Monthly Archives: November 2006

ಇಷರ್ವುಡ್‌, ಆರ್ವೆಲ್‌, ಕಾಡ್ವೆಲ್‌, ಥಾಮ್ಸನ್‌ ಮತ್ತು ಅಪ್ವರ್ಡ್‌

ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ, ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್ವುಡ್‌ ಮಾತ್ರ. ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ,ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಈ ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ ಇಷರ್ವುಡ್‌ ನಂಬಿದ್ದ.

Christopher-Isherwood

-2-
(ಕಳೆದ ಸಂಚಿಕೆಯಿಂದ)
ಅಪ್ವರ್ಡ್‌ ಈ ಕಲ್ಪನಾ ಲೋಕದಿಂದ ಹೊರ ಬಂದು ತನ್ನ ಮಧ್ಯಮವರ್ಗದ ಸೋಗಲಾಡಿತನ ವನ್ನು ಕಳೆದುಕೊಂಡು, ಜೊತೆಗೇ ಕಲ್ಪನಾಶೀಲವಾದ ಅಡಾಲಸೆಂಟಿನ ಲಂಪಟತನವನ್ನೂ ಕಳೆದುಕೊಂಡು ಕಾಲದ ನಿಜಗಳಿಗೆ ಹತ್ತಿರವಾಗಲು ಬಯಸುತ್ತಾನೆ. ಕೂಲಿಕಾರ್ಮಿಕರಿಗೆ ಹತ್ತಿರವಾಗಲೆಂದು, ತನ್ನ ಅರಿ ಯುವ ಕ್ರಮವನ್ನೇ ಬದಲಾಯಿಸಿಕೊಳ್ಳಬೇಕೆಂದು ಕಮ್ಯುನಿಸ್ಟ್‌ ಪಕ್ಷ ಸೇರಿ ಕಾರ್ಮಿಕರಿಗಾಗಿ ತನ್ನ ಕಾಯಕ ಪ್ರಾರಂಭಿಸುತ್ತಾನೆ. ಇದೇ ಕಾಲದಲ್ಲಿ ಆರ್ವೆಲ್ಲನೂ ತನ್ನ ಮಧ್ಯಮ ವರ್ಗೀಯ ಗುಣ ಗಳನ್ನು ಕಳೆದುಕೊಳ್ಳಲೆಂದು ಬರ್ಮದಲ್ಲಿ ಪೊಲೀಸ್‌ ಆಫೀಸರಾಗಿದ್ದವನು ಹಿಂದೆ ಬಂದು ಲಂಡನ್‌ ಮತ್ತು ಪ್ಯಾರೀಸ್‌ಗಳಲ್ಲಿ ಭಿಕ್ಷುಕನಾಗಿ ಅಲೆಯುತ್ತಾನೆ. ಆಡೆನ್‌, ಸ್ಪೆಂಡರರು ಸ್ಪೈನ್‌ ನಲ್ಲಿ ಸರ್ವಾಕಾರದ ವಿರುದ್ಧ ಹೋರಾಡಲು ಆರ್ವೆಲ್‌ನಂತೆಯೇ ರಿಪಬ್ಲಿಕನ್‌ ಬಣ ಸೇರಿ ಹೋರಾಡಲು ಹೋಗು ತ್ತಾರೆ. `ಕಾವ್ಯದಲ್ಲಿ ಏಳು ಬಗೆಗಳ ಸಂದಿಗ್ಧತೆಗಳು’ ಎನ್ನುವ (ಈ ಪುಸ್ತಕವೇ ಎಂಟನೇ ಬಗೆಯ ಸಂದಿಗ್ಧತೆ ಎನ್ನಿಸುವಂತಿರುವ), ನನಗೆ ಗೆಳೆಯ ರಾಜೀವ ತಾರಾನಾಥರ ಅರವತ್ತರ ದಶಕದ ಪ್ರಾರಂಭದ ಬರವಣಿಗೆಯನ್ನು ನೆನಪು ಮಾಡಿಸುತ್ತಿದ್ದ ವಿಲಿಯಮ್‌ ಎಂಪ್ಸನ್‌ನಂತಹ (ಮುಂದೆ ನಮ್ಮ ಡಿ.ಎಸ್‌. ಶಂಕರರ ಗೈಡ್‌ ಆದವ) ನವ್ಯಾತಿನವ್ಯ ಲೇಖಕನೇ ಮುವ್ವತ್ತರ ದಶಕದ ಆತ್ಮ ಪ್ರತ್ಯಯದ ಈ ಕ್ರೈಸಿಸ್‌ನಲ್ಲಿ ಜನಸಂದಣಿಯ ಪ್ರದೇಶಗಳಲ್ಲಿ ನೋಟ್‌ ಬುಕ್‌ ಹಿಡಿದು ನಿಂತು ಬಡಜನರ ದೈನಿಕ ಚಟುವಟಿಕೆಗಳನ್ನು ಕಂಡಿದ್ದನ್ನು ಕಂಡಂತೆ ದಾಖಲಿಸಲು ತೊಡಗಿದ್ದ. ತನ್ನ ಅರಿಯುವ ಬಗೆಯನ್ನೇ ಬದಲಿಸಿಕೊಳ್ಳಲೆಂದು, ಮಧ್ಯಮ ವರ್ಗದ ಲೇಖಕರಲ್ಲಿ ಬದುಕನ್ನು ಗ್ರಹಿಸುವ ತಮ್ಮ ಇಂಗಿತ ಜ್ಞಾನದ ಬಗ್ಗೆಯೇ ಅನುಮಾನ ಹುಟ್ಟಿದ್ದ ಕಾಲ ಅದು.

