Select Page

ಓಟಿಗೋ? ಒಗ್ಗಟ್ಟಿಗೋ?

ನ್ನಡಿಗರಾದ ನನ್ನ ಹಿಂದೂ ಬಾಂಧವರಲ್ಲೂ ನನ್ನ ಮುಸ್ಲಿಂ ಗೆಳೆಯರಲ್ಲೂ ಒಟ್ಟಾಗಿ ಕೆಲವು ವಿಚಾರಗಳನ್ನೂ ಭಾವನೆಗಳನ್ನೂ ನಿವೇದಿಸಿಕೊಳ್ಳಲು  ಪ್ರಯತ್ನಿಸುತ್ತೇನೆ. ನಾನು ಹುಟ್ಟಿದ್ದು ಬ್ರಾಹ್ಮಣನಾಗಿ. ನನ್ನ ಬಾಲ್ಯದಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದೇ ಇರಲಿಲ್ಲ. ಮಠದ ಆವರಣದಲ್ಲಿ ಹಳ್ಳಿಯೊಂದರಲ್ಲಿ ಬೆಳೆದ ನಾನು ಬಹಳ ಕಾಲ ಮಾಧ್ವ ಮತದ ವಿಚಾರಗಳನ್ನು ಶ್ರದ್ಧೆಯಿಂದ ನಂಬುತ್ತ ಇದ್ದೆ. ಈ ಜಗತ್ತು ಸತ್ಯ, ಶಂಕರಾಚಾರ್ಯರು ತಿಳಿದಂತೆ ಮಿಥ್ಯೆಯಲ್ಲ; ದೇವರು ಒಬ್ಬನೇ, ಅವನೇ ವಿಷ್ಣು, ಶಿವ, ಜೀವೋತ್ತಮನೇ ಹೊರತು ದೇವರು ಅಲ್ಲ, ದೇವರ ಸೃಷ್ಟಿಯಲ್ಲಿ ಅಂತರಗಳು ಇವೆ, ತಾರತಮ್ಯಗಳು ಇವೆತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತ ಇದ್ದ ನಾನು ಹಳ್ಳಿಯಿಂದ ಸ್ಕೂಲಿಗೆ ಹೋಗುವ ದಾರಿಯಲ್ಲಿ ನನ್ನ ಅದ್ವೈತಿ ಮಿತ್ರರೊಂದಿಗೆ ಪ್ರಾಯಶಃ ಬಾಲಿಶವಾಗಿ ದ್ವೈತಾದ್ವೈತದ ಪಾರಮಾರ್ಥಿಕ ಚರ್ಚೆಯಲ್ಲಿ ಕಾಲ ಕಳೆದವನು. ಹೀಗೆ ನನ್ನ ಜೊತೆ ಅದ್ವೈತದ ಪರ ಚರ್ಚಿಸುತ್ತ ಇದ್ದ ಮಿತ್ರನೊಬ್ಬ ಕೆಲವು ತಿಂಗಳುಗಳ ಹಿಂದೆ ಮೃತನಾದ.

ಮುಂದಿನ ನನ್ನ ಬೆಳವಣಿಗೆಯನ್ನು ಹೇಳುವೆ. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಸ್ಕೂಲಿನಲ್ಲಿ ಅರಿಯುತ್ತ  ಹೋದಂತೆ, ಜೊತೆಗೇ, ಹರಿಜನ ಪತ್ರಿಕೆಯನ್ನು ತಂದು ಓದುವ, ಒಂದು ಮಾಧ್ವ ಮಠದ ಏಜೆಂಟರಾಗಿದ್ದ ನನ್ನ ತಂದೆಯವರ ವೈಯಕ್ತಿಕ ವಿಚಾರಗಳಿಗೆ ಮಿಡಿಯುತ್ತ ಹೋದಂತೆ, ಎಲ್ಲ ಜಾತಿಗಳ ಜನರೂ ನಮ್ಮಂತೆ ಮನುಷ್ಯರು, ನಮಗೆ ಪಾರಮಾರ್ಥಿಕವಾಗಿ ಸಮಾನರು, ಲೌಕಿಕವಾಗಿಯೂ ಸಮಾನರಾಗಬೇಕಾದವರು, ಅಸ್ಪೃಷ್ಯತೆಯನ್ನು ಆಚರಿಸುವುದು ಅನೈತಿಕಮಾತ್ರವಲ್ಲ ಸೃಷ್ಟಿಕರ್ತನ ದೃಷ್ಟಿಯಿಂದ ಅದೊಂದು ಪಾಪದ ಆಚರಣೆ ಇತ್ಯಾದಿಯಾಗಿ ನಾನು, ಕಾರಂತರನ್ನೂ ಕುವೆಂಪುರವರನ್ನೂ ಓದಿದ್ದರಿಂದ ಹಿಂಜರಿಯುವ ನನ್ನ ತಂದೆಯನ್ನೂ ಮೀರಿ, ಬೆಳೆಯುತ್ತ ಹೋದೆ. ಆ ದಿನಗಳಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದು ವರ್ತಿಸುವುದು ಕ್ರಾಂತಿಕಾರಕವಾಗಿ ಕಂಡಿತ್ತು. ಆದರೆ, ನಾನು ಬ್ರಾಹ್ಮಣನೆಂದು ಗೊತ್ತಿರುವವರ ನಡುವೆ ಹೀಗೆ ಉದ್ದೇಶಪೂರ್ವಕವಾಗಿ ಹೇಳಿಕೊಳ್ಳುವುದು ಕೃತಕವಾಗಿ ಕಾಣುತ್ತ ಇತ್ತು. ಈಗಲೂ ಇದು ನಿಜ. ಹೆಸರಿನಿಂದಲೇ ಜಾತಿ ಊಹಿಸುವ ನಾವು, ಯಾರಾದರೂ ತಾವು ಹಿಂದೂ ಎಂದರೆ, ಅವರ ಜಾತಿಯಾವುದೆಂದು ತಿಳಿಯಲು ಅವರ ಅಪ್ಪ ಅಜ್ಜರ ಹೆಸರುಗಳನ್ನು ಕೇಳುತ್ತೇವೆ.

ಎಲ್ಲರನ್ನೂ ವಾತ್ಸಲ್ಯದಿಂದ ಕಾಣುತ್ತ ಇದ್ದ ನನ್ನ ತಾಯಿ ಮಾತ್ರ ಮಡಿಮೈಲಿಗೆ ಬಿಟ್ಟವರಲ್ಲ. ತನ್ನ ಜಾತಿಯ ಬಗ್ಗೆ (ಉಪಜಾತಿ ಎನ್ನುವುದೇ ಹೆಚ್ಚಿನ ಸತ್ಯ)  ನಾಚಿಕೊಂಡ ಆಧುನಿಕರಲ್ಲ. ಅವರಿಗೆ ಶಾಕ್‌ ಆದದ್ದು ಪೇಜಾವರ ಸ್ವಾಮಿಗಳು ಹರಿಜನ ಕೇರಿಗೆ ಹೋದರೆಂದು ಗೊತ್ತಾದಾಗ. ಯಾಕೆ ಹೋದರೋ, ಹೋದಮೇಲೆ ಅವರು ಪಂಚಗವ್ಯ ಶುದ್ಧಿ ಮಾಡಿಕೊಳ್ಳದೇ ಇರುತ್ತಾರೆಯೆ? ಎಂದೇ, ಯಾರನ್ನೂ ನಿಕೃಷ್ಟವಾಗಿ ಕಾಣದ, ಆದರೆ ಜಾತಿ ಬಿಡದ ನನ್ನ ತಾಯಿ ಭಾವಿಸಿದ್ದರು. ಮುಸ್ಲಿಮರ ದೇವರಿಗೆ ಹರಕೆ ಹೊತ್ತರೆ, ಅಂದರೆ ಯಾವುದೋ ದರ್ಗಕ್ಕೆ ಇರಬೇಕು, ಮಕ್ಕಳ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂದೂ ಈ ನನ್ನ ತಾಯಿ ತಿಳಿದಿದ್ದರು. ತನ್ನ ಸಾವು ಸನ್ನಿಹಿತವಾದ ಕಾಲದಲ್ಲಿ ಶನಿಮಹಾತ್ಮೆ ಓದುತ್ತ ಇದ್ದರು. ರಸ್ತೆಬದಿ ಪುಸ್ತಕದಂಗಡಿಗಳಲ್ಲಿ ಸಿಗುವ, ಹಳತಾಗಿ ಹಳದಿ ಬಣ್ಣಕ್ಕೆ ತಿರುಗಿದ, ಅಲ್ಲಿಲ್ಲಿ ಹರಿದ ಹಾಳೆಗಳ, ಚೂಪಾದ ಕಣ್ಣು ಮೂಗಿನ ಶನಿಯ ಚಿತ್ರದ ಮಾಸಿದ ಹೊದಿಕೆಯ ಪುಸ್ತಕವನ್ನು ದಪ್ಪ ಗಾಜಿನ ಕನ್ನಡಕ ತೊಟ್ಟು ವಯಸ್ಸಾಗಿ ಹಣ್ಣಾದ ಮೇಲೆ ಬೆನ್ನು ಮುರಿದುಕೊಂಡವರು ಓದುತ್ತ, ಓದಿದ್ದನ್ನು ತನಗೇ ಅಂದುಕೊಳ್ಳುವಂತೆ ತುಟಿಯಾಡಿಸುತ್ತ, ತನ್ನ ಪಾಡಿಗೆ ತಾನು ತುಳಸಿ ಕಟ್ಟೆಯ ಬಳಿ ಗಾಲಿ ಕುರ್ಚಿಯ ಮೇಲೆ ಕೂತು, ತನ್ನ ಸಾವನ್ನು ಶನಿಕೃಪೆಯಲ್ಲಿ  ಮುಂದೂಡುತ್ತ ಇದ್ದದ್ದು ನೆನಪಾಗುತ್ತದೆ.

ಜಾತಿಯ ಕಟ್ಟುಪಾಡುಗಳನ್ನು ಮದುವೆಯಲ್ಲೇ ಮೀರಿದ ನನ್ನನ್ನು ನೋವಿನಲ್ಲೂ ಒಪ್ಪಿ ಸಹಿಸಿಕೊಂಡದ್ದು ನೆನಪಾಗುತ್ತದೆ.  ಎಲ್ಲ ದೇವರೂ, ನನ್ನ ಹೆಂಡತಿಯ ಧರ್ಮದ ದೇವರೂ,  ದೇವರೇ ಅವರ ಪಾಲಿಗೆ. ಅಂದರೆ ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳದ ಈ ನನ್ನ ತಾಯಿಯೇ ನಿಜವಾದ ಹಿಂದೂ ಎನ್ನಬಹುದೇನೊ? ನಮ್ಮ ದೇಶದ ಕೋಟ್ಯಾಂತರ ಜನರು, ನಾವು ಈಗ ಹಿಂದೂ ಎಂದು ಗುರುತಿಸುವವರು ಹಿಂದೂಗಳಾಗಿರುವುದು ಈ ಬಗೆಯ ವಿರೋಧಾಭಾಸದಲ್ಲೇ.

ಸೆಮಿಟಿಕ್‌ ಧರ್ಮದವರಾದ ಕ್ರಿಶ್ಚಿಯನ್ನರಿಗೆ, ಮುಸ್ಲಿಮರಿಗೆ, ಯಹೂದ್ಯರಿಗೆ ಸೈದ್ಧಾಂತಿಕವಾಗಿ ಇದು ಸಾಧ್ಯವಾಗದು. ಆದರೆ ನಿಜ ಜೀವನದ ಸತ್ಯಗಳೇ ಬೇರೆ;  ಸೈದ್ಧಾಂತಿಕವಾಗಿ ಸಲ್ಲದ ಎಷ್ಟೋ ಸಂಗತಿಗಳು ಬದುಕಿನ ಅತಾರ್ಕಿಕ ಸಂಭ್ರಮದ, ಬೆರಗಿನ ಸತ್ಯಗಳಾಗಿ ಇರುತ್ತವೆ. ದೇವರ ಮೇಲಿನ ಪ್ರೀತಿಯ ಹುಚ್ಚು ಹಿಡಿದವರಂತೂ ಎಲ್ಲ ಮತಧರ್ಮಗಳಲ್ಲೂ ಅವಧೂತರಾಗಿ ಪರಮಾರ್ಥಕ್ಕೆ ಒಳದಾರಿಗಳನ್ನು ಹುಡುಕಿದವರಾಗಿರತ್ತಾರೆ.

ಈ ಯಾವ ವಿಶೇಷ ಅವಸ್ಥೆಗಳ ಗೊಡವೆಗೂ ಹೋಗದ ನನ್ನ ತಾಯಿಯಂಥವರು ಅಪ್ಪಟ ನೈಜ ಜೀವಿಗಳು; ಆದರೆ ನಿಜ ಯಾವುದೆಂದು ತಲೆಕೆಡಿಸಿಕೊಂಡವರಲ್ಲ. ಅವರು ಇರುವ ಸಂದರ್ಭಕ್ಕೂ, ಅವರ ಇರುವಿಕೆಗೂ ನಡುವೆ ಬಿರುಕುಗಳಿಲ್ಲ. ನಮ್ಮ ಇರುವಿಕೆಯ ಸಂದರ್ಭದಿಂದ ಬೇರೆಯಾಗಲು, ಅನ್ಯವಾಗಲು ಯತ್ನಿಸುವ ನಮ್ಮಂಥವರು, ನಿಜದ ಹುಡುಕಾಟದಲ್ಲಿ ನಮ್ಮ ಸಂದರ್ಭದ ನೈಜತೆಯನ್ನ್ನೂ ಮರೆಮಾಚದೆ ಇರಬೇಕೆಂಬ ಆಸೆಯುಳ್ಳವರೂ ಆದವರಾದರೆ ಏನೇನೋ ನಮಗೇ ಅಂದುಕೊಳ್ಳುತ್ತೀವಿ; ಹೊರಗೆ ಏನೇನೋ ಆಗಿ ತೋರಿಕೊಳ್ಳುತ್ತೀವಿ. ಜಾತಿಯನ್ನು ಮೀರಬೇಕೆಂದು ಹಿಂದೂ ಎಂದು ಕೊಳ್ಳುತ್ತೀವಿ. ಹಿಂದೊಂದು ಕಾಲದಲ್ಲಿ ವಿವೇಕಾನಂದರಿಂದಲೋ, ಗಾಂಧಿ ಯಿಂದಲೋ ಪ್ರೇರಿತರಾಗಿ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೀಳಿದು ಹೀಗೆ ಜಾತಿಭಾವನೆ ಮೀರುವಂತೆ ನಾವು ಹುರುಪುಗೊಂಡದ್ದು ಇದೆ. ಆದರೆ ಬ್ರಿಟಿಷರ ಆಡಳಿತದಿಂದ ಬಿಡುಗಡೆಯಾಗಲು ಈ ಹಿಂದುತ್ವದ ಒಗ್ಗಟ್ಟಿನ ಭಾವನೆ ಸಾಲದಾಗಿ ನಾವೆಲ್ಲರೂ ಭಾರತೀಯರು ಎನ್ನುವ ಕಲ್ಪನೆಯನ್ನು – ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಪರ್ಶಿಯನ್ನರು ಒಳಗೊಳ್ಳುವಂತೆ- ಬೆಳೆಸಿಕೊಳ್ಳಬೇಕಾಯಿತು. ನಮ್ಮ ಸ್ವಾತಂತ್ರ್ಯಹೋರಾಟದ ನಾಯಕರೆಲ್ಲರೂ ಇದರ ಫಲವಾಗಿ ಬೆಳೆದವರು. ಇದರಿಂದ ಗಡಿನಾಡಿನ ಗಾಂಧಿಯೆಂದೇ ಖ್ಯಾತರಾದ ಖಾನ್‌ ಅಬ್ದುಲ್‌ ಗಫಾರ್‌ ಖಾನರು ಹೋರಾಟಕ್ಕೆ ದಕ್ಕಿದರು. ಇಸ್ಲಾಂ ಧರ್ಮದ ಟೀಕಾಚಾರ್ಯರೆಂದೇ ಕರೆಯಬಹುದಾದ ಮೌಲಾನಾ ಅಝಾದರು ನಮ್ಮ ಮೊದಲ ಸಾಲಿನ ನಾಯಕರಾದರು.

ಈಗ ಎಲ್ಲವೂ ಬದಲಾಗಿದೆ. ವಿರಾಟ್‌ ಹಿಂದೂ ಜಾಗೃತಿಯ ಸಮ್ಮೇಳನಗಳು ಒಗ್ಗಟ್ಟಿಗಾಗಿಯೋ ಓಟಿಗಾಗಿಯೋ ಎಂಬುದು ಸಾಮಾನ್ಯರಿಗೆ ತಿಳಿಯಲಾಗದಂತೆ ಕಾವಿ ಧರಿಸಿದವರೂ, ರಾಜಕಾರಣಿಗಳೂ ಅದರಲ್ಲಿರುತ್ತಾರೆ. ಈ ಸಮ್ಮೇಳನಗಳು ಒಗ್ಗಟ್ಟಿಗಾದರೆ, ಇಸ್ಲಾಂ ಅನ್ನು ತಮ್ಮ ಜೀವದ ರಕ್ಷಣೆಗಾಗಿ ನಂಬುವವರೂ ಆದ (ಇನ್ನೊಂದು ಧರ್ಮದ ನನ್ನ ತಾಯಿಯಂತೆಯೇ) ನೈಜರೂ ಮುಗ್ಧರೂ ಆದ ಸಾಮಾನ್ಯ ಬಡಪಾಯಿ ಮುಸ್ಲಿಮರನ್ನು ಭಯಗ್ರಸ್ತರನ್ನಾಗಿ ಮಾಡುವ ಉಪಾಯವಾಗಿ ಪರಿಣಮಿಸುತ್ತದೆ. ಇದನ್ನು ಮುಸ್ಲಿಮರು ವಿರೋಧಿಸಬೇಕೆಂಬ ಕಾಲು ಕೆರೆದು ಜಗಳಕ್ಕೆ ಆಹ್ವಾನಿಸುವ ಗೂಳಿಯ ಗುಪ್ತ ಆಶಯವೂ ಅಡಗಿರುತ್ತದೆ. ಬದಲಾಗಿ ಇದು ಓಟಿಗಾಗಿ ಮಾತ್ರ ಆದರೆ (ಹಾಗಿರುವುದೇ ಈ ಕಾಲದಲ್ಲಿ ಹೆಚ್ಚು) ಬಿಜೆಪಿ ವಿರುದ್ಧದ ಕಾಂಗ್ರೆಸ್‌ ರಾಜಕಾರಣವಾಗಿ ಮುಸ್ಲಿಮರು ಸಂಘಟಿತರಾಗುತ್ತಾರೆ. ಮುಸ್ಲಿಮನೊಬ್ಬ ಸತ್ತರೆ ಕಾಂಗ್ರೆಸ್ಸಿಗೆ ಲಾಭ. ಹಿಂದೂ ಸತ್ತರೆ ಬಿಜೆಪಿಗೆ ಲಾಭ. ಇದು ಓಟಿನ ರಾಜಕಾರಣ. ನಾವೆಲ್ಲರೂ ಬೇರೆ ಪರ್ಯಾಯ ಕಾಣದೆ ಬೆಂಬಲಿಸುವ ಪ್ರಜಾತಂತ್ರದ ಹೊಟ್ಟೆಯಲ್ಲೇ ಹುಟ್ಟುವ ಆಮಶಂಕೆಯಂತಹ ಕಾಯಿಲೆ ಇದು. ಎಲ್ಲ ಪಕ್ಷಗಳೂ ಹುಟ್ಟುಹಾಕುವ ಕಾಯಿಲೆ. ಪ್ರಜಾತಂತ್ರದ ಅಗತ್ಯವಾದ ಚುನಾವಣೆಯ ರಾಜಕಾರಣವನ್ನು ಮನಸಾರೆ ಒಪ್ಪಿಕೊಳ್ಳುವದೂ ಸಾಧ್ಯವಾಗದ, ನಿರಾಕರಿಸಲೂ ಸಾಧ್ಯವಾಗದ ಬಿಕ್ಕಟ್ಟಿನಲ್ಲಿ ನಾವು ಕಂಗೆಡುತ್ತೇವೆ.

ಇರಾಕಿನ ಸರ್ವಾಧಿಕಾರಿಯಾಗಿದ್ದ ಆಳೆತ್ತರದ ಸದ್ದಾಂನನ್ನು ಗಲ್ಲಿಗೇರಿಸುವಾಗ ಅವನ ಸಾಯಲಿರುವ ಮಾನವ ಜೀವದ ದೇಹಕ್ಕೆ ಯಾವ ಮರ್ಯಾದೆಯನ್ನೂ ಕೊಡದಂತೆ ಹೀಯಾಳಿಸಿ ಕೊಂದ ದೃಶ್ಯವನ್ನು ಕಂಡು ನನ್ನ ಹೊಟ್ಟೆ ತೊಳೆಯಿಸಿದಂತೆ ಅಸಹ್ಯವೆನ್ನಿಸಿತು. ಹೀಯಾಳಿಸಿದವರು ಶಿಯಾಗಳು. ಸದ್ದಾಂ ಸೆಕ್ಯುಲರ್‌ ಪ್ರಭುತ್ವ ನಡೆಸಿದವನು. ಭಾರತಕ್ಕೆ ಸ್ನೇಹಿತನಾಗಿ ಇದ್ದವನು. ಆದರೆ ಶಿಯಾ ಇರಾನ್‌ ವಿರುದ್ಧ ಅಮೆರಿಕನ್‌ ಸಹಾಯ ಪಡೆದು ಯುದ್ಧ ಮಾಡಿದವನು. ಮುಸ್ಲಿಮರೇ ಆದ ಇನ್ನೊಂದು ಜನಾಂಗವನ್ನು ವಿಷವಾಯು ಬಳಸಿ ನಿರ್ನಾಮ ಮಾಡಲು ಅಂಜದವನು. ಶಿಯಾ-ಸುನ್ನಿ ಜಗಳ ನನಗಂತೂ ನಮ್ಮ ಶೈವ-ವೈಷ್ಣವ ಪ್ರಾಚೀನ ಕಾದಾಟದಂತೆಯೇ ಅರ್ಥಹೀನವೆನ್ನಿಸುತ್ತದೆ. ಎಲ್ಲ ರಾಷ್ಟ್ರಕಟ್ಟುವವರಂತೆ- ಹಿಟ್ಲರ್‌ನಂತೆ, ನೆಪೋಲಿಯನ್‌ನಂತೆ, ಸ್ಟಾಲಿನ್‌ನಂತೆ, ಮಾವೋನಂತೆ- ನಿರ್ದಯವಾಗಿ ವರ್ತಿಸಿದವನು ಈ ಸೆಕ್ಯಲರ್‌ ಪ್ರಭುತ್ವದ ಸದ್ದಾಂ. (ಇಪ್ಪತ್ತನೇ ಶತಮಾನದಲ್ಲಿ ಹೆಚ್ಚು ಹಿಂಸೆ ನಡೆಸಿದವರು ಸೆಕ್ಯುಲರಿಸ್ಟರೇ) ಇವನನ್ನು ಅಮೆರಿಕಾ ಮತ್ತು ಇಂಗ್ಲೆಂಡು ನಿರ್ನಾಮ ಮಾಡಿದ್ದು ಪ್ರಜಾತಂತ್ರಕ್ಕಾಗಿ ಅಲ್ಲ;  ಇರಾಕಿನ ಪೆಟ್ರೋಲ್‌ಗಾಗಿ. ಶಿಯಾ ದ್ವೇಷವನ್ನು ಬಳಸಿಕೊಂಡಿದ್ದು ಅಮೆರಿಕಾದ ಪ್ರಭುತ್ವ. ನಮ್ಮಲ್ಲಿ ಹಿಂದೂಗಳನ್ನೂ ಮುಸ್ಲಿಮರನ್ನೂ ಒಡದು ಆಳಿದ ಬ್ರಿಟಿಷ್‌ ರಾಜಕಾರಣದ ಮುಂದುವರಿಕೆ ಇದು.

