Monthly Archives: August 2006

ಕನಿಷ್ಠದಲ್ಲಿ ಗರಿಷ್ಠವನ್ನು ಹೊಳೆಸಬಲ್ಲ ಕಲೆ

ಬೋಳು ತಲೆಯ ಪ್ರೇಮಿ

ಪೂರ್ಣಗೊಂಡ ಸ್ಕ್ರಿಪ್ಟ್ ನಿಂದ ನಾನು ಪ್ರಾರಂಭಿಸುವುದೇ ಇಲ್ಲ. ನನ್ನ ಮನಸ್ಸಿನಲ್ಲಿ ಒಂದು ಪಾತ್ರ ಹುಟ್ಚಿಕೊಂಡಿರುತ್ತದೆ. ಆ ಪಾತ್ರದಂಥವನೊಬ್ಬ ಅಥವಾ ಒಬ್ಬಳು ನನಗೆ ನಿಜ ಜೀವನದಲ್ಲಿ ಪ್ರತ್ಯಕ್ಷವಾಗುವ ತನಕ ನಾನು ಟಿಪ್ಪಣಿಗಳನ್ನೂ ಮಾಡಿಕೊಳ್ಳಲೂ ಹೋಗುವುದಿಲ್ಲ. ಅಂಥವರೊಬ್ಬರು ಸಿಕ್ಕ ಮೇಲೆ ನನಗವರು ಆಪ್ತರಾಗುವಷ್ಟು ಅವರ ಜತೆ ಕಾಲ ಕಳೆಯುತ್ತೇನೆ. ಹೀಗಾಗಿ ನಾನು ಮಾಡುವ ಟಿಪ್ಪಣಿಗಳು ನನ್ನ ಮನಸ್ಸಿನಲ್ಲಿರುವ ಪಾತ್ರದ ಬಗ್ಗೆಯಾಗಿರದೆ ನಿಜ ಜೀವನದಲ್ಲಿ ನಾನು ಕಂಡವರ ಬಗ್ಗೆ ಆಗಿರುತ್ತದೆ ಇದೊಂದು ದೀರ್ಘ ಪ್ರಕ್ರಿಯೆ; ಐದಾರು ತಿಂಗಳುಗಳಾದರೂ ಹಿಡಿಯುವ ಪ್ರಕ್ರಿಯೆ. ಹೀಗಾದಾಗ ನಾನು ಕೆಲವು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತೇನೆಯೇ ಹೊರತು ಅವರ ಸಂಭಾಷಣೆಗಳನ್ನು ಬರೆದಿಟ್ಟುಕೊಳ್ಳುವುದಿಲ್ಲ. ಇಡೀ ಸಂಭಾಷಣೆಗಳನ್ನು ಬರೆಯುವುದೇ ಇಲ್ಲ. ಆದುದರಿಂದ ಚಿತ್ರೀಕರಣ ಪ್ರಾರಂಭ ಮಾಡಿದಾಗ ರಿಹರ್ಸಲ್ ಮಾಡುವ ಪ್ರಮೇಯವೇ ಬರುವುದಿಲ್ಲ. ನನಗೇ ಅವರು ಹತ್ತಿರವಾಗುವುದರ ಬದಲು ಅವರಿಗೇ ನಾನು ಹತ್ತಿರವಾಗುತ್ತಾ ಹೋಗುತ್ತೇನೆ. ನಾನು ಅವರಿಗೆ ಕೊಡುವುದು ಇಲ್ಲವೆಂದಲ್ಲ. ಆದರೆ ಅವರಿಂದ ನಾನು ಹೆಚ್ಚು ಪಡೆದುಕೊಳ್ಳುತ್ತೇನೆ.

