ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಸೆಪ್ಟಂಬರ್ 11, ಕಮರ್ಷಿಯಲ್ ಬ್ರೇಕ್, ಆಡೆನ್ ಮತ್ತು ಗಾಂಧಿ
ಡಬ್ಲ್ಯು ಎಚ್ ಆಡೆನ್ ಎಂಬ ಕವಿ ಬರೆದ ಒಂದು ಕವನ ನನಗೆ ಬಹಳ ಮೆಚ್ಚುಗೆಯಾದ್ದು. Musee des Beaux Arts ಎಂಬ ಈ ಪದ್ಯದಲ್ಲಿ ಪುರಾತನರು ನಿಜತಿಳಿದ ಮಾಸ್ತರರು(Masters). ಈ ಪೂರ್ವ ಸೂರಿಗಳು ಪೂರ್ಣಪ್ರಜ್ಞರು. ಮಾನವನ ದಾರುಣ ದುಃಖದ ನಿಜ ಸ್ವರೂಪದ ಸಾಕ್ಷಿಗಳು. ಅವರಿಗೆ ಗೊತ್ತಿದೆ: ಅತ್ಯಂತ ದಾರುಣವಾದ ಒಂದು ಘಟನೆ ನಡೆಯುವ ಹೊತ್ತಿನಲ್ಲೇ ಯಾರೋ ಊಟ ಮಾಡುತ್ತಿರುತ್ತಾರೆ. ಯಾರೋ ಕಿಟಕಿಯ ಬಾಗಿಲು ತೆರೆಯುತ್ತಿರುತ್ತಾರೆ. ಯಾರೋ ಉದಾಸೀನದಲ್ಲಿ ನಡೆದಾಡುತ್ತಿರುತ್ತಾರೆ. ಹಾಗೆಯೇ ದೇವರ ಪುನರಾವತಾರದ ದಿವ್ಯ ಮುಹೂರ್ತಕ್ಕಾಗಿ ಆತುರದಲ್ಲಿ ವೃದ್ಧರಾದ ಭಕ್ತರು ಕಾಯುತ್ತಿರುವಾಗ ಇಂಥದೇನೂ ಮುಖ್ಯವೆಂದು ತಿಳಿಯದ ಮಕ್ಕಳು ತೋಟದಲ್ಲಿನ ಕೊಳದ ದಂಡೆಯ ಮೇಲೆ ಜಾರುತ್ತ, ಕುಂಟುತ್ತ ಆಟವಾಡುತ್ತಿರುತ್ತಾರೆ. ಏಸು ಕ್ರಿಸ್ತನು ಶಿಲುಬೆಗೇರುವುದು ಯಾವುದೋ ಕೊಳೆ ಕಸಗಳು ತುಂಬಿದ ಒಂದು ಮೂಲೆಯಲ್ಲಿ. ಆ ಹೊತ್ತಿಗೆ ಯಾವುದೋ ಬೀದಿ ನಾು ತನ್ನ ಎಂದಿನ ನಾಯಿಪಾಡಿನಲ್ಲಿ ಅಲೆಯುತ್ತಿರುತ್ತದೆ. ಮರಣ ದಂಡನೆಯನ್ನು ಚಲಾಯಿಸಲು ಬಂದವನ ಕುದುರೆ ತನ್ನ ಮುಗ್ಧ ಅಂಡನ್ನು ಯಾವುದೋ ಮರಕ್ಕೆ ತುರಿಕೆ ಕಳೆಯಲು ಬಾಲವೆತ್ತಿ ಉಜ್ಜಿಕೊಳ್ಳುತ್ತಿರುತ್ತದೆ. ಅಪೂರ್ವವೆಂದು ನಮಗೆ ಅನ್ನಿಸುವುದು ಜರಗುವುದು ನಿತ್ಯದ ನಿರಂತರದ ಸಂದರ್ಭದಲ್ಲಿ, ಅದರ ನಿರ್ಲಕ್ಷ್ಯದಲ್ಲಿ ಕೂಡಾ.
ನನ್ನ ದಸರಾ
ನನ್ನ ದಸರಾ ನನ್ನ ಬಾಲ್ಯಕ್ಕೆ ಸೇರಿದ್ದು. ನಾನು ಹುಟ್ಟಿ ನನ್ನ ಬಾಲ್ಯವನ್ನು ಕಳೆದ ಸಹ್ಯಾದ್ರಿ ತಪ್ಪಲಿನ ನನ್ನ ಹಳ್ಳಿಗೆ ಸೇರಿದ್ದು.
ಬಲ್ಲಾಳರೆಂದು ನಾವು ಕರೆಯುತ್ತಿದ್ದ ಮುದುಕರೊಬ್ಬರು ಕಾಡಿನೊಳಗೆ ಹಲವಾರು ಮೈಲಿಗಳನ್ನು ನಡೆದು ನಮ್ಮ ಮನೆಗೆ ಬರುತ್ತಿದ್ದರು. ಅವರು ಹಣೆಯ ಮೇಲೆ ಅಕ್ಷತೆ ಇಟ್ಟುಕೊಂಡು ಬಂದರೆ ಅವರು ಊಟ ಮಾಡಿ ಬಂದಿದ್ದಾರೆ ಎಂದರ್ಥ. ಹಣೆಯ ಮೇಲೆ ಅಕ್ಷತೆ ಇಲ್ಲದಿದ್ದರೆ ಅವರು ಮಧ್ಯಾಹ್ನದ ಊಟಕ್ಕಿರುತ್ತಾರೆ ಎಂಬುದು ನನ್ನಮ್ಮನಿಗೆ ಅರ್ಥವಾಗಿಬಿಡುತ್ತಿತ್ತು.