Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಮನುಷ್ಯ ಚರಿತ್ರೆ ಬಗೆವ ಬಗೆಗಳು

ಚರಿತ್ರೆಯನ್ನು ಕುರಿತ ಮೂರು ಬಗೆಯ ಗ್ರಹಿಕೆ ಗಳನ್ನು ನಿಮ್ಮ ಇದಿರು ಇಡಲು ಬಯಸುತ್ತೇನೆ. ಮಾರ್ಕ್ಸ್‌ವಾದಿಗಳಿಗೆ ಮನುಷ್ಯನನ್ನು ಅರಿಯಲು ಅವನನ್ನು ಚರಿತ್ರೆಯಲ್ಲಿಟ್ಟು ನೋಡುವುದು ಬಹಳ ಅಗತ್ಯ. ಇದನ್ನು ಒಂದು ತತ್ವವಾಗಿ ಮಾತ್ರ ಅವರು ನಂಬುವುದಲ್ಲ; ಕ್ರಿಯಾಶೀಲರಾದ ಮಾರ್ಕ್ಸಿಸ್ಟರು ಚರಿತ್ರೆಯನ್ನು ಬದಲಾಯಿಸಬಹುದೆಂದೂ ತಿಳಿಯುತ್ತಾರೆ. ಈ ಬದಲಾವಣೆ ಸಾಧ್ಯವಾಗುವುದು ಮೊದಲನೆಯದಾಗಿ ಉತ್ಪಾದನಾ ವಿಧಾನಗಳಲ್ಲಿ ವ್ಯತ್ಯಾಸವಾಗುವುದರಿಂದ; ಎರಡನೆಯದಾಗಿ ಉತ್ಪಾದನಾ ಸಂಬಂಧಗಳಲ್ಲಿ ಬಿಕ್ಕಟ್ಟು ಉಂಟಾಗುವುದರಿಂದ; ಮೂರನೆಯದಾಗಿ, ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ತುಳಿತಕ್ಕೊಳಗಾದವರು ಒಗ್ಗಟ್ಟಾಗಿ ಹೋರಾಡುವುದರಿಂದ. ಹೀಗೆ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು, ಸಮಾಜವನ್ನು ಬದಲಿಸಲು ಚರಿತ್ರೆ ಮಾರ್ಕ್ಸ್‌ವಾದಿಗಳಿಗೆ ಮುಖ್ಯವಾದ ಅರಿಯುವ ಸಾಧನವಾಗುತ್ತದೆ.

ಜನ ಭಾಷೆ ಮತ್ತು ಜ್ಞಾನದ ಭಾಷೆ: ಕೆಲ ಚಿಂತನೆಗಳು

1. ಎಲ್ಲ ಭಾಷೆಗಳೂ ಉಳಿಯುವುದು ಆ ಭಾಷೆಯನ್ನು ಮಾತ್ರ ಬಲ್ಲ ಜನರು ಇರುವ ತನಕ. ಆದರೆ ಇಲ್ಲೊಂದು ವಿರೋಧಾಭಾಸವೆಂದು ಕಾಣುವ ಸಂಗತಿಯಿದೆ. ಭಾಷೆಗಳು ಬೆಳೆಯುವುದು ಆ ಭಾಷೆಗಳನ್ನು ಬಲ್ಲ ಜನರಿಗೆ ಇನ್ನೊಂದು ಸಾಹಿತ್ಯ ಸಮೃದ್ಧವಾದ ಭಾಷೆಯಾದರೂ ಗೊತ್ತಿದ್ದಾಗ. ಹಿಂದೆ ಸಂಸ್ಕೃತದ ಜೊತೆ ಕನ್ನಡ ಅದರ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿತು. ಈ ಕಾಲದಲ್ಲಿ ಇಂಗ್ಲಿಷ್‌ ಜೊತೆ ಕೆಲಸ ಮಾಡಿತು.

2. ಈ ಎರಡು ಭಾಷೆಗಳ ನಡುವಿನ ಕೊಡು- ಕೊಳ್ಳುವ ಸಂಬಂಧ ಒಂದು ಇನ್ನೊಂದಕ್ಕೆ ಮೇಲಿನದು ಎಂಬ ಭಾವನೆ ಇದ್ದಾಗ ಮತ್ತು ಈ ಭಾವನೆ ರಾಜಕೀಯ, ಆರ್ಥಿಕ ಕಾರಣಗಳನ್ನೂ ಪಡೆದಿ ದ್ದಾಗ ಈ ಒಡನಾಟ `ಒಂದು ಭಾಷೆ ಕೊಡುವುದು ಮಾತ್ರ, ಇನ್ನೊಂದು ಭಾಷೆ ಪಡೆಯುವುದು ಮಾತ್ರ' ಎಂಬ ಯಜಮಾನಿಕೆಯದಾಗಿರುತ್ತದೆ. ಈ ಯಜಮಾನಿಕೆಯನ್ನು ಗೆದ್ದವರು ನಮ್ಮ ಹಲವು ಹಿರಿಯ ಲೇಖಕರು- ಮುಖ್ಯವಾಗಿ ಸಾಹಿತ್ಯದಲ್ಲಿ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತನ್ನ ಪ್ರದೇಶದ್ದು ಮಾತ್ರವಾದ ಚಲಿಸದ ಭಾಷೆಯಾದ ಕನ್ನಡ ತನ್ನೊಳಗೆ ಇಡೀ ಪ್ರಪಂಚವನ್ನು ಕಂಡು ಕಾಣಿಸಬಲ್ಲದು ಎನ್ನುವ ವಿಶ್ವಾಸ ಕವಿರಾಜಮಾರ್ಗದ ಕಾಲದಿಂದ ಈವರೆಗೆ ನಮ್ಮ ಅತ್ಯುತ್ತಮ ಮನಸ್ಸು ಗಳಲ್ಲಿ ಕೆಲಸ ಮಾಡಿದೆ. (ಇಂಗ್ಲಿಷಿನಲ್ಲೂ ಅದು ಚಲಿಸದ ಭಾಷೆಯಾಗಿದ್ದಾಗ ಶೇಕ್ಸ್‌ಪಿಯರ್‌ ಬಂದನೆಂಬುದನ್ನು ಮರೆಯಬಾರದು)