Select Page

ಓಟ್ ಬ್ಯಾಂಕ್ ರಾಜಕಾರಣದ ಮಾತು-ಕೃತಿ

ಮಾತಿಗೂ ವರ್ತನೆಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಒಂದು ಆತ್ಮವಂಚನೆಯಿಂದ ಹುಟ್ಟುವ ವ್ಯತ್ಯಾಸ. ಇನ್ನೊಂದು ಉದ್ದೇಶ ಪೂರ್ವಕ ವಂಚನೆಯಿಂದ ಹುಟ್ಟಿದ ವ್ಯತ್ಯಾಸ. ರಾಜಕೀಯ ಭಂಡ ಆದಾಗ ಆ ಭಂಡತನದಲ್ಲಿ ಮಾತಿಗೂ ಕೃತಿಗೂ ಇರುವ ಉದ್ದೇಶಪೂರ್ವಕ ವ್ಯತ್ಯಾಸ ಅಂತರ್ಗತವಾಗಿರುತ್ತದೆ. ಅದರಲ್ಲಿ ಯಾವ ಒಳತೋಟಿಯೂ ಇರುವುದಿಲ್ಲ. ಈಗ ನಡೆಯುತ್ತಿರುವುದು ಯಾವ ಒಳತೋಟಿಯೂ ಇಲ್ಲದ ರಾಜಕಾರಣ. ಇದರಿಂದ ಜನ ಸಿನಿಕರಾಗುತ್ತಾರೆ. ಹಾಗಾದಾಗ ಇಂಥದ್ದನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಅದರಿಂದ ಸಿನಿಕನಾಗುವ ಪ್ರಲೋಭನೆಗೆ ಒಳಗಾಗದೆ ಈಗಿನ ರಾಜಕಾರಣದ ಬಗ್ಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.

ನಮ್ಮ ರಾಜಕೀಯದಲ್ಲಿರುವ ಪಕ್ಷ ವ್ಯವಸ್ಥೆಯನ್ನು ನೋಡೋಣ. ಲೋಹಿಯಾ ಮಂಡಿಸಿದ ಕಾಂಗ್ರೆಸ್‌ ವಿರೋಧಿ ತಾತ್ವಿಕತೆ ನನಗೆ ನೆನಪಾಗುತ್ತಿದೆ. ಅವರ ಅಭಿಪ್ರಾಯದಂತೆ `ಕಾಂಗ್ರೆಸ್‌ ಒಂದು ಸಮೂಹ ಇದ್ದಂತೆ. ಅದರಲ್ಲಿ ಎಲ್ಲ ಬಗೆಯ ಆಲೋಚನೆಗಳನ್ನೂ ಇಟ್ಟುಕೊಂಡವರಿದ್ದಾರೆ. ಸಮಾಜವಾದಿಗಳು, ಬಂಡವಾಳಶಾಹಿಗಳು, ಜಮೀನ್ದಾರರ ಪರವಾಗಿರುವವರು, ರೈತರ ಪರವಾಗಿ ಇರುವವರು, ಹಿಂದುತ್ವವಾದಿಗಳು, ಸೆಕ್ಯುಲರ್‌ ವಾದಿಗಳು ಹೀಗೆ ಎಲ್ಲಾ ಬಗೆಯವರೂ ಅದರಲ್ಲಿದ್ದಾರೆ. ಆದರೆ ನಾವು ಪ್ರತಿಪಕ್ಷವಾಗಿ ಸಮಾಜವಾದಿಗಳು, ಬಂಡವಾಳಶಾಹಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಒಡೆದುಕೊಂಡಿದ್ದೇವೆ. ಒಂದು ದೇಶದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಬೇಕಾದರೆ ಒಂದು ಬೆಟ್ಟದ ಹಾಗೆ ಗಟ್ಟಿಯಾಗಿರುವ, ಯಾವ ಬದಲಾವಣೆಯೂ ಇಲ್ಲದಂತೆ ನಮ್ಮನ್ನು ಆಳುತ್ತಿರುವ ಕಾಂಗ್ರೆಸ್ಸನ್ನು ಬದಲಾಯಿಸುವುದು ಸಾಧ್ಯ ಎಂಬುದನ್ನು ಜನರಿಗೆ ತೋರಿಸಬೇಕು.

ಒಂದು ಸಾರಿಯಾದರೂ ಒಂದು ಪಕ್ಷವನ್ನು ಬದಲಾಯಿಸುವುದು ಸಾಧ್ಯ ಎಂಬುದನ್ನು ಸಾಬೀತು ಮಾಡಿದರೆ ಜನ ಕ್ರಿಯಾಶೀಲರಾಗುತ್ತಾರೆ. ಆದ್ದರಿಂದ ಜನರನ್ನು ಕ್ರಿಯಾಶೀಲರಾಗಿಸಲು ನಾವೆಲ್ಲಾ-ಬೇರೆ ಬೇರೆ ಪಕ್ಷಗಳಾಗಿ ಒಡೆದಿರುವವರು, ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಇರುವವರು-ಒಂದಾಗಬೇಕು’.
ಎಪ್ಪತ್ತರ ದಶಕದ ನಂತರ ನಡೆಯುತ್ತಿರುವ ರಾಜಕಾರಣವನ್ನು ಕಾಂಗ್ರೆಸ್ಸೇತರ ಒಕ್ಕೂಟಗಳ ರಾಜಕಾರಣ ಎಂದು ಗುರುತಿಸಬಹುದು. ಜಯಪ್ರಕಾಶ್‌ ನಾರಾಯಣ್‌ ಅವರ ಚಳವಳಿಯ ಜತೆ ಜನಸಂಘವೂ ಗುರುತಿಸಿಕೊಂಡಿತು. ನಾವೆಲ್ಲರೂ ಆಗ ಜನಸಂಘದ ಜತೆ ಕೆಲಸ ಮಾಡಿದೆವು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆರ್‌ಎಸ್‌ಎಸ್‌ ಹುಡುಗರ ಜತೆಯೇ ನಾನು ಕೆಲಸ ಮಾಡಿದ್ದೆ. ಆಗಲೂ ನನಗೊಂದು ಸಮಸ್ಯೆ ಇತ್ತು. ಇದರ ಕುರಿತು ನಾನು ಆರ್‌ಎಸ್‌ಎಸ್‌ನವರ ಜತೆಯೇ ಚರ್ಚೆ ಮಾಡಿದ್ದೆ.

ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಚಳವಳಿಯ ದಿನಗಳಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬರಾದ ಮಧ್ವರಾವ್‌ ಎಂಬವರು ನಮ್ಮ ಮನೆಗೆ ವೇಷ ಮರೆಸಿಕೊಂಡು ಬಂದಿದ್ದರು. ಬಂದವರು `ನಾನು ಯಾರು ಗೊತ್ತಾಯ್ತಾ?’ ಎಂದು ಕೇಳಿದರು. ನಾನು ಗೊತ್ತಾಯ್ತು ಎಂದೆ. ಅವರು `ನೀವು ನಮ್ಮ ಜತೆ ಸಹಕರಿಸಬೇಕು’ ಎಂದು ಕೇಳಿಕೊಂಡರು. ಸಹಕರಿಸಲು ಒಪ್ಪಿಕೊಂಡ ನಾನು ಅವರ ಮುಂದೆ ನನ್ನ ಸಮಸ್ಯೆಯನ್ನು ಇಟ್ಟೆ- ನೀವು ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸುತ್ತೀರಿ? ಆರ್‌ಎಸ್‌ಎಸ್‌ನ ಎಲ್ಲ ತತ್ವಗಳನ್ನೂ ಇಂದಿರಾಗಾಂಧಿಯವರೇ ಜಾರಿಗೆ ತರುತ್ತಿದ್ದಾರೆ. ಪಾಕಿಸ್ಥಾನವನ್ನು ಒಡೆದರು, ಅಣುಬಾಂಬ್‌ ತಯಾರಿಸಿದರು, ಸಂಜಯ್ ಗಾಂಧಿ ನೇತೃತ್ವದಲ್ಲಿ ಮುಸ್ಲಿಮರ ಸಂತಾನಶಕ್ತಿಯ ಹರಣವೂ ನಡೆಯುತ್ತಿದೆ. ಇಷ್ಟಾಗಿಯೂ ಆರ್‌ಎಸ್‌ಎಸ್‌ ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸಬೇಕು?

