ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಜನ ಸಮೂಹದ ಒಟ್ಟಾರೆ ಶೂರರು!
ನಾನು ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ಓದುತ್ತ ಇದ್ದಾಗ ಪ್ರತಿ ನಿತ್ಯ ಸಂಜೆ ದಾಸ್ ಪ್ರಕಾಶ್ ಹೋಟೆಲಿನ ವೃತ್ತದಲ್ಲಿ ಇದ್ದ ಕಾಫಿ ಹೌಸ್‌ನಲ್ಲಿ ಹರಟಲು ಸೇರುತ್ತ ಇದ್ದೆವು. ಮೇಲಿಂದ ಮೇಲೆ ಒನ್ ಬೈ ಟು ಕಾಫಿಯನ್ನು ಆರ್ಡರ್ ಮಾಡಿ ಬೆತ್ತದ ಕುರ್ಚಿಗಳ ಮೇಲೆ ಕೂತು ಕಾಫಿ ಸವಿಯುತ್ತ ನಾವು ಓದಿದ್ದನ್ನೆಲ್ಲ ಎಷ್ಟು ಉತ್ಕಟವಾಗಿ ಚರ್ಚಿಸುತ್ತಾ ಇದ್ದೆವು ಎಂದು ಈಗ ಆಶ್ಚರ್ಯವಾಗುತ್ತದೆ. ನಮ್ಮ ಜೊತೆ ಅಡಿಗರೂ ಇರುತ್ತಿದ್ದರು. ಅವರು ಏನೇ ಹೊಸದನ್ನು ಓದಲಿ, ಅದನ್ನು ನಮಗೆ ಓದಿಸುತ್ತಿದ್ದರು. ಹಾಗೆಯೇ ನಾವು ಓದಿದ್ದನ್ನು ಅವರಿಗೆ ಓದಿಸುತ್ತಿದ್ದೆವು. ನನಗೆ ಇಷ್ಟವಾದ ಲೋಹಿಯಾರ ಪ್ರಬಂಧಗಳನ್ನು ಲಾರೆನ್ಸ್‌ನ ಪ್ರಬಂಧಗಳನ್ನು ಅಡಿಗರಿಗೆ ಓದಿಸಿದ್ದೆ- ರಾಜಾಜಿಯ ಕನ್ಸರ್ವೆಟಿವ್ ನಿಲುವುಗಳನ್ನು ಮೆಚ್ಚುತ್ತಿದ್ದ ಅಡಿಗರಿಗೆ ಈ ಲೇಖಕ ಚಿಂತಕರೂ ಬೇಕಾದವರಾದರು. ಅಡಿಗರ ಮುಖೇನ ನನ್ನ ಅರಿವಿಗೆ ಬಂದವರಲ್ಲಿ ಮುಖ್ಯವಾಗಿ ಇಬ್ಬರು: ಸ್ಪ್ಯಾನಿಷ್ ಚಿಂತಕ ಆರ್ಟೆಗಾ ಗ್ಯಾಸೆ (José Ortega y Gasset) ಮತ್ತು ಜಗತ್ತಿನ ನಾಗರೀಕತೆಗಳ ಬಗ್ಗೆ ಬರೆದ ತಾತ್ವಿಕ ಇತಿಹಾಸಕಾರ ಆರ್ನಾಲ್ಡ್ ಟಾಯನ್ ಬೀ. ನಮ್ಮ ನಮ್ಮ ವಿಶಿಷ್ಟ ಅಂತರ್ಮುಖಿ ಅಗತ್ಯಗಳಲ್ಲಿ ಈ ಚಿಂತಕರು ನಮ್ಮ ಒಳಗಿನ ಲೋಕವನ್ನು ಬೆಳೆಸಿದರು. ಲೇಖಕರಾದ ನಮ್ಮ ಬರೆವಣಿಗೆಯ ಮುಖ್ಯ ರೂಪಕಗಳನ್ನು ಸೃಷ್ಟಿಸಲು ಕಾರಣರಾದರು. ಅಂದರೆ ತಾರ್ಕಿಕ ವಿರೋಧಗಳಲ್ಲಿ ಅವರ ವಿಚಾರಗಳು ನಮ್ಮ ಒಳಗೆ ಬರದೆ, ರೂಪಕಗಳ ಸಂಕಿರಣಗಳಾಗಿ ನಮಗೆ ಇವರು ಒದಗಿದರು. ಅಡಿಗರ ಕಾವ್ಯದಲ್ಲಂತೂ ಈ ಚಿಂತಕರು ಭಾರತೀಯ ಪುರಾಣಲೋಕದಲ್ಲಿ ಬೆರೆತು ಮರುಹುಟ್ಟು ಪಡೆದರು.
ಓಟಿಗೋ? ಒಗ್ಗಟ್ಟಿಗೋ?
ಕನ್ನಡಿಗರಾದ ನನ್ನ ಹಿಂದೂ ಬಾಂಧವರಲ್ಲೂ ನನ್ನ ಮುಸ್ಲಿಂ ಗೆಳೆಯರಲ್ಲೂ ಒಟ್ಟಾಗಿ ಕೆಲವು ವಿಚಾರಗಳನ್ನೂ ಭಾವನೆಗಳನ್ನೂ ನಿವೇದಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಹುಟ್ಟಿದ್ದು ಬ್ರಾಹ್ಮಣನಾಗಿ. ನನ್ನ ಬಾಲ್ಯದಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದೇ ಇರಲಿಲ್ಲ. ಮಠದ ಆವರಣದಲ್ಲಿ ಹಳ್ಳಿಯೊಂದರಲ್ಲಿ ಬೆಳೆದ ನಾನು ಬಹಳ ಕಾಲ ಮಾಧ್ವ ಮತದ ವಿಚಾರಗಳನ್ನು ಶ್ರದ್ಧೆಯಿಂದ ನಂಬುತ್ತ ಇದ್ದೆ. ಈ ಜಗತ್ತು ಸತ್ಯ, ಶಂಕರಾಚಾರ್ಯರು ತಿಳಿದಂತೆ ಮಿಥ್ಯೆಯಲ್ಲ; ದೇವರು ಒಬ್ಬನೇ, ಅವನೇ ವಿಷ್ಣು, ಶಿವ, ಜೀವೋತ್ತಮನೇ ಹೊರತು ದೇವರು ಅಲ್ಲ, ದೇವರ ಸೃಷ್ಟಿಯಲ್ಲಿ ಅಂತರಗಳು ಇವೆ, ತಾರತಮ್ಯಗಳು ಇವೆತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತ ಇದ್ದ ನಾನು ಹಳ್ಳಿಯಿಂದ ಸ್ಕೂಲಿಗೆ ಹೋಗುವ ದಾರಿಯಲ್ಲಿ ನನ್ನ ಅದ್ವೈತಿ ಮಿತ್ರರೊಂದಿಗೆ ಪ್ರಾಯಶಃ ಬಾಲಿಶವಾಗಿ ದ್ವೈತಾದ್ವೈತದ ಪಾರಮಾರ್ಥಿಕ ಚರ್ಚೆಯಲ್ಲಿ ಕಾಲ ಕಳೆದವನು. ಹೀಗೆ ನನ್ನ ಜೊತೆ ಅದ್ವೈತದ ಪರ ಚರ್ಚಿಸುತ್ತ ಇದ್ದ ಮಿತ್ರನೊಬ್ಬ ಕೆಲವು ತಿಂಗಳುಗಳ ಹಿಂದೆ ಮೃತನಾದ.
