Select Page
ಉತ್ತರ ಕೊರಿಯಾ ಜತೆಗೊಂದು ರಾಗಿ ಸಂಬಂಧ

ಉತ್ತರ ಕೊರಿಯಾ ಜತೆಗೊಂದು ರಾಗಿ ಸಂಬಂಧ

ಕೊರಿಯಾ ಒಂದೇ ಹೋರಾಟದಲ್ಲಿ ಪಾಲ್ಗೊಂಡಾಗ

ಉತ್ತರ ಕೊರಿಯಾದಲ್ಲಿ ನಾನು ಓಡಾಡಿದ್ದು ಎಂಬತ್ತರ ದಶಕದ ಕೊನೆಯಲ್ಲಿ, ನಾನು ಕೇರಳದಲ್ಲಿದ್ದಾಗ. ಅದರ ರಾಜಧಾನಿ ಪ್ಯಾಂಗ್‌ ಯಾಂಗ್‌ ಗೆ ನೇರವಾಗಿ ಹೋಗುವಂತೆ ಇರಲಿಲ್ಲ. ಚೀನಾದ ಬೀಜಿಂಗ್‌ನಲ್ಲಿ ವಿಮಾನದಲ್ಲಿ ಹೋಗಿ ಇಳಿದು, ಅಲ್ಲಿನ ನಮ್ಮ ರಾಯಭಾರ ಕಛೇರಿಯ ಸಹಾಯ ಪಡೆದು ರೈಲು ಹತ್ತಿ ಪ್ರಯಾಣಮಾಡಿ ಪ್ಯಾಂಗ್‌ ಯಾಂಗ್‌ ತಲುಪಬೇಕು. ಹೆಚ್ಚು ಕಡಿಮೆ ಪ್ರತಿವಾರ ಹಿಂದೂ ಪತ್ರಿಕೆಯಲ್ಲಿ ಮಹಾನಾಯಕ ಕಿಮ್‌ ಚಿತ್ರದಡಿ ಇಡೀ ಪುಟದಲ್ಲಿ ಸಣ್ಣ ಅಕ್ಷರದಲ್ಲಿ ಪ್ರಕಟವಾಗುತ್ತಿದ್ದ ಉತ್ತರ ಕೊರಿಯಾ ಸರ್ಕಾರದ ಜಾಹಿರಾತನ್ನು (ತನ್ನ ಅಸ್ತಿತ್ವವನ್ನೇ ದಾಖಲಿಸಿ ಮುಂದೊಡ್ಡಿಕೊಳ್ಳುವ ವೈಚಿತ್ರ್ಯವನ್ನು)  ನೋಡಿ ನೋಡಿಯೇ ಬೇಸರವಾಗಿದ್ದ ನನಗೆ ಅನಿರೀಕ್ಷಿತ ಅನುಭವ ಕಾದಿತ್ತು. ಆ ಬಗ್ಗೆ ಈ ಲೇಖನ.

ನನ್ನನ್ನು ಒಂದು ಪಂಚತಾರಾ ಹೊಟೇಲಿನಲ್ಲಿ ಇಳಿಸಿದರು. ಹೆಸರಿಗೆ ಇದು ಪಂಚತಾರಾ ಹೊಟೇಲು. ಆದರೆ ಅಲ್ಲಿ ಸಿಗುತ್ತಿದ್ದ ಊಟ ಉಪಚಾರ ಗಳು ಅಷ್ಟಕ್ಕಷ್ಟೇ. ಸಾಮಾನ್ಯವಾಗಿ ಎಲ್ಲ ಕಮ್ಯುನಿಸ್ಟ್‌ ದೇಶಗಳೂ ಅದ್ಭುತ ವಾದ ರಸ್ತೆಗಳನ್ನೂ ಗಗನ ಚುಂಬಿ ಕಟ್ಟಡಗಳನ್ನೂ ಪಂಚತಾರಾ ಹೊಟೇಲುಗಳನ್ನೂ ಯಾಕೆ ಜನರಿಗೆ ಕಣ್ಣು ಕುಕ್ಕುವಂತೆ ಒಡ್ಡುತ್ತಾರೋ? 

ಸ್ಟಾಲಿನ್‌ ಕಾಲದಲ್ಲಿ ಮಾಸ್ಕೋದಲ್ಲಿ ಎಲ್ಲೆಂದರಲ್ಲಿ ಕಾಣುವಂಥ ಬಹು ದೊಡ್ಡ ಅರಮನೆಗಳು ಇದ್ದವು. ಈ ಅರಮನೆಗಳಲ್ಲಿ ನಿತ್ಯೋಪಯೋಗಿ ಸಾಮಾನುಗಳನ್ನು ಕೊಳ್ಳಬಹುದಿತ್ತು. ಇಂತಹ ಒಂದು ಅರಮನೆಯಲ್ಲಿ ಮಿನುಗಿ ಮಿಂಚುವ ಶಾಂಡಲಿಯರ್‌ ಒಂದರ ಕೆಳಗೆ ನಿತ್ಯದ ಬ್ರೆಡ್‌ಗಾಗಿ ಕ್ಯೂ ನಿಂತವರನ್ನು ನಾನು ಕಂಡಿದ್ದೆ.  ರೋಮ್‌ನಂಥ  ಚಕ್ರಾಧಿಪತ್ಯವಾಗ ಬೇಕೆಂಬ ಕನಸನ್ನು ಎಲ್ಲ ಯೂರೋಪಿಯನ್ನರಂತೆ ರಷ್ಯಾವೂ ಕಾಣಲು ಹೋಗಿ ನಿತ್ಯ ಜೀವನದಲ್ಲಿ ಸಮಾಧಾನಿಯೂ ಸುಖಿಯೂ ಆದ ತನ್ನ ಉದ್ದೇಶಿತ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟಲಾರದೇ ಹೋಯಿತು.ಕಿಮ್ IIನ ಪ್ರತಿಮೆ

ಹೀಗೆಯೇ ತಾನೊಂದು ಮಹಾನ್‌ ರಾಷ್ಟ್ರವಾಗಬೇಕೆಂಬ ಹಂಬಲ ಉತ್ತರ ಕೊರಿಯವನ್ನೂ ರೋಗಗ್ರಸ್ತ  ಮಾಡಿತ್ತು ಎಂಬುದು ಪ್ಯಾಂಗ್‌ಯಾಂಗ್‌ ನಲ್ಲಿ ಕಣ್ಣಿಗೆ ಹೊಡೆಯುವಂತೆ ತೋರುತ್ತಿತ್ತು. ಇದನ್ನು ಜಗತ್ತು ಗುರುತಿಸು ತ್ತಿಲ್ಲವೆಂಬ ಸಂಕಟದಲ್ಲಿ ಉತ್ತರ ಕೊರಿಯ ಸರಕಾರ ತನ್ನನ್ನು ತಾನೇ ಜಾಹೀ ರಾತುಗೊಳಿಸಿಕೊಳ್ಳುತ್ತಾ ಇದ್ದದ್ದು. ವಿಪರ್ಯಾಸವೆಂದರೆ ಉತ್ತರ ಕೊರಿಯಕ್ಕೆ ಅದರ ಅಗತ್ಯ ಈಗ ಇಲ್ಲೇ ಇಲ್ಲ. ಅಣು ಬಾಂಬನ್ನು ತಾನೂ ತಯಾರಿಸಬಲ್ಲೆ ಎಂಬುದನ್ನು ಲೋಕಕ್ಕೆ ಗೊತ್ತಾಗುವಂತೆ ಮಾಡಿದ ಕ್ಷಣ ದಿಂದಲೇ ಈಗ ಉತ್ತರ ಕೊರಿಯ ಸತತವಾಗಿ ಸಿಎನ್‌ಎನ್‌ನಲ್ಲಿ, ಬಿಬಿಸಿ ಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಅಂತೂ ತನ್ನ ಒಂದು ಉದ್ದೇಶದಲ್ಲಿ ಉತ್ತರ ಕೊರಿಯ ಗೆದ್ದಿದೆ. ಅದಕ್ಕೊಂದು ಅಸ್ತಿತ್ವ ಸಿಕ್ಕಿದೆ. ಹೀಗೆ ಒಂದು ಮಹಾನ್‌ ರಾಷ್ಟ್ರದ ಅಸ್ತಿತ್ವಕ್ಕಾಗಿ ಅಣ್ವಸ್ತ್ರ ಬಲದ ಮೇಲೆ ನಿಲ್ಲುವ ದೇಶಗಳೆಲ್ಲೆವೂ ತನ್ನ ಜನರನ್ನು ಮಾತ್ರ ಹಸಿದ ಬಡಪಾಯಿಗಳಾಗಿ ಉಳಿಸಿಕೊಂಡಿರುತ್ತವೆ.
***
ಈ ಪಂಚತಾರಾ ಹೊಟೇಲಿನಲ್ಲಿ ಕೊರಿಯದ ರುಚಿಯೇ ಇಲ್ಲದ ಸಪ್ಪೆಯೂಟವನ್ನು ಮಾಡುತ್ತ ನನ್ನ ಇಬ್ಬರು ದುಭಾಷಿ ಸಂಗಡಿಗರ ಜತೆ ಉತ್ತರ ಕೊರಿಯದ ಮಹತ್ವವನ್ನು ನನಗೆ ಮನದಟ್ಟು  ಮಾಡುವ  ಎಲ್ಲವನ್ನೂ ನೋಡಿದೆ. ಎಲ್ಲಿ ಕಣ್ಣೆತ್ತಿ ನೋಡಿದರೂ ಎತ್ತರವಿದ್ದ ಜಾಗದಲ್ಲೆಲ್ಲಾ ಕಾಣುತ್ತಿ ದ್ದುದು ಕಿಮ್‌- ಸಾಂಗ್‌ನ ಮುಖವೇ (ಅವನ ಈ ಹೊಸ ಹೆಸರಿನ ಅರ್ಥ, ಕಿಮ್‌ ಎನ್ನುವ ಸೂರ್ಯ). ಇವನು ಹುಟ್ಟಿದ ಹಳ್ಳಿಯನ್ನೂ ಅವನ ಸಾಮಾನ್ಯ ಬಡಮನೆಯನ್ನೂ ನೋಡಿದ್ದಾಯಿತು. ಎರಡನೇ ಮಹಾ ಯುದ್ಧದ ನಂತರ ಪ್ರಪಂಚವನ್ನು ಅಮೆರಿಕ ಮತ್ತು ಸೋವಿಯತ್‌ ದೇಶ ಗಳು ಹಂಚಿಕೊಳ್ಳುವ ಕುಟಿಲೋಪಾಯದಲ್ಲಿ ಈ ಕಿಮ್‌ ಸೋವಿಯತ್‌ರ ಪರವಾಗಿದ್ದವನು. ಕೆಂಪು ಸೈನ್ಯದಲ್ಲಿದ್ದು ಜಪಾನಿನ ವಿರುದ್ಧ ಹೋರಾಡಿದ ಈ ಶೂರ ಉತ್ತರ ಕೊರಿಯದ ನಾಯಕನಾದ. 1945ರಲ್ಲಿ ಇವನ ವಯಸ್ಸು  ಮೂವತ್ತಮೂರು.  ಇವನು ನಿಜವಾದ ಜನನಾಯಕ ಎಂಬುದು ಹಲವರ ಅಭಿಪ್ರಾಯ. ಯಾಕೆಂದರೆ ಪ್ರಾರಂಭದಿಂದಲೂ ಈತ ಕೊರಿಯವನ್ನು ಆಕ್ರಮಿಸಿದ್ದ ಜಪಾನೀಯರ ವಿರುದ್ಧ ಗೆರಿಲ್ಲಾ ಹೋರಾಟದಲ್ಲಿ ಪಾಲ್ಗೊಂಡ ವನು. ಇವನಿಗೆ ಸಮಾನನಾದ ನಾಯಕ ದಕ್ಷಿಣ ಕೊರಿಯಾದಲ್ಲಿ ಇರಲಿಲ್ಲ. ಈತನ  ಚಿತ್ರವಿರುವ ಬ್ಯಾಡ್ಜ್‌ ಒಂದನ್ನು ತಮ್ಮ ಅಂಗಿಯ ಮೇಲೆ ಧರಿಸದ ಯಾರೂ ಉತ್ತರ ಕೊರಿಯದಲ್ಲಿ ನನಗೆ ಕಾಣಲಿಲ್ಲ.

ಆಳುವವನು ಜನರ ಪ್ರೀತಿಯನ್ನೂ ಭಯವನ್ನೂ ಪಡೆದಿರಬೇಕು ಎಂಬ ಮಾತಿದೆ. ಪ್ರೀತಿಯಿಲ್ಲದಿದ್ದರೆ ಭಯವಾದರೂ ಇರಬೇಕು. ಯಾಕೆಂದರೆ ಭಯದಲ್ಲೇ ಬದುಕಬೇಕಾಗಿ ಬಂದವನು ತಾನು ಭಯ ಪಡುವುದನ್ನು ಪ್ರೀತಿಸುತ್ತೇನೆಂದು ಆತ್ಮವಂಚನೆ ಮಾಡಿಕೊಳ್ಳುವುದು ಸಾಧ್ಯವಿದೆ. ರಾಷ್ಟ್ರಗಳನ್ನು ಕಟ್ಟುವ ದುಷ್ಟರೆಲ್ಲರಿಗೂ ಇದು ಗೊತ್ತು. ಅಶೋಕ ಮಾತ್ರ ಪ್ರಾಯಶಃ ಇದಕ್ಕೆ ವಿನಾಯಿತಿ ಇರಬಹುದು.

ನನ್ನ ಸಹಾಯಕ ಮಿತ್ರರ ಪ್ರಕಾರ ತಮ್ಮ ಮಹಾ ನಾಯಕ ಮಾರ್ಕ್ಸ್‌, ಲೆನಿನ್‌, ಸ್ಟಾಲಿನ್‌ ಮತ್ತು ಮಾವೋ ಈ ನಾಲ್ವರಿಗಿಂತಲೂ ತನ್ನ ವೈಚಾರಿಕತೆ ಯಲ್ಲಿ ಮುಂದಿದ್ದಾನೆ. ಮಾವೋ ಹೊಸದನ್ನು ಸೇರಿಸಿದ ಎಂದು ಹಲವರು ನಂಬುತ್ತಿದ್ದರೆ ಕಿಮ್‌ ಇನ್ನೂ ಒಂದು ಹೊಸದನ್ನು ಸೇರಿಸಿದ ಎಂದು ಇವರು ನಂಬಿದ್ದರು. ಹೊಸದನ್ನು ಸೇರಿಸಿದ್ದು ಮಾತ್ರವಲ್ಲ ಅದನ್ನು ಮುಂದುವರಿಸಿ ಕೊಂಡು ಹೋಗುವ ಮಗನನ್ನೂ ಹುಟ್ಟಿಸಿಕೊಂಡಿದ್ದ. ಈಗ ಆಡಳಿತದಲ್ಲಿ ಇರುವ ಕಿಮ್‌ನನ್ನು ಅವರು ಡಿಯರ್‌ ಲೀಡರ್‌ ಎಂದು ಆಗ ಕರೆಯುತ್ತಿದ್ದುದು. ಈಗಲೂ ಅವನು ಡಿಯರ್‌ ಲೀಡರ್‌!

ಪ್ರಾರಂಭದಲ್ಲಿ ದಕ್ಷಿಣಕ್ಕಿಂತ ಉತ್ತರ ಕೊರಿಯ ಆರ್ಥಿಕವಾಗಿ ಮುಂದಿತ್ತು. ಉತ್ತರ ಕೊರಿಯ ಸೋವಿಯತ್‌ ಯೂನಿಯನ್‌ನಿಂದಲೂ ಚೀನಾದಿಂದಲೂ ಸಹಾಯವನ್ನು ಪಡೆದಿದ್ದರೂ ಅವರ ಬಾಲಬಡುಕ ರಾಷ್ಟ್ರವಂತೂ ಖಂಡಿತಾ ಅಲ್ಲವೆಂಬುದು ಕಿಮ್‌ನ ಅನುಯಾಯಿಗಳ ಪ್ರಚಾರ. ಇದನ್ನು ವಿವರಿಸಲು ಅವರೊಂದು ಶಬ್ದವನ್ನು ಉಪಯೋಗಿಸು ತ್ತಿದ್ದರು. ಆ ಶಬ್ದ `ಜೂಷೆ' (Jusche) ಅಂದರೆ ಸ್ವಾವಲಂಬನೆ. ಆದರೆ ಈ ಸ್ವದೇಶಿಯಲ್ಲಿ ಸಾಕಷ್ಟು ರಷ್ಯಾ ಮತ್ತು ಚೀನಾ ಸಹಕಾರವಿತ್ತು. ರಷ್ಯಾಕ್ಕೂ ಚೀನಾಕ್ಕೂ ನಡುವೆ ಜಗಳ ಪ್ರಾರಂಭವಾದಾಗ ಕಿಮ್‌ ಕೊಂಚ ಚೀನಾದ ಪರ ವಾಲಿದ್ದರಿಂದ ಅವರ ಆರ್ಥಿಕ ವ್ಯವಸ್ಥೆಗೆ ತೊಂದರೆಯಾಯಿತು ಎನ್ನುತ್ತಾರೆ.  
ನಾನು ಹಲವು ಒಳ್ಳೆಯ ಶಾಲೆಗಳನ್ನೂ ಕಾರ್ಖಾನೆಗಳನ್ನೂ ಕವಾಯತುಗಳನ್ನೂ  ನೋಡಿದೆ. ಇವೆಲ್ಲವನ್ನೂ ವಿವರಿಸುತ್ತಾ ಹೋಗುವುದರಲ್ಲಿ ಯಾವ ಸತ್ಯದ ದರ್ಶನವೂ ಆಗುವುದಿಲ್ಲ. ಸಂದರ್ಶಕರಿಗೆ  ತೋರಿಸಲು ಇರುವ ಸಂಸ್ಥೆ ಗಳು ಇವು. ಈ ಬಗ್ಗೆ ನಾನು ಬರೆಯದೆ ನನ್ನ  ಎರಡು ವಿಶೇಷ  ಅನುಭವಗಳನ್ನು ಇಲ್ಲಿ ದಾಖಲಿಸುತ್ತೇನೆ.

***

ಉತ್ತರ ಕೊರಿಯದಲ್ಲಿ ನಡೆದ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಲು ದಕ್ಷಿಣ ಕೊರಿಯದಿಂದ ರಿಮ್‌ ಎಂಬ ಕನ್ಯೆ ಬಂದಿದ್ದಳು. ದಕ್ಷಿಣ ಕೊರಿಯದ ಅನುಮತಿಯನ್ನು ಪಡೆಯದೆ ಧಿಕ್ಕರಿಸಿ ಈಕೆ ಉತ್ತರ ಕೊರಿಯಕ್ಕೆ ಬಂದಿದ್ದಳು. ನಾನು ಹೋದ ಮಾರನೆಯ ದಿನ ಅವಳು ಇಡೀ ಉತ್ತರ ಕೊರಿಯದ ಹೀರೋಯಿನ್‌ ಆಗಿದ್ದಳು. ಅವಳ ಸುತ್ತ ಒಂದು ಆಂದೋಲನವೇ ಪ್ರಾರಂಭವಾಯಿತು. ಎರಡು ಕೊರಿಯಗಳೂ ಒಟ್ಟಾಗಬೇಕೆಂಬುದು ಈ ಆಂದೋಲನ. ಇದರಲ್ಲಿ ಹಲವು ಪ್ಯಾಲೆಸ್ಟೇನಿಯರೂ ಭಾಗವಹಿಸಿದ್ದರು. ಅಮೆರಿಕದ ಗಾಂಧಿವಾಧಿಯೊಬ್ಬನೂ ಇದರಲ್ಲಿದ್ದ. ಎರಡು ದೇಶ ಒಟ್ಟಾಗುವುದು ಅವಶ್ಯವೆಂದು ತಿಳಿದವರಲ್ಲಿ ನಾನೂ ಒಬ್ಬನಾದ್ದರಿಂದ ಈ ಆಂದೋಲನದಲ್ಲಿ ಭಾಗಿಯಾದೆ. ಪರದೇಶಿಯನಾಗಿ ಭಾಗಿಯಾದ ನಾನು ಒಂದು ಸುದ್ದಿಯೂ ಆದೆ. ಎಲ್ಲರ ಜತೆ ನಾನೂ ಮಾರ್ಚ್‌ ಮಾಡಿದೆ. ಭಾಷಣ ಮಾಡಿದೆ. ಇದರಿಂದ ನನ್ನ ಸಹಾಯಕರು ಬಹಳ ಸಂತೋಷ ಪಟ್ಟರು.

ನಾನು ಪ್ರತಿನಿತ್ಯ ಅವರನ್ನು ಒಂದು ವಿಷಯ ಕೇಳುತ್ತಿದ್ದೆ- ಎಲ್ಲ ಕೊರಿಯನ್ನರೂ ಊಟ ಮಾಡುವ ಹೊಟೇಲ್‌ ಒಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಎಂದು.  ಕೊನೆಗೆ ಅವರು ನನಗಾಗಿ ಆ ಧೈರ್ಯವನ್ನು  ಮಾಡಿದರು. ಅವರು ನನ್ನನ್ನು ವಿಐಪಿಯೆಂದು ಮುಂದಾಗಿ ಹೋಗಿ ಊಟಕ್ಕೆ ಕೂರಿಸಲು ಪ್ರಯತ್ನಿಸಿದಾಗ ನಾನು ಒಪ್ಪಲಿಲ್ಲ. ಕ್ಯೂನಲ್ಲಿ ನಿಂತು ಕಾದು ಆ ಹೊಟೇಲ್‌ನಲ್ಲಿ ಸಿಕ್ಕಿದ ಕೊರಿಯದ ನಿಜವಾದ ಊಟವನ್ನು ಮಾಡಿ ಬಂದೆ. ಅಲ್ಲಿ ನಾನು ಕಂಡ ಪ್ರತಿಯೊಬ್ಬನೂ ಕಿಮ್‌ ಬ್ಯಾಡ್ಜ್‌ ಧರಿಸಿದ್ದ. ನನ್ನನ್ನು ಕೊರಿಯ ಒಕ್ಕೂಟದ ಆಂದೋ ಲನದಲ್ಲಿ ಭಾಗವಹಿಸಿದವನೆಂದು ಬಹಳ ಜನ ಗುರುತಿಸಿ ಕೈಕುಲುಕಿದರು.