ಮಧ್ವರಾಯರು `ಹೌದು, ನೀವು ಹೇಳೋದು ನಿಜ. ಆದರೂ ವಿರೋಧಿಸುತ್ತಾ ಇದ್ದೇವೆಲ್ಲಾ. ನಮ್ಮನ್ನು ನಂಬಿ’ ಎಂದರು. ನಾವು ನಂಬಿದೆವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾವೆಲ್ಲಾ ನಂಬುವಂಥ ಮನಸ್ಥಿತಿಯಲ್ಲಿ ಇದ್ದೆವು. ಆಮೇಲೇನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ಸೇತರ ರಾಜಕಾರಣವೂ ಒಡೆದುಕೊಂಡಿತು. ಜನಸಂಘ ದೂರ ಹೋಯಿತು. ಮುಂದೆ ಅದು ಭಾರತೀಯ ಜನತಾ ಪಕ್ಷವಾಯಿತು. ಈ ಬೆಳವಣಿಗೆಗಳ ನಂತರ ಮೂರನೇ ಶಕ್ತಿಯ ಪರಿಕಲ್ಪನೆ ಹುಟ್ಟಿಕೊಂಡಿತು. ವಿ.ಪಿ.ಸಿಂಗ್‌ ಅವರಿಗೆ ಈ ಮಹತ್ವಾಕಾಂಕ್ಷೆ ಇತ್ತು. ಹೀಗೇ ಚಂದ್ರಶೇಖರ್‌, ರಾಮಕೃಷ್ಣ ಹೆಗಡೆ, ದೇವೇಗೌಡ ಇವರೆಲ್ಲರೂ ಮೂರನೇ ಶಕ್ತಿಯೊಂದನ್ನು ಬೆಳೆಸುವ ಪ್ರಯತ್ನದಲ್ಲಿ ತೊಡಗಿದರು. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ಈ ಮೂರನೇ ಶಕ್ತಿಯನ್ನು ನಂಬುವುದಕ್ಕೆ ಸಾಧ್ಯ ಇಲ್ಲ ಅನ್ನಿಸುತ್ತಿದೆ. ಈ ಮೂರನೇ ಶಕ್ತಿ ಒಂದೋ ಕಾಂಗ್ರೆಸ್‌ ಜತೆಗೆ ಹೋಗುತ್ತೆ. ಇಲ್ಲವೇ ಬಿಜೆಪಿಯ ಜತೆಗೆ ಹೋಗುತ್ತೆ. ಯಾವತ್ತೂ ಅದು `ಮೂರನೇ’ ಶಕ್ತಿಯಾಗಿ ನಿಲ್ಲುವುದಿಲ್ಲ. ಅಂದರೆ ಮೂರನೇ ಶಕ್ತಿ ಎನ್ನುವುದು ಸಂಪೂರ್ಣ ಅವಕಾಶವಾದಿ ರಾಜಕಾರಣವಾಗಿಬಿಡುತ್ತದೆ.

ಮೂರನೇ ಶಕ್ತಿಯ ಈ ಎಲ್ಲಾ ಮಿತಿಗಳ ಮಧ್ಯೆಯೂ ನಮಗೊಂದು ಭರವಸೆ ಇತ್ತು. ಈ ಭರವಸೆಗೆ ಸಂಬಂಧ ಪಟ್ಟಂತೆ ನನ್ನ ಗೆಳೆಯ ವೆಂಕಟರಾಮ್‌ ಅವರ ಅಭಿಪ್ರಾಯ ವನ್ನು ಇಲ್ಲಿ ಉಲ್ಲೇಖಿಸಬಹುದು. `ಆರ್‌ಎಸ್‌ಎಸ್‌ನವರು ಒಂದು ದೊಡ್ಡ ಜನಾಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅವರು ತಮ್ಮ ಮುಸ್ಲಿಂ ವಿರೋಧಿ ನಿಲುವನ್ನು ಬದಲಾಯಿಸಿಕೊಳ್ಳಬಹುದು. ಒಂದು ದೊಡ್ಡ ಜನಾಂದೋಲನದಲ್ಲಿ ಯಾರೂ extremist ಆಗಿರಲು ಸಾಧ್ಯವಿಲ್ಲ’. ಈ ಅಭಿಪ್ರಾಯವನ್ನು ಸಮರ್ಥಿಸಲು ವೆಂಕಟರಾಮ್‌ ಜೈಲಿನಲ್ಲಿ ತಮ್ಮ ಜತೆ ಸಖ್ಯ ಬೆಳೆಸಿಕೊಂಡ ಸಿಂಧ್ಯ ಬದಲಾಗಿದ್ದನ್ನು ಉದಾಹರಣೆಯಾಗಿ ಹೇಳುತ್ತಿದ್ದರು.

ಇದೇ ರೀತಿ ಇನ್ನೊಂದು ಭರವಸೆಯೂ ಇತ್ತು. ಕೆಲವು ಪಕ್ಷಗಳು ಬಹಳಷ್ಟು ಓಟುಗಳನ್ನು ಗಳಿಸಿದ್ದರೂ ಅವಕ್ಕೆ ಶಾಸನ ಸಭೆಯಲ್ಲಿ ಒಂದು ಸ್ಥಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಜನಸಂಘವೂ ಇಂಥದ್ದೇ ಸ್ಥಿತಿಯಲ್ಲಿತ್ತು. ಇಂಥವರು ಶಾಸನ ಸಭೆಗಳಲ್ಲಿ ಸ್ಥಾನ ಪಡೆದರೆ ಅವರು ತಮ್ಮ `ಉಗ್ರ’ ನಿಲುವುಗಳನ್ನು ಸಡಿಲಗೊಳಿಸಿಕೊಳ್ಳಲೇ ಬೇಕಾಗುತ್ತದೆ ಎಂಬ ನಂಬಿಕೆಯೂ ಇತ್ತು. ಅನೇಕ ಬಾರಿ ಮೂರನೇ ಶಕ್ತಿ ಎಂದು ಕರೆಯಿಸಿಕೊಳ್ಳುವ ಗುಂಪಿನಲ್ಲಿದ್ದ ಪಕ್ಷಗಳೇ ಬಿಜೆಪಿಯ ಜತೆಗೆ ಹೋದಾಗ ಕೆಲವರು `ನಾವು ಜತೆಗೆ ಇರುವುದರಿಂದ ಬಿಜೆಪಿ ತನ್ನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತದೆ’ ಎಂದು ಪ್ರಾಮಾಣಿಕವಾಗಿಯೇ ನಂಬಿದ್ದರು.

***

ನನಗೆ ಇತ್ತೀಚೆಗೆ ಅನ್ನಿಸುತ್ತಿರುವುದೇ ಬೇರೇ. ನಾನು ಮೇಲೆ ಹೇಳಿದ ಭರವಸೆಗಳು ಮತ್ತು ನಂಬಿಕೆಗಳೆಲ್ಲಾ ನಿಜವಾದುವಲ್ಲ. ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ಇಲ್ಲದೆ ಕೇವಲ ತಾತ್ವಿಕವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ನಮ್ಮಂಥವರಿಗೆ ಇವೆಲ್ಲಾ ವಿಚಾರ ಮಾಡುವುದಕ್ಕೆ ಚೆನ್ನಾಗಿರುವ ವಿಷಯಗಳು ಮಾತ್ರ. ಏಕೆಂದರೆ ರಾಜಕಾರಣದಲ್ಲಿ ಪ್ರತ್ಯಕ್ಷವಾಗಿ ಇರುವವರು `ಲೆಕ್ಕಾಚಾರದ ರಾಜಕಾರಣ’ ಮಾಡುತ್ತಿರುತ್ತಾರೆ.

ಉದಾಹರಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲರಾಗಿರುವ ಒಂದು ಕ್ಷೇತ್ರವನ್ನು ತೆಗೆದುಕೊಂಡು ನೋಡೋಣ. ಇಲ್ಲಿ ಕೋಮುಗಲಭೆ ನಡೆದು ಒಬ್ಬ ಮುಸ್ಲಿಂ ಸತ್ತರೆ ಮುಸ್ಲಿಮರ ಓಟುಗಳೆಲ್ಲಾ ಧ್ರುವೀಕರಣಗೊಂಡು ಕಾಂಗ್ರೆಸ್‌ ಗೆಲ್ಲುತ್ತದೆ ಒಬ್ಬ ಹಿಂದು ಸತ್ತರೆ ಹಿಂದೂಗಳ ಓಟು ಧ್ರುವೀಕರಣಗೊಂಡು ಬಿಜೆಪಿ ಗೆಲ್ಲುತ್ತದೆ. ಲೆಕ್ಕಾಚಾರದ ರಾಜಕಾರಣದ ಸಿನಿಕತನಗಳು ಯಾವ ಮಟ್ಟದಲ್ಲ ಇರುತ್ತವೆ ಎಂದರೆ ನಾವು ಗೆಲ್ಲಬೇಕಾದರೆ ಕೋಮುಗಲಭೆ ನಡೆದು ಮುಸ್ಲಿಮನೊಬ್ಬ ಸಾಯಬೇಕು ಎಂದು ಸೆಕ್ಯುಲರಿಸ್ಟರೂ, ಹಿಂದೂ ಸತ್ತರೆ ನಮಗೆ ಅನುಕೂಲವೆಂದು ಹಿಂದುತ್ವವಾದಿಗಳೂ ಬಯಸುತ್ತಾರೆ. ಆದ್ದರಿಂದ ಈ ಸೆಕ್ಯುಲರ್‌ ವಾದ ಮತ್ತು ಹಿಂದುತ್ವವಾದಗಳೆರಡೂ ತಮ್ಮ ನಿಜವಾದ ಅರ್ಥಗಳನ್ನು ಕಳೆದುಕೊಂಡಿವೆ.

`ನಾನು ಮುಸ್ಲಿಮರ ಸ್ನೇಹಿತ ಆದರೆ ಪಾಕಿಸ್ಥಾನದ ವಿರೋಧಿ. ಆರ್‌ಎಸ್‌ಎಸ್‌ ಪಾಕಿಸ್ಥಾನದ ಸ್ನೇಹಿತ ಆದರೆ ಮುಸ್ಲಿಮರ ವಿರೋಧಿ’ ಎಂದು ಲೋಹಿಯಾ ಹೇಳುತ್ತಿದ್ದರು. ಈ ಹೇಳಿಕೆಯ ಧ್ವನಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪಾಕಿಸ್ಥಾನದ ಸೃಷ್ಟಿಯ ಹಿಂದಿದ್ದ ಸಿದ್ಧಾಂತ ಮತ್ತು ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳೆರಡೂ ಮತವನ್ನು ಆಧಾರವಾಗಿಟ್ಟುಕೊಂಡಿದ್ದವು. ಆದ್ದರಿಂದ ಇವರೆಡೂ ಒಂದೇ ಎಂದು ಲೋಹಿಯಾ ಭಾವಿಸಿದ್ದರು.

ಲೋಹಿಯಾ ಇದನ್ನು ಹೇಳುತ್ತಿದ್ದ ಕಾಲದ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಸೆಕ್ಯುಲರ್‌ ವಾದಿ ರಾಜಕಾರಣ ಮತ್ತು ಮತೀಯವಾದಿ ರಾಜಕಾರಣದ ಮಧ್ಯೆ ನೆಹರು ಅವರ ಕಾಲದಲ್ಲಿ ಇದ್ದ ವ್ಯತ್ಯಾಸ ಈಗ ಕಣ್ಮರೆಯಾಗಿದೆ.
ಕಾಂಗ್ರೆಸ್‌ ಕೂಡಾ ಹೇಗೆ ಹಿಂದೂಗಳನ್ನು ಗೆಲ್ಲಬಹುದು ಎಂಬುದನ್ನು ಯೋಚನೆ ಮಾಡುತ್ತಾ ಮಾಡುತ್ತಾ ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿತು. ನಾವು ಕನ್ಸರ್ವೇಟಿವ್‌ ಎಂದು ಭಾವಿಸುವ ಸರದಾರ್‌ ಪಟೇಲ್‌ ಅವರ ಕಾಲದಲ್ಲಿ ಕಾಂಗ್ರೆಸ್‌ಗೆ ಸಾಧ್ಯವಾಗದೇ ಇದದ್ದು ರಾಜೀವ್‌ಗಾಂಧಿ ಕಾಲದಲ್ಲಿ ಸಾಧ್ಯವಾಯಿತು. ಬಿಜೆಪಿ ಅಯೋಧ್ಯೆಯ ವಿಷಯವನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತದೆ ಎಂಬ ಭಯದಲ್ಲಿಯೇ ಕಾಂಗ್ರೆಸ್‌ ಇದನ್ನು ಮಾಡಿತು.

ಈ ಬಗೆಯ ಲೆಕ್ಕಾಚಾರದ ರಾಜಕಾರಣ ನಿಜವಾಗಿಯೂ ಬಡಪಾಯಿಗಳಾದ, ದುಃಖಿಗಳಾದ, ಶೋಷಿತರಾದ ಜನರನ್ನು ಓಟ್‌ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿಬಿಟ್ಟಿದೆ. ದಲಿತರು, ಮುಸ್ಲಿಮರೆಲ್ಲಾ ಓಟ್‌ ಬ್ಯಾಂಕ್‌ಗಳಾಗಿರುವುದೇ ಹೀಗೆ. ನಾವು ಮೂರನೇ ಶಕ್ತಿ ಎಂದು ಕರೆಯುವ ರಾಜಕೀಯ ಪಕ್ಷಗಳಿದ್ದಾವಲ್ಲ, ಅವೂ ಅಷ್ಟೇ. ಅವಕ್ಕೆ ಮುಸ್ಲಿಮರ ಓಟುಗಳು ಅಗತ್ಯ ಅನ್ನಿಸಿದಾಗೆಲ್ಲಾ ಕಾಂಗ್ರೆಸ್‌ ಜತೆ ಇರುತ್ತವೆ. ಮುಸ್ಲಿಮರ ಓಟುಗಳು ಸಿಗುವುದಿಲ್ಲ ಅನ್ನಿಸಿದಾಗ ಬಿಜೆಪಿ ಜತೆ ಸೇರಿಕೊಳ್ಳುತ್ತವೆ.