ಏನನ್ನು ಹೇಳಲು ಮೇಲಿನದನ್ನೆಲ್ಲ ಬರೆದೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಸದ್ದಾಂ ಪರವಾಗಿ ಬೆಂಗಳೂರಿನಲ್ಲಿ ಮುಸ್ಲಿಮರನ್ನು ಸಂಘಟಿಸುವುದು ಅನವಶ್ಯಕವಾಗಿತ್ತು. ಅಮೆರಿಕಾದ ಒಡೆದಾಳುವ, ಇಡೀ ಜಗತ್ತನ್ನು ತನ್ನ ಮಾರುಕಟ್ಟೆ  ಮಾಡುವ ಉಪಾಯಗಳನ್ನು ವಿರೋಧಿಸಲು ಇರಾಕ್‌ ಆಕ್ರಮಣವನ್ನು ನಾವು ವಿರೋಧಿಸಬೇಕಿತ್ತು. ಮುಸ್ಲಿಮರು ಮಾತ್ರವಲ್ಲ ಹಿಂದೂಗಳಿಗೂ ಇದು ಅಗತ್ಯವಾದ ಆಂದೋಳನವಾಗಬೇಕಿತ್ತು. ಹೀಗೆ ಮುಸ್ಲಿಮರನ್ನು ಒಟ್ಟುಮಾಡಲು ಯಾರೋ ಪ್ರಯತ್ನಿಸಿದಾಗ ಹಿಂದೂ ವಿರಾಟ್‌ ಸಮ್ಮೇಳನಗಳು ಅದಕ್ಕೆ ವಿರೋಧವಾಗಿ ಹುಟ್ಟಬಾರದಿತ್ತು.

ಈಗ ನಡೆಯುವುದೆಲ್ಲವೂ ಮಾರುಕಟ್ಟೆ ವಿಸ್ತರಣದ ರಾಜಕಾರಣ. ಗುಜರಾತಿನಲ್ಲಿ ಸದ್ದಾಂನಷ್ಟು ಏಕಾಧಿಪತ್ಯದ ಅವಕಾಶವಿದ್ದಲ್ಲಿ ಅವನನ್ನೇ ನಾಚಿಸಬಹುದಾಗಿದ್ದ ಮಾರಣಹೋಮವನ್ನು  ತಡೆಯದಂತೆ ಆಗಲು ಬಿಟ್ಟ ಮುಖ್ಯಮಂತ್ರಿ ಮೋದಿ ಈಗ ಎಲ್ಲ ಉದ್ಯಮಿಗಳ ವಿಕಾಸವಾದೀ ಹೀರೋ. ರಿಲಯನ್ಸ್‌ ನವರು, ಟಾಟಾದವರು, ಇನ್‌ ಫೋಸಿಸ್‌ನವರು ಮೋದಿಯನ್ನು ಅಪ್ಪಿಕೊಳ್ಳುತ್ತಾರೆ. ಮೋದಿ ಮುಂದಿನ ಹಿಂದುತ್ವದ ರೂವಾರಿ. ಜಿನ್ನಾರನ್ನು ಹೊಗಳಿದ ಅದ್ವಾನಿಯವರೂ ಅಲ್ಲ; ಲಾಹೋರಿಗೆ ಬಸ್ಸಿನಲ್ಲಿ ಹೋಗಿ ನಮ್ಮ ಮೆಚ್ಚುಗೆ ಗಳಿಸಿದ ವಾಜಪೇಯಿಯವರೂ ಅಲ್ಲ. ಬುಷ್‌ನಂತೆಯೇ  ಗುಜರಾತಿನ ಮೋದಿ ಕೂಡಾ ಪರಮ ಲೌಕಿಕ; ಜಾಗತಿಕ ಮಾರುಕಟ್ಟೆಗೆ ಸಲ್ಲುವ ಹಿಂದುತ್ವದ ಎನ್‌ ಆರ್‌ ಐಗಳ ಅಪ್ಪಟ ಸಿದ್ಧಾಂತಿ. ಈಗ ನಾವೇನು ಮಾಡಬೇಕು? ಹಿಂದೂಗಳಿಗೆ ಹೇಳಬೇಕು: ನಮ್ಮ ಸಂಸ್ಕೃತಿಯದೇ ಆದ ಜೀವನ ಕ್ರಮವನ್ನು ನಾಶ ಮಾಡುವವರು ಮುಸ್ಲಿಮರಲ್ಲ; ಅಮೇರಿಕಾದ ಪ್ರಭುತ್ವ. ಮುಸ್ಲಿಮರು ಅರಿಯಬೇಕು. ಅವರ ಸಂಸ್ಕೃತಿಯ ನಾಶವಾಗುವುದು ಬಡಪಾಯಿಗಳಾದ ಹಿಂದೂಗಳಿಂದ ಅಲ್ಲ; ಅಮೇರಿಕಾದಿಂದ. ನಮ್ಮ ಮತಧರ್ಮಗಳ ಅಲೌಕಿಕ ಒಳನೋಟಗಳು ಆಧುನಿಕ ಪ್ರಭುತ್ವ ರಾಜಕಾರಣದ ಸದ್ಯದಲ್ಲಿ ಆಕರ್ಷಕವೆನ್ನಿಸುವ ವಿಕಾರಗಳಿಂದ ನಮ್ಮನ್ನು ಪಾರುಮಾಡುವ ಪ್ರೇರಣೆಗಳಾಗಬೇಕು; ಬದಲಾಗಿ ಪರಸ್ಪರ ಹಿಂಸೆಗೆ ಅವು ಕಾರಣಗಳಾಗಿವೆ. ಗೋಡ್ಸೆ ಗಾಂಧಿಯನ್ನು ಕೊಂದದ್ದು ಧಾರ್ಮಿಕ ಕಾರಣಕ್ಕಾಗಿ ಅಲ್ಲ; ಲೌಕಿಕ ಖದೀಮತೆಯಲ್ಲೂ ಉಪಾಯಗಳಲ್ಲೂ ಬೆಳೆಸಬೇಕಾದ ಬಲಿಷ್ಠಗೊಳಿಸಬೇಕಾದ ರಾಷ್ಟ್ರ ರಾಜಕಾರಣದಲ್ಲಿ ಅವರು ಹಿಂದೂ ಧರ್ಮದ ಆಳದಲ್ಲಿರುವ ಪಾರಮಾರ್ಥಿಕ ನೈತಿಕತೆಯನ್ನು ತಂದರು ಎಂಬುದು ಗಾಂಧೀ ಕೊಲೆಗೆ ಕಾರಣವಾಯಿತು. ಇಲ್ಲಿ ಕೊಂದವನು ಲೌಕಿಕ ರಾಷ್ಟ್ರೀಯವಾದಿ; ಸತ್ತವನು ಪಾರಮಾರ್ಥಿಕ ಮೌಲ್ಯಗಳನ್ನು ಅಕ್ಷರಶಃ ಆಚರಿಸಲು ಯತ್ನಿಸಿದ ಸಂತ.

***

ಮಹಾರಾಷ್ಟ್ರದಲ್ಲಿ ಮುಸ್ಲಿಮರ ಮೂರ್ಖ ಮತೀಯತೆಯನ್ನೂ ಹಿಂದೂಗಳ ಪ್ರತಿರೋಧದ ಮತೀಯತೆಯನ್ನೂ ಟೀಕಿಸುತ್ತ ಇದ್ದ ದಿಟ್ಟ ನಿಲುವಿನ ಸೋಷಲಿಸ್ಟ್‌ ಧೋರಣೆಯ ಕ್ರಿಯಾಶೀಲರಾದ ಲೇಖಕರೊಬ್ಬರು ಇದ್ದರು. ಇವರ ಹೆಸರು ಹಮೀದ್‌ ದಲ್ವಾಯಿ. ಪಾಕೀಸ್ಥಾನದ ಬೇಡಿಕೆಯಿಂದ ಪ್ರಾರಂಭವಾದ ಮುಸ್ಲಿಮ್‌ ಮತೀಯ ರಾಜಕಾರಣವನ್ನು ಇವರು ನಿರ್ದಯವಾಗಿ ಖಂಡಿಸುತ್ತ ಇದ್ದರು. ಹಾಗೆಯೇ ಮುಸ್ಲಿಮರು ಹೆಚ್ಚು ಹೆಚ್ಚು  ಮತೀಯರಾಗಲು ಕಾರಣ ಹಿಂದೂ ಮತೀಯತೆಯೆಂದೂ ಗುರುತಿಸಿದ್ದರು. ಮುಸ್ಲಿಮರಲ್ಲಿ ಧೀಮಂತರಾದವರು ತಮ್ಮ ಜನರ ಮತೀಯ ರಾಜಕಾರಣವನ್ನು ಟೀಕಿಸಬೇಕೆಂದೂ, ಹಿಂದೂಗಳು ತಮ್ಮ ಜನಗಳ ಮತೀಯ ರಾಜಕಾರಣವನ್ನು ತಿರಸ್ಕರಿಸಬೇಕೆಂದೂ ಅವರು ಹೋರಾಡಿದ್ದರು. ಅವರನ್ನು ಹಿಂದೂ ಧೀಮಂತರೇ ಹೆಚ್ಚು ಮೆಚ್ಚುತ್ತ ಇದ್ದುದರಿಂದ ಮುಸ್ಲಿಮರು ಅವರನ್ನು ಅನುಮಾನಿಸುವಂತೆ ಆದದ್ದು ಒಂದು ದುರಂತ. ಇದು ಎಲ್ಲ ಧೀಮಂತ ಮುಸ್ಲಿಮ್‌ ನಾಯಕರ ದುರಂತ. ನ್ಮ್ಮ ಕಾಲದ ದುರಂತವೂ ಹೌದು.

ಹಿಂದೂ ವಿರಾಟ್‌ ಸಮ್ಮೇಳನಗಳ ರಾಜಕಾರಣವನ್ನೂ, ಮುಸ್ಲಿಮ್‌ ಮತೀಯತೆಯ ರಾಜಕಾರಣವನ್ನೂ ವಿರೋಧಿಸುವ, ಅವು ಹುಟ್ಟಿಸುವ ಕ್ರೌರ್ಯದಿಂದ ಹೇಸುವ ನಮ್ಮಂಥವರು ಏನು ಮಾಡಬಹುದು? ಸದ್ಯ ಯಾವ ಮತೀಯ ವಿರಾಟ್‌ ಸಮ್ಮೇಳನಗಳಿಗೂ ಸರ್ಕಾರ ಸಾರ್ವಜನಿಕ ಕ್ಷೇಮದ ದೃಷ್ಟಿಯಿಂದ ಅನುಮತಿ ಕೊಡದಂತೆ ಒತ್ತಾಯಿಸಬೇಕು. ಸಾಮಾನ್ಯ ಜನರ ದೈವ ಶ್ರದ್ಧೆಗೂ ಮತೀಯ ರಾಜಕಾರಣಕ್ಕೂ  ಸಂಬಂಧವಿಲ್ಲ  ಎಂಬುದನ್ನು ಗುರುತಿಸಬೇಕು. ಮತೀಯ ರಾಜಕಾರಣದ ಅಧ್ವರ್ಯುಗಳಾದ ಸಾವರ್ಕರರೂ ದೈವಶ್ರದ್ಧೆ ಇದ್ದವರಲ್ಲ. ಜಿನ್ನಾರಿಗೂ ದೈವ ಶ್ರದ್ಧೆಯಿರಲಿಲ್ಲ. ಸಾಮಾನ್ಯರು ಅವರಿಂದ ಮೋಸಹೋದರು. ಹಿಂದೆ ನಾವು ಚರಿತ್ರೆಯಲ್ಲಿ ಮುಸ್ಲಿಮರು ನಮ್ಮನ್ನು ಆಳಿದರೆಂದು ಹೇಳುತ್ತ ಇರಲಿಲ್ಲ. ಮೊಗಲರು, ತುರುಕರು ಇತ್ಯಾದಿ ನಮ್ಮನ್ನು ಆಳಿದರು ಎಂದುಕೊಂಡಿದ್ದೆವು. ನಮ್ಮ ಚರಿತ್ರೆಯುದ್ದಕ್ಕೂ ಇಸ್ಲಾಂ ನಂಬಿದವರೇ ತಮ್ಮಂತೆ ನಂಬಿದವರಿಗೆ ವಿರೋಧಿಗಳಾಗಿ ಹೋರಾಡಿದ್ದರು. ಹಿಂದೂಗಳು ಹಿಂದೂಗಳ ವಿರುದ್ಧ ಹೋರಾಡಿದ್ದರು.  ಹಿಂದೂ ಪ್ರಭುತ್ವದ ಪರವಾಗಿ ಮುಸ್ಲಿಮ್‌ ಸೈನಿಕರು, ಮುಸ್ಲಿಂ ಪ್ರಭುತ್ವದ ಪರವಾಗಿ ಹಿಂದೂ ಸೈನಿಕರು ಕಾದಾಡಿದ್ದರು. ನಾವು ಬ್ರಿಟಿಷ್‌ ಆಳ್ವಿಕೆಯನ್ನು ಎಂದೂ ಕ್ರಿಶ್ಚಿಯನ್‌ ಆಳ್ವಿಕೆಯೆಂದು ಕರೆದಿರಲಿಲ್ಲ.

ಎಲ್ಲ ಕಾಲದಲ್ಲೂ ರಾಜ ರಾಜನೇ; ಪ್ರಜೆಗಳು ಪ್ರಜೆಗಳೇ. ಬದುಕಿನ ಸಂದರ್ಭದ ನೈಜತೆಯನ್ನು ಒಪ್ಪಿಕೊಂಡು ಬದುಕುವವರೆಲ್ಲರೂ ಅಹನ್ಯಹನಿ ತಮ್ಮ ಬಾಳನ್ನು ಬದುಕಿ ಸಾಯುತ್ತಾರೆ. ಆದರೆ ನಿಜವೇನೆಂದು ಪಾರಮಾರ್ಥಿಕವಾದ ಹುಡುಕಾಟದಲ್ಲಿ ಇರುವವರಿಗೆ ಒಮ್ಮೊಮ್ಮೆ ಎಲ್ಲ ಮತಧರ್ಮಗಳೂ  ಅಪೂರ್ಣವೆನ್ನಿಸಿಬಿಡುತ್ತದೆ. ಆಗ ಜಾತಿಯನ್ನು ಮೀರಬೇಕಾಗುತ್ತದೆ; ಮತಗಳನ್ನು ಮೀರಬೇಕಾಗುತ್ತದೆ. ಅಂದರೆ ಅವುಗಳಲ್ಲಿ ಇರುವ ಸತ್ಯಗಳನ್ನು ಗ್ರಹಿಸಿ ವಿನಯದಲ್ಲಿ ಮೀರಬೇಕಾಗುತ್ತದೆ. ತಮ್ಮ ನಿಲುವನ್ನು ಸತತವಾದ ಶೋಧನೆಗೆ ಒಳಪಡಿಸಿಕೊಂಡು ಮುಂದುವರಿಯಬೇಕಾಗುತ್ತದೆ. ವೇದವ್ಯಾಸ, ಟಾಲ್‌ಸ್ಟಾಯ್‌ ಶೇಕ್ಸಪಿಯರ್‌, ನಮ್ಮ ಬೇಂದ್ರೆ ಕುವೆಂಪು ಕಾರಂತರಂಥವರು ಎಡವಲು ಹೆದರದೆ ನಡೆದಂಥವರು. ಖೊರಾನ್‌, ಬೈಬಲ್‌, ವೇದೋಪನಿಷತ್ತುಗಳು, ಶರಣರ ವಚನಗಳು ತೆರೆಯುವ ಪ್ರಪಂಚದಲ್ಲಿ ಈ ಸೃಜನಶೀಲ ಲೇಖಕರಿಗೂ, ಸತ್ಯಾನ್ವೇಷಿಗಳಾದ ವಿಜ್ಞಾನಿಗಳಿಗೂ ಇಣುಕಲು, ತಮ್ಮ ಅನುಭವದ ಮಾತುಗಳನ್ನು ಸ್ವತಂತ್ರ ಸಾಕ್ಷಿತ್ವದಲ್ಲಿ ಹೇಳಲು ಅವಕಾಶವಿದ್ದಲ್ಲಿ ನಮ್ಮ ಪಾರಮಾರ್ಥಿಕ ನಿಜದ ಹುಡುಕಾಟ ಮುಂದುವರೆಯುತ್ತ ಹೋಗುತ್ತದೆ. ಇಲ್ಲವಾದರೆ ಈ ವಿರಾಟ್‌ ಸಮ್ಮೇಳನಗಳಲ್ಲಿ, ಬಲ ಪ್ರದರ್ಶನದ ಮಾರ್ಚುಗಳಲ್ಲಿ ಗುಜರಾತ್‌ ಬಗೆಯ ಕ್ರೌರ್ಯ, ಪಾರ್ಟಿಶನ್‌ ಕಾಲದ ಕ್ರೌರ್ಯ ಬಲಿಷ್ಠ ಹಿಂದೂಗಳನ್ನೂ ಬಲಿಷ್ಠ ಮುಸ್ಲಿಮರನ್ನೂ ರಾಕ್ಷಸರನ್ನಾಗಿ ಮಾಡುತ್ತದೆ; ಬಡಪಾಯಿ ಹಿಂದೂಗಳನ್ನೂ, ಮುಸ್ಲಿಮರನ್ನೂ ಬಲಿಪಶುಗಳಾಗುವಂತೆ ಮಾಡುತ್ತದೆ.

ಬ್ರಾಹ್ಮಣನಾಗಿ ಹುಟ್ಟಿ ಬ್ರಾಹ್ಮಣನಾಗಿ ಮಾತ್ರ ಉಳಿಯಬಯಸದೆ, ಮತದಿಂದ ಹೊರಗೆ ಮದುವೆಯಾಗಿ ಮತಾಂತರವಾಗಲು ಬಯಸದೆ, ನಾನು ಬೆಳೆದ ಬ್ರಾಹ್ಮಣ ಸಂದರ್ಭದ ನೆನಪುಗಳನ್ನು ಕಳೆದು ಕೊಳ್ಳದವನಾಗದೆ, ಈ ಕಾಲದ ಹಿಂದುತ್ವವನ್ನು ಒಪ್ಪಿಕೊಳ್ಳಲಾರದೆ ಇರುವ ನನ್ನ ವಿಚಾರಗಳನ್ನು ಬರೆದುಕೊಂಡಿದ್ದೇನೆ. ಯಾವ ಮತಧರ್ಮದಲ್ಲೂ ಪೂರ್ಣಸತ್ಯವನ್ನು ಕಾಣಲಾರದೆ, ಆದರೆ ಪರಮಾರ್ಥದ ಹುಡುಕಾಟವನ್ನು ಬಿಟ್ಟುಕೊಡಲಾರದೆ ಬದುಕುತ್ತ ಇರುವ ನನ್ನಂಥವರು, ನನಗಿಂತ ಉತ್ತಮರು ಆಗಿಹೋಗಿದ್ದಾರೆ. ಆದರೆ ಇನ್ನು ಮುಂದೆ ಹುಟ್ಟುವವರೂ ಇದ್ದಾರೆಂಬ ವಿನಯದ ಆಶಯ, ಈ ಆಶಯಗಳನ್ನು ಮತೀಯ ಕ್ರೌರ್ಯ ನಾಶಗೊಳಿಸಿಬಿಡಬಹುದೆಂಬ ತಲ್ಲಣ  ಈ ಬರಹದ ಹಿಂದಿನ ಆತಂಕಗಳಲ್ಲಿ ಅಡಗಿದೆ.

ಭಾಷಾಂತರದ ಗಂಡಾಂತರ

ಕನ್ನಡವು ಕನ್ನಡವ ಕನ್ನಡಿಸುತಿರಬೇಕು-ದ.ರಾ.ಬೇಂದ್ರೆ

ಗಾಯತ್ರಿ ಸ್ಪೀವಾಕ್‌ ಅವರು `ಟ್ರಾನ್ಸ್‌ಲೇಷನ್‌ ಥಿಯರಿ' ಬಗ್ಗೆ ಅನನ್ಯವಾದ ಒಳನೋಟ ಪಡೆದವರು- ಬಂಗಾಳದ ಮೂಲ ನಿವಾಸಿಗಳ ನಡುವೆ ಅವರು ಮಾಡುತ್ತಿರುವ ಕೆಲಸದ ಮೂಲಕ, ಜೊತೆಗೇ ಮಹಾಶ್ವೇತದೇವಿಯವರ ಕೃತಿಗಳನ್ನು ಇಂಗ್ಲಿಷಿಗೆ ತರುವುದರ ಮೂಲಕ. ವಸಾಹತುಶಾಹಿಯ ವಿರುದ್ಧದ ಅವರ ಹೋರಾಟದಲ್ಲಿ ಡೆರಿಡಾನನ್ನು ಮೂಲದಲ್ಲಿ ನೋಡಿ ಅರ್ಥ ಮಾಡಿಕೊಂಡು ಅನುವಾದಿಸಿದವರು ಇವರು. ಸ್ಪೀವಾಕ್‌ ಟ್ರಾನ್ಸ್‌ಲೇಷನ್‌ಗೆ ಬಳಸುವ ಪದ ಅನುವಾದ. ಅನುಸರಿಸು, ಅನುವಾಗು, ಅನುಸಂಧಾನಿಸು-ಈ ಅರ್ಥಗಳನ್ನು ಹೊಳೆಯಿಸುವ ಪದ ಅನುವಾದ. ಭಾಷಾಂತರಕ್ಕಿಂತ ಸೂಕ್ಷ್ಮವಾದ ಹೊಳಹುಗಳು ಅನುವಾದ ಶಬ್ದದಲ್ಲಿ ಇದೆ ಎಂದುಕೊಳ್ಳಬಹುದು.