ಇದನ್ನು ಬರೆಯುತ್ತಿದ್ದಂತೆ  ನಮ್ಮ ನಾಡಿನ ಮಹಾ ಋಷಿಗಳಲ್ಲಿ ಒಬ್ಬರಾದ ಅರವಿಂದರು ಎರಡು ಕೊರಿಯಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಇನ್ನೊಂದರ್ಥದಲ್ಲಿ  ಅಮೆರಿಕಕ್ಕೂ ಸೋವಿಯತ್‌ ಯೂನಿಯನ್‌ಗೂ ನಡುವೆ ಯುದ್ಧ ನಡೆಯುತ್ತಿದ್ದಾಗ ತಳೆದ ನಿಲುವು ನನಗೆ ನೆನಪಾಯಿತು. ಅವರು ಈ ಯುದ್ಧದಲ್ಲಿ ನಾವು ಅಮೆರಿಕದ ಪರ ಇರಬೇಕು ಎಂಬ ಹೇಳಿಕೆಯನ್ನು ತಮ್ಮ ಏಕಾಂತ ತೊರೆದು ಹೇಳಿದ್ದರು. ಅವರ ವಿದ್ವತ್ತಿಗಾಗಿ ಅರವಿಂದರನ್ನು ಮೆಚ್ಚುವ ನನಗೆ ಈಗಲೂ ಇದೊಂದು ಬಿಡಿಸಲಾರದ ಒಗಟೇ. ಅರವಿಂದರೇಕೆ, ನಮ್ಮ ಕಾರಂತರು, ನಮ್ಮ ಅಡಿಗರು , ಕ್ವೆಸ್ಟ್‌ ಪತ್ರಿಕೆ ಸಂಪಾದಕರಾದ ನನ್ನ ಮೆಚ್ಚಿನ ಶಾ ಎಲ್ಲರೂ ಅಮೇರಿಕಾದ ಬೆಂಬಲಿಗರೇ. ಇನ್ನು ಇವರ ವಿರೋಧಿಗಳೋ ಭೀಷಮ್‌ ಸಹಾನಿಯಂತೆ ಸೋವಿಯತ್‌ ಯೂನಿಯನ್ನಿನ ಕ್ರೌರ್ಯವನ್ನು ಕಂಡೂ ಕಣ್ಣುಮುಚ್ಚಿ ಕೂತವರು.

ಪ್ರತಿಯೊಬ್ಬ ಕೊರಿಯನ್‌ನ ಹೃದಯದಲ್ಲೂ ಇದ್ದ ತಾವು ಒಟ್ಟಾಗ ಬೇಕೆಂಬ ಆಸೆ ಕೈಗೂಡದಂತೆ ಜಗತ್ತಿನ ಎರಡು ಮಹಾನ್‌ ರಾಷ್ಟ್ರಗಳು ಸಂಚು ಮಾಡಿದವು. ಇವತ್ತು ಜಗತ್ತಿನ ಎಲ್ಲ ಸಮಸ್ಯೆಗಳ ಮೂಲವಿರುವುದೂ ಈ ಎರಡು ರಾಷ್ಟ್ರಗಳ ಪಾಪ ಕೃತ್ಯಗಳಲ್ಲಿ.

***

ಕೊರಿಯಾಕ್ಕೆ ತನ್ನ ಸಂಸ್ಕೃತಿಯಲ್ಲಿ ಪ್ರೀತಿಯಿದೆಯೆ? ತನ್ನತನದ ಹುಡು ಕಾಟವಿದೆಯೆ? ದಕ್ಷಿಣ ಕೊರಿಯಾದ ಲೇಖಕನೊಬ್ಬ ನನಗೆ ಹೇಳಿದ್ದ: `ನಾವು ಕೊರಿಯನ್‌ ಭಾಷೆಯಲ್ಲಿ ಬರೆದದ್ದನ್ನು ಓದುವವರು ಕಡಿಮೆ. ಎಲ್ಲ ದರಿದ್ರ ಅಮೆರಿಕನ್‌ ಪುಸ್ತಕಗಳೂ ಕೊರಿಯನ್‌ಗೆ ಕೂಡಲೇ ಭಾಷಾಂತರವಾಗಿ ಬಿಡುತ್ತವೆ, ಸಾಲ್‌ ಬೆಲ್ಲೋ ಸಹಿತವಾಗಿ. ಭಾಷಾಂತರ ನಮ್ಮನ್ನು ಕಾಡುವ ಶಾಪ.'

ವಾಷಿಂಗ್ಟನ್‌ನಲ್ಲಿ ಒಮ್ಮೆ ನಾನು ಒಬ್ಬ ಉಡುಪಿ ಕಡೆಯ ಸಾಹಸಿ ವ್ಯಾಪಾರಿ ಯೊಬ್ಬನನ್ನು ಭೇಟಿಯಾದೆ. ಕಾರಂತರನ್ನು ಬಲ್ಲ ಈತ ಇನ್ನೂ ತನ್ನ ಒಳ ಮನಸ್ಸಿ ನಲ್ಲಿ ಜೀವಂತನಾಗಿದ್ದ. ದಕ್ಷಿಣ ಕೊರಿಯಕ್ಕೆ ಈತ ವ್ಯಾಪಾರಕ್ಕೆಂದು ಯಾವಾ ಗಲೂ ಹೋಗುತ್ತಿರುತ್ತಾನೆ. ದಕ್ಷಿಣ ಕೊರಿಯಾದ ಐತಿಹಾಸಿಕ ಮಹತ್ವದ ಪ್ರದೇಶಗಳನ್ನು ನೋಡಲು ಒಮ್ಮೆ ಈತ ಇಚ್ಛಿಸಿದನಂತೆ. ಇವನ ಗೆಳೆಯರಾದ ದಕ್ಷಿಣ ಕೊರಿಯದ ವ್ಯಾಪಾರಿಗಳು ಆಗ ಇವನಿಗೆ ಹೇಳಿದ ಮಾತು ಇದು: ನಮಗೆ ನಮ್ಮ ಭೂತಕಾಲ ಬೇಕಿಲ್ಲ. ಅದನ್ನು ಸಂಪೂರ್ಣ ನಾಶಮಾಡಿ ನಾವು ಹೊಸಬರಾಗಲು ಹೊರಟಿದ್ದೇವೆ. ಈ ಐತಿಹಾಸಿಕ ಸ್ಥಳಗಳನ್ನು ನಾವು ಈವರೆಗೆ ನೋಡಲು ಹೋದದ್ದೇ ಇಲ್ಲ.

ಉತ್ತರ ಕೊರಿಯದವರು ಜಪಾನಿನ ವಸಾಹತುಶಾಹಿಯಿಂದ ಸ್ವತಂತ್ರ ರಾದ ತಾವೇ ನಿಜವಾದ ಕೊರಿಯಾ ಎನ್ನುತ್ತಾರೆ. ಆದ್ದರಿಂದ ನನ್ನ ಸಂಗಡಿಗರಿಗೆ ನಾನು ಹೇಳಿದೆ- ನಿಮ್ಮ ಬಹು ಹಿಂದಿನ ಬೌದ್ಧ ದೇವಾಲಯವೊಂದನ್ನು ನೋಡಲು ನನಗೆ ಆಸೆ. ತಮ್ಮ ಕೊರಿಯಾದಲ್ಲಿ ಎಲ್ಲ ಮತ ಧರ್ಮಗಳನ್ನೂ ನಾವು ನಿಷೇಧಿಸಿದ್ದೇವೆ ಎಂದು ಅವರು ಉತ್ತರ ಕೊಟ್ಟರು. ಆದರೂ ಬೇಕೆಂದ ವರಿಗೆ ಅವರ ಪೂಜಾ ಸ್ಥಳಗಳನ್ನು ಉಳಿಸಿಕೊಳ್ಳಲು ಅವಕಾಶವಿದೆ ಎಂದರು. ಆದ್ದರಿಂದ ಹೀಗೆ ಸ್ವ ಇಚ್ಛೆಯಿಂದ ಉಳಿದ ಒಂದು ಪುರಾತನ ಬೌದ್ಧ ದೇವಾ ಲಯಕ್ಕೆ ನನ್ನನ್ನು ಕರೆದುಕೊಂಡು ಹೋದರು.

ಅಲ್ಲೊಬ್ಬ ಬಡಪಾಯಿಯಂತೆ ಕಾಣುತ್ತಿದ್ದ ಬೌದ್ಧ ಭಿಕ್ಷು ಇದ್ದ. ಅವನು ತೊಟ್ಟ ಅಂಗಿಯ ಮೇಲೆ ದೇಶದ ಪರಮಪುರುಷನಾದ ಕಿಮ್‌ನ ಬ್ಯಾಡ್ಜ್‌ ಇರ ಲಿಲ್ಲ. ಅಷ್ಟು ಅವನು ಸ್ವತಂತ್ರನಾಗಿದ್ದ ಎನ್ನಬಹುದೇನೊ? ತನ್ನ ದೇವಾಲಯ ದಲ್ಲಿದ್ದ ಹಳೆಯ ಗ್ರಂಥಗಳನ್ನು ಆತ ನನಗೆ ತೋರಿಸಿದ. ಸುತ್ತಮುತ್ತಲಿನ ಗ್ರಾಮ ಗಳಿಂದ ಹಿಂದಿನ ಕಾಲದಲ್ಲಿ ಸಿಗುತ್ತಿದ್ದ ಸಂಭಾವನೆ ಅವನಿಗಿರಲಿಲ್ಲ. ಯಾರೋ ಒಬ್ಬಿಬ್ಬರು ಮುದುಕರು ಪ್ರಾರ್ಥನೆಗಾಗಿ ಬಂದು ಹೋಗುತ್ತಿದ್ದರು. ನಾನು ಕೇಳಿದ ಪ್ರಶ್ನೆಗಳಿಗೆ ಆತ ನನ್ನ ಸಂಗಡಿಗರಿಗೆ ಇಷ್ಟವಾಗುವ ಉತ್ತರಗಳನ್ನೇ ಕೊಟ್ಟ. ಅದಿರಿಲಿ! ನಾನು ಕೇಳುವ ಪ್ರಶ್ನೆಗಳಿಗಿಂತ ಮುಂಚೆಯೇ ಅವನು ಕೆಲವು ನಿರೀಕ್ಷಿತ ಉತ್ತರಗಳನ್ನು ಕೊಟ್ಟಿದ್ದ.

ನಾನು ನನ್ನ ಸಂಗಡಿಗರನ್ನು ಕೇಳಿದೆ: ನಿಮಗೆ ಬೌದ್ಧ ಧರ್ಮ ಮುಖ್ಯ ವಲ್ಲವೇ? ಅದಕ್ಕೆ ನನ್ನ ಸಂಗಡಿಗರು ಕೊಟ್ಟ ಉತ್ತರ ದಕ್ಷಿಣ ಕೊರಿಯಾದ ವ್ಯಾಪಾರಿಗಳು ಕೊಟ್ಟ ಉತ್ತರಕ್ಕಿಂತ ಭಿನ್ನವಾಗಿರಲಿಲ್ಲ- ನಾವೊಂದು ಹೊಸ ಕಾಲದಲ್ಲಿ ಇದ್ದೇವೆ. ಈ ಕಾಲವನ್ನು ಸೃಷ್ಟಿಸುತ್ತಿರುವಾತ ನಮ್ಮ ಮಹಾನಾಯಕ ಕಿಮ್‌. ಬುದ್ಧ ಇರಲಿ, ಮಾರ್ಕ್ಸ್‌, ಲೆನಿನ್‌ಗಿಂತಲೂ ಆತ ಮುಂದೆ ಹೋಗಿ ತನ್ನ  ವಿಚಾರಗಳನ್ನು ಮಂಡಿಸಿದ್ದಾನೆ. ಇದು ಹೇಗೂ ಕಣ್ಣು ಹಾಯಿಸಿದಲ್ಲೆಲ್ಲ ಆಕಾಶ ಕಾಣಿಸದಂತೆ ನಾನು ಕಂಡ ಮುಖವಲ್ಲವೆ? ಆದ್ದರಿಂದ ಅಷ್ಟಕ್ಕೇ ನಾನು ಅವರನ್ನು ಬಿಡಲಿಲ್ಲ. `ಯಾವ ಕಾರಣಕ್ಕಾದರೂ ನಿಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಬುದ್ಧ ನಿಮಗೆ ಮುಖ್ಯ ಎನಿಸುವುದಿಲ್ಲವೇ?'

ನನ್ನ ಸಂಗಡಿಗರಲ್ಲೊಬ್ಬ ಯೋಚಿಸಿ, ನಡೆಯುತ್ತಿದ್ದ ನನ್ನನ್ನು ನಿಲ್ಲಿಸಿ,  ಅತ್ಯಂತ ಆಶ್ಚರ್ಯಕರವಾದ ಒಂದು ಉತ್ತರ ಕೊಟ್ಟ. `ಮುದ್ರಣ ತಂತ್ರಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಬುದ್ಧ ನಮಗೆ ಮುಖ್ಯ. ಯಾಕೆಂದರೆ ಅವನ ಅನುಯಾಯಿಗಳು ಮೊದಲು ಪುಸ್ತಕಗಳನ್ನು ಅಚ್ಚು ಮಾಡಿದವರು.'

ಈ ಉತ್ತರದಿಂದ ಕಸಿವಿಸಿಗೊಂಡ ನಾನು ಇನ್ನೊಂದು ಮಾತು ಸೇರಿಸದೆ ಇರಲಾರೆ. ನನಗೆ ಬಡಪಾಯಿಯಂತೆ ಕರುಣಾಜನಕನಾಗಿ ಕಂಡ ಬೌದ್ಧ ಭಿಕ್ಷು ಮತ್ತು ಅವನ ಹಿರಿಯರು ಹಿಂದೆ ಹೇಗಿದ್ದಿರಬಹುದೆಂದು ಊಹಿಸಿದೆ. ಪ್ರಾಯಶಃ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಅವರ ಗೇಣಿದಾರರಾಗಿದ್ದಿರ ಬೇಕು. ಅವರು ಗೇಣಿ ಕೊಡದಿದ್ದರೆ ಅವರನ್ನು ಶಿಕ್ಷಿಸುವ ಅಧಿಕಾರ ಈ ಭಿಕ್ಷುಗಳಿಗೆ ಇದ್ದಿರಬೇಕು. ಒಂದು ಮಠದ ಜಗತ್ತಿನಿಂದ ಬಂದ ನನಗೆ ಹೇಗೆ ಮಠದಲ್ಲಿ ನಿತ್ಯದ ಪೂಜೆಯ ಜತೆಗೇ ನಿತ್ಯದ ಜಪ್ತಿಗಳೂ ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಆದರೂ ನನಗೆ ಬುದ್ಧ , ಕ್ರಿಸ್ತ , ಪೈಗಂಬರ,  ಶಂಕರ, ಆನಂದತೀರ್ಥ, ರಾಮಾನುಜ, ರಮಣ, ಪರಮಹಂಸ-ಎಲ್ಲರೂ ಬೇಕು. ಅವರ ವಿರೋಧಿಗಳಾದ ಮೆಟೀರಿಯಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿ ಬೇಕು; ಅವರ ಕಾಲದವರೂ ಆಗಿ ಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿಬೇಕು.

***

ನಾನು ಯಾವತ್ತೂ ಮರೆಯದ ಇನ್ನೊಂದು ಘಟನೆ. ಉತ್ತರ ಕೊರಿಯಾದಲ್ಲಿ ಅಪೂರ್ವ ಸೌಗಂಧಿಕ ಎಂಬ ಅರ್ಥ ಬರುವ ಒಂದು ಎತ್ತರದ ಪರ್ವತ ವಿದೆ. ಇದನ್ನು Mount  Myohyangsan ಎನ್ನುತ್ತಾರೆ. ನನ್ನ ಐವತ್ತೇಳನೆಯ ವಯಸ್ಸಿನಲ್ಲಿ ನನಗೆ ಡಯಾಬಿಟಿಸ್‌ ತೊಂದರೆ ಇರುವುದನ್ನೂ ಮರೆತು ಈ ಸಂಗಡಿಗರ ಜತೆ ಬಹುಶ್ರಮ ಪಟ್ಟು ಹತ್ತಬೇಕಾದ ಆ ಬೆಟ್ಟವನ್ನು ಹತ್ತಿದೆ. ನನ್ನ ಜತೆ ನೂರಾರು ಜನ ಹತ್ತುತ್ತಿದ್ದರು. ಅವರೆಲ್ಲರೂ ದೃಢಕಾಯರು. ಇವರಲ್ಲಿ ಕೊರಿಯಾದ ಸೈನಿಕರೂ ಇದ್ದರು. ಹತ್ತಿ ಹತ್ತಿ ಸುಸ್ತಾದಾಗ ಸ್ವಲ್ಪ ಕೂತು ವಿಶ್ರಮಿಸಿ ಮತ್ತೆ ಏರಿ ಏರಿ ಹತ್ತುವುದು. ಹೀಗೆ ಕಣ್ಣೆದುರು ಏರುತ್ತಲೇ, ಇರುವ ಎತ್ತರಗಳು ಮುಗಿಯುವುದನ್ನು ನಿರೀಕ್ಷಿಸುತ್ತಲೇ ಹತ್ತುತ್ತಾ ಹೋದ ನನಗೆ ಇದ್ದಕ್ಕಿದ್ದಂತೆ ರಕ್ತದಲ್ಲಿನ ಎಲ್ಲ ಸಕ್ಕರೆಯೂ ಮಾಯವಾಗಿ ಮೈನಡುಕ ಉಂಟಾಯಿತು. ಕಣ್ಣುಕತ್ತಲೆ ಕಟ್ಟಿ ಜೋಲುವಂತಾಯಿತು. ಏನೂ ಅರಿಯದೆ ಕೂತುಬಿಟ್ಟೆ. ನನ್ನ ಜೇಬಿನಲ್ಲಿ ಚಾಕಲೇಟ್‌ ಇರಲಿಲ್ಲ. ಅಮೆರಿಕದ ಚಾಕಲೇಟಿಗಾಗಿ ಆಸೆ ಪಡುವ ನನ್ನ ಸಂಗಡಿಗರ ಜೇಬಿನಲ್ಲೂ ಇರಲಿಲ್ಲ.

ಅಲ್ಲಿ ನಡೆದಾಡುವ ಕೆಲವು ಸೈನಿಕರು ತಮ್ಮ ಹೆಗಲ ಮೇಲೆ ತಮ್ಮ ಆಹಾರದ ಗಂಟನ್ನು ಇಟ್ಟುಕೊಂಡಿರುವುದನ್ನು ನೋಡಿ ಅವರ ಕಡೆ ನಾನು ಬೆರಳು ಮಾಡಿ ತೋರಿದೆ. ಒಬ್ಬ ಸೈನಿಕ ಬಂದು ತನ್ನ ಗಂಟನ್ನು ಬಿಚ್ಚಿದ. ಆ ಗಂಟಿನಲ್ಲೊಂದಷ್ಟು ಯಾವತ್ತೋ ಬೇಯಿಸಿದ ಹಳಸಿದ ಅನ್ನವಿತ್ತು. ತನ್ನ ಊಟಕ್ಕೆಂದು ಇಟ್ಟುಕೊಂಡಿದ್ದನ್ನು ಅವನು ತುಂಬ ಪ್ರೀತಿಯಿಂದ ನನಗೆ ಕೊಟ್ಟ. ನನಗೆ ಗೊತ್ತಿರದ ಭಾಷೆಯಲ್ಲಿ ಬಹಳ ವಿನಯದಿಂದ ಇದ್ನು ತಿನ್ನು ಎಂದ. ನಾನದನ್ನು ಪರಮಾನ್ನವೆಂಬಂತೆ ತಿಂದು ಸುಧಾರಿಸಿಕೊಳ್ಳುತ್ತಾ ಕೂತೆ. ನನ್ನ ಮೈಯಲ್ಲಿ ಮತ್ತೆ ಚೈತನ್ಯ ಹುಟ್ಟಿ ನಿಧಾನವಾಗಿ ಉಕ್ಕುವುದನ್ನು ಬಹಳ ಸುಖದಿಂದ ಅನುಭವಿಸಿದೆ. ಅಲ್ಲೊಬ್ಬ ಹೆಂಗಸು ಒಂದು ಮಗುವನ್ನು ಕರೆದು ಕೊಂಡು ಹೋಗುತ್ತಿದ್ದಳು. ಕೊರಿಯಾದಲ್ಲಿ ಸುದ್ದಿಯಾಗಿದ್ದ ನನ್ನನ್ನು ಅವಳು ಗುರುತಿಸಿದಳು. ಮಗುವಿಗಾಗಿ ಅವಳು ಇಟ್ಟುಕೊಂಡಿದ್ದ ಕೊರಿಯನ್‌ ಚಾಕಲೇಟ್‌  ಅವಳ ಕೈಚೀಲದಲ್ಲಿ ಇತ್ತು. ಅದರಲ್ಲಿ ಕೆಲವನ್ನು ಅವಳಾಗಿಯೇ ಬಂದು ನನಗೆ ತಿನ್ನಲು ಕೊಟ್ಟಳು. ಮಹೋನ್ಮಾದದ ಅತಿಸಾರದಲ್ಲಿ ಮೆರೆಯುವ ಕಿಮ್‌ನನ್ನೇ ಎಲ್ಲೆಲ್ಲೂ  ನೋಡಿ ಹೇಸುತ್ತಿದ್ದ ನನಗೆ ಈ ಜನ ಎಷ್ಟು ಒಳ್ಳೆಯವರು ಎನ್ನಿಸಿ ನನ್ನ ರಾಜಕೀಯ ಚಿಂತನೆಯೆಲ್ಲವೂ ಮರೆತು ಹೋಯಿತು.

