Select Page

ಎಂ.ಡಿ.ಎನ್.: ಕರ್ನಾಟಕ ರಾಜಕೀಯದ ಒಬ್ಬ ಮಹಾತಾತ್ವಿಕ

ಪ್ರೊ. ನಂಜುಂಡಸ್ವಾಮಿ ನನಗೆ ಪರಿಚಯವಾದದ್ದು 60ರ ದಶಕದಲ್ಲಿ. 1966ನೇ ಇಸವಿಯಲ್ಲಿ ನಾನು ಇಂಗ್ಲೆಂಡಿನಿಂದ ಹಿಂದಕ್ಕೆ ಬಂದು ಕೆಲ ಕಾಲದವರೆಗೆ ಮೈಸೂರಿನ ಸರಸ್ವತಿಪುರಂನ ಏಳನೇ ಮೈನ್‌ನಲ್ಲಿ ವಾಸಿಸುತ್ತಿದ್ದೆ. ಆಗ ಯಾವಾಗಲೂ ನಮ್ಮ ಮನೆಯಲ್ಲಿ ಬಿ.ಎಸ್‌. ಆಚಾರ್‌ ಎನ್ನುವ ಒಬ್ಬ ಗೆಳೆಯ ಇರುತ್ತಿದ್ದರು.

ಯಾವುದೋ ಒಂದು ಕಾಲದಲ್ಲಿ ನನ್ನ ಅಜ್ಜಯ್ಯನಿಗೆ ಪ್ರಿಯನಾಗಿದ್ದ ಪರೋಪಕಾರಿ ಹುಡುಗನೆಂದು ನನ್ನ ಅಮ್ಮ ಇವರ ಬಗ್ಗೆ ಹೇಳಿದ್ದರು. ಗತಿಸಿದ ಆಚಾರ್‌ ಈಗಲೂ ನನ್ನ ಕಣ್ಣಿಗೆ ಕಾಣುವಂತೆ ಇದ್ದಾರೆ. ಅವರದು ಹೊಳೆಯುವ ಬೋಳುತಲೆ, ಮಿಂಚುವ ತುಂಟು ಕಣ್ಣುಗಳು, ಕುಳ್ಳ ಶರೀರ, ಪುಟಿಯುವ ಚೆಂಡಿನಂತೆ ಅವರ ಚಲನೆ. ಅವರ ಬಗ್ಗೆ ಈಗ ನಾನು ಮಾತನಾಡುತ್ತಿರುವುದು ಕೃತಕವೆನಿಸು ತ್ತದೆ. ಆಚಾರ್‌ ಬಗ್ಗೆ ಎಂದೂ ನಾನು ಬಹುವಚನವನ್ನು ಬಳಸಿದ್ದಿಲ್ಲ; ಅಷ್ಟು ಆತ್ಮೀಯ ಗೆಳೆಯ. ಗತಕಾಲದ ನನ್ನ ಅಜ್ಜಯ್ಯನ ಬಗ್ಗೆ ಮಾತಾಡಬಲ್ಲವನಾಗಿದ್ದ ಚಿರ ಯುವಕ. ಆಚಾರ್‌ ಬಗ್ಗೆ ಏಕವಚನದಲ್ಲೇ ಮುಂದುವರೆಯುವೆ.

ಕೃಷ್ಣನಿಗೆ ಚಕ್ರವಿದ್ದಂತೆ ಆಚಾರ್‌ಗೆ ಕ್ಯಾಮರಾ. ಆಚಾರ್‌ ತನ್ನ ಚಿಕ್ಕ ವಯಸ್ಸಿನಿಂದ ತನ್ನ ಕ್ಯಾಮರಾ, ತನ್ನ ಅಚ್ಚುಕಟ್ಟಾದ ಬರವಣಿಗೆ, ತನ್ನ ಬಿದ್ದು ಬಿದ್ದು ನಗುವ ಗಹಗಹ, ತನ್ನ ಔದಾರ್ಯ- ಇವುಗಳಿಂದ ಸರ್ವ ಜನಪ್ರಿಯನಾ ಗಿದ್ದ. ಆರ್‌.ಕೆ. ನಾರಾಯಣ್‌ರಿಗೂ ಈತ ಬಹಳ ಹತ್ತಿರದವ. ನಾರಾಯಣ್‌ಗೆ ಟೈಪ್‌ ಮಾಡಿ ಕೊಡುವುದರಿಂದ ಹಿಡಿದು ಅವರು ಹೇಳಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಆಚಾರ್‌, ನಾರಾಯಣ್‌ರ ಹಳೆಯ ಕಾಲದ ಕೃಪಣತೆಯನ್ನು ನನ್ನೆದುರು ಹಳಿದು ಗೊಣಗಿ, ಉಳಿದವರ ಎದುರು ನಾರಾಯಣರನ್ನು ಕೊಂಡಾಡುತ್ತಿದ್ದ.
ನಂಜುಂಡಸ್ವಾಮಿಯ ಮೇಲೆ ಬರೆಯಲೆಂದು ಹೊರಟವನು ಆಚಾರ್‌ನನ್ನು ಆಖ್ಯಾನಿಸಲು ಪ್ರಾರಂಭಿಸಿರುವುದಕ್ಕೆ ಒಂದು ಕಾರಣವಿದೆ. ನಂಜುಂಡಸ್ವಾಮಿಯನ್ನು ನನ್ನ ಮನೆಗೆ ಕರೆತಂದದ್ದು, ಆಮೇಲೆ ನಮ್ಮಿಬ್ಬರನ್ನು ಸಂಜೆ ಮೆಟ್ರೋಪೋಲಿಗೆ ಕರೆದುಕೊಂಡು ಹೋಗುತ್ತಿ ದ್ದದ್ದು ಆಚಾರಿ. ನಮಗೆಲ್ಲಾ ವಯಸ್ಸಾಗಿದೆ ಎನ್ನುವುದೇ ಜ್ಞಾಪಕಕ್ಕೆ ಬರಗೊಡದಂತೆ ಆಚಾರ್‌ ಸೃಷ್ಟಿಸುತ್ತಿದ್ದ ಹಡೆತನ, ಪೋಲಿ ವಾತಾವರಣದಲ್ಲಿ ಸದಾ ಗಂಭೀರ ಮುಖಮುದ್ರೆಯ ನಂಜುಂಡಸ್ವಾಮಿ ನೆನಪಾಗುತ್ತಾರೆ. ಆಚಾರ್‌ ನಮ್ಮಲ್ಲಿ ಎಷ್ಟು ಖುಷಿ ತರುತ್ತಿದ್ದನೋ, ಅಷ್ಟೇ ನನ್ನ ಮತ್ತು ನಂಜುಂಡಸ್ವಾಮಿಯ ಗಂಭೀರವಾದ ಚರ್ಚೆಗಳಿಗೆ ಔದಾರ್ಯದ ಅವಕಾಶ ಮಾಡಿಕೊಡುವುದಲ್ಲದೆ ತಾನೂ ತನ್ಮಯನಾಗಿರುತ್ತಿದ್ದ. ನಮ್ಮ ಮಾತುಗಳನ್ನು ತನ್ನ ಮಾತುಗಳಲ್ಲಿ ಹೆಣೆದು ನಮ್ಮೆದುರಿಗಿಟ್ಟು ನಮ್ಮನ್ನು ವೃದ್ಧಿಸುತ್ತಾ ಸುಖ ಕೊಡುತ್ತಿದ್ದ.ಜರ್ಮನಿಯಿಂದ ಅದೇ ತಾನೇ ಬಂದವರೆಂದು ನಂಜುಂಡಸ್ವಾಮಿ ನನಗೆ ಗುರುತಾ ದದ್ದು. ಪ್ರಾರಂಭದಲ್ಲಿ ಮಲ್ಲಾರಾಧ್ಯರ ಬಗ್ಗೆಯೂ, ಜಯಚಾಮರಾಜೇಂದ್ರ ಒಡೆಯರ ಬಗ್ಗೆಯೂ ಯಾವುದೋ ಆಸಕ್ತಿ ಇದ್ದವರಂತೆ ಕಂಡಿದ್ದ ನಂಜುಂಡಸ್ವಾಮಿಯನ್ನು ನಾನು ಆಚಾರ್‌ನನ್ನು ಹಚ್ಚಿಕೊಂಡಷ್ಟು ಹಚ್ಚಿಕೊಂಡಿರಲಿಲ್ಲ. ಆಗ ನಂಜುಂಜಸ್ವಾಮಿ ಯಾವುದೋ ಒಂದು ದೊಡ್ಡ ಗ್ರಂಥದ ತಯಾರಿಯಲ್ಲಿ ಇದ್ದರೆಂಬ ನೆನಪು. ಇದೊಂದು ಉದ್ಗ್ರಂಥವಾಗಿ ಬರುತ್ತದೆಂದು ಆಚಾರ್‌ ಹಾರಾಡುತ್ತಿದ್ದ.
ನಂಜುಂಡಸ್ವಾಮಿ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ತಮ್ಮ ಸುತ್ತಲಿನ ಎಲ್ಲ ಮಾತುಗಳನ್ನು, ಎಲ್ಲ ಇಂಗಿತಗಳೂ ತಿಳಿಯುವಂತೆ ಕೇಳಿಸಿಕೊಳ್ಳಬಲ್ಲವರಾಗಿದ್ದರು. ಅವರೆಷ್ಟು ತೆಳ್ಳಗೆ, ಚೂಪಾಗಿ ಕಾಣುತ್ತಿದ್ದರೆಂದರೆ, ಅವರು ನಮಗೆ ನೆನಪು ಮಾಡಬಹುದಾಗಿದ್ದ ವ್ಯಕ್ತಿ ವಿನೋಬ ಮಾತ್ರ- ಆಕಾರದಲ್ಲಿ, ಆದರೆ ಅವರ ಜೀವನ ಶೈಲಿಯಲ್ಲಿ ಅಲ್ಲ. ನಂಜುಂಡಸ್ವಾಮಿ, ಕುವೆಂಪುರವರು ಸೂಚಿಸಿದ ಹೆಸರನ್ನಿಟ್ಟು `ಮಾನವ’ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದಾಗ ನಮ್ಮ ಎಲ್ಲ ಗೆಳೆಯರು ಅವರನ್ನು `ಬಡಕಲು ಮಾನವ’ ಎಂದೇ ಕರೆಯುತ್ತಿದ್ದದ್ದು.

ಮುಂಚಿನಿಂದಲೂ ನಂಜುಂಡಸ್ವಾಮಿ ತತ್ಪರರಾಗಿ ತಮ್ಮ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ. ಲೋಹಿಯಾ ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಿದ್ಧಾಂತ ನಮ್ಮೆಲ್ಲರನ್ನೂ ಆಕರ್ಷಿಸಿತ್ತು. ರಾಜಕೀಯದಲ್ಲಿ ಶೂದ್ರರೇ ಮುಂದಾಳುಗಳಾಗಿರ ಬೇಕು. ಸಾರ್ವಜನಿಕ ವ್ಯವಹಾರದಲ್ಲಿ ಇಂಗ್ಲಿಷ್‌ ಕೈಬಿಡಬೇಕು, ಹೆಂಗಸರು ಸ್ವತಂತ್ರರಾಗಬೇಕು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕೃತವಾಗಬೇಕು, ರಾಜ್ಯ ವ್ಯವಸ್ಥೆ ಚತುಸ್ತಂಭ ವ್ಯವಸ್ಥೆ ಆಗಬೇಕು- ಇತ್ಯಾದಿ ವಿಚಾರಗಳು ಎಲ್ಲರಿಗೂ ಪ್ರಿಯವಾಗಿದ್ದವು. ಆದರೆ ಇದರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿ ತೋರುತ್ತಿದ್ದ ಕಠೋರವಾದ ಉಗ್ರತೆ ಉಳಿದವರಲ್ಲಿ ಇರಲಿಲ್ಲ.

ನಂಜುಂಡಸ್ವಾಮಿಯವರ ಬ್ರಾಹ್ಮಣ ವಿರೋಧಿ ಆಂದೋಲನ ಅಕ್ಷರಶಃ ಬ್ರಾಹ್ಮಣ ವಿರೋಧಿಯಾಗುತ್ತಿದೆಯೆಂದು ನಮ್ಮಲ್ಲಿ ಹಲವರಿಗೆ ಗುಮಾನಿಯಾಗ ತೊಡಗಿತು. ಕರ್ನಾಟಕದ ಆಗಿನ ಕಾಲದ ಒಬ್ಬ ಅತ್ಯುತ್ತಮ ಚಿಂತಕರಾಗಿದ್ದ ಎಸ್‌. ವೆಂಕಟರಾಂ, ನಂಜುಂಡಸ್ವಾಮಿಯ ವಿರೋಧಿಯಾದರು. ಬೆಂಗಳೂರಿನ ಆಫೀಸ್‌ವೊಂದರಲ್ಲಿ ಬಾಡಿಗೆ ಕೊಡಲು, ಟೆಲಿಫೋನ್‌ ಬಿಲ್‌ ಕಟ್ಟಲು ಪ್ರತಿ ತಿಂಗಳೂ ಪರದಾಡುತ್ತಾ ಪಕ್ಷದ ಕೆಲಸ ಮಾಡಿಕೊಂಡು ಹೋಗುವ ವೆಂಕಟರಾಂರನ್ನು ನಂಜುಂಡಸ್ವಾಮಿ `ಶಾನುಭೋಗ’ ಎಂದು ಗೇಲಿ ಮಾಡುವುದು ಗೋಪಾಲ ಗೌಡರಿಗಾಗಲೀ, ಜೆ.ಎಚ್‌. ಪಟೇಲರಿಗಾಗಲೀ ಸರಿ ಕಾಣುತ್ತಿರಲಿಲ್ಲ. ಆದರೆ ಜರ್ಮನಿಯಲ್ಲಿ ಓದಿಬಂದು, ಪಕ್ಷದ ಪ್ರಣಾಳಿಕೆಯನ್ನು ತೀವ್ರವಾಗಿ ನಂಬುವ ನಂಜುಂಡಸ್ವಾಮಿಯವರನ್ನು ತಿರಸ್ಕರಿಸುವುದೂ ಇವರಿಗೆ ಸಾಧ್ಯವಿರಲಿಲ್ಲ.

ಪಕ್ಷದ ನಾಯಕರಿಗೆ ನಂಜುಂಡಸ್ವಾಮಿ ಒಂದು ದೊಡ್ಡ ಸಮಸ್ಯೆಯಾಗಲು ಕಾರಣ, ಪ್ರತಿಭಾವಂತರಾದ ಯುವ ಲೇಖಕರೆಲ್ಲರೂ ನಂಜುಂಡಸ್ವಾಮಿಗೆ ಹತ್ತಿರದವರಾದದ್ದು. ಬ್ರಿಟಿಷ್‌ ಶಿಲಾ ಪ್ರತಿಮೆಗಳನ್ನು ಮೈಸೂರಿನಲ್ಲೂ ಬೆಂಗಳೂರಿನಲ್ಲೂ ಕಿತ್ತುಹಾಕಬೇಕೆಂಬ ಚಳುವಳಿ, ಅಶೋಕ ಹೋಟೆಲ್‌ನಲ್ಲಿ ಕಾಫಿ-ತಿಂಡಿಯನ್ನು ಉಳಿದೆಲ್ಲ ಹೋಟೆಲ್‌ಗಳಂತೆ ಕಡಿಮೆ ದರದಲ್ಲಿ ಮಾರಬೇಕೆಂಬ ಚಳುವಳಿ ಸಮಾಜವಾದಿ ಬಳಗದ `ಗೌರವಾನ್ವಿತರನ್ನು’ ಗೊಂದಲಕ್ಕೆ ಈಡು ಮಾಡುವಷ್ಟು ಬೀದಿಗಿಳಿಯಿತು. ಹೀಗೆ ಬೀದಿಗಿಳಿಯಬೇಕು ಎಂಬುದನ್ನೇ ಲೋಹಿಯಾ ಬಯಸಿದ್ದು ಎನ್ನುವ ಸತ್ಯ ನಂಜುಂಡಸ್ವಾಮಿಯ ಬೆಂಬಲಕ್ಕೆ ಇತ್ತು.

ಇನ್ನೊಂದು ಕಾಲದಲ್ಲಿ, ಮೈಸೂರಿನ ಮಹಾರಾಜರ ದಸರಾ ಮೆರವಣಿಗೆಯನ್ನು ವಿರೋಧಿಸಿ, ಕಪ್ಪು ಬಾವುಟ ತೋರಿಸುತ್ತಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್‌. ಪಟೇಲರು ಕೂಡ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವುದು ಸಾಧ್ಯವಾಗುವಂತೆ ನಂಜುಂಡಸ್ವಾಮಿ ತಮ್ಮ ಉಗ್ರ ಕಾರ್ಯಕ್ರಮಗಳನ್ನು ಯೋಜಿಸತೊಡಗಿದರು. ಅವರ ಹಿಂದೆ ಒಂದು ದೊಡ್ಡ ಯುವಜನ ಪಡೆಯೇ ಇತ್ತು. ಶಾಂತವೇರಿ ಗೋಪಾಲಗೌಡರು, ಜೆ.ಎಚ್‌. ಪಟೇಲರು ಮತ್ತು ಎಸ್‌. ವೆಂಕಟರಾಂ- ಈ ಮೂವರಿಗೂ ನಂಜುಂಡಸ್ವಾಮಿಯವರ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಅವರ ದುಡುಕಿನ ನಿಷ್ಠುರದ ಮಾತು ಅಸಹನೀಯವಾಗತೊಡಗಿತು.