ಈಗ ಕರ್ನಾಟಕದ ಜೆಡಿಎಸ್‌ನಲ್ಲಿ ಸಂಭವಿಸಿರುವುದೂ ಇದೇ. `ನಮಗೇನೂ ಸಾಕಷ್ಟು ಮುಸ್ಲಿಮರ ಓಟುಗಳು ಸಿಗುವುದಿಲ್ಲ. ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರನ್ನು ಬಿಡದೇ ಹೊಂದಾಣಿಕೆ ಮಾಡಿಕೊಳ್ಳಬೇಕು’ ಎಂದು ಜೆಡಿಎಸ್‌ ಭಾವಿಸಿರಬಹುದು. ಯಾಕೆಂದರೆ ಸಿದ್ದರಾಮಯ್ಯ ಬಣದವರು ಅಲ್ಪಸಂಖ್ಯಾತರನ್ನು ಮತ್ತು ಬಹಳ ಹಿಂದುಳಿದವರನ್ನು ಸೆಳೆದಿದ್ದಾರೆ. ಆದ್ದರಿಂದ ಲಿಂಗಾಯತರು ಮತ್ತು ಒಕ್ಕಲಿಗರ ರಾಜಕಾರಣ ಮಾಡಬೇಕು ಎಂದು ಅವರಿಗೆ ಅನ್ನಿಸಿಬಿಟ್ಟಿದ್ದರೆ ಅವರು ಏನೋ ಒಂದು ಕಾರಣ ಹುಡುಕಿಕೊಂಡಾದರೂ ಬಿಜೆಪಿಯ ಜತೆ ಸಖ್ಯ ಸಾಧಿಸಿಕೊಳ್ಳುತ್ತಾರೆ ಅಷ್ಟೇ.

ಈಗ ಕರ್ನಾಟಕದಲ್ಲಿ ನಿಜಕ್ಕೂ ನಡೆಯುತ್ತಿರುವುದು ಜಾತಿ ರಾಜಕಾರಣ. ಇದನ್ನು ಯಾವ ನಾಚಿಕೆಯೂ ಇಲ್ಲದೆ ಮಾಡಲು ಜೆಡಿಎಸ್‌ ಹೊರಟಿರುವುದರಿಂದ ಅದು ಬಿಜೆಪಿಯ ಜೊತೆಗೆ ಹೊಂದಾಣಿಕೆಗೆ ಮುಂದಾಗಿದೆ. ಇದರಲ್ಲಿ ನನಗೆ ಬಿಜೆಪಿಯ ತಪ್ಪು ಕಾಣಿಸುತ್ತಿಲ್ಲ. ಯಾಕೆಂದರೆ ಅವರು ಅಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ. ತಾವು ಸರಕಾರ ರಚಿಸಬೇಕು ಎಂದು ಭಾವಿಸುವುದು ಬಹಳ ಸಹಜವಾದುದು. ಆದರೆ ಜೆಡಿಎಸ್‌ನವರು ಮಾತ್ರ ಒಂದು ದೊಡ್ಡ ನಾಟಕ ಆಡುತ್ತಿದ್ದಾರೆ. ಇದರಿಂದ ಕೊನೆಯಲ್ಲಿ ಯಾರೂ ಮೋಸ ಹೋಗಲಾರರು.

ಕಳೆದ ಚುನಾವಣೆಯ ವೇಳೆ ನಾನು ಎಸ್‌.ಎಂ.ಕೃಷ್ಣ ಮತ್ತು ಎಚ್‌.ಡಿ.ದೇವೇಗೌಡರಿಗೆ ಪತ್ರ ಬರೆದು ಹಿಂದೆ ಹೇಗೆ ಕಾಂಗ್ರೆಸ್ಸೇತರ ರಾಜಕಾರಣ ಅನಿವಾರ್ಯವಾಗಿತ್ತೋ ಈಗ ಬಿಜೆಪಿಯೇತರ ರಾಜಕಾರಣ ಅನಿವಾರ್ಯವಾಗಿದೆ. ಆದ್ದರಿಂದ ನೀವಿಬ್ಬರೂ ನನಗೆ ಬೆಂಬಲಿಸಿ. ನಾನು ಬಿಜೆಪಿಯ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ. ಆಗ ಬಹಳ ಜನ ನಾನು ಚುನಾವಣೆಗೆ ನಿಲ್ಲಲು ಆಸಕ್ತನಾಗಿದ್ದೇನೆ ಅಂದುಕೊಂಡಿದ್ದರು. ಆದರೆ ನಾನೊಂದು ರಾಜಕೀಯ ತಾತ್ವಿಕತೆಯನ್ನು ಮುಂದಿಡಲು ಪ್ರಯತ್ನಿಸುತ್ತಿದ್ದೆ. `ಈಗ ನೀವು ಜಗಳವಾಡುತ್ತಿದ್ದರೂ ಮುಂದೆ ನೀವಿಬ್ಬರೂ ಒಂದಾಗಿ ಸರಕಾರ ರಚಿಸಬೇಕಾಗಬಹುದು. ಅಂಥದ್ದೊಂದು ಹೊಂದಾಣಿಕೆಯನ್ನು ಒಂದು ಕ್ಷೇತ್ರದಲ್ಲಾದರೂ ಸಾಂಕೇತಿಕವಾಗಿ ತೋರಿಸಿ’ ಎಂದು ಗೌಡರು ಮತ್ತು ಕೃಷ್ಣರಿಗೆ ಹೇಳಿದ್ದೆ.

ಮುಂದೆ ನಾನು ಹೇಳಿದ್ದು ನಿಜವಾಯಿತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ಒಟ್ಟಾಗಿಯೇ ಸರಕಾರ ರಚಿಸಿದವು. ಇದಾದ ಮೇಲೆ ಪಂಚಾಯತ್‌ ಚುನಾವಣೆಯ ಸಂದರ್ಭದಲ್ಲಿಯಾದರೂ ಇಬ್ಬರೂ ಒಟ್ಟಿಗೆಯೇ ಚುನಾವಣೆ ಎದುರಿಸಬಹುದಿತ್ತು. ಆದರೆ ಆಗ ಮತ್ತೆ ಒಡೆದುಕೊಂಡರು. ಅಂದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನದ್ದು ನಿಜವಾದ ಹೊಂದಾಣಿಕೆಯೇ ಆಗಿರಲಿಲ್ಲ. ಈಗ ಜೆಡಿಎಸ್‌ ಮತ್ತು ಬಿಜೆಪಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಇದು ಕೂಡಾ ನಿಜವಾದ ಹೊಂದಾಣಿಕೆ ಆಗಲಾರದು. ಮುಸ್ಲಿಮರ ಓಟುಗಳು ತಮಗೆ ಬೇಕು ಎನ್ನುವ ಕಾರಣದಿಂದ ಜೆಡಿಎಸ್‌ ಎಲ್ಲೋ ಒಂದು ಕಡೆ ಬಿಜೆಪಿಯ ತತ್ವಗಳನ್ನು ಟೀಕಿಸುತ್ತಾ `ಮಡಿ’ಯಾಗಿಯೇ ಉಳಿಯಲು ಪ್ರಯತ್ನಿಸುತ್ತದೆ. ಹಾಗೇ ಭಾರತೀಯ ಜನತಾ ಪಕ್ಷವೂ ಅಯೋಧ್ಯೆಯಂಥ ವಿಷಯಗಳಲ್ಲಿ ತನ್ನ ನಿಲುವನ್ನು ಹೆಚ್ಚು ಗಟ್ಟಿಯಾಗಿ ಪ್ರತಿಪಾದಿಸುತ್ತಾ ಹೋಗುತ್ತದೆ.

ಇದರರ್ಥ ಜೆಡಿಎಸ್‌ ಕೂಡಾ ಬದಲಾಗುವುದಿಲ್ಲ. ಬಿಜೆಪಿ ಕೂಡಾ ಬದಲಾಗುವುದಿಲ್ಲ. ಹೊಂದಾಣಿಕೆ ಎಂಬುದು ಕೇವಲ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುವ ಸಾಂದರ್ಭಿಕ ಉಪಾಯ ಮಾತ್ರವಾಗಿ ಉಳಿಯುತ್ತದೆ. ವ್ಯವಸ್ಥೆಯಲ್ಲೇ ಒಂದು ನೈತಿಕ ಮೌಲ್ಯವನ್ನು ನೋಡುವ ನಮ್ಮಂಥವರಿಗೆ ಇದನ್ನು ಒಪ್ಪಿಕೊಳ್ಳುವುದು ಅಸಾಧ್ಯ.