ಸುಧಾರಿಸಿಕೊಂಡವನು ಎದ್ದು ನಿಂತು ಮತ್ತೆ ಹತ್ತಿ ಹತ್ತಿ ಶಿಖರವನ್ನು ತಲುಪಿದೆ. ಶಿಖರದಲ್ಲಿ ಒಂದು ಅರಮನೆ. ವರ್ಣಿಸಲಾರದಷ್ಟು ವೈಭವದ ಅರಮನೆ. ಈ ಅರಮನೆ ಅವರ ಮಹಾನಾಯಕ ಕಿಮ್‌ನ ವೈಭವವನ್ನು  ಸಾರುವ ಅರಮನೆ. ಅಲ್ಲಿ ಅವನಿಗೆ ಸ್ಟಾಲಿನ್‌ ಕೊಟ್ಟ ವಿಮಾನವೋ ಕಾರೋ, ಚೀನಾ ಕೊಟ್ಟ ವಿಮಾನವೋ ಕಾರೋ, ಬೇರೆ ಬೇರೆ ದೇಶದವರು ಕೊಟ್ಟ ಬೆಳ್ಳಿ, ಚಿನ್ನದ ಬೊಂಬೆಗಳೋ, ತಟ್ಟೆಗಳೋ ಕಣ್ಣು ಕುಕ್ಕುವಂತೆ ತುಂಬಿಕೊಂಡಿದ್ದವು. ಅಲ್ಲಿರುವ ಪುಸ್ತಕಗಳನ್ನು ನೋಡಲು ನನ್ನನ್ನು ಕರೆದುಕೊಂಡು ಹೋದರು. ಜಗತ್ತಿನ ಹಲವು ಲೇಖಕರು ಕಿಮ್‌ ಮೇಲೆ ಬರೆದ ಪುಸ್ತಕಗಳು ಅಲ್ಲಿದ್ದವು. ಆಶ್ಚರ್ಯ ಎನಿಸುವಂತೆ ಭಾರತೀಯರು ಬರೆದ ನೂರಾರು ಪುಸ್ತಕಗಳಿದ್ದವು. ನನಗೆ ಗೊತ್ತಿರುವ ಯಾವ ಲೇಖಕನ ಪುಸ್ತಕವೂ ಅಲ್ಲಿರಲಿಲ್ಲ. ಅತ್ಯಂತ ಸುಂದರವಾಗಿ ಮುದ್ರಿತವಾದ ಕೆಲವೇ ಪುಟಗಳ ಆದರೆ ಚರ್ಮದ ಹೊದಿಕೆ ಇರುವ ಪುಸ್ತಕಗಳಿವು.

ಬೆಟ್ಟವನ್ನು ಇಳಿದಿದ್ದಾಯಿತು. ಅಲ್ಲೊಂದು ಕೊಳ ಇತ್ತು. ಕೊಳದ ಬೆಂಚಿನ ಮೇಲೆ ನಾನೆಷ್ಟು ಸುಸ್ತಾಗಿ ಮಲಗಿದೆನೆಂದರೆ ನನಗೆ ಅಲ್ಲಾಡಿಸಬಲ್ಲ ಕಾಲುಗಳೇ ಇಲ್ಲ ಎನಿಸಿತ್ತು. ಸೂಟ್‌ ತೊಟ್ಟ ನನ್ನ ಇಬ್ಬರು ಸಂಗಡಿಗರು ತಮ್ಮ ಸೂಟುಗಳನ್ನು ಬಿಚ್ಚಿದರು. ನನ್ನ ಬಟ್ಟೆಯನ್ನೂ ಬಿಚ್ಚಿದರು. ಬರಿ ಕಾಚಾ ದಲ್ಲಿ ನನ್ನನ್ನ್ನು ಬೆತ್ತಲೆ ಮಲಗಿಸಿದರು. ಆಮೇಲಿಂದ ನನ್ನ ಮೈಯನ್ನು ತಿಕ್ಕಲು ಶುರು ಮಾಡಿದರು. ಅವರ ಬೆರಳುಗಳಲ್ಲಿ ಮಾಂತ್ರಿಕ ಶಕ್ತಿ ಇತ್ತು. ಕಣ್ಣಿನಲ್ಲಿ ನನ್ನ ಬೆತ್ತಲೆಯ ನಾಚಿಕೆಯನ್ನು ಕಳೆಯುವ ತುಂಟು ನಗುವಿತ್ತು. ಕ್ರಮೇಣ ನನ್ನ ಮೈ ದಣಿವು ಇಳಿಯಿತು. ಎಲ್ಲಿಂದಲೋ ಬಿಸಿ ನೀರನ್ನು ತಂದು ನನ್ನನ್ನು  ಉಜ್ಜಿ ಶುಭ್ರಗೊಳಿಸಿ, ಟೀ ಕುಡಿಸಿ ಕಾರಿಗೆ ಹತ್ತಿಸಿದರು.

ಹೀಗೆ ನನಗೆ ಪರಮ ಪ್ರಿಯರಾದ ಸಂಗಡಿಗರು ಮಾರನೇ ದಿನ ನನ್ನನ್ನು ಕಾಡಲು ಶುರು ಮಾಡಿದರು. ನಮ್ಮ ಮಹಾ ನಾಯಕ ಕಿಮ್‌ಗೆ  ವಯಸ್ಸಾಗು ತ್ತಿದೆ. ಅವರ ಬಗ್ಗೆ ನೀವೊಂದು ಪುಸ್ತಕವನ್ನು ಬರೆಯಬೇಕು. ಹಾಗೆಯೇ ನಾನು ಕುಲಪತಿಯಾಗಿದ್ದ ವಿಶ್ವವಿದ್ಯಾನಿಲಯದಿಂದ ಅವರಿಗೊಂದು ಡಿ.ಲಿಟ್‌. ಅನ್ನು ಕೊಡಿಸಬೇಕು. ಪ್ಲೀಸ್‌, ಪ್ಲೀಸ್‌…! ಅವರ ಪ್ರೊಮೋ ಶನ್‌ಗೆ ಇದು ಅಗತ್ಯವೆಂದು ನಾನು ಊಹಿಸಿ ಪೇಚಾಡುತ್ತ ಹೇಳಿದೆ: `ಡಿ.ಲಿಟ್‌. ಅನ್ನು ಹೀಗೆ ರಾಜಕೀಯ ನಾಯಕನೊಬ್ಬನಿಗೆ ಕುಲಪತಿ ಯಾಗಿ ನಾನಾಗಿಯೇ ಕೊಡುವ ಅಧಿಕಾರವಿಲ್ಲ. ಪುಸ್ತಕ? ನಾನು ಈ ಬಗೆಯ ಪುಸ್ತಕಗಳನ್ನು ಬರೆಯುವುದೇ ಇಲ್ಲ.' ಅದಕ್ಕಾಗುವ ಖರ್ಚನ್ನು ಕೊಡುತ್ತೇವೆ ಎಂದರು. ನನಗೇನೂ ಬೇಡವೆಂದೆ. ಆದರೆ ನನ್ನ ಮಾತನ್ನು ನನ್ನ ಸಂಗಡಿಗರು ವಿನಯದ ಮಾತೆಂದೇ ಭಾವಿಸಿ ನಾನು ರಾಜಧಾನಿಯನ್ನು ಬಿಡುವ ತನಕ ನನ್ನನ್ನು ಉಪಚರಿಸಿ ಕೇರಳಕ್ಕೆ ನಾನು ಹಿಂದಿರುಗಿದ ಮೇಲೆ ಅವರ ರಾಯಭಾರ ಕಚೇರಿಯಿಂದ ಯಾರ ಯಾರ ಹತ್ತಿರವೋ ತಮ್ಮ ಒತ್ತಾಯವನ್ನು ನನ್ನ ಮೇಲೆ ಹೇರುವಂತೆ ಪ್ರೇರೇಪಿಸಿದ್ದರು. ಈಗ ಈ ಎಲ್ಲವೂ ಮುಗಿದಿದೆ. ಅಣು ಬಾಂಬ್‌ ತಯಾರಿಸಿ ಎಲ್ಲರಂತೆ ತಾವಾಗುವ ವಿನಾಶದ ಹಾದಿಯಲ್ಲಿ ಉತ್ತರ ಕೊರಿಯಾ ಇದೆ. ನನ್ನಂತಹ ಲೇಖಕರ ಅಗತ್ಯ ಇನ್ನು ಅವರಿಗೆ ಇಲ್ಲ.

ಕೊರಿಯಾದ ಕೃಷಿ ವ್ಯವಸ್ಥೆಯ ಬಗ್ಗೆ ಅಧಿಕಾರಿಯೊಬ್ಬರ ಜತೆ ನಾನು ಮಾತನಾಡುವಾಗ ಅತ್ಯಂತ ಕಡಿಮೆ ಮಳೆಯಲ್ಲೂ ಬೆಳೆಯುವ ರಾಗಿಯ ಬಗ್ಗೆ ಹೇಳಿದ್ದೆ.  Juscheಯನ್ನು ಇನ್ನೂ ನಂಬುವಂತೆ ಕಾಣುತ್ತಿದ್ದ ಈ ಕೃಷಿ ತಜ್ಞ ರಾಗಿಯ ಬೀಜವನ್ನು ನನ್ನಿಂದ ಕೇಳಿದ್ದ. ನಾನು ಪುಸ್ತಕ ಬರೆಯಲಿಲ್ಲ, ಡಾಕ್ಟರೇಟ್‌ ಕೊಡಲಿಲ್ಲ. ಆದರೆ ರಾಗಿಯನ್ನು ಕಳುಹಿಸಿಕೊಟ್ಟೆ.

ಎಲ್ಲವನ್ನೂ ಚೀಪ್ ಗೊಳಿಸುವ ಆಧುನೀಕರಣ

ನಮಗೆ ದೇವರು ಇದ್ದಾನೆ ಅಂದರೆ ಅವನು ಸಾಂಕೇತಿಕವಾಗಿ ಇದ್ದಾನೆ ಎಂದರ್ಥ. ಯೂರೋಪ್‌ನಲ್ಲಿ ಏನಾಗಿತ್ತು ಅಂದರೆ ಬೈಬಲ್‌ನಲ್ಲಿ ಇರುವುದು ಸಾಂಕೇತಿಕವಲ್ಲ , ಅದು ನಿಜವಾದ ವರ್ಣನೆ ಅಂತ ಭಾವಿಸಿದ್ದರು. ಆಡಂ ಮತ್ತು ಈವ್‌ನಿಂದಲೇ ಹುಟ್ಟಿದ್ದೇವೆ ಅಂತ ತಿಳಿದಿದ್ದರು. ಡಾರ್ವಿನ್‌ ಬಂದು ಮನುಷ್ಯರೆಲ್ಲಾ ಮಂಗಗಳಿಂದ ವಿಕಾಸ ಹೊಂದಿದವರು ಎಂದ ತಕ್ಷಣ ಗಾಬರಿಯಾಗಿಬಿಟ್ಟರು. ಇವತ್ತಿಗೂ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಡಾರ್ವಿನ್‌ ವಾದವನ್ನು ಕಲಿಸುವುದಕ್ಕೆ ಬಹಳ ವಿರೋಧ ವ್ಯಕ್ತಪಡಿಸುವವರಿದ್ದಾರೆ. ಡಾರ್ವಿನ್‌ ವಾದವನ್ನು ಹೇಳಿಕೊಡುವುದಾದರೆ ಬೈಬಲ್‌ನಲ್ಲಿ ಇರುವುದನ್ನೂ ಹೇಳಿಕೊಡಬೇಕೆಂದು ಒತ್ತಾಯಿಸುತ್ತಾರೆ. ಡಾರ್ವಿನ್‌ ಬಂದ ಕೂಡಲೇ ಬೈಬಲ್‌ ತಿರುಗಾಮುರುಗಾ ಆಗಿಬಿಡುತ್ತದೆ ಎಂಬ ಭಯ ಅವರದ್ದು. ಯಾವ ಡಾರ್ವಿನ್‌ ಕೂಡಾ ನಮ್ಮ ನಂಬಿಕೆಗಳನ್ನ್ನು ಉಲ್ಟಾ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ನಮ್ಮಲ್ಲಿ ಕಪಿಗೂ ಸ್ಥಾನವಿದೆ. ಅವನೂ ಇಲ್ಲಿ ದೇವರು. ದತ್ತಾತ್ರೇಯನ ಸನ್ನಿಧಿಯಲ್ಲಿ ನಾಯಿಗೂ ಜಾಗವಿದೆ, ಇಲಿಗೂ ವಕ್ರದಂತ ಮಹಾಕಾಯನನ್ನು ಹೊರುವ ಕಾಯಕವಿದೆ. ಎಲ್ಲವನ್ನೂ ನಾವು ದೈವ ಕಲ್ಪನೆಯಲ್ಲೇ ನೋಡುತ್ತೇವೆ. ಅದಕ್ಕೇ ನವರಾತ್ರಿಯಲ್ಲಿ ಬೊಂಬೆಗಳ ಆರಾಧನೆ ಅಬಾಲವೃದ್ಧರ ಮುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಮನೆ ಮನೆಗೂ ವೈವಿಧ್ಯದ ಮ್ಯೂಸಿಯಂ ಕಳೆ ಬಂದು ಪ್ರತಿ ಮನೆಯ ಬಾಗಿಲೂ ತೆರೆದಿರುತ್ತದೆ.

ನಮ್ಮಲ್ಲಿ ಸಮೃದ್ಧಿಯ ಆರಾಧನೆ ಇದೆ; ಯಹೂದ್ಯ ಮೂಲದ ಧರ್ಮಗಳಂತೆ ಪಾಪ ಕಲ್ಪನೆಯಿಂದ ಹೊರಟ ದೇವರ ಆರಾಧನೆಯಿಲ್ಲ. ಬೇಂದ್ರೆ ಹೇಳುವ ಮಾತಿದು: `ಆನಂದ ಸ್ಪಂದದಿಂದ ಹುಟ್ಟಿಬಂದ ಸೃಷ್ಟಿಯಿಂದಗಂಡುಹೆಣ್ಣಿನ ಸಂಭೋಗವೇ ಬೇಂದ್ರೆಯವರ ಆನಂದ ಸ್ಪಂದದ ಮೂಲ.

ಸೆಮಿಟಿಕ್‌ ಧರ್ಮಗಳ ಸೃಷ್ಟಿಯ ಕಲ್ಪನೆಯಲ್ಲೇ `ಒರಿಜಿನಲ್‌ ಸಿನ್‌'-ಆದಿಪಾಪದ ಕಲ್ಪನೆಯಿದೆ. ಆಡಂ ಮತ್ತು ಈವ್‌ ಏಡನ್‌ ಉದ್ಯಾನವನದಲ್ಲಿದ್ದರು. ಅಲ್ಲಿರುವ ಮರದ ಹಣ್ಣೊಂದನ್ನು ಅವರು ತಿನ್ನಬಾರದಿತ್ತು. ಆದರೆ ಈವ್‌ ಅದನ್ನು ತಿಂದಳು. ತಪ್ಪು ಮಾಡಿದ ಆಕೆ ತಾನು ಮಾತ್ರ ನರಕಕ್ಕೆ ಹೋಗುತ್ತೇನೆಂಬ ಭಯದಿಂದ ಆ ಹಣ್ಣನ್ನು ಗಂಡನಿಗೂ ತಿನ್ನಿಸಿದಳು. ಇದರ ನಂತರ ಮರ್ತ್ಯ ಸೃಷ್ಟಿ ಮುಂದುವರಿಯಿತು. ನಮ್ಮಲ್ಲಿ ಸೃಷ್ಟಿಯ ಕಲ್ಪನೆ ಹೀಗಿಲ್ಲ. ಉಪನಿಷತ್‌ ಒಂದರ ಪ್ರಕಾರ, ಪುರುಷ ಮತ್ತು ಸ್ತ್ರೀತತ್ವಗಳು ಒಂದು ಗಂಡು ಆನೆಯಾಗಿ- ಹೆಣ್ಣು ಆನೆಯಾಗಿ, ಒಂದು ಹೋರಿಯಾಗಿ- ಒಂದು ದನವಾಗಿ ಹೀಗೆಯೇ ಯಾವುಯಾವುದೋ ಹಲವು ಮೃಗಗಳ ಜೋಡಿಯಾಗಿ, ಕೊನೆಗೆ ಗಂಡು-ಹೆಣ್ಣು ಕೀಟವಾಗಿಯೂ ಒಂದನ್ನು ಇನ್ನೊಂದು ಆಸೆಯಲ್ಲಿ ಅಟ್ಟಿ ವೃದ್ಧಿಸುತ್ತವೆ. ಆದ್ದರಿಂದಲೇ ನಮ್ಮ ಪೇಗನ್‌ ನಾಗರಿಕತೆಗೆ ತಾಳುವ ಬಾಳುವ ಶಕ್ತಿ ಇದೆ. ಮತ್ತೆ ನಾವು ದೇವರನ್ನು ಇದು ಹೀಗೇ ಇಷ್ಟೇ ಎಂದು ನಂಬಲೇಬೇಕಾಗಿಲ್ಲ. ನಂಬುತ್ತೇವೋ ಇಲ್ಲವೋ ಎಂಬುದು ಮುಖ್ಯ ಪ್ರಶ್ನೆಯೇ ಆಗುವುದಿಲ್ಲ. ಆಚರಣೆ, ಉತ್ಸವ, ಸಂಭ್ರಮ-ಇವುಗಳು ಮಾತ್ರ ಮುಖ್ಯವಾಗುತ್ತವೆ. ಎಲ್ಲ ಹಬ್ಬಗಳೂ-ಪ್ರಥಮನ ಏಕಾದಶಿಯೊಂದನ್ನು ಬಿಟ್ಟು-ಎಲ್ಲವೂ ಮಕ್ಕಳು ಎದುರು ನೋಡುವ ಹಬ್ಬಗಳೇ. ಇನ್ನು ಮಗು ಹುಟ್ಟಿದಂದಿನಿಂದ ಹಬ್ಬಗಳು; ಹುಟ್ಟಿದ್ದು ಕೃಷ್ಣನೋ ಗೌರಿಯೋ ಎಂಬಂತೆ. ಹೆಸರಿಡಲು ಹಬ್ಬ; ಹೊಸಿಲು ದಾಟಿದರೆ ಹಬ್ಬ; ಮೊದಲ ತುತ್ತಿನ ಅನ್ನ ಪ್ರಾಶನದ ಹಬ್ಬ; ಇನ್ನು ಉಪನಯನ, ಮದುವೆ, ಹಸೆ ತುಂಬುವುದು, ಬಯಕೆ ಇತ್ಯಾದಿಗಳಿರಲಿ, ಋಷಿಪಂಚಮಿ, ಅರವತ್ತರ ಶಾಂತಿ- ಸಾಯುವ ತನಕವೂ ಹಬ್ಬಗಳೇ. ಇದೇನು ನಾವು ನಂಬಿದ ದೈವಕ್ಕೆ ಪೂರ್ಣ ಶರಣಾಗುವ `ರಿಲಿಜನ್‌' ಹೌದೇ ಎಂದು ಅನುಮಾನವಾಗುತ್ತದೆ. ಇದೊಂದು ವಿಪರ್ಯಾಸವೇ: ಸಂಭ್ರಮದ ಕೃಷ್ಣನನ್ನು ಪೂಜಿಸುವವರು ಪಾಶ್ಚಿಮಾತ್ಯರಾಗಿರಬೇಕಿತ್ತು; ಬಡವರಿಗೆ ಮಾತ್ರ ಸ್ವರ್ಗ ಮೀಸಲು ಎಂದು ತಿಳಿದ ಈ ಬಡವರ ದೇಶ ಕ್ರಿಸ್ತನದಾಗಿರಬೇಕಿತ್ತು.

***

ದೇವಸ್ಥಾನದಲ್ಲಿ ಒಂದು ಸಂಗೀತ ಕಚೇರಿ ನಡೆಸಿದರೆ ಆ ಸಂಗೀತಕ್ಕೆ ಒಂದು ಆವರಣ ದೊರೆಯುತ್ತದೆ. It gets contextualized. ಆ ರೀತಿ ದೈವಾವೃತಗೊಳ್ಳುವುದರಿಂದಲೇ ಅದಕ್ಕೊಂದು ಕಳೆ (aura) ಒದಗುತ್ತದೆ. ಪುರಂದರರ, ತ್ಯಾಗರಾಜರ ಕೀರ್ತನೆಗಳೂ ಪೂಜೆಯೂ ಆಗಿಬಿಡುತ್ತದೆ.

ನಮ್ಮ ಕಲೆಯಲ್ಲಿ ಇದು ಎಷ್ಟರ ಮಟ್ಟಿಗೆ ಇತ್ತು ಎನ್ನುವುದಕ್ಕೆ ಒಂದು ಘಟನೆ ನೆನಪಿಗೆ ಬರುತ್ತಿದೆ. ಕಪಿಲ ವಾತ್ಸಾಯನ ಎಂಬ ದಿಲ್ಲಿಯ ವಿದ್ವಾಂಸೆ ಕೇರಳದ ಕಲಾ ಪ್ರಕಾರವಾದ ಕಥಕ್ಕಳಿಯನ್ನು ಕಲಿಯುವುದಕ್ಕೆಂದು ದಿಲ್ಲಿಯಿಂದ ಕೇರಳಕ್ಕೆ ಹೋದಳು. ಒಬ್ಬ ಹೆಣ್ಣು ಮಗಳು ಕಥಕ್ಕಳಿಯನ್ನು ಕಲಿಯುವುದಕ್ಕೆ ಬಂದಿದ್ದಾಳೆ ಎಂಬುದನ್ನು ಕೇರಳದ ಬಹಳಷ್ಟು ಜನ, ಈ ಹೆಣ್ಣು ಮಗಳು ಯಾರು? ನೋಡೋಕ್ಕೆ ಚೆನ್ನಾಗಿ ಬೇರೆ ಇದ್ದಾಳೆ, ಇವಳೇನಾಗಿರಬಹುದು? ಎಂದು ಆಕೆಯ ಶೀಲದ ಬಗ್ಗೆಯೇ ಗುಸುಗುಸು ಸುದ್ದಿಯಿತ್ತಂತೆ.