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮಾತನ್ನು ಆಡಲು ತೊಡಗಿದ್ದ ಲಂಕೇಶ್‌ ಮತ್ತು ತೇಜಸ್ವಿಯವರೂ ನಂಜುಂಡಸ್ವಾಮಿ ಬೆಂಬಲಿಗರಾಗಿದ್ದರು. ಆದರೆ ಅವರು ಯಾರೋ ಒಬ್ಬನನ್ನು ನಾಯಕನೆಂದು ಒಪ್ಪಿಕೊಂಡು ಹಿಂಬಾಲಿಸುವ ಜನರಾಗಿರಲಿಲ್ಲ. ಹೀಗಾಗಿ ನಂಜುಂಡಸ್ವಾಮಿಯ ಒಳ ಬಳಗದಲ್ಲೂ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಹಿನ್ನೋಟದಲ್ಲಿ ನಾನು ಇದನ್ನು ಹೇಳಬಲ್ಲೆ; ಈ ಜಗಳಗಳಲ್ಲಿ ಕಪಟವಾಗಲಿ, ಕಾರಸ್ಥಾನವಾಗಲಿ ಇರಲಿಲ್ಲ. ನಾವು ಇದ್ದದ್ದು ಕೆಲವೇ ಕೆಲವು ಜನರಾದರೂ ನಮ್ಮ ನಡುವಿನ ಚರ್ಚೆಗಳು `ನಾವೊಂದು ದೊಡ್ಡ ಚಳುವಳಿ’ ಎಂದು ಭಾವಿಸಿಕೊಂಡಂತೆ ಎಲ್ಲರಿಗೂ ತೋರುತ್ತಿತ್ತು. ನಾವಂತೂ `ಈ ಪ್ರಪಂಚವನ್ನು ಸದ್ಯದಲ್ಲೇ ಬದಲಾಯಿಸಬಲ್ಲ ಜನ ನಾವು’ ಎಂದುಕೊಂಡವರಂತೆ ವರ್ತಿಸುತ್ತಿದ್ದೆವು. ಈ ಮಾತುಗಳನ್ನು ನಾನು ವ್ಯಂಗ್ಯದಲ್ಲಾ ಗಲಿ, ಅಪಹಾಸ್ಯದಲ್ಲಾಗಲಿ ಹೇಳುತ್ತಿಲ್ಲ. ಈ ನಮ್ಮ ಹುಚ್ಚುತನ ಆ ಕಾಲದ ಕರ್ನಾಟಕದ ಎಷ್ಟೋ ವಿಚಾರಗಳನ್ನು ಹುಟ್ಟುಹಾಕುವ ಸಾಧ್ಯತೆಯನ್ನು ಪಡೆದಿತ್ತು.

ವೆಂಕಟರಾಂ ಹೇಳಿದ ಒಂದು ಮಾತು ಇಲ್ಲಿ ನೆನಪಾಗುತ್ತದೆ: `ಭಾರತದ ಕಮ್ಯುನಿಸ್ಟರು ನಿಜದಲ್ಲಿ ಸೋಶಿಯಲ್‌ ಡೆಮೊಕ್ರಾಟರು; ಆದರೆ ತಮ್ಮನ್ನು ತಾವು ಕ್ರಾಂತಿಕಾರರೆಂದು ಭ್ರಮಿಸಿಕೊಂಡಿದ್ದಾರೆ. ಭಾರತದ ಲೋಹಿಯಾವಾದಿಗಳು ನಿಜದಲ್ಲಿ `ಆನಾರ್ಕಿಸ್ಟರು’; ಆದರೆ ತಮ್ಮನ್ನು ತಾವು ಸೋಶಿಯಲ್‌ ಡೆಮೊಕ್ರಾಟರು ಎಂದುಕೊಂಡಿದ್ದಾರೆ. ನಿಜ ತಿಳಿದು ಇಬ್ಬರೂ ವರ್ತಿಸಿದ್ದಾದರೆ ನಮ್ಮ ರಾಜಕೀಯ ಇನ್ನಷ್ಟು ಸ್ಪಷ್ಟನೆ ಪಡೆಯಬಹುದಾಗಿತ್ತು’.ಈ ನಮ್ಮ ಆಂದೋಲನದಲ್ಲಿ ಮುಖ್ಯವಾಗುತ್ತಾ ಹೋದ ಇನ್ನೊಬ್ಬರೆಂದರೆ ಮೈಸೂರಿನ ಗೆಳೆಯ ರಾಮದಾಸ್‌. ನಂಬಿಕೆಯ ಉಗ್ರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿಯವರಿಗಿಂತ ಇವರೇನೂ ಕಮ್ಮಿಯಿಲ್ಲ. ಬೂಟಾಟಿಕೆಯ ಹಲವು ವಿದ್ಯಾವಂತರ ನಡುವೆ ಇವರೆಲ್ಲಾ ಅಪ್ಪಟವೆನ್ನಿಸಿಕೊಂಡಿದ್ದರು; ಯಾವುದಕ್ಕೂ ಹೆದರದವರಾಗಿದ್ದರು. ಕೊಂಚ ಅತಿರೇಕದ ಅವಿವೇಕಿಗಳೂ ಆಗಿದ್ದರು.

ನಾನೀಗ ವರ್ಣಿಸುತ್ತಿರುವುದು ನಂಜುಂಡಸ್ವಾಮಿ ರೈತ ಸಂಘವನ್ನು ಕಟ್ಟುವುದಕ್ಕಿಂತ ಕೊಂಚ ಹಿಂದಿನ ಕಾಲ; ಮೈಸೂರಿನಲ್ಲಿ ನಡೆದ ಲೇಖಕರ ಒಕ್ಕೂಟದ ಸಭೆ ಮತ್ತು ಸ್ವಲ್ಪ ಕಾಲದ ನಂತರದ ಜಾತಿ ವಿನಾಶ ಸಮ್ಮೇಳನ ನನ್ನ ನೆನಪಿಗೆ ಈ ಕಾಲದ ಮೂಡನ್ನು ವಿವರಿಸಲು ನೆನಪಾಗುತ್ತದೆ. ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ಕೃಷ್ಣನೂ ನಂಜುಂಡ ಸ್ವಾಮಿಯವರ ಗುಂಪಿನವನೇ.
ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್‌ ಎಂಬೊಬ್ಬರ ಸ್ಕೂಟರ್‌ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತೀಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: `ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕ ದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ, ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗು ತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ.’

ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: `ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರೋದು ದಲಿತರಿಗೆ. ಹಾಗೆಯೇ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯತರಿಗೆ ಶೇಕಡ ಎಪ್ಪತ್ತೋ, ಅರವತ್ತೋ, ಐವತ್ತೋ ಅಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿಯನ್ನು ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.’

ಸುಮಾರು 1967ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ್‌ ಐತಾಳರಿಗೆ ಉತ್ತರವಾಗಿ ಸಾಹಿತ್ಯದಲ್ಲಿ `ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್‌ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್‌ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್‌ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ.

ನಂಜುಂಡಸ್ವಾಮಿ ತಾತ್ವಿಕವಾಗಿ ಆಳವಾಗಿ ಯೋಚಿಸುತ್ತಿದ್ದ ಧೀಮಂತ. ಆದರೆ, ಹೋರಾಟದ ಧೈರ್ಯ ಇರುವ ಒಂದು ಬಳಗವನ್ನು ಕಟ್ಟಿಕೊಳ್ಳಲಿಕ್ಕಾಗಿ ತತ್ವಗಳನ್ನು ಸರಳಗೊಳಿಸಿಕೊಂಡಾದರೂ ಕ್ರಿಯೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂಬ ನಿರ್ಧಾರದ ವ್ಯಕ್ತಿ. ಹೀಗೆ ಮಾಡುವಾಗ ಸತ್ಯ ಬಹುಮುಖಿ ಎನ್ನುವುದನ್ನು ಮರೆತು, ಏಕೋದ್ದೇಶದ ಸಂಕಲ್ಪದಲ್ಲಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ಥರದ ಮನಸ್ಸಿನ ನಂಜುಂಡಸ್ವಾಮಿಗೆ, ಸತ್ಯದ ಎಲ್ಲ ಮುಖಗಳನ್ನು ನೋಡಿ ಕಲಿಯಬೇ ಕೆಂದಿದ್ದ ನಾನು ಒಬ್ಬ ಗೊಂದಲದ ವ್ಯಕ್ತಿಯಾಗಿಯೇ ಸಹಜವಾಗಿ ಕಂಡಿದ್ದೆ. ಮುಂದಿನ ದಿನಗಳಲ್ಲಿ ತೇಜಸ್ವಿ, ಲಂಕೇಶ್‌ ಅವರಿಗೂ ನಂಜುಂಡಸ್ವಾಮಿ ಹಾಗೇ ಕಂಡಿರಬಹುದು. ಲೇಖಕರಾದ ನಮಗೆ ಮಾತ್ರವಲ್ಲ, ಸರಳ ಸಜ್ಜನಿಕೆಯ, ಆಳ ಶ್ರದ್ಧೆಯ ಕಡಿದಾಳ್‌ ಶಾಮಣ್ಣನವರಿಗೂ ಹಾಗೆ ಕಂಡಿರಬಹುದೇನೋ?

***

ನನಗೆ ನೆನಪಾಗುವುದನ್ನೆಲ್ಲ ಇಲ್ಲಿ ಬರೆಯಲಾರೆ. ನಂಜುಂಡಸ್ವಾಮಿ ಈ ಬಗೆಯ ಜಗಳಗಳಲ್ಲಿ ಜಾಣತನದ ಅಲ್ಪರಾಗಿ ವರ್ತಿಸುತ್ತಿರಲಿಲ್ಲ. ತನ್ನ ಉದ್ದೇಶ ಸಾಧನೆಗೆ ಬೇಕಾದ ಮಾರ್ಗವನ್ನು ತತ್ಪರರಾಗಿ ಕಂಡುಕೊಳ್ಳಬೇಕೆನ್ನುವ ನೈಜ ಕ್ರಾಂತಿಕಾರತೆ ಅವರಲ್ಲಿತ್ತು. ನನ್ನ ಜೀವನದಲ್ಲಿ ಉದ್ದಕ್ಕೂ ನಾನು ಏನೇ ಯೋಚಿಸಲಿ, ಅದಕ್ಕೆ ನಂಜುಂಡಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ನನ್ನಲ್ಲಿ ಉಳಿದೇ ಇತ್ತು.

ನಂಜುಂಡಸ್ವಾಮಿಯವರ ಮಹತ್ವದ ಸಾಧನೆ ಎಂದರೆ ಜಾಗತೀಕರಣದ ವಿರುದ್ಧ ಅವರು ಮಾಡಿದ ಹೋರಾಟ ಮತ್ತು ಅವರು ಕಟ್ಟಿದ ರೈತ ಸಂಘ. ಇಡೀ ಭಾರತದ ಮುಂಚೂಣಿಯಲ್ಲಿದ್ದ ರೈತ ನಾಯಕರಲ್ಲಿ ನಂಜುಂಡಸ್ವಾಮಿಯೂ ಒಬ್ಬರು. ಆದರೆ ಒಂದು ಚಳವಳಿಯಾಗಿ ರೈತ ಸಂಘ ಎಲ್ಲ ಪಕ್ಷಗಳಲ್ಲಿ ಹುಟ್ಟಿಸಿದ್ದ ದಿಗಿಲು, ಆತ್ಮಪರೀಕ್ಷೆ- ಇವು ಸಂಘ ನೇರವಾಗಿ ಚುನಾವಣೆಗೆ ಇಳಿದಾಗ ಉಳಿಯಲಿಲ್ಲ. ಇದೊಂದು ನಂಜುಂಡಸ್ವಾಮಿಯವರು ಮಾಡಿದ ತಪ್ಪೆಂದು ನಮ್ಮಲ್ಲಿ ಕೆಲವರು ತಿಳಿದಿದ್ದೆವು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ತಿಳಿಯಬೇಕಾದ ಒಂದು ಗುಟ್ಟಿದೆ. ಅಮೇರಿಕಾದಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಕರಿಯರ ಪರವಾಗಿ ಚಳವಳಿ ನಡೆಸಿದ್ದಾಗ, ಅಲ್ಲಿನ ಮುಖ್ಯ ಪಕ್ಷಗಳಾದ ರಿಪಬ್ಲಿಕನ್ನರು ಹಾಗೂ ಡೆಮಾಕ್ರಾಟರು ಮಾರ್ಟಿನ್‌ ಲೂಥರ್‌ ಕಿಂಗರ ಧ್ಯೇಯೋದ್ದೇಶಗಳಿಗೆ ಸ್ಪಂದಿಸಲೇಬೇಕಾಗಿ ಬಂತು. ಯಾರೇ ಅಧಿಕಾರಕ್ಕೆ ಬರಲಿ, ಕಿಂಗ್‌ ಹೇಳಿದ ಒಂದಿಷ್ಟನ್ನು ಆಚರಣೆಗೆ ತರಬೇಕಾಗಿ ಬಂದಿತು. ಒಮ್ಮೆ ಅಮೇರಿಕಾದ ಪ್ರೆಸಿಡೆಂಟರಾಗಿದ್ದ ಜಾನ್ಸನ್ನರು- ಅವರು ಸಂಪ್ರದಾಯವಾದಿಗಳಿಗೆ ಪ್ರಿಯರಾದವರು- ಮಾರ್ಟಿನ್‌ ಲೂಥರ್‌ ಕಿಂಗರನ್ನು ಚರ್ಚೆಗೆ ಆಹ್ವಾನಿಸಿ, ರಹಸ್ಯವಾಗಿ ಒಂದು ಮಾತನ್ನು ಹೇಳಿದರಂತೆ- `ಪುಷ್‌ ಮಿ ಮಾರ್ಟಿನ್‌, ಪುಷ್‌ ಮಿ’ (ನನ್ನ ಮೇಲೆ ಇನ್ನಷ್ಟು ಒತ್ತಾಯ ತರುವಂತೆ ಚಳುವಳಿ ಮಾಡು ಮಾರ್ಟಿನ್‌). ನಂಜುಂಡಸ್ವಾಮಿಯವರ ರೈತ ಚಳುವಳಿಯಲ್ಲಿ ಹೀಗೆ ಎಲ್ಲ ಪಕ್ಷದ ಮೇಲೂ ಒತ್ತಾಯ ತರಬಲ್ಲ ಶಕ್ತಿ ಇತ್ತು; ಆದರೆ ರೈತ ಸಂಘವೇ ಚುನಾವಣೆಗೆ ನಿಂತು ಅಲ್ಲೋ ಇಲ್ಲೋ ಗೆದ್ದು ಬಂದಾಗ ಈ ಶಕ್ತಿ ಉಳಿಯಲಿಲ್ಲ.

ಒಂದು ಆಂದೋಲನಕ್ಕೆ ಇರುವ ಅಸಾಮಾನ್ಯ ವೈಚಾರಿಕ ಆಯಾಮ, ಅದೊಂದು ರಾಜಕೀಯ ಪಕ್ಷವಾದಾಗ ಉಳಿಯುವುದು ಕಷ್ಟ. ಆದ್ದರಿಂದಲೇ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಹೇಳಿದ್ದಿರಬಹುದು.

ನಂಜುಂಡಸ್ವಾಮಿಯವರನ್ನು ಟೀಕಿಸಬೇಕೆಂದು ನಮ್ಮೆಲ್ಲರಿಗೂ ಅವರ ಬದುಕಿನುದ್ದಕ್ಕೂ ಅನ್ನಿಸಿದ್ದಿದೆ. ಏಕೋದ್ದೇಶದ ಅವರ ದೃಢ ವಿಶ್ವಾಸ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಲೇಖಕರು ಸಾಮಾನ್ಯವಾಗಿ ಗೌರವಿಸುವ ಮತ್ತು ಆಚರಿಸುವ ಸಂಕೀರ್ಣತೆ ನಮಗೆ ಕಾಣಿಸುತ್ತಿರ ಲಿಲ್ಲ. ಆದರೆ ಕರ್ನಾಟಕದ ರಾಜಕೀಯದಲ್ಲಿ ನಾನು ಕಂಡ ಮಹಾತಾತ್ವಿಕರೆಂದರೆ ಶಾಂತವೇರಿ ಗೋಪಾಲಗೌಡರು ಮತ್ತು ಎಂ.ಡಿ. ನಂಜುಂಡಸ್ವಾಮಿ. ಆದರೆ ಇವರಿಬ್ಬರೂ ಜಗಳವಾಡದೆ ಒಂದು ಕೋಣೆಯಲ್ಲಿ ಒಟ್ಟಾಗಿ ಒಂದು ಗಂಟೆ ಕೂತಿರುವುದು ಸಾಧ್ಯವಿರಲಿಲ್ಲ. ಭಾವುಕನಾಗಿ ನಾನು ಯಾವತ್ತೂ ಗೋಪಾಲಗೌಡರ ಪರವಾಗಿಯೇ ಸ್ಪಂದಿಸುತ್ತಿದ್ದವನು. ಇನ್ನೊಂದು ಸತ್ಯವಿದೆ: ಈ ಇಬ್ಬರ ವೈಚಾರಿಕತೆ ಮತ್ತು ಸಂಕಲ್ಪದ ದೃಢತೆ ಕೂಡಿ ಕೆಲಸ ಮಾಡಿದ್ದಾದರೆ ನಮ್ಮ ಪ್ರಪಂಚ ಕೊಂಚ ಬದಲಾಗಬಲ್ಲ ಭರವಸೆ ತುಂಬುತ್ತದೆ. ನಂಜುಂಡ ಸ್ವಾಮಿಯವರು ತನ್ನ ಅನುಯಾಯಿಗಳ ಜೊತೆ ಪ್ರಜಾಸತ್ತಾತ್ಮಕ ವಿನಯದಲ್ಲಿ ನಡೆದುಕೊಳ್ಳು ತ್ತಿರಲಿಲ್ಲವೆಂಬ ಅಪವಾದವಿದೆ. ಆದರೆ ಭ್ರಷ್ಟತೆ ಮತ್ತು ಜಾಗತೀಕರಣದ ಭ್ರಮೆಗಳ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವವರು ನಂಜುಂಡಸ್ವಾಮಿಯಂತೆ ಕಟುವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದೂ ಅಗತ್ಯವೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ.