-ಅಬ್ಬಾಸ್ ಕಿರೋಸ್ತಾಮಿ

ಕಾಣುವುದನ್ನು ಕಾಣ್ಕೆಯಾಗಿಸುವ ಕಲಾವಿದ

ಅಬ್ಬಾಸ್ ಕಿರೋಸ್ತಾಮಿ

ನನ್ನ ಚಿತ್ರಗಳ ಜತೆ ಇರಾನ್ ಸರಕಾರಕ್ಕೆ ಯಾವ ಸಂಬಂಧವೂ ಇಲ್ಲ. ನಾನು ಮಾಡುವಂಥ ಸಿನಿಮಾಗಳಲ್ಲಿ ಅವರು ಆಸಕ್ತರಲ್ಲ. ಇರಾನಿನ ಜೀವನದ ಸತ್ಯವನ್ನು ಹೇಳ ಹೊರಟಿದ್ದೇನೆಂದು ನಾನು ತಿಳಿದೇ ಇಲ್ಲ. ಅದರ ಕೆಲವು ಮುಖಗಳನ್ನು ನಾನು ನೋಡುತ್ತೇನೆ ಅಷ್ಟೇ. ಇರಾನ್ ಬಹು ವಿಶಾಲವಾದ ಒಂದು ಪ್ರಪಂಚ. ಅಲ್ಲಿ ಬದುಕುವ ನಮಗೇ ಅಲ್ಲಿನ ವಾಸ್ತವಗಳನ್ನು ಗ್ರಹಿಸುವುದು ಕಷ್ಟ. ದೇಶಕ್ಕೆ ಸಂಬಂಧ ಪಟ್ಟಂತೆ ಬಹುಮುಖ್ಯ ಸಮಸ್ಯೆಗಳನ್ನು ಸರಕಾರ ಎದುರಿಸಬೇಕಾಗಿ ಬಂದಿರುವುದರಿಂದ ನಾವು ಮಾಡುವ ಸಿನಿಮಾಗಳು ಅವರಿಗೆ ಇಲ್ಲದಿದ್ದರೂ ಸಲ್ಲುತ್ತದೆ. ಅವರಿಷ್ಟ ಪಡುತ್ತಾರೋ ಇಲ್ಲವೋ ಈ ಸಿನಿಮಾಗಳು ಮುಖ್ಯವಂತೂ ಅಲ್ಲ.

-ಅಬ್ಬಾಸ್ ಕಿರೋಸ್ತಾಮಿ
ನಾನೇನು ಬಹಳ ಸಿನಿಮಾಗಳನ್ನು ನೋಡಿರುವ ತಜ್ಞನಲ್ಲ. ಆದರೆ ಅಬ್ಬಾಸ್ ಕಿರೋಸ್ತಾಮಿಯ ಕೆಲವು ಸಿನಿಮಾಗಳನ್ನು ನೋಡುತ್ತಿದ್ದಂತೆಯೇ ನನಗೆ ಅನ್ನಿಸಿದ್ದು ಇದು: ಯೂರೋಪಿಯನ್ ಸಿನಿಮಾ ಎನ್ನುವಂತೆ ಏಷ್ಯನ್ ಸಿನಿಮಾ ಕೂಡಾ ಇದೆ. ನಮ್ಮ ಸತ್ಯಜಿತ್ ರಾಯ್ ನಂತೆ , ಜಪಾನಿನ ಕುರೊಸಾವನಂತೆ ಇರಾನಿನ ಅಬ್ಬಾಸ್ ಕಿರೋಸ್ತಾಮಿಯೂ ನಮ್ಮ ಕಾಲದ ಸೂಕ್ಷ್ಮಜ್ಞನಾದ ಏಷ್ಯನ್ ಸಿನಿಮಾ ನಿರ್ದೇಶಕ.

ಇವನು ಇರಾನಿನವನು ಎಂಬುದು ಬಹಳ ಮುಖ್ಯ. ಷಾ ಆಳುತ್ತಿದ್ದ ಕಾಲದಲ್ಲಿ ಇರಾನ್ ತನ್ನ ದೇಶೀಯ ಇಸ್ಲಾಮಿಕ್ ಸಂಸ್ಕೃತಿಯಿಂದ ತುಂಬಾ ದೂರವಾಗಿ ಅಮೆರಿಕದ ಕೃತಕ ಅನುಕರಣೆಯಲ್ಲಿ ಪರದೇಸಿಯಾತು. ಇದಕ್ಕೆ ವಿರುದ್ಧವಾಗಿ ಎದ್ದ ಧಾರ್ಮಿಕ ಸ್ವದೇಶಿ ಅಲೆ ಇರಾನನ್ನು ಮತ್ತೆ ನಿರ್ಬಂಧಿಸಿ ಮತ ನಿಷ್ಠ ಇಸ್ಲಾಮಿನ ಚೌಕಟ್ಟಿನಿಂದ ಹೊರಬಾರದಂತೆ ನೋಡಿಕೊಂಡಿತು. ಇದು ಕ್ರೂರವೆನ್ನಿಸುವಷ್ಟು ಮಾನವ ಸ್ವಭಾವಕ್ಕೆ ಅಸಹಜವಾಗಿ ಅತಿಯಾದದ್ದೇ ಇರಾನ್ ತನ್ನ ದೇಶೀಯ ಸಂಸ್ಕೃತಿಯ, ಯಾವುದೂ ಅತಿಯಾಗಗೊಡದ ಹದವನ್ನು ಮತ್ತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಉಳಿದೆಲ್ಲಾ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇರಾನ್ ಭಾರತಕ್ಕೆ ಅದು ಪಡೆಯುತ್ತಿರುವ ಹದದಲ್ಲೂ ಅದು ಎದುರಿಸುತ್ತಿರುವ ಸಾಂಸ್ಕೃತಿಕ ಇಕ್ಕಟ್ಟಿನ ಸಮಸ್ಯೆಗಳಲ್ಲೂ ಹತ್ತಿರವಾಗಿದೆ ಅನ್ನಿಸುತ್ತದೆ. ಮುಖ್ಯವಾಗಿ ಹೀಗೆ ಅನ್ನಿಸುವುದು ಅವರು ಮಾಡುತ್ತಿರುವ ಸಿನಿಮಾಗಳಲ್ಲಿ.