ಕಥಕ್ಕಳಿಯನ್ನು ದೇವಸ್ಥಾನದ ಆವರಣದಲ್ಲಿ ಮಾತ್ರ ಆಡಬೇಕು ಎಂಬುದು ಬಹು ಹಿಂದಿನ ಸಂಪ್ರದಾಯವಂತೆ. ಅದೂ ಒಂದು ಬಗೆಯ ದೇವತಾ ಅರ್ಚನೆ. ಅಷ್ಟೇ ಅಲ್ಲ ಕಥಕ್ಕಳಿ ಆಡುವವವರು ಪ್ರೇಕ್ಷಕರು ಇದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಯೋಚಿಸುವುದೇ ಇಲ್ಲ. ಒಂದು ದೀಪ ಹತ್ತಿಸಿ ಎದುರಿಟ್ಟುಕೊಂಡು ಅದಕ್ಕೆ ಕಥಕ್ಕಳಿ ಆಡುತ್ತಾರೆ. ನಾನು ಕೇರಳದಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಕಥಕ್ಕಳಿ ತಂಡವನ್ನು ಕರೆಸಿದ್ದೆ- ಉತ್ತರ ದೇಶಗಳಿಂದ ಬಂದ ವಿಶ್ವವಿದ್ಯಾಲಯದ ಅತಿಥಿಗಳು ನೋಡಲೆಂದು. ಉತ್ಕಟ ಭಾವ ವೇಗಗಳ ಸಿನಿಮಾ ನೋಡಿದ ಜನ ಈ ನಿಧಾನಗತಿಯ ಕಥಕ್ಕಳಿ ನೋಡುವ ವ್ಯವಧಾನ ಉಳ್ಳವರೆ ಎಂಬ ಅನುಮಾನ ನನಗಿತ್ತು. ಆದರೆ ಕಥಕ್ಕಳಿ ತಂಡದ ಮುಖ್ಯಸ್ಥ ನನಗೆ ಹೇಳಿದ್ದು ಇನ್ನೂ ನೆನಪಿದೆ: `ಜನ ಇರಲಿ ಬಿಡಲಿ, ನಾವು ಯೋಚನೆ ಮಾಡುವುದಿಲ್ಲ. ಸಭೆಗಾಗಿ ಕಾಯಬೇಡಿ. ನಾವು ಆಡುವುದು ಈ ದೀಪಕ್ಕೆ'. ಈ ಕಲಾಗರ್ವ ನನಗೆ ಬಹಳ ಮಹತ್ವದ ವಿಚಾರವೆಂದು ಅನ್ನಿಸುತ್ತದೆ.

ಕೇರಳದಲ್ಲಿ ಕಥಕ್ಕಳಿ ಕಲಿತಿದ್ದ ಕಪಿಲ ವಾತ್ಸಾಯನರು ಕಥಕ್ಕಳಿ ತಂಡವೊಂದನ್ನು ದಿಲ್ಲಿಗೆ ಆಹ್ವಾನಿಸಿದರಂತೆ. ಬಹಳ ಹಿಂದಿನ ಕಥೆಯಿದು. ಹಾಗೆ ಒಂದು ತಂಡ ಅಲ್ಲಿಗೆ ಹೋಯಿತು. ಅಲ್ಲಿ ಪ್ರದರ್ಶನವನ್ನೂ ನೀಡಿತು. ಯಾರಾದರೂ ಛಾಯಾಗ್ರಾಹಕರು ಅವರ ಫೋಟೋ ತೆಗೆಯಲು ಹೋದರೆ ಆ ಕಲಾವಿದರು ಮುಖ ಮುಚ್ಚಿಕೊಳ್ಳುತ್ತಿದ್ದರಂತೆ. ದೇವಾಲಯದ ಆವರಣದಲ್ಲಿ ಆಡದೆ ಇನ್ನೆಲ್ಲೋ ಆಡಿದರೆಂಬ ಪುಕಾರು ತಮ್ಮ ಮೇಲೆ ಊರಲ್ಲಿ ಬಂದೀತೆಂದು ಈ ಸಂಕೋಚ ಮತ್ತು ಬಹಿಷ್ಕಾರದ ಭಯ ಈ ಕಲಾವಿದರಿಗೆ. ಇದನ್ನು ಕಂಡ ಕಪಿಲ ವಾತ್ಸಾಯನ ನಮ್ಮ ಜನ ಎಷ್ಟು ಹಿಂದುಳಿದಿದ್ದಾರೆ. ಇವರಲ್ಲಿ ಎಂತೆಂಥಾ ಮೂಢ ನಂಬಿಕೆಗಳಿವೆ ಎಂದೆಲ್ಲಾ ಅಂದುಕೊಂಡಿದ್ದರಂತೆ. ನನಗಿದನ್ನು ಕಪಿಲಾರೇ ಹೇಳಿದ್ದು. ಆದರೆ ಮುಂದಿನದನ್ನು ಕೇಳಿ.
ಇದಾಗಿ ಕೆಲ ಕಾಲದ ನಂತರ ಆಕೆ ಕೇರಳಕ್ಕೆ ಬಂದವರು ನನಗೆ ಹೇಳಿದರು: `ಈಗ ಕಾಲ ಹೇಗಾಗಿದೆಯೆಂದರೆ ಮೂರೋ ನಾಲ್ಕೋ ವರ್ಷ ಕಥಕ್ಕಳಿಯನ್ನು ಕಲಿತವನೊಬ್ಬ ರಾಜಕಾರಣಿಗಳನ್ನು ಹಿಡಿದು ಯಾವ್ಯಾವುದೋ ರೀತಿ ಪ್ರಭಾವ ಬೀರಿ ದಿಲ್ಲಿಯಲ್ಲಿ ಬಂದು ಕಥಕ್ಕಳಿ ಆಡಲು ಪ್ರಯತ್ನಿಸುತ್ತಾನೆ. ಈ ಸ್ಥಿತಿ ನೋಡಿದರೆ ನಾನು ಹಿಂದೆ ಕಲಾದೃಷ್ಟಿಯಿಂದ ಮಾಡಿದ್ದು ತಪ್ಪು ಎನ್ನಿಸುತ್ತದೆ.'

ಇದನ್ನೇ ಎಲ್ಲವನ್ನೂ ಚೀಪ್‌ಗೊಳಿಸಿ ಮಾರುವ ಆತುರದ ಆಧುನೀಕರಣ ಎನ್ನುವುದು. ನಮ್ಮ ದೇವತೆಗಳೂ ರಾಕ್ಷಸರೂ ಕೂಡಾ ಬಹಳ ವಿಚಿತ್ರ. ಬಲಿಯೂ ಒಬ್ಬ ರಾಕ್ಷಸ ಎನ್ನುವುದನ್ನು ಮರೆಯಬಾರದು. ಅವನ ಮನೆಯನ್ನು ಕಾಯುತ್ತಿರುವವನು ದೇವರ ದೇವನಾದ ವಿಷ್ಣು. ಬಲಿಯನ್ನು ತುಳಿದ ನಂತರ ವಿಷ್ಣುವಿಗೆ ಅಪರಾಧ ಪ್ರಜ್ಞೆ ಕಾಡುತ್ತದೆ. ಅದಕ್ಕೇ ಅವನು ಬಲಿಯ ಮನೆಯನ್ನು ಕಾಯುತ್ತಿದ್ದಾನೆ. ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡುವುದಕ್ಕಾಗಿ ಬಲಿ ಬರುತ್ತಾನೆ. ಒಳ್ಳೆ ರಾಕ್ಷಸರಿದ್ದಾರೆ; ಹಾಗೇ ಕೆಟ್ಟವರೂ ಇದ್ದಾರೆ. ಒಳ್ಳೆ ದೇವತೆಗಳಂತೆ ಕೆಟ್ಟ ದೇವತೆಗಳೂ ಇದ್ದಾರೆ. ಇಂದ್ರನಿಗೆ ಇರುವಂಥ ಗರ್ವ ಇನ್ನಾರಿಗೂ ಇಲ್ಲ. ಅವನ ದರ್ಪ ಅಷ್ಟಿಷ್ಟಲ್ಲ. ಋಷಿಗಳಿಂದ ತಾನು ಕೂತ ಪಲ್ಲಕ್ಕಿ ಹೊರಿಸಿಕೊಂಡು `ವೇಗವಾಗಿ ಹೋಗಿ ಹೋಗಿ' ಎನ್ನುವ ಸಂಸ್ಕೃತದ ಜಬರದಸ್ತಿನಲ್ಲಿ `ಸರ್ಪ ಸರ್ಪ' ಎಂದು ಕಾಲು ಕುಟ್ಟುತ್ತಾನೆ. ಆಗ ನಾಲ್ವರಲ್ಲಿ ಒಬ್ಬನಾದ ಕುಂಟುಕಾಲಿನ ಋಷಿಯಿಂದ ಶಾಪಗ್ರಸ್ತನಾಗಿ ನಿಜದ ಸರ್ಪವೇ ಆಗಿ ಪಲ್ಲಕ್ಕಿಯಿಂದ ಹರಿದು ಹೋದವನು ಈ ಇಂದ್ರ, ರಾವಣನನ್ನೂ ಮಿರಿಸಿದ ಕಾಮುಕಿ; ಋಷಿಪತ್ನಿಗಳ ವ್ಯಾಮೋಹಿ.

ನಮ್ಮ ಮಕ್ಕಳು ನಮ್ಮ ನಾಗರಿಕತೆಯಲ್ಲೇ ಬೆಳೆದು ಬಂದದ್ದಾದರೆ, ಕನ್ನಡ ಮಾಧ್ಯಮದಲ್ಲಿ ಓದಿದವರಾದರೆ, ಅವರ ಗ್ರಾಮೀಣ ಸಮೃದ್ಧಿಯಲ್ಲಿ ದೇವ ದೇವಿಯರನ್ನು ಕಂಡವರಾದರೆ ಗೊಡ್ಡಾದ ಮೂರ್ಖ ಮೂಢನಂಬಿಕೆ ಅವರಲ್ಲಿ ಹುಟ್ಟಲಾರದು. ಹಿಂಸೆಯಲ್ಲಿ ದೇವಸ್ಥಾನಗಳನ್ನು ಕಟ್ಟುವುದನ್ನೋ ಮಸೀದಿಗಳನ್ನು ಒಡೆಯುವುದನ್ನೋ ಅವರು ಶೌರ್ಯದ ಸಂಕೇತವೆಂದೋ, ದೇಶಭಕ್ತಿಯೆಂದೋ ಭಾವಿಸಲಾರರು. ಇದು ಹಾಗೆ ಬೆಳೆದು ಬಂದವನಾದ ನನ್ನ ನಂಬಿಕೆ. ನನ್ನ ತಾಯಿ ನೂರಾರು ದೇವರುಗಳ ನಡುವೆ ಮುಸ್ಲಿಮರು ನಂಬುವ ದೇವರು ಮಕ್ಕಳ ಆರೋಗ್ಯವನ್ನು ಕಾಪಾಡುವಾತ ಎಂದು ತಿಳಿದಿದ್ದರು. ಹೀಗೆ ತಿಳಿಯುವುದು ಸೆಮಿಟಿಕ್‌ ಧರ್ಮಗಳಿಗೆ ಕಷ್ಟ. ನಾವೇಕೆ ಅವರನ್ನು ಈ ವಿಷಯಗಳಲ್ಲಿ ಅನುಸರಿಸಬೇಕು?

ಎ.ಕೆ. ರಾಮಾನುಜನ್‌ ಹೇಳುತ್ತಾರೆ:. `ಭಾರತದಲ್ಲಿ ಯಾರೂ ಮೊದಲನೇ ಬಾರಿಗೆ ರಾಮಾಯಣ ಅಥವಾ ಮಹಾಭಾರತವನ್ನು ಓದುವುದಿಲ್ಲ. ಯಾಕೆಂದರೆ ಆ ಕತೆ ನಮಗೆ ಮೊದಲೇ ಗೊತ್ತಿರುತ್ತದೆ. ಆದರೆ ಯೂರೋಪ್‌ನಲ್ಲಿ ಯಾರಾದರೂ ಹೋಮರ್‌ನನ್ನು ಓದಿದರೆ ಅವನು ಮೊದಲನೇ ಬಾರಿಗೆ ಹೋಮರ್‌ನನ್ನು ಓದುತ್ತಿರುತ್ತಾನೆ.' ಇನ್ನು ಮುಂದೆ ನಮ್ಮ ದೇಶದ ಮಕ್ಕಳು They will only read RAMAYANA for the first time in an English edition if they go to an English medium school and if it happens to be a text (ಇಂಗ್ಲಿಷ್‌ ಮಾತ್ರ ಬರುವವರಿಗಾಗಿ ಈ ವಾಕ್ಯ ಇಂಗ್ಲಿಷಿನಲ್ಲಿದೆ).

***

ಕೊನೆಯದಾಗಿ ಒಂದು ಮಾತು: ಆಧುನಿಕರಾಗಿಬಿಟ್ಟ ನಮ್ಮಂಥವರು ಹುಡುಕುತ್ತಿರುವುದು ದೇವರು ಎಂಬ ಒಂದು ವಿಶಿಷ್ಟ ಸೃಷ್ಟಿಕರ್ತನ ಅಗತ್ಯವಿಲ್ಲದಂತೆ ಆಧ್ಯಾತ್ಮಿಕವಾದ ಬೆರಗಿನಲ್ಲಿದ್ದೇ, ಮನಸ್ಸಿನ ಅಲ್ಪ ಸಮಾಧಾನಕ್ಕಾಗಿ ಈ ಬೆರಗನ್ನು ವಿವರಣೆಗಳಲ್ಲಿ ಸರಳಗೊಳಿಸಿಕೊಳ್ಳದೇ ಜಗತ್ತಿನ ಸೃಷ್ಟಿಗೆ ಎದುರಾಗುವುದು. ಗೌತಮ ಬುದ್ಧ ಇದರಲ್ಲಿ ನಮಗೆ ಆಪ್ತ. ದೇವರನ್ನು ಇದ್ದಾನೆ ಎಂದು ಭಾವಿಸಿ ಸಂಸಾರವನ್ನೇ ತೊರೆದ ಅಕ್ಕ ಮೀರಾರನ್ನು ಕಂಡೂ ಬೆರಗಾಗುವುದು; ಜೊತೆಗೇ, ಬಡಜನರು ಈ ಲೋಕದ ಒಡೆಯರಾಗುವ ಕನಸನ್ನು ಕಂಡ ಕ್ರಿಸ್ತನನ್ನೂ, ಅಲ್ಲಾಹುವಿಗೆ ತನ್ನನ್ನು ಸರ್ವಾರ್ಪಣೆ ಮಾಡಿಕೊಂಡ ಪೈಗಂಬರರನ್ನೂ ನಮ್ಮ ಪೂರ್ವ ಸೂರಿಗಳು ಎಂದು ಪವಿತ್ರ ಭಾವನೆಯಲ್ಲಿ ಗೌರವಿಸುವುದು ವೈಯಕ್ತಿಕವಾಗಿ ಮುಖ್ಯ ಮಾತ್ರವಲ್ಲ, ಹಿಂಸೆಯ ನಮ್ಮ ಕಾಲದ ತಲ್ಲಣಗಳಿಂದ ಪಾರಾಗಲು ಅಗತ್ಯ. ಈ ಅಗತ್ಯದಲ್ಲಿ ರಾಜಕೀಯ ಜಾಣತನವಿಲ್ಲ; ನಾವೆಲ್ಲರೂ ಹುಡುಕುವ ಸತ್ಯವೂ ಎಲ್ಲಾ ಧರ್ಮಗಳಲ್ಲಿ ಹುಡುಕಿಕೊಳ್ಳಬೇಕಾದ ಸತ್ಯವೂ ಅಡಗಿದೆ. ಯಾಕೆಂದರೆ, ಈ ಪ್ರಪಂಚದಲ್ಲಿ ಆಚರಣೆಯಲ್ಲಿರುವ ಯಾವ ಮತವೂ ತನ್ನಲ್ಲೇ ತನ್ನಷ್ಟಕ್ಕೇ ಪರಿಪೂರ್ಣವಲ್ಲ; ಪೂರ್ಣತೆಗೆ ಹಂಬಲಿಸದ ಯಾವ ಮತವೂ ಇಲ್ಲ.

‘ಅಲ್ಲಿರುವ’ ತಿರುಪತಿಗೆ ಇಲ್ಲೊಂದು ತಿರುಪತಿ

ಬೆಂಗಳೂರಿನಲ್ಲಿ ನನ್ನ ಮನೆ ಇರುವ ಆರ್‌ಎಂವಿ ಬಡಾವಣೆಯಲ್ಲಿ ನೈಕೀ ಶೂ ಧರಿಸಿ, ವಾಕ್‌ ಹೋಗುತ್ತಾ ಇದ್ದಾಗ ನನ್ನ ಪರಿಚಯದ ವಯಸ್ಸಾದ ಮಹಿಳೆಯೊಬ್ಬರು ಇಳಕಲ್ಲಿನ ಸೀರೆಯುಟ್ಟು ತಲೆಯ ಮೇಲೆ ಸೆರಗು ಹಾಕಿ ಬರಿಗಾಲಿನಲ್ಲಿ ಸರಸರನೆ ನಡೆಯುತ್ತಿದ್ದರು. ಜಾತಿಯಲ್ಲಿ ದಲಿತರಾದ ಆಕೆ ಮಂತ್ರಿಯೊಬ್ಬರ ತಾಯಿಯಾದ್ದರಿಂದ ನಮಗೆ ಬರಿಗಾಲಿನ ಅವರ ಅದೇ ಹಿತವೆನ್ನಿಸುವಂತಹ ಸರಾಗವಾದ ನಡಿಗೆ ಕಂಡು ಆಶ್ಚರ್ಯ.

ಜತೆಯಲ್ಲಿದ್ದ ನನ್ನ ಹೆಂಡತಿ `ಏನವ್ವ, ಬರಿಗಾಲಲ್ಲಿ ನಡೀತ ಇದೀರಿ?' ಎಂದು ಕೇಳಿದಳು. ಆಕೆ `ಇದು ಶ್ರಾವಣ ಮಾಸ ಅಲ್ವೇನಮ್ಮ' ಎಂದರು ವಿವರಣೆಯ ಅಗತ್ಯವೇ ಇಲ್ಲವೆನ್ನುವಂತೆ. ನಾವು ಶ್ರಾವಣ ಮಾಸದಲ್ಲಿದ್ದೀವಿ ಎಂದು ನನಗೆ ಗೊತ್ತಾದದ್ದೇ ಆಗ.

ನಾನು ಬ್ರಾಹ್ಮಣನಾಗಿ ಹುಟ್ಟಿದವನು. ಇವೆಲ್ಲಾ ಒಂದು ಕಾಲದಲ್ಲಿ ಗೊತ್ತಿದ್ದವನು. ಪ್ರತಿ ಶ್ರಾವಣ ಶನಿವಾರ ಅಗ್ರಹಾರದ ಮನೆಮನೆಗೆ ಹೋಗಿ ಶಾಸ್ತ್ರೋಕ್ತವಾಗಿ ತಟ್ಟೆಯೊಡ್ಡಿ `ಭವತಿ ಭಿಕ್ಷಾಂ ದೇಹಿ' ಎಂದು ಭಿಕ್ಷೆಯೆತ್ತಿ ನನ್ನ ಅಜ್ಜನಿಗೆ ಖುಷಿಕೊಟ್ಟವನು. ನನ್ನ ಅಪ್ಪನಿಗೆ ಪಂಚಾಂಗ ನೋಡುವುದಕ್ಕೆ ಮಾತ್ರವಲ್ಲ, ಲೆಕ್ಕ ಹಾಕಿ ಬರೆಯುವುದಕ್ಕೂ ಗೊತ್ತಿತ್ತು. ನಾನೂ ಮಠದ ಒಂದು ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭ ಮಾಡಿದವನು. ಆದರೆ ಕ್ರಮೇಣ ಇದು ಶ್ರಾವಣ ಮಾಸ ಅನ್ನುವುದು ಅಪ್ರಸ್ತುತವಾಗುವಷ್ಟು ಆಧುನಿಕನಾಗಿಬಿಟ್ಟಿದ್ದೆ.

ಹಳ್ಳಿಯ ಜನರಿಗೆ, ಬಡ ಜನರಿಗೆ, ನಿರಕ್ಷರರಿಗೆ ಪಂಚಾಂಗ ನೋಡದೇ ಇದ್ದರೂ ಯಾವ ಹಬ್ಬ ಯಾವಾಗ ಅಂತ ಗೊತ್ತಿರುತ್ತೆ. ಈ ದೇಶದ ಬಡವರಿಗೆ ನೆಲದ ಜತೆಗೆ ಎಷ್ಟು ಸಂಬಂಧ ಇದೆಯೋ ಅಷ್ಟೇ ಗಾಢವಾದ ಸಂಬಂಧ ಅವರಿಗೆ ಆಕಾಶದ ಜತೆಯೂ ಇದೆ. ಕೆಲವು ಸಾರಿ ಇದು ಅವರಿಗೇ ಗೊತ್ತಾಗದಷ್ಟು ಅಪ್ರಜ್ಞಾಪೂರ್ವಕವಾಗಿ ಇರುತ್ತದೆ.