ಹಾಗೆಂದು ನಾವು ನಿರಾಶರಾಗಬೇಕಿಲ್ಲ. ನಾವು ಮೂರನೇ ಶಕ್ತಿಯ ರಾಜಕಾರಣದ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ನಿಜವಾದ ಮೂರನೇ ಶಕ್ತಿ ಎಲ್ಲಿದೆ ಎಂಬುದನ್ನು ಗುರುತಿಸಲು ಮುಂದಾಗಬೇಕು. ಪರಿಸರ ಹೋರಾಟಗಳಲ್ಲಿ, ದೊಡ್ಡ ಯೋಜನೆಗಳನ್ನು ವಿರೋಧಿಸುವುದರಲ್ಲಿ, ನೈಸರ್ಗಿಕ ಕೃಷಿ ಆಂದೋಲನಗಳಲ್ಲಿ ಈ ಮೂರನೇ ಶಕ್ತಿ ಇದೆ. ಇಂಥ ಮನಸ್ಸುಗಳು ಕರ್ನಾಟಕಾದ್ಯಂತ, ದೇಶಾದ್ಯಂತ ಇವೆ. ಇವು ಎಲ್ಲ ನಿರಾಶೆಗಳ ಮಧ್ಯೆಯೂ ಭರವಸೆ ಹುಟ್ಟಿಸುತ್ತಿವೆ.

ನಿರೂಪಣೆ: ಎನ್‌.ಎ.ಎಂ. ಇಸ್ಮಾಯಿಲ್‌
29 ಜನವರಿ 2006ರ ರಂದು ಉದಯವಾಣಿ ದಿನ ಪತ್ರಿಕೆಯ
`ಸಾಪ್ತಾಹಿಕ ಸಂಪದ ‘ ಪುರವಣಿಯಲ್ಲಿ ಪ್ರಕಟವಾದ ಆಂಕಣ ಬರೆಹ

ಧರ್ಮಕ್ಕೆ ಸ್ಪಂದಿಸದ ರೋಪ್ ವೇ

ನಮ್ಮ ಆಧ್ಯಾತ್ಮಿಕ ಜಗತ್ತನ್ನು ರೂಪಿಸಿರುವ ಕೆಲವು ಮಹಾಗುರುಗಳಿದ್ದಾರೆ. ಇವರಿಗೆ ಯಾವಾಗಲೂ ಪ್ರಪಂಚ ಒಂದು ವಿಸ್ಮಯವಾಗಿ ಕಾಡುತ್ತಿತ್ತು. ಈ ವಿಸ್ಮಯದ ಹಿಂದೆ ಒಂದು ಕಾರಣಶಕ್ತಿ ಇರಬಹುದು ಎಂದು ಅದನ್ನು ಹುಡುಕುತಿದ್ದರು. ಕೆಲವರಿಗೆ ಈ ಕಾರಣ ಶಕ್ತಿ ಒಂದು ಮಹಾಪುರುಷನಾಗಿ ಇನ್ನು ಕೆಲವರಿಗೆ ಮಹಾ ಸ್ತ್ರೀಯಾಗಿ ಮತ್ತೆ ಕೆಲವರಿಗೆ ಅದೊಂದು ವ್ಯಕ್ತಿಗತ ರೂಪವಲ್ಲದ ಮಹಾಶಕ್ತಿಯಾಗಿ ಕಾಣುತ್ತಿತ್ತು.

ಅಂಥವವರಲ್ಲಿ ಏಸು ಕ್ರಿಸ್ತನೂ ಒಬ್ಬ. ಏಸು ಕ್ರಿಸ್ತನಿಗೆ ದೇವರು ಬಹಳ ವೈಯಕ್ತಿಕವಾದವನು-ದೇವರನ್ನು ತಂದೆಯಾಗಿ ಭಾವಿಸಿ ಅವನು ಸ್ಪಂದಿಸಿದ. ಈ ಸ್ಪಂದನೆ ಇದೆಯೆಲ್ಲಾ, ಅದು ಪ್ರಪಂಚದ ರಹಸ್ಯಕ್ಕೆ ಮಾಡುವ ಸ್ಪಂದನೆ. ಈ ರೀತಿ ರಹಸ್ಯಕ್ಕೆ ಸ್ಪಂದಿಸುವವರಿಗೆ ಒಂದು ಜವಾಬ್ದಾರಿ ಇರುತ್ತೆ. ಏಕೆಂದರೆ ಅವರು ಮನುಷ್ಯರನ್ನೂ ಪ್ರೀತಿಸುವುದರಿಂದ ಅವರು ರಾಜ್ಯ ವ್ಯವಸ್ಥೆ ಹೇಗಿರಬೇಕು ಅಂತಲೂ ಯೋಚನೆ ಮಾಡಲು ಆರಂಭಿಸುತ್ತಾರೆ. ಎಲ್ಲ ಧರ್ಮಗಳಲ್ಲೂ ಈ ಎರಡು ಅಂಶಗಳು ಇದ್ದೇ ಇರುತ್ತವೆ. ಅಂದರೆ ಒಂದು ಪ್ರಪಂಚ ರಹಸ್ಯಕ್ಕೆ ಸ್ಪಂದಿಸುವುದು. ಮತ್ತೊಂದು ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಚಿಂತಿಸುವುದು.

ಪ್ರಪಂಚ ರಹಸ್ಯಕ್ಕೆ ಸ್ಪಂದಿಸುವುದು ಕಾಲಾತೀತವಾದದ್ದು, ದೇಶಾತೀತವಾದದ್ದು. ಆದರೆ ವ್ಯವಸ್ಥೆ ಹೇಗಿರಬೇಕು ಎಂಬ ಆಲೋಚನೆ ಆಯಾ ಕಾಲದ ಚರಿತ್ರೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಏಸು ಕ್ರಿಸ್ತ ರಹಸ್ಯಕ್ಕೆ ಸ್ಪಂದಿಸುತ್ತಿದ್ದಾಗಲೇ ಯಾವ ರೀತಿ ವ್ಯವಸ್ಥೆಯನ್ನು ತಾನು ಉಳಿದವರಿಗೆ ಬೋಧಿಸಬೇಕು ಎಂಬ ಪ್ರಶ್ನೆಯೂ ಅವನ ಮುಂದಿತ್ತು. ಒಂದು ಸಾರಿ ಒಬ್ಬ ಒಂದು ನಾಣ್ಯ ತೆಗೆದುಕೊಂಡು ಏಸುಕ್ರಿಸ್ತನ ಬಳಿಗೆ ಬರುತ್ತಾನೆ. ಅದನ್ನು ತೋರಿಸಿ ಆತ `ನಾನು ಸೀಸರನಿಗೆ ತೆರಿಗೆ ಕಟ್ಟಬೇಕೆ?’ ಎಂಬ ಪ್ರಶ್ನೆಯನ್ನು ಕ್ರಿಸ್ತನ ಮುಂದಿಡುತ್ತಾನೆ. ಈ ಪ್ರಶ್ನೆ ಕೇಳಿದವನು ಯಹೂದ್ಯ. ಯಹೂದ್ಯರೆಲ್ಲಾ ತಮ್ಮದೇ ಆದ ಒಂದು ರಾಜ್ಯಕ್ಕೆ ಕಾಯುತ್ತಿದ್ದ ಕಾಲ ಅದು. ಆದ್ದರಿಂದ ಏಸು ಕ್ರಿಸ್ತ `ತೆರಿಗೆ ಕೊಡಬೇಕು’ ಎಂದು ಹೇಳಿದರೆ ಕ್ರಿಸ್ತ ಯಹೂದ್ಯರನ್ನು ಇನ್ನೊಬ್ಬರ ಆಳ್ವಿಕೆಯಿಂದ ಮುಕ್ತಗೊಳಿಸುವ ವಿಮೋಚಕನ ಅವತಾರವಾಗುವುದಿಲ್ಲ. ತೆರಿಗೆ ಕೊಡಬಾರದು ಎಂದು ಹೇಳಿದರೆ ಕ್ರಿಸ್ತ ರೋಮನ್‌ ಚಕ್ರಾದಿಪತ್ಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು.