ಖೊಮೇನಿಯ ನಂತರದ ಇರಾನ್ ನಲ್ಲಿ ಮತೀಯ ಶ್ರದ್ಧೆಗಳನ್ನು ನಿರಾಕರಿಸಿ ಆಧುನಿಕವಾಗುವುದು ಸುಲಭವೇನಲ್ಲ. ಕಳೆದ ವರ್ಷದ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅಬ್ಬಾಸ್‌ ಕಿರೋಸ್ತಾಮಿ ಪುರಸ್ಕೃತನಾದ. ವೇದಿಕೆಯ ಮೇಲೆ ಇವನಿಗೆ ಪುರಸ್ಕಾರವನ್ನು ಕೊಟ್ಟ ಕ್ಯಾಥರಿನ್ ಎಂಬ ಮಹಿಳೆ ಅವನನ್ನು ಅಪ್ಪಿ ಮುದ್ದಿಟ್ಟಳು. ಇದೊಂದು ದೊಡ್ಡ ಸುದ್ದಿಯಾಗದೇ ಹೋಗುವುದು ಮಡಿವಂತ ಇರಾನಲ್ಲಿ ಸಾಧ್ಯವೇ? ಖಂಡಿತಾ ಅಲ್ಲ. ಅಬ್ಬಾಸ್‌ಕಿರೋಸ್ತಾಮಿ ಒಂದು ವಾರ ಟೆಹರಾನ್ ಗೆ ತಡವಾಗಿ ತೆರಳಿದನಂತೆ!

ಕರ್ನಾಟಕದ ಜಾಣ ಅನಕ್ಷರಸ್ಥರು

ರಾಜ್ ಕುಮಾರ್ ರಾಜಕುಮಾರರು ಅಕ್ಷರವಾಗಬೇಕು ಎಂಬ ನನ್ನ ಆಸೆಗೆ ಪೂರಕವಾಗಿ ಇನ್ನಷ್ಟು ಮಾತುಗಳು. ಬೇಂದ್ರೆಯವರು ತಮ್ಮ ಪ್ರಸಿದ್ಧ ಮುನ್ನುಡಿಯೊಂದರಲ್ಲಿ ಕನ್ನಡದ ಹಲವು ಭಾಷಾ ಪ್ರಬೇಧಗಳು ಹೆದ್ದಾರಿ ಸೇರಲು ಇರುವ ಒಳದಾರಿಗಳು ಎಂಬರ್ಥ ಬರುವ ಮಾತಾಡಿದ್ದರು. ಈ ಎಲ್ಲ ಒಳದಾರಿಗಳಲ್ಲಿ ನಡೆದಾಡುತ್ತಲೇ ಕನ್ನಡದ ಮುಖ್ಯ ಹಾದಿಯೊಂದನ್ನು ಸೃಷ್ಟಿಸುವ ಆಶಯವನ್ನು ಪ್ರಕಟಿಸಿದ್ದರು. ಈ ಕೆಲಸ ಸದ್ದಿಲ್ಲದೆ ನಡೆದಿದೆ- ಬೇಂದ್ರೆಯಿಂದ ಮೊದಲಾಗಿ ಕಂಬಾರ, ಮಹದೇವರ ತನಕ.