ನಾನು ಮಲೆನಾಡಿನ ತೀರ್ಥಹಳ್ಳಿಯಲ್ಲಿ ಓದುತ್ತ ಹತ್ತಿರದ ಹಳ್ಳಿಯೊಂದರಲ್ಲಿ ಬೆಳೆದವನು. ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆ ಅಂತ ಒಂದು ಜಾತ್ರೆ ನಡೆಯುತ್ತೆ. ಆ ಜಾತ್ರೆಯ ದಿವಸವನ್ನು ಎಷ್ಟು ದಿನಗಳ ಹಿಂದಿನಿಂದಲೇ ಎದುರು ನೋಡುತ್ತ ಮಾತನಾಡುತ್ತಿದ್ದೆವು ಎಂದು ನೆನಪಾಗುತ್ತದೆ. ಇರುವ ಒಂದು ಒಳ್ಳೆಯ ಅಂಗಿಯನ್ನು ಒಗೆದು ಗಂಜಿ ಹಾಕಿ ಒಣಗಿಸಿ, ತಟ್ಟೆಯ ಮೇಲೆ ಕೆಂಡವಿಟ್ಟು ಕಾಯಿಸಿ, ಪಾಣಿ ಪಂಚೆಯಿಂದ ಅದನ್ನು ಜೋಪಾನವಾಗಿ ಹಿಡಿದು, ಅಂಗಿಯ ಮೇಲೆ ಅದನ್ನು ಒತ್ತಿ ಆಡಿಸಿ, ಇಸ್ತ್ರಿ ಮಾಡಿ ಎಳ್ಳಮವಾಸ್ಯೆಗೆ ತೊಡಲು ಅಮ್ಮನ ಪೆಟ್ಟಿಗೆಯಲ್ಲಿ ಕಾದಿಡುತ್ತಿದ್ದೆವು. ಹಳ್ಳಿಗೆ ಹೊರಗಿನಿಂದ ಬಂದವರು, ಗಾಡಿ ಹೊಡೆಯುವವರು, ಸುಮ್ಮನೇ ನದಿ ದಂಡೆಯ ಮೇಲೆ ಅಡ್ಡಾಡುತ್ತ ಹರಟೆ ಹೊಡೆಯುವವರು, ಕಾಡುಹಂದಿಯನ್ನು ಬೇಟೆಯಾಡಿ ಬಂದು ತಮ್ಮ ಸಾಹಸಗಳನ್ನು ಕೊಚ್ಚಿಕೊಳ್ಳುವವರು, ಗುಡ್ಡದ ಮೇಲಿನ ಕೊಂಕಣಿ ಅಂಗಡಿಗೆ ಸೀಮೆಎಣ್ಣೆಯನ್ನೋ ತೊಗರಿ ಬೇಳೆಯನ್ನೋ ಕೊಳ್ಳಲು ದೂರದ ಹಳ್ಳಿಗಳಿಂದ ಬಂದವರು ಎಲ್ಲರೂ ಬರಲಿರುವ ಜಾತ್ರೆಯ ತಮ್ಮ ತಯ್ಯಾರಿ ಬಗ್ಗೆ ಮಾತನಾಡಿಕೊಳ್ಳುತ್ತಾ ಇರುತ್ತಿದ್ದರು.

ಆ ಜಾತ್ರೆಗೆ ಹೋಗಿ ಬಂದರೆ ಇಡೀ ವರ್ಷದ ಹರಟೆಗೆ, ಮಾತಿಗೆ ಎಲ್ಲಾ ಅದರದೇ ನೆನಪುಗಳು. ಗೆಣೆಯ ಮೇಲೆ ಸರಸರನೆ ಏರಿ ಅಷ್ಟೆತ್ತರದಿಂದ ಹೊಕ್ಕುಳಿನ ಮೇಲೆ ಗೆಣೆಯನ್ನು ಇಟ್ಟು ತಮಟೆಯ ಬಡಿತಕ್ಕೆ ಇಡೀ ಮೈಯನ್ನು ಆಕಾಶಕ್ಕೆ ಚೆಲ್ಲುವಂತೆ ಒಡ್ಡಿ ಓಲಾಡಿ ಅಷ್ಟೇ ಸರಸರನೆ ಕೆಳಗಿಳಿದು ಕುಮ್ಮುಚಟ್ಟು ಹಾಕಿ ಕೈಮುಗಿದು ನಿಲ್ಲುವ ಪರಮ ಸುಂದರಿಯಾಗಿ ಕಾಣುತ್ತ ಇದ್ದ ಬಾಲೆಯೊಬ್ಬಳನ್ನು ಮರೆಯಲಾರೆ.

ಆ ಕಾಲದಲ್ಲಿ ಒಂದು ದೇವಸ್ಥಾನದಲ್ಲಿ ಆರಾಧನೆ ಅಂದರೆ ಅದು ಬರೀ ಕಾಟಾಚಾರದ ಪೂಜೆ ಅಲ್ಲ. ಸಂಸ್ಕೃತದಲ್ಲಿ ಈಗ ಇಂಥ ಪೂಜೆ ನಡೆಯಲಿದೆ ಎಂದು ಒಬ್ಬ ಸಾರುತ್ತಿದ್ದ. ಇಂತಿಂಥಾ, ಎಷ್ಟೆಷ್ಟು ದೀಪಗಳ ಆರತಿ ಈಗ ನಡೆಯಲಿದೆ ಎಂದು ರಾಗವಾಗಿ ಸಾರುವುದೇ ಒಂದು ಸೊಗಸು. ದೇವರ ಪ್ರೀತ್ಯರ್ಥವಾಗಿ ಒಂದು ಪುಟ್ಟ ಭಾಷಣವೂ ತಿಳಿದವರೊಬ್ಬರಿಂದ ನಡೆಯುತ್ತಿತ್ತು. ನಾವು ಕೈಮುಗಿದು ಗರ್ಭಗುಡಿಯನ್ನೇ ನೋಡುತ್ತ ಎರಡೂ ಪಕ್ಕದಲ್ಲಿ ಶಿಸ್ತಾಗಿ ಪಂಚೆಯುಟ್ಟು ನಿಂತು, ಈ ಅರ್ಚನೆಯೆಂಬ ಆಚರಣೆಯನ್ನು ನಾಟಕವೆಂಬಂತೆ ನೋಡುವುದು. ಕೊನೆಗೆ ಒಂದು ಸಂಗೀತ ಸಮಾರಾಧನೆ ಇರುತ್ತಿತ್ತು.

ಈ ಬಗೆ ಬಗೆಯ ಆರತಿಗಳೆಲ್ಲಾ ನೋಡುವುದಕ್ಕೂ ಬಹಳ ಚೆನ್ನಾಗಿರುತ್ತಿದ್ದವು. ಏಕೆಂದರೆ ಆಗ ಎಲೆಕ್ಟ್ರಿಕ್‌ ದೀಪಗಳಿರಲಿಲ್ಲ . ದೊಡ್ಡ ದೀಪದ ಕಂಬಗಳಲ್ಲಿ ದೇವರ ಅಕ್ಕಪಕ್ಕ ಎಣ್ಣೆದೀಪ ಉರಿಯುತ್ತಿದ್ದರೂ ನೆರಳುಗಳು ಏರಿಳಿದು ಆಡುವ ಕತ್ತಲಾದ ಗರ್ಭಗುಡಿಯಲ್ಲಿ ಆರತಿಯನ್ನು ಬೆಳಗುತ್ತಿದ್ದರು. ಈ ಬೆಳಗುವ ಕ್ರಮದಲ್ಲಿ ಒಂದು ವಿಶೇಷ ಇತ್ತು. ಆ ದೇವತಾ ವಿಗ್ರಹದ ಬೇರೆ ಬೇರೆ ಭಾಗಗಳನ್ನು ತೋರಿಸುತ್ತಾ ಆರತಿ ಎತ್ತುತ್ತಿದ್ದರು. ಒಂದು ವಿಗ್ರಹವನ್ನು ನಾವು ಆ ಆರತಿಯ ಬೆಳಕಿನಲ್ಲಿ ಸ್ವಲ್ಪ ಸ್ವಲ್ಪವೇ ನೋಡುತ್ತಾ, ಮತ್ತೆ ಅದೇ ಭಾಗಗಳನ್ನು ಇನ್ನೊಂದು ಆರತಿಯ ವೇಳೆಯೂ ನೋಡುತ್ತಾ ಸುಮಾರು ಹತ್ತು ಹದಿನೈದು ಆರತಿಗಳ ಅವಧಿಯಲ್ಲಿ ನಮ್ಮ ಮನಸ್ಸಿನಲ್ಲಿ ವಿಗ್ರಹದ ಒಟ್ಟು ಸ್ವರೂಪ ಕ್ರಮೇಣವಾಗಿ ಮೂಡಿರುತಿತ್ತು. ಕೊನೆಗೊಂದು ಶಂಖ-ಜಾಗಟೆಗಳ ಹುಚ್ಚಿನ ಆವೇಶದಲ್ಲಿ ದೊಡ್ಡ ಆರತಿ ಎತ್ತುತ್ತಿದ್ದರು. ಆಗ ನಮ್ಮ ಮನಸ್ಸಿನೊಳಗಿಂದ ದೊಡ್ಡ ಆರತಿಯ ಬೆಳಕಿನಲ್ಲಿ ದೇವರ ಬಿಂಬ ಗರ್ಭಗುಡಿಯಲ್ಲಿ ಸಾಕ್ಷಾತ್ಕಾರಗೊಳ್ಳ ಬೇಕು- ಹಾಗೆ. ಶಬ್ದದೊಳಗಿನ ನಿಶ್ಶಬ್ದದ ಹಾಗೆ.

ಈಗ ನಮ್ಮ ದೇವಸ್ಥಾನಗಳೆಲ್ಲಾ ಎಷ್ಟು ಆಧುನಿಕವಾಗಿಬಿಟ್ಟಿವೆ ಎಂದರೆ ಎಲ್ಲ ಕಡೆಯೂ ದೊಡ್ಡ, ಉಜ್ವಲವಾದ ಎಲೆಕ್ಟ್ರಿಕ್‌ ದೀಪಗಳನ್ನು ನೇತುಹಾಕಿ, ದೇವರ ಮೇಲೆ ಸರ್ಚ್‌ಲೈಟ್‌ ತೂರಿ, ಆರತಿ ಬೆಳಗುವುದನ್ನು ಅರ್ಥಹೀನ ಮಾಡಿಟ್ಟಿದ್ದೇವೆ. ಆರತಿಗೊಂದು ಅರ್ಥ ಇರಬೇಕಾದರೆ ಆ ಅರ್ಥಕ್ಕೆ ಬೇಕಾಗಿರುವ ಕತ್ತಲೂ ಅಲ್ಲಿರಬೇಕು. ಆ ಕತ್ತಲಿಗೆ ಬೇಕಾದ ಒಂದು ಪಾವಿತ್ರ್ಯದ ಕಲ್ಪನೆಯೂ ಬೇಕು. ಮತ್ತೆ ದೇವತಾ ವಿಗ್ರಹವೂ ಇದಕ್ಕನುಗುಣವಾಗಿಯೇ ಇರಬೇಕಾಗುತ್ತದೆ. ಈಗ ದೇವಾನುದೇವತೆಗಳೆಲ್ಲಾ ಸಿನಿಮಾ ನಟ-ನಟಿಯರಂತಾಗಿಬಿಟ್ಟಿದ್ದಾರೆ. ಬಣ್ಣಬಣ್ಣದ ಮೂತಿ, ಬಾಲಗಳ ಹನುಮಂತ ಬಣ್ಣಬಣ್ಣದ ರಾಮ ದೇವಾಲಯದ ಶಿಖರದ ಮೇಲೆ ಫೋಸ್‌ ಕೊಟ್ಟು ನಿಂತು ತನ್ನ ಭಕ್ತಿಯನ್ನು ಸಾರುತ್ತಾನೆ. ಈಗ ದೇವರಿಗೂ ಸಿನಿಮಾ ನಟರ ಮುಖಗಳೇ. ದೇವರ ವಿಗ್ರಹ, ಚಿತ್ರಗಳಿಗಿದ್ದ ಸಾಂಕೇತಿಕತೆ ಮಾಯವಾಗಿ ಕ್ಯಾಲೆಂಡರ್‌ ಚಿತ್ರಗಳೇ ನಮ್ಮ ದೇವರುಗಳಾಗಿಬಿಟ್ಟಿವೆ.

ಈಗಲೂ ನಮ್ಮ ಹಳ್ಳಿಗೆ ಹೋದರೆ ಅಲ್ಲಿ ಭೀಮನಕಟ್ಟೆ ಎಂಬ ಸ್ಥಳವಿದೆ. ಅಲ್ಲಿ ತುಂಗಾತೀರದಲ್ಲಿ ಕಡುಕೋಪಿ ದೂರ್ವಾಸರು ಸಿಡಿಮಿಡಿಯುತ್ತಲೇ ತಪಸ್ಸಿಗೆ ಕೂತಿದ್ದ ಪುಟ್ಟ ದ್ವೀಪವಿದೆ. ಹಳೆಯ ಒಂದು ಭೀಮೇಶ್ವರ ಎಂಬ ದೂರ್ವಾಸ ಶಾಪಕ್ಕೆ ಹೆದರಿದ ಗಡಿಬಿಡಿಯಲ್ಲಿ ಭೀಮ ಸ್ಥಾಪಿಸಿದ ಒಂದು ದೇವಸ್ಥಾನವಿದೆ. ಅಲ್ಲಿನ ಗರ್ಭಗುಡಿಯಲ್ಲಿ ಸ್ವಲ್ಪ ಕತ್ತಲಿದೆ (ಇನ್ನೂ ಇದೆಯೋ ಗೊತ್ತಿಲ್ಲ.)ಯಾರಾದರೂ ಆರತಿ ಎತ್ತುವುದನ್ನು ನೋಡಿದರೆ ನನಗೆ ನನ್ನ ಬಾಲ್ಯವೇ ಹಿಂದಕ್ಕೆ ಬಂದಂತೆ ಭಾಸವಾಗುತ್ತದೆ.

***

ಮೊದಲಿಗೆ ಬಹುಪಾಲು ನಾಗರಿಕತೆಗಳು ಪೇಗನ್‌ (Pagan) ನಾಗರಿಕತೆಗಳಾಗಿದ್ದವು. ಪೇಗನ್‌ ನಾಗರಿಕತೆಗಳು ಅಂದರೆ ಬಹು ದೇವಾರಾಧನೆಯ ನಾಗರಿಕತೆಗಳು. ರೋಮ್‌ ಎಷ್ಟರ ಮಟ್ಟಿಗೆ ಪೇಗನ್‌ ನಾಗರಿಕತೆ ಅಂದರೆ ರೋಮ್‌ನ ಉಚ್ಛ್ರಾಯ ಕಾಲದಲ್ಲಿ ರೋಮ್‌ನ ಎಲ್ಲಾ ದೇವತೆಗಳಿಗೂ ಒಂದೊಂದು ದೇವಸ್ಥಾನವಿತ್ತು. ಇವೆಲ್ಲವುಗಳ ಜತೆಗೆ ಇನ್ನೊಂದು ದೇವಸ್ಥಾನವೂ ಇತ್ತು. ಅದು `ನಮಗೆ ಗೊತ್ತಿಲ್ಲದೇ ಇರುವ ದೇವರಿಗಾಗಿ ಈ ದೇವಸ್ಥಾನ' ಎಂದು ರೋಮನ್ನರು ಈ ದೇವಸ್ಥಾನವನ್ನು ಗುರುತಿಸುತ್ತಿದ್ದರು. ಅವರವರ ದೇವರು ಅವರಿಗೆ. ದೇವರ ವಿಷಯದಲ್ಲಿ ಯುದ್ಧ ಆಗುವುದಕ್ಕೆ ಶುರುವಾಗಿದ್ದು ದೇವರಿರುವುದು ಒಬ್ಬನೇ ಎಂಬ ಧಾರ್ಮಿಕ ಕಲ್ಪನೆ ಬಲಗೊಂಡ ಮೇಲೆ. ಅದು ಯಹೂದ್ಯ ಮೂಲದ ಧರ್ಮಗಳಿಂದ ಆರಂಭವಾಯಿತು. ಕೂಡಲೇ ಏನಾಯಿತು ಎಂದರೆ ದೇವರು ಒಬ್ಬನೇ, ಅವನು ನಿರಾಕಾರ ಎಂಬ ಪರಿಕಲ್ಪನೆ ಹುಟ್ಟಿತು. ನಮ್ಮ ಪೇಗನ್‌ ಸಂಸ್ಕೃತಿಯಲ್ಲೂ ಈ ಕಲ್ಪನೆ ಇದೆ. ದೇವರು ನಿರಾಕಾರ, ನಿರ್ಗುಣ, ಏಕಂ ಸತ್‌, ವಿಪ್ರಾಃ ಬಹುದಾವದಂತಿ. ಸತ್ಯ ಒಂದೇ, ತಿಳಿದವರು ಬಹುವಾಗಿ ಈ ಒಂದನ್ನೇ ಬೇರೆ ಬೇರೆ ಮಾತುಗಳಲ್ಲಿ ವಿವರಿಸಿಕೊಳ್ಳುತ್ತಾರೆ.

ಪ್ರಪಂಚದ ಇಡೀ ಧರ್ಮಗಳನ್ನು ವಿಶ್ಲೇಷಣೆ ಮಾಡುವುದಾದರೆ ಎರಡು ಜೋಡಿ ಪದಗಳನ್ನು ತೆಗೆದುಕೊಂಡರೆ ಸಾಕಾಗುತ್ತದೆ. ನನಗೆ ಇದನ್ನು ಹೇಳಿ ದವರು ರಾಮಚಂದ್ರ ಗಾಂಧಿ. ಅವು ಸಾಕಾರ-ಸಗುಣ, ನಿರಾಕಾರ-ನಿರ್ಗುಣ. ವೈಷ್ಣವರಿಗೆ ದೇವರು ಸಾಕಾರ ಮತ್ತು ಸಗುಣ-ಅವನು ಸರ್ವ ಗುಣ ಸಂಪನ್ನ. ಅದ್ವೈತಿಗಳಿಗೆ ಜ್ಞಾನೋದಯವಾದ ನಂತರ, ಮಾಯೆ ಕಳೆದ ನಂತರ ದೇವರು ನಿರಾಕಾರ. ಅದು ನೀನೇ, ಇನ್ನೊಂದಲ್ಲ. ಅಲ್ಲಮನಂಥವರ ಮಟ್ಟಿಗೆ ದೇವರು ನಿರಾಕಾರ-ನಿರ್ಗುಣ. ಕ್ರಿಶ್ಚಿಯನ್ನರಿಗೆ ಮತ್ತು ಮಹಮದೀಯರಿಗೆ ದೇವರು ನಿರಾಕಾರ, ಆದರೆ ಸಗುಣ.

ಈ ಬಗ್ಗೆ ರಾಮಚಂದ್ರ ಗಾಂಧಿಯವರ ಜತೆ ಚರ್ಚಿಸುತ್ತಿದ್ದಾಗ ನನಗೊಂದು ಸಮಸ್ಯೆ ಉದ್ಭವವಾಯಿತು. ಆಗಲೇ ಇದನ್ನು ಕೇಳಿದೆ: `ನಿರಾಕಾರ/ಸಗುಣ ದೇವರಿದ್ದಂತೆ, ಎಲ್ಲಾದರೂ ದೇವರು ಸಾಕಾರ ಮತ್ತು ನಿರ್ಗುಣ ಆಗಿರುವುದು ಸಾಧ್ಯವೇ?'

ಅವರು ಒಂದು ವಿಚಿತ್ರವಾದ ಉತ್ತರ ಕೊಟ್ಟರು. ಅದನ್ನು ಅವರು ಅಂದಂತೆಯೇ ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ರಾಮಚಂದ್ರ ಗಾಂಧಿಯವರು `ಸಾಧ್ಯ, ಸಾಕಾರವಾಗಿದ್ದೂ ನಿರ್ಗುಣವಾಗಿರುವುದು ಬ್ಯೂರೋಕ್ರಸಿ' ಎಂದು ನನ್ನನ್ನು ಚಕಿತಗೊಳಿಸಿದರು.

***

ಜಗತ್ತಿನಲ್ಲಿ ಈಗ ಉಳಿದುಕೊಂಡಿರುವ ಏಕೈಕ ಪೇಗನ್‌ ಸಂಸ್ಕೃತಿ ನಮ್ಮದು. ಐರೋಪ್ಯ ದೇಶದ ಪೇಗನ್‌ ಸಂಸ್ಕೃತಿ ಎಷ್ಟು ನಾಶವಾಯಿತು ಅಂದರೆ ಇವತ್ತು ಅಪೋಲೋನಿಗೆ ಎಲ್ಲಿಯೂ ದೇವಸ್ಥಾನ ಇಲ್ಲ. ಆದರೆ ಇದು ಸಂಪೂರ್ಣ ನಾಶ ಅಲ್ಲ. ಯಾಕೆಂದರೆ ಯಾವುದೂ ಹಾಗೆ ನಾಶವಾಗುವುದಿಲ್ಲ. ಯುರೋಪಿನ ಎಲ್ಲ ದೊಡ್ಡ ಕವಿಗಳೂ ಮನೆಕಟ್ಟುವುದು ಈ ಪೇಗನ್‌ ದೇವತೆಗಳಿಗೇ. ಐರೋಪ್ಯ ಕಾವ್ಯ ಅಥವಾ ಇಂಗ್ಲಿಷ್‌ ಕಾವ್ಯವನ್ನು ಓದಿದರೆ ಇದು ಅರ್ಥವಾಗುತ್ತದೆ. ಅದರಲ್ಲಿ ಕಾಲವಾಗಿ ಹೋದ ಐರೋಪ್ಯ ದೇವತೆಗಳೆಲ್ಲಾ ಆ ಪದ್ಯಗಳಲ್ಲಿದ್ದಾರೆ. ಕೀಟ್ಸ್‌ನ ಪದ್ಯಗಳಲ್ಲಿ, ಏಟ್ಸ್‌ನ ಪದ್ಯಗಳಲ್ಲಿ, ಬ್ಲೇಕ್‌ನ ಪದ್ಯಗಳಲ್ಲಿ ಅಪೋಲೋ ಆದಿಯಾಗಿ ಎಲ್ಲ ದೇವತೆಗಳೂ ಬರುತ್ತಾರೆ. ದೇವಾಲಯವಿಲ್ಲದ ದೇವರುಗಳೆಲ್ಲಾ ಕಾವ್ಯ ದೇಗುಲಗಳಲ್ಲಿ ಉಳಿದಿದ್ದಾರೆ.

