚ್‌ ಪಟೇಲರು ಹೇಳಿದ ಒಂದು ಮಾತು ನೆನಪಾಗುತ್ತದೆ. ಕರುಣಾನಿಧಿಯವರೂ ಇದ್ದ ಸಭೆಯಲ್ಲಿ ಅವರು ಆಡಿದ ಮಾತುಗಳು ಇವು: `ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ತಮಿಳುನಾಡಿನ ರೈತರ ಹಿತದ ಬಗ್ಗೆ ಯೋಚಿಸಬೇಕು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕರುಣಾನಿಧಿಯವರು ನಮ್ಮ ರೈತರ ಹಿತದ ಬಗ್ಗೆ ಆಸಕ್ತಿ ತಾಳಬೇಕು. ಹೀಗೆ ಮಾತ್ರ ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸಾಧ್ಯ?' ಈ ವಿವೇಕ ನಾಡಿನ ಜನತೆಯಲ್ಲಿ ಅಂತರ್ಗತವಾಗಿಯೇ ಇದೆ. ಕಾವೇರಿ ಅಂತರ್ಜಲವಾಗಿಯೂ ಇರುವಂತೆ.

ಒಂದು ವಿಶೇಷ ಟಿಪ್ಪಣಿ

ನನ್ನ ಪ್ರಿಯ ಸ್ನೇಹಿತರಾದ ಡಾ ಆರ್‌. ಪೂರ್ಣಿಮಾ ಗೆಳೆಯ ಎನ್‌.ಎ. ಎಂ. ಇಸ್ಮಾಯಿಲ್‌ ಜೊತೆ ನನ್ನ ಮನೆಗೆ ಬಂದು ವಾರಕ್ಕೊಮ್ಮೆ `ಉದಯವಾಣಿ'ಗೆ ನಾನು ಬರೆಯಬೇಕೆಂದು ಕೇಳಿ ವರ್ಷದ ಮೇಲಾಯಿತು. ಹೀಗೆ ಶಿಸ್ತಿನಲ್ಲಿ ನಾನು ಬರೆದವನೇ ಅಲ್ಲ; ಹಿಂದೆ ಮೇಷ್ಟ್ರಾಗಿದ್ದಾಗ ಪಾಠ ಮಾಡಿದವನೂ ಅಲ್ಲ; ಸಭೆಗಳಲ್ಲಿ ಮಾತಾಡಿದವನೂ ಅಲ್ಲ. ನಿಂತ ಕಾಲಿನ ಮೇಲೆ ಪುಣ್ಯವಶಾತ್‌ ಹೊಳೆಯುತ್ತ ಹೋಗುವುದನ್ನು ಹೇಳುವ ಸ್ವಭಾವ ನನ್ನದು. ಸತತ ನಾನಿರುವುದು ಹೀಗೆ. ಸತತ ನಾನು ತೊಡಗಿಕೊಂಡಿರುವಂತೆ ಮಾಡುವ ಸಂಗತಿಗಳೇ ಕೆಲವೊಮ್ಮೆ ನಾನು ಮಾಡಿದ ಪಾಠ; ನಾನು ಬರೆದ ಕಥೆ, ಕವಿತೆ; ನನ್ನ ರಾಜಕೀಯ ಕ್ರಿಯೆ; ನನ್ನ ಈ ಬಗೆಯ ಬರವಣಿಗೆ; ಸಭೆಗಳಲ್ಲಿ ನಾನಾಡುವ ಮಾತುಗಳು; ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸ್ನೇಹಿತರ ಜೊತೆ ನಾನು ಕೊಚ್ಚುವ ಹರಟೆ.

