ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಆಧುನಿಕತೆ ನಾಗರಿಕತೆ ಮತ್ತು ಗೋವಿನ ಪಾಡು
Foreign journalist: What do you think of
modern western civilization?
Mahatma Gandhi: It’s a good idea.
ದೇವಸ್ಥಾನದ ಹಿಂಬದಿಯಲ್ಲಿ ತುಂಗೆಯ ದಡದಲ್ಲಿದ್ದ ನಾಗಸಂಪಿಗೆಯ ಮರದ, ಅಗಲವಾಗಿ ತೆರೆದುಕೊಂಡ ಹೂವುಗಳನ್ನು ದೋಟಿಯಲ್ಲಿ ಮೀಟಿ ಬೀಳಿಸಿ, ಅದರ ಕುಸುಮವನ್ನು ಅಂಗಳದಲ್ಲಿ ಒಣಗಿಸಿ, ಆಯುರ್ವೇದ ಪಂಡಿತರೊಬ್ಬರಿಗೆ ಮಾರಿ ಪುಡಿಗಾಸು ಗಳಿಸುವುದು; ಬೆಳಿಗ್ಗೆ ಎದ್ದಿದ್ದೆ ಅಂಗೈ ಉಜ್ಜಿ ಕರಾಗ್ರದಲ್ಲಿ ಲಕ್ಷ್ಮಿಯೂ ಕರಮಧ್ಯದಲ್ಲಿ ಸರಸ್ವತಿಯೂ ಇದ್ದಾಳೆಂದು ಕಣ್ಣಿಗೊತ್ತಿಕೊಳ್ಳುವುದು, ನಂತರ ಮನೆ ಎದುರಿನ ಬಡಕಲು ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಭಾವಿಸಿ ನೋಡಿ ಕೈಮುಗಿಯುವುದು, ಉಮಿಕರಿಯಿಂದ ಹಲ್ಲುಜ್ಜಲು ಹಿತ್ತಲಿಗೆ ಹೋಗುವಾಗ ಕೊಟ್ಟಿಗೆಯಲ್ಲಿ ಕಟ್ಟಿದ ಕೌಲಿಯೆನ್ನುವ ಕಪ್ಪು ದನದ ಹಣೆಯನ್ನು ಮುಟ್ಟಿ ಕಣ್ಣಿಗೊತ್ತಿಕೊಳ್ಳುವುದು, ಊಟಕ್ಕಿಂತ ಮುಂಚೆ ನನ್ನ ಅಜ್ಜ ಎಲೆಯ ಮೇಲೆ ಬಡಿಸಿದ ಪದಾರ್ಥಗಳಲ್ಲಿ ಒಂದಿಷ್ಟನ್ನು ಗೋಗ್ರಾಸವೆಂದು ಹಾಲು ಕರೆಯುವ ಕೌಲಿಗೆ ಎತ್ತಿಡುವುದು- ಇವನ್ನೆಲ್ಲ ನಾನು ಈಗ ನೆನೆಯುವುದು ಹಳಹಳಿಕೆಗಾಗಿಯಲ್ಲ. ನಮ್ಮೆಲ್ಲರಿಗೂ ಸಂಕಟಕಾರಿಯಾದ ರಾಜಕೀಯವಾಗಿಬಿಟ್ಟ ಸಮಸ್ಯೆಯೊಂದನ್ನು ನಿಮ್ಮ ಎದುರು ಮಂಡಿಸುವುದಕ್ಕಾಗಿ.
ಸಿಮೋನ್ ವೇಲ್: ನಿಯತಿ ಮತ್ತು ಒಳಿತು
ಫ್ರಾನ್ಸ್‌ನಲ್ಲಿ ಹುಟ್ಟಿದ ಸಿಮೋನ್ ವೇಲ್ ಇಂಗ್ಲೆಂಡಿನಲ್ಲಿ ತನ್ನ 34ನೆಯ ವಯಸ್ಸಿನಲ್ಲೇ ಸತ್ತಳು. ಟಿ. ಎಸ್. ಎಲಿಯಟ್ ಇವಳನ್ನು a woman of genius akin to that of saints ಎನ್ನುತ್ತಾನೆ. ಜ್ಯೂಯಿಷ್ ಮನೆತನದಲ್ಲಿ ಇವಳು ಹುಟ್ಟಿದ್ದು. ಅವಳ ಕುಟುಂಬ ಸಂಪ್ರದಾಯಸ್ತವಲ್ಲ. ಚಿಕ್ಕಂದಿನಲ್ಲಿ ಇವಳು ನಿರೀಶ್ವರವಾದಿ. ಎರಡು ಮಹಾಯುದ್ಧಗಳ ಕಾಲದಲ್ಲಿ ಬದುಕಿದ ಇವಳು ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಜನೆಯ ಸಮಯದಲ್ಲೇ ದೇಹವನ್ನು ತೀವ್ರವಾಗಿ ದಂಡಿಸುವ ದುಡಿಮೆಯಲ್ಲಿ ತೊಡಗಿದ್ದಳು. ಕಾರ್ಖಾನೆಗಳಲ್ಲಿ ಕೂಲಿಯಾಗಿ ಕಾರ್ಮಿಕ ಸಂಘಟನೆ ಮಾಡಿದಳು. ಗಣಿಗಳಲ್ಲಿ ದುಡಿದಳು. ಅವಳಿಗೆ ತನ್ನ 28ನೇ ವಯಸ್ಸಿನಲ್ಲಿ ಒಂದು ದಿವ್ಯ ಅನುಭವವಾಗಿ ತನ್ನ ಚಿಂತನೆಯಲ್ಲಿ ಕ್ರೈಸ್ತಳಾದಳು. ಆದರೆ ತನಗೆ ಪ್ರಿಯನಾದ ಬಿಷಪ್ ಒಬ್ಬನ ಜತೆ ಒಂದು ದೊಡ್ಡ ವಾಗ್ಯುದ್ಧದಲ್ಲಿ ತೊಡಗಿ ಮತಾಂತರವಾಗಲು ನಿರಾಕರಿಸಿದಳು. `ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ದೈವ ಸ್ಪರ್ಶ ಪಡೆದ ಸಂತರೂ ಇರಲಿಲ್ಲವೇ? ಬುದ್ಧ ಇರಲಿಲ್ಲವೇ?' ಎನ್ನುವ ಸಿಮೋನ್ ವೇಲ್ ಕ್ರಿಸ್ತನ ನಂತರ ಮಾತ್ರ ಈ ಪ್ರಪಂಚದಲ್ಲಿ ದೈವಾನುಗ್ರಹವಾಯಿತು ಎನ್ನುವುದನ್ನು ನಂಬಲಾರದವಳಾದಳು.