ಅನುವಾದಿಸುವುದೆಂದರೆ ಮೂಲಕ್ಕೆ ಹತ್ತಿರವಾಗುವುದು. ಕನ್ನಡ ಭಾಷೆ ಅಭ್ಯಾಸಗತವಾದ ಸಂಸ್ಕೃತದ ನುಡಿಕಟ್ಟುಗಳಿಂದಲೂ ವೃತ್ತಗಳಿಂದಲೂ ಬಿಡುಗಡೆ ಪಡೆಯಲು, ಆಧುನಿಕಕ್ಕೆ ಸ್ಪಂದಿಸಲು ಇಂಗ್ಲಿಷ್‌ ಕಾವ್ಯವನ್ನ್ನು ಕನ್ನಡಕ್ಕೆ ಅನುವಾದಿಸಿಕೊಂಡಿತು. ಹೀಗೆ ಚಾರಿತ್ರಿಕವಾಗಿ ಸದ್ಯದ ಕನ್ನಡಕ್ಕೆ ಹತ್ತಿರವಾಯಿತು. ಬಿಎಂಶ್ರೀ ಅವರು ಇಂಗ್ಲಿಷ್‌ ಮುಖೇನ ಕನ್ನಡವನ್ನು ಹೊಸ ಕಾಲದ ಒತ್ತಡಗಳಿಗೆ ಅನುವಾಗುವಂತೆ ಸಡಿಲಿಸಿಕೊಂಡರು. ಬಿಎಂಶ್ರೀ ಹುಡುಕಿದ ಹೊಸ ಲಯಗಳಿಂದ ಕುವೆಂಪು, ಕೆ.ಎಸ್‌. ನರಸಿಂಹಸ್ವಾಮಿ ಮತ್ತು ಅಡಿಗರು ಕನ್ನಡದಲ್ಲಿ ಬರೆಯುವುದು ಸಾಧ್ಯವಾಯಿತು. ಬೇಂದ್ರೆಗೂ ಇದು ಉಪಯೋಗವಾಯಿತು. ಆದರೆ ಅವರಿಗೆ ಇಂಗ್ಲಿಷ್‌ನ ಹಂಗಿಲ್ಲದೆ ಬರೆಯುವುದೂ ಸಾಧ್ಯವಿತ್ತು. ಯಾಕೆಂದರೆ ಇವರು ಜಾನಪದ ಪ್ರಜ್ಞೆಯನ್ನು ಕನ್ನಡದ ಹೊಸ ಅಗತ್ಯಕ್ಕೆ ಅನುವಾಗುವಂತೆ ಅನುವಾದಿಸಿಕೊಂಡರೆಂದೇ ಹೇಳಬಹುದು. ಆದರೆ ಈ ಎಲ್ಲಾ ಲೇಖಕರಲ್ಲೂ ಇಂಗ್ಲಿಷ್‌ ಮುಖೇನ ನಮ್ಮ ಸಂಪ್ರದಾಯದ ಬಿಗಿಗಳಿಂದ ಬಿಡುಗಡೆಯಾಗುವುದರ ಜತೆಗೆ, ಇಂಗ್ಲಿಷ್‌ನಿಂದಲೂ ಬಿಡುಗಡೆ ಯಾಗಿ ಕನ್ನಡದ ಒಂದು ಸಾವಿರ ವರ್ಷದ ಒಳಗನ್ನು ಬೆಳೆಯಿಸಿ ಬೆಳಗಿಸಿಕೊಂಡು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಅಭೀಪ್ಸೆಯೂ ಇತ್ತು. ಇಂಗ್ಲಿಷ್‌ನ ಕಾದಂಬರಿ ಪರಂಪರೆಗೆ ಹತ್ತಿರವಾಗಲು ಹೊರಟ ಕಾರಂತರು ಚೋಮನ ತುಳುವಿಗೆ ಹತ್ತಿರವಾಗಿ ಅವನನ್ನು ತಮ್ಮ ಕನ್ನಡದ ಲೋಕಕ್ಕೆ ಅನುವಾದಿಸಿಕೊಳ್ಳಲು ಆಗದೇ ಹೋಗಿದ್ದರೆ ಅವರು ದೊಡ್ಡ ಕಾದಂಬರಿಕಾರರಾಗುತ್ತಲೇ ಇರಲಿಲ್ಲ.

ಇಂಗ್ಲಿಷ್‌ನಿಂದ ನಮಗೆ ಲಭ್ಯವಾದ ಈ ಎಲ್ಲಾ ಉಪಕಾರಗಳನ್ನು ಸ್ಮರಿಸುತ್ತಲೇ ಈಗ ಇಂಗ್ಲಿಷ್‌ ನಮಗೆ ಕಂಟಕವಾಗಿರುವುದನ್ನು ಗುರುತಿಸಿಕೊಳ್ಳಬೇಕಾಗಿದೆ. ಇವತ್ತು ಇಂಗ್ಲಿಷ್‌ ಕಲಿತರೆ ಸಾಕಾಗದು; ಅಮೆರಿಕನ್ನರಂತೆ ಮಾತಾಡಲೂ ಕಲಿತಿರಬೇಕು. ಆಗ ಇನ್ನೇನೂ ಮಾಡದೆ 20,000 ರೂಪಾಯಿ ಸಂಬಳ ಬರುವ ಕಾಲ್‌ ಸೆಂಟರಿನ ಕೂಲಿ ದೊರೆಯುತ್ತದೆ. ನಮ್ಮ ರಾತ್ರಿಗಳನ್ನು ಅಮೆರಿಕದ ಹಗಲಿಗೆ ಮುಡಿಪಿಟ್ಟು ದುಡಿಯುವ ಸಾಧನವಾಗಿ (ಜ್ಞಾನಾರ್ಜನೆಯ ಸಾಧನವಾಗಿ ಅಲ್ಲ) ಈ ಇಂಗ್ಲಿಷ್‌ ಬಳಕೆಯಾಗುತ್ತಿದೆ. ಶಿಲ್ಪಾ ಶೆಟ್ಟಿಯವರ ಉಚ್ಚಾರಣೆಯನ್ನು ಮೂದಲಿಸಲು ಇಂಗ್ಲಿಷ್‌ ಬಳಕೆಯಾಗುತ್ತ ಇದೆ, ಈ ಮೂದಲಿಕೆಯನ್ನು ಇಡೀ ಜಗತ್ತೇ ಕಾಣುವಂತಾಗಲು, ಅದನ್ನು ಬಿತ್ತರಿಸುವ ಟೆಲಿವಿಷನ್‌ ಚಾನೆಲ್‌ ಅನ್ನು ನೋಡುವವರ ಸಂಖ್ಯೆ ಈ ಸುದ್ದಿ ಸ್ಫೋಟದಿಂದ ಬೆಳೆಯುವಂತಾಗಲು, ಬೆಳೆಯುವ ಚಾನೆಲ್‌ ಮುಖೇನ ಮಾರುವ ಸರಕುಗಳು ಇನ್ನೂ ಹೆಚ್ಚು ಮಾರಾಟವಾಗುವಂತಾಗಲು ಒದಗಿರುವ ಜಾಗತಿಕ ಭಾಷೆ ಇಂಗ್ಲಿಷ್‌ ಆಗಿದೆ.

ನಾವೆಲ್ಲರೂ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬೇಕು ಎಂದಾಗ ಪಾಶ್ಚಾತ್ಯ ಜ್ಞಾನ ಕನ್ನಡದಲ್ಲಿ ಭಾಷಾಂತರವಾಗಿ ದೊರಕಲಿ ಎಂದು ಮಾತ್ರ ಕೇಳುತ್ತಿರುವುದಲ್ಲ; ಕನ್ನಡದಲ್ಲಿ ಜ್ಞಾನದ ಸೃಷ್ಟಿಯಾಗಬೇಕೆಂದು ನಾವು ಕೇಳುತ್ತಿರುವುದು. ಈ ಸೃಷ್ಟಿಯಲ್ಲಿ ಇನ್ನೂ ಹೊರಹೊಮ್ಮದ ಗುಪ್ತಶಕ್ತಿಯ ಕೆಳವರ್ಗದ ಎಲ್ಲ ಜನರೂ ಪಾಲಾಗಬೇಕು, ಅರಳಬೇಕು ಎಂದು ನಾವು ಬಯಸುತ್ತ ಇರುವುದು.

ಬಹಳ ಹಿಂದೆಯಲ್ಲ, ಸುಮಾರು ಐನೂರು ವರ್ಷಗಳ ಹಿಂದೆ, ಇಂಗ್ಲಿಷ್‌ನಲ್ಲಿ ಜ್ಞಾನದ ಸೃಷ್ಟಿ ಸಾಧ್ಯವಾಗಲು ಅಶ್ಶಾಮ್‌ ಮುಲ್‌ ಕಾಸ್ಟರ್‌ರಂತಹ ಬಹಳ ಜನ ಕೆಲಸ ಮಾಡಿದ್ದಾರೆ. ಇಲ್ಲವಾದರೆ ಜ್ಞಾನವೆಲ್ಲಾ ಲ್ಯಾಟಿನ್‌ ಬಲ್ಲ ಮೇಲ್ವರ್ಗದ ಬಳಿಯೇ ಉಳಿದಿರುತ್ತಿತ್ತು. ಸಾಮಾನ್ಯ ಜನರಿಂದ ಹುಟ್ಟಿ ಬಂದ ಷೇಕ್ಸ್‌ಪಿಯರ್‌ನಂಥವನೊಬ್ಬ ಸಾಧ್ಯವಾದದ್ದು ಜನ ಸಾಮಾನ್ಯರ ಇಂಗ್ಲಿಷ್‌ಭಾಷೆ ಜ್ಞಾನ ಸೃಷ್ಟಿಯ ಭಾಷೆಯೂ ಆಗಿದ್ದರಿಂದ. ಷೇಕ್ಸ್‌ ಪಿಯರ್‌ ಮಾತ್ರವಲ್ಲ, ಜಗತ್ತನ್ನು ಅಲ್ಲಾಡಿಸಿದ ಡಾರ್ವಿನ್‌ ಬರೆದದ್ದೂ ಇಂಗ್ಲಿಷ್‌ನಲ್ಲಿ. ರಷ್ಯದಲ್ಲೂ ಇಟಲಿಯಲ್ಲೂ ಜರ್ಮನಿಯಲ್ಲೂ ಡೇನಿಷ್‌ನಂತಹ ಸಣ್ಣ ಭಾಷೆಯಲ್ಲೂ ಇಂತಹ ಕೆಲಸ ನಡೆಯಿತು. ಕನ್ನಡದಲ್ಲಿ ಒಂದು ಸಾವಿರ ವರ್ಷಗಳ ಹಿಂದೆಯೇ ಶ್ರೀವಿಜಯ ತನ್ನ ಕವಿರಾಜ ಮಾರ್ಗದಲ್ಲಿ ಇಂತಹ ಕೆಲಸಕ್ಕೆ ನಾಂದಿ ಹಾಕಿದ. ಸಂಸ್ಕೃತದಲ್ಲಿ ಇದ್ದುದನ್ನು ಕನ್ನಡ ಮುನ್ನಡೆಯುವಂತೆ ಅನುವಾದಿಸಿಕೊಂಡ. ಭಾಷಾಂತರದ ಮುಖೇನ ಅಲ್ಲಿರುವುದನ್ನು ಇಲ್ಲಿಗೆ ರವಾನಿಸುವುದರಲ್ಲಿ ತೃಪ್ತನಾಗಲಿಲ್ಲ.

ಈಗಿನ ಇಂಗ್ಲಿಷ್‌ ಭಾಷೆ ಪ್ರಪಂಚದ ಮೇಲೆ ಅಷ್ಟೇಕೆ ಹುಟ್ಟಿದ ಇಂಗ್ಲೆಂಡಿನ ಮೇಲೂ ತನ್ನ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಭಾಷೆ. ಆದ್ದರಿಂದ ಇಂಗ್ಲಿಷ್‌ನಿಂದ ಅಗತ್ಯವೂ ಜೀವೋಪಯೋಗಿಯೂ ಆದ ಜ್ಞಾನಕ್ಕಿಂತ ಹೆಚ್ಚಾಗಿ, ನಮ್ಮ ಕೊಳ್ಳುವ, ತಿನ್ನುವ, ನೋಡುವ, ಬಾಚುವ ರಾವುಗಳನ್ನು ಬೆಳೆಸುವುದಕ್ಕಾಗಿ, ಕೀಳು ಮನರಂಜನೆಗಾಗಿ ನಮ್ಮ ಭಾಷೆಗಳಿಗೆ ಭಾಷಾಂತರ ಮಾಡುವ ಆತುರದ ಜಾಗತಿಕ ರಾಜಕೀಯ ಈಗ ನಡೆದಿದೆ. ಇದು ಅಮೆರಿಕದಿಂದ ನಡೆದಿದೆ; ಇಲ್ಲಿರುವ ಅವರ ಏಜೆಂಟರಿಂದ ನಡೆದಿದೆ. ದೇಶೀಯವಾದ ರುಚಿಗಳ ಅಡೆತಡೆಗಳನ್ನು, ದೇಶೀಯ ಸ್ಮೃತಿಗಳನ್ನು, ದೇಶೀಯ ಸಂಕಲ್ಪಶಕ್ತಿಯನ್ನು, ನಡೆ ನುಡಿಗಳನ್ನು ತಮ್ಮ ಮಾರುಕಟ್ಟೆಯ ವಿಸ್ತರಣಕ್ಕಾಗಿ ನಾಶಗೊಳಿಸುವ ರಾಜಕಾರಣ ಈ ಬಗೆಯ ರವಾನಿಸುವ ಭಾಷಾಂತರ ಕ್ರಿಯೆಯಲ್ಲಿ ಅಡಗಿದೆ. ಲೋಹಿಯಾ ಮಾತಿನಲ್ಲಿ ಇದು ಕಾಸ್ಮೊಪೊಲೈಟರ ರಾಜಕಾರಣ.

ಬಿಎಂಶ್ರೀಗೆ ಇದ್ದಂತೆ ಭಾಷಾಂತರ ಕ್ರಿಯೆ ಆಧುನಿಕತೆಯ ಅನುಸಂಧಾನದ ಮಾರ್ಗವಾಗಿ ಈಗ ಉಳಿದಿಲ್ಲ. ಇನ್ನು ಮುಂದೆ ಅಮೆರಿಕನ್‌ ಪ್ರಭುತ್ವವನ್ನು ನಮ್ಮೆಲ್ಲರ ಮೇಲೂ ಹೇರುವ ಸಾಧನವಾಗಿ ಇಂಗ್ಲಿಷ್‌ನಿಂದ ಭಾಷಾಂತರಗಳು ನಡೆಯುತ್ತವೆ. ಈ ಭಾಷಾಂತರಗಳಲ್ಲಿ ನಮಗೆ ಲಭ್ಯವಾಗುವುದು ಟಾಲ್‌ಸ್ಟಾಯ್‌, ದಾಸ್ತೋವಸ್ಕಿ, ಸಾರ್ತ್ರ್‌, ಲಾರೆನ್ಸ್‌, ಷೇಕ್ಸಪಿಯರ್‌ ಮುಂತಾದ ಮಹಿಮರು ಮಾತ್ರವಲ್ಲ; ಅಮೆರಿಕದ ಮೂರನೆಯ ದರ್ಜೆಯ, ಪ್ರಯಾಣದ ಆಯಾಸ ಕಳೆ ಯಲು ಸುಲಭವಾಗಿ ಓದಿ ಬಿಸಾಕಬಹುದಾದ ಕಾದಂಬರಿಗಳೆಲ್ಲವೂ ನಮ್ಮ ಭಾಷೆಗಳಿಗೆ ಭಾಷಾಂತರಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಕೊರಿಯಾದ ಕಥೆ ಕೇಳಿ. ಇಂಗ್ಲಿಷ್‌ನಿಂದ ನೇರವಾಗಿ ಸುಲಲಿತವಾಗಿ ಸಂದರ್ಭೋಚಿತವಾಗಿ ತತ್‌ಕ್ಷಣವೇ ಜನಪ್ರಿಯವಾದ ಅಮೆರಿಕದಾದ ಎಲ್ಲಾ ಪಲ್ಪ್‌ ಫಿಕ್ಷನ್‌ಗಳೂ ಕೊರಿಯನ್‌ ಭಾಷೆಯಲ್ಲಿ ಲಭ್ಯವಾಗುವುದರಿಂದ ಕೊರಿಯನ್‌ ಲೇಖಕರೇ ಬರೆದ ಕೃತಿಗಳಿಗೆ ಪುಸ್ತಕದ ಅಂಗಡಿಗಳಲ್ಲಿ ಜಾಗವಿಲ್ಲವೆಂದು ಕೇಳಿದ್ದೇನೆ. ಕೇರಳದಲ್ಲಿ ಎಲ್ಲರೂ ಓದಬಲ್ಲವರಾದ್ದರಿಂದ ಓದುವ ಹಸಿವೂ ಇರುವವರಾದ್ದ ರಿಂದ ಅಲ್ಲಿಯೂ ಅಮೆರಿಕದ ಓದಿ ಬಿಸಾಡುವ ಪುಸ್ತಕಗಳು ಇನ್ನು ಮುಂದೆ ಸುಲಭವಾಗಿ ಲಭ್ಯವಾಗುವ ಅಪಾಯವಿದೆ. ಭಾರತ ಒಂದು ದೊಡ್ಡ ಮಾರ್ಕೆಟ್‌ ಅಲ್ಲವೆ? ಐದು ಕೋಟಿ ಕನ್ನಡಿಗರು ಅಮೆರಿಕನ್‌ ಪಲ್ಪ್‌ ಫಿಕ್ಷನ್‌ನ ಭಾಷಾಂತರಗಳನ್ನು ಓದಬಲ್ಲಂತೆ ಅಕ್ಷರಸ್ಥರಾಗುವುದು ನಾವು ಈ ಸುವರ್ಣಕರ್ನಾಟಕದ ಸಂದರ್ಭದಲ್ಲಿ ಕಾಣಬೇಕಾದ ಕನಸಲ್ಲ.

ಜ್ಞಾನದ ಸೃಷ್ಟಿಗೆ ಕನ್ನಡವನ್ನು ಬಳಸಬೇಕೆಂಬ ಕನ್ನಡದ ಆಶಯಕ್ಕೆ ಒಂದು ಇತಿಹಾಸವೇ ಇದೆ. ಕನ್ನಡ ಶಿಕ್ಷಕರಿಗೆ ಇಂಗ್ಲಿಷ್‌ ಶಿಕ್ಷಕರಿಗಿಂತ ಕಡಿಮೆ ಸಂಬಳವಿದ್ದಾಗಲೂ ಅರ್ಥಶಾಸ್ತ್ರಜ್ಞರಾದ ವಿ.ಸೀತಾರಾಮಯ್ಯ ನವರು ತಾವೇ ಬಯಸಿ ಕನ್ನಡ ಅಧ್ಯಾಪಕರಾದರು. ಕುವೆಂಪು ಅವರು ಫಿಲಾಸಫಿ ಓದಿ ದೊಡ್ಡ ಕೆಲಸವನ್ನು ಮಾಡಬಲ್ಲ ಆಸೆಯನ್ನು ಬಿಟ್ಟು, ಕನ್ನಡ ಸಾಹಿತ್ಯ ವಿಶ್ವವಿದ್ಯಾಲಯಗಳಲ್ಲಿ ಒಂದು ಐಚ್ಛಿಕ ವಿಷಯವೂ ಅಲ್ಲದಿದ್ದಾಗ ಕನ್ನಡ ಎಂ.ಎ. ಗೆ ಸೇರಿದರು. ಇದೊಂದು ತನ್ನ ಬಾಳಿನಲ್ಲಿ ಎ.ಆರ್‌.ಕೃಷ್ಣಶಾಸ್ತ್ರಿಗಳ ಉತ್ತೇಜನದಿಂದ ಒದಗಿದ ದೈವಕೃಪೆಯ ಕ್ಷಣವೆಂದು ಕೂಡಾ ಅವರು ತಿಳಿದಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ.

ಕನ್ನಡದ ಪತ್ರಿಕೋದ್ಯಮಕ್ಕೆ ತನ್ನದೇ ಆದ ಒಂದು ಇತಿಹಾಸವಿದೆ. ತಿರುಮಲೆ ತಾತಾಚಾರ್ಯ ಶರ್ಮರಿಂದ ಹಿಡಿದು ನಮ್ಮ ಕಾಲದ ಲಂಕೇಶರ ತನಕ ಈ ಸುದ್ದಿ ಮಾಧ್ಯಮವನ್ನು ಸೃಜನಶೀಲವಾಗಿ ಮಾಡಿದ ನೂರಾರು ಜನ ಧೀಮಂತರಿದ್ದಾರೆ. ಆದರೆ ನಮ್ಮ ಈಗಿನ ಪಾಡು ನೋಡಿ. ಜ್ಞಾನ ಹೋಗಲಿ, ಸುದ್ದಿಯಾದರೂ ಕನ್ನಡದಲ್ಲಿ ಸೃಷ್ಟಿಯಾಗುತ್ತಿತ್ತು. ಇನ್ನು ಮುಂದೆ ಈ ಸುದ್ದಿಗಳೂ ಇಂಗ್ಲಿಷಿನಿಂದ ಕನ್ನಡಕ್ಕೆ ತರ್ಜುಮೆಯಾಗಿ, ಅಂದರೆ ರವಾನೆಯಾಗಿ, ಬೆಂಗಳೂರಿನ ರಾವನ್ನು ಹೆಚ್ಚಿಸುವ ವರ್ಣರಂಜಿತ ದಿನ ಪತ್ರಿಕೆಯಾಗಿಬಿಟ್ಟಿದೆ. ಕನ್ನಡದಲ್ಲಿ ಸಿನಿಮಾಗಳನ್ನು ಡಬ್ಬಿಂಗ್‌ ಮಾಡುವುದನ್ನು ವಿರೋಧಿಸುವ ನಾವು ಪತ್ರಿಕೆಯ ಈ ಡಬ್ಬಿಂಗನ್ನು ಸ್ವಾಗತಿಸಿದ್ದೇವೆ. ಇದೊಂದು ಅಪಾಯಕಾರಿಯಾದ ಬೆಳವಣಿಗೆ; ಯಾಕೆಂದರೆ ಈಗಿರುವ ಕಾನೂನಿನಲ್ಲಿ ಇಂತಹ ವ್ಯಾಪಾರವನ್ನು ತಡೆಗಟ್ಟುವಂತಿಲ್ಲ.

ಕನ್ನಡದಲ್ಲಿ ಹುಟ್ಟಿದ ಸುದ್ದಿ, ಕನ್ನಡದ ಧೀಮಂತರ ಬರವಣಿಗೆಗಳು ಕನ್ನಡದಿಂದ ಇಂಗ್ಲಿಷಿಗೂ ಬೇರೆ ಭಾಷೆಗಳಿಗೂ ಅನುವಾದವಾಗುವ ಅಗತ್ಯ ಇದೆ. ಯಾಕೆಂದರೆ ಭಾರತದ ಪ್ರಜಾತಂತ್ರ ರಾಜಕಾರಣವನ್ನು ಎಲ್ಲ ವಿಘ್ನಗಳ ನಡುವೆಯೂ ಸೃಷ್ಟಿಸುತ್ತಿರುವವರು ಭಾರತೀಯ ಭಾಷೆಗಳನ್ನಾಡುವ ಸಾಮಾನ್ಯ ಜನರು. ಹೊಸಜ್ಞಾನವನ್ನು ಹುಟ್ಟಿಸಬಲ್ಲ ಅಜ್ಞಾತರಾಗಿಯೇ ಈ ತನಕ ಉಳಿದುಬಿಟ್ಟಿರುವ ದೀನ ದರಿದ್ರರು. ಗಾಂಧಿಯ ಭಾಷೆಯಲ್ಲಿ ದರಿದ್ರ ನಾರಾಯಣರು.