ಇಲ್ಲಿನ ಕೆಸರಿನಲ್ಲಿ ಏನನ್ನಾದರೂ ಊರುವಂತೆ ಭದ್ರವಾಗಿ ನಿಲ್ಲಿಸುವುದು ಕಷ್ಟವೆಂದು ಲೋಹಿಯಾ ಹೇಳಿದ್ದು ನೆನಪಾಗುತ್ತದೆ.
ಕುಪ್ಪಳಿಸಿ ನಗುತ್ತಿದ್ದ ನನ್ನ ಇನ್ನೊಬ್ಬ ಗೆಳೆಯ ಆಚಾರಿ ಜೊತೆ ತುಂಬ ಗೆಲುವಿನಲ್ಲಿ, ಆದರೆ ಗಂಭೀರವಾಗಿ ನಂಜುಂಡಸ್ವಾಮಿ ಇರಬಲ್ಲವರಾಗಿದ್ದರು ಎಂಬುದೂ ಅವರನ್ನು ಸರಳಗೊಳಿಸದಂತೆ ನೋಡಲು ನನಗೆ ಸಹಾಯವಾಗಿದೆ.

ಈ ಲೇಖನ 2006 ಫೆಬ್ರವರಿ 26ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿರುವ ಋಜುವಾತು ಅಂಕಣದಲ್ಲಿ ಪ್ರಕಟವಾಗಿತ್ತು.