ನಮ್ಮ ಈಗಿನ ಕನ್ನಡದ ಮುಖ್ಯವಾಹಿನಿ ಕೇವಲ ಮೈಸೂರು ದೇಶದ ಕನ್ನಡವಾಗಿ ಉಳಿದಿಲ್ಲ. ಮಾತಿನ ಓಘದಲ್ಲಿ, ಗತ್ತಿನಲ್ಲಿ, ಏರಿಳಿಕೆಯ ವಿನ್ಯಾಸಗಳಲ್ಲಿ, ಪ್ರಾದೇಶಿಕತೆಯ ತನ್ನ ವಾಸನೆಯನ್ನು ಉಳಿಸಿಕೊಂಡೇ ಎಲ್ಲರ ಕನ್ನಡವೊಂದು ಸೃಷ್ಟಿಯಾಗುತ್ತಲೇ ಇದೆ. ವೈಚಾರಿಕತೆಯ ಸಂವಹನದ ಗದ್ಯಕ್ಕೆ ಇದು ಅಗತ್ಯ. ಕನ್ನಡ ಇವತ್ತು ಭಾವ ವಾಹಿನಿ ಮಾತ್ರವಲ್ಲ; ಜ್ಞಾನವಾಹಿನಿಯೂ ಹೌದು. ವಿಜ್ಞಾನ, ಎಂಜಿನಿಯರಿಂಗ್‌, ಮೆಡಿಕಲ್‌, ಸಮಾಜ ಶಾಸ್ತ್ರ, ಚರಿತ್ರೆ- ಏನನ್ನಾದರೂ ಕನ್ನಡದಲ್ಲಿ ಕಲಿಸುವುದು ಸಾಧ್ಯವಾಗಿದೆ.

ಅಕ್ಷರವಾಗಬಹುದಾದ ರಾಜಕುಮಾರ

 ರಾಜಕುಮಾರ್‌ ಕಣ್ಮರೆಯಾದನಂತರ ಅವರ ಕುಟುಂಬವನ್ನು ನೋಡಲು ಹೋದಾಗ ನಾನೊಂದು ಸಲಹೆ ಕೊಟ್ಟಿದ್ದೆ. ನನ್ನ ಸೂಚನೆಗೆ ಮನಃಪೂರ್ವಕವಾಗಿ ಪಾರ್ವತಮ್ಮನವರೂ ಅವರ ಪುತ್ರರೂ ಮಿಡಿದಿದ್ದರು. ಕನ್ನಡ ಭಾಷೆಗೂ ಕನ್ನಡ ನಾಡಿಗೂ ತಾನೇನೆಂಬ ಅರಿವನ್ನು ತಂದವರು ನಮ್ಮ ದೊಡ್ಡ ಲೇಖಕರು ಮಾತ್ರವಲ್ಲ, ವರನಟ ರಾಜಕುಮಾರ್‌ ಕೂಡಾ ಮುಖ್ಯರು.

ಕನ್ನಡ ಭಾಷೆ ನಮ್ಮ ಆಧುನಿಕ ಕಾಲದಲ್ಲಿ ಉಳಿಯಲು ಬೆಳೆಯಲು ಕನ್ನಡಿಗರೆಲ್ಲರೂರಾಜ್ ಅಭಿಮಾನಿಗಳು ಅಕ್ಷರಸ್ಥರಾಗುವುದು ಕನಿಷ್ಠವಾದ ಒಂದು ಅಗತ್ಯ. ರಾಜಕುಮಾರ್‌ ಅವರ ನೆನಪನ್ನು ಶಾಶ್ವತಗೊಳಿಸುವ ಕೆಲಸ ಇದಾದ್ದರಿಂದ ಅವರ ಕೋಟ್ಯಾಂತರ ಅಭಿಮಾನಿಗಳು ಈ ಸಾಕ್ಷರತಾ ಆಂದೋಲನದಲ್ಲಿ ಭಾಗಿಗಳಾಗಬೇಕು. ಅಕ್ಷರಬಲ್ಲ ಅಭಿಮಾನಿಗಳು ಅಕ್ಷರ ಬಾರದವರಿಗೆ ಕಲಿಸಬೇಕು; ಅಕ್ಷರ ಬಾರದವರು ತಮ್ಮ ಅಣ್ಣನಿಗೆ ಇದು ಪ್ರಿಯವಾಗುತ್ತದೆಂದು ತಿಳಿದು ಅಕ್ಷರ ಕಲಿಯಬೇಕು. ಅವರು ಸಮಾಯಾಗಿರುವ ಜಾಗದಲ್ಲಿ ನೀವು ಯಾವ ಹೊತ್ತಿಗೆ ಹೋಗಿ ನೋಡಿದರೂ ಅಲ್ಲಿ ಹಣ್ಣುಕಾಯಿ ತಂದು ತಮ್ಮ ಈ ಪ್ರೀತಿಯನಟನಿಗೆ ಅರ್ಪಿಸುವವರನ್ನು ನಾವು ನೋಡುತ್ತೇವೆ. ಇವರಲ್ಲಿ ಬಡಬಗ್ಗರೇ ಹೆಚ್ಚು ಜನ. ಈ ಎಲ್ಲರಿಗೆ ಅಕ್ಷರ ಜ್ಞಾನವೆಂದರೆ ತಾವು ಮರ್ಯಾದೆಯಿಂದ ಬದುಕಲು ಈ ಕಾಲದ ಬಹು ದೊಡ್ಡ ಅಗತ್ಯವೆಂದು ತಿಳಿಯಬೇಕು. ಅಕ್ಷರಜ್ಞಾನದ ಅಗತ್ಯವಿಲ್ಲದೆ ಇದ್ದವರು ವೇದಕಾಲದ ಋಷಿಗಳು ಮಾತ್ರ.