ಇಂಗ್ಲಿಷ್‌ ಪತ್ರಿಕೆಗಳು ಕನ್ನಡದಲ್ಲೂ ಅವತಾರಗಳನ್ನು ಪಡೆಯಲು ಇರುವ ಮುಖ್ಯ ಉದ್ದೇಶ ಜಾಹೀರಾತನ್ನು ಹೆಚ್ಚಿಸಿಕೊಳ್ಳುವುದು; ಇನ್ನೂ ಮುಖ್ಯವಾಗಿ ಪೈಪೋಟಿಯಲ್ಲಿರುವ ಕನ್ನಡದಲ್ಲೇ ಸೃಷ್ಟಿಯಾಗುತ್ತಿರುವ ಪತ್ರಿಕೆಗಳನ್ನು ಕೊಲ್ಲುವುದು. ಜಾಹೀರಾತಿನಿಂದಲೇ ನಡೆಯುವ ಪತ್ರಿಕೆಗಳು ತಮ್ಮ ಬೆಲೆಯನ್ನು ಎಷ್ಟು ಬೇಕಾದರೂ ಕಡಿಮೆ ಮಾಡಿಕೊಳ್ಳಬಹುದು. ಚೀಪ್‌ ಆದ ಬೆಲೆಯಲ್ಲಿ ಚೀಪ್‌ ಆಗಿರುವ ವಿಷಯಗಳು; ವಿಷಯಾಸಕ್ತಿಗಳು; ಗಾಸಿಪ್‌ಗಳು, ಕೊಂಡಾಟ ಮಂಗಾಟಗಳು ಯಾರಿಗೆ ಬೇಡ? ಅಂತಹದನ್ನು ಪ್ರಜ್ಞಾಪೂರ್ವಕವಾಗಿ ಒಪ್ಪದವರೂ, ಮೊದಲು ಕುತೂಹಲಕ್ಕಾಗಿ ಓದಿ, ನಂತರ ಅದೊಂದು ಗೀಳಾಗಿ, ನಿತ್ಯ ಕಣ್ಣಾದರೂ ಹಾಯಿಸಲು ಬಯಸುವವರಾಗುತ್ತಾರೆ. ಇಡೀ ಭಾರತವನ್ನು ತಮ್ಮ ಅಧೀನಕ್ಕೆ ಪಡೆದುಕೊಳ್ಳಲು ಹೊಂಚಿರುವ ಜಾಗತೀಕರಣದ ಶಕ್ತಿಗಳ ಸೂಕ್ಷ್ಮಾತಿಸೂಕ್ಷ್ಮ ಹುನ್ನಾರಗಳು ಭಾರತದ ಸಾಮಾನ್ಯರನ್ನು ಅವರ ಭಾಷೆಯಲ್ಲಿಯೇ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಈ ಬಗೆಯ ಭಾಷಾಂತರಗಳು ಕೆಲಸ ಮಾಡುತ್ತವೆ.
ಇಂಗ್ಲೆಂಡಿನಲ್ಲಿ ಸರ್ವಸ್ವಾಮ್ಯದ ಪತ್ರಿಕೋದ್ಯಮದ ಬಂಡವಾಳ ಶಾಹಿ ಎಲ್ಲ ಪತ್ರಿಕೆಗಳನ್ನೂ ಕೊಲ್ಲಲು ಪ್ರಯತ್ನಿಸಿದಾಗ ಬ್ರಿಟನ್ನಿನ ಅಲ್ಪಸ್ವಲ್ಪವಾದರೂ ಮನೋಧಾರಾಳದ ಗಾರ್ಡಿಯನ್‌ ಎಂಬ ಪತ್ರಿಕೆ ತನ್ನ ಉಳಿವಿಗಾಗಿ ಜ್ಞಾನಿಗಳೆಲ್ಲರ ಸಹಕಾರ ಪಡೆದು ಹೋರಾಡಿ ಇವತ್ತಿಗೂ ಉಳಿದು ಬಂದಿದೆ.

ನಾವು ಕನ್ನಡಿಗರು ಕನ್ನಡದಲ್ಲೇ ಜನಸಾಮಾನ್ಯರ ಆಸೆಗಳನ್ನು ಹೋರಾಟಗಳನ್ನು ಅವರಿಗೆ ಗೊತ್ತಿರುವ ಭಾಷೆಯಲ್ಲೇ ಸೃಷ್ಟಿಯಾಗಿ ಲಭ್ಯವಾಗಲು ಅಗತ್ಯವಾದ ಎಚ್ಚರವನ್ನು ಎಲ್ಲರಲ್ಲೂ ಹುಟ್ಟಿಸಬೇಕಾಗಿದೆ.
ಭಾಷಾವ್ಯಾಯಾಮದಲ್ಲಿ ಪಳಗಿದ ಶಕ್ತಿಯುಳ್ಳ ಪತ್ರಕರ್ತರೇ ಈ ದಿನಗಳಲ್ಲಿ ಕಡಿಮೆಯಾಗಿದ್ದಾರೆ: ಇಂಗ್ಲಿಷಿನಲ್ಲೂ, ಕನ್ನಡದಲ್ಲೂ. ಸದ್ಯದ ಸ್ಥಿತಿಯೇ ಹೀಗಿರುವಾಗ ಇನ್ನು ಮುಂದೆ ಅಳಿದುಳಿದ ಕೆಲವೇ ಸೃಜನಶೀಲರಾದ ಪತ್ರಕರ್ತರು ಹೊಟ್ಟೆಪಾಡಿಗಾಗಿ ಅಥವಾ ಹೆಚ್ಚಿನ ಸಂಬಳದ ಆಸೆಗಾಗಿ ಕೇವಲ ಭಾಷಾಂತರಿಗಳಾಗಿಬಿಟ್ಟರೆ ಆಶ್ಚರ್ಯ ಪಡಬೇಕಾಗಿಲ್ಲ. ಮೊದಲೇ ಇಂಗ್ಲಿಷಿನ ಪತ್ರಕರ್ತರಿಗೆ ಕನ್ನಡದ ಪತ್ರಕರ್ತರಿಗಿಂತ ಹೆಚ್ಚಿನ ಸಂಬಳವಿದೆ ಎಂದು ಕೇಳಿದ್ದೇನೆ. ರದ್ದಿಯಾಗಿ ಮಾರುವಾಗಲೂ ಇಂಗ್ಲಿಷ್‌ ಪತ್ರಿಕೆಗೆ ಕನ್ನಡದ್ದಕ್ಕಿಂತ ಹೆಚ್ಚು ಬೆಲೆ- ಅದೇ ತೂಕಕ್ಕೆ. ನನ್ನ ಅಮೆರಿಕನ್‌ ಸ್ನೇಹಿತರಿಗೆ ಇದನ್ನು ಹೇಳಿದರೆ ಅಬ್ಸರ್ಡ್‌ ಎಂದು ನಗುತ್ತಾರೆ.

ಇಂಗ್ಲಿಷಿನಲ್ಲಿ ‘ಟ್ರಾನ್ಸ್‌ಲೇಟ್‌’ ಎಂಬ ಪದಕ್ಕೆ ಒಂದು ಇನ್ನೊಂದಾಗಿ ಬಿಡುವ ರೂಪಾಂತರ ಎಂಬ ಅರ್ಥವೂ ಇದೆ. ಶೇಕ್ಸ್‌ಪಿಯರನ ನಾಟಕವೊಂದರಲ್ಲಿ ಬಾಟಮ್‌ ಎಂಬ ಹಾಸ್ಯಾಸ್ಪದನಾದ ಗಮಾರ ಪ್ರಣಯಿಯೊಬ್ಬ ರೂಪಾಂತರಗೊಂಡು ದೊಡ್ಡ ಕಿವಿಗಳ ಕತ್ತೆಯಾಗಿ ಬಿಡುತ್ತಾನೆ. ಆಗ ಅವನು ಬಯಸಿದ ಸುಂದರಿ ಅವನ ಬೆಳೆದ ಕತ್ತೆ ಕಿವಿಗಳನ್ನು ಕಂಡು ‘Oh! Bottom thou art translated’ ಎನ್ನುತ್ತಾಳೆ.

ಇಂಗ್ಲಿಷಿನ ಕತ್ತೆ ಕನ್ನಡದ ಹೇಸರಗತ್ತೆಯಾಗಿ ಪ್ರತಿದಿನ ಪ್ರತ್ಯಕ್ಷವಾಗುವುದನ್ನು ಕನ್ನಡಿಗರೆಲ್ಲರೂ ನೋಡಲು ಕಾತರರಾಗಿದ್ದಾರೆ ಎಂದು ಹೇಳುವ ಜಾಹೀರಾತುಗಳನ್ನು ಅಪ್ಪಟ ಕನ್ನಡ ಪತ್ರಿಕೆಯಲ್ಲೇ ನಾವೀಗ ನೋಡಬೇಕಾಗಿ ಬಂದಿದೆ.

ನಾಗರಿಕತೆ ಎಂಬ ‘ಗುಡ್ ಐಡಿಯಾ’

ನೋಯಿಡಾ ಘಟನೆಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಡ ಮಕ್ಕಳ ಸರಣಿ ಕೊಲೆಯ ಬಗ್ಗೆ ಕೇಳಿದೊಡನೆ ನಾವು ಪಟ್ಟ ಒಂದು ಘಳಿಗೆಯ ತಲ್ಲಣ ಈಗ ಕುತೂಹಲವಾಗಿ ಪರಿಣಮಿಸುತ್ತಿದೆ. ಮಾನವನ ಪಾಡೇ ಇದಿರಬಹುದು. ಹೆಚ್ಚು ಕಾಲ ಸತ್ಯ ದರ್ಶನದ ತಲ್ಲಣವನ್ನು ನಾವು ಸಹಿಸಲಾರೆವು. ಈಗ ನಮ್ಮ ಕುತೂಹಲ ಮಕ್ಕಳನ್ನು ಕೊಂದು ಅವರು ತಿಂದಿರಬಹುದೆ? ಅಂಗಾಂಗಗಳನ್ನು ಮಾರಿಕೊಂಡಿರಬಹುದೆ? ಇದೊಂದು ಅವರ ಮನೋವಿಕಾರವಿರಬಹುದೆ? ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆಯೆ? ಇತ್ಯಾದಿ. ಹೀಗೆನ್ನಿಸುವುದೆಲ್ಲ ಸಹಜವೇ; ಆದರೆ ಕೊಂಚ ಸುಮ್ಮನಿದ್ದು ನೋಡಿಕೊಂಡರೆ ನಮಗೇ ನಮ್ಮ ಬಗ್ಗೆ ಅಸಹ್ಯವಾಗುತ್ತದೆ.

ಹೇಗೆ ಈ ಬಗ್ಗೆ ಮಾತಾಡಬೇಕು ಎಂಬುದು ತಿಳಿಯದಿರುವ ಮೌನದಲ್ಲಿ ನಾವಿದನ್ನು ಎದುರಾಗಬೇಕು.ಆದರೆ ಅದು ಹೇಳಿದಷ್ಟು ಸುಲಭವಲ್ಲ. ಮಕ್ಕಳನ್ನು ಕಳೆದುಕೊಂಡ ಬಡಪಾಯಿಗಳ ಆಕ್ರೋಶ ಇನ್ನೂ ಕ್ರೂರವಾಗಿರಬಹುದಿತ್ತು. ಆಗಿಲ್ಲ. ಅದು ಆಶ್ಚರ್ಯ. ದುಡಿಯುವ ಜನ ತಮ್ಮ ಎಂದಿನ ದುಡಿಮೆಗೆ ಮರಳುತ್ತಾರೆ. ಅಸ್ಸಾಮ್‌ನಲ್ಲಿ ಉಗ್ರರು ಬಿಹಾರಿಗಳನ್ನು ಕೊಂದರು. ಮಾರನೇ ದಿನ ಮತ್ತೆ ಬಿಹಾರಿ ಬಡವರು ತಮ್ಮ ಇಟ್ಟಿಗೆ ಕೆಲಸ ಮುಂದುವರಿಸಿದರು. ಜಗತ್ತಿನಲ್ಲಿ ಎಲ್ಲೆಲ್ಲೂ ಬಡವರು ಬದುಕುವುದು ಹೀಗೇ.
ಈ ಬಗ್ಗೆ ಬರೆಯುವುದು ಕಷ್ಟ.

ಹದಿನೆಂಟನೇ ಶತಮಾನದಲ್ಲಿ ಐರ್ಲೆಂಡಿನ ಪಾಡಿಗೆ ಮರುಗುತ್ತಿದ್ದ ಬ್ರಿಟಿಷರ ಸಾಮ್ರಾಜ್ಯದ ದುರಹಂಕಾರದಿಂದಲೂ ನಿರ್ಲಕ್ಷ್ಯದಿಂದಲೂ ಕ್ರುದ್ಧನಾಗಿದ್ದ ಜೊನಾಥನ್‌ ಸ್ವಿಫ್ಟ್‌ ಎಂಬ ಬರಹಗಾರ (ಗಲಿವರನ ಕಥೆ ಬರೆದವನು) A Modest Proposal ಎಂಬ ದೀರ್ಘವಾದ ಪ್ರಬಂಧವನ್ನು ಬರೆದ. ಇಷ್ಟು ಕ್ರೂರವಾದ ವ್ಯಂಗ್ಯದ ಬರವಣಿಗೆ ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲವೋ ಏನೋ? ತಣ್ಣಗೆ ಅವನು ನಿರ್ವಿಕಾರವಾಗಿ ನಿಶ್ಚಲನಾಗಿ ಹೇಳುತ್ತ ಹೋಗುತ್ತಾನೆ. ಈ ಐರಿಷ್‌ ಬಡ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ಬೀದಿಗಳಲ್ಲಿ ಭಿಕ್ಷೆಯೆತ್ತುವುದನ್ನು ನಾವು ಸಹಿಸಲು ಸಾಧ್ಯವಿಲ್ಲ; ದೇಶವೂ ಬಡವಾಗಿರುವುದರಿಂದ ಅವರ ಸ್ಥಿತಿಯನ್ನು ಸುಧಾರಿಸುವಂತೆ ನಾವು ಏನೂ ಮಾಡಲಾರೆವು. ಆದ್ದರಿಂದ ವಿನಯಪೂರ್ವಕವಾಗಿ ಅವನು ಒಂದು ಪ್ರೊಪೋಸಲ್‌ ಮಾಡುತ್ತಾನೆ. ಈ ಪ್ರೊಪೋಸಲ್‌ ಅಂತಹ ಪ್ರೊಪೋ ಸಲ್‌ಗಳ ತರಹದಲ್ಲೇ ತಣ್ಣನೆಯ ವ್ಯಾಕರಣ ಶುದ್ಧವಾದ ಕಾನೂನು ಬದ್ಧವಾದ ಲೀಗಲ್‌ ಭಾಷೆಯಲ್ಲೇ ಇದೆ. ಹೀಗೆ ತಾನು ಹೇಳುವುದು ಅಧಿಕ ಪ್ರಸಂಗವಲ್ಲ, ನೀವೆಲ್ಲರೂ ಯೋಚಿಸಿದ್ದೇ ಇರಬಹುದು ಎಂಬ ಗೃಹೀತದ ಧಾಟಿ ಈ ಲೇಖನಕ್ಕಿದೆ.

ಅವನ ಪ್ರೊಪೋಸಲ್‌ ಏನೆಂದರೆ ಈ ಮಕ್ಕಳನ್ನು ಹಣವಂತರು ತಿನ್ನಲು ಶುರುಮಾಡಬೇಕು. ಹೆಂಗಸರು ಮಾಂಸದ ಉತ್ಪಾದಕರಾಗಬೇಕು. ಆರ್ಥಿಕವಾಗಿ ಇದು ಬಡವರ ಹಿತ ದೃಷ್ಟಿಯಿಂದ ಸಮಂಜಸವೂ ಆಗಿರುತ್ತದೆ. ಒಂದು ವರ್ಷಗಳ ಕಾಲ ಹೇಗೂ ಸರ್ಕಾರದ ಖರ್ಚಿಲ್ಲದೆ ತಾಯಿಯ ಮೊಲೆಹಾಲಿನಿಂದ ಅವು ಬೆಳೆಯುತ್ತವೆ. ಈ ನಮ್ಮ ಕಾಲದ ಚಿಕನ್‌ ವ್ಯವಸಾಯದ ಎಲ್ಲ ಗುಣಗಳನ್ನೂ ಈ ಮಕ್ಕಳ ಮಾಂಸದ ವ್ಯವಸಾಯಕ್ಕೆ ಅನ್ವಯವಾಗುವಂತೆ ಸ್ವಿಫ್ಟ್‌ ಬರೆಯುತ್ತಾನೆ.

ಸ್ವಿಫ್ಟ್‌ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯವನ್ನು ಸಹಿಸುವುದು ಯಾತನೆಯ ವಿಷಯ. ಆದರೆ ನಾವು ಏನೇನನ್ನು ನಿಜದಲ್ಲಿ ಸಹಿಸುತ್ತೇವೆಂದು ಯೋಚಿಸಿದಾಗ ಸ್ವಿಫ್ಟ್‌ ನ ಬರವಣಿಗೆಯ ಸಮಾಧಾನದ ಶೈಲಿಯ ಕ್ರೌರ್ಯದಿಂದ ನಾವು ಹೇಸುತ್ತೇವೆಂಬುದೂ ಅಥವಾ ಅಂತಹ ಬರವಣಿಗೆಯನ್ನು ಸಾಹಿತ್ಯವೆಂದು ಮೆಚ್ಚುತ್ತೇವೆ ಎಂಬುದೂ ಆಘಾತ ಹುಟ್ಟಿಸುವ ನೈತಿಕ ಪ್ರಶ್ನೆಯಾಗುತ್ತದೆ.

ಮನುಷ್ಯನಿಗೆ- ಅಂದರೆ ನಮ್ಮೆಲ್ಲರಿಗೂ- ಸಾಧ್ಯವಾಗುವ ಕ್ರೌರ್ಯವನ್ನು ವಿಶ್ಲೇಷಣೆ ಮಾಡುತ್ತ ಅದಕ್ಕೆ ಕಾರಣಗಳನ್ನು ಹುಡುಕುತ್ತ ಹೋಗುವುದೇ ತಾರ್ಕಿಕ ವಿಲಾಸವಾಗಿ ಅನೈತಿಕವಾಗುತ್ತದೆ. ನಾವು ಕೂಡಲೇ ಹೇಳಬಹುದಾದ್ದು ಇದೆ- ಅದನ್ನು ಸ್ಪಷ್ಟವಾಗಿ ಹೇಳಬೇಕು. ಬಡ ಹೆಂಗಸರು, ಶ್ರೀಮಂತರ ಮನೆಗಳಲ್ಲಿ ಮುಸುರೆ ಕೆಲಸ ಮಾಡುವ ಹೆಂಗಸರು, ತಮ್ಮ ಮಕ್ಕಳು ಕಾಣೆಯಾದದ್ದೇ ಪೊಲೀಸರಿಗೆ ದೂರಿತ್ತರೂ ಪೊಲೀಸರು ಅದನ್ನು ದಾಖಲೆ ಮಾಡಿಕೊಂಡಿಲ್ಲ. ಚುನಾವಣೆಗೆ ತಯಾರಾಗುತ್ತಿರುವ ಉತ್ತರ ಪ್ರದೇಶದ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಕ್ರೈಮ್‌ ಕಡಿಮೆಯಾಯಿತು ಎನ್ನುವ ಅಂಕಿ ಅಂಶಗಳಲ್ಲಿ ಈ ಮಕ್ಕಳು ದುಷ್ಟರ ಆಹಾರವಾದದ್ದು ಇನ್ನಷ್ಟು ಸಂಖ್ಯೆಗಳಾಗಿ ಸೇರಿಕೊಂಡು ಚುನಾವಣೆಯಲ್ಲಿ ಸಮಸ್ಯೆಯಾಗುವುದು ಸಮಾಜವಾದಿ ಪಕ್ಷಕ್ಕೆ ಬೇಕಿರಲಿಲ್ಲ. ಭ್ರಷ್ಟಾಚಾರದಿಂದಲೂ, ರಾಜಕಾರಣಿಗಳ ಶಿಫಾರಸಿನಿಂದಲೂ ತಮ್ಮ ಪೊಲೀಸ್‌ ಕೆಲಸವನ್ನು ಪಡೆದವರು ಈ ರಾಜಕಾರಣಿಗಳಿಗೆ ತೊಂದರೆಯಾಗುವಂತೆ ನಿಜವಾದ ಕ್ರೈಮಿನ ಅಂಕಿ ಅಂಶಗಳನ್ನು ಹೊರಗೆಡವುವಂತಿಲ್ಲ. ಶ್ರೀಮಂತರ ಕೇಸಾದರೆ ಆ ವಿಷಯ ಬೇರೆ. ಅದರಲ್ಲಿ ಆದಾಯವಿದೆ.
ಇದನ್ನು ವಿರೋಧಿಸುವವರು ಯಾರು? ಬೇರೆ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿದ್ದಾಗ ಮಾಡಿದ್ದು ಇದನ್ನೇ.

ನಾಚಿಕೆ ಕೆಟ್ಟವರು ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುವ ನಾಟಕ ಇಂದಿನ ರಾಜಕಾರಣ ವಾಗಿದೆ. ಇದು ಆಗದ ಹಾಗೆ ಮಾಡಲು ಏನೇನು ಕಾನೂನಿನ ಬದಲಾವಣೆಗಳಾಗಬೇಕು ಎಂದು ನ್ಯಾಯಪರರಾದ ನಮ್ಮಂತಹ ಸಜ್ಜನರು ಚರ್ಚಿಸಲು ತೊಡಗುತ್ತೇವೆ. ಆದರೆ ಒಂದು ಸತ್ಯವನ್ನು ಮರೆಯುತ್ತೇವೆ. ಕಾನೂನು ವ್ಯವಸ್ಥೆ ಈಗಿರುವಂತೆಯೇ ಈ ಕ್ರೌರ್ಯಕ್ಕೆ ಅವಕಾಶವಿಲ್ಲ. ಇದಾಗದಂತೆ ತಡೆಯಬಹುದಿತ್ತು. ಆದರೆ ಯಾರೂ ಏನೂ ಮಾಡಲಿಲ್ಲ. ನಮ್ಮ ಪಾಡಿಗೆ ನಾವು ಇದ್ದೆವು.