ಸಾಮಾಜಿಕ ಸ್ಥಿತ್ಯಂತರಕ್ಕೆ ಪ್ರಯತ್ನಿಸಿದ ನಾಲ್ವರು ರಾಜಕಾರಣಿಗಳು

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತಾತ್ವಿಕವಾಗಿ ಯೋಚಿಸಲ್ಲವರಾಗಿದ್ದ ಕೆಲವು ರಾಜಕಾರಣಿಗಳು ಇದ್ದರು; ವ್ಯವಸ್ಥೆಯನ್ನು ಅಚ್ಚುಕಟ್ಟಾಗಿನಿರ್ವಹಿಸಿದವರೂ ವಿರಳವಾಗಿದ್ದರು. ಮಾನ್ಯ ನಿಜಲಿಂಗಪ್ಪನವರು, ಹೆಗಡೆಯವರು, ಹನುಮಂತಯ್ಯನವರು, ವೀರೇಂದ್ರ ಪಾಟೀಲರು ಸಮರ್ಥ ಆಡಳಿತಗಾರರಾಗಿ ಥಟ್ಟನೆ ನೆನಪಾಗುತ್ತಾರೆ. ಕರ್ನಾಟಕದ ಏಕೀಕರಣಕ್ಕಾಗಿ ನಿಜಲಿಂಗಪ್ಪನವರು, ವಿಕೇಂದ್ರೀಕರಣಕ್ಕಾಗಿ ಹೆಗಡೆಯವರು, ಸಂಸ್ಕೃತಿ ಪ್ರಸಾರಕ್ಕಾಗಿ ಹನುಮಂತಯ್ಯನವರು, ವ್ಯವಸ್ಥೆಯ ಅಚ್ಚುಕಟ್ಟಿಗಾಗಿ ವೀರೇಂದ್ರ ಪಾಟೀಲರು ಮಾಡಿದ ಕೆಲಸವನ್ನು ಜನ ಮೆಚ್ಚಿದ್ದಾರೆ. ವಿದ್ಯಾಕ್ಷೇತ್ರದಲ್ಲಿ ಆಗುತ್ತಿರುವ ವ್ಯಾಪಾರೀಕರಣವನ್ನು ತಡೆಗಟ್ಟಲು ಹೋಗಿ ವಿರೋಗಳನ್ನು ಬೆಳೆಸಿಕೊಂಡ ಮೊಯಿಲಿಯವರನ್ನು ಕೃತಜ್ಞಭಾವದಲ್ಲಿ ಗುರುತಿಸುವವರಲ್ಲಿ ನಾನೂ ಒಬ್ಬ. ಮಾನವೀಯತೆ, ಬಿಚ್ಚುಮಾತಿನ ಪ್ರಾಮಾಣಿಕತೆ ಮತ್ತು ಹಾಸ್ಯಪ್ರಜ್ಞೆಯ ಪಟೇಲರು ನನ್ನ ಆತ್ಮೀಯರು. ಆದರೆ ಈಗ ನಾನು ಬರೆಯ ಹೊರಟಿರುವುದು ಯಾವ ರಾಜಕಾರಣಿಗಳು ತಾತ್ವಿಕವಾಗಿ ಯೋಚಿಸಿದ್ದಷ್ಟೇ ಅಲ್ಲದೆ, ಒಳ್ಳೆಯ ಆಡಳಿತ ನಡೆಸಿದ್ದಷ್ಟೇ ಅಲ್ಲದೆ, ವ್ಯವಸ್ಥೆಯಲ್ಲೇ ದಲಾವಣೆಗಳನ್ನೂ ತರಲು ಪ್ರಯತ್ನಿಸಿದರು ಎಂಬುದರ ಬಗ್ಗೆ. ಈ ಕುರಿತು ಚರ್ಚೆ ನಡೆಯಲಿ ಎಂದು ಆದಷ್ಟು ಸರಳವಾಗಿ, ನೇರವಾಗಿ ಈ ರಾಜಕಾರಣಿಗಳನ್ನು ಗುರುತಿಸಲು ಯತ್ನಿಸುತ್ತೇನೆ. ಅವರು ಯಾರೆಂದರೆ: ಶಾಂತವೇರಿ ಗೋಪಾಲಗೌಡರು, ಅಬ್ದುಲ್‌ ನಜೀರ್‌ ಸಾಬರು, ದೇವರಾಜ ಅರಸರು ಮತ್ತು ಬಸವಲಿಂಗಪ್ಪನವರು. ಈ ನಾಲ್ಕು ಹೆಸರುಗಳನ್ನು ಮಾತ್ರ ನಾನು ಇಲ್ಲಿ ಎತ್ತಲು ಕಾರಣ ನನ್ನ ದೃಷ್ಟಿಕೋನವನ್ನು, ಪರೀಕ್ಷೆಯ ನಿಕಷವನ್ನು ಒಟ್ಟಿನಲ್ಲಿ ಒಪ್ಪಿಕೊಳ್ಳುವವರು ಬೇರೆ ಹೆಸರುಗಳಿದ್ದರೆ ಅವರನ್ನೂ ಗುರುತಿಸಿ ಚರ್ಚೆ ಬೆಳೆಸಲಿ ಎಂದು. ಸಾಮಾಜಿಕ ಬದಲಾವಣೆ ಸದ್ಯದ ನನ್ನ ಲಕ್ಷ್ಯವಿದ್ದಂತೆ, ಓದುಗರದೂ ಆಗಿದ್ದಲ್ಲಿ ಚರ್ಚೆಗೆ ಅರ್ಥ ಮತ್ತು ದಿಕ್ಕು ಇರುತ್ತದೆ. ಜಾತಿಗೀತಿ ಬಡತನ ಇತ್ಯಾದಿಯಾಗಿ ನಮ್ಮ ಗ್ರಾಮೀಣ ಬದುಕಿನ ಸಮಸ್ಯೆಗಳ ಮೂಲವಿದ್ದದ್ದು ಭೂಮಿಯ ಒಡೆತನದ ಪ್ರಶ್ನೆಯಲ್ಲಿ. ನನ್ನ ಬಾಲ್ಯದಲ್ಲಿ ನಾನು ನೋಡಿದ, ಅನುಭವಿಸಿದ ಅನೇಕ ದುಷ್ಟತನಗಳು ಗೇಣಿ ವಸೂಲಿಯ ಸಂದರ್ಭದಲ್ಲಿ ನಡೆದಂಥವು ಆಗಿದ್ದವು. ನನ್ನ ತಂದೆಯವರು ಕೆಲಸ ಮಾಡುತ್ತಿದ್ದ ಮಠದವರೇ ಒಬ್ಬ ಬಡವ ಗೇಣಿದಾರನ ಮನೆಯನ್ನು ಜಪ್ತಿ ಮಾಡಿದ್ದನ್ನು, ಅದರಿಂದ ನನ್ನ ತಂದೆ ಖಿನ್ನರಾದದ್ದನ್ನು ನಾನು ನೋಡಿದ್ದೇನೆ. ಇನ್ನೊಬ್ಬ ಸಣ್ಣ ಜಮೀನಿನ ಮಾಲೀಕ- ಅಂಥ ದೊಡ್ಡ ಕುಳವೇನೂ ಅಲ್ಲ- ತನಗಿಂತ ಬಡಪಾಯಿಯಾಗಿದ್ದ ಗೇಣಿದಾರನ ಹೆಂಡತಿ ಒಲೆಯ ಮೇಲೆ ಕಾಯಲು ಇಟ್ಟ ಹಾಲನ್ನು ಕೂಡಾ ಹೊರಗೆ ಎಸೆದು ಮನೆಯಲ್ಲಿ ಇದ್ದುದೆಲ್ಲವನ್ನೂ ಜಪ್ತಿ ಮಾಡಿಕೊಂಡು ಹೋದುದನ್ನು ನಾನು ನೋಡಿದ್ದೇನೆ. ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಸಮಾಜವಾದಿ ಚಿಂತನೆ ನನ್ನಲ್ಲಿ ಹುಟ್ಟಿದ್ದು ಹೀಗೆ. ನನ್ನ ಕಾಲದಲ್ಲಿ ಶಾಂತವೇರಿ ಗೋಪಾಲಗೌಡರು ಇದನ್ನು ಹುಟ್ಟಿಸಿದವರಲ್ಲಿ ಬಹಳ ಮುಖ್ಯರು. ಅವರು ವಿದಾನಸಭೆಯಲ್ಲಿ ಬರೇ ಎರಡು ಮೂರು ಜನರನ್ನು ಜೊತೆಯಲ್ಲಿಟ್ಟುಕೊಂಡು ಒಂದು ದೊಡ್ಡ ವಿರೋಧ ಪಕ್ಷದ ಹಾಗೆ ಕೆಲಸ ಮಾಡುತ್ತಾ ಬಂದವರು ಮತ್ತು ಚುನಾವಣೆಗೆ ನಿಂತಾಗ ಒಂದು ಓಟು ಮತ್ತು ಒಂದು ನೋಟು ಎರಡನ್ನೂ ಕೊಡಿ ಅಂತ ಕೇಳಿದವರು. ಭೂ ಹಂಚಿಕೆ ಅವರ ಕಾಲದಲ್ಲಿ ಆಗಲಿಲ್ಲ. ಅದು ಆಮೇಲೆ ಆಯಿತು. ನಾವು ಬಯಸಿದಷ್ಟು ಅಲ್ಲ; `ಉಳುವವನೇ ಹೊಲದೊಡೆಯ' ಎನ್ನುವ ಗೌಡರ ಸ್ಲೋಗನ್ನು ಸ್ಲೋಗನ್ನಾಗಿಯೇ ಉಳಿಯಿತು. ಆದರೆ ಅದಕ್ಕೆ ಬೇಕಾದ ಮನೋ ಸಿದ್ಧತೆಗೆ ಕಾರಣರಾದವರು ಗೋಪಾಲಗೌಡರು. ಅವರ ವಲಯದಲ್ಲಿ ಈ ಹೋರಾಟಕ್ಕೆ ಸಹಾಯಕರಾದ ಬಹಳ ಜನರಿದ್ದರು. ಅವರ ಬಗ್ಗೆ ಪ್ರತ್ಯೇಕವಾಗಿ ಬರೆಯುವುದಿದೆ. ಎರಡನೆಯವರು ಅಬ್ದುಲ್‌ ನಜೀರ್‌ ಸಾಬರು. ಕುಡಿಯಲು ನೀರಿಲ್ಲದೆ ಮಕ್ಕಳನ್ನು ಹೆತ್ತು ಹೊತ್ತ ಹೆಂಗಸರು ಮೈಲುಗಟ್ಟಳೆ ನಡೆದು ಹೋಗಿ, ಕೊಡಪಾನದಲ್ಲಿ ನೀರು ತುಂಬಿಸಿಕೊಂಡು ತಲೆಯ ಮೇಲಿಟ್ಟುಕೊಂಡು, ಅದನ್ನು ಚೆಲ್ಲದಂತೆ ನಡೆದು ತರುವ ದೃಶ್ಯ ಆಗ ಎಲ್ಲೆಲ್ಲೂ ಕಾಣಿಸುತ್ತಿತ್ತು. ಹೀಗೆ ಕೊಡದಲ್ಲಿ ನೀರನ್ನು ಹೊತ್ತು ನಡೆಯುವಾಗಲೂ ಅಪಾರವಾದ ಕುಶಲತೆಯನ್ನೂ, ನಿತ್ಯಸತ್ಯಗಳ ಮಾತುಗಾರಿಕೆಯ ಸೊಗಸನ್ನೂ ಈ ಹಳ್ಳಿ ಹೆಂಗಸರು ಹೇಗೆ ಉಳಿಸಿಕೊಳ್ಳಲು ಸಾಧ್ಯವಾಯಿತೊ- ಅದೊಂದು ಬೆರಗಿನ ವಿಷಯ. ಜೊತೆಗೇ ಅದನ್ನು ಕೇವಲ ಮೆಚ್ಚುವ ಹಾಗಿನ ಕವಿ-ತೆವಲಿನಲ್ಲಿ ವರ್ಣಿಸಬಾರದ ವಿಷಯ. ಅವರನ್ನು ಈ ಅನಿವಾರ್ಯವಲ್ಲದ ಕಷ್ಟದಿಂದ ಪಾರು ಮಾಡಿದವರು ನಜೀರ್‌ ಸಾಬರು. ಅವರು ಹಳ್ಳಿ ಹಳ್ಳಿಯಲ್ಲಿ ಹೋಗಿ ತಾವೇ ಖುದ್ದು ನಿಂತು ಕೊಳವೆ ಬಾವಿ ತೋಡಿಸಿದರು. ದಲಿತರ ಕೇರಿಯಲ್ಲಿ ನೀರು ಸಿಗುವುದಾದರೆ ಮೊದಲು ಅಲ್ಲಿ ತೋಡಿಸಿದರು. ಅವರನ್ನು ನೀರು ಸಾಬಿ ಎಂದೇ ಜನ ಕರೆದರು. ಅದುಲ್‌ ನಜೀರ್‌ ಸಾಬರಿಗೆ ಈ ಕೆಲಸವನ್ನು ಮಾಡಲು ನಿಜವಾಗಿ ಬೆಂಬಲವಾಗಿ ನಿಂತವರು ನನಗೆ ಗೊತ್ತಿರುವ ಹಾಗೆ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್‌. ಪಟೇಲರು. ಈ ಕೊಳವೆ ಬಾವಿಗಳಲ್ಲಿ ತಾವು ಇರುವಲ್ಲೇ ನೀರು ಸಿಗುವಂತೆಯೇ ಅಕಾರವೂ ಸಿಗುವಂತಹ ವಿಕೇಂದ್ರೀಕೃತ ವ್ಯವಸ್ಥೆಗಾಗಿ ಅವರು ದುಡಿದರು. ನಜೀರ್‌ ಸಾಬ್‌ ಕರ್ನಾಟಕದ ಮುಖ್ಯಮಂತ್ರಿ ಆಗಹುದಿತ್ತು. ನಿಜವಾದ ಜಾತ್ಯತೀತತೆಯನ್ನು ನಾನು ಅವರಲ್ಲಿ ಕಂಡಿದ್ದೆ. ಮುಸ್ಲಿಂ ಜನ ಸಮುದಾಯದಲ್ಲಿ ಏನಕೇನ ಜನಪ್ರಿಯರಾಗಿ ಅವರ ಓಟು ಪಡೆಯಲು ಸಾಧ್ಯವಿಲ್ಲದಷ್ಟು ಬಿಚ್ಚು ಮನಸ್ಸಿನ ಹಾಗೂ ವರ್ತನೆಯ ಜಾತ್ಯತೀತವಾದಿ ಅವರು. ಶುಕ್ರವಾರವಾದರೂ ಮಸೀದಿಗೆ ಹೋಗಿ ನೀವು ನಮಾಜ್‌ ಮಾಡಿ ಬರರಬಾರದೇ ಎಂದು ಸದಾ ಬೀಡಿ ಸೇದುವ, ಕೆದರಿದ ಕೂದಲಿನ, ದೊಗಲೆ ಪೈಜಾಮ ಜುಬ್ಬ ಧರಿಸುವ ನಜೀರರನ್ನು ನಾವು ಛೇಡಿಸಿದ್ದುಂಟು. ಮೂರನೆಯವರು ದೇವರಾಜ ಅರಸು. ಇವರ ಬಗ್ಗೆ ಕೂಡಲೇ ಹೇಳಬೇಕಾದ ಮಾತೊಂದಿದೆ. ಇವರ ಕಾಲದಲ್ಲಿಯೇ ಕರ್ನಾಟಕದಲ್ಲಿ ಭ್ರಷ್ಟಾಚಾರ ನೆಲೆ ಊರಿಬಿಟ್ಟಿತೆಂದೂ ಅವರು ಈ ಭ್ರಷ್ಟಾಚಾರವನ್ನು ತಮ್ಮ ರಾಜಕೀಯಕ್ಕೆ ನೇರವಾಗಿ ಬಳಸಿಕೊಂಡರೆಂದೂ ಎಡಗೈಯಲ್ಲಿ ತೆಗೆದುಕೊಂಡದ್ದನ್ನು ಬಲಗೈಯಲ್ಲಿ ಕೊಡುತ್ತಿದ್ದರೆಂದೂ ನಮ್ಮ ನೈತಿಕ ಭಾವನೆಗಳನ್ನು ಗಲಿಬಿಲಿಗೊಳಿಸಲ್ಲ ಮಾತುಗಳನ್ನು ಆಗ ನಾವೆಲ್ಲರೂ ಕೇಳುತ್ತಿದ್ದೆವು. ನಿಜವೆಷ್ಟು, ಅತಿಶಯವೆಷ್ಟು ಇಂತಹ ಆರೋಪಗಳಲ್ಲಿ ಎಂಬುದು ಅದರಿಂದ ಪ್ರಯೋಜನ ಪಡೆಯುವವರಿಗೆ ಮುಖ್ಯವೆನ್ನಿಸುವುದೇ ಇಲ್ಲ. ಹೊರಗಿನ ನಮಗೆ ಸ್ಪಷ್ಟವಾಗುವುದೇ ಇಲ್ಲ. ಅರಸರು ಮಾಡಿದ ಭೂಹಂಚಿಕೆ, ಜೀತವಿಮೋಚನೆ ಇತ್ಯಾದಿ ಒಳ್ಳೆಯ ಕೆಲಸಕ್ಕೆ ವಿರೋಧವಾಗಿಯೂ ಮೇಲುಜಾತಿಗಳು ಒಟ್ಟಾಗಿ ಜನತಾ ಪಕ್ಷದ ಜಯಕ್ಕೆ ಕಾರಣರಾದರು ಎಂಬುದನ್ನು `ತಾತ್ವಿಕ' ಕಾರಣಕ್ಕೆ ಜನತಾವನ್ನು ಬೆಂಬಲಿಸಿದ ನನ್ನಂಥವರು ಮರೆಯಬಾರದು. ಅವರು ಅಧಿಕಾರ ಕಳೆದುಕೊಂಡ ಮೇಲೆ ಮೈಸೂರಿನಲ್ಲಿ ನಾನು ಈ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಅವರನ್ನು ಮುಜುಗರದಲ್ಲಿ ಕೇಳಿದ್ದೆ. ಅದಕ್ಕವರು ನಸುನಕ್ಕು `ಈ ಬಗ್ಗೆ ನಾನು ಬಹಳ ಹೇಳುವುದಿದೆ, ಆಮೇಲೆ' ಎಂದು ಸ್ನೇಹದಲ್ಲಿ ನುಡಿದಿದ್ದರು. ತ್ಯಾಗ-ಭೋಗ ಸಮನ್ವಯದ ಭರತೇಶನನ್ನೂ ಗುಮಾನಿಯಿಂದ ನೋಡುತ್ತಿದ್ದ ಆಗಿನ ನನ್ನಂಥವರು ಕೊಂಚ ಗುಮಾನಿಯಿಂದಲೇ ಅರಸರು ರಾಜಕಾರಣದಲ್ಲಿ ತಂದ ಪಲ್ಲಟವನ್ನು ಗುರುತಿಸಿದ್ದೆವು. ಮುಂದೆ ಅರಸರ ಅಭಿಮಾನಿಗಳಲ್ಲಿ ಅವರ ಉತ್ಕಟತೆಯಾಗಲೀ, ಕೊನೆಯಪಕ್ಷ ಸಾಧನೆಯ ಜಾಣ್ಮೆಯಾಗಲೀ ಕಾಣಲಿಲ್ಲ. ಎಮರ್ಜನ್ಸಿ ಕಾಲದಲ್ಲಿ ಎಲ್ಲ ಮುಖ್ಯಮಂತ್ರಿಗಳೂ ಅರಸರಂತೆ ವರ್ತಿಸಿದ್ದಲ್ಲಿ ಇಂದಿರಾಗಾಂಧಿ ಸೋಲುತ್ತಿರಲಿಲ್ಲವೇನೊ? ಯಾವ ಜಾತಿಯೂ ಇನ್ನೊಂದು ಜಾತಿಯ ಸಹಕಾರವಿಲ್ಲದೆ ತಾನು ಮಾತ್ರ ಈ ದೇಶವನ್ನು ಆಳಲು ಸಾಧ್ಯ ಎಂಬ ಗರ್ವದ ಯಜಮಾನಿಕೆಗೆ ತಡೆ ತಂದವರು ದೇವರಾಜ ಅರಸರು. ಬಿಹಾರದಲ್ಲಿ ಕರ್ಪೂರಿ ಠಾಕೂರರು ಇದನ್ನು ಮಾಡಲು ಯತ್ನಿಸಿ ಸೋತಾಗ ಅರಸರು ಅವರಿಗೆ ಹೀಗೆ ಹೇಳಿದರೆಂದು ಒಂದು ಸುದ್ದಿ ಕೇಳಿದ್ದೇನೆ; `ನಿಮ್ಮಿಂದಾಗಿ ಆಯ್ಕೆಯಾಗುವ ಸಣ್ಣಪುಟ್ಟ ಜಾತಿಯ ಜನರಿಗೆ ತಮ್ಮ ಮೇಲಿನ ಒತ್ತಡ ತಾಳಿಕೊಳ್ಳಲು ಧನಲ ಬೇಕು. ಅದನ್ನು ನೀವು ಹೇಗಾದರೂ ಒದಗಿಸಿ ಅವರನ್ನು ಉಳಿಸಿಕೊಳ್ಳಬೇಕು. ಚುನಾವಣೆ ನಡೆಸಲು ಹಣಬೇಕಲ್ಲವೆ?' ಅರಸರು ತಂದ ಬದಲಾವಣೆಮಾತ್ರ ನೈತಿಕವಾಗಿ ಗಟ್ಟಿಯಾಗದೆ, ಕೆಳಜಾತಿಗಳು ಇನ್ನೂ ಬಲವಾಗದೆ ಉಳಿದಿವೆ. ಇದಕ್ಕೆ ಅರಸರು ಬಳಸಿದ ಅವಕಾಶವಾದಿ `ಉಪಾಯ'ಗಳೂ ಕಾರಣವಿರಹುದು. ಉಪಾಯಗಳು ಶಾಶ್ವತ ಅಸ್ತ್ರಗಳಾಗಿ ಬಿಡುತ್ತವೆ! ಹಿಂದುಳಿದ ಜಾತಿಗಳ ರಾಜಕಾರಣ ಗುರಿತಪ್ಪಿರುವುದು ಉಪಾಯಗಳು ಧನಗಳಿಕೆಯ ಅಸ್ತ್ರಗಳಾಗಿ ಬಿಟ್ಟಿರುವುದರಿಂದ. ನಾಲ್ಕನೆಯವರು ಬಸವಲಿಂಗಪ್ಪ. ಅವರು ಎಲ್ಲರಂತೆ ಒಬ್ಬ ಕಾಂಗ್ರೆಸ್‌ ರಾಜಕಾರಣಿ. ಈ ಚುನಾವಣೆಗಳಿಗಾಗಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಬಹಳ ಪ್ರಾಮಾಣಿಕವಾಗಿ ಅವರು ಮಾತನಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ಜತೆಗಿನ ನನ್ನ ಅನುಭವವೊಂದನ್ನು ನೆನಪಿಸಿಕೊಳ್ಳುತ್ತೇನೆ. ಆಗ ಇಂದಿರಾಗಾಂಧಿಯವರ ಚಿಕ್ಕಮಗಳೂರು ಚುನಾವಣೆಯಲ್ಲಿ ಅವರ ತುರ್ತುಪರಿಸ್ಥಿತಿ ಕ್ರೌರ್ಯದ ವಿರುದ್ಧ ನಾವೆಲ್ಲಾ ಪ್ರಚಾರ ನಡೆಸುತ್ತಿದ್ದೆವು. ಈ ದಿನಗಳಲ್ಲಿ ಒಮ್ಮೆ ನಾನು, ನಂದನಾ ರೆಡ್ಡಿ ಮತ್ತು ಬಸವಲಿಂಗಪ್ಪ ಒಟ್ಟಿಗೆ ಮಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ನಂದನಾ ರೆಡ್ಡಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಬಸವಲಿಂಗಪ್ಪ ಹಿಂದಿನ ಸೀಟಿಗೆ ಬೆಟ್ಟುಮಾಡಿ ತೋರಿ`ಅವರು ಎಷ್ಟು ಮಾಡಿಕೊಂಡರು?' ಎಂದು ಕೇಳಿದರು. ನನಗೆ ಅರ್ಥವಾಗಲಿಲ್ಲ ಎಂದೆ. 'ಅಯ್ಯೋ ಅನಂತಮೂರ್ತಿ, ನಿಮಗೆ ಇದೇನೂ ಅರ್ಥವಾಗುವುದಿಲ್ಲ. ಒಂದು ಚುನಾವಣೆ ನಡೆಯುತ್ತಿದೆ ಅಂದರೆ ಹಣದ ಹೊಳೆ ಹರಿಯುತ್ತಿರುವ ಹಾಗೆ. ನಾವು ನಮ್ಮ ನಮ್ಮ ಚೊಂಬುಗಳನ್ನು ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ರುತ್ತೇವೆ. ನಾನೂ ಹಾಗೆ ಮಾಡದೆ ಇದ್ದರೆ ಎಲೆಕ್ಷನ್‌ ಗೆಲ್ಲಲು ಸಾಧ್ಯವಿತ್ತೇ? ನಮ್ಮ ಲೀಡರೇ ನನ್ನ ಸೋಲಿಸಲು ನನ್ನ ಎದುರಾಳಿಗೆ ದುಡ್ಡು ಕೊಟ್ಟಿರುತ್ತಾರೆ. ಇವೆಲ್ಲ ತಿಳಿಯದ ನೀವು ಚುನಾವಣೆ ಪ್ರಚಾರಕ್ಕೆ ಹೋಗಬಾರದು'. ದು ಬಸವಲಿಂಗಪ್ಪನವರ ಮಾತಿನ ರೀತಿ. ಇದರ ಜತೆಗೆ ಅವರಲ್ಲಿ ಒಂದು ದಿಟ್ಟವಾದ ಸಿನಿಕತನದ ಸೋಂಕು ಇಲ್ಲದ ವಿಚಾರವೂ ಇತ್ತು. ಇಂದಿರಾಗಾಂಧಿಯನ್ನು ಅವರು ದುರ್ಗೆಯೆಂದು ನಮ್ಮ ಬೇಂದ್ರೆಯಂತೆ, ಮೊಕಾಶಿಯಂತೆ, ಚಿತ್ರಕಾರ ಹುಸೇನ್‌ರಂತೆ ಭಾವಿಸಿದ್ದರು. ಆಕೆಯ ಬಲವಿಲ್ಲದೆ ಅರಸರು ಏನನ್ನೂ ಸಾಧಿಸಲು ಆಗುತ್ತಿರಲಿಲ್ಲವೆಂದೂ ವಾದಿಸುತ್ತಿದ್ದರು. ದಲಿತರು ಮಲ ಹೊರುವುದನ್ನು ಹೇಗಾದರೂ ತಪ್ಪಿಸಬೇಕು ಎಂಬ ವಿಷಯದಲ್ಲಿ ಅವರು ತತ್ಪರರಾಗಿ ಕೆಲಸ ಮಾಡಿದರು. ಅವರು ತೀರ್ಥಹಳ್ಳಿಯ ಸಭೆಯೊಂದರಲ್ಲಿ ಹೇಳಿದ್ದು ನೆನಪಾಗುತ್ತದೆ. ನನ್ನ ಸಂಸ್ಕಾರ ಕಾದಂರಿಯಲ್ಲಿ ಶೂದ್ರ ಹೆಣ್ಣನ್ನು ಬ್ರಾಹ್ಮಣ ಪ್ರೀತಿಸುವುದೇ ಹೊರತಾಗಿ ಬ್ರಾಹ್ಮಣ ಹೆಣ್ಣನ್ನು ಶೂದ್ರ ಪ್ರೀತಿಸುವುದಲ್ಲ ಎಂದು ಆತ್ಮೀಯವಾಗಿ ಟೀಕಿಸಿ , ಕಣ್ಣು ಮಿಟುಕಿಸಿ, `ನಿಮ್ಮ ಭಾರತೀಪುರ ಓದಿದ್ದೇ ಮಲಹೊರುವ ಪದ್ಧತಿಯನ್ನು ನಿಲ್ಲಿಸಬೇಕೆಂದು ಶಪಥ ಮಾಡಿದೆ' ಎಂದರು (ನನ್ನ ಕೃತಿಗಳೆಲ್ಲವನ್ನೂ ಅವರಿಗೆ ಓದಿಸುತ್ತಿದ್ದವರು ಮೊದಲು ಗೋಪಾಲಗೌಡರು, ನಂತರ ಪಟೇಲರು). ಮತ್ತೆ ಸಭೆಯಲ್ಲಿದ್ದ ಬ್ರಾಹ್ಮಣರನ್ನು ಉದ್ದೇಶಿಸಿ: `ಈಗ ನಮ್ಮ ಜನ ಹೊರುತ್ತಿರುವ ಮಲ ಒಳ್ಳೆಯ ಆರ್ಗಾನಿಕ್‌ ಮೆನೂರ್‌ ಮಾಡಿದರೆ, ಚೀನಾದಲ್ಲಿ ಮಾಡುತ್ತಿರುವಂತೆ, ಆಗ ಅದರ ಬೆಲೆ ಎಷ್ಟಿರುತ್ತದೆ ಗೊತ್ತೆ? ಆಗ ನಿಮ್ಮ ಹೆಗಲುಗಳ ಮೇಲೆ ಪ್ರಿಂಟೆಡ್‌ ಚೀಲಗಳಲ್ಲಿ ಅದು ಇರುತ್ತೆ' ಎಂದು ನಕ್ಕಿದ್ದರು. ಬಸವಲಿಂಗಪ್ಪನವರನ್ನು ಜಾತಿವಾದಿ ಎಂದು ಕರೆಯಲು ಸಾಧ್ಯವೇ ಆಗದಂತೆ ತಮ್ಮ ವಿಚಾರವನ್ನು ಮಂಡಿಸಬಲ್ಲ ಸೊಗಡು ಅವರ ಮಾತಿನಲ್ಲಿತ್ತು. ಬೂಸಾ ಪ್ರಕರಣದ ಅವರ ವಾದಗಳು ಇದಕ್ಕೆ ಉದಾಹರಣೆ. ಅದರಿಂದಾಗಿ ಅಸ್ಪೃಶ್ಯ ಜಾತಿಗಳಲ್ಲದೆ ಉಳಿದ ನಿರ್ಗತಿಕರೂ `ದಲಿತ' ಎಂಬ ಕಲ್ಪನೆಗೆ ಒಳಗಾದರು. ಕೈ ಕೆಸರು ಮಾಡಿಕೊಳ್ಳಲು ಅಂಜುವವನು ರಾಜಕಾರಣದಲ್ಲಿ ಏನೂ ಸಾಸಲಾರ ಎಂಬ ವಾದವಿದೆ- ಇದು ಚುನಾವಣೆಗಳಲ್ಲಿ ಗೆದ್ದು ಬರಬೇಕಾದ ಪ್ರಜಾತಂತ್ರದಲ್ಲಿ ನಂಬಿದವರ ವಾದ. ಭ್ರಷ್ಟಾಚಾರವಲ್ಲದಿದ್ದರೂ, ವೈಯಕ್ತಿಕ ಲಾಭಕ್ಕಲ್ಲದಿದ್ದರೂ, `ವಸೂಲಿ' ಮಾಡದೆ ಪಕ್ಷ ಬೆಳೆಸಲು ಸಾಧ್ಯವಿಲ್ಲ ಎನ್ನುವ ವಾದವಿದು. ಅರಸರಂಥವರ, ಬಸವಲಿಂಗಪ್ಪನಂಥವರ ವಾದ ಇದು. ಉದ್ದೇಶಪೂರ್ವಕವಾದ ಕ್ರೌರ್ಯವಲ್ಲದ, ಅದೊಂದು ಗೀಳಾಗಿಬಿಡದ, ಅಗತ್ಯವಾದ `ಹಿಂಸೆ'ಗೆ ಅಂಜುವವನು ಕ್ರಾಂತಿಕಾರ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ಇನ್ನೊಂದು ವಾದವಿದೆ. ಇದು ಮಾವೋ ಲೆನಿನ್‌ನಂಥವರ ವಾದ. ಶಾಶ್ವತವಲ್ಲದ ಈ ದುಕಿನಲ್ಲಿ ಯಾವುದಕ್ಕೂ ಅಂಟಿಕೊಳ್ಳದಂತೆ ದೈವದಲ್ಲಿ ತಲ್ಲೀನನಾಗಿರಬೇಕು ಎಂಬ ಸಿದ್ಧಾಂತವೂ ಇದೆ. ಇವರು ಕೊಳಕನ್ನು ನೋಡಲು ಒಲ್ಲದ ಜಾಣ ಕುರುಡರೂ ಆಗಿರಬಹುದು; ರಮಣರಂತಹ ಕರುಣಾಶೀಲರೂ ಆಗಿರಹುದು; ಶ್ರೀಮಂತರ ಟೆನ್ಶನ್‌ ಇಳಿಸುವ ಶ್ರೀ ಶ್ರೀ ಗುರುಗಳೂ ಆಗಿರಬಹುದು. ಮಾರ್ಗ ಮತ್ತು ಗುರಿ ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ; ಸದ್ಗುರಿಗೆ ಸನ್ಮಾರ್ಗವೊಂದೇ ದಾರಿ ಎಂ ಇನ್ನೊಂದು ನಿಷ್ಠುರ ನಂಬಿಕೆಯಿದೆ. `ಸಾಕು ನನಗೊಂದು ಹೆಜ್ಜೆ' ಎಂದು ಆ ಇನ್ನೊಂದು ಹೆಜ್ಜೆಗಾಗಿ ಸಾವಿಗೂ ಅಂಜದ ಗಾಂಧಿಯಂಥವರ ನಿಲುವು ಇದು. ಎಲ್ಲ ವಾದಗಳಿಗೂ ಒಂದು ನಿಜದ ತಿರುಳು ಸಿಗುವುದು ನಾವು ದೀನ ದಲಿತರ ಪರವಾಗಿ, ಮಾತಾಡಲಾರದೇ ಇರುವವರ ಪರವಾಗಿ, ಭೀತರ ಪರವಾಗಿ ನಿಲ್ಲದೇ ಹೋದರೆ ನಮ್ಮ ಬದುಕಿಗೆ ಅರ್ಥವಿಲ್ಲ ಎನ್ನಿಸಿದಾಗ; ಅಂದರೆ ವೈಯಕ್ತಿಕ ಜಂಜಾಟದ ಈ ಸಂಸಾರದ ನಡುವೆ ಬದುಕುತ್ತಿರುವಾಗಲೇ ನಮ್ಮಂಥ ಸಾಮಾನ್ಯರಿಗೆ ಹೀಗೆ ಅನ್ನಿಸುವುದು ಮಾತ್ರವಲ್ಲದೆ, ಅನ್ನಿಸಿದ್ದರ ಪರಿಣಾಮವಾಗಿ ಅಷ್ಟೋ ಇಷ್ಟೋ ನಾವು ಕಾರ್ಯ ಪ್ರವೃತ್ತರಾದಾಗ. ಒಳಗಿನ ತುಮುಲ ಕಳೆಯದಂತೆ ಹೊರಗಿನ ಕ್ರಿಯೆಯಲ್ಲಿ ತನ್ನ ಕೈಯಲ್ಲಾದಷ್ಟು, ಯಾವ ಮಿತಿಯಲ್ಲಾದರೂ ವಿನಯದಲ್ಲಿ ತೊಡಗಿದಾಗ. ರಾಜಕಾರಣದ ಅರ್ಥವಿರುವುದು ಹೀಗೆ `ಕೇರ್‌' ಮಾಡುವುದರಲ್ಲಿ. `ಕೇರ್‌' ಅನ್ನುವುದು ಮನೋಶಾಸ್ತ್ರಜ್ಞ ಎರಿಕ್‌ ಎರಿಕ್‌ಸನ್ನನಿಗೆ `ಲವ್‌' ಎನ್ನುವುದಕ್ಕಿಂತ ಪ್ರಿಯವಾದ ಶಬ್ದ. ಕೆಲವು ಮಹಾನ್‌ ರಾಜಕೀಯ ನಾಯಕರ ಜನರ ಮೇಲಿನ `ಪ್ರೇಮ' ಯಾವಾಗ ಸಹನೆ ತಪ್ಪಿದ ಕ್ರೌರ್ಯವಾಗುತ್ತೋ ಹೇಳುವುದು ಕಷ್ಟ. `ಲವ್‌' ಕೇವಲ ತೋರುವಂತೆ ನಟಿಸಹುದಾದ ರಾಜಕೀಯ ಪ್ರದರ್ಶನವಾದರೆ, `ಕೇರ್‌'ನಲ್ಲಿ ಮಾಡಿದ್ದು ಮಾತ್ರ ತೋರುವ ಪಾಲನೆ ಇರುತ್ತದೆ. ಇದು ತಾಯಿಯ ಕೆಲಸ.ನಾನು ವರ್ಣಿಸಿದ ನಾಲ್ವರಲ್ಲಿಯೂ ಈ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು ಸಾಧ್ಯವಿತ್ತೆಂದು, ಅವರು ಕೂಡ ತಮ್ಮ ಗುಣದೋಷಗಳಲ್ಲಿ ಮನುಷ್ಯಮಾತ್ರರೆಂದು ನಿಮ್ಮ ಎದುರು ಅವರನ್ನು ಇಟ್ಟಿದ್ದೇನೆ. ನಿರೂಪಣೆ: ಇಸ್ಮಾಯಿಲ್ ಈ ಲೇಖನ 2006 ಫೆಬ್ರವರಿ 19ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿರುವ ಋಜುವಾತು ಅಂಕಣದಲ್ಲಿ ಪ್ರಕಟವಾಗಿತ್ತು.

