Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಕಾಣುವುದನ್ನು ಕಾಣ್ಕೆಯಾಗಿಸುವ ಕಲಾವಿದ

ಅಬ್ಬಾಸ್ ಕಿರೋಸ್ತಾಮಿ

ನನ್ನ ಚಿತ್ರಗಳ ಜತೆ ಇರಾನ್ ಸರಕಾರಕ್ಕೆ ಯಾವ ಸಂಬಂಧವೂ ಇಲ್ಲ. ನಾನು ಮಾಡುವಂಥ ಸಿನಿಮಾಗಳಲ್ಲಿ ಅವರು ಆಸಕ್ತರಲ್ಲ. ಇರಾನಿನ ಜೀವನದ ಸತ್ಯವನ್ನು ಹೇಳ ಹೊರಟಿದ್ದೇನೆಂದು ನಾನು ತಿಳಿದೇ ಇಲ್ಲ. ಅದರ ಕೆಲವು ಮುಖಗಳನ್ನು ನಾನು ನೋಡುತ್ತೇನೆ ಅಷ್ಟೇ. ಇರಾನ್ ಬಹು ವಿಶಾಲವಾದ ಒಂದು ಪ್ರಪಂಚ. ಅಲ್ಲಿ ಬದುಕುವ ನಮಗೇ ಅಲ್ಲಿನ ವಾಸ್ತವಗಳನ್ನು ಗ್ರಹಿಸುವುದು ಕಷ್ಟ. ದೇಶಕ್ಕೆ ಸಂಬಂಧ ಪಟ್ಟಂತೆ ಬಹುಮುಖ್ಯ ಸಮಸ್ಯೆಗಳನ್ನು ಸರಕಾರ ಎದುರಿಸಬೇಕಾಗಿ ಬಂದಿರುವುದರಿಂದ ನಾವು ಮಾಡುವ ಸಿನಿಮಾಗಳು ಅವರಿಗೆ ಇಲ್ಲದಿದ್ದರೂ ಸಲ್ಲುತ್ತದೆ. ಅವರಿಷ್ಟ ಪಡುತ್ತಾರೋ ಇಲ್ಲವೋ ಈ ಸಿನಿಮಾಗಳು ಮುಖ್ಯವಂತೂ ಅಲ್ಲ.

-ಅಬ್ಬಾಸ್ ಕಿರೋಸ್ತಾಮಿ
ನಾನೇನು ಬಹಳ ಸಿನಿಮಾಗಳನ್ನು ನೋಡಿರುವ ತಜ್ಞನಲ್ಲ. ಆದರೆ ಅಬ್ಬಾಸ್ ಕಿರೋಸ್ತಾಮಿಯ ಕೆಲವು ಸಿನಿಮಾಗಳನ್ನು ನೋಡುತ್ತಿದ್ದಂತೆಯೇ ನನಗೆ ಅನ್ನಿಸಿದ್ದು ಇದು: ಯೂರೋಪಿಯನ್ ಸಿನಿಮಾ ಎನ್ನುವಂತೆ ಏಷ್ಯನ್ ಸಿನಿಮಾ ಕೂಡಾ ಇದೆ. ನಮ್ಮ ಸತ್ಯಜಿತ್ ರಾಯ್ ನಂತೆ , ಜಪಾನಿನ ಕುರೊಸಾವನಂತೆ ಇರಾನಿನ ಅಬ್ಬಾಸ್ ಕಿರೋಸ್ತಾಮಿಯೂ ನಮ್ಮ ಕಾಲದ ಸೂಕ್ಷ್ಮಜ್ಞನಾದ ಏಷ್ಯನ್ ಸಿನಿಮಾ ನಿರ್ದೇಶಕ.

ಇವನು ಇರಾನಿನವನು ಎಂಬುದು ಬಹಳ ಮುಖ್ಯ. ಷಾ ಆಳುತ್ತಿದ್ದ ಕಾಲದಲ್ಲಿ ಇರಾನ್ ತನ್ನ ದೇಶೀಯ ಇಸ್ಲಾಮಿಕ್ ಸಂಸ್ಕೃತಿಯಿಂದ ತುಂಬಾ ದೂರವಾಗಿ ಅಮೆರಿಕದ ಕೃತಕ ಅನುಕರಣೆಯಲ್ಲಿ ಪರದೇಸಿಯಾತು. ಇದಕ್ಕೆ ವಿರುದ್ಧವಾಗಿ ಎದ್ದ ಧಾರ್ಮಿಕ ಸ್ವದೇಶಿ ಅಲೆ ಇರಾನನ್ನು ಮತ್ತೆ ನಿರ್ಬಂಧಿಸಿ ಮತ ನಿಷ್ಠ ಇಸ್ಲಾಮಿನ ಚೌಕಟ್ಟಿನಿಂದ ಹೊರಬಾರದಂತೆ ನೋಡಿಕೊಂಡಿತು. ಇದು ಕ್ರೂರವೆನ್ನಿಸುವಷ್ಟು ಮಾನವ ಸ್ವಭಾವಕ್ಕೆ ಅಸಹಜವಾಗಿ ಅತಿಯಾದದ್ದೇ ಇರಾನ್ ತನ್ನ ದೇಶೀಯ ಸಂಸ್ಕೃತಿಯ, ಯಾವುದೂ ಅತಿಯಾಗಗೊಡದ ಹದವನ್ನು ಮತ್ತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಉಳಿದೆಲ್ಲಾ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇರಾನ್ ಭಾರತಕ್ಕೆ ಅದು ಪಡೆಯುತ್ತಿರುವ ಹದದಲ್ಲೂ ಅದು ಎದುರಿಸುತ್ತಿರುವ ಸಾಂಸ್ಕೃತಿಕ ಇಕ್ಕಟ್ಟಿನ ಸಮಸ್ಯೆಗಳಲ್ಲೂ ಹತ್ತಿರವಾಗಿದೆ ಅನ್ನಿಸುತ್ತದೆ. ಮುಖ್ಯವಾಗಿ ಹೀಗೆ ಅನ್ನಿಸುವುದು ಅವರು ಮಾಡುತ್ತಿರುವ ಸಿನಿಮಾಗಳಲ್ಲಿ.