ನಮ್ಮ ದೇಶದ ಸಂಸ್ಕೃತಿ ಇನ್ನೂ ಪೇಗನ್‌ ಸಂಸ್ಕೃತಿಯಾಗಿ ಉಳಿದುಕೊಂಡು ಬಂದಿರುವುದರಿಂದ ಇಲ್ಲಿ ಕಾವ್ಯದಲ್ಲಿ ಮಾತ್ರ ಅಲ್ಲ , ನಿಜ ಜೀವನದಲ್ಲೂ ನಮ್ಮ ದೇವರುಗಳೆಲ್ಲಾ ಉಳಿದುಕೊಂಡು ಬಂದಿದ್ದಾರೆ.
ಒಂದು ಬೇವಿನ ಗಿಡ, ಒಂದು ಅಶ್ವತ್ಥದ ಗಿಡ ಒಟ್ಟಿಗೇ ಹುಟ್ಟಿದರೆ ಅದು ದೇವಸ್ಥಾನ ಅನ್ನಿಸಿಕೊಳ್ಳುತ್ತದೆ. ನಾವು ಪಾವಿತ್ರ್ಯವನ್ನು ಎಲ್ಲವುದರಲ್ಲೂ ಕಾಣುತ್ತೇವೆ. ಬೆಂಗಳೂರಿನ ಸಮೀಪವೇ ಒಂದು ಕಿರು ತಿರುಪತಿ ಇದೆ. ಅಲ್ಲೊಂದು ಶಾಲೆ ಇದೆ. ಆ ಶಾಲೆಯ ಯಾವುದೋ ಕಾರ್ಯಕ್ರಮಕ್ಕೆಂದು ನಾನು ಹೋಗಿದ್ದೆ. ಆಗ ಯಾರೋ ನನಗೆ `ಇಲ್ಲೊಂದು ತಿರುಪತಿ ದೇವಸ್ಥಾನ ಇದೆ. ದೂರದ ತಿರುಪತಿಯಲ್ಲಿ ಜನ ಸೇರುವ ಹಾಗೆ ಇಲ್ಲಿಯೂ ಸೇರುತ್ತಾರೆ. ನೀವು ಅಲ್ಲಿಗೆ ಬರಬೇಕು' ಎಂದು ಕರೆದರು. ನಾನು ಹೋದೆ.

`ಅಲ್ಲಿರುವ' ತಿರುಪತಿಗೆ ಇಲ್ಲಿ ಇನ್ನೊಂದು ತಿರುಪತಿ. ಅಂದರೆ ತಿರುಪತಿ ಅನ್ನೋದು ಒಂದೇ ಕಡೆ ಇರಬೇಕಾಗಿಲ್ಲ ಅನ್ನೋದು ನನಗೆ ನಿಜಕ್ಕೂ ಆಶ್ಚರ್ಯ ಹುಟ್ಟಿಸಿತು. ಹಾಗೆಂದು ಇದು ಪರ್ಯಾಯ ತಿರುಪತಿಯೂ ಅಲ್ಲ. ಅಲ್ಲಿರುವ ಯಾರೋ ಹೇಳಿದರು `ಅಲ್ಲಿರುವ ತಿರುಪತಿಯಲ್ಲಿ ದೇವರು ಕೈ ಹಿಡಿದುಕೊಂಡಿರುವ ರೀತಿಯೂ ಇಲ್ಲಿರುವ ರೀತಿಯೂ ಬೇರೆ ಬೇರೆ.' ನಮಗೆ ಕೈಯನ್ನು ಬೇರೆ ರೀತಿ ಇಟ್ಟುಕೊಂಡರೆ ಮತ್ತೊಂದು ದೇವರು ಸಿಕ್ಕಿ ಬಿಡುತ್ತಾರೆ.

ಕಿರುತಿರುಪತಿಯಲ್ಲಿ ನನಗೆ ವಿಶೇಷ ಅತಿಥಿ ಎಂಬ ಕಾರಣದಿಂದ, ಕ್ಯೂನಲ್ಲಿ ನಿಲ್ಲುವುದು ತಪ್ಪಿ ದೇವರ ದರ್ಶನವಾಯಿತು. ಅಲ್ಲಿರುವ ವೆಂಕಟೇಶ್ವರ ಕೈ ಹೇಗೆ ಇಟ್ಟುಕೊಂಡಿದ್ದ ಎಂಬುದನ್ನು ಮರೆತಿದ್ದೇನೆ. ದರ್ಶನ ಮುಗಿಸಿ ಹೊರ ಬರುವಾಗ ದರ್ಶನಕ್ಕಾಗಿ ನಿಂತಿದ್ದ ಕ್ಯೂನ ಉದ್ದಕ್ಕೂ ನಡೆದುಕೊಂಡು ಬಂದೆ. ನನ್ನನ್ನು ಆಗ ಕಾಡುತ್ತಾ ಇದ್ದದ್ದು ಒಂದೇ ಪ್ರಶ್ನೆ- ಇಷ್ಟೂ ಜನ ಹೇಗೆ ದೇವರ ದರ್ಶನ ಪಡೆಯುತ್ತಾರೆ?
ಕ್ಯೂ ಅನುಸರಿಸಿಯೇ ಹೋಗುತ್ತಿದ್ದಾಗ ಅಲ್ಲೊಂದು ನಡುವೆ ಕಪ್ಪಾದ ಕಲ್ಲಿತ್ತು. ಅದನ್ನು ಯಾರು ತಂದಿಟ್ಟಿದ್ದರೋ ಏನೋ? ಕೆಲವರು ಆ ಕಲ್ಲಿಗೇ ಅರಿಶಿನ, ಕುಂಕುಮ ಇಟ್ಟು ,ಕಾಯಿ ಒಡೆದು ಅಲ್ಲಿಂದಲೇ ಹಿಂದಿರುಗು ತ್ತಿದ್ದರು. ಆ ತಿರುಪತಿಗೆ ಇಲ್ಲೊಂದು ತಿರುಪತಿ ಇದ್ದರೆ ಈ ತಿರುಪತಿಗೆ ಅಲ್ಲೊಂದು ಕಲ್ಲಿಟ್ಟು ಮತ್ತೊಂದು ತಿರುಪತಿ ಮಾಡಿದ್ದರು. ದೇವರ ದರ್ಶನಕ್ಕೆ ಗರ್ಭಗುಡಿಯವರೆಗೂ ಹೋಗಲೇಬೇಕಾಗಿಲ್ಲ. ಆ ಕಲ್ಲಿಗೆ ಕಾಯಿ ಒಡೆದರೆ ಅವರ ಸಂಕಲ್ಪ ಪೂರ್ತಿಯಾಗಿಬಿಡುತ್ತದೆ. ಅದು ಒಂದು ಕಲ್ಲು. ಕುಂಕುಮ, ಅರಶಿನ ಹಚ್ಚಿದ ಕಲ್ಲು. ಅದರ ಮೇಲಷ್ಟು ಹೂವು. ಪಕ್ಕದಲ್ಲೊಂದು ಉರಿಯುವ ಹಣತೆ… ನಾವು ಭಾವಿಸಿದರೆ ಅದು ದೇವರು. ಅಲ್ಲದಿದ್ದರೆ ಅಲ್ಲ. ಇದು ನಮ್ಮ ದೇವತಾ ಕಲ್ಪನೆ.

ನನ್ನ ಹಾಗೆ ಬುದ್ಧಿವಂತರಾಗುತ್ತಾ ಹೋದಂತೆ ಇದು ಅಸಾಧ್ಯವಾಗುತ್ತಾ ಹೋಗುತ್ತದೆ… ಅಥವಾ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಂಕೇ ತಿಕತೆಯನ್ನು ಸೈದ್ಧಾಂತಿಕವಾಗಿ ವಿವರಿಸಿಕೊಳ್ಳಬೇಕಾಗುತ್ತದೆ. ನಾನೂ ಅಷ್ಟೇ. ವಿವರಿಸಿಕೊಳ್ಳುವ ಮೂಲಕ ಕಲ್ಲಿನಲ್ಲಿರುವ ದೇವರನ್ನು ಕಂಡುಕೊಳ್ಳುತ್ತಿ ದ್ದೇನೆ. ಇದು ನನ್ನ ಬಗ್ಗೆಯೇ ನಾನು ಮಾಡಿಕೊಳ್ಳುತ್ತಿರುವ ವಿಮರ್ಶೆ ಕೂಡಾ.

ನಂಬುವ ಶಕ್ತಿ ಅಂದರೆ ಆ ತಿರುಪತಿಗೆ ಈ ತಿರುಪತಿ, ಈ ತಿರುಪತಿ ಈ ಕಲ್ಲು . ಅದನ್ನು ಪೂಜೆ ಮಾಡಿದರೆ ಇದೂ ಕೂಡಾ ತಿರುಪತಿ ಎನ್ನುವುದನ್ನು ನಂಬುವವರು ಯಾರು? ನಾನು ಮೊದಲು ಹೇಳಿದ ಬರಿಗಾಲಿನಲ್ಲಿ ಶ್ರಾವಣ ಮಾಸ ಅಂತ ಓಡಾಡುತ್ತಾ ಇದ್ದರಲ್ಲ ಆ ಹೆಣ್ಣು ಮಗಳಂಥವರು. ಅದನ್ನು ನೋಡಿದಾಗ ನನಗೆ ಇನ್ನೊಂದು ಆಶ್ಚರ್ಯವಾಗುತ್ತದೆ. ಈ ರೀತಿಯಲ್ಲಿ ದೇವತಾ ಕಲ್ಪನೆಗಳನ್ನು ಈ ದೇಶದಲ್ಲಿ ಉಳಿಸಿಕೊಂಡು ಬಂದವರನ್ನು ನಾವು ಅಸ್ಪೃಶ್ಯರೆಂದೋ, ಶೂದ್ರರೆಂದೋ ಭಾವಿಸುತ್ತೇವೆ. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿದವರು ಮೇಲ್ಜಾತಿಯವರು ಮಾತ್ರವಲ್ಲ. ಉಳಿದ ಎಲ್ಲಾ ಜಾತಿಯವರು.

ಸೆಪ್ಟಂಬರ್‌ 11, ಕಮರ್ಷಿಯಲ್‌ ಬ್ರೇಕ್‌, ಆಡೆನ್‌ ಮತ್ತು ಗಾಂಧಿ

ಡಬ್ಲ್ಯು ಎಚ್‌ ಆಡೆನ್‌ ಎಂಬ ಕವಿ ಬರೆದ ಒಂದು ಕವನ ನನಗೆ ಬಹಳ ಮೆಚ್ಚುಗೆಯಾದ್ದು. Musee des Beaux Arts ಎಂಬ ಈ ಪದ್ಯದಲ್ಲಿ ಪುರಾತನರು ನಿಜತಿಳಿದ ಮಾಸ್ತರರು(Masters). ಈ ಪೂರ್ವ ಸೂರಿಗಳು ಪೂರ್ಣಪ್ರಜ್ಞರು. ಮಾನವನ ದಾರುಣ ದುಃಖದ ನಿಜ ಸ್ವರೂಪದ ಸಾಕ್ಷಿಗಳು. ಅವರಿಗೆ ಗೊತ್ತಿದೆ: ಅತ್ಯಂತ ದಾರುಣವಾದ ಒಂದು ಘಟನೆ ನಡೆಯುವ ಹೊತ್ತಿನಲ್ಲೇ ಯಾರೋ ಊಟ ಮಾಡುತ್ತಿರುತ್ತಾರೆ. ಯಾರೋ ಕಿಟಕಿಯ ಬಾಗಿಲು ತೆರೆಯುತ್ತಿರುತ್ತಾರೆ. ಯಾರೋ ಉದಾಸೀನದಲ್ಲಿ ನಡೆದಾಡುತ್ತಿರುತ್ತಾರೆ. ಹಾಗೆಯೇ ದೇವರ ಪುನರಾವತಾರದ ದಿವ್ಯ ಮುಹೂರ್ತಕ್ಕಾಗಿ ಆತುರದಲ್ಲಿ ವೃದ್ಧರಾದ ಭಕ್ತರು ಕಾಯುತ್ತಿರುವಾಗ ಇಂಥದೇನೂ ಮುಖ್ಯವೆಂದು ತಿಳಿಯದ ಮಕ್ಕಳು ತೋಟದಲ್ಲಿನ ಕೊಳದ ದಂಡೆಯ ಮೇಲೆ ಜಾರುತ್ತ, ಕುಂಟುತ್ತ ಆಟವಾಡುತ್ತಿರುತ್ತಾರೆ. ಏಸು ಕ್ರಿಸ್ತನು ಶಿಲುಬೆಗೇರುವುದು ಯಾವುದೋ ಕೊಳೆ ಕಸಗಳು ತುಂಬಿದ ಒಂದು ಮೂಲೆಯಲ್ಲಿ. ಆ ಹೊತ್ತಿಗೆ ಯಾವುದೋ ಬೀದಿ ನಾು ತನ್ನ ಎಂದಿನ ನಾಯಿಪಾಡಿನಲ್ಲಿ ಅಲೆಯುತ್ತಿರುತ್ತದೆ. ಮರಣ ದಂಡನೆಯನ್ನು ಚಲಾಯಿಸಲು ಬಂದವನ ಕುದುರೆ ತನ್ನ ಮುಗ್ಧ ಅಂಡನ್ನು ಯಾವುದೋ ಮರಕ್ಕೆ ತುರಿಕೆ ಕಳೆಯಲು ಬಾಲವೆತ್ತಿ ಉಜ್ಜಿಕೊಳ್ಳುತ್ತಿರುತ್ತದೆ. ಅಪೂರ್ವವೆಂದು ನಮಗೆ ಅನ್ನಿಸುವುದು ಜರಗುವುದು ನಿತ್ಯದ ನಿರಂತರದ ಸಂದರ್ಭದಲ್ಲಿ, ಅದರ ನಿರ್ಲಕ್ಷ್ಯದಲ್ಲಿ ಕೂಡಾ.

ಹದಿನಾರನೇ ಶತಮಾನದ ಬ್ರೂಗೆಲ್‌ ಎಂಬ ಕಲಾವಿದನ ಇಕಾರೆಸ್‌ ಎಂಬ ಚಿತ್ರವನ್ನು ಉದಾಹರಣೆಯಾಗಿ ಆಡೆನ್‌ ಕೊಡುತ್ತಾನೆ. ಚಿತ್ರದ ಕತೆ ಹೀಗಿದೆ. ಡೆಡಾಲಸ್‌ ಎನ್ನುವ ಕುಶಲಕರ್ಮಿ ತನ್ನ ದೊರೆಗೆ ಕಲ್ಪಿಸಿ ಕೊಟ್ಟ ವ್ಯೂಹದಲ್ಲಿ ತಾನೇ ಬಂಧಿಯಾಗಿರುತ್ತಾನೆ- ಮಗ ಇಕಾರಸ್‌ನ ಜೊತೆ. ಈ ಮಗನಿಗೆ ಕುಶಲಕರ್ಮಿಯಾದ ತಂದೆ ರೆಕ್ಕೆಗಳನ್ನು ಸೃಷ್ಟಿಸಿ ಅಂಟಿಸಿ ವ್ಯೂಹದಿಂದ ಪಾರಾಗಲು ಅವಕಾಶ ಮಾಡಿಕೊಡುತ್ತಾನೆ. ಬಾಲನಾದ ಇಕಾರೆಸ್‌ ಹಾರುತ್ತಾ ಹಾರುತ್ತಾ ಸೂರ್ಯನಿಗೆ ಹತ್ತಿರವಾಗಿ ರೆಕ್ಕೆಯ ಮೇಣ ಕರಗಿ ಕೆಳಗೆ ಬೀಳುತ್ತಾನೆ. ಈ ದೃಶ್ಯವನ್ನು ಬ್ರೂಗಲ್‌ ಚಿತ್ರಿಸಿದ್ದಾನೆ. ಈ ಚಿತ್ರದಲ್ಲಿ ತನ್ನ ಭೂಮಿಯನ್ನು ಉಳುತ್ತಿರುವ ರೈತನೊಬ್ಬನಿದ್ದಾನೆ. ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿರುವ ಈ ರೈತನಿಗೆ ಇಕಾರೆಸ್ಸಿನ ರೋದನ ಕೇಳಿದ್ದೀತು; ಅವನು ಸಮುದ್ರಕ್ಕೆ ದೊಪ್ಪೆಂದು ಬಿದ್ದು ಮುಳುಗುವಾಗಿನ ಶಬ್ದವೂ ಕೇಳಿದ್ದೀತು. ಆದರೆ ರೈತನಿಗೆ ಇದೇನೂ ಅಷ್ಟು ಮುಖ್ಯವಾದ ನಷ್ಟವಲ್ಲ; ತನ್ನ ಉಳುವ ಕಾಯಕದಲ್ಲಿ ಅವನು ಮಗ್ನ. ಸಮುದ್ರದ ಹಸಿರಾದ ನೀರಿನಲ್ಲಿ ಮುಳುಗುತ್ತಿರುವ ಇಕಾರೆಸ್‌ ನ ಬಿಳಿಯ ಪಾದಗಳ ಮೇಲೆ ಸೂರ್ಯನ ಹೊಳೆಯುವ ಕಿರಣಗಳು ಬಿದ್ದಿವೆ- ನಿರುದ್ದೇಶವಾಗಿ, ಅನಿವಾರ್ಯವಾಗಿ. ಈ ಚಿತ್ರದಲ್ಲಿ ಶ್ರೀಮಂತವೆಂದು ತೋರುವ ಅಚ್ಚುಕಟ್ಟಿನ ಹಡಗೊಂದು ತೇಲುತ್ತಿದೆ. ಹಡಗಿನಲ್ಲಿ ಕೂತವರು ಬಾಲನೊಬ್ಬ ಆಕಾಶದಿಂದ ಅನಾಮತ್ತಾಗಿ ಬೀಳುವ ಭೀಕರವಾದ ದೃಶ್ಯವೊಂದನ್ನು ನೋಡಿರಬಹುದು. ಆದರೆ ಆ ಹಡಗಿಗೆ ತನ್ನದೇ ಆದ ಗೊತ್ತು ಗುರಿಗಳಿವೆ; ಚಲಿಸುತ್ತಲೇ ಇರಬೇಕಾದ್ದು ಅದರ ಪಾಡು.

ಎರಡನೇ ಮಹಾಯುದ್ಧದ ಸಮಯದಲ್ಲಿ ಆಡೆನ್‌ ಬರೆದ ಈ ಪದ್ಯ ಸರ್ವಗ್ರಾಹಿಯಾದ ಎಪಿಕ್‌ ಕಲ್ಪನೆಯ ಚಿತ್ರವೊಂದನ್ನು ನಮ್ಮ ಎದುರು ಇಡುತ್ತದೆ. ಈ ಪದ್ಯ ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಪದ್ಯವನ್ನು ಧಾರಣ ಮಾಡುವ ಪ್ರತಿಮೆ ಒಂದು ಮುಗ್ಧ ಬಾಲಕನ ಆಕಸ್ಮಿಕವಾದ ಅರ್ಥಶೂನ್ಯವಾದ ಸಾವಿನದು. ತನ್ನ ಪಾಡಿಗೆ ತಾನಿರುವ ಈ ಚಿತ್ರದ ಜೀವಿಗಳೂ ಕೇಡಿಗರಲ್ಲ. ಆದರೆ ಪದ್ಯದಲ್ಲಿ ಕ್ರಿಸ್ತನನ್ನು ಕೊಲ್ಲುವುದೂ, ಕ್ರಿಸ್ತನೊಬ್ಬ ಹುಟ್ಟುವುದೂ, ಇದರ ಸುತ್ತ ತಮ್ಮ ಪಾಡಿಗೆ ತಾವಿರುವ ಬದುಕಿನ ದೈನಿಕ ಸತ್ಯಗಳೂ ಬರುತ್ತವೆ. ಇಲ್ಲಿ ಆರೋಪವಿಲ್ಲ; ತಟಸ್ಥವೂ, ಪ್ರಾಯಶಃ ಇದು ಇರುವುದೇ ಹೀಗೆಂಬ ಸರ್ವಸ್ವೀಕಾರದ ನೋಟವೂ ಇದೆ.