ಇದು ನೈತಿಕ ಅಧಃಪತನದ ಕಾಲ. ಸ್ವಾತಂತ್ರ್ಯದ ನೆವದಲ್ಲಿ ಪೆಟ್ರೋಲಿಗಾಗಿ ಬುಷ್‌ ಇರಾಕ್‌ನ್ನು ನಾಶ ಮಾಡುತ್ತಾನೆ. ಕ್ರೂರ ಸರ್ವಾಧಿಕಾರಿಯಾಗಿದ್ದ ಸದ್ದಾಂನನ್ನು ನೇಣುಗಂಬದ ಕೆಳಗೆ ನಿಲ್ಲಿಸಿ ಅಣಕಿಸಿ ಗೇಲಿ ಮಾಡಿ, ಅವನ ರಾಷ್ಟ್ರನಿರ್ಮಾಣದ ಕ್ರೌರ್ಯಕ್ಕಿಂತ ಹೆಚ್ಚು ಹೇಸಿಗೆ ಹುಟ್ಟಿಸುವ ಕ್ರೌರ್ಯದಲ್ಲಿ ಕೊಲ್ಲುತ್ತಾರೆ. ಸದ್ದಾಂ ಮಾಡಿದ್ದು ನೆಪೋಲಿಯನ್‌, ಸ್ಟಾಲಿನ್‌ ಮಾಡಿದ್ದಕ್ಕಿಂತ ಭಿನ್ನವಾದ ಅಪರಾಧವಲ್ಲ. ಕೌಟಿಲ್ಯ, ಮೆಕಾವಲ್ಲಿಯಂಥವರು ಒಪ್ಪುವ ಉಪಾಯಗಳೇ ಅವನವು. ಪ್ರೀತಿಯಿಂದ ಆಳುವುದು ಅಸಾಧ್ಯವಾದಾಗ ಭೀತಿ ಹುಟ್ಟಿಸಿ ಆಳು ಎನ್ನುವುದು ರಾಷ್ಟ್ರ ನಿರ್ಮಾಣದ ಸನಾತನ ಸೂತ್ರ.

ಸಮಾಜವಾದದ ಬಗ್ಗೆಯೂ ಲೋಹಿಯಾ ಬಗ್ಗೆಯೂ ಮಾತಾಡುವ ಮುಖ್ಯಮಂತ್ರಿಯೊಬ್ಬ ನೊಯಿಡಾಕ್ಕೆ ಹೋದರೆ ತನ್ನ ಪದವಿ ಕಳೆದುಕೊಳ್ಳಬಹುದೆಂಬ ಮೂಢನಂಬಿಕೆಯಲ್ಲಿ ಸರಣಿ ಕೊಲೆಯಲ್ಲಿ ಮುಗ್ಧ ಮಕ್ಕಳು ಸತ್ತಿರುವುದನ್ನು ಲೆಕ್ಕಿಸದೆ ಜಾಣ ವಿವರಣೆಗಳನ್ನು ಕೊಡುತ್ತಾನೆ. ಬಂಗಾಳದಲ್ಲಿ ಮಾರ್ಕ್ಸ್‌ವಾದೀ ಸರ್ಕಾರದವರು ರೈತರ ಅನುಮತಿಯಿಲ್ಲದೆ ಅವರ ಫಲದಾಯಕವಾದ ಭೂಮಿಯನ್ನು ಕೈಗಾರೀಕರಣಕ್ಕೆ ಹಂಚುತ್ತಾರೆ. ಒಬ್ಬ ಹಿಂದೂ ಅಪರಾಧಿಯಾದರೆ ಎಲ್ಲ ಹಿಂದೂಗಳೂ ಸೈತಾನ ಸಂತತಿಯವರೆಂದು ಕಾಣುವಂತೆ ಇಸ್ಲಾಮಿಸ್ಟರು ತಮ್ಮ ಪೂಜ್ಯ ಗ್ರಂಥವನ್ನು ಅಪಾರ್ಥಕ್ಕೆ ತಿರುಚುತ್ತಾರೆ. ಒಬ್ಬ ಮುಸ್ಲಿಂ ಅಪರಾಧಿಯಾದರೆ ಎಲ್ಲ ಮುಸ್ಲಿಮರನ್ನೂ ಶಂಕಿಸುವಂತೆ ಹಿಂದುತ್ವವನ್ನು ಬಳಸುತ್ತೇವೆ. ಈ ಎಲ್ಲದರ ನಡುವೆ ನಮ್ಮ ದೇಶ ಜಗತ್ತಿನ ಮಹಾರಾಷ್ಟ್ರಗಳ ಸಾಲಿಗೆ ಸದ್ಯದಲ್ಲೇ ಸೇರಲಿದೆ ಎಂಬ ಕನಸನ್ನು ಜಾಗತೀಕರಣದ ಅಧ್ವರ್ಯುಗಳು ಮಧ್ಯವರ್ಗದವರಿಗೆ ಮಾರುತ್ತಾರೆ.

ಎಲ್ಲ ರಾಜಕೀಯ ಸಿದ್ಧಾಂತಗಳೂ ಹುರುಳಿಲ್ಲದಂತೆ ಸುಳ್ಳೆನ್ನಿಸುವಂತೆ ಕಾಣುತ್ತಿರುವ ಈ ಕಾಲ ದುಷ್ಟ ಕಾಲ. ಅಲ್ಲಿ ಇಲ್ಲಿ ಗಾಳಿಗೊಡ್ಡಿದ ಸಣ್ಣ ಬತ್ತಿಯ ಮೇಲೆ ಬಳುಕುತ್ತ ಉರಿಯುವ ದೀಪಗಳು ಇವೆ. ಈ ಸಣ್ಣ ಸಣ್ಣ ಸಮುದಾಯಗಳಲ್ಲಿ ಉರಿಯುವ ದೀಪಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರರನ್ನು ನಾಶಮಾಡುವ ಉಷ್ಣಸ್ಥಾವರ ಬೇಡವೆಂದು ದನಿಯೆತ್ತುತ್ತವೆ; ಮತೀಯ ಗಲಭೆಗಳು ಆಗದಂತೆ ಸುಳ್ಳುಗಳು ಹರಡದಂತೆ ಸತ್ಯವನ್ನು ಎಲ್ಲರಿಗೆ ಕೇಳಿಸುವಂತೆ ಪೇಚಾಡುವ ಕೆಲವು ಜನರು ಇನ್ನೂ ಇದ್ದಾರೆ. ಇವು ಯಾವುವೂ ಸಂಘಟಿತವಾದ ಶಕ್ತಿಗಳಲ್ಲ. ಆದರೆ ಅವು ಇಲ್ಲವೆಂದು ತಿಳಿದು ಸಿನಿಕರಂತೆ ಮಾತಾಡುವುದೂ ಲಂಪಟತನವಾಗುತ್ತದೆ. ಸ್ವಿಫ್ಟ್‌ ನಂತೆ ಮಾತಾಡುವುದೂ ದುಃಖದ ಸಂದರ್ಭದಲ್ಲಿ ಲಂಪಟತನವೇ.

ಗಾಂಧೀಜಿಯನ್ನು ಇಂಗ್ಲೆಂಡಿನಲ್ಲಿ ಪತ್ರಕರ್ತನೊಬ್ಬ ಕೇಳುತ್ತಾನೆ. ಅದು ಪಾಶ್ಚಿಮಾತ್ಯ ನಾಗರೀಕತೆ ಅತ್ಯುತ್ತಮವೆಂದು ಹಲವರು ತಿಳಿದಿದ್ದ ಕಾಲ. `ಪಾಶ್ಚಿಮಾತ್ಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?' ಅದಕ್ಕೆ ಗಾಂಧಿ ಕೊಟ್ಟ ಉತ್ತರ: `ಅದೊಂದು ಗುಡ್‌ ಐಡಿಯಾ'. ಈಗ ಗಾಂಧೀಜಿಯನ್ನು ಯಾರಾದರೂ `ಭಾರತೀಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?' ಎಂದು ಕೇಳಿದ್ದರೆ ಅವರು ಏನೆನ್ನಬಹುದಿತ್ತು? ಶಿವ ವಿಶ್ವನಾಥನ್‌ ಊಹಿಸುವಂತೆ ಗಾಂಧಿ ಹೇಳುತ್ತ ಇದ್ದರು, ಪ್ರಾಯಶಃ ಹೀಗೆ: `ಅದೊಂದು ಗುಡ್‌ ಐಡಿಯಾ'.
ಆಶಾವಾದದ ಸಮಾಧಾನವನ್ನೂ ಅಪೇಕ್ಷಿಸದಂತೆ, ನಿರಾಶಾವಾದದ ಲಂಪಟತನವೂ ಇಲ್ಲದಂತೆ ನಾವು ಪ್ರಸ್ತುತದಲ್ಲಿ ಬಾಳಬೇಕಾಗಿದೆ.

ಅಪ್ವರ್ಡ್ ಲೇಖನಮಾಲೆಗೊಂದು ಪ್ರತಿಕ್ರಿಯೆ

ಹಿರಿಯರಾದ ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ಇತಿಹಾಸದ ವಿದ್ಯಾರ್ಥಿಯಲ್ಲ. ಹಾಗಾಗುವ ಅವಕಾಶ ಕೈಬಿಟ್ಟವನು. ಆದರೆ ಆಸಕ್ತಿ ಕಡಿಮೆಯಾಗದವನು, ಆ ಹಸಿವನ್ನು ನೀಗಿಕೊಳ್ಳಲು ಪ್ರಯತ್ನಿಸುತ್ತಿರುವವನು. ಹಾಗಾಗಿ ಎಡಪಂಥೀಯ ವಿಚಾರಧಾರೆ, ಕಮ್ಯುನಿಸಂ ಮತ್ತು ಕಮ್ಯುನಿಸ್ಟರ ಕುರಿತಾದ ಲೇಖನಗಳನ್ನು, ಬಿಡಿ-ಬಿಡಿಯಾಗಿ ಓದಿಕೊಂಡವನು. ಅಖಂಡವಾದ ಓದು ಸಾಧ್ಯವಾಗಿಲ್ಲ. ಆದ್ದರಿಂದಲೇ, ತಮ್ಮ ಲೇಖನಮಾಲೆಗೆ ನನ್ನ ಪ್ರತಿಕ್ರಿಯೆಯನ್ನು – ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳ ಮೂಲಕ ಲೇಖನಮಾಲೆಯನ್ನು ಗ್ರಹಿಸಲು ಪ್ರಯತ್ನಿಸುತ್ತಾ – ರೂಪಿಸಿಕೊಂಡಿದ್ದೇನೆ. ಅಲ್ಲದೇ, ತಮ್ಮ ಇತರ ಪ್ರಬಂಧಗಳು ಈ ಚಿಂತನೆಗಳಿಗೆ ಪೂರಕವೆನ್ನಿಸಿದ್ದರಿಂದ, ಆ ಪ್ರಬಂಧಗಳಲ್ಲಿನ ತಮ್ಮದೇ ಆದ ಕೆಲ ಪರಿಕಲ್ಪನೆಗಳ ಮೂಲಕವೂ (ಆಧ್ಯಾತ್ಮಿಕ ಹಸಿವು, ಸಮಾನತೆಯ ಹಸಿವು) ಇದನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ತಮ್ಮ ಲೇಖನದ ಅನೇಕ ಉದಾಹರಣೆಗಳನ್ನು ಪ್ರತೀಕಗಳನ್ನಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ, ನನ್ನ ಪ್ರತಿಕ್ರಿಯೆಯಲ್ಲಿ ಕೆಲವು ಅತಿರೇಕಗಳಿರುವುದಕ್ಕೆ ಸಾಧ್ಯವಿದೆ, ಅದಕ್ಕೆ ನಾನೇ ಹೊಣೆಗಾರ.

==============

1. ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನಾಯುವಂತಹ ಅನಿವಾರ್ಯತೆ ಯೂರೋಪಿಗೇನಿತ್ತು? 'ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು' ಎಂದಿದ್ದೀರಿ. ಲೇಖನಮಾಲೆಯ ಅತಿಮುಖ್ಯ ವಾಕ್ಯವಿದು ಎಂದುಕೊಂಡಿದ್ದೇನೆ. ಇದಕ್ಕೆ ಸ್ಫೂರ್ತಿ೦ಾಗಿ ಟ್ಯಾಗೋರ್‌ ಮತ್ತು ಗಾಂಧಿಯಿದ್ದಾರೆ ಎಂದುಕೊಂಡಿದ್ದೇನೆ. ಇದನ್ನು ನಾನು ಅರ್ಥ ಮಾಡಿಕೊಂದಿರುವ ಬಗೆ – ಯಂತ್ರಗಳ ಸಾಧ್ಯತೆಯನ್ನು ಎಡವಿಬಿಟ್ಟ ಯೂರೋಪು, ಆ ಕಾರಣಕ್ಕೇ ಬಂಡವಾಳಶಾಹಿಯ ಹಿಡಿತದಲ್ಲಿ ಅಕಸ್ಮಾತ್ತಾಗಿ ಕೈಗಾರಿಕೀಕರಣಕ್ಕೊಳಗಾಗಿ, ನಂತರ ಅದನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿಂದ ಬೃಹತ್‌ ಆರ್ಥಿಕ ವ್ಯವಸ್ಥೆಗಳು ಅನಿವಾರ್ಯವಾಗಿ, ಆದ್ದರಿಂದಲೇ ರಾಷ್ಟ್ರೀಯತೆಯನ್ನು ಆವಾಹಿಸಿಕೊಂಡು, ರಾಷ್ಟ್ರಿಯತೆ ಸಾಧಿಸಲು ಒಂದೋ ಪ್ರಗತಿ ಇಲ್ಲವೋ ಮತೀಯತೆಯಯನ್ನು ನವಮೌಲ್ಯಗಳನ್ನಾಗಿ ರೂಪಿಸಲು ಪ್ರಯತ್ನಿಸಿತೇ? ಅಂದರೆ ಯಂತ್ರಗಳ ಆವಿಷ್ಕಾರದ ನಂತರ ಆಯ್ಕೆಗಗಳು ಸೀಮಿತವಾದ್ದರಿಂದಲೇ ಹೀಗಾಯಿತೇ?

2. ಫ್ಯಾಸಿಸಂ ಬೆಳೆಯುತ್ತಿದ್ದ ಕಾಲದಲ್ಲಿ ಅದನ್ನೆದುರಿಸುವ ಏಕಮಾತ್ರ ಆಯ್ಕೆ ಕಮ್ಯುನಿಸಂ ಆಗಿತ್ತೇ? ಕಮ್ಯುನಿಸಂ ಎನ್ನುವುದು ಫ್ಯಾಸಿಸಂ ಬಲಗೊಂಡ ಕಾಲದಲ್ಲೇ ಹೆಚ್ಚು ಬಲಗೊಂಡಿತು ಎನ್ನುವುದಾದರೆ (ಇದು ನಿಜವೋ ಅಲ್ಲವೋ ನನಗೆ ಅಷ್ಟಾಗಿ ಗೊತ್ತಿಲ್ಲ) ವಿರೋಧವೇ ಮುಖ್ಯವಾದಾಗ ವಿರೋಧಿಯ ಎಲ್ಲ ಗುಣಗಳೂ ನಮ್ಮಲ್ಲೇ ಆವಾಹನೆ೦ಾಗುತ್ತವೆ ಎನ್ನುವ ಥಿಯರಿಗೆ ಹಿಟ್ಲರ್‌-ಸ್ಟ್ಯಾಲಿನ್‌ ಉದಾಹರಣೆಯೇ?

3. ಇಷರ್ವುಡ್‌, ಸ್ಪೆಂಡರ್‌, ಆಡೆನ್‌ ಮಹನೀಯರುಗಳು ಬೆಳೆದ ರೀತಿಗಳು ನೋಡಿದರೆ ಒಂದು ಹಂತದಲ್ಲಿ ಕಮ್ಯುನಿಸಂ ಅನಿವಾರ್ಯವಾಗಿತ್ತಾದರೂ, ಮನುಷ್ಯನ ಆಧ್ಯಾತ್ಮಿಕ ಹಸಿವನ್ನು ಇಂಗಿಸಲಾರದ್ದರಿಂದ ಇವರುಗಳು ಬೆಳೆಯುವುದಕ್ಕೆ ಬೇರೆ೦ೆುೀ ಹಾದಿ ಹಿಡಿದರು. ಮುಖ್ಯವೆಂದರೆ ಅವರು ಆ ಹಾದಿಯಲ್ಲಿ ನಡೆದು ಕಮ್ಯುನಿಸಂ-ಅನ್ನು ಅರಗಿಸಿಕೊಂಡು ಮುನ್ನಡೆದರು. ಕಮ್ಯುನಿಸಂ-ಅನ್ನು ಮೀರಬೇಕಾದ ನೆಲೆಗಳ ಬಗ್ಗೆಯೂ ಇದು ದಾರಿತೋರಿಸುತ್ತದೆ. ಆದರೆ ಇಷರ್ವುಡ್‌, ಆಡೆನ್‌ ಮುಂತಾದವರು ಕಮ್ಯುನಿಸಮ್ಮನ್ನೇ ಆ ಆಧ್ಯಾತ್ಮಿಕ ಹಸಿವಿನ ದಾರಿಯಲ್ಲಿ ಏಕೆ ಬೆಳೆಸದಾದರು? ಸ್ಪೆಂಡರ್‌- ತಮ್ಮ ವಿರೋಧದಲ್ಲೂ ಕಮ್ಯುನಿಸಮ್ಮಿನ ಒಳಗಿನವರಾಗಿ ಆ ದಿಕ್ಕಿನಲ್ಲಿ ಪ್ರಯತ್ನಿಸಲಿಲ್ಲವೇ?

4. ಅಪ್ವರ್ಡರು ಮಾತ್ರ ಕಮ್ಯುನಿಸಂ ಒಳಗಡೆಯೇ ಇರಬಹುದಾದ ಅತ್ಯುತ್ತಮ ಸಾಧ್ಯತೆಯಂತಿದ್ದಾರೆ ಎಂದರೆ ನಮಗೆ ಕಮ್ಯುನಿಸಂ-ನ ಸಾಧ್ಯತೆ-ಮಿತಿಗಳು ಅರ್ಥವಾಗುತ್ತವೆ. ಹೀಗಿದ್ದರೂ ಕಮ್ಯುನಿಸಂ ಮೇಲಣ ಅಪ್ವರ್ಡ್‌-ರ ಗಟ್ಟಿ ನಂಬಿಕೆಗೆ ಕಾರಣಗಳಾದರೂ ಏನು? ಸಮಾನತೆಯ ಹಸಿವೇ? ಬೇರಿನ್ನಾವ ಸಿದ್ಧಾಂತವೂ ಸಮಾನತೆಯನ್ನು ಈ ಬಗೆಯಲ್ಲಿ ಚರ್ಚಿಸಲಾರದ್ದರಿಂದಲೇ? ಆದರೆ ಅಪ್ವರ್ಡರ ಸಾಧ್ಯತೆ ಇಷರ್ವುಡ್‌-ಗೆ ಗೊತ್ತಿತ್ತು ಎನ್ನುವುದು ಒಂದು ಮುಖ್ಯ ಒಳನೋಟವಾಗಿ ಕಂಡಿದೆ. ಅಪ್ವರ್ಡ್‌-ರ ಹೆಚ್ಚು ಕಮ್ಯುನಿಸ್ಟರಾದ ಮಿತ್ರರಿಗೆ ಆ ಸಾಧ್ಯತೆ ಕಂಡಿತ್ತೇ? ಆಧ್ಯಾತ್ಮಿಕ ಹಸಿವಿಗೇ ಈ ಮುಖ್ಯವಾದ ಒಳನೋಟವಿರುತ್ತದೆಯೇ?

5. ಜಾರ್ಜ್‌ ಥಾಂಸನ್‌-ರಂಥವರೂ ಮಾವೋ-ಸ್ಟ್ಯಾಲಿನ್‌-ರನ್ನು ಮೆಚ್ಚುತ್ತಲೇ ಹೋದ ಅಂಶ ಕಮ್ಯುನಿಸ್ಟ್‌ ಸಿದ್ಧಾಂತದಲ್ಲೇ ಕಲ್ಟಿಸಂ-ನನ್ನು ಗುರುತಿಸಲಾಗದ ಅಂಧತೆ ತಂದೊಡ್ಡುವುದನ್ನು ಸೂಚಿಸುತ್ತಿದೆಯೇ? ಕಮ್ಯುನಿಸಮ್ಮಿನಲ್ಲಿರುವ ಆ ಅಂಶ ಯಾವುದು, ಅಥವಾ ಯಾವ ಅಂಶದ ಗೈರುಹಾಜರಿಯಿಂದ ಹೀಗಾಗಿದೆ?

6. ಮಿಕ್ಕ ಕಮ್ಯುನಿಸ್ಟರು ಒಂದೋ ಆರ್ಥಿಕತೆಗೆ, ಸಾಮಾಜಿಕತೆಗೆ ಮಿತಿಗೊಂಡ ಸಮಾನತೆಯ ರೊಮ್ಯಾಂಟಿಕ್‌ ಆಕರ್ಷಣೆ ಮಾತ್ರ ಮೀರಲಾರದವರು ಅಥವಾ ಕಮ್ಯುನಿಸಂ-ನೊಳಗಡೆಯೇ ಇರುವ ಬಿರುಕಿನಲ್ಲಿ ತಮ್ಮ ವೈಯಕ್ತಿಕ ತೀಟೆಗಳನ್ನು ತೀರಿಸಿಕೊಳ್ಳುವ ಅವಕಾಶ ಕಂಡುಕೊಂಡವರು. ಇದಕ್ಕೂ ಮಿಗಿಲಾದ ಕಮ್ಯುನಿಸಂ ಸಿದ್ಧಾಂತವನ್ನಿನ್ನೂ ಅಪ್ಪಿರುವ ಕಮ್ಯುನಿಸ್ಟರಿದ್ದಾರೆಯೇ, ಅದನ್ನು ಗ್ರಹಿಸುವ ಬಗೆ ಹೇಗೆ?

7. ಲೋಹಿಯಾರ ಪ್ರಸ್ತಾಪ ಚಿಕ್ಕದಾಗಿ ಆಗಿರುವುದು ನಿರಾಸೆಗೊಳಿಸುತ್ತದೆ. ಈ ಲೇಖನ ಮಾಲೆಗೆ ಅನೇಕ ಆಯಾಮಗಳಿರುವುದರಿಂದ, ಲೇಖನದ ಕಡೆಯ ಭಾಗವನ್ನು ಯಾವ ರೀತಿಯಲ್ಲಿ ಗಾಂಧಿ, ನೆಹರೂ, ಲೋಹಯಾ ಈ ಐರೋಪ್ಯ ಅಪಾಯಗಳಿಂದ ನಮ್ಮನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಗೆ ಕಾಣಿಕೆಯನ್ನಿತ್ತಿದ್ದಾರೆ ಎನ್ನುವುದನ್ನು ಈಗಾಗಲೇ ಬಹಳ ಕಡೆ ಚರ್ಚಿಸಲಾಗಿದೆ. ಆದರೆ ಆ ಚರ್ಚೆ ಇಲ್ಲಿ ಸಮಯೋಚಿತವಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ಭಾರತದಲ್ಲಿ ಈ ಪ್ರಕ್ರಿಯೆಯನ್ನು ನಿರ್ವಹಿಸುವ ಪ್ರಥಮ ಘಟ್ಟದಲ್ಲಿ ಬಹುಮುಖೀಯತೆಯಿತ್ತೇ, ಇಲ್ಲವೇ ಎನ್ನುವ ಒಂದು ಚರ್ಚೆಗೆ ಅದು ದಾರಿಮಾಡಿಕೊಡಬಹುದೆನ್ನಿಸುತ್ತದೆ.