ಈ ಸಂದಿಗ್ಧ ಪರಿಸ್ಥಿತಿಯನ್ನು ಏಸುಕ್ರಿಸ್ತ ಬಹಳ ಸುಲಭವಾಗಿ ನಿವಾರಿಸಿಕೊಂಡ. ಅವನ ಉತ್ತರ ಬಹಳ ಸರಳವಾಗಿತ್ತು- `ದೇವರಿಗೆ ಕೊಡಬೇಕಾದುದನ್ನು ದೇವರಿಗೆ ಕೊಡು, ಸೀಸರನಿಗೆ ಕೊಡಬೇಕಾದುದನ್ನು ಸೀಸರನಿಗೆ ಕೊಡು!’ ನಮ್ಮ ಮೊದಲನೆಯ ಸೆಕ್ಯುಲರ್‌ ಆಲೋಚನೆ ಇರುವುದು ಈ ಮಾತಿನಲ್ಲಿ-give unto Caesar what is due to caesar, give unto god what is due to god- ಆಗ ರೋಮನ್ನರು ಕ್ರಿಸ್ತನನ್ನು ಅಪರಾಧಿ ಎಂದು ಭಾವಿಸುವಂತಿಲ್ಲ. ಯಹೂದ್ಯರು ಕ್ರಿಸ್ತನನ್ನು ವಿಮೋಚಕ ಎಂದು ನಂಬಲಿಲ್ಲವಾದರೂ ಆತ ತಮ್ಮ ವಿಮೋಚಕನಲ್ಲವೇನೋ ಎಂದು ಅನುಮಾನಿಸಿದರು.

ಹೀಗೇ ರಹಸ್ಯಕ್ಕೆ ಸ್ಪಂದಿಸಿದ ಮತ್ತೊಬ್ಬ ವ್ಯಕ್ತಿ ಮಹಮ್ಮದ್‌ ಪೈಗಂಬರ್‌. ದೇವದೂತನ ಮಾತುಗಳನ್ನು ಮಹಮ್ಮದ್‌ ಪೈಗಂಬರ್‌ ಕೇಳಿಸಿಕೊಂಡದ್ದಕ್ಕೆ ನಾವೇನೂ ಆಶ್ಚರ್ಯಪಡಬೇಕಿಲ್ಲ. ಹತ್ತೊಂಬತ್ತನೇ ಶತಮಾನದ ಬ್ಲೇಕ್‌ ಕೂಡಾ ಅದನ್ನೇ ಹೇಳುತ್ತಿದ್ದ-`ನನಗೆ ಇನ್ನೆಲ್ಲಿಂದಲೋ ಒಂದು ವಾಣಿ ಬಂದಂತಾಗುತ್ತಿದೆ!’. ನಮ್ಮ ಬೇಂದ್ರೆಗೂ ಹಾಗನ್ನಿಸುತ್ತಿತ್ತು. ಇನ್ನೆಲ್ಲಿಂದಲೋ ಬಂದ ವಾಣಿಯನ್ನು ಬರೆದಿಡುತ್ತಿದ್ದೇನೆ ಎಂದು ಅವರೂ ಭಾವಿಸಿದ್ದರು. ಟ್ಯಾಗೋರ್‌ ಕೂಡಾ ಇದನ್ನೇ ಹೇಳಿದ್ದರು-`ನೀನು ಉಸಿರು ನಾನು ಕೊಳಲು’ ಅಂತ. ಹೀಗೇ ಮಹಮ್ಮದ್‌ ಪೈಗಂಬರ್‌ ಸ್ಪಂದನೆ ಕೂಡಾ ರಹಸ್ಯವನ್ನು ಗುರಿಯಾಗಿಟ್ಟುಕೊಂಡಿತ್ತು. ಇದರ ಜತೆಗೇ ವ್ಯವಸ್ಥೆ ಹೇಗಿರಬೇಕು ಎಂಬ ಆಲೋಚನೆಯೂ ಪೈಗಂಬರ್‌ ಮನಸ್ಸಿನಲ್ಲಿ ಮೊಳೆತಿತ್ತು.

ನಾವು ಧರ್ಮದ ಬಗ್ಗೆ ಆಲೋಚನೆ ಮಾಡುವಾಗ ಏಸುಕ್ರಿಸ್ತ, ಮಹಮ್ಮದ್‌ ಪೈಗಂಬರ್‌, ಕೃಷ್ಣ ಮತ್ತು ವೇದದ ಋಷಿಗಳೆಲ್ಲಾ ವ್ಯವಸ್ಥೆ ಹೇಗಿರಬೇಕು ಎಂದು ಹೇಳಿದ್ದಕ್ಕೂ ಅವರು ರಹಸ್ಯಕ್ಕೆ ಸ್ಪಂದಿಸಿದ ರೀತಿಗೂ ವ್ಯತ್ಯಾಸ ಇದೆ ಎಂಬುದನ್ನು ಗಮನಿಸುವುದು ನಮ್ಮ ಆಲೋಚನಾ ಕ್ರಮದಲ್ಲಿ ಒಂದು ರೀತಿಯ ಆರೋಗ್ಯವನ್ನು ತರುತ್ತದೆ. ರಹಸ್ಯಕ್ಕೆ ಸ್ಪಂದಿಸಿದವನೂ ಕೂಡಾ ಚರಿತ್ರೆಗೆ ಒಳಪಟ್ಟವನು. ಆಯಾ ಕಾಲದ ಮಿತಿಗಳಿಗೆ ಒಳಪಟ್ಟವನು. ಆದ್ದರಿಂದ ಇವರೆಲ್ಲಾ ವ್ಯವಸ್ಥೆ ಹೇಗಿರಬೇಕು ಎಂದು ಹೇಳಿದ್ದು ಚರಿತ್ರೆಗೆ ಬದ್ಧವಾದದ್ದು ಮತ್ತು ಕಾಲಕಾಲಕ್ಕೆ ಬದಲಾಗುವಂಥದ್ದು. ಆದರೆ ರಹಸ್ಯದ ಜತೆಗೆ ಅವರು ನಡೆಸಿದ ಅನುಸಂಧಾನ ಅದು ಪ್ರಾಯಶಃ ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಇದನ್ನು ಹಲವರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ಧರ್ಮದ ಒಳಗಿದ್ದೇ ತುಂಬಾ ವಿಚಾರಾತ್ಮಕವಾಗಿ ಆಲೋಚಿಸಿ, ಟೀಕಿಸಿ ಅದರ ಮೂಲಭೂತವಾದ ತಿರುಳನ್ನು ಗೌರವಿಸಬಹುದು ಎಂಬುದು ನನ್ನ ನಂಬಿಕೆ.