ನಾವೀಗ ನಿತ್ಯ ಎದುರಾಗುತ್ತಿರುವ ಉದ್ದೇಶಪೂರ್ವಕವಾದ ದೌರ್ಜನ್ಯಗಳನ್ನು, ಸಂಕಟಗಳನ್ನು ಆಡೆನ್ನಿನ ಪೂರ್ವಸೂರಿಗಳ ಕಣ್ಣಿನಿಂದ ನೊಡುವುದು ಸಾಧ್ಯವೆ? ಮುಂಬೈಯಲ್ಲಿ ಸ್ಫೋಟವಾಗಿ ಜನ ಸಾಯುತ್ತಾರೆ. ವಿದ್ಯಾರ್ಥಿಗಳ ಗುಂಪೊಂದು ಪ್ರೊಫೆಸರ್‌ ಒಬ್ಬರನ್ನು ದಬ್ಬಿ ಬಡಿದು ಕೊಲ್ಲುತ್ತಾರೆ. ಗಣಿಯೊಂದರಲ್ಲಿ ಬಡ ಕಾರ್ಮಿಕರು ಸಿಕ್ಕಿಬಿದ್ದು ಉಸಿರು ಕಟ್ಟಿ ಸಾಯುತ್ತಾರೆ. ಇವೆಲ್ಲವನ್ನೂ ಕಾಣುತ್ತಲೇ ದುಃಖ ಪಡುತ್ತಲೇ ಹಾಗೆಂದು ಮಾತಾಡುತ್ತಲೇ ನಮ್ಮ ದೈನಿಕಗಳಲ್ಲಿ ನಾವು ಮತ್ತೆ ತೊಡಗಿರುತ್ತೇವೆ. ಈ ದಾರುಣ ಪ್ರಸಂಗಗಳು ಜರುಗುವಾಗ ಯಾವುದೋ ಬೀದಿಯ ಬದಿಯಲ್ಲಿ ಒಬ್ಬ ಕಡಲೆಕಾಯಿ ಮಾರುತ್ತಾ ಕೂತಿರುತ್ತಾನೆ. ಯಾರೋ ಕೆಲಸವಿಲ್ಲದ ಸೋಮಾರಿ ನೊಣ ಹೊಡೆದುಕೊಂಡು ಬಿಸಿಲು ಕಾಯುತ್ತಾನೆ. ಟೆಲಿವಿಷನ್‌ ನಲ್ಲಿ ಈ ರುದ್ರ ಘಟನೆಗಳನ್ನು ನೋಡುವಾಗಲಂತೂ ನಡು ನಡುವೆ ಕಮರ್ಷಿಯಲ್‌ ಬ್ರೇಕ್‌ ಗಳು ಇರುತ್ತವೆ: ಆಗ ಕಪ್ಪು ತಲೆಗೂದಲಿನ ಬಿಳಿಗಡ್ಡದ ಬಚ್ಚನ್‌ ಬಂದು ಸೋಪು ಮಾರುತ್ತಾನೆ. ಸಚಿನ್‌ ಟೈರ್‌ ಮಾರುತ್ತಾನೆ. ಅಮೀರ್‌ ಖಾನ್‌ ಕೋಕ್‌ ಮಾರುತ್ತಾನೆ. ಶಾರೂಖ್‌ ಪೆಪ್ಸಿ ಮಾರುತ್ತಾನೆ. ಮತ್ತೆ ಬೆಂಕಿಯಲ್ಲಿ ಉರಿಯುತ್ತಿರುವ ಬಸ್ಸುಗಳನ್ನು ನೋಡುತ್ತೇವೆ. ಗಾಯದಿಂದ ವಿಕಾರವಾದ ಮುಖಗಳನ್ನು ನೋಡುತ್ತೇವೆ. ಸತ್ತ ಬಾಲಬಾಲೆಯರ ಹೆಣಗಳನ್ನು ನೋಡುತ್ತೇವೆ. ಮತ್ತೆ ಬ್ರೇಕ್‌ ಸಿಗುತ್ತದೆ ನಮ್ಮನ್ನು ಕುತೂಹಲದಲ್ಲಿ ಕಾಯುವಂತೆ ಶಾರ್ಟ ಬ್ರೇಕ್‌ ಎಂದು ಪುಸಲಾಯಿಸುವ ಸುಕುಮಾರಿಯ ಕೋರಿಕೆಯಲ್ಲಿ. ಮತ್ತೆ ವಿದ್ವಜ್ಜನರಿಂದ ಇನ್ನೊಂದು ಕಮರ್ಷಿಮಯಲ್‌ ಬ್ರೇಕ್‌ ಗೆ ಅಡ್ಡಿಯಾಗದಂತೆ ವಿಶ್ಲೇಷಣ, ಖಂಡನೆ ಮಂಡನೆಗಳು ನಡೆಯುತ್ತವೆ.

ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ವಿಮಾನ ಬಂದು ಅಪ್ಪಳಿಸಿ ಅಲ್ಲಿನ ನೂರಾರು ಜನರನ್ನು ಭಸ್ಮಗೊಳಿಸಿದ್ದನ್ನು ಏರ್‌ ಪೋರ್ಟ್‌ನಲ್ಲಿ ಸ್ವೀಡನ್ನಿಗೆ ಹೋಗಲು ಕಾಫಿ ಕುಡಿಯುತ್ತಾ ಕಾದು ಕೂತ ನಾನು ನೋಡಿದ್ದು. ಅದೊಂದು ಮಾನವ ಹೃದಯವನ್ನೇ ಬದಲು ಮಾಡಬಹುದಾದ ಘಟನೆಯಾಗಿತ್ತು. ಆದರೆ ನಾವೆಲ್ಲರೂ ಮಾಡಬೇಕಾದ ಕೆಲಸಗಳನ್ನು ಮಾಡುತ್ತಲೇ ಹೋದೆವು. ಅಮೆರಿಕ ಅಂತೂ ತನ್ನ ಮುಂದಿನ ಕೆಲಸಗಳಿಗೆ ಈ ಭಯಂಕರ ಘಟನೆಯನ್ನು ಒಳ್ಳೆಯ ನೆವ ಮಾಡಿಕೊಂಡು ಬಳಸಲು ಶುರು ಮಾಡಿತು.

ನಾವು ಭಾರತೀಯರು ಕರ್ಮದಲ್ಲಿ ನಂಬುತ್ತೇವೆ. ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ ಎಂದು ತಿಳಿಯುತ್ತೇವೆ. ವರ್ಲ್ಡ್ ಟ್ರೇಡ್‌ ಸೆಂಟರ್‌ ರನ್ನು ದುಷ್ಕರ್ಮಿಗಳು ನಾಶಮಾಡಿದ ಹಿನ್ನೆಲೆಯಲ್ಲಿ ಅಮೆರಿಕಾದ ಹಲವು ಪಾಪಕೃತ್ಯಗಳು ಇವೆ. ಪಾಲೆಸ್ಟೀನ್‌, ಚಿಲಿ, ಹಿರೋಶಿಮಾ, ನಾಗಸಾಕಿ- ಒಂದೇ ಎರಡೇ? ಹಲವು ಮುಗ್ಧರು ಅಮೆರಿಕಾದಲ್ಲಿ ಸತ್ತರು. ಹಲವು ಬಡಪಾಯಿಗಳು ಪಾಲಿಸ್ಟೇನಿನಲ್ಲಿ ಸತ್ತರು. ಚಿಲಿಯಲ್ಲಿ ಸತ್ತರು. ಮುಸ್ಲಿಮ್‌ ದೊರೆಗಳು, ನವಾಬರು ಬಲವಾದರು. ಇದರಿಂದ ಅಮೆರಿಕಾ ಕಲಿತದ್ದೇನು? ಬದಲಾಗಿ, ಟೆರರಿಸಂ ಅನ್ನು ನಾಶ ಮಾಡುವ ನೆವದಲ್ಲಿ ಅಮೆರಿಕಕ್ಕೆ ಸಿಕ್ಕ ಫಲ ನೋಡಿ. ಆಪ್ಘಾನಿಸ್ಥಾನ ಅವರ ಕೈವಶವಾಯಿತು. ಈಗ ಇರಾಕ್‌ ಅವರ ಕೈವಶವಾಯಿತು. ಪಾಕಿಸ್ಥಾನ ಮತ್ತು ಭಾರತ ಪರಸ್ಪರ ಶಾಂತಿಯನ್ನು ಬಯಸುವುದೂ ಅಮೆರಿಕದ ಅಭಿವೃದ್ಧಿಗೆ ಅಗತ್ಯವಾದಂತಾುತು. ಈಗ ಬುಶ್‌ ನ ಖ್ಯಾತಿ ಸ್ವಲ್ಪ ತಗ್ಗಿದೆಯಂತೆ. ಆದರೆ ಇನ್ನೊಬ್ಬ ಬಂದು ಅವನ ಜಾಗದಲ್ಲಿ ಕುಳಿತು ಅನಿವಾರ್ಯವೆಂಬಂತೆ ತನ್ನ ಹಿಂದಿನವರು ಮಾಡಿದ್ದನ್ನೇ ಮುಂದುವರಿಸುತ್ತಾನೆ. ಕಮರ್ಷಿಯಲ್‌ ಬ್ರೇಕ್‌ ಗಳು ಆಗೀಗ ಇದ್ದೇ ಇರುತ್ತವೆ.

ನಾನು ತುಂಬ ಇಷ್ಟ ಪಡುವ ಹಲವು ಅಮೇರಿಕನ್‌ ಮಿತ್ರರು ನನಗಿದ್ದಾರೆ. ಇವರೆಲ್ಲರೂ ಬುಶ್‌ ನನ್ನು ಕಟುವಾಗಿ ಟೀಕಿಸುತ್ತಾರೆ. ಆದರೂ ಆಡೆನ್‌ ತನ್ನ ಪದ್ಯದಲ್ಲಿ ಹೇಳುವಂತೆ ತನ್ನ ಪಾಡಿಗೆ ಸಾಗುವ ಜೀವನ ಸಾಗುತ್ತಲೇ ಇರುತ್ತದೆ. ಅಮೆರಿಕ ಒಂದು ದೇಶವಾಗಿ ಒಂದು ಅಂಗಿಯನ್ನು ತಾನೇ ತಯಾರು ಮಾಡಿ ಪ್ರಪಂಚದಲ್ಲಿ ಮಾರಲಾರದು. ಅವರೇ ಒಂದು ಅಂಗಿಯನ್ನು ಹೊಲಿದು ಸಿದ್ಧ ಪಡಿಸುವುದಾದರೆ ಈಗ ಇರುವ ಬೆಲೆಯ ಹತ್ತರಷ್ಟಾದರೂ ಅದೇ ಅಂಗಿಯ ಬೆಲೆಯಾಗಿರುತ್ತದೆ. ಅಂಗಿ, ಚೆಡ್ಡಿ, ಚಹಾ, ಕಾಫಿ, ಗೋದಿ ಮಾರಿ ಅವರು ಸಮೃದ್ಧರಾಗಿರುವುದಲ್ಲ; ಅವರ ಶ್ರೀಮಂತಿಕೆಯ ಮೂಲವಿರುವುದು ಅವರು ಮಾರುವ ಯುದ್ಧ ಸಾಮಾಗ್ರಿಗಳಲ್ಲಿ. ಆ ಯುದ್ಧ ಸಾಮಾಗ್ರಿಗಳನ್ನು ಬಳಸುವುದಕ್ಕಾಗಿಯೇ ಅಫ್ಘಾನಿಸ್ಥಾನ್‌, ಇರಾಕ್‌ ನಲ್ಲಿ ಅವರೇ ಸಮಸ್ಯೆಯನ್ನು ಹುಟ್ಟುಹಾಕಿ, ಅದು ತಮ್ಮ ಮೇಲೆಯ ಎಗರುವಂತೆ ಮಾಡಿಕೊಂಡು, ಅದನ್ನು ನಿವಾರಿಸಿ ಕೊಳ್ಳಲು ಮತ್ತಷ್ಟು ಯುದ್ಧ ಸಾಮಗ್ರಿಗಳನ್ನು ಸೃಷ್ಟಿಸಿ, ರಾಷ್ಟ್ರಗಳ ನಡುವೆ ಇಲ್ಲದ ಜಗಳವನ್ನು ಹುಟ್ಟು ಹಾಕಿ ಅಮೇರಿಕ ಹಿಗ್ಗುತ್ತಿದೆ. ಈಗ ಅದರ ಕಣ್ಣು ಇರಾನಿನ ಮೇಲೆ. ಇದನ್ನು ತಡೆಯಬಲ್ಲವರು ಯಾರು?

ಶ್ರೇಷ್ಠವೆಂದು ನಾವು ಮೆಚ್ಚುವ ದೊಡ್ಡ ವಿದ್ಯಾಸಂಸ್ಥೆಗಳು, ನೊಬೆಲ್‌ ಪಾರಿತೋಷಕ ಪಡೆದ ಮಹಾ ವಿದ್ವಾಂಸರು, ಇವರು ನಡೆಸುವ ಹೊಸ ಪ್ರಯೋಗಗಳು- ಎಲ್ಲವುದಕ್ಕೂ ಅಮೆರಿಕಾವೇ ಈಗ ತಾಣ. ಯೂರೋಪಿನ ಘನ ವಿಜ್ಞಾನಿಗಳೂ ತಮ್ಮ ಸಂಶೋಧನೆಗಳನ್ನು ಪ್ರಕಟಿಸುವ ಭಾಷೆ ಕ್ರಮೇಣ ಅಮೆರಿಕಾದ ಇಂಗ್ಲಿಷಿನಲ್ಲಿ ಎಂದು ಕೇಳಿದ್ದೇನೆ. ಅದರ ಸಂಸ್ಕೃತಿ ಈಗ ಸರ್ವವ್ಯಾಪಿ- ಅದರ ಕೊಕೋಕೋಲಾದಂತೆ, ಕೆಂಟುಕಿ ಚಿಕನ್‌ ನಂತೆ, ತರಹೇವಾರಿ ಬರ್ಗರ್‌ ನಂತೆ.

ಅಮೆರಿಕದ ರಾಜಕೀಯ ನೀತಿಯನ್ನು ಟೀಕಿಸುವ ಸದ್ಗೃಹಸ್ಥರೇ ತಮ್ಮ ದೇಶದಲ್ಲಿ ಕಷ್ಟದ ಜೀವನ ನಡೆಸಬೇಕಾಗಿ ಬರುವುದನ್ನು ಸಹಿಸಿಕೊಳ್ಳಲಾರರೇನೋ? ಅಮೆರಿಕದಲ್ಲಿ ಆದಾಯತೆರಿಗೆ ಹೆಚ್ಚಿಸುವಂತಿಲ್ಲ; ಬ್ರೆಡ್ಡು ಹಾಲಿನ ಬೆಲೆ ಏರುವಂತಿಲ್ಲ; ಪೆಟ್ರೋಲ್‌ ಬೆಲೆಯಂತೂ ಏರುವುದು ಸಾಧ್ಯವೇ ಇಲ್ಲ. ಸಾಯಲೇ ಬೇಕಾದ ಇಳಿವಯಸ್ಸಿನಲ್ಲಿ ಯಾರೂ ಸಾಯುವಂತಿಲ್ಲ. ಮುದಿಯಾಗುವುದು ತೋರದಂತೆ ಮಾಡುವ ಅಮರ್ತ್ಯರಾಗುವ ಕನಸ್ಸಿನ ಭ್ರಮಾದೇವಲೋಕ ಆಧುನಿಕ ಅಮೇರಿಕಾ.

ಯಾರೋ ಕೆಲವು ದುಷ್ಟರ ಸಂಚಿನಿಂದ ಹೀಗೆಲ್ಲಾ ಆಗುತ್ತಿದೆ, ಮನುಷ್ಯನ ಸ್ವಭಾವವೇ ಹೀಗೆ ಇತ್ಯಾದಿ ಕಾರಣಗಳನ್ನು ಕೊಟ್ಟು ಸಮಾಧಾನ ಪಡಬಲ್ಲ ವಿಷಯವಲ್ಲ ಇದು. ಪಿ. ಸಾಯಿನಾಥ್‌ ಎನ್ನುವ ಧೀಮಂತ ಚಿಂತಕರೊಬ್ಬರು ಹಿಂದೂ ಪತ್ರಿಕೆಯಲ್ಲಿ ಮೂರು ಸೆಪ್ತೆಂಬರ್‌ 11ಗಳು ಇವೆ, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದು ಕೊಳ್ಳಿ ಎನ್ನುತ್ತಾರೆ.

***

ಆಡೆನ್‌ ಮಾಸ್ತರರೆಂದು ಕರೆಯುವ ಪೂರ್ವ ಸೂರಿಗಳು ತಮ್ಮ ಪೂರ್ಣ ದೃಷ್ಟಿಯಲ್ಲಿ ಥಟ್ಟನೆ ಎದುರಾಗುವ ದುರಂತವನ್ನು ನಿತ್ಯದ ನಿರಂತರ ಉಸಿರಾಟದ ದೈನಿಕಗಳ ಸಂದರ್ಭದಲ್ಲಿಟ್ಟು ನೋಡುವುದರಲ್ಲಿ ಇರುವ ಸತ್ಯ ನಮ್ಮ ಅರಿವನ್ನು ಕಲಕುತ್ತದೆ. ಆದರೆ ನಮ್ಮ ಕಾಲದ ದುರಂತಗಳು ಹರಿಯುವ ಜೀವನದಲ್ಲಿ ಅನಿವಾರ್ಯವಾಗಿ ಒದಗಿ ಬರುವ ಅಕಸ್ಮಿಕಗಳಲ್ಲ. ನಾವೇ ನಮ್ಮ ದುರಾಸೆಯಲ್ಲೂ ಸರ್ವಶಕ್ತರೆನ್ನುವ ಗರ್ವದಲ್ಲೂ ಖುದ್ದಾಗಿ ಸೃಷ್ಟಿಸುವ ಕ್ರೂರ ದುರಂತಗಳು. ಆದ್ದರಿಂದ, ಅಮೇರಿಕಾದ ಧೀರ ಚಿಂತಕ ನೋಮ್‌ ಚಾಂಸ್ಕಿಯಹಾಗೆ ನಾವು ಸತ್ಯ ಪಕ್ಷಪಾತಿಯಾಗಿ ಹೋರಾಡುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಸಾಯಿನಾಥರು ನ್ಯೂಯಾರ್ಕನಲ್ಲಿ 2001ರಲ್ಲಿ ನಡೆದ ಘಟನೆಯ ಜತೆ ಚಿಲಿಯಲ್ಲಿ ಒಂದು ಹೊಸ ಯುಗಕ್ಕಾಗಿ ಸಮಾಜವಾದೀ ಸಾಲ್ವಡೋರ್‌ ಅಲಂಡೆ ಮಾಡಿದ ಹೋರಾಟವನ್ನು ನೆನೆಯುತ್ತಾರೆ. ಈ ಸಮಾಜವಾದೀ ಪ್ರಯತ್ನವನ್ನು ಅಮೆರಿಕ ನಾಶ ಮಾಡಿದ್ದೂ ಸೆ.11ರಂದೇ. ಆಶ್ಚರ್ಯವೆಂದರೆ, ಇದೇ ಸೆ.11 ನೇ ತಾರೀಕು 100 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಜೋಹನ್ನೆಸ್‌ ಬರ್ಗ್‌ ನಲ್ಲಿ ಗಾಂಧೀಜಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಎಂಬುದನ್ನು ನಮ್ಮ ಮನಸ್ಸು ಕಲಕುವಂತೆ ಸಾಯಿನಾಥರು ನೆನಪು ಮಾಡುತ್ತಾರೆ.

ನಮ್ಮನ್ನು ನಾಶಮಾಡುತ್ತಿರುವ ಭಯೋತ್ಪಾಕರ ಬಳಿ ಇರುವ ಗನ್ನುಗಳು ಅಮೆರಿಕನ್ನರೇ ತಾಲಿಬಾನ್‌ ಗಳಿಗೆ ಒದಗಿಸಿದಂಥವು. ಆದರೆ ಸದ್ದಾಂ ಹುಸೇನನ ಬಳಿ ಇವು ಯಾವುವೂ ಇರಲಿಲ್ಲ. ಅವನು ಬಹಳ ಹಿಂದೆ ಅಮೆರಿಕದಿಂದ ಪಡೆದ ಅಂತಹ ಮಾರಕ ಅಸ್ತ್ರಗಳನ್ನು ಇರಾನಿನ ಮೇಲೆ ಬಳಸಿ ಕಳೆದು ಕೊಂಡಿದ್ದ. ಅವನೂ ಒಬ್ಬ ದುಷ್ಟನೇ. ದೇಸೀ ದುಷ್ಟ ಅವನಾದರೆ ಅಮೇರಿಕಾದ ಬುಷ್‌ ಗೌರವಾನ್ವಿತ ಅಂತಾರಾಷ್ಟ್ರೀಯ ದುಷ್ಟ.

ಇಲ್ಲದ weapons of mass destruction ಹುಡುಕುವ ನೆವದಲ್ಲಿ ಇರಾಕನ್ನು ಅಮೇರಿಕಾ ವಶಪಡಿಸಿಕೊಂಡಿತು- ಪೆಟ್ರೋಲಿಗಾಗಿ. ಆದರೆ ಗಾಂಧೀಜಿ ನೂರು ವರ್ಷಗಳ ಹಿಂದೆ ಇದೇ ದಿನ weapon of mass disobedience ನ್ನು ಅನಾವರಣಗೊಳಿಸಿದರು- ಕೆಡುಕಿನಿಂದ ಮಾನವನನ್ನು ಮುಕ್ತಗೊಳಿಸಲಿಕ್ಕಾಗಿ ಎನ್ನುತ್ತಾರೆ ಸಾಯಿನಾಥರು.

***

ನಾವೆಲ್ಲಾ ಸಮುದ್ರ ಮಂಥನದ ಕಥೆ ಕೇಳಿರುತ್ತೇವೆ. ಆಗ ಹುಟ್ಟಿದ ಹಾಲಾಹಲವನ್ನ್ನು ಶಿವ ತನ್ನ ಗಂಟಲಿನಲ್ಲಿ ಸ್ವೀಕರಿಸಿದ್ದನ್ನು ಓದಿದ್ದೇವೆ. ಹೀಗೆ ಅಮೃತದ ಬಟ್ಟಲಿಗಾಗಿ ನಡೆಯುವ ಹೋರಾಟವಂತೂ ನಮ್ಮ ಪುರಾಣಗಳಲ್ಲಿ ಬಹಳ ಕಾಲ ಸಾಗಿತು. ಇದರಲ್ಲಿ ಗೆದ್ದವರು ದೇವತೆಗಳಾದರು. ಸೋತವರು ರಾಕ್ಷಸರಾದರು. ಹೀಗಾದನಂತರ ನಾವು ದೇವತೆಗಳು ಗೆದ್ದರು ರಾಕ್ಷಸರು ಸೋತರು ಎಂದುಕೊಳ್ಳುವುದು ಸಾಧ್ಯವಾಗಿ ಸಾಧುವೂ ಆಯಿತು.