8. ಮತ್ತೊಂದು ಸ್ವತಂತ್ರ ಚರ್ಚೆಯನ್ನು ಕೇಳುವ ಪ್ರಶ್ನೆಯೆಂದರೆ – ಆಧ್ಯಾತ್ಮಿಕ ಹಸಿವು ಮಿಗಿಲಾದ ಏಟ್ಸ್‌, ಎಲಿಯಟ್‌, ಎಜ್ರಾ ಪೌಂಡ್, ಹಿಟ್ಲರ್‌, ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ?

9. ಸ್ವಲ್ಪ ಥಿಯರೈಸ್‌ ಮಾಡುವುದಾದರೆ, ಆಧ್ಯಾತ್ಮಿಕ ಹಸಿವು ಸಮಾನತೆಯ ಹಸಿವಿನ ಅಭಾವದಿಂದ ಬಲಪಂಥೀಯತೆಯಲ್ಲಿ ಪರ್ಯವಸಾನವಾಗಿ ಭ್ರಮನಿರಸನಕ್ಕೆ ಕಾರಣವಾಯಿತೇ? ಬಲಪಂಥೀಯತೆಯ ವಿರೋಧ ಕೇವಲ ಎಡಪಂಥೀಯವಾಗಿ, ಆಧ್ಯಾತ್ಮಿಕ ಹಸಿವಿನ ಅಭಾವದಿಂದ ಮತ್ತೊಂದು ರೀತಿಯ ಭ್ರಮನಿರಸನಕ್ಕೆ ಕಾರಣವಾಯಿತೇ?

1೦. ಒಬ್ಬನನ್ನು ವ್ಯಕ್ತಿ೦ಾಗಿ ನೋಡಿದಾಗ ದೊಡ್ಡದಾಗಿ ಕಾಣುವುದು ಸಿದ್ಧಾಂತದಲ್ಲಿ ನೋಡಿದಾಗ ಚಿಕ್ಕದಾಗಿ ಕಂಡು, ಅದಕ್ಕೆ ನಾವು ಕುರುಡರಾಗುತ್ತೇವೆ೦ೆುೀ? ಟೀಪು ವಿಷಯದಲ್ಲಿ ನಮ್ಮ ಎಡಪಂಥೀಯರಿಗಾಗಿರುವುದು ಇದೇನೇ? ಕೃಷ್ಣದೇವರಾಯನಲ್ಲಿ ನಮ್ಮ ಬಲಪಂಥೀಯರಿಗಾಗಿರುವುದು ಇದೇನೇ? ಕಷ್ಟಕಾಲದಲ್ಲಿ ಆಪದ್ಬಾಂಧವನಾದವನ ವೈಯಕ್ತಿಕ ತೀಟೆಗಳು ನಮಗೆ ಕಾಣುವುದಿಲ್ಲವಲ್ಲವೇ?

11. 'ಉತ್ತಮ ಪ್ರಭುತ್ವ ಲೊಳಲೊಟ್ಟೆ'-ಯೆನ್ನುವುದು ಆಧ್ಯಾತ್ಮಿಕ ಹಸಿವಿನ ವ್ಯಕ್ತಿಗಳಿಗೆ ದಾರ್ಶನಿಕ ಒಳನೋಟ. ಮಾನವ ವ್ಯವಸ್ಥೆಗಳನ್ನು ನಿರ್ಮಿಸುವ ಆಕಾಂಕ್ಷೆಯಿರುವ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡೂ ಪ್ರಭುತ್ವದಲ್ಲಿ ನಂಬಿಕೆಯಿಟ್ಟಂಥವು. ಅಂದರೆ ವ್ಯವಸ್ಥೆಯೊಂದನ್ನು ನಂಬುವ ಯಾರಿಗಾದರೂ ಈ ಲೊಳಲೊಟ್ಟೆ ಕಾಣ್ಕೆ ಸಾಧ್ಯವಿಲ್ಲವೇ? ಅಥವಾ ಬ್ಯಾಂಕ್‌ ಅಕೌಂಟ್‌ ಮಾತ್ರ ಬೇಕಾದ್ದಕ್ಕೆ ನಾವು ಬೃಹತ್‌ ವ್ಯವಸ್ಥೆಗಳನ್ನು ನಿರ್ಮಿಸಹೋಗಿ ಮೂಲೋದ್ದೇಶವನ್ನೇ ಮರೆಯುವುದೇ?

12. ಸಮಾನತೆಯ ಹಸಿವಿನಲ್ಲಿ ಬೃಹತ್‌ ವ್ಯವಸ್ಥೆಗಳತ್ತ ಗಮನ ಹರಿಸಿರುವ ಕಮ್ಯುನಿಸಂ ಒಳಗಿನಿಂದಲೇ ನಮ್ಮನ್ನು ಗುರುತಿಸಿಕೊಳ್ಳುವ ಕ್ರಮಗಳನ್ನು ಇಲ್ಲವಾಗಿಸಿದೆ೦ೆುೀ? ಕಡೆಗೆ ಸಮಾನತೆಯನ್ನೂ ಸಾಧಿಸಲಾರದೇ ಕೇವಲ ರಾಷ್ಟ್ರೀಯತೆಯನ್ನಷ್ಟೇ ಸಾಧಿಸಿ, ಬಂಡವಾಳಶಾಹಿಯ ಉದ್ದೇಶವನ್ನೇ ಈಡೇರಿಸಿತೇ?

13. ಕಡೆಯದಾಗಿ, 19ನೇ, 2೦ನೇ ಶತಮಾನಗಳ ಪ್ರಕ್ರಿ೦ೆುಗಳು ಮನುಷ್ಯನನ್ನು ತನ್ನ ನೆಲೆಯಿಂದ ಉಚ್ಚಾಟಿಸಿಬಿಟ್ಟವು. ಬೌದ್ಧಿಕವಾಗಿ, ಮಾನಸಿಕವಾಗಿ, ಕೆಲವೊಮ್ಮೆ ಭೌತಿಕವಾಗಿಯೂ ಕೂಡ. ಈ ಉಚ್ಚಾಟನೆಗೆ ಪ್ರತಿಕ್ರಿಯೆಯಾಗಿ ಚಿಂತಕರು ತಮ್ಮದೇ ಆದ ಜಿಗಿತಗಳ ಮೂಲಕ ಹಲವು ವಿಕಲ್ಪಗಳನ್ನು ಕಾಣುತ್ತಾ ಮತ್ತೆಲ್ಲಿಯೋ ನೆಲೆಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ಯಶಸ್ಸು, ಸೋಲು ಎನ್ನುವ ಪರಿಕಲ್ಪನೆಗಳಿಂದ ಇದನ್ನು ಗ್ರಹಿಸಲಾಗುವುದಿಲ್ಲ. ಆದರೆ, ಅಪ್ವರ್ಡ್‌ ಈ ಜಿಗಿತದಲ್ಲಿ ತಮ್ಮತನಕ್ಕೆ ಎರವಾದರು. ಇದು ಪ್ರಕ್ರಿಯೋಗಳ ತೀವ್ರತೆಗೆ ನಿದರ್ಶನ.

14. ತಮ್ಮ ಲೇಖನಮಾಲೆ ಯಾವ ವೈವಿಧ್ಯತೆಯಲ್ಲಿ ಎಡಪಂಥೀಯತೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆ೦ೋ, ಅದೇ ಸಾಂದ್ರದಲ್ಲಿ ಬಂಡವಾಳಶಾಹಿಯನ್ನು ಗ್ರಹಿಸುವುದಕ್ಕೆ ಸಾಧ್ಯವಿಲ್ಲವಾಗಿದೆಯಲ್ಲ! ಅದನ್ನು ಏಕರೂಪಿಯಾಗಿಯೇ ಇಂದಿಗೂ ಗ್ರಹಿಸುತ್ತೇವೆ. ಬಂಡವಾಳಶಾಹಿಯ ಸಾಧ್ಯತೆಯನ್ನು ಸಮಾನತೆ ಸಾಧಿಸುವ ಕ್ರಮವಾಗಿ, ಸಮೃದ್ಧಿಯನ್ನು, ಸಾಮರಸ್ಯವನ್ನೂ ಸಾಧಿಸುವ ಸಾಧನವಾಗಿ (ಮುಗ್ಧವಾಗಿ) ನಂಬಿರುವ, ಮತ್ತನೇಕ ಬಗೆಗಳಲ್ಲಿ ಆಳವಾಗಿ ಆಲೋಚಿಸಬಲ್ಲ ಜನರೂ ಇದ್ದಾರೆ. ತಮ್ಮತನಕ್ಕೇ ಎರವಾದವರೂ ಇದ್ದಾರೆ. ಅಂಥವರ ಮೂಲಕ ಬಂಡವಾಳಶಾಹಿಯಯನ್ನು ಗ್ರಹಿಸಲು ನಮಗಿನ್ನೂ ಸಾಧ್ಯವಾಗಿಲ್ಲ.

-ಜೀವಿಶಿವು

ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು

ನಾನು ಮೈಸೂರು ಮಹಾರಾಜಾ ಕಾಲೇಜನ್ನು ಸೇರಿದ್ದು 1950ರ ಪ್ರಾರಂಭದ ದಶಕದಲ್ಲಿ- ಇಂಗ್ಲಿಷ್‌ ಆನರ್ಸ್‌ ವಿದ್ಯಾರ್ಥಿಯಾಗಿ. ಇಂಟರ್‌ ಮೀಡಿಯಟ್‌ ಪರೀಕ್ಷೆಯಲ್ಲಿ  `ಕೆಮೆಸ್ಟ್ರಿ' ವಿಷಯದಲ್ಲಿ ಒಂದು ವರ್ಷ ಫೇಲಾಗಿ ಮತ್ತೆ ಪಾಸಾದೆ. ಫೇಲಾಗಲು ಒಂದು ಕಾರಣ/ನೆವ, ಕಾಗೋಡು ರೈತ ಸತ್ಯಾಗ್ರಹ. ಆದರೆ ಫೇಲಾದ ವರ್ಷ ಎಚ್‌.ಎಸ್‌. ಬಿಳಿಗಿರಿಯ ಸ್ನೇಹದಲ್ಲಿ ಕನ್ನಡ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಲು ಶುರು ಮಾಡಿದೆ. ಗಾರ್ಕಿಯನ್ನು ನನ್ನ ಸಮಾಜವಾದದ ಒಲವಿನಿಂದಾಗಿ ಓದಿಕೊಂಡಿದ್ದೆ.

ನನ್ನ ತಂದೆಯವರು ಮೈಸೂರಿಗೆ ನನ್ನನ್ನು ಕರೆದುಕೊಂಡು ಬಂದರು. ಹಾಸ್ಟೆಲ್‌ನಲ್ಲಿ ನನ್ನನ್ನು ಓದಿಸುವುದು ಅವರಿಗೆ ಸಾಧ್ಯವಿರಲಿಲ್ಲವಾದ್ದರಿಂದ ಮಹಾರಾಜಾ ಕಾಲೇಜಿಗೆ ಹತ್ತಿರದಲ್ಲೇ ಇದ್ದ ಒಂದು ಮನೆಯಲ್ಲಿ ಸ್ವತಃ ಅಡುಗೆ ಮಾಡಿಕೊಂಡು ಓದುವ ಏರ್ಪಾಡನ್ನು ಅವರೇ ಓಡಾಡಿ ಮಾಡಿದರು. ನನಗಾಗ ಸಿಕ್ಕ ರೂಮು ಯಾರ ಮನೆಯದು ಎಂದು ನೆನೆದರೆ ಈಗ ಆಶ್ಚರ್ಯವಾಗುತ್ತದೆ. ನಾನು ಓದಿದ ಶರಶ್ಚಂದ್ರರ ಎಲ್ಲ ಕಾದಂಬರಿಗಳನ್ನು ಅನುವಾದ ಮಾಡಿದ ಹಿರಿಯರೊಬ್ಬರ ಮನೆ ಅದು. (ನನಗೀಗ ಥಟ್ಟನೆ ಅವರ ಹೆಸರು ನೆನಪಾಗುತ್ತಿಲ್ಲ) ಇಂಟರ್‌ ಮೀಡಿಯೆಟ್‌ನಲ್ಲಿ ನಾನು ಫೇಲಾದ ವರ್ಷವೇ ಇಂಗ್ಲಿಷ್‌ನಲ್ಲಿ ಫಸ್ಟ್‌ ಕ್ಲಾಸ್‌ ಅಂಕಗಳನ್ನು ಪಡೆದಿದ್ದೆ. ಆದ್ದರಿಂದ ಇಂಗ್ಲಿಷ್‌ ಆನರ್ಸ್‌ನಲ್ಲಿ ಸೀಟು ಸಿಗುವುದು ಕಷ್ಟವಲ್ಲದಿದ್ದರೂ ನನ್ನ ಸಮಾಜವಾದೀ ಸಂಬಂಧದಿಂದಾಗಿ ಸ್ನೇಹಿತರಾಗಿದ್ದ ಡಿ.ಆರ್‌.ಕೃಷ್ಣಮೂರ್ತಿ ಎಂಬ ಧೀರೋದಾತ್ತ ಕಮ್ಯುನಿಸ್ಟ್‌ ಕಾರ್ಯಕರ್ತರ ತಮ್ಮ ರಾಜಗೋಪಾಲ್‌ ಎನ್ನುವವರು ನನ್ನನ್ನು ಪ್ರೊ.ಭರತ್‌ರಾಜ್‌ ಸಿಂಗ್‌ ಎಂಬುವರ ಬಳಿ ಕರೆದುಕೊಂಡು ಹೋದರು. (ಡಿ.ಆರ್‌. ಕೃಷ್ಣಮೂರ್ತಿಯವರು ನಡೆಸುತ್ತಿದ್ದ ಅತ್ಯಂತ ಅಪರೂಪದ ಪುಸ್ತಕಗಳು ಸಿಗುತ್ತಿದ್ದ `ಪೀಪಲ್ಸ್‌ ಬುಕ್‌ ಹೌಸ್‌' ನಮಗೆ ಆ ದಿನಗಳಲ್ಲಿ ಸಂಜೆಯ ಹರಟೆಯ ತಾಣ) ಭರತ್‌ರಾಜ್‌ ಸಿಂಗರು ಬಹಳ ವಿಶ್ವಾಸದಿಂದ ನನ್ನನ್ನು ಕುಳಿತುಕೊಳ್ಳುವಂತೆ ಹೇಳಿ ತಮ್ಮದೊಂದು ಪುಸ್ತಕದ ಲಿಸ್ಟ್‌ ತೆಗೆದು `ಇವುಗಳನ್ನು ಓದಿದ್ದೀಯಾ?' ಎಂದು ಕೇಳಿದರು. ಆ ಎಲ್ಲ ಪುಸ್ತಕಗಳೂ ಇಂಗ್ಲಿಷ್‌ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿದ್ದವು.

ನನ್ನ ತಂದೆಯವರ ಆಸ್ಥೆಯಿಂದಾಗಿ ನಾನು ಗೋಲ್ಡ್‌ ಸ್ಮಿತ್‌ನ `ರಿಕಾರ್‌ ಆಫ್‌ ದಿ ವೇಕ್‌ ಫೀಲ್ಡ್‌' ಕಾದಂಬರಿಯನ್ನು ಮಾತ್ರ ಓದಿದ್ದೆ. ಹಾಗೆಯೇ ಅವನ  `ಸಿಟಿಜನ್‌ ಆಫ್‌ ದಿ ವರ್ಲ್ಡ್‌'  ಪುಸ್ತಕದ ಕೆಲವು ಪ್ರಬಂಧಗಳನ್ನೂ ಓದಿದ್ದೆ. ಪ್ರೊ.ಸಿಂಗರ ಲಿಸ್ಟ್‌ನಲ್ಲಿದ್ದ ಉಳಿದ ಯಾವ ಪುಸ್ತಕವನ್ನೂ ಓದಿರಲಿಲ್ಲ.
ಶಾಲೆಗೆ ಹೋಗದೇ ಸ್ವತಃ ಓದುವುದನ್ನು ಕಲಿತ ನನ್ನ ತಂದೆ ವಾಲ್ಟರ್‌ ಸ್ಕಾಟ್‌ನ `Ivan hoe' ಎನ್ನುವ ಪುಸ್ತಕವನ್ನು ಓದಿ ಕೆಲವು ದಿನ ಮಂಕಾಗಿಬಿಟ್ಟಿದ್ದರಂತೆ. ಅವರ ತಲೆಯ ಮೇಲಿನಿಂದ ನೀರು ತುಂಬಿದ ಕೊಡವನ್ನು ಸುರಿದು ಚಿಕಿತ್ಸೆ ಮಾಡಿದ್ದನ್ನು ನಮ್ಮ ತಾಯಿ ಹೇಳುತ್ತಿದ್ದರು.

ಗಣಿತ ಶಾಸ್ತ್ರವನ್ನು ನಾನು ಓದಬೇಕೆಂದು ಆಸೆಪಟ್ಟಿದ್ದ ನನ್ನ ತಂದೆ ನನ್ನ ಸಮಾಜವಾದಿ ಆಂದೋಲನ ಮತ್ತು ಸಾಹಿತ್ಯದ ಹುಚ್ಚನ್ನು ಅರಿತುಕೊಂಡು ಹೇಳಿದ್ದರು: `ನೀನು ಏನು ಬೇಕಾದರೂ ಓದು, ಆದರೆ ಆ ವಾಲ್ಟರ್‌ ಸ್ಕಾಟ್‌ ನ `Ivan hoe' ಮಾತ್ರ ಓದಕೂಡದು' ನನ್ನ ತಂದೆಯ ಅಪ್ಪಣೆಯಂತೆ ಈ ಹೊತ್ತಿನವರೆಗೂ ಅದನ್ನು ಓದಿಲ್ಲ. ಪ್ರೊ.ಸಿಂಗರಿಗೆ ನಾನು ಹೇಳಿದೆ: `ನಾನು ಏನೇನು ಓದಿದ್ದೇನೆ ಎಂಬುದನ್ನು ಹೇಳಬಹುದೇ ಸರ್‌'.  ಕೇಂಬ್ರಿಡ್ಜ್‌ನಲ್ಲಿ ಓದಿ ಬಂದಿದ್ದ ಸ್ನೇಹಮಯಿಯಾದ ಈ ಯುವ ಪ್ರಾಧ್ಯಾಪಕರು `ಹೇಳಿ' ಎಂದರು. ನಾನು ಹೇಳತೊಡಗಿದೆ. ಗಾರ್ಕಿಯ ಕಥೆಗಳು, ಅವನ `ಮದರ್‌', ಟಾಲ್‌ ಸ್ಟಾಯ್‌ನ `ರಿಸಲಕ್ಷನ್‌', ಗಾಂಧಿಯ ಆತ್ಮಕತೆ, ನೆಹರೂರ `ಡಿಸ್ಕವರಿ ಆಫ್‌ ಇಂಡಿಯಾ', ಆ ದಿನಗಳಲ್ಲಿ ಗಾಂಧಿಗೆ ಪ್ರಿಯವಾಗಿದ್ದ `ಲೈಟ್‌ ಆಫ್‌ ಇಂಡಿಯಾ', ವಿವೇಕಾನಂದರ ಭಾಷಣಗಳು, ಜಯಪ್ರಕಾಶರ `ಮೈ ಸೋಷಲಿಸಮ್‌',  ಈ ಲಿಸ್ಟ್‌ನ ಹಲವು ಪುಸ್ತಕಗಳು ಭರತರಾಜಸಿಂಗರ ಹುಬ್ಬೇರುವಂತೆ ಮಾಡಿದವು. ಪ್ರಾಧ್ಯಾಪಕರೊಬ್ಬರ ಲಿಸ್ಟ್‌ನಲ್ಲಿ ಇಲ್ಲದೇ ಇರುವುದನ್ನು ನಾನು ಓದಿದ್ದೆನೆಂಬುದೇ ಅವರ ಮೆಚ್ಚುಗೆಗೆ ಕಾರಣವಾದಂತೆ ತೋರಿತು. 

ಆಗ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಡಾ.ಗೋಪಾಲಸ್ವಾಮಿ. ಇವರು ಜಗತ್‌ ಪ್ರಸಿದ್ಧ ಮನೋವಿಜ್ಞಾನಿಯೆಂದು ಆಗ ಎಲ್ಲರ ಅಭಿಮತ. ಮೈಸೂರಿನಲ್ಲಿ ಆಕಾಶವಾಣಿಯನ್ನು ಆ ಹೆಸರು ಕೊಟ್ಟು ಪ್ರಾರಂಭ ಮಾಡಿದರೆಂಬುದು ಅವರ ಕೀರ್ತಿ. ಇಂತಹ ಹಿರಿಯ ಪ್ರಿನ್ಸಿಪಾಲರೊಬ್ಬರು ಕೇವಲ ಪೈಜಾಮ ಜುಬ್ಬದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಇವರು ಎಷ್ಟು ಸರಳರೋ ಅಷ್ಟೇ ಉದಾರಿಯೂ,  ಹೆಚ್ಚು ಮಾತನಾಡದ ಚಿಂತಕರೂ ಆಗಿದ್ದರು. ಆ ದಿನಗಳಲ್ಲಿ ಉತ್ತಮವಾದ ಇಂಗ್ಲಿಷ್‌ ಚಿತ್ರಗಳನ್ನು ತೋರಿಸುತ್ತಿದ್ದ ಟಾಕೀಸೆಂದರೆ, `ಗಾಯತ್ರಿ' ಟಾಕೀಸು. ನೂರಡಿ ರಸ್ತೆಯ ಮೇಲೆ ಇದ್ದ ಸಿನೆಮಾ ಮಂದಿರ ಅದು. ಅಲ್ಲಿ ನಾವು ಕಡಿಮೆ ದರ್ಜೆಯ ಟಿಕೆಟ್‌ ಪಡೆದು ಬೆಂಚುಗಳ ಮೇಲೆ ಹೋಗಿ ಕೂರುತ್ತಿದ್ದೆವು.