ಇದನ್ನು ತಿಳಿದುಕೊಂಡ ನಂತರ ನಾವು ಮತೀಯತೆ, ಜಾತೀಯತೆಗೆ ಸ್ಪಂದಿಸುವ ರೀತಿಯೇ ಬದಲಾಗುತ್ತೆ ಅನ್ನಿಸುತ್ತೆ. ಈಗ ಇರುವ ಸ್ಪಂದನೆ ಹೇಗಿದೆಯೆಂದರೆ ಕೆಲವರು ಮತದಲ್ಲಿ ಇರುವುದೆಲ್ಲಾ ಸತ್ಯ ಎನ್ನುತ್ತಾ ಮೂಲಭೂತವಾದಿಗಳಾಗುತ್ತಿದ್ದಾರೆ. ಇನ್ನು ಕೆಲವರು ಅದರಲ್ಲಿ ಯಾವ ಸತ್ಯವೂ ಇಲ್ಲ, ಅದರಿಂದ ಯಾವ ಪ್ರಯೋಜನವೂ ಇಲ್ಲ, ಅದನ್ನು ನಂಬುವವರೆಲ್ಲಾ ಮೂಢರು, ಮುಠ್ಠಾಳರು ಎಂದು ಸೆಕ್ಯುಲರಿಸ್ಟ್‌ಗಳಾಗುತ್ತಿದ್ದಾರೆ. ಹೀಗೆ ಸೆಕ್ಯುಲರಿಸ್ಟ್‌ಗಳಾದವರೂ ರಾಕ್ಷಸರಾಗಬಹುದು. ಹಿಟ್ಲರ್‌ ರಾಕ್ಷಸ, ಸ್ಟಾಲಿನ್‌ ಕೂಡಾ ರಾಕ್ಷಸನೇ. ಯಾವಾಗಲೂ ಈ ಬಗೆಯ ತೊಡಕು ಇರುವುದರ ಬಗ್ಗೆ ಎಚ್ಚರದಿಂದ ಇರಬೇಕು.

***

ಈಗ ಇದನ್ನೆಲ್ಲಾ ಹೇಳುತ್ತಿರುವುದಕ್ಕೆ ಒಂದು ಕಾರಣವಿದೆ. ಈಗ ಬಹಳ ಮುಖ್ಯವಾದ ಸಂದರ್ಭ ಬಂದಿದೆ-ಬಾಹುಬಲಿಗೆ ಮಹಾಮಸ್ತಕಾಭಿಷೇಕ. ಭಕ್ತರು, ಸರಕಾರ ಎಲ್ಲಾ ಸೇರಿ ಇದನ್ನು ಮಾಡುತ್ತಿದ್ದಾರೆ. ಇದರ ಜತೆಯಲ್ಲಿಯೇ ಸರಕಾರ ವಿಂಧ್ಯಗಿರಿಗೆ ಒಂದು ರೋಪ್‌ವೇ ಹಾಕಲು ಹೊರಟಿದೆ. ಇದರ ಬಗ್ಗೆ ವೈಜ್ಞಾನಿಕವಾಗಿ ಮಾತನಾಡಬೇಕು ಎಂದು ನನಗನ್ನಿಸುತ್ತಾ ಇಲ್ಲ. ಆ ಬಂಡೆಗೆ ಒಂದು ತೂತು ಕೊರೆದು ರೋಪ್‌ ವೇ ಹಾಕಿದರೆ ಆ ಬಂಡೆ ಸೀಳಿ ಹೋಗಬಹುದು ಅಂತ ಒಬ್ಬ ವಿಜ್ಞಾನಿ ವಾದ ಮುಂದಿಡಬಹುದು. ಮತ್ಯಾರೋ ಒಬ್ಬ ವಿಜ್ಞಾನಿ ಬಂದು ಅದು ಹಾಗಾಗುವುದಿಲ್ಲ, ಭದ್ರವಾಗಿದೆ ಎಂದು ವಾದಿಸಬಹುದು. ನಾನು ಮಾತ್ರ ಈ ರೋಪ್‌ವೇ ಹಾಕಬಾರದು ಎಂದೇ ಹೇಳುತ್ತೇನೆ.

ಯಾಕೆಂದರೆ ಇಂಥ ಸ್ಥಳಗಳಲ್ಲಿ ರಹಸ್ಯದ ಜತೆಗೆ ಅನುಸಂಧಾನ ಮಾಡಿದ ಅನೇಕ ನೆನಪುಗಳಿವೆ. ಇದು ಕಾಶಿಯಲ್ಲಿರಬಹುದು, ಮೆಕ್ಕಾದಲ್ಲಿರಬಹುದು, ಅಥವಾ ಪ್ರಪಂಚದ ಯಾವುದೇ ಭಾಗದಲ್ಲಿರಬಹುದು. ನಮ್ಮ ಶ್ರವಣಬೆಳಗೊಳದಲ್ಲೂ ಇಂಥ ಅನುಸಂಧಾನದ ನೆನಪುಗಳಿವೆ. ಅಂಥ ಜಾಗಕ್ಕೆ ಹೋಗುವವರು ಸ್ವಲ್ಪ ಕಷ್ಟಪಟ್ಟೇ ಹೋಗಬೇಕು.

ಎಲ್ಲ ಪುಣ್ಯಸ್ಥಳಗಳೂ ಕೂಡ ಸುಲಭವಾಗಿ ತಲುಪುವಂಥ ಜಾಗಗಳಲ್ಲ. ಆದ್ದರಿಂದಲೇ ಅವುಗಳನ್ನು ತಲುಪುವ ಪ್ರಕ್ರಿಯೆಯಲ್ಲೇ ಮನುಷ್ಯ ರಹಸ್ಯದ ಜತೆ ಅನುಸಂಧಾನ ನಡೆಸುತ್ತಾನೆ. ಅದರಿಂದಲೇ ನನಗೆ ಅಯೋಧ್ಯೆಯಲ್ಲಿ ಒಂದು ದೇವಸ್ಥಾನ ಕಟ್ಟೋದು ಒಂದು ಪವಿತ್ರವಾದ ಕಾರ್ಯ ಅಂತ ಅನ್ನಿಸಲೇ ಇಲ್ಲ. ಏಕೆಂದರೆ ಅಯೋಧ್ಯೆ ಅನ್ನೋದು ಇವತ್ತು ವಿಮಾನದಲ್ಲಿ, ರೈಲಿನಲ್ಲಿ ಹೀಗೆ ಎಲ್ಲದರಲ್ಲೂ ಹೋಗಿ ತಲುಪಬಹುದಾದ ಜಾಗ, ಅಲ್ಲಿ ಮಾಡುವುದು ಬರೇ ರಾಜಕೀಯ. ಆದರೆ ಶ್ರವಣಬೆಳಗೊಳದ ಗೊಮ್ಮಟನ ಕ್ಷೇತ್ರ ಈ ರೀತಿಯದ್ದಲ್ಲ. ಆದರೆ ಈಗ ನಾವು ಅದನ್ನು ಟೂರಿಸಂ ಗಾಗಿ ಸುಲಭ ಗಮ್ಯವನ್ನಾಗಿ ಮಾಡುತ್ತಿದ್ದೇವೆ. ಈ ಪವಿತ್ರ ಸ್ಥಳಗಳನ್ನು ಟೂರಿಸ್ಟ್‌ ಸೆಂಟರ್‌ಗಳನ್ನಾಗಿ ಮಾಡುವುದಿದೆಯಲ್ಲಾ-ಅದು ಪರ್ಯಾಯವೇ ಆಗಲಿ, ಬಾಹುಬಲಿಯೇ ಆಗಲಿ-ಅದರ ಹಿಂದೆ ಒಂದು ಅಧಾರ್ಮಿಕ ಮನಸ್ಸು ಕೆಲಸ ಮಾಡುತ್ತಿರುತ್ತದೆ.