ಗುಮಾನಿಯಿಂದ ನೋಡಬೇಕಾದ ರಾಜಕೀಯ ಸೀರಿಯಲ್

ದೂರದರ್ಶನದಲ್ಲಿ ಬರುವ ಸೀರಿಯಲ್‌ಗಳನ್ನು ನಾವು ಬೇಕಾದರೆ ನೋಡಬಹುದು; ಬೇಡದೇ ಇದ್ದರೆ ನೋಡದೇ ಇರಬಹುದು. ಆದರೆ ಈಗ ಕರ್ನಾಟಕದಲ್ಲಿ ದೇವೇಗೌಡರು ನಡೆಸುತ್ತಿರುವ ಸೀರಿಯಲ್ಲನ್ನು ನಾವೆಲ್ಲರೂ ಬಲವಂತವಾಗಿ ನೋಡಬೇಕಾಗಿ ಬಂದಿದೆ. ಹೀಗೆ ನೋಡಲೇ ಬೇಕಾದ ಸೀರಿಯಲ್‌ ನಮ್ಮಲ್ಲಿ ಭ್ರಮೆಗಳನ್ನೂ, ಹುಸಿ ಭರವಸೆಗಳನ್ನೂ ಹುಟ್ಟಿಸುವುದರಿಂದ ಅದನ್ನು ಕೇವಲ ಪಾತ್ರಧಾರ ನಾಯಕರ ವೈಯಕ್ತಿಕವಾದ ತೆವಲುಗಳಿಗೆ ಸಂಬಂಧಪಟ್ಟದ್ದು ಎಂದು ಮಾತ್ರ ನೋಡದೆ ನಮ್ಮ ಮನಸ್ಸಿನ ಆರೋಗ್ಯಕ್ಕಾಗಿ ಗುಮಾನಿಯಿಂದಲೂ ನೋಡಬೇಕಾಗುತ್ತದೆ. ಯಾವ ನಾಟಕವಾದರೂ ನಮ್ಮಲ್ಲಿ ಭಾವನೆಯ ತರಂಗಗಳನ್ನು, ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಅದರಿಂದ ಒಂದೋ ನಮ್ಮ ಅರಿವು ಪಲ್ಲಟವಾಗಿ ಬೇರೆ ಕಡೆಗೆ ಹರಿಯುತ್ತದೆ ಅಥವಾ ಇರುವ ಅರಿವು ಹಿಗ್ಗುತ್ತದೆ ಅಥವಾ ಆತುರ ಮತ್ತು ಆತಂಕದಲ್ಲಿ ನೋಡುತ್ತ ಹೋದದ್ದು ಕೊನೆಯಲ್ಲಿ ಪಿಚ್ಚೆನ್ನಿಸುವಂತೆ ಮುಗಿಯುತ್ತದೆ. ಈ ಹುಸಿ ನಾಟಕದಲ್ಲಿ ನಾವು ಮೋಸ ಹೋಗಿದ್ದೇವೆ. ನನ್ನ ಮಟ್ಟಿಗೇ ಹೇಳಿಕೊಳ್ಳುವುದಾದರೆ ದೇವೇಗೌಡರು ಪ್ರಧಾನಿಯಾದಾಗ ಅವರ ಕ್ರಿಯಾಶೀಲ ರಾಜಕಾರಣವನ್ನು ಮೆಚ್ಚಿಕೊಂಡವನು ನಾನು. ಭಾರತದ ಯಾವ ಸಾಮಾನ್ಯನಾದರೂ ಪ್ರಧಾನಿಯಾಗುವುದು, ಆಗಿ ದೇಶದ ಹಿತವನ್ನೂ ಪ್ರಜಾಹಿತವನ್ನೂ ಕಾಪಾಡುವುದು ಸಾಧ್ಯವೆಂಬ ನಂಬಿಕೆ ಹುಟ್ಟಿಸಿದವರು ದೇವೇಗೌಡರು. ಆದ್ದರಿಂದ ಅವರು ತಮ್ಮ ಮಗನ ವರ್ತನೆಯಿಂದ ದುಃ ಖಿತರಾಗಿರಬಹುದು ಎಂಬ ನಂಬಿಕೆ ಹಾಗೂ ಅನುಮಾನದಲ್ಲೇ ನಾನು ಈ ನಾಟಕವನ್ನು ನೋಡಬೇಕಾಗಿಬಂದ ಸುಸ್ತಿನಲ್ಲಿ ಈ ಮಾತುಗಳನ್ನು ಆಡುತ್ತಿದ್ದೇನೆ. ನಮ್ಮಲ್ಲಿ ಒಂದು ಗಾದೆ ಇದೆ. ನಿಜವಾದ ಗಾದೆ, `ಹಾವು ಸಾಯಬೇಕು, ಕೋಲು ಮುರಿಯಬಾರದು' ಎಂದು. ಅದನ್ನು ಕೆಲವರು ತಪ್ಪಾಗಿ `ಹಾವೂ ಸಾಯಬಾರದು ಕೋಲೂ ಮುರಿಯಬಾರದು' ಎಂದು ಹೇಳುವುದುಂಟು. ದೇವೇಗೌಡರು ಮಗನ ಮೇಲೆ ಶಿಸ್ತಿನ ಶಿಕ್ಷೆ ವಿಸುತ್ತಿರುವುದು ಎರಡನೇ ಗಾದೆಯ ಬಗೆಯಲ್ಲಿ. ಅವರಿಗೆ ತಮ್ಮ ಮಗನ ಅಪವಿತ್ರ ಮೈತ್ರಿ ತಪ್ಪು ಅನ್ನಿಸದ್ದರೆ ಅವರು ಪತ್ರ ಬರೆಯಬೇಕಿದ್ದದ್ದು ರಾಜ್ಯಪಾಲರಿಗಲ್ಲ. ಅವರು ಸ್ಪೀಕರ್‌ಗೆ ಪತ್ರ ಬರೆಯಬೇಕಿತ್ತು. ಆದರೆ ಪ್ರತೀ ಹಂತದಲ್ಲೂ ಅವರು ತಾನು ಜನರಿಗೆ ಜಾತ್ಯತೀತನೆಂದು ಕಾಣಿಸಬೇಕು. ಆದರೆ ಅದಕ್ಕೆ ಬೇಕಾದ ಕ್ರಿಯೆ ತನ್ನಿಂದ ಆಗಕೂಡದು ಎನ್ನುವ ಹಾಗೆ ನೋಡಿಕೊಂಡಿದ್ದಾರೆ. ಇದನ್ನು ಪ್ರಾಯಶಃ ಅನುಮಾನಿಸುವ ಪ್ರಕಾಶ್‌ರಂತಹ ನುರಿತ ರಾಜಕಾರಣಿಗಳೂ ತಾವು ದೇವೇಗೌಡರ ಬೆಂಬಲಿಗರೆಂದೇ ಹೇಳಿಕೊಂಡು ಹುಸಿನಾಟಕಕ್ಕೆ ನೈಜತೆಯ ಮೆರುಗು ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಯಾವ ನೈಜ ಪ್ರೀತಿಯೂ ಇಲ್ಲದ ರಾಜಕೀಯ ಸಂಬಂಧಗಳು ಇವು. ಜೀವವನ್ನೇ ಕೊಡುವ ಹಿಂಬಾಲಕರು ಇಲ್ಲದ ನಾಯಕರೇ ಈ ದಿನಗಳಲ್ಲಿ ನಮಗೆ ಕಾಣುವುದು. ಜಯಪ್ರಕಾಶ್‌, ನೆಹರೂ, ಲೋಹಿಯಾ, ಅಣ್ಣಾದೊರೆ, ಕಾಮರಾಜ್‌, ಎ.ಕೆ.ಗೋಪಾಲನ್‌-ಈ ನಾಯಕರು ಈಗ ಕೇವಲ ನೆನಪುಗಳು. ಈ ನಾಟಕದಲ್ಲಿ ನಮ್ಮ ಭಾವನಾ ಲೋಕವನ್ನು ಕಲಕುವ ಹುನ್ನಾರದ ಅನೇಕ ಸಂಗತಿಗಳಿದ್ದಾವೆ. ಮಗ ತಪ್ಪು ಮಾಡಿದರೆ ಅಪ್ಪ ಅದನ್ನು ಒಪ್ಪದೆ ಶಿಕ್ಷಿಸುತ್ತಾನೆ ಎನ್ನುವ ಮೆಚ್ಚುಗೆಯನ್ನು ನಮ್ಮಿಂದ ಗೌಡರು ಪಡೆಯಲು ನೋಡಿದರು. ಸ್ವಂತ ಮಗನಿಗಿಂತಲೂ ತಾನು ನಂಬಿದ ಮೌಲ್ಯಗಳೇ ಮುಖ್ಯ ಎನ್ನುವುದಕ್ಕಿಂತ ಹೆಚ್ಚಿನ ಧೀರೋದಾತ್ತ ನಾಯಕ ಎಲ್ಲಿದ್ದಾನೆ? ಜೊತೆಗೇ ಇನ್ನೊಂದು ಸ್ವಾರಸ್ಯದ ನಾಟಕ ಇಲ್ಲಿ ನಡೆದಿದೆ. ತನಗೆ ಅಪ್ಪನ ಮೇಲೆ ಬಹಳ ಗೌರವವಿದೆ. ಬಹಳ ಪ್ರೀತಿ ಇದೆ. ಆದರೂ ಅವರ ವಿರುದ್ಧವಾಗಿ ಹೋಗಬೇಕಾದ ಅನಿರ್ವಾರ್ಯತೆ ಈ ಕಾಲದಲ್ಲಿದೆ ಎಂದು ಪರಿತಪಿಸುತ್ತ ಇಂದಿನ ಯುವಜನರ ಪ್ರತಿನಿಯಾಗಲು ಮಗ ಯತ್ನಿಸುತ್ತಿದ್ದಾರೆ. ಹೀಗೆ ಅಪ್ಪ ಮಗ ಇಬ್ಬರೂ ಈ ಕಾಲದ ಅನೇಕ ಸದ್ಭಾವಗಳನ್ನು ಬಳಸಿಕೊಂಡು ಒಂದು ಹುಸಿ ನಾಟಕವನ್ನು ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ; ಈ ನಾಟಕಕ್ಕಾಗಿ ಇವರು ಬಳಸುತ್ತಿರುವ ಅಲೌಕಿಕ ಪರಿಕರಗಳೂ- ಪೂಜೆ, ಹೋಮ, ಹವನ ಇತ್ಯಾದಿಗಳು- ನಮ್ಮ ಜನರ ಮನಸ್ಸಿನೊಳಕ್ಕೆ ಆಳವಾಗಿ ಕೆಲವು ಸದ್ಭಾವಗಳನ್ನೂ, ಆದರ್ಶಗಳನ್ನೂ ಊರಬಲ್ಲ ಸಾಮರ್ಥ್ಯವುಳ್ಳ ಕ್ರಿಯೆಗಳಾಗಿವೆ. ತಮಾಷೆ ಅಂದರೆ ಹಿಂದೂ ಧರ್ಮದ ಆಧಾರದ ಮೇಲೆಯೇ ದೇಶವನ್ನು ಕಟ್ಟಬೇಕು ಎಂದು ಹೊರಟ ವಾಜಪೇಯಿ, ಆಡ್ವಾಣಿ ಮತ್ತು ನಮ್ಮ ಕರ್ನಾಟಕದ ಬಿಜೆಪಿಯ ನಾಯಕರೂ ಕೂಡ, ಮಾಡದೇ ಇದ್ದ ಪೂಜೆಗಳನ್ನೂ ಹವನಗಳನ್ನೂ ಈ ಜಾತ್ಯತೀತರು ಮಾಡುತ್ತಿದ್ದಾರೆ. ನಮ್ಮ ಮಾಧ್ಯಮಗಳು ಈ ಬಗೆಯ ಹುಸಿ ನಾಟಕಗಳನ್ನು ಬಯಲು ಮಾಡುವುದರ ಬದಲು ಮನರಂಜನೆಗೆ ಅವುಗಳನ್ನು ಬಳಸುತ್ತವೆ. ಪರಿಣಾಮವಾಗಿ ಭಾಷೆಗೆ ಇರುವ ಅರ್ಥಗಳೆಲ್ಲಾ ಹೊರಟು ಹೋಗುತ್ತಿದೆ. ಇದನ್ನೇ ಆರ್ವೆಲ್‌ ಮೂವತ್ತರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ `ಪಾಲಿಟಿಕ್ಸ್‌ ಅಂಡ್‌ ದಿ ಇಂಗ್ಲಿಷ್‌ ಲ್ಯಾಂಗ್ವೇಜ್‌' ಎಂಬ ಲೇಖನದಲ್ಲಿ ಹೇಳಿದ್ದ. ಶಬ್ದಗಳೆಲ್ಲಾ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತಿವೆ; ಅದರಿಂದ ಸತ್ಯವಾದುದನ್ನು ಹೇಳುವುದಕ್ಕೆ ಸಾಧ್ಯವಾಗದಂತೆ ಭಾಷೆ ಬೆಳೆಯುತ್ತಿದೆ ಎಂದು ಅವನು ಆಗ ಹೇಳಿದ್ದು ನಮ್ಮಲ್ಲೂ ನಿಜವಾಗಿದೆ. ಕನ್ನಡ ಭಾಷೆಯಲ್ಲಿ ನಾವು ಸತ್ಯವನ್ನು ಹೇಳಲಾರದ ಸ್ಥಿತಿ ತಲುಪಿದ್ದೇವೆ. ಧರ್ಮ, ಪಿತೃಗೌರವ, ಪುತ್ರ ವಾತ್ಸಲ್ಯ, ದೇವತೆಗಳ ಬಗ್ಗೆ ನಮಗಿರುವ ಪ್ರೀತಿ ಹೀಗೆ ಎಲ್ಲವಕ್ಕೂ ಅವುಗಳಿಗೆ ಇರುವ ನಿಜವಾದ ಅರ್ಥಗಳು ವಿಕೃತಗೊಂಡು ನಾಶವಾಗಿವೆ. ಇಲ್ಲಿ ದೇವತಾ ಕಲ್ಪನೆಯಲ್ಲಿ ಆಗಿರುವ ಬದಲಾವಣೆಗಳನ್ನು ನೋಡಿದರೆ ಪ್ರಾಯಶಃ ನಾವು ಮತ್ತೆ ಮಾಟ ಮಂತ್ರಗಳಲ್ಲಿ ನಂಬುವ ತಾಂತ್ರಿಕರ ಹಾಗೆ ಆಗಿಬಿಟ್ಟಿದ್ದೇವೆ.. ಒಂದು ಕಾಲದಲ್ಲಿ ತಾಂತ್ರಿಕರನ್ನು ಶಂಕರಾಚಾರ್ಯರು ಹಿಮ್ಮೆಟ್ಟಿಸಿದ್ದರು. ಆಮೇಲೆ ಆನಂದತೀರ್ಥರಾಗಲೀ, ರಾಮಾನುಜರಾಗಲೀ ಭಕ್ತಿಯೇ ಸರ್ವೋತ್ಕೃಷ್ಟವಾದ ಮಾರ್ಗ ಎಂದು ನಂಬಿದವರಾಗಿದ್ದರಿಂದ ತಾಂತ್ರಿಕವಾದ ರೀತಿಯಲ್ಲಿ ನಾವು ನಮ್ಮ ಲೌಕಿಕ ಯಶಸ್ಸನ್ನು ಸಾಸಿಕೊಳ್ಳುವುದಕ್ಕೆ ಸಾಕಷ್ಟು ವಿರೋಧವನ್ನು ತೋರಿದ್ದರು. ಬಸವಣ್ಣ ತಾಂತ್ರಿಕರ ಪರಮ ಶತ್ರುವಾಗಿದ್ದ. ಈಗ ಭಾರತದಲ್ಲಿ ತಾಂತ್ರಿಕತೆ ಮತ್ತೆ ಗೆಲುವು ಸಾಧಿಸುವ ಹಾಗೆ ತೋರುತ್ತಿದೆ. ಈಗ ಜ್ಯೋತಿಷಿಗಳೇ ನಮ್ಮ ರಾಜಕಾರಣದ ನಿಯಂತ್ರಕರೂ ಆಗಿಬಿಟ್ಟಿದ್ದಾರೆ. ಗಾಂಧೀಜಿ ಮತ್ತೆ ನೆನಪಾಗುತ್ತಿದ್ದಾರೆ. ಸರ್ವಧರ್ಮ ಪ್ರಾರ್ಥನೆಯಿಂದ ಅವರ ದಿನ ಪ್ರಾರಂಭವಾಗುತ್ತಿತ್ತು. ಅದರ ಜತೆಗೆ ಪ್ರತಿಯೊಬ್ಬನೂ ಮಲವನ್ನು ಎತ್ತುವಂಥ ಕೆಲಸವನ್ನೂ ಮಾಡಬೇಕಿತ್ತು. ಹೀಗೆ ದೈಹಿಕವಾದ ಕಾಯಕದಿಂದ ಹಿಡಿದು ದೈವದ ಆರಾಧನೆಯವರೆಗೆ ಮನುಷ್ಯನ ಪ್ರಜ್ಞೆಯನ್ನು ಅವರು ವಿಸ್ತರಿಸುತ್ತಿದ್ದರು. *** ಇವತ್ತು ಇಡೀ ಭಾರತದಲ್ಲಿ ಒಬ್ಬನೇ ಒಬ್ಬ ದೊಡ್ಡ ರಾಜಕೀಯ ನಾಯಕನಿಲ್ಲ. ನೈಜ ರಾಜಕೀಯ ನಾಯಕನ ಲಕ್ಷಣ ಏನೆಂದರೆ ಆತ ಜನರಿಗೆ ಅಪ್ರಿಯವಾದ ಸತ್ಯವನ್ನೂ ಹೇಳಲು ಅವಶ್ಯವಿದ್ದಾಗ ಮುಂದಾಗುತ್ತಾನೆ. ರಾಜಗೋಪಾಲಾಚಾರಿಯವರಲ್ಲಿ ಆ ಧೈರ್ಯವಿತ್ತು, ಗಾಂೀಜಿಗೆ ಆ ಧೈರ್ಯವಿತ್ತು. ಜಯಪ್ರಕಾಶರಲ್ಲಿ ಆ ಧೈರ್ಯವಿತ್ತು. ನಂಬೂದರಿಪಾಡರಲ್ಲಿ ಆ ಧೈರ್ಯವಿತ್ತು. ಕೃಪಲಾನಿಯವರಲ್ಲಂತೂ ಅಪಾರವಾಗಿ ಆ ಧೈರ್ಯ ತುಂಬಿತ್ತು. ಅಂಥಾ ಯಾರನ್ನೂ ಕೂಡಾ ಈಗ ಭಾರತದಲ್ಲಿ ನಮಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಜನಪ್ರಿಯತೆ ಎನ್ನುವುದು ಈಗ ಇಂಗ್ಲಿಷಿನ ಪಾಪ್ಯುಲಿಸಂ ಆಗಿದೆ- ಜನರಿಗೆ ಪೂಸಿ ಹೊಡೆಯುವ ಭ್ರಷ್ಟತೆ ಯಾಗಿದೆ. ನಿಜವಾಗಿ ಜನರ ಮೇಲೆ ಪ್ರೀತಿ ಇದ್ದ ನಾಯಕ ಹೇಗೂ ಜನಪ್ರಿಯನಾಗಲು ಹೊಂಚುವುದಲ್ಲ. ಪ್ರಾಯಶಃ ಎಲ್ಲ ರಾಜಕಾರಣಿಗಳಿಗೂ ಧನಗಳಿಕೆ ಬಹಳ ಮುಖ್ಯವಾಗಿಬಿಟ್ಟಿದೆ. ಅದರಿಂದಾಗಿ ಕಾಂಗ್ರೆಸ್‌, ಬಿಜೆಪಿ, ಜನತಾದಳ ಹೀಗೆ ಯಾರೇ ಅಕಾರಕ್ಕೆ ಬಂದರೂ ಅವರು ಭ್ರಷ್ಟಾಚಾರದ ಮುಖಾಂತರ ಬಲವಾಗಲು ಪ್ರಯತ್ನಿಸುತ್ತಾರೆ. ಅದರಿಂದ ಜನರ ಕಣ್ಣಲ್ಲಿ ರಾಜಕೀಯ ತತ್ವಗಳಿಗೆ ಯಾವ ರೀತಿಯ ಅರ್ಥವೂ ಉಳಿಯುವುದಿಲ್ಲ. ತತ್ವದ ಮಾತು ಕೇವಲ ಗುಡ್‌ ಮ್ಯಾನರ್ಸ್‌; ದಾಕ್ಷಿಣ್ಯಕ್ಕಾಗಿ ವಿಯಿಲ್ಲದೆ ಆಡಬೇಕಾದ ಮಾತು . ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷ ಕೂಡಾ ದೊಡ್ಡ ಪ್ರಮಾಣದಲ್ಲಿ ಆಸ್ತಿಯನ್ನು ಮಾಡಿಕೊಳ್ಳುತ್ತಿದೆ ಎಂದು ಭ್ರಮ ನಿರಸನಗೊಂಡವರನ್ನು ನಾನು ನೋಡಿದ್ದೇನೆ. ಪ್ರಜಾತಂತ್ರದಲ್ಲಿ ಈ ಬಗೆಯ ಭ್ರಷ್ಟತೆ ಅನಿವಾರ್ಯವೆಂದು ತಿಳಿದವರೂ ಇರುತ್ತಾರೆ. ಆಗುತ್ತಿರುವುದಕ್ಕೆಲ್ಲ ನಾವು ಹೀಗೆ ಒಗ್ಗುತ್ತ ನಮ್ಮ `ಅನಿವಾರ್ಯತೆ'ಯ ಲಿಸ್ಟನ್ನು ಬೆಳೆಸುತ್ತ ಹೋಗುವುದಾದರೆ ನಿಜವಾದ ಚಿಂತನಶೀಲತೆಯೇ, ಪರ್ಯಾಯಗಳ ಹುಡುಕಾಟವೇ ನಮ್ಮಲ್ಲಿ ಮಾಯವಾದಂತೆ. ಇನ್ನೊಂದು ದೇವೇಗೌಡರ ನಾಟಕದ ಸೀನು ಹೀಗಿರಬಹುದು- ಮಗನನ್ನೂ ಅವರ ಬೆಂಬಲಿಗರನ್ನೂ ಗೌಡರು ಉಚ್ಛಾಟಿಸುತ್ತಾರೆ. ನಿಜವಾದ ಜಾತ್ಯಾತೀತ ದಳವನ್ನು ಉಳಿಸಿಕೊಳ್ಳುತ್ತಾರೆ. ಹೀಗೆ ಅವರು ಕಟ್ಟುವ ಇನ್ನೂಂದು ಮನೆ ತನ್ನ ಮಗ ಬಿಜೆಪಿಯಿಂದ ಇಪ್ಪತ್ತು ತಿಂಗಳ ನಂತರ ಹತಾಶರಾದಾಗ ಒಳ ಸೇರಿಸಿಕೊಳ್ಳಲು ಸಜ್ಜಾಗಿರುತ್ತದೆ. ಮನುಷ್ಯನಲ್ಲಿ ಸಾಮಾನ್ಯವಾಗಿ ಆತ್ಮಾನುರಕ್ತಿ ಇರುತ್ತದೆ. ಎಲ್ಲರಲ್ಲೂ ಇದು ಇರುತ್ತದೆ. ಕೆಲವರಲ್ಲಿ ಇದು ರೋಗಗ್ರಸ್ತವಾಗು ವಷ್ಟು ಬೆಳೆದಿರುತ್ತದೆ. ರಾಜಕಾರಣಿಯಲ್ಲಿ ಇದು ರೋಗಗ್ರಸ್ತವಾಗು ವಷ್ಟು ಬೆಳೆದಾಗ ದೇವೇಗೌಡರ ರೀತಿಯ ವರ್ತನೆಗಳು ಶುರುವಾಗುತ್ತವೆ. ಅವರಿಗೆ ತಮ್ಮ ಧ್ವನಿ ಮಾತ್ರ ಕೇಳುತ್ತಿರುತ್ತದೆ. ಬೇರೆಯವರದ್ದೇನೂ ಕೇಳಿಸುವುದಿಲ್ಲ ಮತ್ತು ತಾನು ಆಡಿದ್ದರಿಂದ ಇನ್ನೊಬ್ಬರ ಮನಸ್ಸನ್ನು ಗೆಲ್ಲುತ್ತಿದ್ದೇನೆ ಎನ್ನುವ ಭ್ರಮೆ ಇರುತ್ತದೆ. ಒಬ್ಬ ರಾಜಕಾರಣಿಯಲ್ಲಿ ಆತ್ಮಾನುರಕ್ತಿ ಮಾತ್ರ ಇದ್ದಾಗ ಆತ ನಿಜವಾಗಿಯೂ ಜನಾನುರಾಗಿಯಾಗಿ ಬದುಕಲಾರ. ಆದರೆ ಈವತ್ತಿನ ಪ್ರಜಾತಂತ್ರದ ರಾಜಕಾರಣದಲ್ಲಿ ಆತ್ಮಾನುರಕ್ತಿಯಿಂದಲೇ ಬರುವ ಒಂದು ಶಕ್ತಿ ಇದೆ. ಅದು ದೇವೇಗೌಡರಲ್ಲಿ ಯಥೇಚ್ಛವಾಗಿದೆ ಅನ್ನಿಸುತ್ತದೆ. ರಾಜಕಾರಣ ಅವರಿಗೆ ಕೇವಲ ಹವ್ಯಾಸವಲ್ಲ; ಇಪ್ಪತ್ತನಾಲ್ಕು ಗಂಟೆಗಳ ಕಾಲವೂ, ಪೂಜೆ ಪುನಸ್ಕಾರಗಳಲ್ಲಿ ಅವರು ತೊಡಗಿದ್ದಾ ಗಲೂ ಅವರು ಮಾಡುವುದು ರಾಜಕಾರಣವನ್ನೇ. ತನ್ನ ರೂಪಕ್ಕೆ ತಾನೇ ಮರುಳಾದವನು, ತನ್ನ ಧ್ವನಿಗೇ ತಾನು ಮರುಳಾದವನು, ತನ್ನ ವಿಚಾರಗಳಿಗೇ ತಾನು ಮರುಳಾದವನು ನಾರ್ಸಿಸಸ್‌. ಇಂಥವರಿಗೆ ತನ್ನ ಆಚೆಗೆ ಇರುವ ಸತ್ಯವನ್ನು ನೋಡಬೇಕು ಎನ್ನುವುದು ಮರೆತು ಹೋಗಿರುತ್ತದೆ. ಇದು ಅವರ ರೋಗ ಮಾತ್ರ ಅಲ್ಲ ನಮಗೆ ಅಂಟುವ ಕಾಯಿಲೆಯೂ ಆಗುತ್ತದೆ. ಯಾಕೆಂದರೆ ಮಾಧ್ಯಮಗಳಿಂದಾಗಿ ನಾವೂ ಅದರಿಂದ ಮರುಳಾಗಿರುತ್ತೇವೆ. *** ಇದರಿಂದ ನಾವು ಬಿಡುಗಡೆಯಾಗಲು ಹುಸಿ ಮಾತುಗಳ ಸತತ ತುಳಿತದಿಂದ ಕೆಸರಾದ ನಮ್ಮ ಸಾರ್ವಜನಿಕ ಸತ್ಯಗಳು ಕೊಂಚ ತಿಳಿಯಾಗಬೇಕು. ತಿಳಿಯಾಗುವುದೆಂದರೆ ನಿಜ ತಿಳಿಯುವುದು, ಅವು ಹೀಗಿವೆ:

1. ಸಿದ್ದರಾಮಯ್ಯನವರು ಅಹಿಂದ ಚಳುವಳಿಯಲ್ಲಿ ಭಾಗವಹಿ ಸಲು ಶುರುಮಾಡಿದ್ದೇ ಗೌಡರು ಗಾಬರಿಗೊಂಡರು. ಅವರೇ ಮುಖ್ಯ ಮಂತ್ರಿಯಾದಾರೆಂದು, ತನ್ನ ಮಗನಿಗೆ ಅದು ತಪ್ಪೀತೆಂದು ಹೆದರಿ ದರು. ಶಿಸ್ತಿನ ನೆವದಲ್ಲಿ ಅವರನ್ನು ಉಪಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ನಾಟಕ ಶುರುವಾದದ್ದು ಹೀಗೆ. ಆದರೆ ಕೆಲವರ ಪ್ರಕಾರ ಜಾತಿಬಲವಿಲ್ಲದ ಧರಂಸಿಂಗರನ್ನು ಮುಖ್ಯಮಂತ್ರಿ ಯಾಗುವಂತೆ ಮಾಡಿದ ದಿನದಿಂದಲೇ ಈ ನಾಟಕ ಶುರುವಾಯಿತು.

2. ಇದು ಅವರಿಗೆ ಸುಲಭ ಸಾಧ್ಯವಾಗಲು ಕಾರಣ: ಸಿದ್ದರಾಮಯ್ಯನವರ ಅಹಿಂದ ಚಳವಳಿ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಘನೋದ್ದೇಶದ್ದಾಗಿ ನಮಗೆ ಕಂಡರೂ ಜನಸಾಮಾನ್ಯರ ಸಮುದಾಯದ ನೆಲೆಯಿಂದಲೇ ಅದು ಹುಟ್ಟಿಬಂದ ದ್ದಾಗಿರಲಿಲ್ಲ. ಅಂದರೆ ಪ್ರಭುತ್ವದ ನೆಲೆಯಲ್ಲಿ ಪಲ್ಲಟಗಳನ್ನು ಮಾಡುವ ಮೇಲುಮೇಲಿನ ರಾಜಕಾರಣದ ಹುನ್ನಾರವೂ ಸದ್ಯದ ಪ್ರಭುತ್ವಕ್ಕೆ ಈ ಚಳವಳಿಯಲ್ಲಿ ಕಾಣ ತೊಡಗಿತ್ತು. ಹೀಗೆ ಪವರ್‌ ಪಾಲಿಟಿಕ್ಸ್‌ ಅಹಿಂದ ಚಳುವಳಿಯನ್ನು ಅದರ ಘನೋದ್ದೇಶದಿಂದ ಮೊಟಕುಗೊಳಿಸಿತು.

3. ದೇವೇಗೌಡರ ಉದ್ದೇಶ ಈಗ ನೆರವೇರಿದೆ. ಮಗ ಮುಖ್ಯಮಂತ್ರಿಯಾಗಿದ್ದಾರೆ. ಯಥಾ ಪ್ರಕಾರ ಮಾಧ್ಯಮಗಳಲ್ಲಿ ಏನಾದರೂ ಆದೀತೆಂಬ ಆಕರ್ಷಣೆಯ ಭರವಸೆಯನ್ನು ಎನರ್ಜಿ ಇರುವ ಯುವಕರಾಗಿ ಹುಟ್ಟಿಸಿದ್ದಾರೆ. ಆದ್ದರಿಂದ ಗೌಡರು ತಮ್ಮ ಜಾತ್ಯತೀತತೆಯ ನಾಟಕವಾಡುವುದನ್ನು ಬಿಟ್ಟು ಹರ್ಷಿತರಾಗಬೇಕು; ಸರಳರಾಗಬೇಕು; ರಿಲ್ಯಾಕ್ಸ್‌ ಮಾಡಬೇಕು. ಅವರ ಆರೋಗ್ಯಕ್ಕಲ್ಲದೆ ಸಾರ್ವಜನಿಕರ ಮನಸ್ಸಿನ ಆರೋಗ್ಯಕ್ಕೂ ಇದು ಅಗತ್ಯ.

4. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಮ್ಮ ಆರ್ಥಿಕನೀತಿಯಲ್ಲಾಗಲೀ, ವಿದೇಶಾಂಗ ನೀತಿಯಲ್ಲಾಗಲೀ ಮುಖ್ಯವೆನ್ನಿಸುವ ಯಾವ ಬದಲಾವಣೆಯೂ ಆಗಲಿಲ್ಲ. ಆದದ್ದೆಲ್ಲ ಶಿಕ್ಷಣ ನೀತಿಯಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ನಿರ್ವಹಣೆಯಲ್ಲಿ. ಎಲ್ಲೆಲ್ಲೂ ಆರೆಸ್ಸೆಸ್‌ ಕೇಡರು ಗಳು ತುಂಬಿಕೊಂಡರು. ಈಗ ಇಲ್ಲಿ ಕರ್ನಾಟಕದಲ್ಲಿ ಹಾಗಾಗದಂತೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಗಳೂ, ಅವರ 'ಜಾತ್ಯತೀತ' ತಂದೆಯವರೂ ನಿಗಾವಹಿಸಬೇಕು. ಜಿಡ್ಡಾದ ಗೊಡ್ಡಾದ ಮನಸ್ಸುಗಳು ಸಾಂಸ್ಕೃತಿಕ ಲೋಕದ ವಕ್ತಾರರಾಗುವುದನ್ನು ಕರ್ನಾಟಕದ ಧೀಮಂತಲೋಕ ಸಹಿಸಲಾರದು.