ಕೆಲವೊಮ್ಮೆ ಡಾ. ಗೋಪಾಲಸ್ವಾಮಿಯವರನ್ನು ವಿದ್ಯಾರ್ಥಿಗಳ ನಡುವೆ ಕಂಡು ನಾನು ಬೆರಗಾದದ್ದೂ ಉಂಟು. ಡಾ.ಗೋಪಾಲಸ್ವಾಮಿಯವರ ಕಾಲದಲ್ಲಿಯೇ ಮಹಾರಾಜಾ ಕಾಲೇಜಿನ ಶತಮಾನೋತ್ಸವ ನಡೆದಿತ್ತು. ಆಗ ಮೈಸೂರಿನ ಪ್ರಸಿದ್ಧ ಶಿಲ್ಪಿಯಾದ ಸಿದ್ಧಲಿಂಗಯ್ಯ ಅವರು ಮಾಡಿದ ಸರಸ್ವತಿ ವಿಗ್ರಹ ನಮ್ಮೆಲ್ಲರ ಕಣ್ಣಿಗೆ ಅಚ್ಚುಮೆಚ್ಚಾಗಿ ಸ್ಟೇರ್‌ ಕೇಸ್‌ ಹತ್ತಿ ಹೋಗುತ್ತಿದ್ದಂತೆ ಒಂದು ಗೂಡಿನಲ್ಲಿ ಇತ್ತು.
ಮಹಾರಾಜ ಕಾಲೇಜು ಎಲ್ಲ ಕಾಲೇಜಿನಂತಲ್ಲ. ಎಲ್ಲರೂ ನೆನೆಯುತ್ತಿದ್ದ ಮಹಾನುಭಾವರು ಯಾವ ಯಾವ ಕೋಣೆಯಲ್ಲಿ ಕೂತಿರುತ್ತಿದ್ದರು ಎಂಬುದನ್ನು ಹೊಸ ವಿದ್ಯಾರ್ಥಿಗಳಾದ ನಮಗೆ ತೋರಿಸುತ್ತಿದ್ದರು. `ಇಲ್ಲಿ ರಾಧಾಕೃಷ್ಣನ್‌ ಕೂತಿರುತ್ತಿದ್ದರು', `ಇಲ್ಲಿ ರಾಧಾಕೃಷ್ಣನ್‌ರಿಗೇ ಭಾರತೀಯ ತತ್ವಶಾಸ್ತ್ರವನ್ನು ಕಲಿಸಿದ ಹಿರಿಯಣ್ಣ ಕೂತಿರುತ್ತಿದ್ದರು'…..ಹೀಗೆ.

ನಮ್ಮ ಕಾಲದಲ್ಲೂ ಮಹಾನುಭಾವರಾದ ಅಧ್ಯಾಪಕರಿದ್ದರು. ಕುವೆಂಪು ಕಚ್ಚೆ ಪಂಚೆಯುಟ್ಟು, ಬಿಳಿಯ ಜುಬ್ಬಾ ಧರಿಸಿ, ಮೈಸೂರಿನ ಪ್ರಸಿದ್ಧ ಟಾಂಗಾದಲ್ಲಿ ಬಂದು, ಸ್ವಲ್ಪ ದೂರದಲ್ಲಿಯೇ ಇಳಿದು, ಆಕಾಶವನ್ನು ಮಾತ್ರ ನೋಡುತ್ತಿರುವವರಂತೆ ನಡೆದು ಬಂದು, ಮೆಟ್ಟಿಲನ್ನು ಹತ್ತಿ, ಸೀದಾ ತಮ್ಮ ಕೋಣೆಗೆ ಹೋಗಿ ಕೂರುತ್ತಿದ್ದ ದೃಶ್ಯವನ್ನು ನಾವು ದೂರದಲ್ಲಿ ನಿಂತು ಗೌರವದಿಂದ ನೋಡುತ್ತಿದ್ದೆವು. ಡಿ.ಎಲ್‌. ನರಸಿಂಹಾಚಾರ್ಯರು ತಾವು ಹಿಡಿದ ಕೊಡೆಗೆ ಒಂದು ಕೈ ಇದೆ ಎನ್ನುವುದು ತಿಳಿಯದವರಂತೆ ಅದನ್ನೊಂದು ದೊಣ್ಣೆಯಂತೆ ಹಿಡಿದು, ತಮ್ಮ ಪೇಟದಲ್ಲೂ, ಕಿರಿದಾದ ನಾಮದಲ್ಲೂ ಬಹಳ ತೂಕದವರಂತೆ ನಮಗೆ ತೋರುತ್ತಿದ್ದರು. ಎಲ್ಲ ವಿದ್ಯಾರ್ಥಿಗಳನ್ನೂ ಅಚ್ಚುಮೆಚ್ಚಿನಿಂದ ಏಕ ವಚನದಲ್ಲಿ ಮಾತನಾಡಿಸುತ್ತಿದ್ದ ಆ ಕಾಲದ ಪ್ರಿಯ ಮೇಷ್ಟ್ರು ಎಂದರೆ ತ.ಸು.ಶಾಮರಾಯರು. ಅವರ ಮನೆಯಲ್ಲಿ ಹಲವು ಬಡ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರೆಂದು ನಾವೆಲ್ಲರೂ ಆ ದಿನಗಳಲ್ಲಿ ಬಹಳ ಗೌರವದಿಂದ ಕೇಳಿಸಿಕೊಂಡಿದ್ದೆವು. 

ಈ ಔದಾರ್ಯದ ಕಥೆಗಳು ಹಲವಿದ್ದವು. ನಮ್ಮ ಕಾಲೇಜಿನಲ್ಲಿ ಓದಿದ್ದ  ಪ್ರೊ.ಶಂಕರನಾರಾಯಣ ರಾಯರು ಹೇಳಿದ ಒಂದು ಘಟನೆಯನ್ನು ನೆನೆಯುತ್ತೇನೆ. ಬಡ ವಿದ್ಯಾರ್ಥಿಯಾಗಿದ್ದ ಅವರಿಗೆ ಒಂದು ಪುಸ್ತಕ ಬೇಕಿತ್ತು. ಅದನ್ನು ಪಡೆಯಲು ಅಂಜುತ್ತಾ ಅವರು ಪ್ರೊ.ಹಿರಿಯಣ್ಣನವರ ಮನೆಗೆ ಹೋಗಿದ್ದರು. ಈ ವಿದ್ಯಾರ್ಥಿಯ ಕಷ್ಟಗಳನ್ನೆಲ್ಲ ಕೇಳಿಸಿಕೊಂಡ ಹಿರಿಯಣ್ಣನವರು ಪುಸ್ತಕವನ್ನು ಕೊಟ್ಟರು. ಶಂಕರನಾರಾಯಣ ರಾಯರು ಮನೆಗೆ ಬಂದು ಪುಸ್ತಕವನ್ನು ತೆರೆದಾಗ ಅದರೊಳಗೆ ಕೆಲವು ರೂಪಾಯಿಗಳ ನೋಟುಗಳಿದ್ದವು. (ಹಣ ಎಷ್ಟಿತ್ತೆಂದು ಅವರು ಹೇಳಿರಬೇಕು, ನಾನು ಮರೆತಿದ್ದೇನು)  ಮರೆತು ಪುಸ್ತಕದೊಳಗೆ ಇಟ್ಟ ಹಣವಿರಬಹುದೆಂದು ಶಂಕರನಾರಾಯಣರು ಹಿರಿಯಣ್ಣನವರ ಮನೆಗೆ ಹೋದರು. ಪ್ರೊ.ಹಿರಿಯಣ್ಣನವರು ನಸುನಕ್ಕು `ನಾನೇ ನಿಮಗಾಗಿ ಅದನ್ನು ಇಟ್ಟದ್ದು' ಎಂದರು.

ನಾವು ಓದುವ ಸಮಯದಲ್ಲಿ ಹಿರಿಯಣ್ಣನವರು ಬದುಕಿರಲಿಲ್ಲ. ಪ್ರಖ್ಯಾತ ಬಿ.ಎಂ.ಶ್ರೀಯವರು ಕೂಡಾ ಇರಲಿಲ್ಲ. ಎ.ಆರ್‌.ಕೃಷ್ಣಶಾಸ್ತ್ರಿಯವರು ನಿವೃತ್ತರಾಗಿದ್ದರು. ಆದರೆ ಅವರೆಲ್ಲರೂ ಮಹಾರಾಜಾ ಕಾಲೇಜಿನ ಒಂದು ಅಂಶವೆಂಬಂತೆ ನಮ್ಮೊಡನಿದ್ದರು.

ನಾನು ಮಹಾರಾಜಾ ಕಾಲೇಜಿನಲ್ಲಿ ಓದುವಾಗ ಆ ಕಾಲೇಜಿನ ಪ್ರಸಿದ್ಧ  ವಾಗ್ಮಿಯೆಂದರೆ ಫಿಲಾಸಫಿ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದ ಪುರುಷೋತ್ತಮ್‌. ಅವರ ಇಂಗ್ಲಿಷ್‌ ಭಾಷಣವನ್ನು ಕೇಳಲು ನಾವೆಲ್ಲಾ ಕಿಕ್ಕಿರಿಯುತ್ತಿದ್ದೆವು. ಆ ಸಮಯದಲ್ಲಿಯೇ ಇಂಗ್ಲೆಂಡಿನಿಂದ ಓದಿ ಬಂದ ಪ್ರೊ.ಎಲ್‌.ಶ್ರೀಕಂಠಯ್ಯ ರಾಜ್ಯಶಾಸ್ತ್ರದ ಅಧ್ಯಾಪಕರಾದರು. ಕಾನೂನು ಪದವಿ ಪಡೆದಿದ್ದ ಇವರು ಬಹುಬೇಗ ಕಾಲೇಜಿನ ನೌಕರಿ ಬಿಟ್ಟರು. ಶ್ರೀಕಂಠಯ್ಯನವರು ಅಪ್ಪಟ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಬೆಂಬಲಿಗ. ಅವರೊಮ್ಮೆ ಪುರುಷೋತ್ತಮ್‌ ಅವರ ಆದರ್ಶವಾದಿ ಚಿಂತನೆಗೆ  ವಿರುದ್ಧವಾಗಿ ತಮ್ಮ ವಾಸ್ತವವಾದಿ ಮಾರ್ಕ್ಸಿಸ್ಟ್‌ ವಿಚಾರಗಳನ್ನು ಮಂಡಿಸಿದ್ದು ನನ್ನ ಮೇಲೆ ಗಾಢವಾದ ಪರಿಣಾಮವನ್ನು ಉಂಟುಮಾಡಿತು. ಕೆಲಸವನ್ನು ಬಿಟ್ಟ ಮೇಲೆ ಶ್ರೀಕಂಠಯ್ಯನವರು ಒಮ್ಮೆ ಎಮ್‌.ಎಲ್‌.ಎ.ಕೂಡಾ ಆದರು. ಆದರೆ ಕುಟಿಲ ರಾಜಕಾರಣ ಮಾಡಲಾರದ ಅವರು ಚಿಂತನಶೀಲರಾಗಿಯೇ ಬಹಳ ಕಾಲದವರೆಗೆ ನಮ್ಮೊಡನೆ ಬೆರೆಯುತ್ತಿದ್ದರು.

ಇಂಗ್ಲಿಷ್‌ ವಿದ್ಯಾರ್ಥಿಯಾಗಿದ್ದ ನನ್ನ ಮೇಲೆ ತುಂಬಾ ಗಾಢವಾಗಿ ಪರಿಣಾಮ ಬೀರಿದವರು ಕೇಂಬ್ರಿಡ್ಜ್‌ನಲ್ಲಿ ಎಫ್‌.ಆರ್‌.ಲೀವಿಸ್‌ನ ವಿದ್ಯಾರ್ಥಿಯಾಗಿ ಓದಿ ಆಗತಾನೇ ಮರಳಿದ್ದ ಸಿ.ಡಿ. ನರಸಿಂಹಯ್ಯನವರು. ಇವರು ಪಾಠ ಮಾಡುತ್ತಿದ್ದ ಕ್ರಮವೇ ಬೇರೆ. ನಾವು ಇದ್ದುದೇ ಏಳೆಂಟು ಮಂದಿ ವಿದ್ಯಾರ್ಥಿಗಳು. ಅವರ ಸಣ್ಣ ಕೋಣೆಯಲ್ಲಿಯೇ ನಾವು ಪಾಠಕ್ಕೆ ಸೇರುತ್ತಿದ್ದುದು. ಪಾಠವೆಂದರೆ ಲೆಕ್ಚರ್‌ ಅಲ್ಲ, ಸತತವಾದ ಚರ್ಚೆ. ಯಾರು ಏನನ್ನಾದರೂ ಕ್ಲಾಸ್‌ನಲ್ಲಿ ಹೇಳಬಹುದಿತ್ತು. ಒಂದು ಗಂಟೆ ಕಳೆದದ್ದೇ ನಮಗೆ ಗೊತ್ತಾಗುತ್ತಿರಲಿಲ್ಲ. ಗಂಭೀರವಾದ ಚರ್ಚೆಯಲ್ಲಿ ತಮಾಷೆಗೂ ಅವಕಾಶವಿರುತ್ತಿತ್ತು.

ನನ್ನ ಸಹಪಾಠಿ ಡಾ.ರತ್ನ ಬಹು ಹಾಸ್ಯ ಪ್ರಿಯರು. ಈಗ ನಾವು ಡಿಕನಸ್ಟ್ರಕ್ಷನ್‌ (Deconstruction) ಎನ್ನುವುದನ್ನು ಆಗಲೇ ಆತ ಮಾಡುತ್ತಿದ್ದ. ಹಾಪ್‌ಕಿನ್ಸ್‌ ಎಂಬ ಕಠಿಣವಾದ ಇಂಗ್ಲಿಷ್‌ ಕವಿ ಒಂದು ಮಾತು ಹೇಳುತ್ತಾನೆ:`ನಾನು ಅರ್ಥವಾಗಬೇಕಾದರೆ read it with your ear' ಎಂದು. ಪ್ರೊ.ಸಿ.ಡಿ.ಎನ್‌ ಇದನ್ನು ನಮಗೆ ತಮ್ಮ ತೀವ್ರವಾದ ಉತ್ಕಟತೆಯಲ್ಲಿ ಹೇಳಿದಾಗ ರತ್ನ ಹಾಪ್‌ಕಿನ್ಸ್‌ ಪದ್ಯವನ್ನು ತನ್ನ ಕಿವಿಗೆ ಹಿಡಿದು ಕೂತು, `ಅರ್ಥವಾಗಲಿಲ್ಲ' ಎಂದು ತಲೆಯಾಡಿಸಿ ಎಲ್ಲರನ್ನೂ ನಗಿಸಿದ್ದ.

ಸಾಹಿತ್ಯದ ಅರ್ಥ ನಮ್ಮಲ್ಲೇ ಉತ್ಪತ್ತಿಯಾಗುವಂತೆ ಸಿ.ಡಿ.ಎನ್‌ ಪಾಠ  ಮಾಡುವುದಾದರೆ ಅವರಿಗೂ ಹಿರಿಯರಾದ ಪ್ರೊ.ರಂಗಣ್ಣನವರು ಅರಿಸ್ಟಾಟಲ್‌ನಿಂದ ಈತನಕ ಬಂದ ಘನ ವಿದ್ವಾಂಸರನ್ನು ಕುರಿತು ಅಚ್ಚುಕಟ್ಟಾಗಿ, ನಾವು ಕಿವಿಗೊಟ್ಟು ಕೇಳುವಂತೆ, ನಿಧಾನವಾಗಿ ತಾವು ಮಾಡಿಕೊಂಡು ಬಂದ ನೋಟ್ಸನ್ನು ನೋಡುತ್ತಾ ಮೆಲು ದನಿಯಲ್ಲಿ ಮಾತನಾಡುತ್ತಿದ್ದರು. ನಾನು ಇವರಿಂದಲೂ ಬಹಳ ಕಲಿತೆ. ನಮ್ಮದೇ ಆದ ಅಭಿಪ್ರಾಯಗಳನ್ನು ಹೇಳುವುದನ್ನು ರಂಗಣ್ಣನವರು ಸ್ವ ಪ್ರತಿಷ್ಠೆ ಅಂದುಕೊಳ್ಳುತ್ತಾರೆ ಎನ್ನುವ ಕತೆ ಇತ್ತು. ಆದರೆ ಇದು ನನ್ನಮಟ್ಟಿಗೆ ನಿಜವಲ್ಲ. ನಾನು ಆನರ್ಸ್‌ ಮುಗಿಸಿದಾಗ ಇವರು ನನಗೆ ಕೊಟ್ಟ ಸರ್ಟಿಫಿಕೇಟ್‌  ಆಶ್ಚರ್ಯ ಚಕಿತನನ್ನಾಗಿ ಮಾಡಿತ್ತು.`ಇವನು ಅತ್ಯಂತ ಕಷ್ಟದಲ್ಲಿ ಓದಿಕೊಂಡು ಬೆಳೆದ. ಆದರೆ ಇವನಲ್ಲಿದ್ದ `ಒರಿಜಿನಲ್‌ ಥಿಂಕಿಂಗ್‌' ನನಗೆ ಬಹಳ ಮೆಚ್ಚುಗೆಯಾಗಿದೆ.

ಈ ಇಬ್ಬರು ಪ್ರೊಫೆಸರ್‌ಗಳೂ ನಮ್ಮನ್ನು ವರ್ಷಕ್ಕೊಮ್ಮೆಯಾದರೂ ಮನೆಗೆ ಕರೆದು, ಊಟ ಹಾಕಿ ಪ್ರೀತಿಯಿಂದ ಉಪಚರಿಸುತ್ತಿದ್ದರು. ಪ್ರೊ.ರಂಗಣ್ಣನವರು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದುದಲ್ಲದೇ, ಸರಸ್ವತಿಯ ಪೂಜೆಯನ್ನೂ ಮಾಡಿ ತಮ್ಮ ಮೆಲುದನಿಯಲ್ಲಿ ಒಂದು ಗಂಟೆ ಭರ್ಜರಿ ಉಪದೇಶಾತ್ಮಕ ಭಾಷಣವನ್ನು ಕೊಡುತ್ತಿದ್ದರು. ಇವನ್ನೆಲ್ಲ ನಾವು ಸರಸ್ವತಿಯ ಮೇಲಿನ ಭಕ್ತಿಯಿಂದಲೂ ರುಚಿಕರವಾದ ಊಟ ಸಿಕ್ಕಿದ ಸಮಾಧಾನದಿಂದಲೂ ಕೇಳಿಸಿಕೊಳ್ಳುತ್ತಿದ್ದೆವು. ಆದರೆ ಆಧುನಿಕರಾದ ಸಿ.ಡಿ.ಎನ್‌ರ ಆದರಾತಿಥ್ಯದಲ್ಲಿ ನಾವು ಹಾಡಬಹುದಿತ್ತು; ಸ್ವಲ್ಪ ಅತ್ತ ಹೋಗಿ ಸಿಗರೇಟನ್ನೂ ಸೇದಬಹುದಿತ್ತು.

ಆ ದಿನಗಳಲ್ಲಿ ನನ್ನ ಪರಮಾಪ್ತ ಗೆಳೆಯನೆಂದರೆ ಕೆ.ವಿ.ಸುಬ್ಬಣ್ಣ. ಅಡಿಕೆ ಬೆಳೆಗಾರರ ಶ್ರೀಮಂತ ಕುಟುಂಬದಿಂದ ಬಂದ ಸುಬ್ಬಣ್ಣ ಮಹಾರಾಜಾ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ. ನನ್ನ ಸೋದರಮಾವನ ಜೊತೆ ಕೋಣೆಯಲ್ಲಿಯೇ ಅನ್ನ ಮಾಡಿ ಹೊಟೇಲಿನಿಂದ ಸಾಂಬಾರನ್ನು, ಮೊಸರನ್ನು ತಂದು ಊಟ ಮಾಡುತ್ತಿದ್ದ ನಾನು, ಅದರಿಂದ ಬೇಸತ್ತು ಕೆಲವು ದಿನ ಸುತ್ತೂರು ಹಾಸ್ಟೆಲ್‌ನಲ್ಲೂ, ಬಹಳ ಕಾಲ ಗಾಂಧಿವಾದಿ ಸುಬ್ಬಣ್ಣನವರು ನಡೆಸುತ್ತಿದ್ದ ಸಾರ್ವಜನಿಕ ಹಾಸ್ಟೆಲ್‌ನಲ್ಲೂ ಬಿಟ್ಟಿಯಾಗಿ ಊಟವನ್ನು ಮಾಡಿಕೊಂಡು ಖುಷಿಯಾಗಿ ಬೆಳೆದೆ. ನನ್ನಪ್ಪ ಕಳಿಸುತ್ತಿದ್ದ ಇಪ್ಪತ್ತು ರೂಪಾಯಿಗಳನ್ನು ಒಂದು ವಾರದಲ್ಲಿಯೇ ಬಿಯರ್‌ ಕುಡಿದೋ, ಸಿಗರೇಟ್‌ ಸೇದಿಯೋ, ಮಹಾರಾಜಾ ಕಾಲೇಜಿನ ಅಯ್ಯರ್‌ ಎಂಬೊಬ್ಬ ಧಾರಾಳಿ ನಡೆಸುತ್ತಿದ್ದ  ಕ್ಯಾಂಟೀನ್‌ನಲ್ಲಿ ಮಸಾಲೆ ದೋಸೆ ತಿಂದೋ ಖರ್ಚು ಮಾಡಿರುತ್ತಿದ್ದೆ.

ಊಟ ತಿಂಡಿಗೆ ಮಾತ್ರವಲ್ಲ; ಜ್ಞಾನಕ್ಕೆ ಸ್ವತಃ ಹಸಿದಿರುತ್ತಿದ್ದ ಕಾಲ ಅದು. ಈ ಹಸಿವನ್ನು ತಣಿಸಲು ಕೈಯಲ್ಲಿ ಕೊಂಚ ಹಣವಿದ್ದ ಸುಬ್ಬಣ್ಣನಂತಹ ಸ್ನೇಹಿತರಿದ್ದರು. ಸುಬ್ಬಣ್ಣನ ಜೊತೆ ಮೈಸೂರಿಗೆ ಬರುತ್ತಿದ್ದ ಎಲ್ಲ ನಾಟಕಗಳನ್ನೂ, ಸಿನೆಮಾಗಳನ್ನೂ ನೋಡಿದ್ದೇನೆ.  ನಾವಿಬ್ಬರೂ ಪ್ರತೀ ಭಾನುವಾರ ಮಹಾರಾಜಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಿಹಿಯೂಟ ಮಾಡಿದ್ದೇವೆ. ಕ್ಲಾಸ್‌ಗಳನ್ನು ತಪ್ಪಿಸಿಕೊಂಡು ಸುಬ್ಬಣ್ಣ, ರತ್ನ, ವಿಶ್ವನಾಥ ಮಿರ್ಲೆ ,ರಾಘವನ್‌, ಕೆ. ಸದಾಶಿವ ಇವರ ಜೊತೆ ಗಂಟೆಗಟ್ಟಲೆ ಕುಳಿತು ವರ್ಡ್ಸ್‌ವರ್ತ್‌, ಶೆಲ್ಲಿ, ಕುವೆಂಪು, ಕಾರಂತ, ಬೇಂದ್ರೆ, ಅಡಿಗರನ್ನು ಚರ್ಚಿಸಿದ್ದೇವೆ. ಆ ದಿನಗಳಲ್ಲಿ ಎಚ್‌.ಎಸ್‌.ಬಿಳಿಗಿರಿ ನಮಗೆಲ್ಲರಿಗೂ ಎಂ.ಎನ್‌.ರಾಯ್‌ರನ್ನು ಮತ್ತು ಅಮೆರಿಕದ ಖ್ಯಾತ ನಿರೀಶ್ವರವಾದಿ ಇಂಗರ್‌ಸಾಲ್‌ರನ್ನು ಓದಿಸಿದ್ದ.