ಪಾರ್ವತಮ್ಮನವರ ಜೊತೆ ಮಾತಾಡಿದಾಗ ಈ ಅಕ್ಷರ ಆಂದೋಲನವನ್ನು ರಾಜಕುಮಾರರ ಹೆಸರಿನಲ್ಲಿ ಹೇಗೆ ಮಾಡಬಹುದೆಂಬ ನನ್ನ ವಿಚಾರ ಮಸುಕಾಗಿತ್ತು. ಈಗದು ಸ್ಪಷ್ಟವಾಗಿರುವುದರಿಂದ ಬರೆಯುತ್ತಿದ್ದೇನೆ. ಸಾಕ್ಷರತಾ ಆಂದೋಲನದಲ್ಲಿ ಒಂದಷ್ಟು ಜನ ಅಕ್ಷರಸ್ಥರಾದರು; ಆದರೆ ಕೇವಲ ಅಕ್ಷರವನ್ನು ಗುರುತಿಸಬಲ್ಲವರಾದರು. ಸರಾಗವಾಗಿ ಇವರು ಓದಲಾರರು. ಬಹು ಮುಖ್ಯವಾಗಿ ಇಂಥವರ ದೃಷ್ಟಿಯಿಂದಲೂ, ಅಕ್ಷರವೇ ಬಾರದವರಿಗೆ ಕಲಿಯಬೇಕೆಂಬ ಆಸೆ ಹುಟ್ಟಿಸುವ ದೃಷ್ಟಿಯಿಂದಲೂ, ಶಾಲೆಗೆ ಇನ್ನೂ ಹೋಗದ ಮಕ್ಕಳ ದೃಷ್ಟಿಯಿಂದಲೂ ನಾವು ಮಾಡಬಹುದಾದ ಒಂದು ಕೆಲಸವಿದೆ. ಇದು ಸಾಧ್ಯವಾಗುವುದು ಎಲ್ಲ ಗ್ರಾಮ ಪಂಚಾಯಿತಿಗಳೂ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಾಗ. ರಾಜಕುಮಾರರನ್ನು ಪ್ರೀತಿಸಿದವರೆಲ್ಲರೂ ಇದು ಕನ್ನಡದ ಶ್ರೇಷ್ಠ ನಟನೊಬ್ಬನಿಗೆ ನಾವು ಮಾಡುವ ಶ್ರಾದ್ಧ ಎಂದು ತಿಳಿದಾಗ.

***

ನನ್ನ ಮನಸ್ಸಿನಲ್ಲಿ ಬಂದು ಹೋದ ಈ ವಿಚಾರ ಯಶಸ್ವಿಯಾಗುತ್ತದೆಂದು ಮನದಟ್ಟಾದ್ದು ಜುಲೈ 30ನೇ ತಾರೀಖು ದೆಹಲಿಯಲ್ಲಿ ನಾನೊಂದು ಚರ್ಚೆಯಲ್ಲಿ ಭಾಗವಹಿಸಿದಾಗ. ಸಂದರ್ಭ ಪಿಟ್ರೋಡರವರ ಅಧ್ಯಕ್ಷತೆಯಲ್ಲಿ ನಮ್ಮ ಸರ್ಕಾರ ನಾಲೆಡ್ಜ್‌ ಕಮಿಷನ್‌ ಎಂಬ ಸಂಸ್ಥೆಯೊಂದನ್ನು ಶುರುಮಾಡಿದೆ. ಈ ಹೆಸರು ಕೊಂಚ ಗರ್ವದ್ದಾಯಿತು ಎಂದು ನಾನು ಅನುಮಾನ ಪಟ್ಟರೂ ಅಕ್ಷರ ಚಳುವಳಿಬಗ್ಗೆಯಲ್ಲವೇ ಎಂದು ಹೋದೆ.