ಯಾಕೆ, ಯಾರಿಗೆ, ಹೇಗೆ ಬರೆಯಬೇಕು?

ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನು ಆಯುವಂತೆ ತಮ್ಮ ನಾಗರೀಕತೆಯನ್ನು ಕಟ್ಟುತ್ತ ಹೋಗಿರುವ, ನಮಗೂ ಹಾಗೆ ಕಟ್ಟುವಂತೆ ಪ್ರೇರೇಪಿಸುತ್ತ ಇರುವ ಐರೋಪ್ಯ ಇತಿಹಾಸದ ಬಗ್ಗೆಯೇ ನಾವು ಅನುಮಾನಿಸಬೇಕಾಗಿದೆ. ಆದರೆ ನೋಡಿ: ನಾವೂ ಚೀನೀಯರೂ ಜಪಾನೀಯರೂ ಅವರ ಹಾಗೇ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ.

ಬೆಂಗಳೂರು ಬೆಂಗಳೂರೇ ಆದರೆ ಬೆಚ್ಚುವುದೇಕೆ?

ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. `ಯುಎಸ್‌ಎ ಟುಡೆ’ ಕರೆದು ಅರ್ಧ ಗಂಟೆ ಕಾಲ ಮಾತಾಡಿಸಿದರು. `ನ್ಯೂಯಾರ್ಕ್‌ ಟೈಂಸ್‌’ ನವರು ಇಲ್ಲಿಯೇ ಇರುವ ಪತ್ರಕರ್ತರೊಬ್ಬರಿಂದ ಬೇಕಾದ ಮಾಹಿತಿ ಪಡೆದರು. ಇನ್ನು ಉಳಿದ ನಮ್ಮವರೇ ಬಿಡಿ: ಎನ್‌ಡಿಟಿವಿ, ಟೈಮ್ಸ್‌ ನಾನಿದ್ದಲ್ಲೇ ಬಂದು, ತಮ್ಮಲ್ಲಿಗೂ ಕರೆಸಿಕೊಂಡು ಮಾತಾಡಿಸಿದರು. ಹಾಸ್ಯದಲ್ಲಿ ನಾನೀಗ ಮಾತಾಡುತ್ತಿದ್ದರೂ ನಿಮಗೆ ಕೊಚ್ಚಿಕೊಂಡಂತೆ ಕಂಡೀತೆಂದು ಉಳಿದ ವಿವರಗಳನ್ನು ಬಿಟ್ಟಿದ್ದೇನೆ.