ನಾನು ಎಷ್ಟರಮಟ್ಟಿಗೆ ನನ್ನ ಓದಿನಲ್ಲಿಯೇ ಮಗ್ನನಾಗಿದ್ದೆನೆಂದರೆ ನನಗಿಷ್ಟವಿಲ್ಲದ ಕ್ಲಾಸ್‌ಗೆ ಹೋಗುತ್ತಲೇ ಇರಲಿಲ್ಲ. ಹೀಗಾಗಿ ಎರಡನೇ ವರ್ಷದ ಆನರ್ಸ್‌ನಲ್ಲಿ ನನ್ನ ದ್ವಿತೀಯ ಭಾಷೆಯಾಗಿದ್ದ ಸಂಸ್ಕತದಲ್ಲಿ  ಅಗತ್ಯವಾಗಿದ್ದ ಅಟೆಂಡೆನ್ಸ್‌  ಸಿಗದೇ ಹೋಯಿತು. `ನೀನು ಪರೀಕ್ಷೆಗೆ ಕೂರುವಂತಿಲ್ಲ' ಎಂಬ ಆದೇಶ ಬಂದದ್ದೇ-ನನ್ನ ಎಂದಿನ ಸಮಾಜವಾದೀ ಆಂದೋಲನದ ಹುರುಪಿನಲ್ಲಿ ಸೀದಾ ಆಗಿನ ವೈಸ್‌ ಛಾನ್ಸಲರ್‌ ಆಗಿದ್ದ ಮಂಜುನಾಥರ ಮನೆಗೆ ಹೋದೆ. `ನನಗೆ ಪರೀಕ್ಷೆಗೆ ಕೂಡಲು ಅವಕಾಶ ಮಾಡಿಕೊಡಬೇಕು' ಎಂದು ಒತ್ತಾಯ ಮಾಡಿದೆ. ಕುಲಪತಿ ಮಂಜುನಾಥರು ನಕ್ಕು `ನೀನೇ ಒಬ್ಬ ಗುಮಾಸ್ತನಿಗೆ ಒಂದಿಷ್ಟು ಹಣ ಕೊಟ್ಟಿದ್ದರೆ ಅವನು ಅದನ್ನು ಸರಿಪಡಿಸುತ್ತಿದ್ದ. ಆದರೆ ಈಗ ನೀನು ಬಂದು ನನ್ನ ಬಳಿ ಹೇಳಿದ್ದರಿಂದ ಏನೂ ಮಾಡುವಂತಿಲ್ಲ. ಕಾನೂನು ಹೇಗಿದೆಯೋ ಹಾಗಾಗುತ್ತದೆ' ಎಂದರು. ನಾನು ಕೋರ್ಟ್‌ನಿಂದ  ಸ್ಟೇ ತರುವುದಾಗಿ ಪ್ರಿನ್ಸಿಪಾಲರಿಗೆ ಹೇಳಿದೆ. ಆಗ ಪ್ರಿನ್ಸಿಪಾಲರು ಪ್ರೊ.ರಂಗಣ್ಣನವರಾದ್ದರಿಂದ ನಾನು ಪರೀಕ್ಷೆಗೆ ಕೂರಲು ಅವಕಾಶ ಮಾಡಿಕೊಟ್ಟು ಸಿಂಡಿಕೇಟಿಗೆ ಅದನ್ನು ತಿಳಿಸಿದರು. ಪರೀಕ್ಷೆಯೂ ಆಯಿತು. ನಾನು ಪಾಸಾದೆನೆಂಬುದು ಗೊತ್ತಾಯಿತು. ನಂತರ ಸಭೆ ಸೇರಿದ ಸಿಂಡಿಕೇಟು ನಾನು ತೆಗೆದುಕೊಂಡ ಪರೀಕ್ಷೆ ಮತ್ತು ಅದರಿಂದ ಬಂದ ರಿಸಲ್ಟ್‌ ಎರಡೂ `void ab initio'  ಅಂದರೆ `ಆಗಿದ್ದೂ ಆದಂತಲ್ಲ' ಎಂಬ ತೀರ್ಮಾನ ಕೊಟ್ಟಿತು.

ನಾನು ಇನ್ನೊಂದು ವರ್ಷ ಅದೇ ಕ್ಲಾಸ್‌ನಲ್ಲಿ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿದ್ದು ಓದಿದೆ. ಹೀಗಾದ್ದರಿಂದಲೇ ನನಗೆ ರತ್ನ, ವಿಶ್ವನಾಥ ಮಿರ್ಲೆ, ಮೊನ್ನೆ ತಾನೇ ಗತಿಸಿದ ಡಿ.ಕೆ.ಸೀತಾರಾಮ ಶಾಸ್ತ್ರಿ  ಮತ್ತು  ಪದ್ಮಾ ರಾಮಚಂದ್ರ ಶರ್ಮ ಮುಂತಾದವರು ಸಹಪಾಠಿಗಳಾದದ್ದು. ಕೆ.ವಿ.ಸುಬ್ಬಣ್ಣ ನನಗಿಂತ ಮೊದಲೇ ಆನರ್ಸ್‌ನ್ನು ಮುಗಿಸುವಂತಾದದ್ದು. ಎರಡು ವರ್ಷದ ಇಂಟರ್‌ ಮೀಡಿಯಟ್‌ ನನಗೆ ಮೂರು ವರ್ಷವಾಯಿತು, ಮೂರು ವರ್ಷದ ಆನರ್ಸ್‌ ನಾಲ್ಕು ವರ್ಷವಾುತು. ಇದರಿಂದ ನಷ್ಟವಾದಂತೆ ನನಗೆ ಈಗ ತೋರುವುದಿಲ್ಲ. ಹೆಚ್ಚು ಜನ ಗೆಳೆಯರಾದರು. ಹೆಚ್ಚು ಓದುವಂತಾಯಿತು. ಆಗ ಸಮಾಜವಾದಿ ಚಟುವಟಿಕೆಯಲ್ಲಿ ಚುರುಕಾಗಿದ್ದ ಟಿ.ವಿ.ಶ್ರೀನಿವಾಸ ರಾವ್‌ (ಕನ್ನಡ ಮಾಧ್ಯಮ ಚಳವಳಿಯನ್ನು ಪ್ರಾರಂಭಿಸಿದವರು ಇವರೇ) ಮುಂತಾದವರ ಜೊತೆ ನನಗೆ ಬೇಕಾಗಿದ್ದನ್ನು ಆರಾಮದಲ್ಲಿ ಓದುವಂತಾಯಿತು.

ಮಹಾರಾಜಾ ಕಾಲೇಜಿನಲ್ಲಿ ಆ ದಿನಗಳಲ್ಲಿಯೂ ವಿದ್ಯಾರ್ಥಿ ಆಂದೋಳನಗಳಿದ್ದವು. ಒಂದು ಘಟನೆ ನೆನಪಾಗುತ್ತದೆ. ಕ್ಯಾಂಟೀನನ್ನು ಬೇರೆ ಯಾರಿಗಾದರೂ ವಹಿಸಿಕೊಡಬೇಕೆಂದು ನಮಗೆಲ್ಲರಿಗೂ ಎಷ್ಟೆಂದರೆ ಅಷ್ಟು ಸಾಲದ ಲೆಕ್ಕ ಬರೆಯಲು ಅವಕಾಶ ಮಾಡಿಕೊಟ್ಟ ಅಯ್ಯರ್‌ ವಿರುದ್ಧ ವಿದ್ಯಾರ್ಥಿಗಳ ಗುಂಪೊಂದು ಸತ್ಯಾಗ್ರಹ ನಡೆಸಿತು. ಈ ವಿದ್ಯಾರ್ಥಿಗಳ ಗುಂಪಿಗೆ ಆ ಕ್ಯಾಂಟೀನನ್ನು ನಡೆಸಲು ಬಯಸುತ್ತಿದ್ದ ರಾಜಕಾರಣಿಗಳೊಂದಿಗೆ ಸಂಬಂಧವಿತ್ತು. ಆಗ ಮನೋವಿಜ್ಞಾನಿ ಗೋಪಾಲಸ್ವಾಮಿಯವರು ಪ್ರಿನ್ಸಿಪಾಲರಾಗಿದ್ದರು. ಇವರು ವಿದ್ಯಾರ್ಥಿ ನಾಯಕರನ್ನು ತಮ್ಮ ಛೇಂಬರಿಗೆ ಕರೆಸಿ, ಅವರ ದೂರನ್ನು ಕೇಳಿದರು.`ಅಯ್ಯರ್‌ ಕೊಡುವ ಕಾಫಿ ಏನೇನೂ ರುಚಿಯಾಗಿರುವುದಿಲ್ಲ' ಎನ್ನುವುದು ವಿದ್ಯಾರ್ಥಿಗಳ ದೂರು. ಜೊತೆಗೆ ಪಕ್ಕದ ಯುವರಾಜಾ ಕಾಲೇಜಿನಲ್ಲಿ ಇದ್ದ ಕಾಸ್ಮೊಪೊಲಿಟನ್‌ ಕ್ಲಬ್‌ನ ಕ್ಯಾಂಟೀನು ಇದಕ್ಕಿಂತ ಉತ್ತಮ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. ಪ್ರಿನ್ಸಿಪಾಲರು ಎರಡು ಕ್ಯಾಂಟೀನುಗಳಿಂದಲೂ ಎರಡು ದೊಡ್ಡ ಫ್ಲಾಸ್ಕ್‌ ಗಳಲ್ಲಿ ಕಾಫಿಯನ್ನು ತರಿಸಿ ಫ್ಲಾಸ್ಕ್‌ನ ಮೇಲೆ ಯಾವ ಕ್ಯಾಂಟೀನ್‌ನದೆಂದು ಗುಪ್ತವಾಗಿ ಗುರುತು ಮಾಡಿ, ಮೊದಲು ಒಂದು ಫ್ಲಾಸ್ಕ್‌ನಲ್ಲಿದ್ದ ಕಾಫಿಯನ್ನು ಎಲ್ಲರಿಗೂ ಕುಡಿಸಿ, ಆಮೇಲೆ ಇನ್ನೊಂದು ಫ್ಲಾಸ್ಕ್‌ನಲ್ಲಿದ್ದ ಕಾಫಿಯನ್ನೂ ಕುಡಿಸಿದರು. ನಂತರ 'ಈ ಎರಡು ಕಾಫಿಗಳಲ್ಲಿ ಯಾವುದು ಉತ್ತಮ?' ಎಂದು ಕೇಳಿದರು. ಎಲ್ಲರೂ ಉತ್ತಮ ಎಂದು ಹೇಳಿದ ಕಾಫಿ ಅಯ್ಯರ್‌ ಕ್ಯಾಂಟೀನ್‌ನದಾಗಿತ್ತು.

ಮಹಾರಾಜಾ ಕಾಲೇಜಿನ ದಿನಗಳಲ್ಲಿ ನನಗೆ ಬಹಳ ಪ್ರಿಯರಾದವರಲ್ಲಿ ಒಬ್ಬರೆಂದರೆ ಜಿ.ಎಚ್‌.ನಾಯಕರು. ನಾವಿಬ್ಬರೂ ಒಟ್ಟಿಗೆ ಸಾರ್ವಜನಿಕ ಹಾಸ್ಟೆಲ್‌ನಲ್ಲಿ ಊಟ ಮಾಡಿಕೊಂಡಿದ್ದೆವು. ಅವರು ಕನ್ನಡದ ವಿದ್ಯಾರ್ಥಿ. ನಾವು ಒಟ್ಟಿಗೆ ಚಾಮುಂಡಿಪುರಂನಲ್ಲಿರುವ ಮನೆಯಿಂದ ಮಹಾರಾಜಾ ಕಾಲೇಜಿಗೆ ನಡೆದುಕೊಂಡು ಬರುವುದು. ಬರುವಾಗ ದಾರಿಯಲ್ಲಿ ಗಂಟೆಗಟ್ಟಲೆ ನಾನಾಡುವ ಮಾತುಗಳಿಗೆ ಪ್ರತಿಕ್ರಿಯಿಸಿ ನನ್ನನ್ನು ಬೆಳೆಸಿದವರು ಜಿ.ಎಚ್‌.ನಾಯಕರು. ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಕೆ.ವಿ.ಸುಬ್ಬಣ್ಣನಂತೆಯೇ ಇವರೂ ನನಗೆ ಬಹು ಆಪ್ತರಾದವರು.

ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲದೇ ಬುದ್ಧಿವಂತರೂ ಸೂಕ್ಷಜ್ಞರೂ ಕಲಾವಿದರೂ ಆದ ವಿದ್ಯಾರ್ಥಿನಿಯರೂ ಇದ್ದರು. ಆ ದಿನಗಳಲ್ಲಿ `ಮಿತ್ರ ಮೇಳ' ಎಂಬ ನಾಟಕತಂಡ ಹುಟ್ಟಿಕೊಂಡಿತು. ಸುಬ್ಬಣ್ಣ, ರತ್ನ, ಸಿಂಧುವಳ್ಳಿ ಹೀಗೆ ಹಲವರು ಬೆಳಕಿಗೆ ಬಂದದ್ದು ಮತ್ತು ಅರಳಿದ್ದು ಮಿತ್ರಮೇಳದಲ್ಲಿ. ಯುವಕರೂ ಚೆಲುವರೂ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿದ್ದ ಸಿ.ಡಿ.ಎನ್‌ ಮಿತ್ರಮೇಳದ ಅಧ್ಯಕ್ಷರು. ಈ ಮಿತ್ರ ಮೇಳದಲ್ಲಿ ಹುಡುಗರೂ ಹುಡುಗಿಯರೂ ಬೆರೆಯುವುದನ್ನು ಸಹಿಸಲಾರದ ಕೆಲವು ಕೇಡಿಗರು ಏನೇನೋ ಲೈಂಗಿಕ ಆಪಾದನೆಗಳನ್ನು ಹುಟ್ಟಹಾಕಿ, ಈ ಮಿತ್ರ ಮೇಳದ ನಾಶಕ್ಕೆ ಕಾರಣರಾದರು. ನಮ್ಮದೇಶದ ಮುಖ್ಯ ಪತ್ರಿಕೆಯೊಂದು ಇದಕ್ಕೆ ಅವಕಾಶ ಮಾಡಿಕೊಟ್ಟಿತೆಂಬುದು ನಮಗೆಲ್ಲರಿಗೂ ತುಂಬಾ ಬೇಸರದ ಸಂಗತಿಯಾಗಿತ್ತು. ಮಿತ್ರ ಮೇಳದಲ್ಲಿ ಮುಖ್ಯರಾಗಿದ್ದವರೇ ಮುಂದೆ `ಸಮತೆಂತೋ' ಎನ್ನುವ ರಂಗ ಸಂಸ್ಥೆಯನ್ನು ಕಟ್ಟಿದರು. ಇದರ ಅಧ್ವರ್ಯು ನನ್ನ ಎಂದೆಂದೂ ಮುಗಿಯದ ಕಥಾ ಸಂಕಲನವನ್ನು ಮೊದಲು ಪ್ರಕಟಿಸಿದವರು. ಅವರೂ ನನ್ನ ಹೆಸರಿನವರೇ. ನಾವಿಬ್ಬರೂ ಬೇರೆ ಬೇರೆ ಎಂಬುದನ್ನು ಎಲ್ಲರಿಗೂ ತಿಳಿಯುವಂತೆ ಅವರ ಹೆಸರು ಸಿಂಧುವಳ್ಳಿ ಅನಂತಮೂರ್ತಿ ಎಂದಿದ್ದರೂ ನಾವು ಕರೆಯುವುದು ಸಿಂಧುವಳ್ಳಿ ಎಂದು.

ಆಗ ಒಂದು ಜೋಕ್‌ ಇತ್ತು. ಯಾರಾದರೂ ಅವನನ್ನು  `you(U.) are(R.) Ananthamurthy? ಎಂದರೆ ಅವನು ಸುಳ್ಳು ಹೇಳುತ್ತಿರಲಿಲ್ಲ. ಯಾಕೆಂದರೆ yes(S.) Ananthamurthy ಎಂದು ಬಿಡುತ್ತಿದ್ದ. ಅವನು ಸಾಯುವ ತನಕವೂ ಎಷ್ಟು ವರ್ಷಗಳ ನಂತರ ಅವನನ್ನು ಭೇಟಿಯಾದಾಗಲೂ ಈ ಜೋಕನ್ನು ನೆನೆದು ನಾವು ನಗುತ್ತಿದ್ದೆವು.

ನಾನು ಬರೆಯಲು ಪ್ರಾರಂಭ ಮಾಡಿದ್ದು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಪ್ರೊ.ಸಿ.ಡಿ.ಎನ್‌ ತರಗತಿಯಲ್ಲಿ ಎಲಿಯೆಟ್‌ ಪಾಠ ಮಾಡಿದರೆ ಸಂಜೆ ಕಾಫಿ ಹೌಸ್‌ನಲ್ಲಿ ನಾವು ಅಡಿಗರ ಜೊತೆ ಕೂತು ಹೊಸ ಕಾವ್ಯವನ್ನು ಚರ್ಚೆ ಮಾಡುತ್ತಿದ್ದೆವು. ಹೀಗಾಗಿ ಹೊಸ ಕಾವ್ಯದ ಕ್ರಾಂತಿ ಲಂಡನ್‌ನಲ್ಲಿ ಮಾತ್ರ ಆದದ್ದು ಅಲ್ಲ, ನಮ್ಮ ಮೈಸೂರಿನಲ್ಲಿಯೂ ಅದು ಆಯಿತು. ಸಂತ ಫಿಲೋಮಿನಾ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದ ಅಡಿಗರು ಎಲಿಯೆಟ್‌ನಂತೆ ನಮಗೆ ಮುಖ್ಯರೆನಿಸಿದರು. ರಾಮಚಂದ್ರ ಶರ್ಮರೂ ಆಗೀಗ ಬಂದು ಹೋಗುತ್ತಿದ್ದರು. (ಮುಂದೆ ಅವರು ಮದುವೆಯಾದ ಪದ್ಮಾ ನನ್ನ ಸಹಪಾಠಿಯಾಗಿದ್ದರು) ನನ್ನ ಆಗಿನ ವಯಸ್ಸಿಗೂ, ಸದ್ಯದ ಅನುಭವಕ್ಕೂ ಹತ್ತಿರವಾದವರು ರಾಮಚಂದ್ರಶರ್ಮರಾದರೆ, ನನ್ನ ಆತ್ಮವನ್ನು ಕ್ರಮೇಣ ಆಳವಾಗಿ ಮುಟ್ಟಿದ್ದು ಅಡಿಗರ ಹೆಚ್ಚು ಸಂಕೀರ್ಣವಾದ ಪದ್ಯಗಳು. ಮೈಸೂರಿನ ಕಾಫಿಹೌಸ್‌ನಲ್ಲಿ ನಮ್ಮ ಜೊತೆ ಕಥೆಗಾರ ಕೆ. ಸದಾಶಿವ, ಟಿ.ಜಿ.ರಾಘವರೂ ಇರುತ್ತಿದ್ದರು. ಆಗ ನಮಗೆ ಬಹು ಮೆಚ್ಚಿಗೆಯಾಗಿದ್ದ ಕಥೆಗಾರ್ತಿ ರಾಜಲಕ್ಷ್ಮಿ. ಎನ್‌.ರಾವ್‌ ಕೂಡಾ ಪರಿಚಯವಾದರು.

ನಾನು ಮೊದಲು ಬರೆದ ಪುಟ್ಟ ಕತೆಗಳನ್ನು ಪ್ರಕಟಿಸಿದ್ದು ವಿ.ಎಸ್‌.ರಾಘವನ್‌ ಎಂಬ ನನ್ನ ಗೆಳೆಯ ಮಿರ್ಲೆ ವಿಶ್ವನಾಥರ ಸಹಯೋಗದಲ್ಲಿ ನಡೆಸುತ್ತಿದ್ದ `varsity times' ಎನ್ನುವ ಇಂಗ್ಲಿಷ್‌, ಕನ್ನಡ ಒಳಗೊಂಡ ಪತ್ರಿಕೆಯಲ್ಲಿ. ಕಾಲೇಜಿನಲ್ಲಿ ಓದುವುದು ಬೇರೆಯಲ್ಲ, ನಾವು ಇಷ್ಟ ಪಡುತ್ತಿದ್ದುದು ಬೇರೆಯಲ್ಲ ಎನ್ನಿಸುತ್ತಿದ್ದ ಅಪೂರ್ವ  ಕಾಲ ಅದು. ನಾವು ಬರಿಗಾಲಿನಲ್ಲಿಯೇ ಮೈಸೂರು ಇಡೀ ಓಡಾಡುತ್ತಿದ್ದೆವು. ಅವಸರವಾದರೆ ಬಾಡಿಗೆಗೆ ಸೈಕಲ್‌ ಪಡೆದು ಓಡಾಡುತ್ತಿದ್ದೆವು. ಕೈಯಲ್ಲಿ ದುಡ್ಡು ಇಲ್ಲವಾದರೆ ಹೊಟೇಲ್‌ನಲ್ಲಿ ಲೆಕ್ಕ ಬರೆಸಿ ತಿಂಡಿ ತಿನ್ನುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಕುಳಿತಾಗ ಮನಿ ಆರ್ಡರ್‌ ತರುತ್ತಿದ್ದ ಪೋಸ್ಟ್‌ ಮ್ಯಾನ್‌ ನಮಗೆ ದೇವತೆಯಂತೆ ಕಾಣುತ್ತಿದ್ದ. 

ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ನಂತೆಯೇ ನಮ್ಮದೂ ಒಂದು ಮುಖ್ಯ ವಿದ್ಯಾ ಸಂಸ್ಥೆ. ಎಲಿಯಟ್‌, ಮಿಲ್ಟನ್‌ರಂತೆಯೇ ನಮ್ಮ ಕುವೆಂಪು ಮತ್ತು ಅಡಿಗರು. ತೀ.ನಂ.ಶ್ರೀ, ಡಿ.ಎಲ್‌.ಎನ್‌ ಮತ್ತು ಎ.ಆರ್‌,ಕೃಷ್ಣಶಾಸ್ತ್ರಿಗಳು ಜಗತ್ತಿನ ಯಾವ ವಿಮರ್ಶಕರಿಗೂ ಕಡಿಮೆ ಇಲ್ಲ. ನಾವು ಕೂಡಾ ನಮ್ಮ ನಮ್ಮ ಯೋಗ್ಯತೆಯಲ್ಲಿ ಜಾನ್ಞವನ್ನು ಸೃಷ್ಟಿಸುತ್ತಿರುವವರು ಎಂದು ನಮಗೆಲ್ಲ ಅನ್ನಿಸುವಂತೆ ಮಾಡಿದ ಮಹಾರಾಜಾ ಕಾಲೇಜನ್ನು ನಾನು ಯಾವತ್ತೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಅಭಿನವ ಚಾತುರ್ಮಾಸಿಕಕ್ಕಾಗಿ ನ.ರವಿಕುಮಾರ್‌ ಗೆ ಹೇಳಿ ಬರೆಯಿಸಿದ ಲೇಖನ,
ಸದ್ಯವೇ ಇದು ಬಿಡುಗಡೆಯಾಗಲಿದೆ.