ಲೋಹಿಯರವರು ಎರಡು ಲೇಖನಗಳನ್ನು ಕೊನೆಯಲ್ಲಿ ಬರೆದಿದ್ದರು. ಮೊದಲನೆಯದು: `ಇನ್ನು ನೂರು ವರ್ಷಗಳಲ್ಲಿ ಸಮಾಜವಾದ' ಎಂಬುದು. ಸಮಯಸಾಧಕ ಸಮಾಜ ವಾದದಿಂದ ಬೇಸತ್ತು ಅವರು ಬರೆದ ಲೇಖನವಿದು. ಎರಡನೆಯ ಲೇಖನ ಇನ್ನೂ ಮುಖ್ಯವಾ ದದ್ದು. `ನಿರಾಶೆಯಲ್ಲಿ ಕರ್ತವ್ಯ ಪಾಲನೆ' ಎಂದು ಇದರ ಹೆಸರು. ಸದ್ಯದಲ್ಲೇ ಏನೋ ಆಗಿಬಿಡುತ್ತದೆಂಬ ಭ್ರಮೆ, ನಿಷ್ಠೆಯುಳ್ಳ ರಾಜಕಾರಣಿಗಳಲ್ಲಿ ಇರಬಾರದೆಂಬ ಉದ್ದೇಶದಿಂದ ಈ ಎರಡೂ ಲೇಖನಗಳು ಹುಟ್ಟಿಕೊಂಡದ್ದು. ಸರ್ವೋದಯದ ಕನಸು ಕಾಣುವ ಎಲ್ಲರೂ ಸಿನಿಕರಾಗದಿರಲು ದಿಗಂತದಲ್ಲಿ ದೃಷ್ಟಿನೆಟ್ಟವರಾಗಿ 'ಸೀರಿಯಲ್‌' ಗಳಲ್ಲಿ ಕೊಂಚ ಉದಾಸೀನರಾಗುವುದನ್ನು ಅಭ್ಯಾಸಮಾಡಿಕೊಳ್ಳಬೇಕು.ಮೇಲಿನ ಮಾತಿಗೆ ಇನ್ನೊಂದು ಮಾತು ಸೇರಿಸುತ್ತೇನೆ. ಪ್ರಜಾತಂತ್ರ ರಾಜಕಾರಣದಲ್ಲಿ ಸಿಗುವ ಅವಕಾಶವನ್ನು ತತ್ಕಾಲದಲ್ಲಿ ಬಳಸಲು ಹಿಂಜರಿಯುವವನು ಕನಸುಗಾರನಾಗುತ್ತಾನೆ. ಇದು ವೈಚಾರಿಕನಿಗೆ ಹತ್ತುವ ತೆವಲು. ಹಾಗೆಯೇ ದೂರದೃಷ್ಟಿಯಲ್ಲದೆ, ಕನಸುಗಳೇ ಇಲ್ಲದೆ ತತ್ಕಾಲದ ಅಗತ್ಯಗಳನ್ನು ಮಾತ್ರ ಹೇಗಾದರೂ ಪೂರೈಸಿಕೊಳ್ಳುವವನು ಅವಕಾಶವಾದಿ ಭ್ರಷ್ಟನಾಗುತ್ತಾನೆ. ಕ್ರಿಯೆಗೂ ಚಿಂತನೆಗೂ ಇರುವ ಈ ನೈತಿಕ ಆಯ್ಕೆಗಳ ಕಾಠಿಣ್ಯವನ್ನು ಅರಿತ ರಾಜಕಾರಣಿಗಳು ನಮ್ಮ ಇಂದಿನ ಅಗತ್ಯ. (ನಿರೂಪಣೆ: ಇಸ್ಮಾಯಿಲ್‌) ಈ ಲೇಖನ 2006 ಫೆಬ್ರವರಿ 19ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿರುವ ಋಜುವಾತು ಅಂಕಣದಲ್ಲಿ ಪ್ರಕಟವಾಗಿತ್ತು.

ಆಧುನಿಕ ಪ್ರಭುತ್ವದ ವಿಕಾರಗಳು

ಈಗ ಕರ್ನಾಟಕದಲ್ಲಿ ಸರಕಾರ ಬದಲಾಗುತ್ತಿದೆ. ಈ ಬದಲಾವಣೆ ಆಗುತ್ತಿದೆ ಎನ್ನುವುದು ನಿರಕ್ಷರರಿಗೂ ಗೊತ್ತಾಗುವ ಹಾಗೆ ಬೆಂಗಳೂರಿನ ಎಲ್ಲ ಪ್ರಮುಖ ಬೀದಿಗಳಲ್ಲೂ ದೊಡ್ಡ ದೊಡ್ಡ ಪೋಸ್ಟರ್‌ಗಳು, ಕಟೌಟ್‌ಗಳು ಕಾಣಿಸಿಕೊಂಡಿವೆ. ನಮಗೆ ಆಕಾಶವೇ ಕಾಣಿಸದಂತೆ ರಾಜಕಾರಣಿಗಳು ಬೀದಿಯ ಬದಿಯಲ್ಲಿ ಬೃಹದಾಕಾರದ ಕಟೌಟ್‌ಗಳಾಗಿ ನಿಂತು ತಮ್ಮ ಗುಂಪುಗಳನ್ನು ಒಡ್ಡಿಕೊಂಡಿದ್ದಾರೆ. ಇದರಲ್ಲೂ ಒಂದು ರಾಜಕೀಯ ಇದೆ. ಒಬ್ಬ ಪ್ರಮುಖನ ಜತೆ ಯಾರ ಚಿತ್ರಗಳಿವೆ ಎನ್ನುವುದನ್ನು ಗಮನಿಸಿದರೆ ಈ ಪ್ರಮುಖನ ಬಳಿ ಯಾರೆಲ್ಲಾ ಅಧಿಕಾರಕ್ಕಾಗಿ ಅಂಗಲಾಚುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಇದು ಆಧುನಿಕ ರಾಜಕಾರಣದ ಮೊದಲ ವಿಕಾರ.

ಬೀದಿಗಳನ್ನು, ರಸ್ತೆಯ ಬದಿಗಳನ್ನೂ ಕಲುಷಿತಗೊಳಿಸುತ್ತಿರುವ ಈ `ಕಟೌಟ್‌ ಸಂಸ್ಕೃತಿ’ ಒಂದು ಹೊಸ ಮಾಧ್ಯಮವೇ ಆಗಿಬಿಟ್ಟಿದೆ. ದಾರಿಯಲ್ಲಿ ಓಡಾಡುವಾಗ ನಮ್ಮ ಕಣ್ಣುಗಳು ಮರಗಿಡಗಳು, ಹಕ್ಕಿ ಪಕ್ಷಿಗಳು, ನಮಗಿಷ್ಟವಾದುದನ್ನು ನೋಡಬೇಕೇ ಹೊರತು ಈ ವಿಕಾರಗಳನ್ನಲ್ಲ. ಇದು ತಮಿಳುನಾಡಿನಲ್ಲಿ ಬಹಳ ಅಬ್ಬರದಿಂದ ನಡೆಯುತ್ತಿತ್ತು. ಅಲ್ಲಿನ ರಾಜಕಾರಣಿಗಳು ಬಾಹುಬಲಿಯಷ್ಟು ಎತ್ತರದ ಕಟೌಟ್‌ಗಳಲ್ಲಿ ಎಲ್ಲಾ ಆಭರಣಗಳನ್ನು ತೊಟ್ಟು ನಿಲ್ಲುತ್ತಿದ್ದರು. ಆ ಸಂಸ್ಕೃತಿ ಈಗ ಕರ್ನಾಟಕದೊಳಕ್ಕೂ ಬಂದಿದೆ.

ಹಿಂದುತ್ವವಾದಿಗಳು ಅಧಿಕಾರಕ್ಕೆ ಬಂದರೂ, ಸೆಕ್ಯುಲರ್‌ವಾದಿಗಳೇ ಆಡಳಿತದ ಚುಕ್ಕಾಣಿ ಹಿಡಿದರೂ ಕಳೆದ ಹತ್ತು ವರ್ಷಗಳಲ್ಲಿ ಎಲ್ಲರೂ ಮುಂದುವರಿಸುತ್ತಾ ಬಂದದ್ದು ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯನ್ನು. ಯಾವ ಯಾವ ರಾಷ್ಟ್ರಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿ, ಯಾವ ಯಾವ ಕಂಪೆನಿಗಳನ್ನು ಶುರುಮಾಡಬಹುದು, ಬೇರೆ ದೇಶಗಳಿಗೆ ತ್ಯಾಜ್ಯವಾದ ವಸ್ತುಗಳನ್ನು ಇಲ್ಲಿ ಹೇಗೆ ತಯಾರಿಸಬಹುದು, ಹೇಗೆ ಬೇಗನೆ ದುಡ್ಡು ಮಾಡಬಹುದು ಎಂಬ ಭ್ರಷ್ಟಾಚಾರಿ ಉಪಾಯಗಳ ಮೇಲೆಯೇ ಇಂದಿನ ನಮ್ಮ ವ್ಯಾಪಾರ ಲೋಕ ನಿಂತಿದೆ. ಇದು ಆಧುನಿಕ ರಾಜಕಾರಣದ ಮತ್ತೊಂದು ವಿಕಾರ.

ಹಿಂದಿನ ವಾಜಪೇಯಿ ಸರಕಾರಕ್ಕೆ ಜನ ಓಟು ಕೊಡದೆ ಸೋಲಿಸಿದರು. ಹಾಗೆಯೇ ಕಾಂಗ್ರೆಸ್ಸನ್ನು ಗೆಲ್ಲಿಸಿದರು. ಇದು ಬರೇ ಮತೀಯತೆಯ ವಿರುದ್ಧ ಚಲಾಯಿಸಲಾದ ಓಟು ಎಂದು ಹಲವರು ಭಾವಿಸಿದರು. ಆದರೆ ಇದು ಕೇವಲ ಮತೀಯತೆಯ ವಿರುದ್ಧದ ತೀರ್ಪಲ್ಲ. ಅದು ಉದಾರೀಕರಣ ಎಂಬ ಹುಸಿ ನಾಟಕದ ವಿರುದ್ಧದ ತೀರ್ಪೂ ಆಗಿತ್ತು. ಈ ಉದಾರೀಕರಣದಿಂದ ಒದಗಿದ ಕಷ್ಟಗಳನ್ನು ತಮ್ಮ ಓಟುಗಳ ಮೂಲಕ ಜನರು ಪ್ರತಿಭಟಿಸಿದ್ದರು. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದನ್ನು ನೆನಪು ಮಾಡಿಕೊಂಡರೆ ಇದು ಅರ್ಥವಾಗುತ್ತದೆ. ಆದರೆ ಹೊಸ ಸರಕಾರ ಅದು ಬರೀ ಮತೀಯತೆಯ ವಿರುದ್ಧದ ಓಟು ಎನ್ನುವಷ್ಟರ ಮಟ್ಟಿಗೆ ಮಾತ್ರ ಅರ್ಥ ಮಾಡಿಕೊಂಡು ಹಿಂದಿನ ಸರಕಾರದ ಮುಖ್ಯವಾದ ಎಲ್ಲಾ ಆರ್ಥಿಕ ಕಾರ್ಯ ಕ್ರಮಗಳನ್ನೂ ಮುಂದುವರಿಸಿಕೊಂಡು ಬಂದಿದೆ.

ಈ ಎಲ್ಲಾ ಸರಕಾರಗಳ ಬದಲಾವಣೆಯ ವೇಳೆಯೂ ನಡೆಯುತ್ತಿರುವುದು ಒಂದೇ ಕೆಲಸ. ಅದು ಇಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅತ್ಯಂತ ಅನುಕೂಲಕರ ವ್ಯವಸ್ಥೆಯನ್ನು ಹೇಗೆ ಮತ್ತು ಎಷ್ಟು ವೇಗವಾಗಿ ಉಂಟು ಮಾಡಬಹುದು ಎಂಬುದು. ಈ ಅನುಕೂಲಕರ ವ್ಯವಸ್ಥೆಯನ್ನು ಉಂಟು ಮಾಡುವ ಪ್ರಕ್ರಿಯೆಯಲ್ಲಿ ನನಗಿರುವ ಭಯ ಏನೆಂದರೆ ನಾವು ಒಂದು ನಾಗರಿಕತೆಯಾಗಿ ಈ ದೇಶದಲ್ಲಿ ಉಳಿಯಲು ಸಾಧ್ಯವಾದ ನಮ್ಮ ಊಟದ ಪದ್ಧತಿಗಳು, ವೇಷಭೂಷಣದ ಕ್ರಮ, ನಮ್ಮ ಭಾಷೆಗಳು, ನಮ್ಮ ನಡಾವಳಿಗಳೆಲ್ಲ ವನ್ನೂ ವಿದ್ಯಾವಂತರಾದ ಜನರಲ್ಲಾದರೂ ಬದಲಾಯಿಸಿಬಿಡುವ ಕ್ರಿಯೆ ಇದಾಗಿದೆ ಎಂಬುದು. ಇದು ಆಳುವ ವರ್ಗ ತನ್ನೊಳಗೆ ಮಾಡಿಕೊಳ್ಳುತ್ತಿರುವ ಬದಲಾವಣೆ. ಆದರೆ ಈ ಬದಲಾವಣೆ ಅನುಕೂಲವಂತರಲ್ಲದವರಿಗೂ ಮಾದರಿಯಾಗಬಹುದಾದ್ದರಿಂದ ಇದನ್ನು ಭಯ ಹುಟ್ಟಿಸುವ ಬದಲಾವಣೆ ಎಂದು ಕರೆಯುತ್ತೇನೆ.

ಇಂಥ ಸಂದರ್ಭದಲ್ಲಿ ಹತಾಶರಾಗದೆ ಯೋಚನೆ ಮಾಡುವುದಕ್ಕೆ ನಮಗಿರುವ ಏಕೈಕ ಭರವಸೆ ಏನೆಂದರೆ ಇವತ್ತಿಗೂ ಸರಕಾರದ ಹಂಗೇ ಇಲ್ಲದೆ ಬದುಕುತ್ತಿರುವ ಅಪಾರವಾದ ಜನಸಂಖ್ಯೆ. ಹೌದು, ಈ ಜನಕ್ಕೆ ಸರಕಾರದ ಹಂಗಿಲ್ಲ. ಬೆಳಿಗ್ಗೆ ಏಳ ಬೇಕು, ದುಡೀಬೇಕು, ಕೂಲಿ ಪಡೆದುಕೊಂಡು ಅದರಿಂದ ಒಂದಷ್ಟು ರಾಗಿಯನ್ನೋ ಜೋಳವನ್ನೋ ತಂದು ಅದನ್ನು ಹಿಟ್ಟು ಮಾಡಿಸಿ, ಮುದ್ದೆ ಮಾಡಿಕೊಂಡು ಯಾವುದೋ ಒಂದು ಸೊಪ್ಪಿನ ಸಾರು ಮಾಡಿ ತಿನ್ನಬೇಕು. ಇದರಿಂದ ಬಂದ ಸ್ವಲ್ಪ ಶಕ್ತಿಯನ್ನು ಮರುದಿನದ ಉದ್ಯೋಗಕ್ಕೆ ಬಳಸಬೇಕು. ಮರುದಿನದ ಕೆಲಸದಲ್ಲಿ ಅವರು ಗಳಿಸಿದ್ದನ್ನು ಮತ್ತೆ ಶಕ್ತಿ ಉತ್ಪತ್ತಿ ಮಾಡಿಕೊಳ್ಳಲು ಬಳಸಬೇಕು. ತಮ್ಮ ಅತ್ಯಲ್ಪ ಸಂಪಾದನೆಯಿಂದ ಬಂದ ಶಕ್ತಿಯನ್ನು ಅವರು ಹೀಗೆ ಪ್ರತಿದಿನವೂ ನಮ್ಮ ಉಳಿವಿಗಾಗಿ, ನಮ್ಮ ಒಳಿತಿಗಾಗಿ ಬಳಸುತ್ತಿದ್ದಾರೆ.