ಖೊಮೇನಿಯ ನಂತರದ ಇರಾನ್ ನಲ್ಲಿ ಮತೀಯ ಶ್ರದ್ಧೆಗಳನ್ನು ನಿರಾಕರಿಸಿ ಆಧುನಿಕವಾಗುವುದು ಸುಲಭವೇನಲ್ಲ. ಕಳೆದ ವರ್ಷದ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅಬ್ಬಾಸ್‌ ಕಿರೋಸ್ತಾಮಿ ಪುರಸ್ಕೃತನಾದ. ವೇದಿಕೆಯ ಮೇಲೆ ಇವನಿಗೆ ಪುರಸ್ಕಾರವನ್ನು ಕೊಟ್ಟ ಕ್ಯಾಥರಿನ್ ಎಂಬ ಮಹಿಳೆ ಅವನನ್ನು ಅಪ್ಪಿ ಮುದ್ದಿಟ್ಟಳು. ಇದೊಂದು ದೊಡ್ಡ ಸುದ್ದಿಯಾಗದೇ ಹೋಗುವುದು ಮಡಿವಂತ ಇರಾನಲ್ಲಿ ಸಾಧ್ಯವೇ? ಖಂಡಿತಾ ಅಲ್ಲ. ಅಬ್ಬಾಸ್‌ಕಿರೋಸ್ತಾಮಿ ಒಂದು ವಾರ ಟೆಹರಾನ್ ಗೆ ತಡವಾಗಿ ತೆರಳಿದನಂತೆ!

ಕರ್ನಾಟಕದ ಜಾಣ ಅನಕ್ಷರಸ್ಥರು

ರಾಜ್ ಕುಮಾರ್ ರಾಜಕುಮಾರರು ಅಕ್ಷರವಾಗಬೇಕು ಎಂಬ ನನ್ನ ಆಸೆಗೆ ಪೂರಕವಾಗಿ ಇನ್ನಷ್ಟು ಮಾತುಗಳು. ಬೇಂದ್ರೆಯವರು ತಮ್ಮ ಪ್ರಸಿದ್ಧ ಮುನ್ನುಡಿಯೊಂದರಲ್ಲಿ ಕನ್ನಡದ ಹಲವು ಭಾಷಾ ಪ್ರಬೇಧಗಳು ಹೆದ್ದಾರಿ ಸೇರಲು ಇರುವ ಒಳದಾರಿಗಳು ಎಂಬರ್ಥ ಬರುವ ಮಾತಾಡಿದ್ದರು. ಈ ಎಲ್ಲ ಒಳದಾರಿಗಳಲ್ಲಿ ನಡೆದಾಡುತ್ತಲೇ ಕನ್ನಡದ ಮುಖ್ಯ ಹಾದಿಯೊಂದನ್ನು ಸೃಷ್ಟಿಸುವ ಆಶಯವನ್ನು ಪ್ರಕಟಿಸಿದ್ದರು. ಈ ಕೆಲಸ ಸದ್ದಿಲ್ಲದೆ ನಡೆದಿದೆ- ಬೇಂದ್ರೆಯಿಂದ ಮೊದಲಾಗಿ ಕಂಬಾರ, ಮಹದೇವರ ತನಕ.

ನಮ್ಮ ಈಗಿನ ಕನ್ನಡದ ಮುಖ್ಯವಾಹಿನಿ ಕೇವಲ ಮೈಸೂರು ದೇಶದ ಕನ್ನಡವಾಗಿ ಉಳಿದಿಲ್ಲ. ಮಾತಿನ ಓಘದಲ್ಲಿ, ಗತ್ತಿನಲ್ಲಿ, ಏರಿಳಿಕೆಯ ವಿನ್ಯಾಸಗಳಲ್ಲಿ, ಪ್ರಾದೇಶಿಕತೆಯ ತನ್ನ ವಾಸನೆಯನ್ನು ಉಳಿಸಿಕೊಂಡೇ ಎಲ್ಲರ ಕನ್ನಡವೊಂದು ಸೃಷ್ಟಿಯಾಗುತ್ತಲೇ ಇದೆ. ವೈಚಾರಿಕತೆಯ ಸಂವಹನದ ಗದ್ಯಕ್ಕೆ ಇದು ಅಗತ್ಯ. ಕನ್ನಡ ಇವತ್ತು ಭಾವ ವಾಹಿನಿ ಮಾತ್ರವಲ್ಲ; ಜ್ಞಾನವಾಹಿನಿಯೂ ಹೌದು. ವಿಜ್ಞಾನ, ಎಂಜಿನಿಯರಿಂಗ್‌, ಮೆಡಿಕಲ್‌, ಸಮಾಜ ಶಾಸ್ತ್ರ, ಚರಿತ್ರೆ- ಏನನ್ನಾದರೂ ಕನ್ನಡದಲ್ಲಿ ಕಲಿಸುವುದು ಸಾಧ್ಯವಾಗಿದೆ.