Monthly Archives: December 2006

ಮನುಷ್ಯ ಚರಿತ್ರೆ ಬಗೆವ ಬಗೆಗಳು

ಚರಿತ್ರೆಯನ್ನು ಕುರಿತ ಮೂರು ಬಗೆಯ ಗ್ರಹಿಕೆ ಗಳನ್ನು ನಿಮ್ಮ ಇದಿರು ಇಡಲು ಬಯಸುತ್ತೇನೆ. ಮಾರ್ಕ್ಸ್‌ವಾದಿಗಳಿಗೆ ಮನುಷ್ಯನನ್ನು ಅರಿಯಲು ಅವನನ್ನು ಚರಿತ್ರೆಯಲ್ಲಿಟ್ಟು ನೋಡುವುದು ಬಹಳ ಅಗತ್ಯ. ಇದನ್ನು ಒಂದು ತತ್ವವಾಗಿ ಮಾತ್ರ ಅವರು ನಂಬುವುದಲ್ಲ; ಕ್ರಿಯಾಶೀಲರಾದ ಮಾರ್ಕ್ಸಿಸ್ಟರು ಚರಿತ್ರೆಯನ್ನು ಬದಲಾಯಿಸಬಹುದೆಂದೂ ತಿಳಿಯುತ್ತಾರೆ. ಈ ಬದಲಾವಣೆ ಸಾಧ್ಯವಾಗುವುದು ಮೊದಲನೆಯದಾಗಿ ಉತ್ಪಾದನಾ ವಿಧಾನಗಳಲ್ಲಿ ವ್ಯತ್ಯಾಸವಾಗುವುದರಿಂದ; ಎರಡನೆಯದಾಗಿ ಉತ್ಪಾದನಾ ಸಂಬಂಧಗಳಲ್ಲಿ ಬಿಕ್ಕಟ್ಟು ಉಂಟಾಗುವುದರಿಂದ; ಮೂರನೆಯದಾಗಿ, ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ತುಳಿತಕ್ಕೊಳಗಾದವರು ಒಗ್ಗಟ್ಟಾಗಿ ಹೋರಾಡುವುದರಿಂದ. ಹೀಗೆ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು, ಸಮಾಜವನ್ನು ಬದಲಿಸಲು ಚರಿತ್ರೆ ಮಾರ್ಕ್ಸ್‌ವಾದಿಗಳಿಗೆ ಮುಖ್ಯವಾದ ಅರಿಯುವ ಸಾಧನವಾಗುತ್ತದೆ.

ಜನ ಭಾಷೆ ಮತ್ತು ಜ್ಞಾನದ ಭಾಷೆ: ಕೆಲ ಚಿಂತನೆಗಳು

1. ಎಲ್ಲ ಭಾಷೆಗಳೂ ಉಳಿಯುವುದು ಆ ಭಾಷೆಯನ್ನು ಮಾತ್ರ ಬಲ್ಲ ಜನರು ಇರುವ ತನಕ. ಆದರೆ ಇಲ್ಲೊಂದು ವಿರೋಧಾಭಾಸವೆಂದು ಕಾಣುವ ಸಂಗತಿಯಿದೆ. ಭಾಷೆಗಳು ಬೆಳೆಯುವುದು ಆ ಭಾಷೆಗಳನ್ನು ಬಲ್ಲ ಜನರಿಗೆ ಇನ್ನೊಂದು ಸಾಹಿತ್ಯ ಸಮೃದ್ಧವಾದ ಭಾಷೆಯಾದರೂ ಗೊತ್ತಿದ್ದಾಗ. ಹಿಂದೆ ಸಂಸ್ಕೃತದ ಜೊತೆ ಕನ್ನಡ ಅದರ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿತು. ಈ ಕಾಲದಲ್ಲಿ ಇಂಗ್ಲಿಷ್‌ ಜೊತೆ ಕೆಲಸ ಮಾಡಿತು.

2. ಈ ಎರಡು ಭಾಷೆಗಳ ನಡುವಿನ ಕೊಡು- ಕೊಳ್ಳುವ ಸಂಬಂಧ ಒಂದು ಇನ್ನೊಂದಕ್ಕೆ ಮೇಲಿನದು ಎಂಬ ಭಾವನೆ ಇದ್ದಾಗ ಮತ್ತು ಈ ಭಾವನೆ ರಾಜಕೀಯ, ಆರ್ಥಿಕ ಕಾರಣಗಳನ್ನೂ ಪಡೆದಿ ದ್ದಾಗ ಈ ಒಡನಾಟ `ಒಂದು ಭಾಷೆ ಕೊಡುವುದು ಮಾತ್ರ, ಇನ್ನೊಂದು ಭಾಷೆ ಪಡೆಯುವುದು ಮಾತ್ರ' ಎಂಬ ಯಜಮಾನಿಕೆಯದಾಗಿರುತ್ತದೆ. ಈ ಯಜಮಾನಿಕೆಯನ್ನು ಗೆದ್ದವರು ನಮ್ಮ ಹಲವು ಹಿರಿಯ ಲೇಖಕರು- ಮುಖ್ಯವಾಗಿ ಸಾಹಿತ್ಯದಲ್ಲಿ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತನ್ನ ಪ್ರದೇಶದ್ದು ಮಾತ್ರವಾದ ಚಲಿಸದ ಭಾಷೆಯಾದ ಕನ್ನಡ ತನ್ನೊಳಗೆ ಇಡೀ ಪ್ರಪಂಚವನ್ನು ಕಂಡು ಕಾಣಿಸಬಲ್ಲದು ಎನ್ನುವ ವಿಶ್ವಾಸ ಕವಿರಾಜಮಾರ್ಗದ ಕಾಲದಿಂದ ಈವರೆಗೆ ನಮ್ಮ ಅತ್ಯುತ್ತಮ ಮನಸ್ಸು ಗಳಲ್ಲಿ ಕೆಲಸ ಮಾಡಿದೆ. (ಇಂಗ್ಲಿಷಿನಲ್ಲೂ ಅದು ಚಲಿಸದ ಭಾಷೆಯಾಗಿದ್ದಾಗ ಶೇಕ್ಸ್‌ಪಿಯರ್‌ ಬಂದನೆಂಬುದನ್ನು ಮರೆಯಬಾರದು)