ಇವರಿಗೂ ಸರಕಾರಕ್ಕೂ ನಿಜವಾದ ಸಂಬಂಧ ಇಲ್ಲ. ಏಕೆಂದರೆ ಯಾವ ಸರಕಾರವೂ ಅವರ ಕ್ಷೇಮದ ಬಗ್ಗೆ ಕಾಳಜಿ ವಹಿಸಿಲ್ಲ. ಅವರಿಗೆ ಅನಾರೋಗ್ಯ ಕಾಡಿದಾಗ ಚಿಕಿತ್ಸೆ ಕೊಡಿಸುವುದಾಗಲೀ, ಅವರು ಬಹಳ ಮುದುಕರಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗದ ಸ್ಥಿತಿ ಒದಗಿದಾಗ ಅವರಿಗೆ ಎರಡು ತುತ್ತು ಸಿಗುವ ವ್ಯವಸ್ಥೆಯನ್ನಾಗಲೀ ಯಾವ ಸರಕಾರವೂ ಮಾಡಿಲ್ಲ. ಹೀಗೆ ಮಾಡಬೇಕು ಎನ್ನುವ ಉದ್ದೇಶವೇನೋ ಇದೆ-ಮಹಾತ್ಮಾ ಗಾಂಧಿ ಹೇಳಿದ್ದರು ಎಂಬ ಕಾರಣದಿಂದ. ನಕ್ಸಲೈಟರ ಭಯದಿಂದ…

***

ಹಿಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋತಿತು. ಐಟಿ- ಬಿಟಿಯನ್ನು ದೊಡ್ಡದು ಮಾಡಲು ಹೋಗಿ ಅದು ಸೋಲುಂಡಿತು. ಆಗ ಎರಡು ಪಕ್ಷಗಳು ಗೆದ್ದು ಬಂದವು. ಇದರಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಿಜೆಪಿ. ಎರಡನೆಯ ಸ್ಥಾನ ಕಾಂಗ್ರೆಸ್‌ನದ್ದು, ಮೂರನೆಯ ಸ್ಥಾನ ಜೆಡಿಎಸ್‌ನದ್ದು. ಅಂದರೆ ಬಿಜೆಪಿ ಹಾಗೂ ಜೆಡಿಎಸ್‌ಗಳು ಗಳಿಸಿದ ಒಟ್ಟು ಸ್ಥಾನಗಳು ಸೇರಿದರೆ ಕಾಂಗ್ರೆಸ್‌ಗೆ ಜನಾದೇಶವಿಲ್ಲ ಎಂಬುದು ಸ್ಪಷ್ಟ. ಕಾಂಗ್ರೆಸ್‌ನವರು ನಿಜವಾದ ತಾತ್ವಿಕ ರಾಜಕಾರಣ ಮಾಡುವುದಾಗಿದ್ದರೆ ಜನ ತಮ್ಮನ್ನು ಸೋಲಿಸಿದ್ದಾರೆ ಎಂದು ಒಪ್ಪಿಕೊಳ್ಳ ಬೇಕಿತ್ತು. ಜಾತ್ಯತೀತತೆಗೆ ತಮಗಿರುವ ಬದ್ಧತೆಯನ್ನು ತೋರಿಸಲು ಜೆಡಿಎಸ್‌ಗೆ ಸರಕಾರ ರಚಿಸಲು ಹೇಳಿ ಹೊರಗಿನಿಂದ ಬೆಂಬಲ ಘೋಷಿಸಬೇಕಿತ್ತು. ಆಗ ಅದು ತತ್ವಕ್ಕೆ ಬದ್ಧವಾದ ರಾಜಕಾರಣ ಆಗುತ್ತಿತ್ತು.

ಈಗ ಜೆಡಿಎಸ್‌ನವರಿಗೆ ಕಾಂಗ್ರೆಸ್‌ ಬಹಳ ಹೇಯ ಅನ್ನಿಸುತ್ತಿದೆ. ಅವರಿಗೆ ಕಾಂಗ್ರೆಸ್‌ ಅಷ್ಟು ಹೇಯ ಅನ್ನಿಸಿದ್ದರೆ, ಮತ್ತೊಂದು ಚುನಾವಣೆಯ ಮೂಲಕ ಬೊಕ್ಕಸದ ಹೊರೆ ಹೆಚ್ಚಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರೆ ಬಿಜೆಪಿಗೇ ಸರಕಾರ ರಚಿಸುವ ಅವಕಾಶವನ್ನು ಬಿಟ್ಟುಕೊಟ್ಟು ಹೊರಗಿನಿಂದ ಬೆಂಬಲ ಕೊಡುತ್ತೇವೆ ಎಂದು ಹೇಳಬೇಕಿತ್ತು. ಹಿಂದೆ ವಿ.ಪಿ.ಸಿಂಗ್‌ ಸರಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿ ಹೀಗೆಯೇ ಜನತಾದಳಕ್ಕೆ ಬೆಂಬಲ ನೀಡಿತ್ತು. ಅದು ತತ್ವಬದ್ಧ ರಾಜಕಾರಣವವಾಗುತ್ತಿತ್ತು. ಈಗ ಸಮ್ಮಿಶ್ರ ಸರಕಾರದಲ್ಲಿ ಉಂಡದ್ದು ಸಾಲದು ಎಂಬ ಕಾರಣಕ್ಕೆ ಜೆಡಿಎಸ್‌ನವರಿಗೆ ಕಾಂಗ್ರೆಸ್‌ ಹೇಯ ಅನ್ನಿಸುತ್ತಿದೆ ಎಂದು ಜನ ತಿಳಿಯಬಹುದಾಗಿದೆ. ಅಂದರೆ ಯಾರ್ಯಾರು ಎಷ್ಟೆಷ್ಟು ದುಡ್ಡನ್ನು ಚುನಾವಣೆಗಿಂತ ಮೊದಲು ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಖಾತೆಗಳನ್ನು ಹಂಚಿಕೊಳ್ಳುವ ರಾಜಕಾರಣ ಈಗ ನಡೆಯುತ್ತಿದೆ. ಆದ್ದರಿಂದ ಇನ್ನೊಂದು ಮೂರನೆಯ ಪಕ್ಷ ಹುಟ್ಟಿದರೂ ಅದೂ ಹೀಗೆಯೇ ಮಾಡಬಹುದು ಎಂಬ ಭಯ ನನಗಿದೆ. ಈ ಹೊತ್ತಿನಲ್ಲಿ ನಾವು ಮೂರನೆಯ ಶಕ್ತಿಯ ವ್ಯಾಖ್ಯೆಯನ್ನು ಹಿಗ್ಗಿಸಿಕೊಳ್ಳಬೇಕು.

ಸಮಾಜದ ಬಗ್ಗೆ ಕಳಕಳಿ ಇರುವ, ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಸರಿಯಾದ ಕೆಲಸವನ್ನು ಮಾಡುತ್ತಿರುವ ಜನರೇ ಈ ಕಾಲದ ಮೂರನೆಯ ಶಕ್ತಿ. ರಾಜಸ್ಥಾನದಲ್ಲಿ `ನೀರು ಗಾಂಧಿ’ ಎಂದು ಖ್ಯಾತ ನಾದ ರಾಜೇಂದ್ರಸಿಂಗ್‌ ಮಾತನಾಡುವುದನ್ನು ನೋಡಿದಾಗ ಈತನೂ ಒಬ್ಬ ಮೂರನೇಶಕ್ತಿಯ ಪ್ರತೀಕ ಅನ್ನಿಸುತ್ತೆ. ಆತ ಊರಿಗೆ ನೀರು ತಂದಿದ್ದಾನೆ. ಸಾಲು ಮರದ ತಿಮ್ಮಕ್ಕನಂಥ ಅಜ್ಜಿ ಊರಿನಲ್ಲೆಲ್ಲಾ ಮರ ನೆಡುತ್ತಾಳೆ. ಆಕೆಯೂ ಒಂದು ಮೂರನೇ ಶಕ್ತಿ. ಒಬ್ಬ ಪ್ರೈಮರಿ ಶಾಲೆಯ ಮೇಷ್ಟ್ರು ಅಲ್ಲಿರುವ ಮಕ್ಕಳನ್ನೆಲ್ಲಾ ಶಾಲೆಗೆ ಕರೆತಂದು ಸರಿಯಾಗಿ ಪಾಠ ಮಾಡಿ ಶಾಲೆ ಅತ್ಯುತ್ತಮವಾಗುವ ಹಾಗೆ ನೋಡಿಕೊಂಡರೆ ಆತನೂ ಮೂರನೇ ಶಕ್ತಿ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಜನ ಕಾರ್ಯನಿರತರಾಗಬೇಕು.

***

ನಾನು ಮೊದಲೇ ಹೇಳಿದ ಸರಕಾರದ ಯಾವ ಲಾಭವನ್ನೂ ಪಡೆಯದ ದೈಹಿಕ ದುಡಿಮೆಯ ಅಪಾರ ಜನಸ್ತೋಮ ಈಗಲೇ ಒಂದು ಮೂರನೇ ಶಕ್ತಿಯಾಗಿ ನಮ್ಮ ನಾಗರಿಕತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಅದಿಲ್ಲದಿದ್ದರೆ ನಾವೆಲ್ಲಿರುತ್ತೆದ್ದೆವು? ನಮಗೇನು ಐಟಿ-ಬಿಟಿಯನ್ನು ತಿನ್ನಲು ಸಾಧ್ಯವೇ? ನಾವು ತಿನ್ನುವುದನ್ನೆಲ್ಲಾ ದುಡಿಯುತ್ತಿರುವುದು ಆ ಜನಸ್ತೋಮ. ಆ ಶಕ್ತಿ ಇದ್ದೇ ಇದೆ. ಅದು ರಾಜಕೀಯ ಶಕ್ತಿಯಾಗಿ ಕಾಣಿಸುತ್ತಿಲ್ಲ. ಆದರೆ ಅದು ಮಾನವ ಸಂಪನ್ಮೂಲವಾಗಿ ಅಪಾರ ಸಂಖ್ಯೆಯಲ್ಲಿದೆ. ಈ ಜನಸಮೂಹದ ಜತೆಗೆ ಅವರಿಗಿಂತ ಉತ್ತಮ ಸ್ಥಿತಿಯಲ್ಲಿರುವ ನಮ್ಮಂಥವರು ಸೇರಿ ಒಂದು ನಾಗರಿಕ ಸಮಾಜವನ್ನು ಕಲ್ಪಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಒಂದು ಘಟನೆಯನ್ನು ಉಲ್ಲೇಖಿಸಬಹುದು ಅನ್ನಿಸುತ್ತಿದೆ.

ಗಾಂಧೀಜಿಯವರಿಗೆ ಈ ಕಲ್ಪನೆ ಬಹಳ ಸ್ಪಷ್ಟವಾಗಿತ್ತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ವಿದೇಶಿ ಪತ್ರಕರ್ತನೊಬ್ಬ ಅವರಲ್ಲಿ `ನಿಮ್ಮ ಧ್ಯೇಯ ಏನು?’ ಎಂದು ಕೇಳಿದ. ಈ ಸಂದರ್ಭದಲ್ಲಿ ಆತ ನಿರೀಕ್ಷಿಸಿದ ಉತ್ತರ ಬ್ರಿಟಿಷರನ್ನು ತೊಲಗಿಸುವುದು. ಆದರೆ ಆ ಪತ್ರಕರ್ತನಿಗೆ ಆಶ್ಚರ್ಯವಾಗುವಂತೆ ಗಾಂಧಿ ಉತ್ತರಿಸುತ್ತಾರೆ-`ನನ್ನ ಧ್ಯೇಯ ಮೂರು. ಒಂದನೆಯದು ಹಿಂದೂ-ಮುಸ್ಲಿಂ ಏಕತೆ. ಅವರಿಬ್ಬರಲ್ಲಿ ಇರುವ ಜಗಳವನ್ನು ಇಲ್ಲದಂತೆ ಮಾಡುವುದು. ಎರಡನೆಯದು ಅಸ್ಪೃಶ್ಯತೆಯ ನಿವಾರಣೆ. ಮೂರನೆಯದ್ದು ಖಾದಿ.’ ಈ ಮೂರೂ ಹೇಗೆ ಬ್ರಿಟಿಷರನ್ನು ಹೊರಗಟ್ಟುವ ಉದ್ದೇಶಕ್ಕೆ ಪೂರಕವಾಗಿವೆ ಎಂಬುದನ್ನು ನೋಡೋಣ. ಬೇರೆಯವರಿಗೆ ನಮ್ಮ ಮೇಲೆ ಪ್ರಭುತ್ವ ಸ್ಥಾಪಿಸಿ ಅಟ್ಟಹಾಸ ಮಾಡುವುದಕ್ಕೆ ಸಾಧ್ಯವಾದದ್ದೇ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಾಗದೇ ಇದ್ದುದರಿಂದ. ಅವರು ಒಗ್ಗಟ್ಟಾಗಿದ್ದರೆ ಬ್ರಿಟಿಷರಿಗೆ ಭಾರತದಲ್ಲಿರುವುದಕ್ಕೆ ಯಾವ excuse ಕೂಡಾ ಉಳಿಯುವುದಿಲ್ಲ.

ಎರಡನೆಯದ್ದು ನಮ್ಮಲ್ಲೇ ಇರುವ ಅಸಮಾನತೆ- ನಾವು ಅಸ್ಪೃಶ್ಯರನ್ನು ನೋಡಿಕೊಳ್ಳುವ ರೀತಿ-ಅದರಿಂದಾಗಿ ಇದೊಂದು ನ್ಯಾಯಯುತ ಸಮಾಜವಲ್ಲ. ಹಾಗಾಗಿ ಬ್ರಿಟಿಷರು `ನೀವು ನ್ಯಾಯಯುತವಾಗಿ ನಡೆದುಕೊಳ್ಳುವುದಿಲ್ಲ. ನೀವು ಹಾಗೆ ನಡೆದುಕೊಳ್ಳುವಂತೆ ಮಾಡುವುದಕ್ಕೆ ಇನ್ನೊಂದು ಶಕ್ತಿ ಬೇಕು. ಅದಕ್ಕೆ ನಾವಿದ್ದೇವೆ’ ಎಂದು ವಾದಿಸಬಹುದು. ಅಸ್ಪೃಶ್ಯತೆ ನಿವಾರಿಸಿದರೆ ಈ ವಾದವೂ ನೆಲೆ ಕಳೆದುಕೊಳ್ಳುತ್ತದೆ. ಮೂರನೆಯದು ಆರ್ಥಿಕ ಸಂಬಂಧಗಳ ವಿಷಯ. ಗಾಂಧಿ ವೈಶ್ಯ ಜಾತಿಯಲ್ಲಿ ಹುಟ್ಟಿದ್ದರಿಂದಲೋ ಏನೋ ಇದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇದು ಮಾರ್ಕ್ಸ್‌ಗೂ ಗೊತ್ತಿತ್ತು.

ಅಧಿಕಾರ ಯಾರ ಕೈಯಲ್ಲಿರಬೇಕು ಎಂಬುದನ್ನು ನಿರ್ಧರಿಸುವುದು ಆರ್ಥಿಕ ಸಂಬಂಧಗಳೇ. ಇಲ್ಲಿಂದ ಹತ್ತಿಯನ್ನು ತೆಗೆದುಕೊಂಡು ಹೋಗಿ ನೂಲು ಮಾಡಿ ಬಟ್ಟೆ ಮಾಡಿ ಅದನ್ನು ಬ್ರಿಟಿಷರು ನಮಗೆ ಮಾರುತ್ತಿದ್ದರು. ನಾವೇ ನಮ್ಮ ಬಟ್ಟೆಯನ್ನು ಮಾಡಿಕೊಳ್ಳುವುದಕ್ಕೆ ಶುರು ಮಾಡಿದರೆ ಬ್ರಿಟಿಷರಿಗೆ ಇಲ್ಲಿ ಉಳಿದುಕೊಳ್ಳುವುದರಿಂದ ಯಾವ ಲಾಭವೂ ಇರುತ್ತಿರಲಿಲ್ಲ.

ಗಾಂಧೀಜಿಯವರ ಸ್ವದೇಶಿ ಚಳವಳಿಯ ಸಮಯದಲ್ಲಿ ಮ್ಯಾಂಚೆಸ್ಟರ್‌ನಲ್ಲಿದ್ದ ಒಂದು ಮಿಲ್‌ ಮುಚ್ಚಿ ಹೋಯಿತು. ರೌಂಡ್‌ ಟೇಬಲ್‌ ಕಾನ್ಫರೆನ್ಸ್‌ಗೆ ಇಂಗ್ಲೆಂಡ್‌ಗೆ ಹೋಗಿದ್ದ ಅರೆ ಬೆತ್ತಲೆಯ ಗಾಂಧಿ ಮ್ಯಾಂಚೆಸ್ಟರ್‌ನ ಮಿಲ್‌ಗೆ ಹೋಗಿ ಅಲ್ಲಿನ ಕಾರ್ಮಿಕರನ್ನು ಉದ್ದೇಶಿಸಿ `ನನ್ನ ಚಳವಳಿಯಿಂದಾಗಿ ನೀವು ಕೆಲಸ ಕಳೆದುಕೊಂಡಿದ್ದೀರಿ. ನೀವೂ ನನ್ನ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗಿಯಾಗಬೇಕು’ ಎಂದರು. ಮಾರ್ಕ್ಸ್‌ workers of the world unite ಎಂದು ಹೇಳಿದ್ದರೆ ಗಾಂಧೀಜಿ ಅದನ್ನು ಮಾಡಿ ತೋರಿಸಿದ್ದರು. ಗಾಂಧೀಜಿಯ ಮಾತು ಕೇಳಿದ ಒಬ್ಬಳು ಹಣ್ಣು ಹಣ್ಣು ಮುದುಕಿ-ಕಾರ್ಖಾನೆ ಮುಚ್ಚಿದ್ದರಿಂದ ಹಸಿದವಳು- ಬಂದು ಗಾಂಧೀಜಿಯ ಎರಡೂ ಕೆನ್ನೆಗೆ ಮುತ್ತಿಟ್ಟಳು.

ಇದು ನಾಗರಿಕ ಸಮಾಜವನ್ನು ಸೃಷ್ಟಿ ಮಾಡುವ ಆಂದೋಲನದ ಸ್ವರೂಪ. ಅದು ಇನ್ನೂ ನಮ್ಮ ನೆನಪಿನಲ್ಲಿ ಅದೃಷ್ಟ ವಶಾತ್‌ ಉಳಿದಿದೆ. ನೆನಪಿದೆ. ಎಲ್ಲೆಲ್ಲೂ ಅಪಸ್ವರಗಳೇ ಕೇಳಿಸುವ, ಅತ್ಯಂತ ಸಣ್ಣ ಜನರು ಅಕಾಶ ಕಾಣದ ಹಾಗೇ ಮೆರೆಯುವ ಹೇಯವಾದ ಚಿತ್ರಗಳೇ ಕಣ್ಣಿಗೆ ಕಟ್ಟುವ ಇವತ್ತಿನ ಅತ್ಯಂತ ವಿಷಾದದ ಘಳಿಗೆಗಳಲ್ಲಿ ಮೇಲೆ ಹೇಳಿದ ನೆನಪುಗಳನ್ನು ಉಳಿಸಿಕೊಂಡು ಕ್ರಿಯಾಶೀಲರಾಗುವುದು ಬಹಳ ಮುಖ್ಯವಾಗುತ್ತದೆ.

ನಿರೂಪಣೆ: ಇಸ್ಮಾಯಿಲ್
ಈ ಲೇಖನ 2006 ಫೆಬ್ರವರಿ 5ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿರುವ ಋಜುವಾತು ಅಂಕಣದಲ್ಲಿ ಪ್ರಕಟವಾಗಿತ್ತು