ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಗುಮಾನಿಯಿಂದ ನೋಡಬೇಕಾದ ರಾಜಕೀಯ ಸೀರಿಯಲ್
ದೂರದರ್ಶನದಲ್ಲಿ ಬರುವ ಸೀರಿಯಲ್‌ಗಳನ್ನು ನಾವು ಬೇಕಾದರೆ ನೋಡಬಹುದು; ಬೇಡದೇ ಇದ್ದರೆ ನೋಡದೇ ಇರಬಹುದು. ಆದರೆ ಈಗ ಕರ್ನಾಟಕದಲ್ಲಿ ದೇವೇಗೌಡರು ನಡೆಸುತ್ತಿರುವ ಸೀರಿಯಲ್ಲನ್ನು ನಾವೆಲ್ಲರೂ ಬಲವಂತವಾಗಿ ನೋಡಬೇಕಾಗಿ ಬಂದಿದೆ. ಹೀಗೆ ನೋಡಲೇ ಬೇಕಾದ ಸೀರಿಯಲ್ ನಮ್ಮಲ್ಲಿ ಭ್ರಮೆಗಳನ್ನೂ, ಹುಸಿ ಭರವಸೆಗಳನ್ನೂ ಹುಟ್ಟಿಸುವುದರಿಂದ ಅದನ್ನು ಕೇವಲ ಪಾತ್ರಧಾರ ನಾಯಕರ ವೈಯಕ್ತಿಕವಾದ ತೆವಲುಗಳಿಗೆ ಸಂಬಂಧಪಟ್ಟದ್ದು ಎಂದು ಮಾತ್ರ ನೋಡದೆ ನಮ್ಮ ಮನಸ್ಸಿನ ಆರೋಗ್ಯಕ್ಕಾಗಿ ಗುಮಾನಿಯಿಂದಲೂ ನೋಡಬೇಕಾಗುತ್ತದೆ. ಯಾವ ನಾಟಕವಾದರೂ ನಮ್ಮಲ್ಲಿ ಭಾವನೆಯ ತರಂಗಗಳನ್ನು, ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಅದರಿಂದ ಒಂದೋ ನಮ್ಮ ಅರಿವು ಪಲ್ಲಟವಾಗಿ ಬೇರೆ ಕಡೆಗೆ ಹರಿಯುತ್ತದೆ ಅಥವಾ ಇರುವ ಅರಿವು ಹಿಗ್ಗುತ್ತದೆ ಅಥವಾ ಆತುರ ಮತ್ತು ಆತಂಕದಲ್ಲಿ ನೋಡುತ್ತ ಹೋದದ್ದು ಕೊನೆಯಲ್ಲಿ ಪಿಚ್ಚೆನ್ನಿಸುವಂತೆ ಮುಗಿಯುತ್ತದೆ.
ಆಧುನಿಕ ಪ್ರಭುತ್ವದ ವಿಕಾರಗಳು
ಈಗ ಕರ್ನಾಟಕದಲ್ಲಿ ಸರಕಾರ ಬದಲಾಗುತ್ತಿದೆ. ಈ ಬದಲಾವಣೆ ಆಗುತ್ತಿದೆ ಎನ್ನುವುದು ನಿರಕ್ಷರರಿಗೂ ಗೊತ್ತಾಗುವ ಹಾಗೆ ಬೆಂಗಳೂರಿನ ಎಲ್ಲ ಪ್ರಮುಖ ಬೀದಿಗಳಲ್ಲೂ ದೊಡ್ಡ ದೊಡ್ಡ ಪೋಸ್ಟರ್‌ಗಳು, ಕಟೌಟ್‌ಗಳು ಕಾಣಿಸಿಕೊಂಡಿವೆ. ನಮಗೆ ಆಕಾಶವೇ ಕಾಣಿಸದಂತೆ ರಾಜಕಾರಣಿಗಳು ಬೀದಿಯ ಬದಿಯಲ್ಲಿ ಬೃಹದಾಕಾರದ ಕಟೌಟ್‌ಗಳಾಗಿ ನಿಂತು ತಮ್ಮ ಗುಂಪುಗಳನ್ನು ಒಡ್ಡಿಕೊಂಡಿದ್ದಾರೆ. ಇದರಲ್ಲೂ ಒಂದು ರಾಜಕೀಯ ಇದೆ. ಒಬ್ಬ ಪ್ರಮುಖನ ಜತೆ ಯಾರ ಚಿತ್ರಗಳಿವೆ ಎನ್ನುವುದನ್ನು ಗಮನಿಸಿದರೆ ಈ ಪ್ರಮುಖನ ಬಳಿ ಯಾರೆಲ್ಲಾ ಅಧಿಕಾರಕ್ಕಾಗಿ ಅಂಗಲಾಚುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಇದು ಆಧುನಿಕ ರಾಜಕಾರಣದ ಮೊದಲ ವಿಕಾರ.