ನಾನು ಸೆಕ್ಯುಲರ್‌ವಾದಿಯಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಯಾಕೆಂದರೆ ನನ್ನ ಮಟ್ಟಿಗೆ ಎಲ್ಲಾ ಧರ್ಮಗಳಲ್ಲೂ ಜೀವನ ಮತ್ತು ಪ್ರಪಂಚದ ರಹಸ್ಯಕ್ಕೆ ಸ್ಪಂದಿಸಿದ ಒಂದು ಚೇತನ ಇದೆ. ಈ ರಹಸ್ಯಕ್ಕೆ ಸ್ಪಂದಿಸುವ ಕ್ರಿಯೆಯೇ ಮುಖ್ಯ ಎಂದುಕೊಂಡವರು ಇಸ್ಲಾಮನ್ನೂ ಹಿಂದೂ ಧರ್ಮವನ್ನೂ ಒಟ್ಟು ಸೇರಿಸಿ ಸೂಫಿಗಳಾಗಿಬಿಡುತ್ತಾರೆ. ಕ್ರೈಸ್ತ ಧರ್ಮವನ್ನೂ ಹಿಂದೂ ಧರ್ಮವನ್ನೂ ಒಂದುಗೂಡಿಸಿ ಗಾಂಧಿಯಂಥವರಾಗುತ್ತಾರೆ. ಅಂದರೆ ಧಾರ್ಮಿಕ ಲೋಕದ ಎಲ್ಲಾ ಮುಖ್ಯ ಹೊಸ ಚಿಂತಕರೂ ಕೂಡಾ ಮತ್ತೆ ರಹಸ್ಯಕ್ಕೆ ಸ್ಪಂದಿಸಿದ್ದಾರೆ. ಅಥವಾ ಎಲ್ಲಾ ಧರ್ಮಗಳನ್ನೂ ನಿರಾಕರಿಸುತ್ತಲೇ ಜಿಡ್ಡು ಕೃಷ್ಣಮೂರ್ತಿಯಂಥವರು ರಹಸ್ಯಕ್ಕೆ ಸ್ಪಂದಿಸುತ್ತಾರೆ.

ಆದರೆ ನಮ್ಮಲ್ಲಿ ಅನೇಕರು ಧರ್ಮ ರಹಸ್ಯಡೆದೆಗೆ ಸ್ಪಂದಿಸಿದ್ದನ್ನು ಮರೆತು ಬಿಡುತ್ತಾರೆ. ಅದು ಕಟ್ಟಿದ ವ್ಯವಸ್ಥೆಯನ್ನೇ ಬಹಳ ಮುಖ್ಯ ಎಂದುಕೊಳ್ಳುತ್ತಾರೆ. ಲೋಹಿಯಾ ಈ ಬಗ್ಗೆ ಒಂದು ಕಡೆ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಒಂದು ಧರ್ಮಕ್ಕೆ ನಾಲ್ಕು ಉಪಯೋಗಗಳಿದ್ದಾವಂತೆ. ಮೊದಲನೆಯದ್ದು ದೇಶ ಕಷ್ಟದಲ್ಲಿರುವಾಗ ಅದನ್ನು ರಕ್ಷಿಸುವ ಉಪಾಯ. ಸ್ಟಾಲಿನ್‌ ಕೂಡಾ ಹಿಟ್ಲರ್‌ ದಾಳಿ ಮಾಡಿದಾಗ ರಷ್ಯನ್‌ ಚರ್ಚ್‌ ಬಳಸಿಕೊಂಡು ಜನರನ್ನು ಒಟ್ಟು ಮಾಡಿ ವೈರಿಯನ್ನು ವಿರೋಧಿಸಿದ. ಎರಡನೆಯದ್ದು ಆಸ್ತಿಯನ್ನು ಉಳಿಸಿಕೊಳ್ಳುವ ಉಪಾಯ. ಬಡವರು ತಮ್ಮ ಮೇಲೆ ದಂಗೆ ಏಳದಂತೆ ನೋಡಿಕೊಳ್ಳಲು ಅವರ ಮೇಲೆ ಆಸ್ತಿವಂತರು ಎರಚುವ ಮಂಕುಬೂದಿಯಾಗಿ ಇದು ಕೆಲಸ ಮಾಡುತ್ತೆ. ಮೂರನೆಯದ್ದು ನಮ್ಮ ಮಕ್ಕಳಿಗೆ ಕೆಲವು ಒಳ್ಳೆಯ ಮೌಲ್ಯಗಳನ್ನು, ನೈತಿಕ ಮೌಲ್ಯಗಳನ್ನು ದಾಟಿಸುವ ವಿಧಾನ. ಇದು ಎಲ್ಲಾ ಧರ್ಮಗಳಲ್ಲಿಯೂ ಇದೆ. ನಾಲ್ಕನೆಯದ್ದು ಯಾವುದು ಅಂದರೆ ಧರ್ಮ ಒಂದು ಧ್ಯಾನದ ಶಿಸ್ತು. ಇದೂ ಅಷ್ಟೆ. ಎಲ್ಲಾ ಧರ್ಮಗಳಲ್ಲಿಯೂ ಇದೆ.

ಧರ್ಮದ ಉಪಯೋಗಗಳಲ್ಲಿ ಮೊದಲನೆಯ ಎರಡನ್ನು ಬಹಳ ವಿಮರ್ಶಾತ್ಮವಾಗಿ ನೋಡಬೇಕು. ಆದರೆ ಇವುಗಳನ್ನು ಟೀಕಿಸುವ ಬರದಲ್ಲಿ ಕೊನೆಯ ಎರಡನ್ನು ನಿರ್ಲಕ್ಷಿಸಬಾರದು. ಜೈನರಿಗೆ ಆ ಮನೋಧರ್ಮ ಇದ್ದರೆ ರೋಪ್‌ವೇ ಹಾಕುವುದನ್ನು ವಿರೋಧಿಸಬೇಕು.

ನಾನು ವಾರ್ತಾ ಚಿತ್ರವೊಂದರಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸುತ್ತಿರುವ ದಿಗಂಬರರನ್ನು ನೋಡಿದೆ. ಅವರನ್ನು ನೋಡಿ ನನಗೆ ಅದ್ಭುತ ಅನ್ನಿಸಿತು. ಅವರಾರಿಗೂ ತಾವು ಬೆತ್ತಲೆ ಇದ್ದೇವೆ ಎನ್ನುವ ಪ್ರಜ್ಞೆಯೇ ಇಲ್ಲ. ಪರಿಣಾಮವಾಗಿ ನಮಗೆ ಕೂಡಾ ಆ ನಗ್ನತೆ ಸಹಜವಾದ ಒಂದು ಸ್ಥಿತಿಯಂತೆ ಕಾಣಿಸುತ್ತದೆ. ಈ ಮೂಲಕ ಅವರು ಜೀವದ ಬಗೆಗಿನ ಯಾವುದೋ ಒಂದು ರಹಸ್ಯವನ್ನು ಅವರು ನಮಗೆ ಕಮ್ಯುನಿಕೇಟ್‌ ಮಾಡುತ್ತಿದ್ದಾರೆ. ಇದಕ್ಕೆ ತೆರೆದ ಮನಸ್ಸುಗಳಿದ್ದರೆ ವ್ಯಾಪಾರೀಕರಣವನ್ನು ಅದು ಒಪ್ಪುವುದಿಲ್ಲ. ಇವತ್ತಿನ ಪ್ರಪಂಚ ವ್ಯಾಪಾರೀಕರಣದ ಪ್ರಕ್ರಿಯೆಯಲ್ಲಿ ಧರ್ಮದ ಮೊದಲನೇ ಎರಡು ಕೆಲಸಗಳನ್ನು ಅತಿಯಾಗಿ ಮಾಡಿ ಧರ್ಮವನ್ನು ಹಿಂಸೆಯ ಸಾಧನವನ್ನಾಗಿ ಮಾಡುತ್ತಿದೆ.

ನಮಗೆ ಬೇಕಾಗಿರುವುದು ಧರ್ಮ ತೋರಿಸಿಕೊಟ್ಟಿರುವ ನೈತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಹರಿಸುವ ದಾರಿ ಮತ್ತು ಅದು ಬೋಧಿಸುವ ಧ್ಯಾನದ ಶಿಸ್ತನ್ನು ಅರ್ಥಮಾಡಿಕೊಳ್ಳುವ ಮನಸ್ಸು.