ಡಾ ಪೂರ್ಣಿಮಾರಿಗೆ ಒಂದು `ಕಂಡೀಶನ್‌' ಹಾಕಿದೆ: `ಗೆಳೆಯ ಇಸ್ಮಾಯಿಲ್‌ ನನ್ನನ್ನು ಕಾಡಿ ಬರೆಸಬೇಕಾಗುತ್ತೆ!'. `ಆಗಲಿ' ಎಂದರು. ಅವರ ಸಜ್ಜನಿಕೆಯ ಮುಗುಳ್ನಗುವಿನಿಂದ ನನ್ನ ಅನುಮಾನಗಳನ್ನೆಲ್ಲ ಗೆದ್ದರು. ನನಗೆ ನನ್ನಲ್ಲೇ ನಂಬಿಕೆ ಹುಟ್ಟುವಂತೆ ಮಾಡಿದರು. ಗೆಳೆಯ ಇಸ್ಮಾಯಿಲ್‌ ಅಂತೂ ನಾನೇನು ಬರೆಯಬೇಕೆಂದು ಹೊಳೆಯದೇ ಇದ್ದಾಗ ನನಗದು ಹೊಳೆಯುವಂತೆ ಮಾಡಿ, ನನ್ನನ್ನು ಕೆಣಕಿ, ಕಣ್ಣುಜ್ಜಿ ಕಾಣುವಂತೆ ಮಾಡಿದರು. ಹಿಂದಿನ ವಾರದ ಸುಬ್ಬಣ್ಣನ ಕುರಿತ ಲೇಖನ ಎಲ್ಲೋ ಎಂದೋ ನಾನು ಮಾತಾಡಿದ್ದು; ಆಡಿ ಮರೆತದ್ದು. ಆದರೆ ಅದರ ರಿಕಾರ್ಡ್‌ ಅವರ ಹತ್ತಿರ ಇತ್ತು. ನಾನು ದೆಹಲಿಯಲ್ಲಿ ಇದ್ದೆ. ನನಗೆ ಗೊತ್ತಿಲ್ಲದಂತೆ ಅವರದನ್ನು ಬರಹಕ್ಕೆ ಇಳಿಸಿ `ಇದನ್ನು ಹಾಕಬಹುದೆ?'ಎಂದು ಕೇಳಿದರು. ಅದನ್ನು ಓದಿ ಹೀಗೆ ಮಾತನಾಡಿದ್ದೆನಲ್ಲಾ ನಾನು ಎಂದು ನನಗೆ ನನ್ನ ಮೇಲೇ ಅಭಿಮಾನ ಹುಟ್ಟುವಂತೆ ಮಾಡಿದರು.

ಇಸ್ಮಾಯಿಲ್‌ರಂತಹ ಹಲವು ಧೀಮಂತ ಯುವಕರು ನಿರ್ದಾಕ್ಷಿಣ್ಯವಾಗಿ ಪ್ರತಿವಾರವೂ ನನ್ನ ಬರವಣಿಗೆಗೆ, ನನ್ನನ್ನು ಬೆಳೆಸುವಂತಹ ನನ್ನ ವಿಚಾರಗಳಿಗೆ, ಹೊಸ ಆಯಾಮ ಕೊಡುವಂತಹ ಪ್ರತಿಕ್ರಿಯೆಯನ್ನು ಕೊಡುತ್ತ ಹೋದರು. ನನಗೆ ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ.

ಕೇವಲ ಓದುಗರನ್ನು ಉದ್ದೇಶಿಸಿ ಅವರಿಗೆ ಪ್ರಿಯವಾಗುವಂತೆ ಮಾತಾಡಬಾರದು; ಆಡಿದ ಮಾತು ನನಗೇ ನಾನು ಆಡಿಕೊಂಡ ಮಾತಾಗಿರಬೇಕು ಎನ್ನುವುದು ನನ್ನ ಹಂಬಲ. ಇದು ಅಷ್ಟಿಷ್ಟು ಯಶಸ್ವಿಯಾಗಿದ್ದರೆ ಇದಕ್ಕೆ ಕಾರಣ ಉದಯವಾಣಿಯ ಸಂಪಾದಕ ವರ್ಗದ ಧಾರಾಳದ ಮನಸ್ಸು ಮತ್ತು ನನ್ನ ಕೆಲವು ಓದುಗರ ಧೀಮಂತ ಪ್ರಾಮಾಣಿಕತೆ.

ವಾರ ವಾರದ ಕಾಲಂ ಕೇವಲ ಕಾಟಾಚಾರಕ್ಕೆ ನಿರ್ವಾಹವಿಲ್ಲದೆ ಬರೆಯುತ್ತ ಹೋಗುವ ಕಾಲಂ ಆಗಿಬಿಡಬಹುದು. ನನಗೂ ಹಾಗಾಗಬಹುದು ಎಂಬ ಭಯವಿದೆ. ವಯಸ್ಸಾಗುತ್ತಾ ಹೋದಂತೆ, ಬರೆಯುವುದು ಸುಲಭವಾಗುತ್ತಾ ಹೋದಂತೆ, ಎಲ್ಲರಂತೆ ಕೇವಲ ಮನುಷ್ಯನೂ ಆದ ಲೇಖಕ ಹೆಚ್ಚು ಹೆಚ್ಚು ಗೌರವಾನ್ವಿತನಾಗುತ್ತಾ ಹೋದಂತೆ ಬರವಣಿಗೆ ಸಂದೇಶಗಳಾಗುತ್ತ ಹೋಗುತ್ತವೆ. ಬಂಗಾಳದ ಸಿಹಿ ತಿಂಡಿಯೊಂದರ ಹೆಸರೂ ಸಂದೇಶ್‌!

ಸ್ವಲ್ಪ ಕಾಲ ಮೌನವಾಗಿರುವುದನ್ನು ಬಯಸಿ, ನನ್ನನ್ನು ಪ್ರತಿವಾರ ಬರೆಯುವಂತೆ ಮಾಡಿದ ಎಲ್ಲರಿಗೂ ಕೃತಜ್ಞತೆ ಹೇಳುತ್ತ ಇದ್ದೇನೆ.

-ಯು. ಆರ್‌. ಅನಂತಮೂರ್ತಿ