ಈಗಿನ ಅಮೃತದ ಬಟ್ಟಲು ಪೆಟ್ರೋಲ್‌ ಸಿಗುವ ಜಾಗಗಳು. ಪೈಪೋಟಿಯಲ್ಲಿ ಈಗ ಸೋವಿಯತ್‌ ರಾಕ್ಷಸನಿಲ್ಲ. ಅಥವಾ ಪೆಟ್ರೋಲಿಗೆ ಸಂಬಂಧಿಸಿದಂತೆ ಯಾವತ್ತೂ ರಾಕ್ಷಸರೂ ಇರಲಿಲ್ಲ. ದೇವತೆಗಳೂ ಇರಲಿಲ್ಲ. ಅಮೆರಿಕ ತನ್ನೊಳಗೇ ಎರಡನ್ನೂ ಇಟ್ಟುಕೊಂಡಂತೆ ನಮ್ಮೆಲ್ಲರಿಗೆ ಆಕರ್ಷಕವಾದ ತಾಣವೂ ಆಗಿದೆ, ಭಯೋತ್ಪಾದನೆಯನ್ನು ಉಂಟು ಮಾಡುವ ತಾಣವೂ ಆಗಿದೆ. ಮಾರಕ ಅಸ್ತ್ರಗಳ ಸೃಷ್ಟಿಯಿಂದಲೇ ಒಂದು ಅರ್ಥ ವ್ಯವಸ್ಥೆ ಸಮೃದ್ಧವಾಗುವುದು ಅಸಾಧ್ಯವಾಗದ ಹೊರತು ಕಾಮರೂಪಿಯಾದ ಅಮೆರಿಕ ಬದಲಾಗದು

ಹಿಂಸೆಗೆ ಪ್ರತಿಹಿಂಸೆಮಾಡುವ ದೃಶ್ಯಗಳನ್ನು ಬೆಪ್ಪಾಗಿ ಕಮರ್ಷಿಯಲ್‌ ಬ್ರೇಕ್‌ ಗಳ ನಡುವೆ ನೋಡುತ್ತಿರುವ ನಾನು ಹಿಂದಿನ ಒಂದು ಲೇಖನದಲ್ಲಿ ಸೂಚಿಸಿದ ರೂಪಕವನ್ನು ಮತ್ತೆ ನೆನೆಯಲು ಇಚ್ಛಿಸುತ್ತೇನೆ. ಕೆಡುಕನ್ನು ನೋಡಬೇಡ, ಕೆಡುಕನ್ನು ಕೇಳಿಸಿಕೊಳ್ಳಬೇಡ, ಕೆಡುಕನ್ನು ಮಾತಾಡಬೇಡ ಎಂದು ಕಣ್ಣು ಕಿವಿ ಬಾಯಿಗಳನ್ನು ಮುಚ್ಚಿಕೊಂಡ ಮೂರು ಮಂಗಗಳನ್ನು ಆದರ್ಶಮಾಡಿಕೊಂಡಿದ್ದ ಗಾಂಧೀಜಿ ಇದ್ದದ್ದು ಮಾತ್ರ ಸತತ ಕ್ರಿಯಾಶೀಲನಾಗಿ, ಸಾಯುವ ತನಕ ಕೆಡುಕನ್ನು ಸತತವಾಗಿ ಎದುರಿಸಿದ ಸತ್ಯಾಗ್ರಹಿಯಾಗಿ. ವಿರೋದಾಭಾಸದಂತೆ ಕಾಣುವ, ಆದರೆ ಒಂದಕ್ಕೊಂದು ಪೂರಕವಾದ, ಈ ರೂಪಕದಲ್ಲಿರುವ ನಾವು ಪಡೆಯಬೇಕಾದ ಅಂತರಂಗ ಶುದ್ಧತೆ ಮತ್ತು ಬಹಿರಂಗ ಮಾತ್ರವಾಗದ ಕ್ರಿಯಾಶೀಲತೆ ಅನಾವರಣಗೊಂಡ ನೂರು ವರ್ಷಗಳ ಹಿಂದಿನ ಸೆಪ್ಟಂಬರ್‌ 11 ಜಗತ್ತಿಗೆ ಮುಖ್ಯವಾದೀತೆ? ಕವಿ ಆಡೆನ್‌ ಕಾಣುವ ಸಮದರ್ಶಿಯ ನೋಟವನ್ನು ಒಳಗೊಂಡೇ ಅದನ್ನು ಮೀರುವ ಧ್ಯಾನಶೀಲವೂ ಆದ ನಾಗರಿಕ ಸಮಾಜವೊಂದು ಜಗತ್ತಿನಲ್ಲಿ ಸೃಷ್ಟಿಯಾದೀತೆ? ಈ ಭೂಮಿ ಉಳಿಯಲೆಂದಾದರೂ ಅಮೆರಿಕಾದ ವೈಭವದಿಂದ ಅಮೆರಿಕಾವೇ ದಣಿದೀತೆ?

****

ನನ್ನನ್ನೇ ನಾನು ಕೆಣಕಿಕೊಳ್ಳಲು ಈ ಮೂರು ರೂಪಕಗಳನ್ನು ಎದುರಿಗಿಟ್ಟುಕೊಂಡಿದ್ದೇನೆ: ಒಂದು ಆಡನ್ನಿನ ಸರ್ವಗ್ರಾಹಿ ಪೂರ್ವಸೂರಿಗಳ ಸಮದರ್ಶಿತ್ವ. ಎರಡು ದೌರ್ಜನ್ಯಗಳನ್ನು ಸಂಕಟಗಳನ್ನು ಕಮರ್ಷಿಯಲ್‌ ಬ್ರೇಕ್‌ಗಳ ಮಾರುವ ಕೊಳ್ಳುವ ಸಂಭ್ರಮಗಳ ನಡುವೆ ಕಾಣುವ, ಆಡೆನ್‌ ಬಗೆಯ ಕಾಣುವಿಕೆ ವಿಕೃತಗೊಂಡ ನಮ್ಮ ಸರ್ವ ಸ್ವೀಕಾರದ ದೈನಿಕ. ಮೂರು ಪೂರ್ಣಶುದ್ಧಿಯ ಸ್ಥಿತ ಪ್ರಜ್ಙ ಆದರ್ಶದಲ್ಲಿ ಮೂರು ಮಂಗಗಳನ್ನು ಧ್ಯಾನಿಸುತ್ತಲೇ ಮೌನವನ್ನೂ ಸತ್ಯಾಗ್ರಹದ ಅಸ್ತ್ರಮಾಡಿಕೊಂಡ ಅರೆ ಬೆತ್ತಲೆಯ ಫಕೀರ.

ನನ್ನ ದಸರಾ

ನನ್ನ ದಸರಾ ನನ್ನ ಬಾಲ್ಯಕ್ಕೆ ಸೇರಿದ್ದು. ನಾನು ಹುಟ್ಟಿ ನನ್ನ ಬಾಲ್ಯವನ್ನು ಕಳೆದ ಸಹ್ಯಾದ್ರಿ ತಪ್ಪಲಿನ ನನ್ನ ಹಳ್ಳಿಗೆ ಸೇರಿದ್ದು.

ಬಲ್ಲಾಳರೆಂದು ನಾವು ಕರೆಯುತ್ತಿದ್ದ ಮುದುಕರೊಬ್ಬರು ಕಾಡಿನೊಳಗೆ ಹಲವಾರು ಮೈಲಿಗಳನ್ನು ನಡೆದು ನಮ್ಮ ಮನೆಗೆ ಬರುತ್ತಿದ್ದರು. ಅವರು ಹಣೆಯ ಮೇಲೆ ಅಕ್ಷತೆ ಇಟ್ಟುಕೊಂಡು ಬಂದರೆ ಅವರು ಊಟ ಮಾಡಿ ಬಂದಿದ್ದಾರೆ ಎಂದರ್ಥ. ಹಣೆಯ ಮೇಲೆ ಅಕ್ಷತೆ ಇಲ್ಲದಿದ್ದರೆ ಅವರು ಮಧ್ಯಾಹ್ನದ ಊಟಕ್ಕಿರುತ್ತಾರೆ ಎಂಬುದು ನನ್ನಮ್ಮನಿಗೆ ಅರ್ಥವಾಗಿಬಿಡುತ್ತಿತ್ತು.

ಹಜಾರದಲ್ಲಿ ಚಾಪೆ ಹಾಸಿ ನಾವೆಲ್ಲಾ ಅವರ ಜತೆಗೆ ಊಟಕ್ಕೆ ಕೂತು ಬಲ್ಲಾಳರು ಹೇಳುವ ಕತೆ ಕೇಳುತ್ತಿದ್ದೆವು. ಬಲ್ಲಾಳರು ಕಥೆ ಹೇಳುವುದರಲ್ಲಿ ನಿಷ್ಣಾತರು. ಅವರು ಮೈಸೂರಿಗೆ ದಸರಾ ನೋಡಲು ಹೋದ ಕಥೆಯನ್ನು ಆರಂಭಿಸುವುದಕ್ಕಾಗಿ ಕಾಯುತ್ತಿರುತ್ತಿದ್ದೆವು. ಅವರು ನಮ್ಮನ್ನು ಯಾವತ್ತೂ ನಿರಾಶರನ್ನಾಗಿಸಲಿಲ್ಲ.

ಅವರು ಮೈಸೂರಿಗೆ ಹೋಗಿದ್ದು, ದಸರಾ ನೋಡಿದ್ದು, ಜಂಬೂ ಸವಾರಿ ಕಂಡಿದ್ದೆಲ್ಲಾ ಬಹಳ ಹಿಂದೆ. ಆದರೆ ಪ್ರತೀ ಸಾರಿ ಅವರು ಕಥೆ ಹೇಳುವಾಗಲೂ ಅದರಲ್ಲಿ ಏನಾದರೊಂದು ಹೊಸತಿರುತ್ತಿತ್ತು. ಅವರ ಕಥೆ ಹೇಳುವಿಕೆ ಯಾವಾಗಲೂ ವರ್ತಮಾನ ಕಾಲದಲ್ಲಿಯೇ ಇರುತ್ತಿತ್ತು; ಪ್ರತೀ ಬಾರಿಯೂ ಮಹಾರಾಜರು ಮತ್ತು ಅಂಬಾರಿಯನ್ನು ಹೊತ್ತಿರುವ ಆನೆ ಹೆಚ್ಚು ಹೆಚ್ಚು ಉಜ್ವಲವಾದ ಆಭರಣಗಳನ್ನು ಧರಿಸಿರುತ್ತಿದ್ದರು. ಪ್ರತೀ ಬಾರಿಯೂ ಮಹಾರಾಜರು ಜನರತ್ತ ಬೀರುತ್ತಿದ್ದ ಮಂದಹಾಸದ ಶೈಲಿ ಬೇರೆಯಾಗಿರುತ್ತಿತ್ತು. ಕೆಲವು ಸಾರಿ ನಮ್ಮ ಆಲಿಸುವ ಉತ್ಸಾಹವೇ ಬಲ್ಲಾಳರ ಉತ್ಸಾಹವನ್ನೂ ಹೆಚ್ಚಿಸುತ್ತಿತ್ತು. ಇಂಥ ಹೊತ್ತಿನಲ್ಲಿ ಅವರು `ನಿಮ್ಮ ಈ ಕರಿಮೂತಿ ಚಿಕ್ಕಪ್ಪನನ್ನೂ ಮಹಾರಾಜರು ನೋಡಿದರು' ಎಂದು ಶುಭ ಸಮಾರಂಭಗಳಿಗೆ ತಾವು ಕಾದಿರಿಸಿದ ತಮ್ಮ ಜರಿ ಶಾಲಿನ ಮಹಿಮೆಯನ್ನು ಕೊಂಡಾಡುತ್ತಿದ್ದರು. ಅವರು ನಮ್ಮನ್ನು ಮೆಚ್ಚಿಸುವುದಕ್ಕಾಗಿ ಶಾಲನ್ನೂ ತರುತ್ತಿದ್ದರು.

ತೀರ್ಥಹಳ್ಳಿ ಜಾತ್ರೆ ನಮಗೆ ಗೊತ್ತಿದ್ದ ದೊಡ್ಡ ಉತ್ಸವ. ಸೋಡಾ ಕುಡಿಯುವುದು, ಮಿಠಾಯಿ ತಿನ್ನುವುದು, ಎಲ್ಲದಕ್ಕಿಂತ ಮುಖ್ಯವಾಗಿ ಬಾಂಬೇಬಾಕ್ಸ್‌ನಲ್ಲಿ ಚಿತ್ರಗಳನ್ನು ನೋಡುವುದಕ್ಕಾಗಿ ನಾವು ಜಾತ್ರೆ ಬರುವುದನ್ನು ಕಾಯುತ್ತಿದ್ದೆವು. ಜಾತ್ರೆಗೆ ಈ ಪೆಟ್ಟಿಗೆ ಬಂದೇ ಬರುತ್ತಿತ್ತು. ನಾವಿದನ್ನು ಬೊಂಬಾಯಿ ಪೆಟ್ಟಿಗೆ ಎಂದು ಕರೆಯುತ್ತಿದ್ದೆವು. ಒಂದು ಆಣೆ ದುಡ್ಡು ಕೊಟ್ಟು ಅದರ ಸಣ್ಣ ತೂತಿನಲ್ಲಿ ಕಣ್ಣಿಟ್ಟು ಕುಳಿತರೆ ಬೊಂಬಾಯಿ ಪೆಟ್ಟಿಗೆ ತಂದವನು ಡೋಲು ಬಡಿಯುತ್ತಾ ಅದರ ತಾಳಕ್ಕೆ ಹೆಜ್ಜೆ ಹಾಕುತ್ತಾ ಪೆಟ್ಟಿಗೆಯಲ್ಲಿದ್ದ ಒಂದು ದಾರ ಎಳೆದು ನಮ್ಮ ಕಣ್ಣಿಗೆ ಕಾಣುವ ದೃಶ್ಯಗಳನ್ನು ಬದಲಾಯಿಸುತ್ತಿದ್ದ. ಭೂತ ಕನ್ನಡಿಯಲ್ಲಿ ಕಾಣಿಸುತ್ತಿದ್ದ ಈ ದೃಶ್ಯಗಳನ್ನು ನಾನು ಯಾವತ್ತೂ ಮರೆಯಲಾರೆ.

ಆತ ಕುಣಿಯುತ್ತಾ `ದಿಲ್ಲಿ ದರ್ಬಾರ್‌ ನೋಡು, ರಾಣಿ ನೋಡು, ಬೊಂಬಾಯಿ ಸೂಳೆ ನೋಡು, ಜಂಬೂ ಸವಾರಿ ನೋಡು' ಎಂದು ಹೇಳುತ್ತಿದ್ದರೆ ಪೆಟ್ಟಿಗೆಯೊಳಗೆ ಆ ದೃಶ್ಯಗಳು ಕಾಣಿಸಿಕೊಳ್ಳುತ್ತಿದ್ದವು. ಆಗೆಲ್ಲಾ ಬಲ್ಲಾಳರು ನೆನಪಾಗಿ ಅವರು ಹೇಳುವುದೆಷ್ಟೊಂದು ನಿಜ ಎನಿಸುತ್ತಿತ್ತು.

ಆದರೆ ನಾನು ಮೊದಲ ದಸರಾ ನೋಡಿದಾಗ ಅದೇ ಮೊದಲ ಬಾರಿಗೆ ತೀರ್ಥಹಳ್ಳಿ ಬಿಟ್ಟು ಮೊದಲ ಬಾರಿಗೆ ಬಸ್‌ ಮತ್ತು ಮೂರನೇ ದರ್ಜೆ ರೈಲಿನಲ್ಲಿ ಒಂದು ಹಗಲು ಒಂದು ರಾತ್ರಿ ಪ್ರಯಾಣಿಸಿದ್ದೆ. ನನ್ನ ಈ ಪ್ರಯಾಣ ದಸರಾ ನೋಡುವುದಕ್ಕಂತೂ ಆಗಿರಲಿಲ್ಲ. ನಾನು ಮೈಸೂರಿಗೆ ಹೋಗಿದ್ದು ಪ್ರಸಿದ್ಧರಾದ ಸರ್ವೇಪಲ್ಲಿ ರಾಧಾಕೃಷ್ಣನ್‌, ವಿದ್ವತ್ತಿನಲ್ಲಿ ದೊಡ್ಡವರಾದರೂ ಅಷ್ಟೇನೂ ಪ್ರಸಿದ್ಧರಾಗಿರದ ಹಿರಿಯಣ್ಣನವರಂಥ ಶಿಕ್ಷಕರಿದ್ದ ಐತಿಹಾಸಿಕ ಮಹಾರಾಜ ಕಾಲೇಜಿನಲ್ಲಿ ಕಲಿಯುವುದಕ್ಕಾಗಿ. ರಾಜ ಪ್ರಭುತ್ವವನ್ನು ವಿರೋಧಿಸುತ್ತಿದ್ದ ಕುವೆಂಪು ಕೂಡಾ ಅಲ್ಲಿಯೇ ಶಿಕ್ಷಕರಾಗಿದ್ದರು. ಮಲೆನಾಡಿನ ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿ ರಾಜ ಪ್ರಭುತ್ವ ವಿರೋಧಿಯಾಗಿದ್ದ ನಾನು ಕುವೆಂಪು ಅವರ ಪ್ರಭಾವದಡಿಯಲ್ಲಿ ಶಿಕ್ಷಣ ಮುಂದುವರಿಸಲು ಮೈಸೂರು ತಲುಪಿದ್ದೆ.

ನಾನು ಮೊದಲ ದಸರ ನೋಡುವ ಹೊತ್ತಿಗೆ ಬಲ್ಲಾಳರ ಕಥೆಗಳ ಮಾಂತ್ರಿಕ ಆವರಣದಾಚೆಗೆ ಬೆಳೆದುಬಿಟ್ಟಿದ್ದೆ. ಬಾಂಬೇ ಬಾಕ್ಸ್‌ನ ಭೂತ ಕನ್ನಡಿಗೆ ಕಣ್ಣಿಟ್ಟು ಕುಳಿತುಕೊಳ್ಳುವುದು ಅಷ್ಟೇನೂ ಕುತೂಲಕಾರಿ ವಿಷಯವಾಗಿ ನನಗೆ ಕಾಣಿಸುತ್ತಿರಲಿಲ್ಲ. ಲೋಹಿಯಾ ಮತ್ತು ಜಯಪ್ರಕಾಶರಿಂದ ಪ್ರಭಾವಿತರಾಗಿದ್ದ ಶಾಂತವೇರಿ ಗೋಪಾಲಗೌಡರು ಆ ಕಾಲದ ಬಹಳ ದೊಡ್ಡ ಸಮಾಜವಾದಿ ನಾಯಕರು. ಸಮಾಜವಾದಿಗಳಾಗಿದ್ದ ನಮಗೆಲ್ಲಾ ಮಹಾರಾಜರನ್ನು ಆನೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವುದು ಊಳಿಗಮಾನ್ಯ ಸಂಸ್ಕೃತಿಯಂತೆಯೂ, ಹಿಂದುಳಿದಿರುವಿಕೆ ಮತ್ತು ಮೂಢನಂಬಿಕೆಯ ಸಂಕೇತದಂತೆಯೂ ಕಾಣಿಸುತ್ತಿತ್ತು.

ಸಮಾಜವಾದಿಗಳೆಲ್ಲಾ ಜಂಬೂ ಸವಾರಿಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಗೋಪಾಲಗೌಡರ ನೇತೃತ್ವದಲ್ಲಿ ಜೆ.ಎಚ್‌.ಪಟೇಲರಂಥ ಯುವ ಸಮಾಜವಾದಿಗಳು ಮೈಸೂರಿಗೆ ಬಂದಿಳಿದು ಒಂದಷ್ಟು ಕಾರ್ಯಕರ್ತರನ್ನು ಒಗ್ಗೂಡಿಸಿ ಸಾಲಂಕೃತ ಆನೆಯ ಮೇಲೆ ಸರ್ವಾಭರಣ ಭೂಷಿತರಾಗಿ ಕುಳಿತ ಮಹಾರಾಜರ ಮೆರವಣಿಗೆ ಬರುವಾಗ ಕಪ್ಪು ಬಾವುಟ ತೋರಿಸುವ ಕಾರ್ಯಕ್ರಮ ರೂಪಿಸಿದರು.

ಇದು ಸಮಾಜವಾದೀ ಸತ್ಯಾಗ್ರಹಿಗಳ ಮಟ್ಟಿಗೆ ಬಹಳ ಅಪಾಯಕಾರಿಯಾದ ಕೆಲಸವಾಗಿತ್ತು. ಏಕೆಂದರೆ ಜನರು ಮಹಾರಾಜರನ್ನೂ, ಮೆರವಣಿಗೆಯನ್ನೂ ಪ್ರೀತಿಸುತ್ತಿದ್ದರು. ಅವರ ಮೆರವಣಿಗೆಗೆ ಅಶುಭಕಾರಿ ಕಪ್ಪ ಬಾವುಟ ತೋರಿಸಿದ್ದರೆ ಜನರೇ ಪ್ರತಿಭಟನಕಾರರಿಗೆ ಹೊಡೆಯುವ ಸಾಧ್ಯತೆ ಇತ್ತು. ಇದಕ್ಕಾಗಿ ನಮ್ಮ ಪ್ರತಿಭಟನೆಗೆ ಪೊಲೀಸ್‌ ಭದ್ರತೆ ಕೇಳಿ ಕಪ್ಪು ಬಾವುಟ ತೋರಿಸುವ ಸಾಂಕೇತಿಕ ಪ್ರತಿಭಟನೆ ನಡೆಸಿದೆವು. ಇದು ವರ್ಷ ವರ್ಷವೂ ಮುಂದುವರಿಯಿತು.

ನಾನಿದನ್ನು ಇಲ್ಲಿಯೇ ನಿಲ್ಲಿಸಲು ಇಚ್ಛಿಸುವುದಿಲ್ಲ. ಶಾಂತವೇರಿ ಗೋಪಾಲಗೌಡರು ಕವಿಯ ಹೃದಯವಿದ್ದು ಮಹಾ ಸಂವೇದನಾಶೀಲ ಮನುಷ್ಯ. ಮಹಾರಾಜರು ತಮ್ಮ ದೊರೆತನ ಮತ್ತು ಅದರ ಜತೆಗಿದ್ದ ಎಲ್ಲ ವೈಭವಗಳನ್ನು ಕಳೆದುಕೊಂಡ ನಂತರ ಒಮ್ಮೆ ಗೋಪಾಲಗೌಡರು ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದರಂತೆ. ಎಲ್ಲರೂ ಬಿಟ್ಟುಬಿಟ್ಟಂತೆ ಕಾಣಿಸುತ್ತಿದ್ದ, ಗುಂಪಿನೊಳಗೆ ಒಂಟಿಯಾಗಿಬಿಟ್ಟಿದ್ದ ಅವರನ್ನು ನೆನಪಿಸಿಕೊಂಡು ಗೋಪಾಲಗೌಡರು ಮರುಗುತ್ತಿದ್ದರು.