ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಪೂರ್ವಕ್ಕೆ ಮುಖ: ಪಶ್ಚಿಮಕ್ಕೆ ಪ್ರಯಾಣ
ಭಾರತವನ್ನು ಪಾಶ್ಚಿಮಾತ್ಯ ಆಧುನಿಕ ನಾಗರಿಕತೆಯ ದಿಕ್ಕಿನಲ್ಲಿ ಬೆಳೆಸಿದ ನೆಹರೂ ಬಲಗೈಯಾಗಿದ್ದವರು ಡಾಕ್ಟರ್ ಹೋಮಿಬಾಬಾ. ಗಾಂಧಿಯವರ ಕನಸಿಗೆ ಅನ್ಯವಾದ ಆದರೆ ಗಾಂಧೀಜಿಯ ಆಶೀರ್ವಾದವನ್ನು ಪಡೆದ, ನೆಹರೂರವರ ಆಧುನಿಕ ನಾಗರಿಕತೆಯ ವ್ಯಸನವೆನ್ನಬಹುದಾದ ಕನಸು ಇವರದು. ಆಧ್ಯಾತ್ಮಿಕವಾಗಿ ಅಂದರೆ ನಿರಾಯಾಸವಾಗಿ, ಗಾಂಧಿಯ ಪರವಾಗಿಯೂ, ಲೌಕಿಕವಾಗಿ ಅಂದರೆ ತೊಡಗಿದ ನಿತ್ಯವಾಗಿ, ಐರೋಪ್ಯ ಆಧುನಿಕತೆಯ ಪರವಾಗಿಯೂ ಇರುವ, ಎಲ್ಲೆಲ್ಲೂ ಇರುವ, ಹೀಗಿರುವುದೇ ಸಹಜವೆನ್ನಿಸಲು ಶುರುವಾಗಿರುವ ನಮ್ಮ ನಿಮ್ಮಂತಹವರಿಗೆ ಅನುಕೂಲರು.
ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆ
ದೇಶ ಕಾಲಗಳ ಮಿತಿಗಳನ್ನು ಮೀರಿ ನಾವು ಹಿಂದಿನದನ್ನು ಮಾತ್ರವಲ್ಲ, ಸದ್ಯದ ಸತ್ಯಗಳನ್ನ್ನೂ ಕಾಣಬಲ್ಲೆವು. ಕೆಲವು ಸಾರಿಯಾದರೂ, ಅಪರೂಪವಾಗಿ.
ನನಗೆ ಹೀಗೆ ಅನ್ನಿಸಿದ್ದು ಒಂದು ರಾತ್ರಿ ನೇಪಾಳದಲ್ಲಿ. ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಶ್ರೀಲಂಕಾಗಳಿಂದ ಆಯ್ದ ಲೇಖಕರ ಜೊತೆ ನಾವು ಕೆಲವು ಭಾರತೀಯ ಲೇಖಕರೂ ಕೂಡಿ ಮೂರು ದಿನಗಳನ್ನು ಕಳೆದಿದ್ದೆವು. ನಾವು ಇಳಿದುಕೊಂಡಿದ್ದ ರೆಸಾರ್ಟಿನ ಹಿಂದೆ ಹಿಮದಿಂದ ಬೆಳಗುವ ಹಿಮಾಲಯದ ಎತ್ತರದ ಶ್ರೇಣಿಯಿತ್ತು. ನಾವು ಮಾತಾಡಲು ಕೂರುತ್ತಿದ್ದ ಹಾಲಿನಿಂದ, ರಾತ್ರೆ ಮಲಗುವ ಕೋಣೆಗಳ ಕಿಟಕಿಯಿಂದ ಹಿಮ ಹೊದ್ದ ಈ ಪರ್ವತರಾಜ ಕಾಣಿಸುತ್ತಿದ್ದ. ನಿರ್ದಿಷ್ಟ ಅಜೆಂಡಾ ಇಲ್ಲದ, ಒಟ್ಟಿಗೆ ಕೂತು ಹರಟಿ ನಮ್ಮ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಬೇಕೆಂಬ ಕೂಟ ಇದಾಗಿತ್ತು. ಸಂದರ್ಭ ಬಾಬ್ರಿ ಮಸೀದಿ ಪ್ರಕರಣದ ನಂತರದು. ಜನಾಂಗೀಯ ದ್ವೇಷದ ಕಿಚ್ಚಿನಿಂದ ನಮ್ಮ ದೇಶಗಳು ಪಾರಾಗುವುದು ಸಾಧ್ಯವೇ ಎನ್ನುವ ಆತಂಕ ನಮ್ಮನ್ನು ಒಟ್ಟಿಗೆ ತಂದಿತ್ತು.