ಸಿದ್ಧಾಂತಗಳು ಸತ್ತಂತೆ ಕಾಣುವ ನಮ್ಮ ಕಾಲದಲ್ಲಿ

ಅಪ್ವರ್ಡ್‌ಗೆ ನಾನು ಲಯನಲ್‌ ಟ್ರಿಲ್ಲಿಂಗ್‌ನನ್ನು ಓದಿಸಿದೆ. ರೇಮಂಡ್‌ ವಿಲಿಯಮ್ಸ್‌ನನ್ನು ಅವನು ಓದಿ ಮೆಚ್ಚಿಕೊಂಡಿದ್ದ. ನನ್ನ `ಘಟಶ್ರಾದ್ಧ' ಕಥೆ ವಿ.ಕೆ. ನಟರಾಜರ ಭಾಷಾಂತರದಲ್ಲಿ ಪ್ರಕಟವಾಗಿತ್ತು. ಅದನ್ನು ಓದಿ ಬ್ರಾಡ್‌ ಬರಿಯಂತೆಯೇ ಅಪ್ವರ್ಡ್‌ನೂ ಇಷ್ಟಪಟ್ಟಿದ್ದ. ಬಿಬಿಸಿಯಲ್ಲಿ ಅದನ್ನು ಬಿತ್ತರಿಸಲೂ ಬ್ರಾಡ್‌ಬರಿ ಪ್ರಯತ್ನಿಸಿದ್ದ. ಆದರೆ ನನ್ನ ಕಥೆಯ ಬಾಲಕನ ಧಾರ್ಮಿಕ ಸಂಪತ್ತಿನ ಭಾಷೆ ಇಂಗ್ಲಿಷ್‌ ಹುಡುಗನ ಓದಿನಲ್ಲಿ ಕೃತಕವೆನ್ನಿಸುವುದರಿಂದ ಅದನ್ನು ಕೈಬಿಡಲಾಯಿತು. ಮುಗ್ಧತೆಯಲ್ಲಿ ನನ್ನ ಕಥೆಯ ನಾಣಿ ಸೃಷ್ಟಿಸುವ ಅಲೌಕಿಕದ ಪ್ರಪಂಚ ಬ್ಲೇಕ್‌ ಕಾಲದ ಬಾಲಕನಿಗೆ ಸಾಧ್ಯವೋ ಏನೊ! ಈಗ ನನ್ನ ಮೊಮ್ಮಕ್ಕಳಿಗೂ ಅದು ಅಪರಿಚಿತ. ಇವೆಲ್ಲವನ್ನೂ ನಾನು ಅಪ್ವರ್ಡ್‌ ಜೊತೆ ಚರ್ಚಿಸುತ್ತ ಇದ್ದೆ. 

ಅಪ್ವರ್ಡ್‌ ಮುಖೇನ ಆತ್ಮ ಶೋಧನವಾದ ಸಂಶೋಧನೆ

ಬ್ರಾಡ್‌ ಬರಿ ಪೈಪ್‌ ಸೇದುತ್ತ ತನ್ನ ಟೈಪ್‌ ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ: `ಎಡ್ವರ್ಡ್‌ ಅಪ್ವರ್ಡ್‌ ಎಂಬ ವಿಲಕ್ಷಣ ಲೇಖಕನೊಬ್ಬನಿದ್ದ, ಮುವ್ವತ್ತರ ದಶಕದಲ್ಲಿ. ನಾವು ಬ್ರಿಟಿಷರು ಸೈದ್ಧಾಂತಿಕವಾಗಿ ಯೂರೋಪಿಯನ್ನರಂತೆ ಚಿಂತಿಸುವುದೇ ಇಲ್ಲ. ನಿತ್ಯಾನುಭವದ ಸತ್ಯಕ್ಕೆ ಮಾತ್ರ ನಾವು ಬದ್ಧರು. ಮಿಲ್‌ ಮತ್ತು ಬೆಂಥಾಮ್‌ನಂತಹ ಯುಟಿಲಿಟೇರಿಯನ್ನರು ಮಾತ್ರ ನಮ್ಮ ಹೀರೋಗಳು. ಅಪ್ವರ್ಡ್‌ ಅದಕ್ಕೆ ವಿನಾಯಿತಿ. ಮುವ್ವತ್ತರ ದಶಕವೇ ಅದಕ್ಕೆ ವಿನಾಯಿತಿ. ಅಂತಹ ಒಂದು ದಶಕವನ್ನು ಬ್ರಿಟನ್‌ ಮತ್ತೆ ಕಂಡಿಲ್ಲ.’